Tag: ಸ್ಮಶಾನ

  • ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಕೊಪ್ಪಳ: ಇಡೀ ಗ್ರಾಮಕ್ಕೆ ಇರುವ ಏಕೈಕ ರುದ್ರಭೂಮಿಯಲ್ಲಿಯೇ ಸರ್ಕಾರಿ ಕಟ್ಟಡವೊಂದು ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದು ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡಬೇಕೆಂಬ ಆತಂಕದಲ್ಲಿ ತಾಲೂಕಿನ ಹಗೇದಾಳ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

    ಪಕ್ಕದ ಚೆಳ್ಳೂರು ಗ್ರಾಮಕ್ಕೆ ಮಂಜೂರಾದ ಪಶು ಆಸ್ಪತ್ರೆ ಹಗೇದಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಗ್ರಾಮದಲ್ಲಿರುವ ಏಕೈಕ ಸ್ಮಶಾನವನ್ನು ಅತಿಕ್ರಮಣವಾಗಿ ಸರ್ಕಾರವೇ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಕೊಪ್ಪಳದ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮಸ್ಥರು ಅಧಿಕಾರಿಗಳ ದೌರ್ಜನ್ಯ ವಿರೋಧಿಸಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

    ಹಗೇದಾಳ ಗ್ರಾಮ ಸ್ಮಶಾನ ಭೂಮಿಯಲ್ಲಿ ಇದೀಗ ತಲೆ ಎತ್ತುತ್ತಿರುವ ಕಟ್ಟಡ ಪಶು ಆಸ್ಪತ್ರೆ ಎಂದು ಹೇಳಲಾಗಿದೆ. ಹಗೇದಾಳ ಗ್ರಾಮಕ್ಕೆ ಯಾವುದೇ ಸರ್ಕಾರಿ ಯೋಜನೆ ಮಂಜೂರಾಗಿಲ್ಲ. ಚೆಳ್ಳೂರು ಗ್ರಾಮಕ್ಕೆ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 38 ಲಕ್ಷ ರೂ. ಅನುದಾನ ನೀಡಿದೆ. ಕಳೆದ ನವೆಂಬರ್‍ನಲ್ಲಿ ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ್ ದಢೇಸ್ಗೂರು ಸೇರಿದಂತೆ ಅಧಿಕಾರಿಗಳು ಎಲ್ಲರೂ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

    ಒಂದು ಊರಿನ ಯೋಜನೆಯನ್ನು ಅಧಿಕಾರಿಗಳು ಮತ್ತೊಂದೂರಿನಲ್ಲಿ ಅನುಷ್ಠಾನ ಮಾಡುತ್ತಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈಗ ಕಟ್ಟುತ್ತಿರುವ ಕಟ್ಟಡ ಹಗೇದಾಳದಲ್ಲಿ ಇರುವುದರಿಂದ ಚೆಳ್ಳೂರು ಗ್ರಾಮಕ್ಕೆ ಈ ಆಸ್ಪತ್ರೆ ಅತೀ ದೂರವಾಗುತ್ತಿದೆ. ಹಗೇದಾಳ ಗ್ರಾಮದ ಸರ್ವೇ ನಂ.71/1ರಲ್ಲಿ 3 ಎಕರೆ 22 ಗುಂಟೆ ಭೂಮಿ ಸ್ಮಶಾನಕ್ಕೆ ಸೇರಿದೆ. ಸುತ್ತಲಿನ ಪ್ರದೇಶ ಒತ್ತುವರಿಯಾಗಿದ್ದು ಇರುವ ಸ್ವಲ್ಪ ಭೂಮಿಯಲ್ಲಿಯೇ ಗ್ರಾಮಸ್ಥರ ಅಂತ್ಯ ಸಂಸ್ಕಾರಗಳು ನಡೆಯುತ್ತವೆ. ಇಂಥ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಭೂಸೇನಾ ನಿಗಮದ ಅಧಿಕಾರಿಗಳೇ ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟುವುದು ಯಾವ ನ್ಯಾಯ ಎಂದು ಗ್ರಾಮಸ್ಥರ ಪ್ರಶ್ನೆ.

    ನಮ್ಮೂರಿನ ಸುಡುಗಾಡಿಯಲ್ಲಿ ಭೂ ಸೇನೆ ನಿಗಮದ ಎಂಜಿನಿಯರ್ ಚಿಂಚೊಳ್ಳಿಕರ್ ಮತ್ತು ದೇವರಾಜ್ ದೌರ್ಜನ್ಯದಿಂದ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಬಾರಿ ಮಾತನಾಡಿದರೂ ಸರಿಯಾಗಿ ಉತ್ತರಿಸುತ್ತಿಲ್ಲ. ಸರ್ಕಾರಿ ಕೆಲಸ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕಬೇಕಾಗುತ್ತೆ. ಹೋಗಿ ಎಂಎಲ್‍ಎ ನಾ ಕೇಳ್ರಿ ಎಂದು ಅವಾಜ್ ಹಾಕ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಂದಾಯ ಅಧಿಕಾರಿಗಳು ಹೇಳೋದು ಏನು?
    ಹಗೇದಾಳ ಗ್ರಾಮದ ಸ್ಮಶಾನಕ್ಕಾಗಿ ಉಪಯೋಗಿಸುತ್ತಿರುವ ಜಮೀನಿನಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿಲ್ಲ ಎಂದು ಕಾರಟಗಿ ತಹಶೀಲ್ದಾರ್ ದೃಢೀಕರಿಸಿದ್ದಾರೆ. ಅಲ್ಲದೇ ಹಗೇದಾಳ ಗ್ರಾಮದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಯಾವುದೇ ಸರ್ಕಾರಿ ಜಮೀನನ್ನು ಮಂಜೂರಿ ಮಾಡಿಲ್ಲವೆಂದು ತಮ್ಮ ಹಿಂಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಈ ಎಲ್ಲ ವಿರೋಧದ ನಡುವೆ ಚೆಳ್ಳೂರು ಪಶು ಆಸ್ಪತ್ರೆಯ ವೈದ್ಯರು ಈ ನಿರ್ಮಾಣ ಹಂತದ ಕಟ್ಟಡ ಅವೈಜ್ಞಾನದಿಂದ ಕೂಡಿದೆ ಎಂದು ಹಿರಿಯ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ. ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡುತ್ತಿದ್ದು, ಜಾನುವಾರುಗಳ ಚಿಕಿತ್ಸೆಗೆ ಮುಂದೆ ತೊಂದರೆಯಾಗಲಿದೆ. ಇದರ ಜೊತಗೆ ಪಶು ಆಸ್ಪತ್ರೆಗೆ ಇರಬೇಕಾದ ಎಲ್ಲ ಮಾನದಂಡಗಳನ್ನು ಇಲ್ಲಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

  • ಸೂರ್ಯಗ್ರಹಣದ ವೇಳೆ ಸ್ಮಶಾನದಲ್ಲಿ ಬಿರಿಯಾನಿ ಸವಿದು ಜಾಗೃತಿ

    ಸೂರ್ಯಗ್ರಹಣದ ವೇಳೆ ಸ್ಮಶಾನದಲ್ಲಿ ಬಿರಿಯಾನಿ ಸವಿದು ಜಾಗೃತಿ

    ರಾಮನಗರ: ಕೇತುಗ್ರಸ್ಥ ಸೂರ್ಯಗ್ರಹಣದ ವೇಳೆ ಹಲವರು ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸಲು ನಾನಾ ರೀತಿಯಲ್ಲಿ ಅರಿವು ಕಾರ್ಯಕ್ರಮ ನಡೆಸಿದ್ದಾರೆ. ಆದರೆ ರಾಮನಗರದ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ಬಾಡೂಟ ಸವಿಯುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದರು.

    ಸಮತಾ ಸೈನಿಕ ದಳ ಸಂಘಟನೆಯ ಕಾರ್ಯಕರ್ತರು ಹಾರೋಹಳ್ಳಿಯ ಸ್ಮಶಾನದಲ್ಲಿ ಬಿರಿಯಾನಿ ಹಾಗೂ ಬಾಡೂಟವನ್ನು ಆಯೋಜನೆ ಮಾಡಿದ್ದರು. ಅಲ್ಲದೇ ಸ್ಮಶಾನದಲ್ಲಿನ ಗೋರಿಗಳ ಬಳಿ ಕುಳಿತು ಗ್ರಹಣದ ಸಮಯದಲ್ಲಿಯೇ ಊಟ ಮಾಡುವ ಮೂಲಕ ಅರಿವು ಕಾರ್ಯಕ್ರಮ ನಡೆಸಿದ್ದರು.

    ವಿಜ್ಞಾನದ ಮೇಲೆ ಜ್ಯೋತಿಷ್ಯದ ದಬ್ಬಾಳಿಕೆ ನಿಲ್ಲಲಿ, ಅಜ್ಞಾನ ಅಳಿಯಲಿ-ವಿಜ್ಞಾನ ಉಳಿಯಲಿ, ಗ್ರಹಣದ ಚಿಂತೆ ಬಿಡಿ-ಸಾಮಾನ್ಯ ಜೀವನ ಮಾಡಿ, ಮೂಡನಂಬಿಕೆಗಳ ವಿರುದ್ಧ ನಮ್ಮ ಹೋರಾಟ ಎಂಬ ಪೋಷಣೆಗಳನ್ನು ಕೂಗಿ ಸ್ಮಶಾನದ ದಾರಿಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೇ ಗ್ರಹಣದ ಸಮಯದಲ್ಲಿ ಊಟ, ತಿಂಡಿ ಸೇವನೆ, ನೀರು ಕುಡಿಯುವುದರಿಂದ ಏನೂ ಆಗುವುದಿಲ್ಲ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೂ ಸಹ ಬಾಡೂಟ ಉಣಬಡಿಸಿದ್ದರು.

    ಇದೇ ವೇಳೆ ಮಾತನಾಡಿದ ಸಂಘಟನೆಯ ಕೋಟೆ ಕುಮಾರ್, ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೌಢ್ಯತೆಗೆ ತಳ್ಳುವಂತಹ ಪ್ರಯತ್ನ ಮಾಡಲಾಗುತ್ತಿದೆ. ಗ್ರಹಣ ಕೇವಲ ನೆರಳು-ಬೆಳಕಿನಾಟ ಅಷ್ಟೇ ವಿನಃ ರಾಹು, ಕೇತು ಗಂಡಾಂತರ ಯಾವುದೂ ಇಲ್ಲ. ಜನರನ್ನ ಆಧುನಿಕತೆಯ ವೈಜ್ಞಾನಿಕ ಜೀವನದೆಡೆಗೆ ಕರೆದೊಯ್ಯುವುದು ಎಲ್ಲರ ಕರ್ತವ್ಯವಾಗಬೇಕು. ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೋಸ ಮಾಡುವಂತಾಗಬಾರದು. ಈ ಹಿಂದೆ ಚಂದ್ರ ಗ್ರಹಣದ ವೇಳೆಯೂ ಸ್ಮಶಾನದಲ್ಲಿ ಸಾಮೂಹಿಕ ಬಾಡೂಟ ಭೋಜನೆ ಮಾಡಿದ್ದೇವೆ. ಅದೇ ರೀತಿ ಸೂರ್ಯ ಗ್ರಹಣದಂದು ಸಹ ಬಾಡೂಟವನ್ನ ಸವಿಯುವುದರ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.

  • ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಇಸ್ಲಾಮಾಬಾದ್: ಸ್ಮಶಾನದಲ್ಲಿ ಹೂತಿಟ್ಟಿದ್ದ ಮಹಿಳೆಯ ಶವವನ್ನು ಹೊರ ತೆಗೆದು ದುಷ್ಕರ್ಮಿಗಳು ಅತ್ಯಾಚಾರಗೈದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

    ಮಹಿಳೆಯ ಶವವನ್ನು ಕುಟುಂಬಸ್ಥರು ಶನಿವಾರ ರಾತ್ರಿ ಇಸ್ಮಾಯಿಲ್ ಗೋಥ್ ಸ್ಮಶಾನದಲ್ಲಿ ಸಮಾಧಿ ಮಾಡಿದ್ದರು. ಸಮಾಧಿ ಮಾಡಿದ ಮರುದಿನವೇ ದುಷ್ಕರ್ಮಿಗಳು ಮಹಿಳೆಯ ಶವವನ್ನು ಹೊರತೆಗೆದು ಅತ್ಯಾಚಾರ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಮೃತ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಹಿಳೆ ಮೃತದೇಹ ಸಮಾಧಿಯಿಂದ ಹೊರಗೆ ತೆಗೆಯಲಾಗಿತ್ತು.

    ಕುಟುಂಬಸ್ಥರು ಈ ಬಗ್ಗೆ ಸ್ಮಶಾನದ ಉಸ್ತುವಾರಿಯನ್ನು ಪ್ರಶ್ನಿಸಿದಾಗ, ನಾಯಿಯೊಂದು ಸಮಾಧಿ ಮೇಲಿದ್ದ ಚಪ್ಪಡಿಯನ್ನು ತೆಗೆದಿದೆ ಎಂದು ಹೇಳಿದ್ದಾನೆ. ಆದರೆ ನಾಯಿ ತೆಗೆಯುವಷ್ಟು ಆ ಚಪ್ಪಡಿ ಹಗುರವಾಗಿ ಇರಲಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ವಾದ ಮಾಡಿದ್ದಾರೆ.

    ಸ್ಮಶಾನ ಉಸ್ತುವಾರಿಯ ಮಾತು ಕೇಳಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಈ ವಿಷಯ ಸಾಬೀತು ಆಗುತ್ತಿದ್ದಂತೆ ಸ್ಮಶಾನದಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.

    ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಪೊಲೀಸರು ಇನ್ನು ಪತ್ತೆ ಹಚ್ಚಿಲ್ಲ. ಆದರೆ ಈ ಬಗ್ಗೆ ದೂರು ನೀಡಲು ಮೃತ ಮಹಿಳೆಯ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.

  • ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ

    ಗದಗ: ಜಿಲ್ಲೆಯ ಬೆಟಗೇರಿ ಮುಕ್ತಿಧಾಮ ಸ್ಮಶಾನದಲ್ಲಿ ಮೃತದೇಹವೊಂದು ಅರೆಬರೆ ಸುಟ್ಟಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಬುಧವಾರ ಬೆಟಗೇರಿ ಆನಂದ್ ಅಸುಂಡಿ ಎಂಬವರು ಮೃತಪಟ್ಟಿದ್ದರು. ಈ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಸ್ಮಶಾನದ ಕಮೀಟಿಯವರು ಕಟ್ಟಿಗೆಯಿಂದ ಸುಡದೇ, ಕೇವಲ ಕ್ವಾಯಿಲ್ ಮೂಲಕ ಸುಟ್ಟಿದ್ದಾರೆ. ಇದರಿಂದ ಮೃತದೇಹ ಸರಿಯಾಗಿ ಸುಟ್ಟಿಲ್ಲ. ಇಂದು ಕುಟುಂಬದವರು ಅಸ್ತಿ ಹೊತ್ತೊಯಲು ಬಂದಾಗ ಈ ದೃಶ್ಯ ನೋಡಿ ಬೆರಗಾಗಿದ್ದಾರೆ.

    ಸರಿಯಾಗಿ ಹಣ ತೆಗೆದುಕೊಳ್ಳುತ್ತಾರೆ. ಆದರೆ ಸರಿಯಾಗಿ ಕೆಲಸ ಮಾಡಲ್ಲ. ಅಸ್ತಿ ಬಳೆದು ಪಿಂಡ ಬಿಡುವುದಾದರೂ ಹೇಗೆ? ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಸ್ಮಶಾನ ಸಮಿತಿಯವರು ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು. ಇದಕ್ಕೆ ಸಂಬಂಧಿಸಿ ಸಮಿತಿಯವರನ್ನು ಕೇಳಿದರೆ ಮುಕ್ತಿಧಾಮ ಸಮಿತಿ ರಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

  • ಕೊಡಗಿನಲ್ಲಿ ಅಂತ್ಯ ಕ್ರಿಯೆಗೆ ಹಣ – ಪ್ರತಾಪ್ ಸಿಂಹ ಸ್ಪಷ್ಟೀಕರಣ

    ಕೊಡಗಿನಲ್ಲಿ ಅಂತ್ಯ ಕ್ರಿಯೆಗೆ ಹಣ – ಪ್ರತಾಪ್ ಸಿಂಹ ಸ್ಪಷ್ಟೀಕರಣ

    ಕೊಡಗು: ಪ್ರವಾಹಕ್ಕೆ ಸಿಕ್ಕಿ ಸಾವನ್ನಪ್ಪಿದವರ ಅಂತ್ಯ ಕ್ರಿಯೆ ಮಾಡಲು 8 ಸಾವಿರ ಹಣ ಕೇಳುತ್ತಿದ್ದಾರೆ ಎಂದು ಒಂದು ಕುಟುಂಬ ಆರೋಪ ಮಾಡಿತ್ತು. ಈಗ ಈ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಂಸದ ಪ್ರತಾಪ್ ಸಿಂಹ ಈ ವಿಡಿಯೋ ಇವತ್ತಿನದಲ್ಲ ಅ ಕುಟುಂಬಕ್ಕೆ ಬೆಳಗ್ಗೆ ಸರ್ಕಾರದಿಂದ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಪ್ರತಾಪ್ ಸಿಂಹ, ಈ ವಿಡಿಯೋ ಇಂದು ಹರಿದಾಡುತ್ತಿದೆ. ಆದರೆ ನಿನ್ನೆ 3 ಗಂಟೆಗೆ ಅಂತ್ಯ ಸಂಸ್ಕಾರ ನಡೆದಿದ್ದು, ಮಮತಾ ಮತ್ತು ನಿಖಿತಾ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 4 ಲಕ್ಷ ರೂ. ಹಾಗೂ ರಾಜ್ಯದಿಂದ 1 ಲಕ್ಷದ (ಒಟ್ಟು 10 ಲಕ್ಷ ರೂ.) ಚೆಕ್ಕನ್ನು ಇಂದು ಬೆಳಗ್ಗೆಯೇ ನೀಡಲಾಗಿದೆ. ಯಾರೂ ಹಣ ಕೇಳಿದ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ, ಬಂದ ಕೂಡಲೇ ಎಫ್‍ಐರ್ ಮಾಡಿಸಿದ್ದೇವೆ ಎಂದಿದ್ದಾರೆ.

    ನನ್ನ ಕ್ಷೇತ್ರದ 4 ತಾಲೂಕುಗಳು ಜಲಾವೃತಗೊಂಡಿವೆ. ನಾನು ಒಂದೇ ಕಡೆ ಇರುವುದಕ್ಕಾಗುವುದಿಲ್ಲ, ಲೋಪಗಳಿದ್ದರೆ ಆರೋಪದ ಬದಲು ಗಮನಕ್ಕೆ ತನ್ನಿ. ಸ್ಪಂದಿಸದಿದ್ದರೆ, ಮನಸ್ಸೋಯಿಚ್ಛೆ ಮಾತಾಡಿ, ಪರವಾಗಿಲ್ಲ. ನಮ್ಮ ಇಬ್ಬರು ಶಾಸಕರಾದ ಬೋಪಯ್ಯ ಮತ್ತು ರಂಜನ್ ಅವರು ಕಾರ್ಯಕರ್ತರ ಪಡೆಯೊಂದಿಗೆ ಕೊಡಗಿನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ನೀನು ಹುಣಸೂರು ಪಿರಿಯಾಪಟ್ಟಣದ ಬಗ್ಗೆ ಗಮನಹರಿಸು ಎಂದು ಬೋಪಯ್ಯನವರು ಸೂಚಿಸಿದ ಕಾರಣ ಇಲ್ಲಿ ಹೆಚ್ಚು ಸಮಯ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಯಾರೂ ತಪ್ಪು ಭಾವಿಸಬೇಡಿ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಮೈಸೂರು-ಚಾಮರಾಜನಗದ ವರದಿ ಕೊಡುವಂತೆ ಆದೇಶ ಮಾಡಿದ್ದಾರೆ. ನಾವ್ಯಾರೂ ಸಬೂಬು ಹೇಳುತ್ತಾ ಕುಳಿತಿಲ್ಲ ಎಂದು ಬರೆದುಕೊಂಡಿದ್ದಾರೆ.

    ಕೊಡಗಿನ ಪ್ರವಾಹದಲ್ಲಿ ಸಾವನ್ನಪ್ಪಿದವರನ್ನು ಸುಡಲು ಸ್ಮಶಾನದವರು 8 ಸಾವಿರ ಕೇಳಿದ್ದಾರೆ. ಇದರಿಂದ ಮನನೊಂದು ಕುಟುಬಂದವರು ಮನೆ-ಮಠ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ನಿರಾಶ್ರಿತ ಕೇಂದ್ರಕ್ಕೆ ಬಂದಿದ್ದೇವೆ ಆದರೆ, ಹೀಗಿರುವಾಗ ನಮ್ಮ ಕುಟುಂಬಸ್ಥರ ಶವ ಸಂಸ್ಕಾರಕ್ಕೂ ಹಣ ಕೇಳುತ್ತಿದ್ದಾರೆ ಎಲ್ಲಿಂದ ತರುವುದು ಎಂದು ಗೋಳಾಡಿದ್ದರು. ಸಾವಿನಲ್ಲೂ ಹಣ ಮಾಡಲು ನೋಡುತ್ತಾರೆ ಎಂದು ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು.

  • ಗದಗದ ಸ್ಮಶಾನದಲ್ಲಿ ಮೂಳೆ, ಬುರುಡೆ ಅಗೆದು ಮರಳುಗಾರಿಕೆ

    ಗದಗದ ಸ್ಮಶಾನದಲ್ಲಿ ಮೂಳೆ, ಬುರುಡೆ ಅಗೆದು ಮರಳುಗಾರಿಕೆ

    ಗದಗ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನೂ ಬಿಡುತ್ತಿಲ್ಲ. ಹೆಣಗಳನ್ನು ಲೆಕ್ಕಿಸದೆ ಅಕ್ರಮ ಮರಳು ಲೂಟಿ ನಡೆದಿದೆ. ಮನೆ, ಮಠ ನಿರ್ಮಾಣಕ್ಕೆ ಹೆಣಗಳ ಅಸ್ಥಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ದಂಧೆ ಬಗ್ಗೆ ಮಾತಾಡಲು ಗ್ರಾಮದ ಜನರು ಕೂಡ ಭಯ ಪಡುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.

    ಹೌದು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಹೊರವಲಯದ ಸ್ಮಶಾನ ಭೂಮಿಯಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಸುಮಾರು ಮೂರು ಸಾವಿರ ಜನಸಂಖ್ಯೆಯಿರುವ ಪುಟ್ಟ ಹಳ್ಳಿಯಿದಾಗಿದ್ದು, ಅನಾದಿ ಕಾಲದಿಂದಲೂ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನ ಏಕೈಕ ಜಾಗ ಇದಾಗಿದೆ. ಆದರೆ ಇಲ್ಲೂ ಸಹ ಮರಳು ಮಾಫಿಯಾ ದಂಧೆಕೋರರು ಟ್ರ್ಯಾಕ್ಟರ್ ಮೂಲಕ ಮರಳುಗಾರಿಕೆ ಮಾಡುತ್ತಿದ್ದಾರೆ.

    ನದಿ ಪಾತ್ರದ ಮರಳನ್ನು ಅಕ್ರಮವಾಗಿ ಎತ್ತುವುದು ಯಥೇಚ್ಛವಾಗಿ ನಡೆಯುತ್ತಲೇ ಇದೆ. ಇದೀಗ ಮರಳು ದಂಧೆಕೋರರು ಸ್ಮಶಾನದ ಮೇಲೂ ಕಣ್ಣು ಹಾಕಿದ್ದಾರೆ. ಅಲ್ಲಿಯೂ ಭೂಮಿ ಅಗೆದು ಅಸ್ಥಿಪಂಜರಗಳನ್ನು ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ.

    ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದರೂ ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ನಿಂತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ತಿಳಿಸಿದ್ದಾರೆ.

    ಮರಳು ಮಾಫಿಯಾ ಗ್ರಾಮಸ್ಥರನ್ನು ಭಯಪಡುವಂತೆ ಮಾಡಿದೆ. ಗ್ರಾಮದಲ್ಲಿ ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುವಂತಾಗಿದೆ. ಸ್ಮಶಾನಕ್ಕಿರುವ ಒಂದು ಜಾಗವನ್ನೂ ಬಿಡುತ್ತಿಲ್ಲ. ಇಲ್ಲಿರುವ ಹೆಣಗಳ ಅಸ್ಥಿ ಪಂಜರಗಳು ಮೇಲೆತ್ತಿ ಮರಳು ತೆಗೆದಾಗ ಸಾಕಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದು ಗ್ರಾಮದ ಜನರಲ್ಲಿ ಭಯ ಹುಟ್ಟಿಸಿದೆ. ಹೆಣಗಳ ಅಸ್ಥಿಪಂಜರ ಬೇರೆಡೆ ಬಿಸಾಡಿ ಮರಳು ದಂಧೆ ಮುಂದುವರಿಸಿದ್ದಾರೆ. ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಈ ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ಹರಿದುಬಂದ ನೀರು ಜೊತೆಗೆ ಸಿಗುವ ಮರಳನ್ನು ಅಕ್ರಮವಾಗಿ ದೋಚುತ್ತಾ ಸ್ಮಶಾನದಲ್ಲಿರುವ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

    ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

    ರಾಮನಗರ: ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಮಶಾನದ ಜಾಗಕ್ಕೆ ಬೇಲಿ ಹಾಕಿರುವುದರಿಂದ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದಲಿತರಿಗೆ ಸ್ಮಶಾನಕ್ಕೆ ಜಾಗವಿದ್ದರೂ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿರುವ ಘಟನೆ ನಡೆದಿದೆ.

    ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಸಮೀಪದ ಕರಿಕಲ್ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸ್ಮಶಾನವಿದ್ದರೂ ಅದನ್ನು ಬಳಸದಂತಾಗಿದೆ. 2016 ರಲ್ಲಿ ಜಿಲ್ಲಾಧಿಕಾರಿಗಳು ಹೊನ್ನಿಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂಬರ್ 46 ಪಿ 1ರಲ್ಲಿ 1 ಎಕರೆ ಜಮೀನನ್ನ ಸ್ಮಶಾನಕ್ಕೆ ಮಂಜೂರು ಮಾಡಿದ್ದರು. ಆದರೆ ಗ್ರಾಮದ ಪಕ್ಕದಲ್ಲಿನ ಪೊಲೀಸ್ ತರಬೇತಿ ಕೇಂದ್ರವು ಸ್ಮಶಾನಕ್ಕೆ ನೀಡಿದ್ದ ಜಾಗವನ್ನ ತನ್ನದೆಂದು ಹೇಳಿ ತಡೆಗೋಡೆ ನಿರ್ಮಿಸಿಕೊಂಡಿದೆ.

    ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತ, ಸಿಎಂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಮಶಾನಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮದ ಕಾಳಯ್ಯನ ಶವವನ್ನೇ ಸ್ಮಶಾನಕ್ಕೆ ಜಾಗ ಸಿಕ್ಕಿದ ನಂತರವೂ ಕೆರೆಯಲ್ಲಿ ಅಂತ್ಯಸಂಸ್ಕಾರ ನಡೆಸುವಂತಾಗಿದೆ. ಇಂದು ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಶವವನ್ನ ಸ್ಮಶಾನದ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ನಡೆಸಿದಾಗ, ಪೊಲೀಸ್ ಬಂದೋಬಸ್ತ್ ಮೂಲಕ ಗ್ರಾಮಸ್ಥರನ್ನ ಹೆದರಿಸಿ, ಬೇರೆಡೆ ಅಂತ್ಯಸಂಸ್ಕಾರ ನಡೆಸುವಂತೆ ಮಾಡಲಾಗಿದೆ.

    ಇದರಿಂದ ರೊಚ್ಚಿಗೆದ್ದಿರುವ ಜನರು ಮಂಜೂರಾಗಿರುವ ಸ್ಮಶಾನದ ಜಾಗ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಶವವನ್ನ ತಹಶಿಲ್ದಾರ್ ಕಚೇರಿ, ಇಲ್ಲವೇ ಜಿಲ್ಲಾಧಿಕಾರಿ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಗ್ರಾಮದ ಪ್ರತಿ ಮನೆ ಮಂದೆಯೇ ಸ್ಮಶಾನ- ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕ್ತೀರೋ ಗ್ರಾಮಸ್ಥರು

    ಗ್ರಾಮದ ಪ್ರತಿ ಮನೆ ಮಂದೆಯೇ ಸ್ಮಶಾನ- ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕ್ತೀರೋ ಗ್ರಾಮಸ್ಥರು

    ಬೆಳಗಾವಿ/ಚಿಕ್ಕೋಡಿ: ಈ ಊರಲ್ಲಿ ಸಮಾಧಿ ಇಲ್ಲದಿರೋ ಮನೆ ಹುಡುಕಿಕೊಡಿ ಅನ್ನೋ ಹಾಗಾಗಿದೆ. ಈ ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಒಂದೆರಡು ಸಮಾಧಿಗಳು ಕಾಮನ್. ವ್ಯಕ್ತಿ ಬದುಕಿದ್ದಾಗ ಚಿಂತೆ ಮಾಡೋದಕ್ಕಿಂತಲೂ ಸತ್ತ ನಂತರವೇ ಇಲ್ಲಿನ ಜನಕ್ಕೆ ಹೆಚ್ಚಿನ ಚಿಂತೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಿದ್ದಾಪೂರ ಗ್ರಾಮಸ್ಥರು ಕುಟುಂಬ ಸದಸ್ಯರ ಅಂತ್ಯ ಸಂಸ್ಕಾರವನ್ನ ಮನೆಯ ಮುಂದೆಯೇ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಹೆಚ್ಚು ದಲಿತ ಕುಟುಂಬಗಳು ವಾಸವಾಗಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ನೂರಾರು ದಲಿತ ಕುಟುಂಬಗಳಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅಂತ್ಯಸಂಸ್ಕಾರ ಮಾಡೋದಕ್ಕೆ ಮಾತ್ರ ಸ್ಮಶಾನ ಭೂಮಿಯೇ ಇಲ್ಲ. ತಮ್ಮ ತಮ್ಮ ಮನೆಯ ಎದುರಲ್ಲೇ ಅಂತ್ಯ ಸಂಸ್ಕಾರ ಮಾಡೋದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿಯೊಬ್ಬರ ಮನೆಯ ಮುಂದೇನೂ ತುಳಸಿಕಟ್ಟೆ, ಜಗಲಿ ಕಟ್ಟೆಯಂತೆ ಇಲ್ಲಿ ಸಮಾಧಿಗಳೇ ಗೋಚರಿಸುತ್ತಿವೆ. ಕೆಲವರ ಮನೆಯ ಎದುರಲ್ಲಿ ಎರಡ್ಮೂರು ಸಮಾಧಿಗಳಿದ್ದು, ಮತ್ತೆ ಕೆಲವರು ಸಮಾಧಿಯ ಮೇಲೆಯೇ ಮತ್ತೊಬ್ಬರ ಸಮಾಧಿ ನಿರ್ಮಾಣ ಮಾಡಿದ್ದಾರೆ.

    ಕೃಷ್ಣಾ ನದಿಯಿಂದ ಅಣತಿ ದೂರದಲ್ಲಿ ಇರೋ ಸಿದ್ದಾಪೂರ ಗ್ರಾಮದಲ್ಲಿ ಜನರು ಜೀವಂತವಿದ್ದಾಗ ಪಡೋ ವ್ಯಥೆಗಿಂತ ಯಾರದ್ರೂ ಸಾವನ್ನಪ್ಪಿದರೆ ಇವರ ಚಿಂತೆ ಇಮ್ಮಡಿಯಾಗುತ್ತದೆ. ಅಂತ್ಯಕ್ರಿಯೆ ಮಾಡೋದು ಹೇಗೆ? ಶವ ಎಲ್ಲಿ ಹೂಳೋದು, ಅಗ್ನಿಸ್ಪರ್ಶ ಮಾಡೋದು ಹೇಗೆ ಎಂಬ ಚಿಂತೆಯಲ್ಲಿಯೇ ತೊಳಲಾಡುವಂತಾಗಿದೆ. ಎಸ್ ಸಿ ಮೀಸಲು ಕ್ಷೇತ್ರವಾಗಿರೋ ಕುಡಚಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರೋ ಇಲ್ಲಿನ ದಲಿತ ಕುಟುಂಬಗಳಿಗೆ ಹಲವು ವರ್ಷಗಳು ಕಳೆದರೂ ಇಲ್ಲಿನ ಜನರಿಗೆ ನ್ಯಾಯ ಸಿಕ್ಕಿಲ್ಲ. ಸಾಕಷ್ಟು ಬಾರಿ ಇಲ್ಲಿನ ಶಾಸಕ ಪಿ. ರಾಜೀವ್ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ರಾಯಭಾಗ ತಹಶೀಲ್ದಾರ್ ದುಂಡಪ್ಪ, ಸದ್ಯ ಶವ ಸಂಸ್ಕಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಮುಂದೆ ಶಾಶ್ವತ ಪರಿಹಾರ ಮಾಡಿಕೊಡುವ ಭರವಸೆ ನೀಡಿದ್ದಾರೆ.

    ಮನೆ ಮುಂದೆ ಸುಂದರ ಕೈ ತೋಟ, ತುಳಸಿ ಕಟ್ಟೆ ಇರಬೇಕಾದ ಸ್ಥಳದಲ್ಲಿ ಸತ್ತವರ ಸಮಾಧಿಯನ್ನು ಮಾಡಿಕೊಳ್ಳುವಂತಹ ದುರ್ದೈವ ಈ ಗ್ರಾಮಸ್ಥರದ್ದಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಆಶ್ವಾಸನೆ ನೀಡದೇ ಎಚ್ಚೆತ್ತು ಈ ಕುಟುಂಬಗಳಿಗೆ ಸ್ಮಶಾನ ಜಾಗವನ್ನು ನೀಡಬೇಕಾಗಿದೆ.

  • ಮಾಟ-ಮಂತ್ರ ಮಾಡಲು ಸ್ಮಶಾನಕ್ಕೆ ಹೋದ ವ್ಯಕ್ತಿ ಸಾವು!

    ಮಾಟ-ಮಂತ್ರ ಮಾಡಲು ಸ್ಮಶಾನಕ್ಕೆ ಹೋದ ವ್ಯಕ್ತಿ ಸಾವು!

    ಧಾರವಾಡ: ಜನ 21ನೇ ಶತಮಾನಕ್ಕೆ ಕಾಲಿಟ್ಟರೂ ಈಗಲೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂಥದ್ದೊಂದು ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ರಾತ್ರಿ ವ್ಯಕ್ತಿಯೋರ್ವ ಸ್ಮಶಾನದಲ್ಲಿ ಮಾಟಮಂತ್ರ ಮಾಡಲು ಹೋಗಿ ಅಲ್ಲೇ ಸಾವನ್ನಪ್ಪಿದ ಘಟನೆ ಇದೆ.

    ಆರ್‍ಎಸ್ ನಮಶಿವಾಯ ಮೃತ ವ್ಯಕ್ತಿಯಾಗಿದ್ದು, ಇವರು ಧಾರವಾಡ ನಗರದ ಜನ್ನತನಗರ ಬಳಿ ಇರುವ ಸ್ಮಶಾನದಲ್ಲಿ ಸಾವನ್ನಪ್ಪಿದ್ದಾರೆ. ನಗರದ ಗಾಂಧಿನಗರದ ನಿವಾಸಿಯಾದ ಇವರು, ಗುರುವಾರ ರಾತ್ರಿ ಮಾಟಮಂತ್ರ ಮಾಡುವ ಸಾಮಾಗ್ರಿಗಳನ್ನು ತೆಗೆದುಕೊಂಡು ಸ್ಮಶಾನಕ್ಕೆ ಹೋಗಿದ್ದಾರೆ. ಆ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

    ಇವರ ಶವದ ಜೊತೆ ಕಾರಿನಲ್ಲಿ ಕರಿ ಬಟ್ಟೆ ಸುತ್ತಿದ ಕೆಲವು ಸಾಮಾಗ್ರಿಗಳು ಸಿಕ್ಕಿವೆ. ವಸ್ತುಗಳನ್ನು ಮಣ್ಣು ಮಾಡಲು ಕುಡಗೋಲು ಕೂಡ ತಂದಿದ್ದ ಅವರು, ಕೆಲ ಕರಿ ದಾರ ಸುತ್ತಿದ ಫೋಟೋ ಕೂಡ ತಂದಿದ್ದಾರೆ. ಮೃತ ವ್ಯಕ್ತಿಯ ಮಗಳು ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಘಟನೆ ತಿಳಿದ ನಂತರ ಸ್ಥಳಕ್ಕೆ ಬಂದಿದ್ದಾರೆ. ವಾಮಾಚಾರದ ಬಗ್ಗೆ ಏನೂ ಹೇಳದ ಆಕೆ, ಚುನಾವಣೆಯ ಕರ್ತವ್ಯದ ಮೇಲೆ ಕಾರವಾರದಲ್ಲಿದ್ದಾಗ ಘಟನೆ ವಿಷಯ ತಿಳಿದಿದೆ ಎಂದು ಹೇಳಿದ್ದಾರೆ.

    ಬೆಳಗ್ಗೆನೇ ಈ ವ್ಯಕ್ತಿಯ ಕಾರನ್ನು ನೋಡಿದ್ದ ತ್ಯಾಜ್ಯ ವಿಲೇವಾರಿ ಘಟಕದ ಸುಪರ್‍ವೈಸರ್ ಹನುಮಂತ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಪೊಲೀಸರು ಶವವನ್ನ ಶವಾಗಾರಕ್ಕೆ ಸಾಗಿಸುವ ಕೆಲಸ ಮಾಡಿದ್ದಾರೆ. ಗುರುವಾರ ರಾತ್ರಿ ಸ್ಮಶಾನಕ್ಕೆ ಬಂದಾಗ ಮೃತ ವ್ಯಕ್ತಿಗೆ ಭಯದಿಂದ ಸಾವು ಆಗಿರುವ ಸಾಧ್ಯತೆ ಇದೆ. ಅಮಾವಾಸ್ಯೆ ಇರುವ ಕಾರಣ ಈ ವ್ಯಕ್ತಿ ಸ್ಮಶಾನಕ್ಕೆ ವಾಮಾಚಾರದ ವಸ್ತುಗಳನ್ನು ತಂದಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾರೂ ಹೇಳಲು ಮುಂದೆ ಬರುತ್ತಿಲ್ಲ.

    ಈ ಘಟನೆಗೆ ಹೇಗೆ ವ್ಯಾಖ್ಯಾನ ಮಾಡಬೇಕು ಎಂಬುದು ಯಾರಿಗೂ ತಿಳಿಯುತ್ತಿಲ್ಲ, ಆದರೆ ವಾಮಾಚಾರದ ಸಾಮಾಗ್ರಿಗಳನ್ನ ನೋಡಿ ಸ್ಥಳಕ್ಕೆ ಬಂದಿದ್ದ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ.