Tag: ಸ್ಟಾರ್ ಆಫ್ ದಿ ವೀಕ್

  • ಅರಿಶಿಣಕುಂಟೆ ಗ್ರಾಮ ಪಂಚಾಯ್ತಿ ಪಿಡಿಓ ಗಂಗರಾಜು ”ಸ್ಟಾರ್ ಆಫ್ ದಿ ವೀಕ್”

    ಅರಿಶಿಣಕುಂಟೆ ಗ್ರಾಮ ಪಂಚಾಯ್ತಿ ಪಿಡಿಓ ಗಂಗರಾಜು ”ಸ್ಟಾರ್ ಆಫ್ ದಿ ವೀಕ್”

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆದಿತ್ತು. ಈ ವೇಳೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ ನಾಗರಾಜು ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಿಡಿಓಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪಿಡಿಒಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಸ್ಟಾರ್ ಆಫ್ ದಿ ವೀಕ್” ಎಂಬ ಬಿರುದನ್ನು ನೀಡಿ ಗೌರವಿಸಲಾಗುವುದೆಂದು ಘೋಷಿಸಿದರು.

    ಇಂದು 2020ರ ಜನವರಿ ಮೊದಲ ವಾರದ “ಸ್ಟಾರ್ ಆಫ್ ದಿ ವೀಕ್” ಆಗಿ ನೆಲಮಂಗಲ ತಾಲೂಕಿನ ಅರಿಶಿಣಕುಂಟೆ ಗ್ರಾಮ ಪಂಚಾಯ್ತಿ ಪಿಡಿಒ ಗಂಗರಾಜು ಆಯ್ಕೆಯಾಗಿದ್ದು, ಸಭೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಿಡಿಒ ಗಂಗರಾಜು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಪಂಚಾಯ್ತಿ ಗೌರವಾನ್ವಿತ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ ಹಾಗೂ ಸಿಬ್ಬಂದಿ ಸಹಕಾರದಿಂದ ಉತ್ತಮ ಗುಣಮಟ್ಟದ ಕೆಲಸವಾಗಿದೆ. ಸಾರ್ವಜನಿಕರ ಪ್ರಶಂಸೆ ಕೂಡ ಈ ಪ್ರಶಸ್ತಿ ಪಡೆಯಲು ಸಹಕಾರವಾಗಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಈ ಪ್ರಶಸ್ತಿ ಉತ್ತೇಜನವಾಗಿದೆ. ಹೀಗಾಗಿ ನನ್ನ ಎಲ್ಲಾ ಅಧಿಕಾರಿ ವರ್ಗದವರಿಗೆ ನಾನು ಆಭಾರಿಯಾಗಿರುವೆ ಎಂದು ಸಂತಸ ಹಂಚಿಕೊಂಡರು.

    ಈ ಪ್ರಶಸ್ತಿ ವಿತರಣೆ ವೇಳೆ ಜಿ.ಪಂ. ಉಪ ಕಾರ್ಯದರ್ಶಿ ಕರಿಯಪ್ಪ, ಮುಖ ಯೋಜನಾಧಿಕಾರಿ ವಿನುತಾರಾಣಿ, ಯೋಜನಾ ನಿರ್ದೇಶಕ ಶಿವರುದ್ರಪ್ಪ ಹಾಗೂ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.