Tag: ಸೌಮಿತ್ರ ಚಟರ್ಜಿ

  • ಹಿರಿಯ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

    ಹಿರಿಯ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

    ಕೋಲ್ಕತ್ತಾ: ಬೆಂಗಾಳಿ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು ಇಂದು ವಿಧಿವಶರಾಗಿದ್ದಾರೆ.

    ಕಳೆದ ಒಂದು ತಿಂಗಳಿಂದ ಕೋಲ್ಕತ್ತಾದ ಬೆಲ್ಲೆವ್ಯೂ ನರ್ಸಿಂಗ್ ಹೋಮ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೌಮಿತ್ರ ಚಟರ್ಜಿ, ಇಂದು ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್ 6ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಬಳಿಕ ಗುಣಮುಖರಾಗಿದ್ದರು. ನೆಗೆಟಿವ್ ವರದಿ ಬಂದ ಬಳಿಕ ಅವರನ್ನು ಐಟಿಯುನಲ್ಲಿರಿಸಿ ಚಿಕಿತ್ಸೆ ನಿಡಲಾಗುತ್ತಿತ್ತು.

    ತಜ್ಞ ವೈದ್ಯರ ತಂಡ ಸೌಮಿತ್ರ ಅವರಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಿತ್ತು. ಕೊರೊನಾ ವೈರಸ್ ಪರಿಣಾಮದಿಂದಾಗಿ ಅವರಿಗೆ ದ್ವಿತೀಯ ಹಂತದ ಸೋಂಕುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೊರೊನಾದಿಂದ ಗುಣಮುಖರಾದರೂ ಚೇತರಿಸಿಕೊಳ್ಳಲಿಲ್ಲ.

    ಅವರ ಸಾವಿನ ಕುರಿತು ನರ್ಸಿಂಗ್ ಹೋಮ್ ಅಧೀಕೃತ ಪ್ರಕಟಣೆ ಹೊರಡಿಸಿದ್ದು, ಭಾರವಾದ ಹೃದಯದಿಂದ ಇದನ್ನು ಘೋಷಿಸುತ್ತಿದ್ದೇವೆ. ಸೌಮಿತ್ರ ಚಟ್ಟೋಪಾಧ್ಯಾಯ ಅವರು ಮಧ್ಯಾಹ್ನ 12.15ಕ್ಕೆ ಬೆಲ್ಲೆವ್ಯೂ ಕ್ಲಿನಿಕ್‍ನಲ್ಲಿ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ ಎಂದು ಆಸ್ಪತ್ರೆ ತಿಳಿಸಿದೆ.

    ಆಸ್ಪತ್ರೆ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ಅಕ್ಟೋಬರ್ 28ರಂದು ನಾವು ದ್ವಿತೀಯ ಹಂತದ ಸೋಂಕು ಹಾಗೂ ಅದರ ಪರಿಣಾಮಗಳ ವಿರುದ್ಧ ಹೋರಾಡಿದ್ದೆವು. ಸೂಕ್ಷ್ಮತೆ ಆಧರಿಸಿ ಎಲ್ಲ ರೀತಿಯ ಆ್ಯಂಟಿಬಯಾಟಿಕ್ ಹಾಗೂ ಆ್ಯಂಟಿ ಫಂಗಲ್ ಮೆಡಿಸಿನ್‍ಗಳನ್ನು ನೀಡಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂದು ನಂಬಿದ್ದೆವು. ಅಲ್ಲದೆ ಬೇಗ ಗುಣಮುಖರಾಗುತ್ತಾರೆ ಎಂದುಕೊಂಡಿದ್ದೆವು. ಆದರೆ ಪೂತ್ರಪಿಂಡದ ಕೆಲಸ ಹಿಂದಕ್ಕೆ ತಳ್ಳಿತು. ಹೀಗಾಗಿ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸೌಮಿತ್ರ ಚಟರ್ಜಿ ಅವರು ಪ್ರಸಿದ್ಧ ಕಲಾವಿದರಾಗಿದ್ದು, ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ 2018ರಲ್ಲಿ ಫ್ರಾನ್ಸ್ ಉನ್ನತ ನಾಗರಿಕ ಗೌರವ ಲೀಜನ್ ಆಫ್ ಆನರ್ ಗೆ ಪಾತ್ರರಾಗಿದ್ದಾರೆ.