Tag: ಸ್ಟಿಂಗ್ ಆಪರೇಷನ್

  • ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್‌ ಗೌಡ

    ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್‌ ಗೌಡ

    – ನಾನು ಯಾವುದೇ ತಪ್ಪು ಮಾಡಿಲ್ಲ
    – ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು

    ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ ಎಂದು ಮಾಜಿ ಪತ್ರಕರ್ತ ನರೇಶ್‌ ಗೌಡ ಹೇಳಿದ್ದಾರೆ.

    ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅವರು, ನಾನು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಹೇಳಿದ್ದು ಏನು?
    ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ ಪೊಲೀಸರು ಏನ್ ಮಾಡ್ತಾರೆ ಅನ್ನೋದು ನನಗೆ ಗೊತ್ತು. ಈ ಕೇಸ್‍ಗೂ ನನಗೂ ಸಂಬಂಧ ಇಲ್ಲ

    ಚಾನೆಲಿನಲ್ಲಿ ಉದ್ಯೋಗದಲ್ಲಿದ್ದಾಗ ನಾನು ಈ ಹಿಂದೆ ಸಾಕಷ್ಟು ಸ್ಟಿಂಗ್‌ ಆಪರೇಷನ್‌ ಮಾಡಿದ್ದೇನೆ. ನನ್ನ ಬಗ್ಗೆ ಯಾವುದೇ ಆರೋಪ ಬಂದಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಯಾಕೆ ಬಂದಿದೆ ಎನ್ನುವುದು ಗೊತ್ತಾಗುತ್ತಿಲ್ಲ.

    ಪತ್ರಕರ್ತನಾಗಿರುವ ಕಾರಣ ಯುವತಿ ಈ 4-5 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್‌ ಜಾರಕಿಹೊಳಿಯಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕೊಡಿಸಬೇಕೆಂದು ಕೇಳಿದ್ದರು. ನಾನು ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ದಾಖಲೆ, ಫೋಟೋ, ಕ್ಲಿಪ್ಪಿಂಗ್ ಏನಾದ್ರೂ ಇದೆಯಾ ಅಂತಾ ಕೇಳಿದ್ದೆ. ಈ ನಡುವೆ ನನ್ನ ತಾಯಿಗೆ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ

    15-20 ಬಾರಿ ಆ ಹುಡುಗಿ ಜೊತೆ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣ ಕೂಡ ಇತ್ತು. ನನ್ನನ್ನು ಕರೆಯಲ್ವಾ ಅಂದ್ರು, ಆ ಹುಡುಗಿ ಕೂಡ ನಾಮಕರಣಕ್ಕೆ ಬಂದ್ರು ಹೋದ್ರು. ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರಧಾರಿ ಅನ್ನೋ ರೀತಿ ಬಿಂಬಿಸೋಕೆ ಆರಂಭ ಮಾಡಿದ್ದಾರೆ. ಇದ್ರಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ. 5 ಕೋಟಿ, 100 ಕೋಟಿ ಆರೋಪಗಳಿಗೆ ಸ್ಪಷ್ಟನೆ ಕೊಡಬೇಕಲ್ಲ ಎಂದು ವಿಡಿಯೋ ಮಾಡಿದ್ದೇನೆ.

    ನಾನು ಮಾಡಿರೋ 3 ಲಕ್ಷ ಸಾಲ ತೀರಿಸೋಕೆ ಆಗುತ್ತಿಲ್ಲ, ಎರಡೆರಡು ಬಾರಿ ಚೆಕ್ ಬೌನ್ಸ್ ಕೂಡ ಆಗಿದೆ. ಕ್ರೆಡಿಟ್ ಕಾರ್ಡ್ ಇಎಂಐ ಕಟ್ಟಲು ಆಗದೇ ಇಂಟ್ರೆಸ್ಟ್‌ ಕಟ್ಟುತ್ತಿದ್ದೇನೆ. ಶಿರಾ ತಾಲೂಕು ಭುವನಹಳ್ಳಿ ನನ್ನ ಹುಟ್ಟೂರು. ವರ್ಷಕ್ಕೊಂದು ಸರಿ ಮಳೆ ಬಂದ್ರೆ ಸೋರುತ್ತೆ ನನ್ನ ಮನೆ. 100 ಕೋಟಿ ಆರೋಪ ಮಾಡ್ತಿರಲ್ಲ, ತಂದು ಕೊಡಿ, ನಾನೇ ಆರೋಪಿ ಎಂದು ಒಪ್ಪಿಕೊಳ್ಳುತ್ತೇನೆ.

    ಕಳೆದ 3-4 ತಿಂಗಳ ಹಿಂದೆ ಕೋರಮಂಗಲದಲ್ಲೂ 14 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಕಿರುಕುಳ ಆರೋಪದ ಸ್ಟೋರಿ ಮಾಡಿದ್ದೆ. 5 ರೂಪಾಯಿ ನಾನು ತೆಗೆದುಕೊಂಡಿದ್ದು, ತೋರಿಸಿದ್ರೆ ಶಿಕ್ಷೆ ಅನುಭವಿಸೋಕೆ ಸಿದ್ಧ. ಮಗಳ ನಾಮಕರಣಕ್ಕೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅವರು ಎಲ್ಲರೂ ಬಂದಿದ್ದರು.

    ನಾನು ಯಾಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದ್ರೆ, ಏನ್ ಪ್ಲಾನ್ ನಡೆದಿದೆ ಅನ್ನೋದು ನನಗೆ ಗೊತ್ತು. ಅದಕ್ಕೆ ನಾನು ಬಂದಿಲ್ಲ 8 ದಿನ ಅಥವಾ 5 ದಿನದಲ್ಲಿ ನಾನು ಪೊಲೀಸರ ಮುಂದೆ ಬರ್ತಿನಿ. ರಮೇಶ್ ಜಾರಕಿಹೊಳಿ ನಿರಪರಾಧಿ ಅಂತಾ ಬಿಂಬಿಸಲಾಗ್ತಿದೆ.

    ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗ್ತಿದೆ . ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ನಾಡ ದ್ರೋಹಿ ರಮೇಶ್ ಜಾರಕಿಹೊಳಿ. ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ರಮೇಶ್ ಜಾರಕಿಹೊಳಿ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ.

    ಸಿಡಿ ಹೇಗಾಯ್ತು, ಸಿಡಿ ಹೇಗೆ ಆಚೆ ಬಂತು ಅದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಎಳ್ಳಷ್ಟು ಪಾತ್ರವಿಲ್ಲ. ನಾನು ಸದ್ಯದಲ್ಲೇ ಬರ್ತಿನಿ. ನನಗೆ ಏನು ಮಾಹಿತಿ ಇದೆ ಕೊಡ್ತಿನಿ. ನಾನು ನಿರ್ದೋಷಿ ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ.

  • ಬೆಡ್ ಇಲ್ಲ, ಅಡ್ಮಿಟ್ ಮಾಡಿಕೊಳ್ಳಲ್ಲ- ‘ಪಬ್ಲಿಕ್’ ಸ್ಟಿಂಗ್‍ನಲ್ಲಿ ಕಳಚಿತು ಖಾಸಗಿ ಆಸ್ಪತ್ರೆ ಮುಖವಾಡ

    ಬೆಡ್ ಇಲ್ಲ, ಅಡ್ಮಿಟ್ ಮಾಡಿಕೊಳ್ಳಲ್ಲ- ‘ಪಬ್ಲಿಕ್’ ಸ್ಟಿಂಗ್‍ನಲ್ಲಿ ಕಳಚಿತು ಖಾಸಗಿ ಆಸ್ಪತ್ರೆ ಮುಖವಾಡ

    ಬೆಂಗಳೂರು: ಕೊರೊನಾದಿಂದ ಖಾಸಗಿ ಆಸ್ಪತ್ರೆಗಳ ಅಮಾನವೀಯ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಗೆ ನೀಡಿತ್ತು. ಆದರೆ ಸರ್ಕಾರದ ಖಡಕ್ ಎಚ್ಚರಿಕೆಗೂ ಖಾಸಗಿ ಆಸ್ಪತ್ರೆಗಳು ಕ್ಯಾರೇ ಅನ್ನುತ್ತಿಲ್ಲ. ಈಗಲೂ ರೋಗಿಗಳು ಬಂದರೆ ಬೆಡ್ ಇಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾವೆ.

    ಖಾಸಗಿ ಆಸ್ಪತ್ರೆಗಳ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಒಂದು ತಿಂಗಳು ಆಯ್ತು. ಒಂದು ತಿಂಗಳಾದರೂ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಗಳು ಮಾತು ಕೇಳುತ್ತಿಲ್ಲ. ರೋಗಿ ಎಷ್ಟೇ ಸೀರಿಯಸ್ ಆದರೂ ಬೆಡ್ ಇಲ್ಲ ಎಂದು ಹೇಳುತ್ತಿದ್ದಾವೆ. ಅಲ್ಲದೇ ಆಸ್ಪತ್ರೆಯ ಮುಂದೆ ಬೆಡ್ ಖಾಲಿ ಇಲ್ಲ ಎಂದು ಬೋರ್ಡ್ ಹಾಕಿದ್ದೀವಿ ನೋಡಿ ಎಂಬ ಉಡಾಫೆ ಉತ್ತರವನ್ನು ಕೊಡುತ್ತಿದ್ದಾವೆ.

    ಇದೀಗ ಖಾಸಗಿ ಆಸ್ಪತ್ರೆಯ ರಹಸ್ಯ ಕಾರ್ಯಾಚರಣೆಯನ್ನು ಪಬ್ಲಿಕ್ ಟಿವಿ ಮಾಡಿದೆ. ಇದರಿಂದ ಆಸ್ಪತ್ರೆಗಳ ಕಳ್ಳಾಟದ ಕಹಾನಿ ಬಟಾಬಯಲಾಗಿದೆ.
    ಸ್ಟಿಂಗ್ – 01
    ಪ್ರತಿನಿಧಿ – ಪೇಷೆಂಟ್ ಇದ್ರು ಆಸ್ಪತ್ರೆಗೆ ಸೇರಿಸಬೇಕಿತ್ತು.
    ಆಸ್ಪತ್ರೆ ಸಿಬ್ಬಂದಿ – ನಂಬರ್ ತಗೊಳ್ಳಿ ಈ ನಂಬರ್‌ಗೆ ಕಾಲ್ ಮಾಡಿ.
    ಪ್ರತಿನಿಧಿ – ಆಸ್ಪತ್ರೆ ಸಿಬ್ಬಂದಿ ಬೆಡ್ ಇಲ್ಲ ಅಂದ್ರು.
    ಸಿಬ್ಬಂದಿ – ನಮ್ಮ ಹತ್ರ ಇಲ್ಲ ಬೆಡ್, ನೀವು ಒಳಗಡೆ ಹೋಗಿ ಕೇಳಿದ್ರೂ ಇದೇ ಉತ್ತರ ಹೇಳೋದು.
    ಪ್ರತಿನಿಧಿ – ಒಂದು ಬೆಡ್ ಇಲ್ವಾ ಒಳಗಡೆ? ಆಕ್ಸಿಜನ್ ಕೂಡ ಬೇಕಾಗಿದೆ.
    ಸಿಬ್ಬಂದಿ – ಬೆಡ್‍ಗಳು ಇಲ್ಲ. ಇಲ್ನೋಡಿ ಝೀರೋ ಬೆಡ್ ಅಂತ ಬರೆದಿದ್ದೇವೆ. ಒಂದೊಂದು ಗಂಟೆಗೂ ಅಪ್‍ಡೇಟ್ ಮಾಡುತ್ತೀವಿ, ಬೋರ್ಡ್ ಹಾಕಿರೋದು ನೋಡಿ. 104 ಬೆಡ್ ಫುಲ್ ಆಗಿದೆ.
    ಪ್ರತಿನಿಧಿ – ಎಮರ್ಜೆನ್ಸಿಗೂ ಸಿಗಲ್ವಾ?, ನಾರ್ಮಲ್ ಇಲ್ವಾ ಬೆಡ್
    ಸಿಬ್ಬಂದಿ – ಇಲ್ಲ…ಇಲ್ಲ

    ಸ್ಟಿಂಗ್ ಫುಲ್ – 02
    ಗರ್ಭಿಣಿಗೆ ಉಸಿರಾಟದ ಸಮಸ್ಯೆ ಇದೆ. ಅವರು ಕೋವಿಡ್ ರೋಗಿ ಅಲ್ಲ. ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ ಎಂದು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.

