Tag: ಸ್ನಾನಘಟ್ಟ

  • ಮುಳುಗುವ ಭೀತಿಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ

    ಮುಳುಗುವ ಭೀತಿಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ

    – ಸ್ನಾನಘಟ್ಟದ ಬಳಿ ಭಕ್ತರಿಗೆ ಸಂಪೂರ್ಣ ನಿಷೇಧ

    ಮಂಗಳೂರು: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗುವ ಭೀತಿ ಎದುರಾಗಿದೆ.

    ನೇತ್ರಾವತಿ ನದಿ ನೀರು ತುಂಬಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸ್ನಾನಘಟ್ಟದ ಮೇಲ್ಬಾಗದವರೆಗೂ ನೇತ್ರಾವತಿ ನದಿ ನೀರು ಬರುತ್ತಿದೆ. ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ನೇತ್ರಾವತಿ ಸ್ನಾನ ಘಟ್ಟದ ಬಳಿ ಭಕ್ತರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಪಶ್ಚಿಮ ಘಟ್ಟದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ. ಈ ಕುರಿತು ಮೆಚ್ಚೆಚ್ಚರಿಕೆ ವಹಿಸಲಾಗಿದ್ದು, ಸ್ನಾನ ಘಟ್ಟದ ಬಳಿ ಯಾರನ್ನೂ ಬಿಡಲಾಗುತ್ತಿಲ್ಲ.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಹಿನ್ನೆಲೆ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಣೆ ಮಾಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಹಾಗೂ ಜಲಾಶಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಕೊಡಗು, ಧಾರವಾಡ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಧ್ಯದಲ್ಲೇ ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ತಂಡಗಳನ್ನು ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು

    ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು

    ಮಂಗಳೂರು: 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು ಆರಂಭಗೊಂಡಿದೆ.

    ಮಳೆಯಿಂದಾಗಿ ಸ್ನಾನಘಟ್ಟದಲ್ಲಿ ನೀರು ಹರಿಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾನಘಟ್ಟದಲ್ಲಿ ಭಕ್ತರಿಗೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಕಾರಣಕ್ಕಾಗಿ ಕ್ಷೇತ್ರದ ವತಿಯಿಂದ ಭಕ್ತಾಧಿಗಳು ನೀರಿನ ಸಮಸ್ಯೆ ನೀಗುವ ತನಕ ಕ್ಷೇತ್ರಕ್ಕೆ ಭೇಟಿ ನೀಡದಂತೆ ವಿನಂತಿಸಲಾಗಿತ್ತು.

    ಕರಾವಳಿಯಲ್ಲಿ ಇನ್ನೂ ಮುಂಗಾರು ಬಿರುಸು ಪಡೆದಿಲ್ಲ. ನದಿ, ತೊರೆಗಳೂ ತುಂಬಿ ಹರಿದಿಲ್ಲ. ಆದರೆ ಕಡಲು ಮಾತ್ರ ಇನ್ನಿಲ್ಲದಂತೆ ಅಬ್ಬರಿಸುತ್ತಲೇ ಇದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ತೀರದಲ್ಲಿ ಕಡಲು ಅಬ್ಬರಿಸತೊಡಗಿದೆ. ಭಾರೀ ಗಾಳಿಯ ಕಾರಣದಿಂದ ಕಡಲಿನ ಅಲೆಗಳು ಎರಡರಿಂದ ನಾಲ್ಕು ಮೀಟರ್ ಎತ್ತರಕ್ಕೆ ಏಳುತ್ತಿದ್ದು, ತೀರದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿ ಬರುತ್ತಿದೆ.

    ಮಂಗಳೂರಿನ ಸುರತ್ಕಲ್ ಬಳಿಯ ಮೀನ ಕುಳಿಯದಲ್ಲಿ ಕಡಲಿನ ಅಲೆಗಳು ಕೃಷಿ ಪ್ರದೇಶಕ್ಕೆ ನುಗ್ಗುತ್ತಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮಳೆ ಇಲ್ಲದಿದ್ದರೂ ಈ ಪರಿಯಾಗಿ ಕಡಲು ನುಗ್ಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲ್ ಕಡಲು ಕೊರೆತದ ಪ್ರಭಾವವನ್ನು ವೀಕ್ಷಿಸಿ ಸಂತ್ರಸ್ತರಿಗೆ ಸರ್ಕಾರದ ಸಹಾಯದ ಭರವಸೆ ನೀಡಿದ್ದಾರೆ.

    ಈ ಹಿಂದೆ ಮಾತನಾಡಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಾಲಿಕವಾಗಿ ನೀರಿದೆ. ಅದು ನೇತ್ರಾವತಿ ಕಿಂಡಿ ಅಣೆಕಟ್ಟಿನಲ್ಲಿ ತಾತ್ಕಾಲಿಕ ನೀರು ಹಾಗೂ ತೀರ್ಥದ ಗುಂಡಿಯಲ್ಲಿ ಸ್ವಲ್ಪ ನೀರಿದೆ. ಮುಂದೆ ಮಳೆ ಬರದಿದ್ದರೆ ಮಂಜುನಾಥನಿಗೂ ಬರದ ಬಿಸಿ ತಟ್ಟಲಿದೆ. ಅಲ್ಲಿನ ತೀರ್ಥ ಗುಂಡಿಯಲ್ಲೂ ನಾಲ್ಕು ಅಡಿ ನೀರು ಕಡಿಮೆ ಆಗಿದೆ. ಹಿಂದೆಯೂ ಈ ರೀತಿ ಆಗಿದೆ. ಆದರೆ ಇಷ್ಟು ತೀವ್ರವಾಗಿ ಆಗಿರಲಿಲ್ಲ. ಉಪನದಿಗಳಲ್ಲಿ ನೀರು ಬತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ ಎಂದು ತಿಳಿಸಿದ್ದರು.