Tag: ಸ್ಟೀವ್ ಸ್ಮಿತ್

  • 3ನೇ ಪಂದ್ಯದಲ್ಲಿ ಮುಗ್ಗರಿಸಿದ ಭಾರತ – ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ

    3ನೇ ಪಂದ್ಯದಲ್ಲಿ ಮುಗ್ಗರಿಸಿದ ಭಾರತ – ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ

    ಇಂದೋರ್: ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ (Travis Head) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ (Australia), ಟೀಂ ಇಂಡಿಯಾ (Team India) ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 4 ಪಂದ್ಯಗಳ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಜಯ ಸಾಧಿಸಿದೆ.

    2ನೇ ದಿನದಾಟದ ಅಂತ್ಯಕ್ಕೆ 60.3 ಓವರ್‌ಗಳಲ್ಲಿ 163 ರನ್‌ಗಳಿಸಿದ್ದ ಭಾರತ 2ನೇ ಇನ್ನಿಂಗ್ಸ್‌ನಲ್ಲೂ ಒಂದೇ ದಿನಕ್ಕೆ ಸರ್ವಪತನ ಕಂಡಿತ್ತು. ಈ ಮೂಲಕ ಹೆಚ್ಚುವರಿ 75 ರನ್ ಗಳಿಸಿ ಆಸ್ಟ್ರೇಲಿಯಾಗೆ ಕೇವಲ 76 ರನ್‌ಗಳ ಗುರಿ ನೀಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸುವ ಮೂಲಕ ಸುಲಭ ಜಯ ಸಾಧಿಸಿತು. ಇದನ್ನೂ ಓದಿ: ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

    INDvsAUS

    ಆರಂಭಿಕರಾದ ಉಸ್ಮಾನ್ ಖವಾಜ ಆರಂಭದಲ್ಲಿ ಅಶ್ವಿನ್ ಸ್ಪಿನ್ ದಾಳಿಗೆ ತುತ್ತಾದರು. ಮತ್ತೊಬ್ಬ ಆರಂಭಿಕನಾಗಿದ್ದ ಟ್ರಾವಿಸ್ ಹೆಡ್ ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆದರು. 53 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 49 ರನ್ ಚಚ್ಚಿದರು. ಇದರೊಂದಿಗೆ ಸಾಥ್ ನೀಡಿದ ಮಾರ್ನಸ್ ಲಾಬುಶೇನ್ 58 ಎಸೆತಗಳಲ್ಲಿ 28 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 78 ರನ್‌ಗಳಿಸಿ ಜಯ ಸಾಧಿಸಿತು.

    Australia 6

    ಟೀಂ ಇಂಡಿಯಾ ಪರ ಅಶ್ವಿನ್ (Ravichandran Ashwin) 1 ವಿಕೆಟ್ ಪಡೆದರು. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಮೂರೇ ದಿನಕ್ಕೆ 31 ವಿಕೆಟ್ ಪತನ: ಇಂದೋರ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳಿಂದ ಮೂರೇ ದಿನಗಳಲ್ಲಿ 31 ವಿಕೆಟ್ ಪತನಗೊಂಡಿತು. ಮೊದಲ ದಿನ 14 ವಿಕೆಟ್, 2ನೇ ದಿನ 16 ವಿಕೆಟ್ ಹಾಗೂ 3ನೇ ದಿನ 1 ವಿಕೆಟ್ ಪತನಗೊಂಡಿತು.

    ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ಸರಣಿ ಗೆಲ್ಲುವ ತವಕದಲ್ಲಿತ್ತು. ಭಾರತದ ಸರಣಿ ಗೆಲುವಿನ ಕನಸಿಗೆ ಕಾಂಗರೂ ಪಡೆ ತಣ್ಣೀರು ಎರಚಿದೆ. ಇದರಿಂದ ಮಾರ್ಚ್‌ 9 ರಿಂದ 13ರ ವರೆಗೆ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯ ನಿರ್ಣಾಯಕವಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

    Australia

    ಸಂಕ್ಷಿಪ್ತ ಸ್ಕೋರ್:
    ಭಾರತ ಮೊದಲ ಇನ್ನಿಂಗ್ಸ್ 109/10
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 197/10
    ಭಾರತ ಎರಡನೇ ಇನ್ನಿಂಗ್ಸ್ 163/10
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 78/1

  • ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

    ಎರಡನೇ ದಿನ 16 ವಿಕೆಟ್ ಪತನ – ಆಸೀಸ್ ಗೆಲುವಿಗೆ ಬೇಕು 76 ರನ್

    ಇಂದೋರ್: 2ನೇ ದಿನದಾಟದಲ್ಲಿ ನಥನ್ ಲಿಯಾನ್ (Nathan Lyon) ಸ್ಪಿನ್ ಬೌಲಿಂಗ್ ದಾಳಿಗೆ ಪಲ್ಟಿ ಹೊಡೆದ ಭಾರತ (Team India) 163 ರನ್‌ಗಳಿಗೆ ಸರ್ವಪತನ ಕಂಡಿದ್ದು ಆಸ್ಟ್ರೇಲಿಯಾಗೆ (Australia) 76 ರನ್ ಗುರಿಯನ್ನು ನೀಡಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕಾರ್ ಟ್ರೋಫಿ 3ನೇ ಪಂದ್ಯದಲ್ಲಿ 2ನೇ ದಿನ 16 ವಿಕೆಟ್ ಪತನಗೊಂಡಿದೆ. ಎರಡು ದಿನದಲ್ಲಿ 30 ವಿಕೆಟ್ ಉರುಳಿದೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಮೊದಲ ದಿನದ ಅಂತ್ಯಕ್ಕೆ 54 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡ 2ನೇ ದಿನದಲ್ಲಿ ಕೇವಲ ಹೆಚ್ಚುವರಿ 41 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಕೊನೆಯ 11 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಪರಿಣಾಮ 197 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತದ ಪರ ವಿಶೇಷ ಸಾಧನೆಗೈದ ಜಡೇಜಾ

