Tag: ಸೌಲಭ್ಯ

  • ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಹಾಸನ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿಕೊಂಡ ಸೋಂಕಿತರ ಬಳಿ ತೆರಳಿದ ಶಾಸಕ ಬಾಲಕೃಷ್ಣ, ನೀವು ಊರಿಗೆ ಹೋದ ತಕ್ಷಣ ಅಕ್ಕಪಕ್ಕದ ಮನೆಯವರು ಬೇರೆ ರೀತಿ ನಿಮ್ಮನ್ನು ನೋಡಬಹುದು, ಹೀಗಾಗಿ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಕೊರೊನಾ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದಿರುವವರನ್ನು ತಾಲೂಕು ಕೇಂದ್ರದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಬಿಸಿನೀರು, ಮಾಸ್ಕ್ ಸಿಗುತ್ತಿಲ್ಲ. ಕರೆಂಟ್ ಕೂಡ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸೋಂಕಿತರು, ಕ್ವಾರಂಟೈನ್ ಕೇಂದ್ರದಿಂದ ನಮ್ಮನ್ನು ಊರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು.

    ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಲಕೃಷ್ಣ, ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅದನ್ನೆಲ್ಲ ವಿಡಿಯೋ ಮಾಡಿ ವಾಟ್ಸಪ್‍ನಲ್ಲಿ ಹಾಕುತ್ತಾರೆ. ಆರೋಗ್ಯ ಇಲಾಖೆಯವರೇ ಉತ್ತಮ ಸೌಲಭ್ಯ ಕೊಡದೆ ಹಿಂದೆ ಸರಿದರೆ ಹೇಗೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಳಿಹೇಳಿದ್ದಾರೆ. ನಂತರ ಕ್ವಾರಂಟೈನ್‍ನಲ್ಲಿ ಇರುವವರನ್ನು ದಯವಿಟ್ಟು ಅಲ್ಪಸ್ವಲ್ಪ ಲೋಪದೋಷ ಇದ್ದರೆ ಸಹಕರಿಸಿ. ಎಲ್ಲವನ್ನೂ ಸರಿಪಡಿಸಿಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ 6 ಎಲೆಕ್ಟ್ರಿಕಲ್ ಗ್ಯಾಸ್ ಗೀಸರ್ ಗಳು ಮತ್ತು ಬಟ್ಟೆ ತೊಳೆಯುವ ವಾಷಿಂಗ್ ಯಂತ್ರವನ್ನು ತರಿಸಿಕೊಡಲು ವ್ಯವಸ್ಥೆ ಮಾಡಿದ್ದೇನೆ. ಬಲ್ಬ್‌ಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ಎಲ್ಲ ವ್ಯವಸ್ಥೆ ಸರಿಯಾಗಲಿದೆ. ಆಸ್ಪತ್ರೆಯಿಂದ ನೀವು ಗುಣಮುಖರಾದ ರಿಪೋರ್ಟ್ ಕೊಟ್ಟು ಸಹಿ ಮಾಡಿಸಿ ಕಳುಹಿಸಿ ಕೊಡುವವರೆಗೂ ಸಹಕರಿಸಿ ಎಂದಿದ್ದಾರೆ. ಜೊತೆಗೆ ಡ್ರೈ ಪ್ರೂಟ್ಸ್‌ ಹಾಗೂ ಬೇಕರಿ ಪದಾರ್ಥಗಳನ್ನು ತರಿಸಿಕೊಟ್ಟು ಧೈರ್ಯ ತುಂಬಿದ್ದಾರೆ.

  • ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ

    ಬೆಂಗಳೂರು: ಕರಾವಳಿಯ ಕಂಬಳ ವೀರ ಶ್ರೀನಿವಾಸ್ ಗೌಡಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವರು, ಉಪರಾಷ್ಟ್ರಪತಿ ಸೇರಿದಂತೆ ಆನೇಕರು ಪ್ರಶಂಸೆಯ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಕಂಬಳ ವೀರನ ಶರವೇಗದ ಓಟ ತಿಳಿದು ಕೇಂದ್ರ ಸಚಿವರು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

    ಓಟಗಾರ ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿದ ಮೂಡು ಬಿದಿರೆಯ ಕಂಬಳ ವೀರನಿಗೆ ಒಲಂಪಿಕ್‍ನಲ್ಲಿ ಭಾಗವಹಿಸಲು ಪೂರ್ವ ತಯಾರಿಯಾಗಿ ಕೋಚಿಂಗ್ ನೀಡುವ ಮಾತುಗಳು ಕೇಳಿ ಬರುತ್ತಿವೆ.

    ಇದರ ಮಧ್ಯದಲ್ಲಿ ವಿಶ್ವ ದಾಖಲೆ ಮಾಡಿರುವ ಕಂಬಳ ವೀರನಿಗೆ ರಾಜ್ಯ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ. ಈ ಹಿನ್ನೆಲೆ ಇಲಾಖೆಯ ಹಿರಿಯ ಅಧಿಕಾರಿಗಳು ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಾರ್ಮಿಕ ಇಲಾಖೆಯ ಹಿರಿಯ ತನಿಖಾಧಿಕಾರಿಗಳಾದ ಮೇರಿ ಹಾಗೂ ವಿರೇಂದ್ರ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೂಡುಬಿದರೆಯ ಮಿಯಾರಿನ ಯುವಕ ಶ್ರೀನಿವಾಸ್ ಗೌಡ ಅವರಿಗೆ ಕಾರ್ಮಿಕ ಇಲಾಖೆ ಸೌಲಭ್ಯ ನೀಡಲು ಮುಂದಾಗಿದೆ ಎಂಬುದನ್ನ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ

    ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ ದೂರವನ್ನು 13.63 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ ಗೌಡ ಮಾಡಿರುವ ಸಾಧನೆ ದೇಶದ ಗಮನ ಸೆಳೆದಿದೆ. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ ದೂರವನ್ನು 9.55 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕ್ರೀಡಾ ಪೋತ್ಸಾಹ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆಯು ಯಾವ ರೀತಿ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿದೀರಾ? KSRTC ಯಿಂದ 1,200 ಹೆಚ್ಚುವರಿ ಬಸ್

    ಗಣೇಶ ಹಬ್ಬಕ್ಕೆ ಊರಿಗೆ ಹೋಗ್ತಿದೀರಾ? KSRTC ಯಿಂದ 1,200 ಹೆಚ್ಚುವರಿ ಬಸ್

    ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರಿಗೆ ಅನುಕೂಲವಾಗುಂತೆ 1,200 ಬಸ್‍ಗಳ ಹೆಚ್ಚುವರಿ ಸೇವೆ ನೀಡಲು ಮುಂದಾಗಿದೆ.

    ಪ್ರಮುಖವಾಗಿ ನಗರದಿಂದ ದೂರದ ಊರುಗಳಿಗೆ ಸಂಚರಿಸುವವರಿಗೆ ಹೆಚ್ಚುವರಿ ಬಸ್‍ಗಳ ಸೇವೆಯನ್ನು ಸೆ.11 ಹಾಗೂ 12 ರಂದು ನೀಡುತ್ತಿದೆ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಗೂ ವಿಶೇಷ ಸೇವೆ ಲಭ್ಯವಾಗಲಿದೆ. ಪ್ರಮುಖವಾಗಿ ನಗರದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮಾರ್ಗಗಳಿಗೆ ಬಸ್ ಸೇವೆ ಕಲ್ಪಿಸಲಾಗಿದೆ.

    ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಕಡೆ ಅಂದರೆ ಮಧುರೈ, ಚೆನ್ನೈ, ತಿರುಪತಿ, ವಿಜಯವಾಡ, ಹೈದರಾಬಾದ್, ಕೊಯಮತ್ತೂರ್ ಸೇರಿದಂತೆ ಹಲವು ನಗರಗಳಿಗೆ ಶಾಂತಿನಗರ ಡಿಪೊ 2 ಮತ್ತು 3ರ ಬಸ್ ನಿಲ್ದಾಣದಿಂದ ಐಶಾರಾಮಿ ಬಸ್ ಸೇವೆಯನ್ನು ಏರ್ಪಡಿಸಲಾಗಿದೆ.

    ಬೇಡಿಕೆಗೆ ಅನುಗುಣವಾಗಿ ನಗರ ಪ್ರಮುಖ ಸ್ಥಳಗಳಾದ ವಿಜಯನಗರ, ಬನಶಂಕರಿ, ಜಾಲಹಳ್ಳಿ ಕ್ರಾಸ್, ಬಸವೇಶ್ವರ ನಿಲ್ದಾಣ, ಜಯನಗರ 4ನೇ ಬ್ಲಾಕ್, ಕೆಂಗೇರಿ ಉಪನಗರ ಬಸ್ ನಿಲ್ದಾಣಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಾಜ್ಯದ ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕುಂದಾಪುರ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಿಗೂ ಬಸ್ ಸೇವೆ ಲಭ್ಯವಿದೆ. ಬಸ್ ಟಿಕೆಟ್ ಮುಂಗಡ ಬುಕ್ ಮಾಡಲು ಕೂಡ ಅವಕಾಶ ನೀಡಲಾಗಿದ್ದು, ಕೆಎಸ್‌ಆರ್‌ಟಿಸಿ ಸಂಸ್ಥೆಯ ವೆಬ್ ಸೈಟ್ www.ksrtc.in. ಗೆ ಭೇಟಿ ನೀಡಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಚಿಕ್ಕಮಗಳೂರು: ಕೊಡಗು ನಿರಾಶ್ರಿತ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯಗಳು ನೀಡುವಂತೆ ಕಳಸಾದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ನೆಲೆ ನಿಲ್ಲೋಕೆ ಒಂದು ಸೂರಿಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸರ್ಕಾರ ಏನೇ ಆಶ್ವಾಸನೆ, ಭರವಸೆ ನೀಡಿದರೂ ಅವರಿಗೆ ಎಲ್ಲಾ ಸೌಕರ್ಯ ಒದಗಿಸಲು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಕನಿಷ್ಟ ಮಳೆಗಾಲವಂತೂ ಮುಗಿಯಲೇಬೇಕು. ಮಳೆಗಾಲ ಮುಗಿಯೋದು ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ.

    ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್‍ಗೆ ಸೇರಿದ 1800 ಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಚಾರ, ವಿದ್ಯುತ್ ಸೌಲಭ್ಯ, ನೀರಿನ ಸೌಲಭ್ಯ, ಮತ್ತು ಸಾಧಾರಣವಾಗಿ ವಿಕೋಪಕ್ಕೆ ಸಿಲುಕುವಂತಹ ಸ್ಥಳವಲ್ಲ ಅಷ್ಟೇ ಅಲ್ಲದೇ ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಹಾಗಾಗಿ ಆ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೀಡಬೇಕೆಂದು ಕಳಸಾದ ಜನರು  ಒತ್ತಾಯಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿಗೆ ನೀರಿನ ಬಾಟಲ್, ಔಷಧ ಬೇಡ, ಸಂತ್ರಸ್ತರ ಖಾತೆಗೆ ಹಣ ಹಾಕಿ: ಸಾ.ರಾ. ಮಹೇಶ್

    ಕೊಡಗಿಗೆ ನೀರಿನ ಬಾಟಲ್, ಔಷಧ ಬೇಡ, ಸಂತ್ರಸ್ತರ ಖಾತೆಗೆ ಹಣ ಹಾಕಿ: ಸಾ.ರಾ. ಮಹೇಶ್

    ಮಡಿಕೇರಿ: ಕೊಡಗಿನ ಜನರಿಗೆ ಸದ್ಯಕ್ಕೆ ಕುಡಿಯುವ ನೀರಿನ ಬಾಟಲ್, ಊಟ, ಹೊದಿಕೆ, ಔಷಧ ಯಾವುದರ ಅಗತ್ಯವಿಲ್ಲ. ಅವರಿಗೆ ಬೇಕಾದ ಕುಡಿಯುವ ನೀರು, ಊಟ, ಹೊದಿಕೆ, ಔಷಧ ಎಲ್ಲವನ್ನೂ ಜಿಲ್ಲಾಡಳಿತ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.

    ಕೊಡಗಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಭವಿಷ್ಯದಲ್ಲಿ ಮನೆ ಕಟ್ಟಿಕೊಳ್ಳಲು ಹಣದ ಅವಶ್ಯತೆ ಇದೆ. ಹೀಗಾಗಿ ನಿಮ್ಮ ಸಹಾಯ ಹಸ್ತವನ್ನು ಹಣದ ರೂಪದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ಡಿಸಿ ಕಚೇರಿಯಲ್ಲಿ ಯಾರೆಲ್ಲ ಮನೆ ಕಳೆದುಕೊಂಡಿದ್ದಾರೆ ಅವರ ವಿವರ ಸಿಗುತ್ತದೆ. ಆ ವಿವರ ನೋಡಿ ನೀವೇ ಖುದ್ದಾಗಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿ ಕೊಳ್ಳುವುದಕ್ಕೆ ಸಹಾಯ ಮಾಡಿ ಎಂದು ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.

    ನಿನ್ನೆಯಿಂದ ಕಾರ್ಯಾಚರಣೆ ಬಿಗಿಯಾಗಿದ್ದು, ಈಗಾಗಲೇ 3,150 ನಿರಾಶ್ರಿತರನ್ನು ಸರ್ಕಾರ ರಕ್ಷಣೆ ಮಾಡಿದೆ. 450 ರಿಂದ 500 ಜನರು ಇನ್ನೂ ಸಂಕಷ್ಟದಲ್ಲಿದ್ದು ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜೀರೋ ಟ್ರಾಫಿಕ್ ನಲ್ಲಿ ಸೇನಾ ಪಡೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 4 ಸೇನಾ ಪಡೆ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು ಅದರೊಂದಿಗೆ ವಾಯುಪಡೆ, ನೌಕಾಪಡೆ, ಪೊಲೀಸ್ ಇಲಾಖೆ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ. 31 ಆಹಾರ ಕೇಂದ್ರಗಳಿವೆ ಇದರಿಂದಾಗಿ ಸ್ವಲ್ಪ ಮಟ್ಟಿಗೆ ಜನರ ಆತಂಕ ದೂರವಾಗಿದೆ.

    ಮುಖ್ಯಮಂತ್ರಿಗಳು ಬೆಳಗ್ಗೆ 6.45 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಡಗಿನ ಪರಿಸ್ಥಿತಿಗಳೆಲ್ಲವನ್ನೂ ತಿಳಿದುಕೊಂಡಿದ್ದಾರೆ. ಸಿಎಂ ಇಂದು ಮಧ್ಯಾಹ್ನ ಕೊಡಗಿಗೆ ಭೇಟಿ ನೀಡಿ ಅನಾಹುತ ನಡೆದಂತಹ ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಪರಿಹಾರದ ಕ್ರಮಗಳು ಏನಾಗಬೇಕು ಎಂಬುದರ ಕುರಿತು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ.

    ಹೆಲಿಕಾಪ್ಟರ್ ಕಾರ್ಯಾಚರಣೆ ಬಗ್ಗೆ ಕುರಿತು ಮಾತನಾಡಿದ ಸಾ ರಾ ಮಹೇಶ್ ಅವರು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಅವರೊಂದಿಗೆ ಮಾತನಾಡಿ ಅಲ್ಲಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಹವಮಾನ ಬದಲಾವಣೆ ಸರಿಯಾದರೆ ನಿರಾಶ್ರಿತರನ್ನು ಹೆಲಿಕಾಪ್ಟರ್ ಮೂಲಕವೇ ರಕ್ಷಿಸಲು ಪ್ರಯತ್ನಿಸುತ್ತೇವೆ. ಸದ್ಯಕ್ಕೆ ಸೇನಾ ಪಡೆಯಿಂದ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv