Tag: ಸ್ಟೇಟ್ ಟೆರರಿಸಂ

  • ದೆಹಲಿ, ಅಸ್ಸಾಂ, ಅಲೀಗಢಗಳಲ್ಲಿ ಸ್ಟೇಟ್ ಟೆರರಿಸಂ – ಕಮಲ್ ಹಾಸನ್ ಆಕ್ರೋಶ

    ದೆಹಲಿ, ಅಸ್ಸಾಂ, ಅಲೀಗಢಗಳಲ್ಲಿ ಸ್ಟೇಟ್ ಟೆರರಿಸಂ – ಕಮಲ್ ಹಾಸನ್ ಆಕ್ರೋಶ

    – ವಿದ್ಯಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ

    ಚೆನ್ನೈ: ದೆಹಲಿ, ಅಸ್ಸಾಂ ಹಾಗೂ ಅಲೀಗಢಗಳಲ್ಲಿ ಸ್ಟೇಟ್ ಟೆರರಿಸಂ ಇದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟದ ಕುರಿತು ನಟ, ಎಂಎನ್‍ಎಂ ಪಕ್ಷದ ನಾಯಕ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಚೆನ್ನೈನಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನದ ಮುಖಕ್ಕೆ ಹೊಡೆದಂತಿದೆ. ವ್ಯವಸ್ಥೆಯನ್ನು ಅಪಾಯಕಾರಿ ಐಸಿಯುನಲ್ಲಿಟ್ಟಿದೆ. ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಯುವ ಸಮೂಹ ರಾಜಕೀಯದಲ್ಲಿ ತೊಡಗುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದೆ. ಬೇರೆ ನಾಗರಿಕರ ಬಗ್ಗೆ ಕಾಳಜಿ ವಹಿಸಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ವಿರುದ್ಧವೂ ಹರಿಹಾಯ್ದಿರುವ ಅವರು, ರಾಜ್ಯ ಸರ್ಕಾರ ಕಾಯ್ದೆಯನ್ನು ವಿರೋಧಿಸುವಲ್ಲಿ ವಿಫಲವಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ರಾಜಕೀಯ ಪ್ರಶ್ನಿಸುವುದನ್ನು ವಿದ್ಯಾರ್ಥಿ ಅರಿತಿದ್ದಾರೆ. ರಾಜಕೀಯವು ಸರ್ವವ್ಯಾಪಿ ಅದು ನಮ್ಮ ಮೇಲೂ ಪರಿಣಾಮ ಬೀರುತ್ತದೆ. ರಾಜಕೀಯವಾಗಿ ವಿದ್ಯಾರ್ಥಿಗಳು ಜಾಗೃತರಾಗಿ ಪ್ರಶ್ನಿಸುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಈ ಪ್ರಶ್ನೆಗಳನ್ನು ಕಡೆಗಣಿಸಿದರೆ ಪ್ರಜಾಪ್ರಭುತ್ವ ಅಪಾಯಕಾರಿ ಐಸಿಯುನಲ್ಲಿದೆ ಎಂದರ್ಥ ಎಂದು ವಾಗ್ದಾಳಿ ನಡೆಸಿದರು.

    ಮಕ್ಕಳ ನಿಧಿ ಮೈಯಂ(ಎಂಎನ್‍ಎಂ) ನಾಯಕ ಕಮಲ್ ಹಾಸನ್, ಪೌರತ್ವ ಕಾಯ್ದೆಯಿಂದಾಗಿ ದೆಹಲಿ, ಅಸ್ಸಾಂ ಹಾಗೂ ಅಲೀಗಢಗಳಲ್ಲಿ ಸ್ಟೇಟ್ ಟೆರರಿಸಂ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ದೆಹಲಿಯಲ್ಲಿ ಪಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಜೊತೆಗೆ ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರುದ್ಧ ಭುಗಿಲೆದ್ದಿದೆ. ಹೀಗಾಗಿ ಈ ಭಾಗಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ.