Tag: ಸ್ಪರ್ಧೆ

  • ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಬಳ್ಳಾರಿ: ಮಾಜಿ ಶಾಸಕ ಸೂರ್ಯ ನಾರಾಯಣ ಅವರ ಮಗ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಿನ್ನೆಲೆಯಲ್ಲಿ ಮಂಗಳಮುಖಿಯರ ಮೊರೆ ಹೋಗಿದ್ದಾರೆ.

    ನಾರಾ ಭರತ್ ರೆಡ್ಡಿ ಮಂಗಳಮುಖಿಯರಿಗೆ ಉಡಿತುಂಬುವ ಮೂಲಕ ವಿಶೇಷ ಪೂಜೆ ಪುರಸ್ಕಾರ ಮಾಡಿದ್ದಾರೆ. ಭರತ್ ರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಬೇಕೆಂದು ಯೋಜನೆ ನಡೆಸಿದ್ದಾರೆ. 101 ಮಂಗಳಮುಖಿಯರಿಗೆ ಸೀರೆ, ಬೆಳ್ಳಿ ದೀಪ, ಅರಿಶಿನ ಕುಂಕುಮ ಬಟ್ಟಲು ಸೇರಿದಂತೆ ಇತ್ಯಾದಿ ವಸ್ತುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ಕೇರಳ ಮೂಲದ ಜ್ಯೋತಿಷಿಗಳ ಸಲಹೆ ಮೇರೆಗೆ ಮಂಗಳ ಮುಖಿಯರಿಗೆ ಪೂಜೆ ಸಲ್ಲಿಸಿದ್ದಾರೆ. ಮಂಗಳ ಮುಖಿಯರಿಗೆ ಪೂಜೆ ಮಾಡಿದರೇ ಟಿಕೆಟ್ ಸಿಗುತ್ತದೆ ಹಾಗೂ ನೀವು ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ನಂಬಿಕೆಯಿದೆ ಎಂದು ಸಲಹೆ ನೀಡಿದ್ದರು. ಇನ್ನೂ ಚುನಾವಣೆಗೆ ಒಂದುವರೆ ವರ್ಷ ಇರುವಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದಾರೆ.

  • ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    – ಹೋಟೆಲಿನಿಂದ ಹೊಸ ಆಫರ್, ಕಂಡೀಷನ್ಸ್ ಅಪ್ಲೈ

    ಮುಂಬೈ: ಹೋಟೆಲ್ ಗಳು ಗ್ರಾಹಕರನ್ನ ಸೆಳೆಯಲು ನಾನಾ ಮಾರುಕಟ್ಟೆ ತಂತ್ರಗಳನ್ನ ಪ್ರಯೋಗಿಸುತ್ತವೆ. ಇದೀಗ ಪುಣೆಯ ಶಿವರಾಜ್ ಹೋಟೆಲ್ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಹೋಟೆಲ್ ಪ್ರಕಟಿಸಿರುವ ಜಾಹೀರಾತಿನ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭರ್ಜರಿ ಊಟಕ್ಕಾಗಿ ಕೆಲ ಹೋಟೆಲ್ ಗಳು ಮಹಾರಾಜ ಥಾಲಿ, ಬಾಹುಬಲಿ ಥಾಲಿ ಹೆಸರಿನ ಆಫರ್ ಗಳನ್ನ ಗ್ರಾಹಕರಿಗೆ ನೀಡುತ್ತವೆ. ಶಿವರಾಜ್ ಹೋಟೆಲ್ ಬುಲೆಟ್ ಥಾಲಿ ಪರಿಚಯಿಸಿದ್ದು, ಇದರಲ್ಲಿ ನೀಡುವ ಎಲ್ಲ ಖಾದ್ಯಗಳು ಒಂದು ಗಂಟೆಯೊಳಗೆ ತಿನ್ನುವ ಗ್ರಾಹಕರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಉಚಿತವಾಗಿ ನೀಡಲಾಗುತ್ತದೆ. ಈ ಬುಲೆಟ್ ಥಾಲಿ ಮಾಂಸಾಹಾರ ಸಹ ಒಳಗೊಂಡಿರುತ್ತದೆ. ಈ ಥಾಲಿ ಸಿದ್ಧಪಡಿಸಲು 55 ಬಾಣಸಿಗರು ಕೆಲಸ ಮಾಡುತ್ತಾರೆ.

    ಬುಲೆಟ್ ಥಾಲಿಯಲ್ಲಿ ಏನೆಲ್ಲ ಇರುತ್ತೆ?:
    ನಾಲ್ಕು ಕೆಜಿ ಮಟನ್, ಕರಿದ ಮೀನು, 12 ತರಹದ ವಿವಿಧ ಆಹಾರ ಇರಲಿದೆ. ಇದರಲ್ಲಿ ಪೊಮ್‍ಫ್ರೆಟ್ ಎಂಟು ಪೀಸ್, ಸುರ್ಮಾಯಿ ಎಂಟು ಪೀಸ್, ಚಿಕನ್ ಲೆಗ್ ಪೀಸ್ 8, ಕಿಲ್ಲಾಂಬಿ ಕರ್ರಿ, ಒಂದು ಮಟನ್ ಮಸಲಾ, ಕರಿದ ಹುಂಜ, ಕೋಲಂಬಿ ಬಿರಿಯಾನಿ, ಎಂಟು ರೊಟ್ಟಿ, ಎಂಟು ಚಪಾತಿ, ಒಂದು ಸುಕ್ಕಾ, ಕೋಲಂಬಿ ಕೋಲಿವಾಡಾ, ನೀರಿನ ನಾಲ್ಕು ಬಾಟಲ್, ರಾಯತಾ, ಎಂಟು ಸೋಲ್ಕಡಿ, ಎಂಟು ಹಪ್ಪಳ ಮತ್ತು ಎಂಟು ಮಟನ್ ಅಲಾನಿ ಸೂಪ್

    ಎರಡು ಆಯ್ಕೆಗಳಿವೆ: ಈ ಆಫರ್ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕ ಅತುಲ್ ವಾಯಕರ್, ಗ್ರಾಹಕರಿಗೆ ಎರಡು ರೀತಿಯ ಆಫರ್ ಗಳನ್ನ ನೀಡಲಾಗುತ್ತದೆ. ಮೊದಲನೆಯದ್ದು 4 ಸಾವಿರ 444 ರೂ.ಬೆಲೆಯ ಬುಲೆಟ್ ಥಾಲಿಯನ್ನ ಇಬ್ಬರು ಜೊತೆಯಾಗಿ ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಎರಡನೇ ಆಯ್ಕೆ 2 ಸಾವಿರದ ಐದು ನೂರು ಬೆಲೆಯ ಒಂದು ಮಿನಿ ಬುಲೆಟ್ ಥಾಲಿಯನ್ನ ಓರ್ವ ಗಂಟೆಯಲ್ಲಿ ತಿನ್ನಬೇಕು. ಯಾರಾದ್ರೂ ಒಂದು ಗಂಟೆಯೊಳಗೆ ಬುಲೆಟ್ ಥಾಲಿ ಸೇವಿಸಿದ್ರೆ ರಾಯಲ್ ಎನ್‍ಫೀಲ್ಡ್ ಬುಲೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

    ಹೋಟೆಲ್ ಮುಂಭಾಗಲ್ಲಿ ಆರು ಬುಲೆಟ್ ಬೈಕ್ ಗಳನ್ನ ನಿಲ್ಲಿಸಲಾಗಿದೆ. ಇದರ ಜೊತೆಗೆ ಹೋಟೆಲ್ ನಲ್ಲಿ ಆರು ಬಗೆಯ ಬುಲೆಟ್ ಥಾಲಿಗಳು ಗ್ರಾಹಕರಿಗೆ ಸಿಗಲಿದೆ. ರಾವಣ್ ಥಾಲಿ, ಬುಲೆಟ್ ಥಾಲಿ, ಮಲ್ವಾನಿ ಮಚಲಿ ಥಾಲಿ, ಪೈಲ್ವಾನ್ ಮಟನ್ ಥಾಲಿ, ಬಕಾಸುರ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿ ಸಿಗಲಿದೆ. ಸೋಲಾಪುರ ಜಿಲ್ಲೆಯ ಸೋಮನಾಥ್ ಕುಟುಂಬದ ಒಬ್ಬರು ಮಾತ್ರ ಬುಲೆಟ್ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಲೀಕನ ಈ ಆಫರ್ ಸೂಪರ್ ಹಿಟ್ ಆಗಿ ಹೋಟೆಲ್ ಫುಲ್ ಫೇಮಸ್ ಆಗಿದೆ.

  • ಕೊರೊನಾ ಹಬ್ಬಿಸಲು ಸ್ಪರ್ಧೆ ಆಯೋಜಿಸಿದ ವಿದ್ಯಾರ್ಥಿಗಳು

    ಕೊರೊನಾ ಹಬ್ಬಿಸಲು ಸ್ಪರ್ಧೆ ಆಯೋಜಿಸಿದ ವಿದ್ಯಾರ್ಥಿಗಳು

    – ಸ್ಪರ್ಧೆಗೆ ಪಾಸಿಟಿವ್‌ ಬಂದವರಿಗೆ ಆಹ್ವಾನ
    – ಮೊದಲು ಸೋಂಕು ಬಂದವರಿಗೆ ಬಹುಮಾನ

    ವಾಷಿಂಗ್ಟನ್‌: ಆತಂಕ ಮೂಡಿಸಿರುವ ಕೊರೊನಾ ತಡೆಗಟ್ಟಲು ರಾಷ್ಟ್ರಗಳು ಲಾಕ್‌ಡೌನ್‌ ಜಾರಿ ಮಾಡಿ ಸಾಮಾಜಿಕ ಅಂತ ಕಾಯ್ದುಕೊಳ್ಳಿ, ಮಾಸ್ಕ್‌ ಧರಿಸಿ ಎಂದು ಸೂಚನೆ ನೀಡುತ್ತಿವೆ. ಆದರೆ ಅಮೆರಿಕದಲ್ಲಿ ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

    ʼಯಾರಿಗೆ ಮೊದಲು ಕೊರೊನಾ ಬರುತ್ತದೆ?ʼ ಎಂಬ ಸ್ಪರ್ಧೆಯ ಪಾರ್ಟಿಯನ್ನು ಅಮೆರಿಕ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ಆಯೋಜಿಸಲಾಗಿತ್ತು.

