Tag: ಸ್ಪಿರಿಟ್ ಆಫ್ ಕ್ರಿಕೆಟ್

  • ಸ್ಮಿತ್ ಪರ ನಿಂತಿದ್ದ ಕೊಹ್ಲಿಗೆ ಸಿಕ್ತು ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ

    ಸ್ಮಿತ್ ಪರ ನಿಂತಿದ್ದ ಕೊಹ್ಲಿಗೆ ಸಿಕ್ತು ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ

    ದುಬೈ: 2018-19ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ‘ಸ್ಪಿರಿಟ್ ಆಫ್ ಕ್ರಿಕೆಟ್’ ಗೌರವ ಪಡೆದುಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ನಡತೆಯನ್ನು ಗಮನಿಸಿ ಐಸಿಸಿ ಈ ವಿಶೇಷ ಗೌರವ ನೀಡಿದೆ.

    ಏನಾಗಿತ್ತು?
    ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಕೆಲ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಮೋಸಗಾರ, ಚೀಟರ್ ಎಂದು ಕರೆಯುತ್ತಿದ್ದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಗರಂ ಆಗಿ, ಹಾಗೆ ಕರೆಯಬೇಡಿ, ಚೀಟರ್ ಹೇಳುವುದನ್ನು ನಿಲ್ಲಿಸಿ, ಚಪ್ಪಾಳೆ ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಸನ್ನೆ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

    ವಿರಾಟ್ ಕೊಹ್ಲಿ ಅವರ ಕ್ರೀಡಾ ಸ್ಫೂರ್ತಿಯನ್ನು ಕಂಡು ಸ್ವತಃ ಸ್ಟೀವ್ ಸ್ಮಿತ್ ಭಾವುಕರಾಗಿದ್ದರು. ಜೊತೆಗೆ ಕೊಹ್ಲಿ ಬಳಿಗೆ ಬಂದು ಕೈ ಕುಲುಕಿ, ಬೆನ್ನುತಟ್ಟಿ ಧನ್ಯವಾದ ತಿಳಿಸಿದ್ದರು. ಈ ಸನ್ನಿವೇಶವನ್ನು ಪರಿಗಣಿಸಿರುವ ಐಸಿಸಿ, ವಿರಾಟ್ ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ನೀಡಿದೆ.

    2018-19ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿಯ ಪಟ್ಟಿಯಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಹಾಗೂ ಬೌಲರ್ ದೀಪಕ್ ಚಹರ್ ಸೇರಿದ್ದಾರೆ. ರೋಹಿತ್ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾದರೆ, ದೀಪಕ್ ಚಹರ್ ಅವರಿಗೆ ವರ್ಷದ ಅತ್ಯುತ್ತಮ ಟಿ-20 ಬೌಲರ್ ಪ್ರಶಸ್ತಿ ಲಭಿಸಿದೆ.

    ಇಂಗ್ಲೆಂಡ್‍ನ ವಿಶ್ವಕಪ್ ವಿಜೇತ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ವರ್ಷದ ಆಟಗಾರ ಎಂದು ಹೆಸರಿಸಲಾಯಿತು. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು 2019ರಲ್ಲಿ 59 ವಿಕೆಟ್ ಕಬಳಿಸಿ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ರಿಚರ್ಡ್ ಇಲಿಂಗ್ವರ್ತ್ ಅವರಿಗೆ ವರ್ಷದ ಅಂಪೈರ್ ಪ್ರಶಸ್ತಿ ನೀಡಲಾಗಿದೆ.

    ಕೊಹ್ಲಿ ತಮ್ಮ ವೃತ್ತಿಜೀವನದುದ್ದಕ್ಕೂ ಒಳ್ಳೆಯ ಮತ್ತು ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಾರೆ. 2019ರಲ್ಲಿ ಕೊಹ್ಲಿ ಅನೇಕ ಬಾರಿ ಸನ್ನೆಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರಬಂದು ಶಾಂತ ವರ್ತನೆಯಿಂದ ಸುದ್ದಿಯಾಗಿದ್ದಾರೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಕೋಪದ ವ್ಯಕ್ತಿ ಎಂದೇ ಕರೆಯಲಾಗುತಿತ್ತು. ಆದರೆ ಈಗ ಕೊಹ್ಲಿಯ ಉತ್ತಮ ವರ್ತನೆಯಿಂದಲೇ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ಪ್ರಶಸ್ತಿ ಸಿಕ್ಕಿರುವುದು ವಿಶೇಷ.