Tag: ಸೌಮ್ಯರೆಡ್ಡಿ

  • ಪೌರಕಾರ್ಮಿಕರಂತೆ ಶಾಸಕಿ ಸೌಮ್ಯಾ ರೆಡ್ಡಿಯಿಂದ ಕಸ ಕ್ಲೀನ್!

    ಪೌರಕಾರ್ಮಿಕರಂತೆ ಶಾಸಕಿ ಸೌಮ್ಯಾ ರೆಡ್ಡಿಯಿಂದ ಕಸ ಕ್ಲೀನ್!

    ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಜಯನಗರ ಶಾಸಕಿ ಸೌಮ್ಯರೆಡ್ಡಿಯವರು ಸ್ವತಃ ತಾವೇ ಸ್ವಚ್ಛ ಮಾಡುವ ಮೂಲಕ `ಸ್ವಚ್ಛ ಜಯನಗರ’ದ ಯೋಜನೆಗೆ ಚಾಲನೆ ನೀಡಿದ್ದಾರೆ.

    ಜಯನಗರದ ಬೈರಸಂದ್ರ ವಾರ್ಡ್ ನ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಪೌರಕಾರ್ಮಿಕರಂತೆ ಕಸ ಕ್ಲೀನ್ ಮಾಡಿ, ಪಾದಚಾರಿ ರಸ್ತೆ ಮೇಲೆ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.

    ಶಾಸಕಿಯಾದ ಮರು ದಿನದಂದಲೇ ಜನರಿಗೆ ಹತ್ತಿರವಾಗುತ್ತಿರುವ ಸೌಮ್ಯರೆಡ್ಡಿಯವರು ಚುನಾವಣಾ ಪ್ರಚಾರದ ವೇಳೆ ನೀಡಿದ್ದ `ಸ್ವಚ್ಛ ಜಯನಗರ’ ಯೋಜನೆಗೆ ಇಂದು ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು `ಸ್ವಚ್ಛ ಜಯನಗಕ್ಕೆ’ ಸಾರ್ವಜನಿಕರೆಲ್ಲರೂ ಸಹಕರಿಸಬೇಕು. ತಮ್ಮ ಮನೆಯಲ್ಲಿಯೇ ಕಸವನ್ನು ವಿಂಗಡನೆ ಮಾಡಿ ಪೌರಕಾರ್ಮಿಕರಿಗೆ ನೀಡಬೇಕು ಎಂದು ಮನವಿ ಮಾಡಿದರು. ಜಯನಗದ ಅಭಿವೃದ್ಧಿಗೆ ಬೇಕಾಗುವ ಯಾವುದೇ ಸಲಹೆ-ಸೂಚನೆಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದು ಹೇಳಿದರು.

    ಜಯನಗರದ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಖುದ್ದು ನನ್ನ ದೂರವಾಣಿಗೆ ಕರೆ ಮಾಡಬಹುದು. ಇಲ್ಲವೇ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿ ಎಂದು ನಾಗರೀಕರಲ್ಲಿ ಸೌಮ್ಯಾ ರೆಡ್ಡಿ ಮನವಿ ಮಾಡಿಕೊಂಡರು. ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಫ್ಲೆಕ್ಸ್ ತೆರವು ಮಾಡಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ಅಪ್ಪನಿಗಾಗಿ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ ಸೌಮ್ಯಾ ರೆಡ್ಡಿ!

    ಅಪ್ಪನಿಗಾಗಿ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ ಸೌಮ್ಯಾ ರೆಡ್ಡಿ!

    ಬೆಂಗಳೂರು: ಜಯನಗರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಶಾಸಕಿ ಸೌಮ್ಯಾರೆಡ್ಡಿಯವರು ತಂದೆಯ ಆಗಮನಕ್ಕಾಗಿ 40 ನಿಮಿಷ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಸ್ಪೀಕರ್ ಕಚೇರಿಯಲ್ಲಿ ನೂತನ ಶಾಸಕಿ ಸೌಮ್ಯಾರೆಡ್ಡಿಯವರ ಪ್ರಮಾಣ ವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸೌಮ್ಯರೆಡ್ಡಿಯವರು ತಮ್ಮ ತಾಯಿ ಹಾಗೂ ತಮ್ಮನ ಜೊತೆ ಕಚೇರಿಗೆ ಆಗಮಿಸಿದ್ದರು. ಇನ್ನೆನೂ ಕಾರ್ಯಕ್ರಮ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಸೌಮ್ಯಾರೆಡ್ಡಿಯವರು ನಮ್ಮ ತಂದೆ ಬರುವವರೆಗೂ ಸ್ವಲ್ಪ ಹೊತ್ತು ಕಾಯುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿಮಾಡಿಕೊಂಡರು. ಸೌಮ್ಯಾರೆಡ್ಡಿಯವರ ಪಿತೃಪ್ರೇಮವನ್ನು ಕಂಡು ಸ್ಪೀಕರ್ ಕೂಡ ರಾಮಲಿಂಗರೆಡ್ಡಿಯವರಿಗಾಗಿ ಕಾದು ಕುಳಿತರು.

    ಸುಮಾರು 40 ನಿಮಿಷಗಳ ಕಾಲ ಕಾದರೂ ರಾಮಲಿಂಗರೆಡ್ಡಿಯವರು ಆಗಮಿಸಲಿಲ್ಲ. ಕೊನೆಗೆ ತಾಯಿ ಮತ್ತು ಸಹೋದರ ಸಮ್ಮುಖದಲ್ಲಿ ಭಗವಂತ ಹಾಗೂ ಸತ್ಯ ನಿಷ್ಠೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಂತರ ಮಾತನಾಡಿದ ಸೌಮ್ಯರೆಡ್ಡಿ ಜಯನಗರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದು ಹೇಳಿದರು.