    ನಂತರ ತನ್ನ ಸರದಿ ಆರಂಭಿಸಿದ ರೋಹಿತ್ ಪಡೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾದ ರೋಹಿತ್ ಶರ್ಮಾ (Rohit Sharma), ಶುಭಮನ್ ಗಿಲ್ ಜೋಡಿ ಉತ್ತಮ ಶುಭಾರಂಭ ನೀಡುವಲ್ಲಿ ವಿಫಲವಾಯಿತು. ರೋಹಿತ್ 12 ರನ್‌ಗಳಿಸಿದ್ರೆ, ಗಿಲ್ 5 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಈ ವೇಳೆ ತಂಡಕ್ಕೆ ನೆರವಾದ ಚೇತೇಶ್ವರ್ ಪೂಜಾರ 142 ಎಸೆತಗಳಲ್ಲಿ 59 ರನ್ ಬಾರಿಸಿ ಭಾರತ 150 ರನ್‌ಗಳ ಗಡಿ ದಾಟಲು ನೆರವಾದರು. ಶ್ರೇಯಸ್ ಅಯ್ಯರ್ 26 ರನ್ ಗಳಿಸಿದರು. ನಂತರ ಭಾರತ ಒಂದೊಂದೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡೂ ದಿನಗಳಲ್ಲೂ ಅಕ್ಷರ್ ಪಟೇಲ್ ಕ್ರಮವಾಗಿ 12, 15 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 2ನೇ ದಿನದ ಅಂತ್ಯಕ್ಕೆ 60.3 ಓವರ್‌ಗಳಲ್ಲಿ 163 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು.

    ಟೀಂ ಇಂಡಿಯಾ ಪರ ಆರ್.ಅಶ್ವಿನ್ (Ravichandran Ashwin) 3 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 689 ವಿಕೆಟ್ ಪಡೆಯುವ ಮೂಲಕ 687 ವಿಕೆಟ್ ಪಡೆದ ಟೀಂ ಇಂಡಿಯಾ ಲೆಜೆಂಡರಿ ಕಪಿಲ್ ದೇವ್ ಅವರ ದಾಖಲೆ ಮುರಿದರು. ರವೀಂದ್ರ ಜಡೇಜಾ (Ravindra Jadeja) 4 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮೂರು ವಿಕೆಟ್ ಕಬಳಿಸಿದರು.

    ಮೂರನೇ ಟೆಸ್ಟ್ ಪಂದ್ಯದಲ್ಲೂ ಮಿಂಚಿದ ಆಸ್ಟ್ರೇಲಿಯಾ ಕ್ರಿಕೆಟಿಗ ನಥನ್ ಲಿಯಾನ್ ಸ್ಪಿನ್ ದಾಳಿಯ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳನ್ನ ಪೆವಿಲಿಯನ್‌ಗಟ್ಟುವಲ್ಲಿ ಯಶಸ್ವಿಯಾದರು. 23.1 ಓವರ್‌ಗಳಲ್ಲಿ 64 ರನ್ ನೀಡಿ, ಶುಭಮನ್ ಗಿಲ್, ರೋಹಿತ್, ಜಜೇಡಾ, ಭರತ್, ಅಶ್ವಿನ್, ಪೂಜಾರ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ವಿಕೆಟ್ ಉರುಳಿಸುವ ಮೂಲಕ ಟೀಂ ಇಂಡಿಯಾವನ್ನು 163 ರನ್‌ಗಳಿಗೆ ಕಟ್ಟಿಹಾಕಿದರು. ಮ್ಯಾಥಿವ್ ಕುಹ್ನೆಮನ್, ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

  • ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್

    ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್

    ಪರ್ತ್: ಆಸ್ಟ್ರೇಲಿಯಾ (Australia) ಹಾಗೂ ವೆಸ್ಟ್ ಇಂಡೀಸ್ (West Indies) ನಡುವಿನ ಮೊದಲ ಟೆಸ್ಟ್ (Test) ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮ್ಯಾನ್‌ ಸ್ಟೀವ್ ಸ್ಮಿತ್ (Steve Smith) ಬ್ಯಾಟ್‍ನಿಂದ ಅಂಪೈರ್ ಕಾಲಿಗೆ ಪೆಟ್ಟು ಬಿದ್ದಿದೆ.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ಬೀಸುತ್ತಿದ್ದ ಸ್ಮಿತ್ ನಾನ್‍ಸ್ಟ್ರೈಕ್‍ನಲ್ಲಿದ್ದಾಗ ಅಂಪೈರ್ ರಾಡ್ ಟಕರ್, ಸ್ಮಿತ್ ಹಿಂದೆ ನಿಂತಿದ್ದರು. ಈ ವೇಳೆ ಅಂಪೈರ್ ಇರುವುದನ್ನು ಗಮನಿಸದ ಸ್ಮಿತ್ ಬ್ಯಾಟ್‍ನ್ನು ಬೀಸಿದ್ದಾರೆ. ಆಗ ಅಂಪೈರ್ ಕಾಲಿಗೆ ಬ್ಯಾಟ್‍ನಿಂದ ಹೊಡೆತಬಿದ್ದಿದೆ. ಅಂಪೈರ್ ಗಾಯದಿಂದ ಒಮ್ಮೆ ಕುಂಟುತ್ತಾ ಸಾಗಿದರು. ಬಳಿಕ ಚೇತರಿಕೆ ಕಂಡು ಕರ್ತವ್ಯ ಮುಂದುವರಿಸಿದರು. ಇದನ್ನೂ ಓದಿ: 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ಪಂದ್ಯದಲ್ಲಿ ಸ್ಮಿತ್ ಮನಮೋಹಕ ಆಟದ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಕಾಡಿದರು. ಅಲ್ಲದೇ ಅಜೇಯ 200 ರನ್ (311 ಎಸೆತ, 17 ಬೌಂಡರಿ) ಚಚ್ಚಿ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣರಾದರು. ಆಸ್ಟ್ರೇಲಿಯಾ 152 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 598 ರನ್‍ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು. ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    Live Tv
    [brid partner=56869869 player=32851 video=960834 autoplay=true]

  • ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್

    ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್

    ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವೆ ನಿನ್ನೆ ನಡೆದ ಎರಡನೇ ಟಿ20 (T20) ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಬುಮ್ರಾ ಎಸೆದ ಎರಡು ಅದ್ಭುತ ಯಾರ್ಕರ್‌ಗೆ (Yorker) ಎದುರಾಳಿ ತಂಡದ ಆಟಗಾರರೇ ಶಬ್ಬಾಸ್‍ಗಿರಿ ನೀಡಿ ಬೆರಗಾಗಿದ್ದಾರೆ.

    ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದ ಬುಮ್ರಾ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಳಿದ ಬುಮ್ರಾ 4ನೇ ಓವರ್‌ನ 5ನೇ ಎಸೆತದಲ್ಲಿ ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ (Aaron Finch) ಕ್ಲೀನ್ ಬೌಲ್ಡ್ ಆದರು. ಇದು ಯಾರ್ಕರ್ ಎಸೆತವಾಗಿತ್ತು. ಇದನ್ನು ಕಂಡ ಫಿಂಚ್ ಸ್ವತಹಃ ಬುಮ್ರಾಗೆ ಬ್ಯಾಟ್ ತಟ್ಟಿ ಶಬ್ಬಾಸ್‍ಗಿರಿ ನೀಡಿದರು. ಇದನ್ನೂ ಓದಿ: ನನ್ನ ಸ್ಫೋಟಕ ಬ್ಯಾಟಿಂಗ್ ಕಂಡು ನಾನೇ ಶಾಕ್ – ಪಂದ್ಯ ಗೆದ್ದರೂ ಹೀಗೇಕೆ ಅಂದ್ರು ಹಿಟ್‌ಮ್ಯಾನ್‌?

    ಆ ಬಳಿಕ ಬುಮ್ರಾ 6ನೇ ಓವರ್‌ನ 2ನೇ ಎಸೆತವನ್ನೂ ಯಾರ್ಕರ್ ಎಸೆದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸ್ಮಿತ್ (Steven Smith) ಆ ಎಸೆತವನ್ನು ಎದುರಿಸಲಾಗದೆ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದರು. ಬಳಿಕ ಎದ್ದು ಬೆರಗು ಮೂಡಿಸಿದ ಆ ಎಸೆತವನ್ನು ತಮ್ಮ ಮುಖಭಾವದಲ್ಲಿ ತೋರ್ಪಡಿಸಿದರು. ಇದನ್ನೂ ಓದಿ: ಧೋನಿ ಆಸೆಯಂತೆ ನಡೆಯಲಿದೆ ನಿವೃತ್ತಿ ಪಂದ್ಯ – ಚೆನ್ನೈನಲ್ಲಿ ಐಪಿಎಲ್‍ಗೆ ಗುಡ್ ಬೈ ಹೇಳುವುದು ಖಚಿತ

    ಪಂದ್ಯದಲ್ಲಿ ಬುಮ್ರಾ 2 ಓವರ್ ಎಸೆದು 23 ರನ್ ನೀಡಿ 1 ವಿಕೆಟ್ ಪಡೆದರು. ಮಳೆಯಿಂದಾಗಿ 8 ಓವರ್‌ಗೆ ಇಳಿಕೆ ಕಂಡಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 91 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ಸಿಡಿಸಿ ಜಯ ಸಾಧಿಸಿತು. ರೋಹಿತ್ ಶರ್ಮಾ ಭಾರತದ ಜಯಕ್ಕಾಗಿ ಕೆಚ್ಚೆದೆಯ ಹೋರಾಟ ನಡೆಸಿ 46 ರನ್ (20 ಎಸೆತ, 4 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಇದನ್ನೂ ಓದಿ: ರೋಹಿತ್ ನಾಯಕನ ಆಟ – ಭಾರತಕ್ಕೆ ಜಯ, ಸರಣಿ ಸಮಬಲ

    Live Tv
    [brid partner=56869869 player=32851 video=960834 autoplay=true]

  • ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ

    ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ

    ಸಿಡ್ನಿ: ಆಸ್ಟ್ರೇಲಿಯಾದ (Australia) ರನ್ ಮಿಷಿನ್ ಎಂದೇ ಖ್ಯಾತರಾದ ಸ್ಟೀವ್ ಸ್ಮಿತ್ (Steve Smith)  ನ್ಯೂಜಿಲೆಂಡ್ (New Zealand) ವಿರುದ್ಧದ ಪಂದ್ಯದಲ್ಲಿ ತಮ್ಮ ಆಟದ ಜೊತೆಗೆ ಮೈದಾನದಲ್ಲಿ ಎಷ್ಟು ಚುರುಕಾಗಿ ಗ್ರಹಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

    ಸ್ಮಿತ್ ಆಸ್ಟ್ರೇಲಿಯಾ ಪರ ಮೂರು ಮಾದರಿ ಕ್ರಿಕೆಟ್‍ನಲ್ಲೂ ಮಿಂಚುಹರಿಸಿದ ಆಟಗಾರ. ಸ್ಮಿತ್ ತಮ್ಮ ಆಟದ ಜೊತೆಗೆ ಮೈದಾನದಲ್ಲಿ ತುಂಬಾ ಚುರುಕಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕುಸಿತಕಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಆಧರಿಸಿ ಸ್ಮಿತ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. 38 ಓವರ್ ಎಸೆಯಲು ಬಂದ ಜೆಮ್ಮಿ ನಿಶಾಮ್ ಅವರ ಎಸೆತವೊಂದಕ್ಕೆ ಸ್ಮಿತ್ ಸಿಕ್ಸ್ ಚಚ್ಚಿದರು. ಜೊತೆಗೆ ಕೂಡಲೇ ಅಂಪೈರ್‌ಗೆ ನೋ ಬಾಲ್ (No Ball)  ಎಂಬ ಸೂಚನೆ ನೀಡಿದರು. ಇದನ್ನೂ ಓದಿ: T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    ಇತ್ತ ಸ್ಮಿತ್ ನೋ ಬಾಲ್ ಎಂದು ಹೇಳುತ್ತಿದ್ದಂತೆ ಅಂಪೈರ್ ಯಾಕೆ ಎಂದರು. ಸ್ಮಿತ್ 30 ಯಾರ್ಡ್ ಸರ್ಕಲ್‍ನ ಹೊರಭಾಗದಲ್ಲಿ ನಿಯಮಕ್ಕಿಂತ ಹೆಚ್ಚಿನ ಫೀಲ್ಡರ್‌ಗಳು ನಿಂತಿದ್ದಾರೆ ಹಾಗಾಗಿ ನೋ ಬಾಲ್ ಎಂದರು. ಆ ಬಳಿಕ ಎಚ್ಚೆತ್ತುಕೊಂಡ ಅಂಪೈರ್ ನೋ ಬಾಲ್ ಎಂದರು. ಇದೀಗ ಸ್ಮಿತ್ ಅವರ ಚುರುಕಿನ ಗ್ರಹಿಕೆ, ಬದ್ಧತೆಗೆ ಎಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ

    ಈ ಪಂದ್ಯದಲ್ಲಿ ಸ್ಮಿತ್ ಏಕದಿನ ಕ್ರಿಕೆಟ್‍ನಲ್ಲಿ ವರ್ಷಗಳ ಬಳಿಕ ಶತಕ 105 ರನ್ (131 ಎಸೆತ) ಸಿಡಿಸಿ ಮಿಂಚಿದರು. ಇದು ಸ್ಮಿತ್ ಅವರ 12 ಏಕದಿನ ಶತಕವಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 40ನೇ ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. 71 ಶತಕ ಸಿಡಿಸಿರುವ ಕೊಹ್ಲಿ (Virat Kohli) ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ

    ಫಿಂಚ್‍ಗೆ ಗೆಲುವಿನ ವಿದಾಯ:
    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಮಿತ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತು. 268 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 242 ರನ್‍ಗಳಿಗೆ ಸರ್ವಪತನಕಂಡು ಸೋಲು ಕಂಡಿದೆ. 25 ರನ್‍ಗಳ ಜಯದೊಂದಿಗೆ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಪಂದ್ಯವಾಡಿದ ನಾಯಕ ಆರನ್ ಫಿಂಚ್‍ಗೆ (Aaron Finch)  ಗೆಲುವಿನ ವಿದಾಯ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ಡೇವಿಡ್ ವಾರ್ನರ್ ನಾಯಕತ್ವದ ಪಟ್ಟ ಇಲ್ಲದಿದ್ದರೂ ನಾನು ಯಾವತ್ತು ನಾಯಕನೇ ಎಂದು ಸ್ಟ್ರಾಂಗ್ ಮೆಸೇಜ್ ಒಂದನ್ನು ನೀಡಿದ್ದಾರೆ.