    ಪ್ರತಿನಿಧಿ- ಉಸಿರಾಟದ ಸಮಸ್ಯೆ ಇದೆ. ಕೋವಿಡ್ ಅಲ್ಲ.
    ಸಿಬ್ಬಂದಿ  – ಏನಾಗಿದೆ?, ಎಲ್ಲಿದ್ದಾರೆ?
    ಪ್ರತಿನಿಧಿ – ಉಸಿರಾಟದ ತೊಂದರೆ, ಬೇರೆ ಆಸ್ಪತ್ರೆಗೆ ಹೋದರೆ ಬೆಡ್ ಇಲ್ಲ ಅಂದ್ರು. ಈಗ ಮನೆಯಲ್ಲಿದ್ದಾರೆ.
    ಸಿಬ್ಬಂದಿ – ಎಲ್ಲಿ ತೋರಿಸೋದು.?
    ಪ್ರತಿನಿಧಿ – ಕೆ.ಸಿ ಜನರಲ್‍ನಲ್ಲಿ.
    ಸಿಬ್ಬಂದಿ – ರಿಪೋರ್ಟ್ ಇದ್ಯಾ ಕೋವಿಡ್ ಟೆಸ್ಟ್ ಕೊಟ್ಟಿದ್ದಾರಾ?
    ಪ್ರತಿನಿಧಿ- ಇಲ್ಲ.
    ಸಿಬ್ಬಂದಿ – ನಮ್ಮಲ್ಲಿ ಇನ್ನು ಕೋವಿಡ್‍ಗೆಲ್ಲಾ ಫೆಸಿಲಿಟಿ ಇಲ್ಲ.
    ಪ್ರತಿನಿಧಿ – ತುಂಬಾ ಉಸಿರಾಟದ ತೊಂದರೆ ಇದೆ
    ಸಿಬ್ಬಂದಿ – ನಮ್ಮಲ್ಲಿ ಇನ್ನು ಶುರುವಾಗಿಲ್ಲ. ನಾವು ಕೋವಿಡ್‍ಗೆಲ್ಲಾ ರೆಡಿಯಾಗಬೇಕಾದರೇ ಇನ್ನೆರಡು ದಿನ ಬೇಕಾಗಬಹುದು.
    ಪ್ರತಿನಿಧಿ – ಸ್ವಾಬ್ ಆದ್ರೂ ತಗೋತಿರಾ
    ಸಿಬ್ಬಂದಿ –  ಇಲ್ಲಾ.. ನೀವು ಅಪೋಲೋಗೆ ಹೋಗಿ. ಅಲ್ಲಿ ತಗೋತಾರೆ.

    ಸ್ಟಿಂಗ್ ಆಪರೇಷನ್ ನಂ.3
    ಪ್ರತಿನಿಧಿ – ಉಸಿರಾಟದ ಸಮಸ್ಯೆ ಇದೆ ಅಂಕಲ್‍ಗೆ ಸೇರಿಸಬೇಕಿತ್ತು.
    ಸಿಬ್ಬಂದಿ – ರಿಪೋರ್ಟ್ ಇದ್ಯಾ ಪಾಸಿಟಿವ್?
    ಪ್ರತಿನಿಧಿ – ಟೆಸ್ಟ್ ಮಾಡಿಸಿಲ್ಲ.
    ಸಿಬ್ಬಂದಿ – ಸ್ವಾಬ್ ತೆಗೆದುಕೊಳ್ಳುತ್ತೀವಿ ಅಷ್ಟೇ. ಆದರೆ ಅವರನ್ನು ಅಡ್ಮಿಟ್ ಮಾಡಿಕೊಳ್ಳಲ್ಲ
    ಪ್ರತಿನಿಧಿ – ಅಲ್ಲ ತುಂಬಾ ಉಸಿರಾಟದ ಸಮಸ್ಯೆ ಇದೆ. ಒದ್ದಾಡುತ್ತಿದ್ದಾರೆ.
    ಸಿಬ್ಬಂದಿ – ಇಲ್ಲ ನಾವು ತಗೊಳ್ಳಲ್ಲ ಇಲ್ಲಿ. ಬನ್ನೇರುಘಟ್ಟಕ್ಕೆ ಹೋಗಿ. ಇಲ್ಲಿ ಕೋವಿಡ್ ಪಾಸಿಟಿವ್ ಇದ್ದರೆ ತಗೋತಿವಿ, ನೆಗೆಟಿವ್ ತಗೊಳ್ಳಲ್ಲ. ಬೇರೆ ಆಸ್ಪತ್ರೆ ಇದ್ದರೆ ನೋಡಿ. ಇಲ್ಲದೇ ಇದ್ದರೆ ಬನ್ನೇರುಘಟ್ಟಕ್ಕೆ ಕರ್ಕೊಂಡು ಹೋಗಿ.

