Tag: ಸ್ಕೇಟಿಂಗ್

  • 5ರ ಪೋರನಿಂದ ಏಷಿಯನ್ ಬುಕ್ ಆಫ್ ರೆಕಾರ್ಡ್

    5ರ ಪೋರನಿಂದ ಏಷಿಯನ್ ಬುಕ್ ಆಫ್ ರೆಕಾರ್ಡ್

    ಕಾರವಾರ: ಐದು ವರ್ಷದ ಪೋರನೊಬ್ಬ ಮರದ ಕಾಲುಗಳನ್ನು ಕಟ್ಟಿಕೊಂಡು ನಡೆಯುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಉದ್ಯೋಗಿ ಸುಮಂತ್ ಹೆಬಲೇಕರ್ ಪುತ್ರ ಶ್ಯಾಮ್ ದಾಖಲೆ ಬರೆದ ಪೋರ. ಕಳೆದ ನಾಲ್ಕು ವರ್ಷಗಳಿಂದ ಕೈಗಾ ರೂರಲ್ ಸ್ಕೇಟಿಂಗ್ ಕ್ಲಬ್‍ ನ ತರಬೇತುದಾರ ದೀಪಕ್ ರವರ ಕೈಯಲ್ಲಿ ಪಳಗಿದ್ದಾನೆ. 43 ಇಂಚಿನ ಎತ್ತರ ಹಾಗೂ 72 ಇಂಚಿನ ಎತ್ತರದ ಮರದಕಾಲನ್ನು ಕಟ್ಟಿಕೊಂಡು ಮುಮ್ಮುಖವಾಗಿ 2.8 ಕಿಲೋಮೀಟರ್ 15 ನಿಮಿಷದಲ್ಲಿ ಕ್ರಮಿಸಿ ವಿಶ್ವದಾಖಲೆ ಮಾಡಿದ್ದಾನೆ. ಅಲ್ಲದೇ ಬ್ಯಾಕ್‍ ವರ್ಡ್ ಸ್ಕೇಟಿಂಗ್ ನಲ್ಲಿ ಐದು ನಿಮಿಷದಲ್ಲಿ 650 ಮೀಟರ್ ಕ್ರಮಿಸುವ ಮೂಲಕ ಏಷಿಯನ್ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾನೆ.

    ತನ್ನ ಸಹೋದರಿ ಸ್ಕೇಟಿಂಗ್ ಮಾಡುವುದನ್ನು ನೋಡಿ ತಾನೂ ಕಲಿಯಬೇಕೆಂಬ ಛಲಕ್ಕೆ ಬಿದ್ದ ಶ್ಯಾಮ್, ತಾನು ಒಂದು ವರ್ಷದವನಿರುವಾಗಲೇ ಸ್ಕೇಟಿಂಗ್ ಮಾಡತೊಡಗಿದ. ಸತತ ನಾಲ್ಕು ವರ್ಷದಿಂದ ಕಾಲಿಗೆ ಮರಗಾಲು ಕಟ್ಟಿಕೊಂಡು ನಿರಂತರ ಅಭ್ಯಾಸ ಮಾಡಿ ಇಂದು ವಿಶ್ವದಾಖಲೆ ಮಾಡಿ ತೋರಿಸಿದ್ದಾನೆ.

  • ಸ್ಕೇಟಿಂಗ್ ಆಡುವಾಗ ಹೊಡೆದಾಡಿಕೊಂಡ ಕ್ರೀಡಾಪಟುಗಳು: ವಿಡಿಯೋ ವೈರಲ್

    ಸ್ಕೇಟಿಂಗ್ ಆಡುವಾಗ ಹೊಡೆದಾಡಿಕೊಂಡ ಕ್ರೀಡಾಪಟುಗಳು: ವಿಡಿಯೋ ವೈರಲ್

    ಮಂಗಳೂರು: ಸ್ಕೇಟಿಂಗ್ ಪಟುಗಳಿಬ್ಬರು ಹೊಡೆದಾಡಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

    ನವೆಂಬರ್ 26 ರಂದು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್‍ ಶಿಪ್‍ ನಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಸ್ಕೇಟಿಂಗ್ ರಿಂಕ್ ನಲ್ಲೇ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ.

    ಮಂಗಳೂರಿನ ಹೊಗೈಬೈಲ್ ನಲ್ಲಿರುವ ಫ್ರಾನಿಸ್ಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫ್ಲೈ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯಶಿಪ್ ನಡೆಯುತ್ತಿದ್ದ ವೇಳೆ ಈ ಹೊಡೆದಾಟ ನಡೆದಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದ ಫೈನಲ್ ಪಂದ್ಯ ನಡೆಯುತ್ತಿದ್ದಾಗ ಬೆಂಗಳೂರಿನ ರಾಘವೇಂದ್ರ ಹಾಗೂ ಅಂಕಿತ್ ಎಂಬಿಬ್ಬರು ಸ್ಕೇಟರ್ ಗಳು ಫಿನಿಶ್ ಲೈನ್ ದಾಟುವ ಮೊದಲೇ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದು ಬಿದ್ದರು.

    ಬಿದ್ದ ತಕ್ಷಣ ರಾಘವೇಂದ್ರ ಅಂಕಿತ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಬಳಿಕ ರೆಫ್ರಿಗಳು ಜಗಳವನ್ನು ಬಿಡಿಸಿದ್ದಾರೆ. ಸ್ಕೇಟಿಂಗ್ ಪಟುಗಳ ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಕೇಟಿಂಗ್ ನಲ್ಲೂ ಇಂತಹ ಘಟನೆಗಳು ನಡೆಯುತ್ತಾ? ಈ ಮಟ್ಟಕ್ಕೆ ಸ್ಕೇಟಿಂಗ್ ಬಂದಿದಿಯಾ ಎಂಬ ಚರ್ಚೆ ಆರಂಭಗೊಂಡಿದೆ.

    ಕಳೆದ ವರ್ಷ ಇದೇ ಅಂಕಿತ್ ರಾಘವೇಂದ್ರನ ಮೇಲೆ ಹಲ್ಲೆ ನಡೆಸಿದ್ದು, ಅದಕ್ಕೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಳೆದ ವರ್ಷ ಹಲ್ಲೆ ನಡೆದಾಗ ರಾಜ್ಯ ಸ್ಕೇಟಿಂಗ್ ಅಸೋಶೀಯೇಷನ್ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಈ ಘಟನೆ ಮರುಕಳಿಸಲು ಕಾರಣ ಎಂಬ ಆರೋಪ ಕೇಳಿಬಂದಿದೆ.

    ಈ ಹಲ್ಲೆ ಕುರಿತು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    – ಬಾಗಲಕೋಟೆ ಚಿಣ್ಣರಿಂದ ಪವರ್ ಪ್ಲಾಂಟ್ ಪ್ರಸೆಂಟ್

    ಬೆಳಗಾವಿ\ಬಾಗಲಕೋಟೆ: ಹಲವು ವಿಶ್ವ ದಾಖಲೆಗಳನ್ನು ಮಾಡಿರೋ ಗಡಿನಾಡಿನ ಖ್ಯಾತ ಸ್ಕೇಟಿಂಗ್ ಪಟು ಮಾಸ್ಟರ್ ಅಭಿಷೇಕ್ ನಾವಲೆ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಚಿಣ್ಣರ ಕೈಯಲ್ಲಿ ಅರಳಿದ ಬಗೆ ಬಗೆಯ ವಿಜ್ಞಾನ ಮಾದರಿ, ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಹೀಗೆ ಈತ ಕಾಲಿಗೆ ಚಕ್ರ ಕಟ್ಕೊಂಡು ಓಡೋಕೆ ಶುರು ಮಾಡಿದರೆ ಎಲ್ಲಾ ರೆಕಾರ್ಡ್ ಗಳು ಬ್ರೇಕ್. ಅಂದು ಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಂತ. ಬೆಳಗಾವಿಯ ಮಾಸ್ಟರ್ ಅಭಿಷೇಕ್ ನಾವಲೆ, ಖಾನಾಪುರ ರಸ್ತೆ ಹಾಗೂ ಕೆಎಲ್‍ಇ ಸಂಸ್ಥೆಯ ಸ್ಕೇಟಿಂಗ್ ರಿಂಗ್ ನಲ್ಲಿ 100 ಮೀಟರ್ ಗುರಿಯನ್ನು ಕೇವಲ 12 ಸೆಕೆಂಡ್ ನಲ್ಲಿ ಮುಟ್ಟಿ ಸಾಧನೆ ಮಾಡಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶ್ವದಾಖಲೆಗೆ ಯತ್ನಿಸಿದ್ದಾರೆ. ಈ ದಾಖಲೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಕೋಚ್ ಹಾಗೂ ಇತರರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿದ್ದಾರೆ.

    ಇನ್ನು ಇತ್ತ ಬಾಗಲಕೋಟೆಯ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಟ್ಟ ಮಕ್ಕಳ ಟ್ಯಾಲೆಂಟ್ ಎಕ್ಸ್ ಪೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆಟ ಪಾಠ ಎಂದು ಹಾಯಾಗಿ ದಿನಗಳನ್ನು ಕಲಿತಿದ್ದ ಮಕ್ಕಳು ಹೈಡ್ರೋ ಎಲೆಕ್ಟ್ರೀಕ್ ಪವರ್ ಪ್ಲಾಂಟ್, ಮ್ಯಾನ್ ಆಂಡ್ ರೋಬೋಟ್, ಅಗ್ರೀಕಲ್ಚರ್ ಎಲಿಮೆಂಟ್ಸ್ ಹಲವು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಟ್ಯಾಲೆಂಟ್ ನೋಡಿದ ಜನರು ಬೇಷ್ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಛಲ ಮಾಡೋ ಹುಮ್ಮಸ್ಸಿದ್ದರೆ ಏನನ್ನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.