    ಚೆಂಡು ವಿರೂಪ ಪ್ರಕರಣದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ವಾಪಾಸ್ ಆಗಿರುವ ವಾರ್ನರ್ ಇದೀಗ 9 ವರ್ಷಗಳ ಬಳಿಕ ಬಿಗ್‍ಬಾಶ್ ಲೀಗ್ ಆಡುತ್ತಿದ್ದಾರೆ. ಈ ನಡುವೆ ಬಿಗ್‍ಬಾಶ್ ಲೀಗ್‍ನಲ್ಲಿ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್‌ಗೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದೆ. ಆದರೆ ವಾರ್ನರ್ ನಾಯಕತ್ವದ ಅಜೀವ ನಿಷೇಧದಲ್ಲಿದ್ದಾರೆ. ಇದನ್ನೂ ಓದಿ: 10 ವರ್ಷಗಳ ಬಳಿಕ ಮತ್ತೆ ಎದುರುಬದುರಾಗಿ ಆಡಿದ ಕ್ರಿಕೆಟಿಗರು

    2018ರಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಡೇವಿಡ್ ವಾರ್ನರ್ ನಾಯಕತ್ವದ ಅಜೀವ ನಿಷೇಧ ಶಿಕ್ಷೆಯಲ್ಲಿದ್ದಾರೆ. ಇದೀಗ ಈ ನಿಷೇಧವನ್ನು ಹಿಂಪಡೆಯಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್ ನನಗೆ ನಾಯಕತ್ವದ ಪಟ್ಟ ಇಲ್ಲದಿದ್ದರೂ ನಾನು ನಾಯಕನಾಗಿಯೇ ತಂಡದ ಜೊತೆ ಇರುತ್ತೇನೆ ನನಗೆ ಪಟ್ಟ ಬೇಕಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‍ಗೆ ದಿನಗಣನೆ – ಇಂಡೋ-ಪಾಕ್ ಕದನದಲ್ಲಿ ಇರಲ್ಲ ಇಬ್ಬರು ಬೆಂಕಿ ಬೌಲರ್ಸ್‌

    2018ರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದ ಬಳಿಕ ಆಸ್ಟ್ರೇಲಿಯಾದ ಮೂವರು ಆಟಗಾರರಾದ ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಮತ್ತು ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಆ ಬಳಿಕ ಇದೀಗ ಅಂತಾರಾಷ್ಟ್ರೀಯ ತಂಡಕ್ಕೆ ವಾಪಾಸಾಗಿದ್ದಾರೆ. ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ ಭರ್ಜರಿ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

     

  • ಸ್ಮಿತ್, ಉತ್ತಪ್ಪ ಸ್ಫೋಟಕ ಆಟ – ಆರ್‌ಸಿಬಿಗೆ 178 ರನ್ ಟಾರ್ಗೆಟ್

    ಸ್ಮಿತ್, ಉತ್ತಪ್ಪ ಸ್ಫೋಟಕ ಆಟ – ಆರ್‌ಸಿಬಿಗೆ 178 ರನ್ ಟಾರ್ಗೆಟ್

    – ಮತ್ತೆ ಮೋರಿಸ್ ಮೋಡಿ

    ದುಬೈ: ಇಂದು ಸೂಪರ್ ಶನಿವಾರದ ಮೊದಲನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 178 ರನ್‍ಗಳ ಟಾರ್ಗೆಟ್ ನೀಡಿದೆ.

    ನಾಯಕ ಸ್ಟೀವ್ ಸ್ಮಿತ್ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ರಾಯಲ್ಸ್ ಬ್ಯಾಟ್ಸ್ ಮ್ಯಾನ್‍ಗಳು ಬೆಂಗಳೂರು ತಂಡಕ್ಕೆ ಉತ್ತಮ ಟಾರ್ಗೆಟ್ ನೀಡಿದರು. ಇಂದು ಆರಂಭದಲ್ಲೇ ಕನ್ನಡಿಗ ರಾಬಿನ್ ಉತ್ತಪ್ಪ ಉತ್ತಮವಾಗಿ ಆಡಿ ತಂಡಕ್ಕೆ 41 ರನ್‍ಗಳ ಕಾಣಿಕೆ ನೀಡಿ ಔಟ್ ಆದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದು ಕೊನೆಯವರಿಗೂ ನಿಂತು ಆಡಿದ ನಾಯಕ ಸ್ಮಿತ್ 57 ರನ್ ಸಿಡಿಸಿ ತಂಡಕ್ಕೆ ನೆರವಾದರು.

    ಇಂದು ಬೆಂಗಳೂರು ತಂಡದ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಕ್ರಿಸ್ ಮೋರಿಸ್ ಅವರು ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 26 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟು ಸ್ಪಿನ್ನರ್ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 34 ರನ್ ನೀಡಿದರು. ಇಂದು ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಮ್ಯಾಜಿಕ್ ಮಾಡಲಿಲ್ಲ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮವಾದ ಓಪನಿಂಗ್ ಪಡೆಯಿತು. ಐಪಿಎಲ್-2020ಯಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಬಂದ ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ 5ನೇ ಓವರಿನ 4ನೇ ಬಾಲಿನಲ್ಲಿ 15 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ಅವರು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು.

    ಈ ಮೂಲಕ ಪವರ್ ಪ್ಲೇ ಮುಕ್ತಾಯದ ವೇಳೆಗೆ ರಾಜಸ್ಥಾನ್ ತಂಡ ಒಂದು ವಿಕೆಟ್ ಕಳೆದುಕೊಂಡು 52 ರನ್ ಪೇರಿಸಿತು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಉತ್ತಪ್ಪ 22 ಬಾಲಿಗೆ 41 ರನ್ ಗಳಿಸಿ ಚಹಲ್ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಇದಾದ ನಂತರದ ಬಾಲಿನಲ್ಲೇ ಸಂಜು ಸ್ಯಾಮ್ಸನ್ ಅವರು 9 ರನ್ ಗಳಿಸಿ ಯುಜ್ವೇಂದ್ರ ಚಹಲ್ ಎಸೆತದಲ್ಲಿ ಕ್ರಿಸ್ ಮೋರಿಸ್ ಕ್ಯಾಚ್ ಕೊಟ್ಟು ಹೊರನಡೆದರು.

