Tag: ಸ್ನೇಕ್ ಶ್ಯಾಂ

  • ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಮೈಸೂರು: ಹಾವು ಹಿಡಿಯುವುದರ ಮೂಲಕ ಸ್ನೇಕ್ ಶ್ಯಾಂ ದಾಖಲೆ ಬರೆದಿದ್ದಾರೆ. ಮೈಸೂರಿನ ಈ ಉರಗ ಪ್ರೇಮಿಗೆ ಹಾವು ಸಂರಕ್ಷಣೆ ಮಾಡುವುದೇ ಕಾಯಕ. ಈ ಕಾಯಕವನ್ನು ಶ್ಯಾಂ ಬಹಳ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡುತ್ತಿದ್ದಾರೆ. ಹೀಗಾಗಿ ಶ್ಯಾಂ ಹಾವು ಹಿಡಿಯುವುದರಲ್ಲಿ ಈಗ ಹೊಸ ದಾಖಲೆ ಬರೆದಿದ್ದಾರೆ.

    35 ಸಾವಿರ ಹಾವನ್ನು ಸಂರಕ್ಷಣೆ ಮಾಡಿದ ದಾಖಲೆ ಶ್ಯಾಂ ಮುಡಿಗೇರಿದೆ. ಮೈಸೂರಿನ ಹೆಬ್ಬಾಳ ಬಡಾವಣೆಯ ಇನ್ಫೋಸಿಸ್ ಆವರಣದಲ್ಲಿ ಮಂಡಲದ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಶ್ಯಾಂ ಆ ಹಾವನ್ನು ಕ್ಷಣ ಮಾತ್ರದಲ್ಲಿ ಹಿಡಿದರು. ಈ ಹಾವು ಶ್ಯಾಂ ಹಿಡಿದ 35ನೇ ಸಾವಿರದ ಹಾವಾಗಿ ಅವರ ರಿಜಿಸ್ಟರ್ ನಲ್ಲಿ ದಾಖಲಾಯಿತು.

    1981ರಿಂದ ಹಾವು ಹಿಡಿಯುವುದನ್ನು ಕಾಯಕ ಮಾಡಿಕೊಂಡಿರುವ ಶ್ಯಾಂ 1997ರಿಂದ ಹೀಗೆ ತಾವು ಹಿಡಿದ ಹಾವುಗಳನ್ನು ರಿಜಿಸ್ಟರ್ ನಲ್ಲಿ ದಾಖಲು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈಗ 35 ಸಾವಿರ ಹಾವು ಹಿಡಿದು ಸಂರಕ್ಷಿಸಿದ ಬಹು ಅಪರೂಪದ ದಾಖಲೆ ಮಾಡಿದ್ದಾರೆ.

    ಹಾವು ಕಂಡರೆ ಬೆಚ್ಚಿ ಬೀಳುವ ಮಂದಿಗೆ ಧೈರ್ಯ ಹೇಳಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುವ ಶ್ಯಾಂ ಬಗ್ಗೆ ಮೈಸೂರಿಗರಿಗೆ ಅಪಾರ ಪ್ರೀತಿ ಇದೆ. ಯಾವುದೇ ಪ್ರತಿಫಲ ಬಯಸದೇ ಹಾವು ಹಿಡಿಯುವ ಕಾಯಕ ಮಾಡುತ್ತಿರುವ ಸ್ನೇಕ್ ಶ್ಯಾಂಗೆ ಸರ್ಕಾರದಿಂದ ಹೆಚ್ಚಿನ ನೆರವು ಸಿಕ್ಕಿಲ್ಲ.

    ಮಕ್ಕಳನ್ನು ಶಾಲೆಗೆ ಬಿಡುವ ಕೆಲಸವೇ ಇವರ ಜೀವನಕ್ಕೆ ಆಧಾರ. ಜೊತೆಗೆ ಹಾವು ಹಿಡಿಯಲು ಹೋದಾಗ ಮನೆಯವರು ಕೊಡುವ ಅಲ್ಪಸ್ವಲ್ಪ ಹಣ ಇವರ ಜೀವನಕ್ಕೆ ಆಧಾರವಾಗಿದೆ. 35 ಸಾವಿರ ಹಾವು ಹಿಡಿದಿರುವ ಶ್ಯಾಂ ಈಗ ತಮ್ಮ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ತವಕದಲ್ಲಿದ್ದಾರೆ.

  • ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ವಾಷಿಂಗ್ ಮೆಷಿನ್ ಒಳಗಡೆಯಿಂದ ಬುಸ್ ಎಂದ ನಾಗರಾಜ

    ಮೈಸೂರು: ಇತ್ತೀಚೆಗೆ ಹಾವುಗಳು ನೆಲೆ ಇಲ್ಲದೆ ಬೈಕ್, ಶೂಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಮೈಸೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಒಳಗೆಯೇ ನಾಗರಹಾವು ಕಾಣಿಸಿಕೊಂಡಿದೆ.

    ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮೆಷಿನ್ ಒಳಗೆ ಹಾವು ಸೇರಿಕೊಂಡಿದ್ದು, ಸ್ಟಾಲಿನ್ ಅವರ ಪತ್ನಿ, ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ ನಾಗರಹಾವು ವಾಷಿಂಗ್ ಮೆಷಿನ್‍ನಲ್ಲಿ ಕಾಣಿಸಿಕೊಂಡಿದೆ.

    ಮೆಷಿನ್ ಒಳಗೆ ಹಾವು ಕಂಡು ಗಾಬರಿಯಾದ ಮಹಿಳೆ ತಕ್ಷಣ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಪತಿ ಕೂಡಲೇ ಈ ವಿಷಯವನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಆಗಮಿಸಿದ ಸ್ನೇಕ್ ಶ್ಯಾಂ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.