    ಇದೇ ರೀತಿ ಫೋನ್ ಮಾಡಿದವರಿಗೆ ಬೆಡ್ ಇಲ್ಲ, ನಾವು ಅಡ್ಮಿಟ್ ಮಾಡಿಕೊಳ್ಳಲ್ಲ, ಬೇರೆ ಆಸ್ಪತ್ರೆಗೆ ಹೋಗಿ ಎಂದು ಉಡಾಫೆಯಿಂದ ಉತ್ತರ ಕೊಡುತ್ತಿದ್ದಾವೆ. ಇದರಿಂದ ಖಾಸಗಿ ಆಸ್ಪತ್ರೆಗಳು ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮೊಬೈಲ್ ಟಾರ್ಚ್ ಹಿಡ್ಕೊಂಡು ಕೆಲಸ- ಬೆಂಗ್ಳೂರು ವಿಶ್ವೇಶ್ವರಯ್ಯ ಕೇಂದ್ರದ ಅವ್ಯವಸ್ಥೆ

    ಮೊಬೈಲ್ ಟಾರ್ಚ್ ಹಿಡ್ಕೊಂಡು ಕೆಲಸ- ಬೆಂಗ್ಳೂರು ವಿಶ್ವೇಶ್ವರಯ್ಯ ಕೇಂದ್ರದ ಅವ್ಯವಸ್ಥೆ

    – ಕೆಟ್ಟು ನಿಂತಿವೆ ಮೆಟಲ್ ಡಿಟೆಕ್ಟರ್
    – ಭದ್ರತೆ ವ್ಯವಸ್ಥೆಯೂ ಇಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಬೆಂಗಳೂರಿನ ವಿವಿ ಟವರ್ ನ  ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಕತ್ತಲಲ್ಲಿ ಟಾರ್ಚ್ ಹಿಡ್ಕೊಂಡು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸಾವಿರಾರು ಹೈಪ್ರೊಫೈಲ್ ಕಡತಗಳಿವೆ. ಅವುಗಳ ರಕ್ಷಣೆಗೆ ಟಾರ್ಚ್ ಹಿಡ್ಕೊಂಡು ಸಿಬ್ಬಂದಿ ನಿಂತುಕೊಂಡಿರುತ್ತಾರೆ. ಈ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಸೌಲಭ್ಯವಿದೆ. ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕವಿಲ್ಲದಿದ್ದಾಗ ಹೆಚ್ಚುವರಿಯಾಗಿ ಜನರೆಟರ್‍ಗಳನ್ನೂ ಅಳವಡಿಸಿದ್ದಾರೆ. ಆದರೆ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಕರೆಂಟ್ ಹೋದಾಗ ಕತ್ತಲಲ್ಲೇ ಕೆಲಸ ಮಾಡಬೇಕಾಗುತ್ತೆ. ಈ ವೇಳೆ ಸರ್ಕಾರಿ ಕಡತಗಳನ್ನ ಖದೀಮರು ಸುಲಭವಾಗಿ ಎಗರಿಸಬಹುದು. ರಾಜ್ಯದ ಬಹುತೇಕ ಸರ್ಕಾರಿ ಇಲಾಖೆಯ ಕಡತಗಳಿಗೆ ಅಂತಿಮ ಮುದ್ರೆ ಬೀಳುವ ಈ ಕಚೇರಿಗಳಲ್ಲೇ ಕತ್ತಲು ತಾಂಡವವಾಡುತ್ತಿದೆ.

    ಪ್ರತಿನಿಧಿ: ಎಕ್ಸ್ ಕ್ಯೂಸ್ ಮೀ ಸರ್.. ಯಾರಾದ್ರೂ ಇದ್ದೀರಾ. ಕಾಣಿಸ್ತಿಲ್ಲ
    ಸಿಬ್ಬಂದಿ: ಹೇಳಿ..ಹೇಳಿ
    ಪ್ರತಿನಿಧಿ: ಇಷ್ಟು ಕತ್ತಲಲ್ಲಿ ಇದ್ದೀರಾ. ಯಾರಾದ್ರೂ ಇದ್ದೀರಾ ಇಲ್ಲ ಅಂತ ಗೊತ್ತೇ ಆಗೋದಿಲ್ಲ. ಲೈಟ್ ಇಲ್ವಾ..?
    ಸಿಬ್ಬಂದಿ: ಇಲ್ಲ.. ಹೋಗಿ..
    ಪ್ರತಿನಿಧಿ: ಹಾ..ಯಾಕೆ ಕತ್ತಲಲ್ಲಿ ಇದ್ದೀರಿ..?
    ಸಿಬ್ಬಂದಿ: ಕತ್ತಲಲ್ಲಿ ಇಲ್ಲದೆ ಏನು ಮಾಡೋಕೆ ಆಗುತ್ತೆ
    ಪ್ರತಿನಿಧಿ: ಮೇಡಂ, ಇಷ್ಟು ಕತ್ತಲಿದೆ ಡಿಪಾಟ್ರ್ಮೆಂಟ್‍ನಲ್ಲಿ ಹೇಗೆ ಕೂರ್ತಿರಿ
    ಸಿಬ್ಬಂದಿ: ಸುಮ್ನೆ ಕೂತಿದ್ದೀವಿ.. ಕೆಲಸ ಮಾಡೋಕೆ ಆಗಲ್ಲ. ಐದೂವರೆ ತನಕ ಆಫೀಸ್ ನಿಂದ ಹೊಗ್ಬಾರ್ದು ಅಲ್ವಾ..?

    ಹೀಗೆ ಸರ್ಕಾರದ ಮೇಲೆ ಇಲ್ಲಿನ ಸಿಬ್ಬಂದಿಗೆ ಆಕ್ರೋಶವಿದೆ, ಆವೇಶವಿದೆ. ಆದರೆ ಮೇಲಾಧಿಕಾರಿಗಳಿಗೆ ಪ್ರಶ್ನಿಸದೆ ಅನಿವಾರ್ಯವಾಗಿ ಮೊಬೈಲ್ ಟಾರ್ಚ್ ಹಿಂಡ್ಕೊಂಡು ಕೆಲಸ ಮಾಡ್ತಾರೆ. ಮುಖ್ಯವಾಗಿ ಈ ಬಹುಮಡಿ ಕಟ್ಟಡ, ರಾಜಭವನ ವಿಧಾನಸೌಧ ಪಕ್ಕದಲ್ಲಿಯೇ ಇದೆ. ಯಾವುದೇ ತುರ್ತು ಸಂದರ್ಭದಲ್ಲಿ ಕಡತಗಳನ್ನ ವಿಧಾನಸೌಧಕ್ಕೆ ರವಾನಿಸಬೇಕಾದ್ರೂ ಇಲ್ಲಿಂದಲೇ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಇಲ್ಲಿ ಭದ್ರತೆ ಇಲ್ಲ. ಇದೇ ಕಟ್ಟಡದಲ್ಲಿ ಸರ್ಕಾರದ ಬಹುತೇಕ ಇಲಾಖಾ ನಿರ್ದೇಶಕರ ಕಚೇರಿಗಳಿವೆ. ಈ ಕಚೇರಿಗಳಲ್ಲೂ ಕಡತಗಳನ್ನು ಬೇಕಾಬಿಟ್ಟಿ ಇಟ್ಟಿರ್ತಾರೆ. ಇವುಗಳ ಕಾವಲಿಗೆ ಅಂತ ಯಾವ ಸೆಕ್ಯೂರಿಟಿ ಕೂಡ ಇರಲ್ಲ. ಸರ್ಕಾರದ ಕಡತಗಳು ಖದೀಮರ ಕೈಗೆ ಸುಲಭವಾಗಿ ಇಲ್ಲಿ ಸಿಗಲಿವೆ.

