Tag: ಸ್ಟ್ಯಾಚು ಆಫ್ ಲಿಬರ್ಟಿ

  • ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಹ್ಮದಾಬಾದ್: ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ.

    ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವಿಶ್ವಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಸುಮಾರು 133 ವರ್ಷ ಹಳೆಯದಾದ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ. ಏಕತಾ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸರಾಸರಿ 15 ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಸ್ಥಾಪನೆಯಾದ ಪ್ರಥಮ ವರ್ಷದಲ್ಲೇ ಏಕತಾ ಪ್ರತಿಮೆ ಅತಿ ಹೆಚ್ಚು ಜನರನ್ನು ಆಕರ್ಷಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪ್ರತಿನಿತ್ಯ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನವೆಂಬರ್ 1, 2018ರಿಂದ ಅಕ್ಟೋಬರ್ 31, 2019ರ ವರೆಗೆ ಪ್ರವಾಸಿಗರ ಭೇಟಿಯಲ್ಲಿ ಸರಾಸರಿ ಶೇ.74 ರಷ್ಟು ಹೆಚ್ಚಿದೆ. ಇದೀಗ ಎರಡನೇ ವರ್ಷದ ಮೊದಲ ತಿಂಗಳಲ್ಲಿ ಪ್ರತಿದಿನ ಸರಾಸರಿ 15,036 ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

    ಅಲ್ಲದೆ ವಾರಾಂತ್ಯದ ದಿನಗಳಲ್ಲಿ ಇದು ಸುಮಾರು 22,430ಕ್ಕೆ ಏರುತ್ತದೆ. ಅಮೆರಿಕದ ನ್ಯೂಯಾರ್ಕ್‍ನ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆಯು ನಿತ್ಯ 10 ಸಾವಿರ ಪ್ರವಾಸಿಗರನ್ನು ಮಾತ್ರ ಆಕರ್ಷಿಸುತ್ತಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಏಕತೆಯ ಪ್ರತೀಕವಾಗಿ ಭಾರತದ ಮೊದಲ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಪುತ್ಥಳಿಯನ್ನು ನರ್ಮದಾ ನದಿಯ ತಟದಲ್ಲಿ ಸ್ಥಾಪಿಸಲಾಗಿದೆ. ಇದು 182 ಮೀಟರ್ ಎತ್ತರವಿದ್ದು, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನರ್ಮದಾ ನದಿಯ ತಟದ ಸರ್ದಾರ್ ಸರೋವರ ಡ್ಯಾಂ ಬಳಿ ಇದ್ದು, ಗುಜರಾತ್‍ನ ಕೇವಾಡಿಯಾ ಕಾಲೋನಿ ಬಳಿ ಸ್ಥಾಪಿತವಾಗಿದೆ.

    ಪ್ರವಾಸಿಗರ ಭೇಟಿಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅದರಲ್ಲೂ ನವೆಂಬರ್ 2019ರಲ್ಲಿ ಹೆಚ್ಚು ಜನ ಭೇಟಿ ನೀಡಿದ್ದಾರೆ. ಈ ವರ್ಷ ನವೆಂಬರ್ 30ರ ವರೆಗೆ ಒಟ್ಟು 30.91 ಲಕ್ಷ ಪ್ರವಾಸಿಗರು ಕೆವಾಡಿಯಾಗೆ ಭೇಟಿ ನೀಡಿದ್ದಾರೆ. ಒಟ್ಟು 85.57 ಕೋಟಿ ರೂ.ಗಳ ಆದಾಯ ದಾಖಲಾಗಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತಿಳಿಸಿದೆ.

    ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಸಫಾರಿ, ಮಕ್ಕಳ ನ್ಯೂಟ್ರಿಷನ್ ಪಾರ್ಕ್, ಕ್ಯಾಕ್ಟಸ್ ಗಾರ್ಡನ್, ಚಿಟ್ಟೆಗಳ ಗಾರ್ಡನ್, ಎಕತಾ ನರ್ಸರಿ, ದಿನೋ ಟ್ರೈಯಲ್, ರಿವರ್ ರ್ಯಾಫ್ಟಿಂಗ್, ಬೋಟಿಂಗ್ ಅಲ್ಲದೆ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

    ಏಕತಾ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣ ಮಾಡಿದ್ದರು.

    ಈ ಏಕತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ನಿರ್ಮಾಣಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿತ್ತು. ಏಕತಾ ಪ್ರತಿಮೆ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ವಿಶೇಷತೆಯಿಂದ ಇಂದು ಬ್ರಿಟನ್‍ನ ಪ್ರತಿಷ್ಠ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.