Tag: ಸ್ಮಾರ್ಟ್ ಸ್ಟೆತಸ್ಕೋಪ್

  • ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ – ಕಾಫಿನಾಡ ಯುವಕನ ಸಾಧನೆ

    ಸ್ಮಾರ್ಟ್ ಸ್ಟೆತಸ್ಕೋಪ್ ಆವಿಷ್ಕಾರ – ಕಾಫಿನಾಡ ಯುವಕನ ಸಾಧನೆ

    ಚಿಕ್ಕಮಗಳೂರು: ವೈದ್ಯರು ಕುಳಿತ ಜಾಗದಿಂದಲೇ ಮೊಬೈಲ್, ಲ್ಯಾಪ್‍ಟಾಪ್‍ನಿಂದ ಹೃದಯ ಬಡಿತ ಹಾಗೂ ಶ್ವಾಸಕೋಶದಲ್ಲಿನ ಉಸಿರಾಟದ ಶಬ್ದವನ್ನು ಗಮನಿಸಬಹುದಾದ ಸ್ಮಾರ್ಟ್ ಸ್ಟೆತಸ್ಕೋಪನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆಯ ತಂಡ ಸಂಶೋಧಿಸಿದ್ದು, ಈ ಸ್ಮಾರ್ಟ್ ಸ್ಟೆತಸ್ಕೋಪ್ ಸಂಶೋಧನೆಯ ತಂಡದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಯುವಕ ಆದರ್ಶ್ ಕೂಡ ಇದ್ದಾರೆ.

    2015ರಿಂದ ಬಾಂಬೆಯ ಐಐಟಿ ಸಂಸ್ಥೆಯಲ್ಲಿ ಲ್ಯಾಬ್ ರಿಸರ್ಚರ್ ಆಗಿ ಸೇರಿಕೊಂಡ ಆದರ್ಶ್ ಅವರು ಎರಡು ವರ್ಷಗಳ ಕಾಲ ಸ್ಮಾರ್ಟ್ ಸ್ಟೆತಸ್ಕೋಪ್ ಬಗ್ಗೆ ಅಧ್ಯಯನ ಮಾಡಿದ್ದಾರೆ. ಐಐಟಿ ಸಂಸ್ಥೆಯ ಹಿರಿಯ ವೈದ್ಯರ ಸಲಹೆ ಮೇರೆಗೆ ಡಾ.ರವಿ, ಕೆ.ಆದರ್ಶ್, ರೂಪೇಶ್, ತಪಸ್ವಿ, ಡಾ.ಪೀಂಟೋರನ್ನ ಒಳಗೊಂಡ ತಂಡ ಈ ಸಾಧನೆ ಮಾಡಿದೆ.

    ಚಿಕ್ಕಮಗಳೂರಿನ ಯುವಕ ಸಂಶೋಧನೆ ನಡೆಸಿರೋ ಈ ಸ್ಮಾರ್ಟ್ ಸ್ಟೆತಸ್ಕೋಪ್‍ನಿಂದ ಕೊರೊನ ಸೋಂಕಿತರ ಪರೀಕ್ಷೆ ಈಗ ಇನ್ನಷ್ಟು ಸುಲಭವಾಗಿದೆ. ಇದರಿಂದ ವೈದ್ಯರು ಕುಳಿತಲ್ಲೇ ಎಲ್ಲೋ ಇರುವ ರೋಗಿಯನ್ನು ಪರೀಕ್ಷೆ ಮಾಡಬಹುದು. ಈ ಸ್ಮಾರ್ಟ್ ಸ್ಟೆತಸ್ಕೋಪ್‍ನಲ್ಲಿ ಬ್ಲೂಟೂತ್‍ನಿಂದಲೂ ವೈದ್ಯರು ಕುಳಿತಲ್ಲೇ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮೂಲಕ ಎದೆಬಡಿತ ಹಾಗೂ ಉಸಿರಾಟದ ಪರೀಕ್ಷೆ ಮಾಡಬಹುದು. ಮುಂಬೈನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಮುಂಬೈ ವೈದ್ಯರು ಈ ಸ್ಮಾರ್ಟ್ ಸ್ಟೆತಸ್ಕೋಪ್ ಬಳಕೆಗೆ ಮುಂದೆ ಬಂದಿದ್ದಾರೆ. ಈ ಸ್ಟೆತಸ್ಕೋಪ್ ಬಾಂಬೆ ಐಐಟಿಯಲ್ಲಿ 2018ರಲ್ಲಿ ಬಿಡುಗಡೆಯಾಗಿ, ಸಾವಿರಕ್ಕೂ ಹೆಚ್ಚು ಮಾರಾಟವಾಗಿದೆ.

    ಕೊರೊನಾ ರೋಗಿಗಳನ್ನು ವೈದ್ಯರು ಪರೀಕ್ಷಿಸುವಾಗ ದೇಹದ ತುಂಬಾ ಪಿಪಿಟಿ ಕಿಟ್ ಧರಿಸಿರುತ್ತಾರೆ. ಆಗ ಸ್ಟೆತಸ್ಕೋಪ್‍ನಲ್ಲಿ ಸೋಂಕಿತರ ಎದೆಬಡಿತ ಹಾಗೂ ಉಸಿರಾಟದ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಕೊರೊನ ಸೋಂಕಿದ್ದರೆ ಶ್ವಾಸಕೋಶದಲ್ಲಿ ನಿಮೋನಿಯ ಹೆಚ್ಚಾಗುತ್ತದೆ. ಆಗ ಉಸಿರಾಟದ ಗ್ರಹಿಕೆಯೂ ಕಷ್ಟಕರವಾಗುತ್ತದೆ. ಆದರೆ ಈ ಹೊಸ ಸ್ಮಾರ್ಟ್ ಸ್ಟೆತಸ್ಕೋಪ್‍ನಲ್ಲಿ ಬ್ಲೂಟೂತ್ ಕನೆಕ್ಷನ್ ಇರುವುದರಿಂದ ವೈದ್ಯರು ಕುಳಿತಲ್ಲೇ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಸಹಾಯದಿಂದ ಎದೆಬಡಿತ ಹಾಗೂ ಉಸಿರಾಟ ಪರೀಕ್ಷೆ ನಡೆಸಬಹುದು ಎಂದು ಆದರ್ಶ್ ಹೇಳಿದ್ದಾರೆ.

    ಜಿಲ್ಲೆಯ ಕೊಪ್ಪದಲ್ಲಿ ಜನಿಸಿದ ಆದರ್ಶ್, ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಕೊಪ್ಪದಲ್ಲಿ ಮುಗಿಸಿ, ಶಿವಮೊಗ್ಗದ ಡಿವಿಎಸ್‍ನಲ್ಲಿ ಪಿಯುಸಿ ಓದಿದ್ದಾರೆ. ಬಳಿಕ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವ್ಯಾಸಂಗದ ಬಳಿಕ ಮುಂಬೈನ ಎಲ್‍ಎಲ್‍ಟಿಯಲ್ಲಿ ಸಾಫ್ಟ್‍ವೇರ್ ಇಂಜಿಯರ್ ಹಾಗೂ ಮುಂಬೈನ ಐಐಟಿಯಲ್ಲಿ ಲಾಬ್ ರಿಸರ್ಚರ್ ಆಗಿ ಸೇವೆ ಸಲ್ಲಿಸಿದ್ದರು.