    ಸಂಸದ, ಕೇಂದ್ರ ಸಚಿವರ ಕಚೇರಿಗೂ ಇಲ್ಲ ಸೆಕ್ಯೂರಿಟಿ!
    ಈ ಬಹುಮಹಡಿ ಕಟ್ಟಡದಲ್ಲಿ ಮೀನುಗಾರಿಕೆ ನಿರ್ದೇಶನಾಲಯ, ಕೃಷಿ ಇಲಾಖೆಯ ಜಾಗೃತ ಕೋಶ, ಸೇರಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿಸಿ ಮೋಹನ್, ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡರ ಕಚೇರಿ, ಸಂಸತ್ ಸದಸ್ಯ (ರಾಜ್ಯಸಭೆ) ಡಾ. ಎಲ್ ಹನುಮಂತಯ್ಯ, ಕುಪೇಂದ್ರ ರೆಡ್ಡಿ ಕಚೇರಿಗೂ ಯಾವುದೇ ಭದ್ರತೆಯಿಲ್ಲ. ಯಾರು, ಯಾವ ಸಮಯದಲ್ಲಾದ್ರೂ ದುಷ್ಕೃತ್ಯವೆಸಗಿದರೂ ಪ್ರಶ್ನಿಸುವವರು ಯಾರೂ ಇಲ್ಲ. ಭದ್ರತೆಯ ಲೋಪದೋಷದ ಬಗ್ಗೆ ಇದೇ ಕಟ್ಟಡದಲ್ಲಿರೋ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ರೆ ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ವಿಧಾನಸೌಧ ಪೊಲೀಸರ ಜೊತೆ ಮಾತನಾಡಿ. ನಮ್ಮಿಂದ ಏನೂ ಮಾಡೋಕೆ ಆಗಲ್ಲ ಅಂತ ಅಲ್ಲಿನ ಪೊಲೀಸ್ ಸಿಬ್ಬಂದಿಯೊಬ್ಬರು ಅಸಹಾಯಕತೆ ತೋಡಿಕೊಂಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಫೇಸ್ ಬುಕ್ ನಲ್ಲಿ ಫುಲ್ ಬ್ಯುಸಿಯಾಗಿದ್ದ. ಹೀಗೆ ಪೊಲೀಸರ ನಿರ್ಲಕ್ಷ್ಯವೋ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯೋ ಗೊತ್ತಿಲ್ಲ. ವಿವಿ ಟವರ್ ಗೆ ಬರೋ ಜನರಿಗೆ ಭದ್ರತೆಯಿಲ್ಲ ಅಂದ್ಮೇಲೆ ಯಾವ ಸೀಮೆಗೆ ಸರ್ಕಾರ, ಪೊಲೀಸ್ ಇಲಾಖೆ ಇರಬೇಕು ಅಂತ ಅಲ್ಲಿಗೆ ಬರೋ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    ವಿವಿ ಟವರ್ ನ ಮೂರು ಮುಖ್ಯ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟ್ ಗಳು ಕೆಟ್ಟು ನಿಂತಿವೆ. ಇವುಗಳನ್ನ ಶೋಕಿಗಾಗಿ ನಿಲ್ಲಿಸಿದ್ದು, ಅಲ್ಲದೆ ಭದ್ರತಾ ಸಿಬ್ಬಂದಿಯನ್ನೂ ಈ ಶೋಕಿ ಮೆಟಲ್ ಡಿಟೆಕ್ಟರ್ ನ ಭದ್ರತೆಗೆ ನಿಯೋಜನೆ ಮಾಡಿದ್ದಾರೆ.

    ಪ್ರತಿನಿಧಿ: ಏನು ಮೇಡಂ, ಸೌಂಡ್ ಆಗಲ್ವಾ..?
    ಪೊಲೀಸ್ ಸಿಬ್ಬಂದಿ: ಆಫ್ ಆಗಿದೆ. ಸ್ವಲ್ಪ ಪ್ರಾಬ್ಲಂ ಇದೆ. ವರ್ಕ್ ಆಗ್ತಿಲ್ಲ
    ಪ್ರತಿನಿಧಿ: ನಾವೇ ಮೂರು ಸಲ ಹೋದ್ವಿ. ಸೌಂಡೇ ಆಗ್ಲಿಲ್ಲ.
    ಪೊಲೀಸ್ ಸಿಬ್ಬಂದಿ: ಆಫ್ ಆಗಿದೆ ಅಂತ ಹೇಳ್ತಿದ್ದೀನಿ ಅಲ್ವಾ. ಇದು ಹಾಳಾಗಿದೆ. ಹಾಗಾಗಿ ಚೆನ್ನಾಗಿರೋದು ಎಂಎಸ್ ಬಿಲ್ಡಿಂಗ್‍ಗೆ ಎತ್ತಿಕೊಂಡು ಹೋದ್ರು. ಅಲ್ಲಿ ಹಾಳಾಗಿರೋದು ಇಲ್ಲಿ ಹಾಕಿದ್ದಾರೆ. ಅದ್ಕೆ ಇದು ವರ್ಕ್ ಆಗ್ತಿಲ್ಲ. ಪಬ್ಲಿಕ್ ಇಲ್ಲಿಂದ ಜಾಸ್ತಿ ಬರೋದಿಲ್ಲ. ಹಾಗಾಗಿ ಇಲ್ಲೇ ಹಾಕಿದ್ದೀವಿ.
    ಪ್ರತಿನಿಧಿ: ಮಧ್ಯಾಹ್ನ ಪಬ್ಲಿಕ್ ಇಲ್ಲಿಂದನೇ ಸುಮಾರು ಜನ ಹೋದ್ರು
    ಪೊಲೀಸ್ ಸಿಬ್ಬಂದಿ: ಪಬ್ಲಿಕ್ ಆ ಗೇಟ್ ನಿಂದಲೇ ಹೋಗ್ತಾರೆ. ಸುಮ್ನೆ ಏನಕ್ಕೆ ಅಂತ. ಅಷ್ಟೊಂದು ಇದಿಲ್ಲ. ಹೇಳ್ಕೊಳ್ಳುವಂತದ್ದು ಏನಿಲ್ಲ. ಪ್ರೊಸೆಸ್ ಏನಿಲ್ಲ..ಸೋ…

    ಹೀಗೆ ಒಂದಲ್ಲ, ಎರಡಲ್ಲ, ಸಾಲು ಸಾಲು ಅವ್ಯವಸ್ಥೆಗಳು ವಿವಿ ಟವರ್ ನಲ್ಲಿ ತಾಂಡವಾವಾಡ್ತಿವೆ. ಸರ್ಕಾರಿ ಇಲಾಖೆಯ ಹಲವು ನಿರ್ದೇಶಕರು ಕೂಡ ಪ್ರತಿನಿತ್ಯ ಕೆಟ್ಟು ನಿಂತಿರೋ ಮೆಟಲ್ ಡಿಟೆಕ್ಟರ್ ಗಳ ಮೂಲಕವೇ ತಮ್ಮ ಕಚೇರಿಗಳಿಗೆ ಹೋಗ್ತಾರೆ. ಆದರೆ ಈ ಬಗ್ಗೆ ಒಬ್ಬೇ ಒಬ್ಬರು ಚಕಾರ ಎತ್ತದಿರೋದು ವಿಪರ್ಯಾಸ. ಜನ ಹಾಗೂ ಸರ್ಕಾರಿ ಕಚೇರಿಗಳ ಬಗ್ಗೆ ಇಷ್ಟೊಂದು ತಾತ್ಸರ ಮನೋಭಾವ ಹೊಂದಿರೋ ಸರ್ಕಾರ ಹಾಗೂ ಪೊಲೀಸರು ಯಾವ ಸೀಮೆಗೆ ಬೇಕು ಅಂತ ಬೇಸರ ವ್ಯಕ್ತಪಡಿಸ್ತಿದ್ದಾರೆ.

  • ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

    ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ.

    ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ ಎಂಬುದು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದೆ.

    ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುವ ಗೋಜಿಗೆ ಹೋಗಲ್ಲ.

    ಗಲೀಜು, ಪಾಚಿ ತುಂಬಿರುವ ನೀರು, ತೊಳೆಯದೇ ವರ್ಷ ಆಯಿತೇನೋ ಅನ್ನುವಷ್ಟೂ ಹಳೆಯ, ತುಕ್ಕು ಹಿಡಿದಿರುವ, ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಲೀಜು ತುಂಬಿರುವ ಐಸ್ ಕ್ರೀಂ ಪೆಟ್ಟಿಗೆಯನ್ನು ಕಂಡರೆ ಗಾಬರಿಯಾಗುತ್ತದೆ. ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ. ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ.

    ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

    ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಸುರಿಯುತ್ತಾರೆ. ಹೀಗಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ.

  • ಬೆಂಗ್ಳೂರಲ್ಲಿ ತಲೆ ಎತ್ತಿದೆ ಹೊಸ ಮರಳು ಮಾಫಿಯಾ!

    ಬೆಂಗ್ಳೂರಲ್ಲಿ ತಲೆ ಎತ್ತಿದೆ ಹೊಸ ಮರಳು ಮಾಫಿಯಾ!

    ಬೆಂಗಳೂರು: ರಾಜ್ಯದಲ್ಲಿ ಎಷ್ಟೇ ಮರಳು ದಂಧೆ ತಡೆಗಟ್ಟಿದರೂ ಒಂದಲ್ಲ ಒಂದು ರೀತಿ ಮರಳು ಮಾಫಿಯಾ ನಡೀತಾನೆ ಇದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ ಮರಳು ಮಾಫಿಯಾವೊಂದು ತಲೆ ಎತ್ತಿದೆ.

    ಮರಳಿಗೆ ಕಬ್ಬಿಣ ಕಾರ್ಖಾನೆಯಿಂದ ಬರುವ ತ್ಯಾಜ್ಯವನ್ನು ಮಿಕ್ಸ್ ಮಾಡಿ ಅಪಾರ್ಟ್ ಮೆಂಟ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿ ಮರಳು ಅಡ್ಡೆಯಲ್ಲಿ ಈ ಮಿಕ್ಸಿಂಗ್ ಮಾಫಿಯಾ ನಡೆಯುತ್ತದೆ. ಈ ದಂಧೆಯ ಜಾಲದೊಳಗೆ ಪಬ್ಲಿಕ್ ಟಿವಿ ಎಂಟ್ರಿಯಾಗುತ್ತಿದ್ದಂತೆ ಏನೇನಾಯ್ತು?

    ಕ್ಲೀನರ್: ಬನ್ನಿ ಪರಿಚಯ ಮಾಡಿಕೊಡುತ್ತೀನಿ, ಇಲ್ಲಿ ಬರುತ್ತಿದ್ದಾರೆ ನೋಡಿ ಕೇಳಿ ಇವರಿಗೆ.
    ಪಬ್ಲಿಕ್ ಟಿವಿ: ಇವರಾ?
    ಕ್ಲೀನರ್: ರೋಬೋ ಸ್ಯಾಂಡ್ ಬೇಕಂತೆ ಎರಡು ಲೋಡ್ ನೋಡಿ.
    ಕಿಂಗ್‍ಪಿನ್ ಮಂಜು: ಕ್ರಾಸಿಂಗಾ? ಕ್ರಾಸಿಂಗ್ ಸ್ಯಾಂಡಾ?
    ಪಬ್ಲಿಕ್ ಟಿವಿ: ಹಾ ಎಷ್ಟು? ಎಷ್ಟಾಗತ್ತೆ ಒಂದು ಲೋಡ್.
    ಕಿಂಗ್‍ಪಿನ್ ಮಂಜು: ಟನ್ನೇಜ್ ಲೆಕ್ಕ ಸಾರ್ ಅದು.
    ಪಬ್ಲಿಕ್ ಟಿವಿ: ಟನ್ನೇಜಾ? ಎಷ್ಟು?
    ಕಿಂಗ್‍ಪಿನ್ ಮಂಜು: 2,600 ರೂ.
    ಪಬ್ಲಿಕ್ ಟಿವಿ: ಟನ್ ಗಾ? ಟ್ರಾನ್ಸ್ ಪೋರ್ಟ್ ಎಲ್ಲಾ ನಿಮ್ಮದೇನಾ?
    ಕಿಂಗ್‍ಪಿನ್ ಮಂಜು: ಹೂಂ ಎಲ್ಲಿಗೆ?
    ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿ ಇರುವುದು. ಲಾರಿ ಎಲ್ಲಾ ಅಲ್ಲೇ ಇರೋದು.
    ಕಿಂಗ್‍ಪಿನ್ ಮಂಜು: ನೀವು ನಾಯಂಡಳ್ಳಿ ಇರೋದಾ? ಲಾರಿಗೆ ಬೇಕಾ? ಯಾವ ಗಾಡಿ ನಿಮ್ಮದು 709 ಆ?
    ಪಬ್ಲಿಕ್ ಟಿವಿ: 709 ಒಂದು ಇದೆ. ಇನ್ನೊಂದು ಸಾಕ್ ನಮಗೆ ಅದೇ. ಇದು ಎಷ್ಟು ಬರುತ್ತೆ ಟನ್ನೇಜ್ ಆದರೆ?
    ಕಿಂಗ್‍ಪಿನ್ ಮಂಜು: ಮರಳಾ?
    ಪಬ್ಲಿಕ್ ಟಿವಿ: ಇದು ಒಂದು ಲೋಡ್ ಸಿಗುತ್ತದಾ?
    ಕಿಂಗ್‍ಪಿನ್ ಮಂಜು: ಮರಳಾ?
    ಪಬ್ಲಿಕ್ ಟಿವಿ: ಮರಳಲ್ಲ ಇದು.
    ಕಿಂಗ್‍ಪಿನ್ ಮಂಜು: ಈ ತರದ್ದಾ?
    ಪಬ್ಲಿಕ್ ಟಿವಿ: ಹಾ.
    ಕಿಂಗ್‍ಪಿನ್ ಮಂಜು: ಈ ಗಾಡಿಯಲ್ಲಿ ಬಂದಿರುವುದಾ? ಅದು ಬೇಕಾ? ಯಾವಾಗ ಬೇಕು?
    ಪಬ್ಲಿಕ್ ಟಿವಿ: ಒಂದು ಎರಡು ದಿನ
    ಕಿಂಗ್‍ಪಿನ್ ಮಂಜು: ಫೋನ್ ಮಾಡಿ ಕಳಿಸಿಕೊಡುತ್ತೀನಿ.
    ಪಬ್ಲಿಕ್ ಟಿವಿ: ನಂಬರ್ ಕೊಡಿ ನಿಮ್ಮದು.
    ಕಿಂಗ್‍ಪಿನ್ ಮಂಜು: 40 ಟನ್ ಬರುತ್ತೆ ಇದರಲ್ಲಿ
    ಪಬ್ಲಿಕ್ ಟಿವಿ: 40 ಟನ್ ಹಿಡಿಯುತ್ತದಾ ಇದು?
    ಕಿಂಗ್‍ಪಿನ್ ಮಂಜು: ಬರುತ್ತದೆ ಸಾರ್ 12 ವೀಲ್ ಗಾಡಿ.
    ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಇದು?
    ಕಿಂಗ್‍ಪಿನ್ ಮಂಜು: ಬಳ್ಳಾರಿ
    ಪಬ್ಲಿಕ್ ಟಿವಿ: ಓ ಅಲ್ಲಿಂದ ಬರುತ್ತಾ ಇದು.
    ಪಬ್ಲಿಕ್ ಟಿವಿ: ನಿರಂತರವಾಗಿ ನಮಗೆ ಡಿಮ್ಯಾಂಡ್ ಇದ್ದ ಹಾಗೆ ಸಪ್ಲೇ ಮಾಡುತ್ತೀರಾ?
    ಕಿಂಗ್‍ಪಿನ್ ಮಂಜು: ನಿಮಗೆ ಯಾವಾಗ ಬೇಕಾದರು ಹೇಳಿ..

    ಇಷ್ಟು ಆದಮೇಲೆ ಮಿಕ್ಸಿಂಗ್ ಮಾಡುವ ಜಾಗಕ್ಕೆ ಪಬ್ಲಿಕ್ ಟಿವಿ ತಂಡ ಎಂಟ್ರಿ ಕೊಡುತ್ತದೆ. ಅಲ್ಲಿ ಮಿಕ್ಸಿಂಗ್ ಮಾಡುತ್ತಿದ್ದವರನ್ನು ಮಾತನಾಡಿಸಿದಾಗ ಅವರು ಹೇಳಿದ್ದೇನು ನೋಡಿ..
    ಪಬ್ಲಿಕ್ ಟಿವಿ: ಇದು ಅದೇನಾ ಅಣ್ಣಾ? ಮಿಕ್ಸ್ ಆಗಿರುವುದಾ ಇದು?
    ಲಾರಿ ಸಿಬ್ಬಂದಿ: ಹು ಮಿಕ್ಸ್ ಆಗಿರುವುದು.
    ಪಬ್ಲಿಕ್ ಟಿವಿ: ಎಲ್ಲಿ ಬಳ್ಳಾರಿ ಇಂದ ತರುವುದು ನೀವು..?
    ಲಾರಿ ಸಿಬ್ಬಂದಿ: ಬೋರಾಪುರದ್ದು.
    ಪಬ್ಲಿಕ್ ಟಿವಿ: ಬೋರಾಪುರ..? ಎಲ್ಲಿ ಐತಣ್ಣ ಇದು.
    ಲಾರಿ ಸಿಬ್ಬಂದಿ: ಹೊಸಪೇಟೆ
    ಪಬ್ಲಿಕ್ ಟಿವಿ: ಹೊಸಪೇಟೆ ಬೋರಾಪುರ?
    ಲಾರಿ ಸಿಬ್ಬಂದಿ: ಹಾ
    ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಅದು ಅಲ್ಲಿ
    ಲಾರಿ ಸಿಬ್ಬಂದಿ: ಗೊತ್ತಿಲ್ಲ ಅಣ್ಣ ಡ್ರೈವರ್  ಕೇಳಬೇಕು.
    ಪಬ್ಲಿಕ್ ಟಿವಿ: ಯಾವುದರ ಇದು ಪುಡಿ
    ಲಾರಿ ಸಿಬ್ಬಂದಿ: ಅದೇನೋ ಪೌಡರು ಗೊತ್ತಿಲ್ಲ. ವೈಟ್ ಸಿಮೆಂಟ್‍ದಂತೆ

    ಪಬ್ಲಿಕ್ ಟಿವಿ: ಅಣ್ಣಾ ಇದು ಗೊತ್ತಾಗಲ್ವಾ?
    ಕಿಂಗ್‍ಪಿನ್ ಜಗದೀಶ್: ಯಾರು ನೀವು?
    ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿಯಲ್ಲಿ ಇದೆ
    ಕಿಂಗ್‍ಪಿನ್ ಜಗದೀಶ್: ಏನು?
    ಪಬ್ಲಿಕ್ ಟಿವಿ: ಲಾರಿ ಸ್ಟ್ಯಾಂಡು, ಇದನ್ನ ನೋಡಿಕೊಂಡು ಬನ್ನಿ ಮೊದಲು ಅಂದರು.
    ಕಿಂಗ್‍ಪಿನ್ ಜಗದೀಶ್: ಯಾರು ಹೇಳಿದ್ದು ನಿಮಗೆ.
    ಪಬ್ಲಿಕ್ ಟಿವಿ: ಇಲ್ಲಿಯವರೆ ಲಾರಿಯವರು ಒಬ್ಬರು. ಹಿಂಗಿದೆ ಲಾಭ ಮಾಡಿಕೊಳ್ಳಂಗಿದ್ದರೆ ಮಾಡಿ ಅಂತ. ನಮಗೇನು ಗೊತ್ತಾ? ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ ಗಳಿಗೆಲ್ಲಾ ಹೊಡಿತೀವಿ.
    ಕಿಂಗ್‍ಪಿನ್ ಜಗದೀಶ್: ನಾವು ಅಪಾರ್ಟ್ ಮೆಂಟ್‍ ಗೆ ಹಾಕುವುದು. ಅದು ಬಂದುಬಿಟ್ಟು ವೇಸ್ಟೇಜ್ ಅಲ್ಲ, ಮಣ್ಣಲ್ಲ ಅದು. ಅದು ಸಿಮೆಂಟ್‍ಗೆ ಹೋಗುವ ಐಟಮ್.
    ಪಬ್ಲಿಕ್ ಟಿವಿ: ಏನ್ ವೇಸ್ಟೇಜ್ ಅಣ್ಣಾ ಅದು.
    ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಸಿಮೆಂಟ್‍ಗೆ ಹೋಗೋದು ಅದು.
    ಪಬ್ಲಿಕ್ ಟಿವಿ: ಸಿಮೆಂಟ್ ಮಾಡುವುದಕ್ಕೆ ಹೋಗುವುದಾ..?
    ಕಿಂಗ್‍ಪಿನ್ ಜಗದೀಶ್: ಸಿಮೆಂಟ್ ಇದರಲ್ಲೇ ಮಾಡೋದು. ಎರಡು-ಮೂರು ಐಟಮ್ ಹಾಕುತ್ತಾರೆ. ಮುಖ್ಯವಾಗಿ ಇದನ್ನೇ ಹಾಕುವುದು.
    ಪಬ್ಲಿಕ್ ಟಿವಿ: ಯಾವುದರ ವೇಸ್ಟೇಜ್ ಇದು
    ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಯಾರು ಹೇಳಿದ್ದು ನಿಮಗೆ.
    ಪಬ್ಲಿಕ್ ಟಿವಿ: ಇಲ್ಲಿಯವರೇ ಲಾರಿಯವರು ಒಬ್ಬರು ಅಣ್ಣಾ.
    ಕಿಂಗ್‍ಪಿನ್ ಜಗದೀಶ್: ಯಾರು..?
    ಪಬ್ಲಿಕ್ ಟಿವಿ: ಅವರ ಹೆಸರು ಏನೋ ಮರೆತೆ. ಇಲ್ಲಿ ಮರಳು ಹಾಕಿಸುವುದಕ್ಕೆ ಬಂದಿದ್ವಿ.

    ಎಲ್ಲಾ ಮರಳಿನಲ್ಲೂ ಮಿಕ್ಸಿಂಗ್ ಇದ್ದೇ ಇರತ್ತದೆ. ಆದರೆ ಮಿಕ್ಸಿಂಗ್ ಪ್ರಮಾಣ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತ್ತದೆ. ಒಂದು ಲಾರಿ ಮರಳಿಗೆ ಒಂದು ಲಾರಿ ಸ್ಲಾಗ್ ಹಾಕಿ ಮಿಕ್ಸ್ ಮಾಡಿದ ಮರಳನ್ನ ಬಳಕೆ ಮಾಡೋದು ಡೇಂಜರಸ್ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಪೊಲೀಸ್ ಇಲಾಖೆಯಾಗಲೀ ಅಥವಾ ಕಂದಾಯ ಇಲಾಖೆಯಾಗಲೀ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=vuyy816MtK4