    ನಂತರ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಜೋಸ್ ಬಟ್ಲರ್ 12ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಜೊತೆಗೆ 43 ಬಾಲಿಗೆ ಬಟ್ಲರ್ ಮತ್ತು ಸ್ಮಿತ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು. 25 ಬಾಲಿಗೆ 24 ರನ್ ಸಿಡಿಸಿ ಆಡುತ್ತಿದ್ದ ಜೋಸ್ ಬಟ್ಲರ್ ಅವರು ಕ್ರಿಸ್ ಮೋರಿಸ್ ಅವರ ಬೌಲಿಂಗ್‍ನಲ್ಲಿ ನವದೀಪ್ ಸೈನಿ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ಕೊನೆಯ ಓವರಿನಲ್ಲಿ ನಾಯಕ ಸ್ಟೀವ್ ಸ್ಮಿತ್ ಅವರು 36 ಬಾಲಿಗೆ 57 ರನ್ ಸಿಡಿಸಿ ಔಟ್ ಆದರು.

  • ಇಂದು ಆರ್‌ಸಿಬಿ ವರ್ಸಸ್ ರಾಜಸ್ಥಾನ್ ಪಂದ್ಯ – ಕೊಹ್ಲಿ, ಸ್ಟೀವ್ ಸ್ಮಿತ್ ಮುಖಾಮುಖಿ

    ಇಂದು ಆರ್‌ಸಿಬಿ ವರ್ಸಸ್ ರಾಜಸ್ಥಾನ್ ಪಂದ್ಯ – ಕೊಹ್ಲಿ, ಸ್ಟೀವ್ ಸ್ಮಿತ್ ಮುಖಾಮುಖಿ

    – ಇಬ್ಬರು ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳಿಗೆ  ಪ್ರತಿಷ್ಠೆಯ ಕಣ

    ಅಬುಧಾಬಿ: ಇಂದು ಐಪಿಎಲ್ ವಿಕೇಂಡ್ ಧಮಾಕದ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

    ಐಪಿಎಲ್‍ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಅಬುಧಾಬಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಉಭಯ ತಂಡಗಳ ಬಲಿಷ್ಠ ನಾಯಕರು ಇಂದು ಸೆಣಸಾಡಲಿದ್ದಾರೆ. ಬ್ಯಾಟಿಂಗ್‍ನಲ್ಲಿ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ನಡುವೆ ಯಾರು ಉತ್ತಮರು ಎಂಬ ಪ್ರಶ್ನೆ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕಾರಣ ಇಬ್ಬರಿಗೂ ಈ ಪಂದ್ಯ ಪ್ರತಿಷ್ಠೆಯ ಕಣವಾಗಿದೆ.

    ಈಗಾಗಲೇ ಐಪಿಎಲ್‍ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದಿರುವ ಬೆಂಗಳೂರು ತಂಡ ಉತ್ತಮ ಸ್ಥಿತಿಯಲ್ಲಿದೆ. ಜೊತೆಗೆ ಕಳೆದ ಪಂದ್ಯವನ್ನು ಬಲಿಷ್ಠ ಮುಂಬೈ ವಿರುದ್ಧ ಸೂಪರ್ ಓವರಿನಲ್ಲಿ ಗೆದ್ದ ಆತ್ಮವಿಶ್ವಾಸದೊಂದಿಗೆ ಇಂದು ಕಣಕ್ಕೆ ಇಳಿಯಲಿದೆ. ಜೊತೆಗೆ ರಾಜಸ್ಥಾನ್ ಕೂಡ ಆಡಿರುವ 3 ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಸಾಧಿಸಿದೆ. ಜೊತೆಗೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲಿನ ಕಹಿ ಅನುಭವದೊಂದಿಗೆ ಇಂದು ಆಡಬೇಕಿದೆ.

    ಆರ್‌ಸಿಬಿಗೆ ಬ್ಯಾಟಿಂಗ್ ಬಲ
    ಆರ್‌ಸಿಬಿ ತಂಡದಲ್ಲಿ ಬ್ಯಾಟ್ಸ್ ಮ್ಯಾನ್‍ಗಳ ದಂಡೇ ಇದೆ. ಆಸೀಸ್‍ನ ಅನುಭವಿ ಆಟಗಾರ ಫಿಂಚ್, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಪಂದ್ಯದ ಯಾವುದೇ ಹಂತದಲ್ಲಿಯಾದರೂ ಸಿಡಿದೆಳೇಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಕನ್ನಡಿಗ ದೇವದತ್ ಪಡಿಕಲ್ ಅವರು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, ಬೆಂಗಳೂರು ತಂಡಕ್ಕೆ ವರದಾನವಾಗಲಿದೆ. ಕೊನೆಯ ಓವರ್ ಗಳಲ್ಲಿ ಶಿವಮ್ ದುಬೆ ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿದ್ದಾರೆ.

    ಬ್ಯಾಟಿಂಗ್‍ನಲ್ಲಿ ಬಲಿಷ್ಠವಾಗಿರುವ ಆರ್‍ಸಿಬಿ ಬೌಲಿಂಗ್‍ನಲ್ಲಿ ಕೊಂಚ ಸುಧಾರಿಸಬೇಕಿದೆ. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡುವ ಬೌಲರ್ ತಂಡಕ್ಕೆ ಬೇಕಿದೆ. ಈಗಾಗಲೇ ಡೇಲ್ ಸ್ಟೇನ್ ಮತ್ತು ಉಮೇಶ್ ಯಾದವ್ ಅವರು ವಿಫಲವಾಗಿ ತಂಡದಿಂದ ಹೊರಗುಳಿದಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೊಂಚ ಸುಧಾರಿಸಿದ್ದ ಆರ್‌ಸಿಬಿ ಬೌಲಿಂಗ್‍ಗೆ ಸೈನಿ ಮತ್ತು ಉದಾನ ಅವರ ಬೌಲಿಂಗ್ ಕೈಹಿಡಿದಿದೆ. ಜೊತೆಗೆ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ಮೋಡಿ ಚೆನ್ನಾಗಿ ಮ್ಯಾಜಿಕ್ ಮಾಡುತ್ತಿದೆ.

    ಅಬ್ಬರಿಸುತ್ತಿರುವ ಸಂಜು ಸಮ್ಸನ್
    ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಹಳ ಬ್ಯಾಲೆನ್ಸ್ ಆಗಿದೆ. ಆರಂಭದಲ್ಲಿ ನಾಯಕ ಸ್ಮಿತ್ ಮತ್ತು ಬಟ್ಲರ್ ಆಡುತ್ತಾರೆ. ಜೊತೆಗೆ ಸಂಜು ಸಮ್ಸನ್ ಅವರು ಉತ್ತಮ ಲಯದಲಿದ್ದು, ಹೀಗಾಗಲೇ 3 ಪಂದ್ಯದಲ್ಲಿ ಎರಡು ಅರ್ಧಶತಕದೊಂದಿಗೆ 167 ರನ್ ಸಿಡಿಸಿದ್ದಾರೆ. ರಾಜಸ್ಥಾನ್ ಬೌಲಿಂಗ್‍ನಲ್ಲಿ ಜೋಫ್ರಾ ಆರ್ಚರ್, ಟಮ್ ಕರ್ರನ್ ಅವರು ಮಿಂಚಲಿದ್ದಾರೆ.

  • ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ನೆಟ್ಸ್‌ನಲ್ಲಿ ಧೋನಿ ಹೆಲಿಕಾಪ್ಟರ್ ಶಾಟ್ ಕಲಿಯುತ್ತಿರುವ ಸ್ಮಿತ್

    ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ನೆಟ್ಸ್‌ನಲ್ಲಿ  ಧೋನಿಯವರ ಹೆಲಿಕಾಪ್ಟರ್ ಶಾಟ್ ಹೊಡೆಯಲು ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಐಪಿಎಲ್ ಯುವ ಆಟಗಾರರಿಗೆ ಮತ್ತು ಕ್ರಿಕೆಟಿನಲ್ಲಿ ಹೊಸತನವನ್ನು ಪ್ರಯತ್ನಿಸಲು ಉತ್ತಮ ವೇದಿಕೆಯಾಗಿದೆ. ಇದರಿಂದ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಅಂತೆಯೇ ಎಂದೂ ಹೆಲಿಕಾಪ್ಟರ್ ಶಾಟ್ ಹೊಡೆಯದ ಸ್ಟೀವ್ ಸ್ಮಿತ್ ಅವರು ಐಪಿಎಲ್ ವೇಳೆ ಅದನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾರೆ.

    ಅಭ್ಯಾಸದ ವೇಳೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಹೊಡೆಯಲು ಪ್ರಯತ್ನ ಮಾಡಿರುವ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ನಾಯಕನ್ನು ನಾವು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವೇಗದ ಬೌಲರ್ ಎಸೆದ ಯಾರ್ಕರ್ ಗೆ ಸ್ಮಿತ್ ಹೆಲಿಕಾಪ್ಟರ್ ಶಾಟ್ ಬಾರಿಸಿರುವುದನ್ನು ಕಾಣಬಹುದು.

    ಕಳೆದ ಮಂಗಳವಾರ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ತಂಡ 16 ರನ್ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಮಂಗಳವಾರ ನಡೆದ ಐಪಿಎಲ್ ನಾಲ್ಕನೇ ಮ್ಯಾಚಿನಲ್ಲಿ ಸ್ಟೀವ್ ಸ್ಮಿತ್ ಅವರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. 47 ಎಸೆತದಲ್ಲಿ 69 ರನ್ ಪೇರಿಸಿದ ಸ್ಮಿತ್, 146.81ರ ಸ್ಟ್ರೈಕ್ ರೇಟ್‍ನಲ್ಲಿ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದ್ದರು.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಪ್ರಾ ಆರ್ಚರ್ ಅವರ ಮಿಂಚಿನಂತ ಹೊಡೆತಗಳಿಂದ ಭರ್ಜರಿ 217 ರನ್‍ಗಳ ಟಾರ್ಗೆಟ್ ನೀಡಿತ್ತು. ಆದರೆ ಇದನ್ನು ಬೆನ್ನಟ್ಟಿದ ಚೆನ್ನೈ ತಂಡ ರಾಯಲ್ಸ್ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರಿನಲ್ಲಿ ಕೇವಲ 199 ರನ್ ಗಳಿಸಿ 16 ರನ್‍ಗಳಿಂದ ಸೋಲುಂಡಿತ್ತು.

  • ವಿರಾಟ್, ಸ್ಮಿತ್ ಇಬ್ಬರಲ್ಲಿ ಯಾರು ಪಾಕ್ ದಂತಕಥೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌

    ವಿರಾಟ್, ಸ್ಮಿತ್ ಇಬ್ಬರಲ್ಲಿ ಯಾರು ಪಾಕ್ ದಂತಕಥೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌

    ಇಸ್ಲಾಮಾಬಾದ್: ಇಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‍ಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಮಿತ್ ಅವರು ಅಗ್ರಸ್ಥಾನದಲ್ಲಿದ್ದರೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವಿರಾಟ್ ಅಗ್ರ ಸ್ಥಾನದಲ್ಲಿದ್ದಾರೆ.

    ಅದೇನೇ ಇದ್ದರೂ ಎಲ್ಲಾ ಸ್ವರೂಪಗಳಲ್ಲೂ ಉತ್ತಮವಾದ ಪ್ರದರ್ಶನ ಯಾರು ನೀಡಿದ್ದಾರೆ ಎಂಬ ಚರ್ಚೆ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್, ದಂತಕಥೆ ಜಹೀರ್ ಅಬ್ಬಾಸ್ ಅವರಿಗೂ ಇದೇ ಪ್ರಶ್ನೆಯನ್ನು ಕೇಳಿದಾಗ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

    ”ಟೆಸ್ಟ್ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಅವರಿಗಿಂತ ಸ್ಟೀವ್ ಸ್ಮಿತ್ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಅವರು ಆಡುವ ಪ್ರತಿಯೊಂದು ಸರಣಿಯಲ್ಲೂ ಅವರು ಉತ್ತಮ ಸ್ಕೋರ್ ಮಾಡುತ್ತಾರೆ. ಜೊತೆಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಉತ್ತಮ ಬ್ಯಾಟಿಂಗ್ ಪ್ರರ್ದಶನ ನೀಡುತ್ತಿದ್ದಾರೆ. ಆದರೆ ನಾನು ಹೇಳುವುದೇನೆಂದರೆ ಬ್ಯಾಟ್ಸ್‌ಮನ್‍ ಎಲ್ಲಾ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಆ ಅರ್ಥದಲ್ಲಿ ಹೇಳುವುದಾದರೆ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪದಲ್ಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ” ಎಂದು ಜಹೀರ್ ಅಬ್ಬಾಸ್ ತಿಳಿಸಿದ್ದಾರೆ.

    2018 ರಲ್ಲಿ ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿ 10,000 ರನ್ ಗಳಿಸಿದ ವೇಗದ ಆಟಗಾರರಾದರು. ಅಂತರರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಈವರಗೂ ಶತಕ ಗಳಿಸಿಲ್ಲ. ಆದರೆ 24 ಅರ್ಧಶತಕಗಳನ್ನು ಸಿಡಿಸಿದ್ದಾರೆ. ರನ್ ಮತ್ತು ಶತಕಗಳಿಗೆ ಸಂಬಂಧಿಸಿದಂತೆ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಡ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ ಸ್ಮಿತ್ ಅವರು ಏಕಾಗ್ರತೆ ಮತ್ತು ಶತಕಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

    ”ಕೊಹ್ಲಿ ಸಾಧಿಸಿದ್ದನ್ನು ಗಮನಿಸಿ. ಆದರೆ ಅವರು ಯಂತ್ರವಲ್ಲ. ಒಂದು ಯಂತ್ರ ಕೂಡ ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸಲ್ಲ. ಈ ಕ್ಷಣದಲ್ಲಿ ಕೊಹ್ಲಿ ಅವರಿಗೆ ಸಮವಾಗಿ ಕಾರ್ಯನಿರ್ವಹಿಸುವವರು ಯಾರೂ ಇಲ್ಲ. ವಿರಾಟ್ ರನ್ ಮಳೆ ಸುರಿಸುವುದನ್ನು ಮುಂದುವರಿಸುತ್ತಾರೆ ಹಾಗೂ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

    ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್ ಅಜಮ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅವರು ಕೂಡ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೈಲಿಗಲ್ಲು ನಿರ್ಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಹೀರ್ ಅಬ್ಬಾಸ್ ಹೇಳಿದರು.

    ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಕೆಟ್ ಟೂರ್ನಿಗಳನ್ನು ಮುಂದೂಡಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಸದ್ಯಕ್ಕೆ ಎಲ್ಲಾ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮೂರೂ ಸ್ವರೂಪದಲ್ಲಿ ಅಗ್ರ ಸ್ಥಾನದಲ್ಲಿರುವ (ಏಕದಿನ- ವಿರಾಟ್ ಕೊಹ್ಲಿ, ಟೆಸ್ಟ್-ಸ್ಟೀವ್ ಸ್ಮಿತ್ ಹಾಗೂ ಟಿ20- ಬಾಬರ್ ಅಜಮ್) ಕೊರೊನಾ ಆತಂಕದ ಬಳಿಕ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.