    ಈ ಹುಚ್ಚಾಟದ ಸ್ಪರ್ಧೆಗೆ ಕೊರೊನಾ ಪಾಸಿಟಿವ್‌ ಬಂದವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿತ್ತು. ಕೊರೊನಾ ಬಾರದವರನ್ನು ಆಹ್ವಾನಿಸಲಾಗಿತ್ತು. ಕೊರೊನಾ ಬಾರದವರು ಪಾಸಿಟಿವ್‌ ಬಂದವರ ಜೊತೆ ಪಾರ್ಟಿ ಮಾಡಬೇಕು. ಈ ಮೂಲಕ ಯಾರಿಗೆ ಕೊರೊನಾ ಮೊದಲು ಬರುತ್ತದೋ ಅವರಿಗೆ ಬಹುಮನ ನೀಡಲಾಗುತ್ತದೆ ಎಂದು ಆಯೋಜಕರು ಮೊದಲೇ ತಿಳಿಸಿದ್ದರು.

    ಪಾರ್ಟಿಗೆ ಬಂದವರು ಪಾಟ್‌ ಒಂದರಲ್ಲಿ ಹಣವನ್ನು ಹಾಕಬೇಕು. ಮೊದಲು ಯಾರಿಗೆ ಕೊರೊನಾ ಬರುತ್ತದೋ ಅವರಿಗೆ ಈ ಪಾಟ್‌ನಲ್ಲಿ ಸಂಗ್ರಹವಾದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದರು.

    ನಗರದಲ್ಲಿ ಕೊರೊನಾ ಹರಡಿಸುವ ಸ್ಪರ್ಧೆ ನಡೆದಿರುವುನ್ನು ಟಸ್ಕಲೂಸಾ ಮೇಯರ್‌ ಒಪ್ಪಿಕೊಂಡಿದ್ದಾರೆ. ಆದರೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಹೈನುಗಾರಿಕೆ ಉತ್ತೇಜನಕ್ಕಾಗಿ ಜಾತ್ರೆಯಲ್ಲಿ ಹಾಲು ಕರೆಯೋ ಸ್ಪರ್ಧೆ

    ಹೈನುಗಾರಿಕೆ ಉತ್ತೇಜನಕ್ಕಾಗಿ ಜಾತ್ರೆಯಲ್ಲಿ ಹಾಲು ಕರೆಯೋ ಸ್ಪರ್ಧೆ

    ಧಾರವಾಡ: ತಾಲೂಕಿನ ಗರಗದ ಶ್ರೀ ಗುರು ಮಡಿವಾಳೇಶ್ವರ ಜಾತ್ರೆಯಲ್ಲಿ ಇಂದು ಹೈನುಗಾರಿಕೆಗೆ ಉತ್ತೇಜಿಸುವ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ಆಕಳು ಮತ್ತು ಎಮ್ಮೆಗಳ ಹಾಲು ಕರೆಯೋ ಸ್ಪರ್ಧೆಗೆ ಗರಗ, ಹಂಗರಕಿ, ತಡಕೋಡ, ಕಬ್ಬೇನೂರ ಮತ್ತಿತರ ಗ್ರಾಮಗಳ ರೈತರು, ಹೈನುಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೆಚ್.ಎಫ್. ಜರ್ಸಿ ಆಕಳುಗಳು ಹಾಗೂ ಮುರ್ರಾ ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ಜರುಗಿದವು. ಹಾಲು ಕರೆಯಲು ಅವುಗಳ ಮಾಲೀಕರಿಗೆ 20 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಪ್ರತಿ ಜಾನುವಾರುಗಳ ಹಾಲು ಕರೆಯೋ ಸ್ಪರ್ಧೆ ಮೇಲ್ವಿಚಾರಣೆಗೆ ಓರ್ವ ಪಶುವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಂಬುನಾಥ್ ಗದ್ದಿ ಮಾತನಾಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು, ಕೃಷಿಯ ಜೊತೆಗೆ ಉಪ ಕಸುಬುಗಳ ಮಹತ್ವ ತಿಳಿಸುವುದು ಮತ್ತು ನಿರುದ್ಯೋಗ ನಿವಾರಣೆಯ ಆಶಯದೊಂದಿಗೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸಲಾಗಿದೆ. ಜೊತೆಗೆ ಹೈನುಗಾರರಿಗೆ ಜಾನುವಾರುಗಳ ವೈಜ್ಞಾನಿಕ ಪೋಷಣೆಯ ವಿಧಾನಗಳು, ಸ್ವಚ್ಚತೆ, ಖನಿಜಾಂಶಯುಕ್ತ ಆಹಾರ ನೀಡಿಕೆ ಕುರಿತು ತಿಳುವಳಿಕೆ ನೀಡಲಾಗುತ್ತಿದೆ ಎಂದರು.

    ಜರ್ಸಿ ತಳಿಯ ಆಕಳು ಹಾಲು ಹಿಂಡಿದವರಲ್ಲಿ ಪ್ರಥಮ ಬಹುಮಾನವನ್ನು ಕಬ್ಬೆನೂರ ಗ್ರಾಮದ ಮಹಾಂತೇಶಗೌಡ ಮುದಿಗೌಡ್ರ 13.580 ಕೆ.ಜಿ. ಹಾಲು ಕರೆಯೋ ಮೂಲಕ ಗೆದ್ದರು. ದ್ವಿತೀಯ ಬಹುಮಾನವನ್ನು ಗರಗ ಗ್ರಾಮದ ಸಿದ್ದಲಿಂಗ ಚಿಕ್ಕಮಠ 13.192 ಕೆ.ಜಿ. ಹಿಂಡಿ ಎರಡನೇ ಬಹುಮಾನ ಪಡೆದರೆ, ತೃತೀಯವಾಗಿ -ಹಂಗರಕಿ ಗ್ರಾಮದ ಪಾಲಾಕ್ಷಿಗೌಡ ನಾಗನಗೌಡ 12.416 ಕೆ.ಜಿ. ಹಾಲಿ ಕರೆಯೋ ಮೂಲಕ ಬಹುಮಾನ ಪಡೆದರು.

    ಎಮ್ಮೆಗಳ ವಿಭಾಗದಲ್ಲಿ ಮುಮ್ಮಿ ಗಟ್ಟಿ ಗ್ರಾಮದ ಪ್ರಥಮ ಪ್ರಕಾಶಗೌಡ ಕರೆಕ್ಕನವರ 10.185 ಕೆ.ಜಿ. ಹಾಲು ಕರೆಯೋ ಮೂಲಕ ಪ್ರಥಮ ಬಹುಮಾನ ಪಡೆದರೆ, ಗರಗ ಗ್ರಾಮದ ಮಡಿವಾಳೆಪ್ಪ ತುರಕಾರ (9.021 ಕೆ.ಜಿ.) ದ್ವೀತಿಯ ಬಹುಮಾನ ಪಡೆದರು. ಇನ್ನು ಧಾರವಾಡದ ಪ್ರವೀಣ ಘಾಟಗೆ(8.051 ಕೆ.ಜಿ.) ತೃತೀಯ ಬಹುಮಾನ ಪಡೆದರು.

  • ಯಂಗ್ ಶೆಫ್ ಒಲಂಪಿಯಾಡ್ 2020ಕ್ಕೆ 20 ದೇಶಗಳಿಗೆ ಆತಿಥ್ಯ ವಹಿಸಲಿರುವ ಬೆಂಗ್ಳೂರು

    ಯಂಗ್ ಶೆಫ್ ಒಲಂಪಿಯಾಡ್ 2020ಕ್ಕೆ 20 ದೇಶಗಳಿಗೆ ಆತಿಥ್ಯ ವಹಿಸಲಿರುವ ಬೆಂಗ್ಳೂರು

    ಬೆಂಗಳೂರು: ವಿಶ್ವದ ಅತಿ ದೊಡ್ಡ ಅಡುಗೆ ಚಾಂಪಿಯನ್‍ಶಿಪ್ ‘ಯಂಗ್ ಶೆಫ್ ಒಲಂಪಿಯಾಡ್ 2020’ಯ ಆತಿಥ್ಯ ವಹಿಸಲು ಸಿಲಿಕಾನ್ ಸಿಟಿ ಸಿದ್ಧವಾಗಿದೆ.

    ವಿಶ್ವದ 55 ದೇಶದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ 20 ದೇಶದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಅಡುಗೆ ಸ್ಪರ್ಧೆಗಳು ನಡೆಯಲಿದೆ. ಹೋಟಲ್ ಮ್ಯಾನೆಜ್‍ಮೆಂಟ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತೆ.

    ವಿದ್ಯಾರ್ಥಿಗಳು ತಮ್ಮ ಸ್ವಂತಿಕೆ ಬಳಸಿಕೊಂಡು ಹೇಗೆ ಅಡುಗೆ ತಯಾರಿಸುತ್ತಾರೆ ಮತ್ತು ಅದನ್ನ ಹೇಗೆ ಪ್ರಸ್ತುತ ಪಡಿಸುತ್ತಾರೆ ಅನ್ನೋದು ಈ ಸ್ಪರ್ಧೆಯ ಮುಖ್ಯ ವಿಷಯವಾಗಿದೆ. ಫೇಬ್ರವರಿ 1ರಿಂದ ಈ ‘ಯೆಂಗ್ ಶೆಫ್ ಒಲಂಪಿಯಾಡ್ 2020’ರ ಸ್ಪರ್ಧೆಗಳು ಆರಂಭವಾಗಲಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೇದಿಕೆ ಸಿದ್ದವಾಗಲಿದೆ. ಬೆಂಗಳೂರಿನಲ್ಲಿ ಅಡುಗೆ ಮಾಡಿ ಭೇಷ್ ಎನಿಸಿಕೊಂಡು ಆಯ್ಕಯಾಗುವ ವಿದ್ಯಾರ್ಥಿಗಳಿಗೆ ಕೊಲ್ಕತ್ತಾದಲ್ಲಿ ಫೈನಲ್ ಸ್ಪರ್ಧೆ ನಡೆಯಲಿದೆ.

  • ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ:  ಸಾರ್ವಜನಿಕರಿಂದ ಹರ್ಷ

    ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ: ಸಾರ್ವಜನಿಕರಿಂದ ಹರ್ಷ

    ಕೊಪ್ಪಳ: ಆನೆಗೊಂದಿ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು ಸ್ಪರ್ಧಾ ಸ್ಥಳಗಳಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ-2020ರ ನಿಮಿತ್ತ ಆನೆಗೊಂದಿಯ ಗ್ರಾಮದಲ್ಲಿ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಗಡೆಯಾಟ, ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು, ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.

    ಚಿತ್ರಕಲಾ ಸ್ಪರ್ಧೆ:
    ಉತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ 43 ಸ್ಪರ್ಧಾಳುಗಳು ಭಾಗವಹಿಸಿದ್ದರು. ಒಟ್ಟು 84 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಕೊಟ್ಟೂರು ಶಾಲೆಯ ಹನುಮೇಶ್ ಅವರ ಗಗನ್ ಮಹಲ್ ಚಿತ್ರಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ. ರಾಜಶೇಖರ ಯಲಬುರ್ಗಾ ಅವರ ವಾಲಿಕೋಟೆ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಇಸ್ಲಾಂಪುರಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಶಿಭೂಷಣ್ ಎಂ.ಜಿ ಅವರ ವಾಲಿಕೋಟೆಯ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.

    ರಂಗೋಲಿ ಸ್ಪರ್ಧೆ:
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ 29 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಲಕ್ಷ್ಮಿ (ಸಾಣಾಪುರ), ದ್ವಿತೀಯ ಶೃತಿ ಹಿರೇಮಠ (ರಾಂಪುರ), ತೃತೀಯ ಧರ್ಮವತಿ (ಹನುಮನಹಳ್ಳಿ) ಸ್ಥಾನ ಪಡೆದಿದ್ದಾರೆ. ರಂಗೋಲಿ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿ ರಂಗೋಲಿ ವೀಕ್ಷಿಸಿದರು.

    ಪಗಡೆಯಾಟ:
    ಪಗಡೆ ಸ್ಪರ್ಧೆಯಲ್ಲಿ 05 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ ಆನೆಗೊಂದಿಯ ಗೀತಾ ಕೆ ಪ್ರಥಮ ಸ್ಥಾನ, ಗಂಗಾವತಿಯ ಮಂಜುಳಾ ಎಂ ದ್ವಿತೀಯ ಸ್ಥಾನ, ಬಸಪಟ್ಟಣದ ಜಯಲಕ್ಷ್ಮಿ ಕೆ.ಎಲ್ ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ಪಗಡೆ ಆಟ ಸ್ಪರ್ಧೆಯಲ್ಲಿ 03 ಪುರುಷರು ಭಾಗವಹಿಸಿದ್ದರು. ಇದರಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಚರಂಡಯ್ಯ ಪ್ರಥಮ ಸ್ಥಾನ ಪಡೆದರೆ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮಾನಪ್ಪ ದ್ವಿತೀಯ, ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜಿನ ವಿದ್ಯಾರ್ಥಿ ನಾಗರಾಜ ತೃತೀಯ ಸ್ಥಾನ ಪಡೆದಿದ್ದಾರೆ.

    ಕೆಸರು ಗದ್ದೆ ಓಟ:
    ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಂಟಿಯಾಗಿ ಚಾಲನೆ ನೀಡಿದರು. ಓಟದಲ್ಲಿ ಒಟ್ಟು 45 ಸ್ಪರ್ಧಾಳುಗಳು ಭಾಗವಹಿಸಿದ್ದು, ಒಂದು ಭಾಗದಲ್ಲಿ 09 ಜನರಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಪ್ರಾರಂಭಿಸಿ, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಅಂತಿಮ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸ್ಪರ್ಧೆಯಲ್ಲಿ ಒಟ್ಟು 10 ಜನ ಸ್ಪರ್ಧಿಗಳಿಂದ ಕೆಸರು ಗದ್ದೆ ಓಟ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನ ಪ್ರೇಮರಾಜ್ ರಾಮಪ್ಪ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆಯ ಶರಣಪ್ಪ ಪಡೆದರೆ. ತೃತೀಯ ಸ್ಥಾನವನ್ನು ಎಂ.ಡಿ ಸಮೀರ್ ಪಡೆದರು.

    ಕೆಸರು ಗದ್ದೆಯಲ್ಲಿ ಹಗ್ಗ-ಜಗ್ಗಾಟ:
    ಉತ್ಸವದ ಅಂಗವಾಗಿ ಪೊಲೀಸ್, ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಲಾದ ಹಗ್ಗ-ಜಗ್ಗಾಟ ಸ್ಪರ್ಧೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. ಈ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನ ಪೊಲೀಸ್ ಇಲಾಖೆ ಡಿ.ಆರ್ ಕೊಪ್ಪಳ ತಂಡ, ದ್ವಿತೀಯ ಸ್ಥಾನ ಆನೆಗೊಂದಿ ಮುಸ್ತಾಫ ತಂಡ, ತೃತೀಯ ಸ್ಥಾನ ಬಸವನದುರ್ಗ ವೆಂಕಟೇಶ ಬಾಬು ತಂಡ ಪಡೆದಿದೆ.

    ವ್ಹೀಲ್ ಚೇರ್ ಸ್ಪರ್ಧೆ:
    ಪುರುಷರ ವ್ಹೀಲ್ ಚೇರ್ ಸ್ಪರ್ಧೆಯಲ್ಲಿ ಒಟ್ಟು 4 ಸ್ಪರ್ಧಿಗಳು ಭಾಗವಹಿಸಿದ್ದು, ಗೊಂಡಬಾಳದ ಗಣೇಶ ಬಂಡಿವಡ್ಡರ ಪ್ರಥಮ, ವಡ್ಡರಹಟ್ಟಿಯ ಅಶೋಕ ಡಂಬರ್ ದ್ವಿತೀಯ, ವಡ್ಡರಹಟ್ಟಿ ಯಲ್ಲಪ್ಪ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.

    ಸ್ಲೋ ಸೈಕಲ್ ರೈಸ್ ಸ್ಪರ್ಧೆ:
    ಸ್ಲೋ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಒಟ್ಟು ಈ ಸ್ಪರ್ಧೆಯಲ್ಲಿ 29 ಸ್ಪರ್ಧಾಳುಗಳು ಭಾಗವಹಿಸಿದ್ದು, 3 ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. 1 ಗುಂಪಿಗೆ 10 ರಂತೆ ಸ್ಲೋ ಸೈಕಲ್ ರೈಸ್ ಮಾಡಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶಬಾಬು (ಆನೆಗೊಂದಿ), ದ್ವಿತೀಯ ಬೋಗಪ್ಪ (ಗಂಗಾವತಿ), ತೃತೀಯ ವಿರನಗೌಡ ಕುಲಕರ್ಣಿ ಹಾರಳ ಸ್ಥಾನ ಪಡೆದಿದ್ದಾರೆ.

    ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ:
    ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 22 ಪುರುಷರ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿರುವ ಸಂಗ್ರಾಣಿ ಕಲ್ಲಿನ ತೂಕ 55, 57, 62, 65, 70, 72, 74, 77, 78, 80 ಕೆಜಿ ಭಾರವನ್ನು ಹೊಂದಿದ್ದವು. ಪ್ರಥಮ ಸ್ಥಾನ ಪಡೆದ ಹಾಲಪ್ಪ (ಕುಷ್ಟಗಿ) 77 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ್ದರೆ. ದ್ವಿತೀಯ ಸ್ಥಾನ ಪಡೆದ ಹನುಮಂತ ತುರುವಿಹಾಳ 74 ಕೆ.ಜಿ, ತೃತೀಯ ಸ್ಥಾನ ಪಡೆದ ಸೋಮನಾಥ (ಕುಷ್ಟಗಿ) 72 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ್ದಾರೆ.

    ಕಲ್ಲು ಎತ್ತುವ ಸ್ಪರ್ಧೆ:
    ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 11 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ 100 ಮತ್ತು 120 ಕೆಜಿ ಕಲ್ಲುಗಳನ್ನು ಇರಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ಪ್ರಭು ಸುಭಾಷ್ ಚಂದ್ರ ಜವಳಗೇರಾ, ದ್ವಿತೀಯ ಸ್ಥಾನ ಆಯಾನಿ ಮುದಕಪ್ಪ ಅರಳಹಳ್ಳಿ, ತೃತೀಯ ಸ್ಥಾನ ಎ. ಮಾರುತಿ ಕಂಪ್ಲಿ ಅವರು ಪಡೆದಿದ್ದಾರೆ.

  • ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ಚಿಕ್ಕಮಗಳೂರು: ವರ್ಷಪೂರ್ತಿ ಹೊಲಗದ್ದೆಗಳಲ್ಲಿ ದುಡಿಯುವ ರಾಸುಗಳಿಗಾಗೇ ಕಾಫಿನಾಡಿನಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕಿನ ತೇಗೂರು ಗ್ರಾಮದ ಅರಸು ಗೆಳೆಯರ ಬಳಗ ಹಾಗೂ ಮಾರುತಿ ಯುವಕರ ಸಂಘ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಪಾಲ್ಗೊಂಡಿದ್ದವು. ಮಧ್ಯರಾತ್ರಿ 12 ಗಂಟೆಯಾದ್ರು ಸಾವಿರಾರು ಜನ ಎತ್ತಿನಗಾಡಿ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು. ಅರಸು ಗೆಳೆಯರ ಬಳಗ 14 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.

    ತೇಗೂರು ಗ್ರಾಮದ ಹೊರವಲಯದ ವಿಸ್ತಾರವಾದ ಪ್ರದೇಶದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಹಾಸನ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನಕ್ಕಾಗಿ ಭಾರೀ ಪೈಪೋಟಿ ನೀಡಿದವು. ಮೊದಲ ಸ್ಥಾನ 60 ಸಾವಿರ, ಎರಡನೇ ಸ್ಥಾನ 50, ಮೂರು 40 ಹಾಗೂ ನಾಲ್ಕನೇ ಸ್ಥಾನಕ್ಕೆ 30 ಸಾವಿರ ಹಣ ಹಾಗೂ ಪಾರಿತೋಷಕವನ್ನು ನಿಗದಿ ಮಾಡಲಾಗಿತ್ತು.

    ಸ್ಪರ್ಧೆಗಾಗಿಯೇ ರೈತರು ಎತ್ತುಗಳನ್ನ ಮಕ್ಕಳಂತೆ ಸಾಕಿರುತ್ತಾರೆ. ಮೂರ್ನಾಲ್ಕು ಲಕ್ಷ ಬೆಲೆ ಬಾಳುವ ಎತ್ತುಗಳು ರೈತರಿಗೆ ಕುದುರೆಗಳಿದ್ದಂತೆ. ಹೊಲದಲ್ಲೇ ಭೂಮಿ ಉಳುಮೆಗೂ ಸೈ, ಬಯಲಲ್ಲಿ ಓಡೋದಕ್ಕೂ ಸೈ ಎಂಬಂತೆ ಬೆಳೆಸಿರುತ್ತಾರೆ. ಹೊಲಗದ್ದೆಗಳ ಕೆಲಸ ಕಾರ್ಯ ಮುಗಿದ ಮೇಲೆ ರೈತರು ರಾಸುಗಳನ್ನು ಇಂತಹ ಓಟಗಳಲ್ಲಿ ಭಾಗವಹಿಸಿ ಖುಷಿಪಡ್ತಾರೆ. ಸ್ಪರ್ಧೆಯ 15 ದಿನ ಮೊದಲೇ ಎತ್ತುಗಳಿಗೆ ವಿಶೇಷ ತರಬೇತಿ ಕೊಡುತ್ತಾರೆ. ಜೊತೆಗೆ ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳ, ಹಾಲು-ಮೊಸರು-ಬೆಣ್ಣೆ-ತುಪ್ಪ, ಮೆಂತೆ ಮುದ್ದೆ ಕೊಟ್ಟು ಚೆನ್ನಾಗಿ ತಯಾರಿ ಮಾಡಿರುತ್ತಾರೆ. ರೈತರಿಗೆ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಸಂತಸ.

    ಸ್ಪರ್ಧೆಯ ಮೈದಾನದ ಸುತ್ತಲೂ ಬಂದೋಬಸ್ತ್ ಮಾಡಲಾಗಿತ್ತು. ಏಕೆಂದರೆ ಕುದುರೆಯಂತೆ ಓಡುವ ರಾಸುಗಳು ಹೇಗೆ ಬೇಕೋ ಹಾಗೇ ನುಗ್ಗುವುದರಿಂದ ಪ್ರೇಕ್ಷಕರ ಹಿತದೃಷ್ಠಿಯಿಂದ ಮೈದಾನದ ಸುತ್ತಲೂ ಮರದಿಂದ ಬೇಲಿ ನಿರ್ಮಿಸಲಾಗಿತ್ತು. ಒಮ್ಮೆಲೆ ಎರಡು ಗಾಡಿಗಳು ಓಡಾಡುವುದರಿಂದ ಎ ಹಾಗೂ ಬಿ ಎಂಬ ಎರಡು ರ‍್ಯಾಕ್‌ನಲ್ಲಿ ಎರಡು ಗಾಡಿಗಳನ್ನು ಬಿಡಲಾಗ್ತಿತ್ತು. ನೋಡುಗರಿಗೆ ಅನುಕೂಲವಾಗಲೆಂದು ಎ ಹಾಗೂ ಬಿ ಎರಡೂ ಬದಿಯಲ್ಲೂ ಎರಡು ಎಲ್.ಇ.ಡಿ ವಾಲ್ ಅಳವಡಿಸಲಾಗಿತ್ತು. ಎತ್ತುಗಳು ಓಡುವ ವೇಗ ಕಂಡ ಜನ ಇವು ಎತ್ತೋ ಅಥವಾ ರೇಸ್ ಓಡುವ ಕುದುರೆಗಳೋ ಎಂದು ಶಿಲ್ಲೆ ಹೊಡೆದು ಕೇಕೆ ಹಾಕಿ ಕೂಗಾಡಿದರು.

    ಮಲೆನಾಡಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಐದು ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಎತ್ತುಗಳನ್ನು ಓಡಿಸಿದ ರೈತರು ಖುಷಿ ಪಟ್ಟರು. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಸ್ಥಳೀಯರು ಹಾಗೂ ದೂರದೂರಿನಿಂದ ಬಂದಿದ್ದ ಸ್ಪರ್ಧಾಳುಗಳು ಇಂತಹಾ ಗ್ರಾಮೀಣ ಕ್ರೀಡೆಗಳು ಜೀವಂತವಾಗಿರಲೆಂದು ಬಯಸಿದರು.

  • ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯ ಭಾಶಿಯಲ್ಲಿ ಕೊಬ್ಬಿದ ಹೋರಿ ಬೆದರಿಸುವ ಸ್ಪರ್ಧೆ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.

    ದೀಪಾವಳಿ ಪ್ರಯುಕ್ತ ಭಾಶಿಯ ಗ್ರಾಮಸ್ಥರ ವತಿಯಿಂದ ನಡೆದ ಈ ಗ್ರಾಮೀಣ ಕ್ರೀಡೆ ನೋಡುಗರ ಮೈ ನವಿರೇಳಿಸಿತು. ರಾಜ್ಯದ ಹಾವೇರಿ, ಹಾನಗಲ, ಸೊರಬಾ, ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಸ್ಥಳೀಯ ಬನವಾಸಿ ಸುತ್ತಮುತ್ತಲಿನ 300ಕ್ಕೂ ಅಧಿಕ ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಮಾಲೀಕರು ತಮ್ಮ ತಮ್ಮ ಹೋರಿಗಳನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದರು.

    ಹೋರಿ ಬೆದರಿಸಿ ಹಿಡಿಯುವುದನ್ನು ನೋಡಲು ಬನವಾಸಿ ಹಾಗೂ ಸುತ್ತಮುತ್ತಲಿನ ಸಹಸ್ರಾರು ಜನರು ಆಗಮಿಸಿದ್ದರು. ರೋಮಾಂಚನಕಾರಿ ದೃಶ್ಯಗಳನ್ನು ನೋಡಿ ಜನ ಕಣ್ತುಂಬಿಕೊಂಡಿದ್ದಾರೆ.

  • ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ

    ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ

    ಮಡಿಕೇರಿ: ಮಂಜಿನ ನಗರಿ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಇದೀಗ ಜಾತ್ರಾ ಮಹೋತ್ಸವಗಳ ಕಲರವ ಜೋರಾಗಿದೆ. ಆಧುನಿಕತೆಯ ಅಬ್ಬರದ ನಡುವೆ ಅನ್ನದಾತರ ಅವಿಭಾಜ್ಯ ಅಂಗವಾಗಿರುವ ರಾಸುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಸ್ಪರ್ಧೆಯ ಗಮ್ಮತ್ತು ಮೇಳೈಸುತ್ತಿದೆ.

    ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಜಾತ್ರೆ ಪ್ರಯುಕ್ತ ಮಾದರಿ ಯುವಕ ಸಂಘದಿಂದ ಗ್ರಾಮದಲ್ಲಿ ಜೋಡೆತ್ತುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಅದರ ಜೊತೆಗೆ ಪುರುಷರು, ಮಹಿಳೆಯರಿಗೆ 100, 200 ಹಾಗೂ 400 ಮೀಟರ್ ಓಟ ಸ್ಪರ್ಧೆ, ಮೂರು ಕಾಲಿನ ಓಟ, ಕಬಡ್ಡಿ, ರಂಗೋಲಿ ಸ್ಪರ್ಧೆ, ಶಾಟ್ ಪುಟ್ ಎಸೆತ, ಹಗ್ಗ-ಜಗ್ಗಾಟ ಸೇರಿದಂತೆ ಸಂಗಿತದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಕ್ರೀಡಾಕೂಟದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ಸಂತಸ ಪಟ್ಟಿದ್ದಾರೆ. ಹೆಬ್ಬಾಲೆ, ಚಿಕ್ಕಮಗಳೂರು, ಸಾಲಿಗ್ರಾಮ, ಹುಣಸೂರು ಹಳೇಕೋಟೆ ಸೇರಿದಂತೆ 11 ಸ್ಪರ್ಧಾ ಜೊಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಲ್ಲದೆ ಜಾತ್ರೆಯಲ್ಲಿ 1.5 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಿಂದ 5 ಲಕ್ಷ ರೂಪಾಯಿವರೆಗೆ ಬೆಲೆ ಬಾಳುವ ಒಂಟೆತ್ತನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

    ಪ್ರತಿವರ್ಷವೂ ಗ್ರಾಮದ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಎತ್ತುಗಳನ್ನು ಪ್ರದರ್ಶನ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗೆ ಕರೆತರುತ್ತಾರೆ. ಇಂದಿನ ನವ ಯುಗದ ಅಬ್ಬರದಲ್ಲಿ ಯಂತ್ರೋಪಕರಣಗಳ ಮಧ್ಯೆ ದೇಶಿ ಬಂಡಿಗಳು, ರೈತನ ಜೀವನಾಡಿಗಳಾದ ರಾಸುಗಳು ಕಣ್ಮರೆಯಾಗುತ್ತಿದೆ. ಆದರೆ ಇಂತಹ ಸನ್ನಿವೇಶದಲ್ಲಿ ಊರ ಜಾತ್ರೆಗಳ ಮೂಲಕ ಗ್ರಾಮೀಣ ಕ್ರೀಡೆಯ ಮಹತ್ವ, ದೇಶಿ ರಾಸುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ತುಂಬಾ ಸಂತೋಷವಾಗುತ್ತೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಸದಾ ಒತ್ತಡದಿಂದಲೇ ಇದ್ದಂತಹ ರೈತಪಿ ವರ್ಗಕ್ಕೂ ಮನರಂಜನೆಯ ಸರದೌತಣವನ್ನ ಉಣಬಡಿಸಿದೆ. ಅಷ್ಟೇ ಅಲ್ಲದೆ ರಾಸುಗಳು ಹಾಗೂ ಗ್ರಾಮೀಣ ಆಟೋಟಗಳ ಪರಿವೇ ಇಲ್ಲದ ಯುವಕ-ಯುವತಿಯರಿಗೆ ಅವುಗಳ ಮಹತ್ವದ ಅರಿವು ಮೂಡಿಸಿದೆ.

  • 1,600 ಕ್ರೀಡಾಪಟುಗಳನ್ನು ಹಿಂದಿಕ್ಕಿ ಕಿರೀಟ ಗೆದ್ದ ಧಾರವಾಡದ ಇನ್ಸ್‌ಪೆಕ್ಟರ್

    1,600 ಕ್ರೀಡಾಪಟುಗಳನ್ನು ಹಿಂದಿಕ್ಕಿ ಕಿರೀಟ ಗೆದ್ದ ಧಾರವಾಡದ ಇನ್ಸ್‌ಪೆಕ್ಟರ್

    ಧಾರವಾಡ: ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಫ್ ಐರಾನ್ ಮ್ಯಾನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಮುರುಘೇಶ್ ಚನ್ನಣ್ಣವರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಐರಾನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ದೇಶದ 1,600 ಕ್ರೀಡಾಪಟುಗಳು ಭಾಗವಹಿಸಿದ್ದು, ಅವರನ್ನು ಹಿಂದಿಕ್ಕಿ ಮುರುಘೇಶ್ ಹಾಫ್ ಐರಾನ್ ಮ್ಯಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    7 ತಾಸಿನಲ್ಲಿ 1.9 ಕಿ.ಮೀ ಈಜು, 91 ಕಿ.ಮೀ ಸೈಕ್ಲಿಂಗ್ ಹಾಗೂ 21.1 ಕಿ.ಮೀ ರನ್ನಿಂಗ್ ಮಾಡುವ ಮೂಲಕ ಮುರುಘೇಶ್ ಚನ್ನಣ್ಣವರ ಅವರು ರಾಜ್ಯದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.

    ಮುರುಘೇಶ್ ಚನ್ನಣ್ಣವರ ಈಗಾಗಲೇ ಸೈಕ್ಲಿಂಗ್, ಮ್ಯಾರಾಥಾನ್ ನಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಇವರು 42 ಕಿ.ಮೀ ಮ್ಯಾರಾಥಾನ್, 100 ಕಿ.ಮೀ ಸೈಕ್ಲಿಂಗ್‍ನಲ್ಲಿ ಕೂಡ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.