Tag: ಸೌದಿ ಆರೇಬಿಯಾ

  • 50 ವರ್ಷಗಳಲ್ಲಿ ಫಸ್ಟ್ ಟೈಂ – ಮುಸ್ಲಿಮ್ ರಾಷ್ಟ್ರಗಳ ಶೃಂಗ ಸಭೆಗೆ ಭಾರತಕ್ಕೆ ಆಹ್ವಾನ

    50 ವರ್ಷಗಳಲ್ಲಿ ಫಸ್ಟ್ ಟೈಂ – ಮುಸ್ಲಿಮ್ ರಾಷ್ಟ್ರಗಳ ಶೃಂಗ ಸಭೆಗೆ ಭಾರತಕ್ಕೆ ಆಹ್ವಾನ

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಸ್ಲಿಮ್ ರಾಷ್ಟ್ರಗಳ ವಾರ್ಷಿಕ ಶೃಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪಾಲ್ಗೊಳ್ಳುತ್ತಿದೆ. ಇಸ್ಲಾಮಿಕ್ ಸಹಕಾರ ಸಂಘ(ಒಐಸಿ) ಸ್ಥಾಪನೆಯಾಗಿ 50 ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರೊಬ್ಬರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಮಾರ್ಚ್ 1 ರಂದು ಅಬುಧಾಬಿಯಲ್ಲಿ ಒಐಸಿಯ ವಿದೇಶಾಂಗ ಸಚಿವರ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

     

    ಪುಲ್ವಾಮಾ ಘಟನೆಗೂ ನಡೆಯುವ ಒಂದು ತಿಂಗಳು ಮೊದಲೇ ಈ ಆಹ್ವಾನ ಒಐಸಿಯಿಂದ ಭಾರತಕ್ಕೆ ಬಂದಿತ್ತು. ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಯಾದ್ ಸ್ವುಷ್ಮಾ ಸ್ವರಾಜ್ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದರು. ಈ ಆಹ್ವಾನವನ್ನು ಭಾರತ ಸಂತೋಷದಿಂದ ಸ್ವೀಕರಿಸಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಭಾರತ ಈ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ್ರ ಭಾಗಿಯಾಗಲಿದೆ. ಸದಸ್ಯರಾಗದ ಕಾರಣ ಒಐಸಿಯ ಅಧಿಕೃತ ಹೇಳಿಕೆಯಲ್ಲಿ ಭಾರತ ಭಾಗಿಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

    ಕಾಶ್ಮೀರ ವಿಚಾರದಲ್ಲಿ ಒಐಸಿ ಪಾಕಿಸ್ತಾನದ ಪರವಿದೆ. 2018ರಲ್ಲಿ ವಿಶ್ವಸಂಸ್ಥೆಯಲ್ಲಿ ಒಐಸಿ ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಕಾಶ್ಮೀರಿ ನಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಒಐಸಿ ಆರೋಪಿಸಿತ್ತು. ಈ ಆರೋಪವನ್ನು ಭಾರತ ತಳ್ಳಿ ಹಾಕಿ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ವಿಚಾರದಲ್ಲಿ ಯಾರೂ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಹೇಳಿ ತಿರುಗೇಟು ನೀಡಿತ್ತು.

    ಸುಷ್ಮಾ ಸ್ವರಾಜ್ ಅವರು ತಮ್ಮ ಭಾಷಣದಲ್ಲಿ ಪಾಕಿಸ್ತಾನ ಹೇಗೆ ಉಗ್ರರಿಗೆ ಆಶ್ರಯ ನೀಡುತ್ತಿದೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿ, ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡುವ ಸಾಧ್ಯತೆ ಇದೆ.

    1969 ರಲ್ಲಿ ಇಸ್ಲಾಮಿಕ್ ಸಹಕಾರ ಸಂಘ ಆರಂಭಗೊಂಡಿದ್ದು ಸೌದಿ ಆರೇಬಿಯಾದ ಜೆಡ್ಡಾದಲ್ಲಿ ಮುಖ್ಯ ಕಚೇರಿಯಿದೆ. ಒಟ್ಟು 57 ರಾಷ್ಟ್ರಗಳು ಈ ಸಂಘಟನೆಯ ಸದಸ್ಯರಾಗಿವೆ. ವಿಶ್ವ ಸಂಸ್ಥೆಯ ಬಳಿಕ ಎರಡನೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಸಂಘಟನೆ ಇದಾಗಿದೆ.

    ಮುಸ್ಲಿಮ್ ಸಮುದಾಯವನ್ನು ಹೆಚ್ಚಿರುವ ದೇಶಗಳಿಗೆ ಮಾತ್ರ ಈ ಸಂಘಟನೆಯ ಸದಸ್ಯ ಸ್ಥಾನವನ್ನು ನೀಡಲಾಗುತ್ತದೆ. ರಷ್ಯಾ, ಥೈಲ್ಯಾಂಡ್ ಸೇರಿದಂತೆ ಕೆಲವೊಂದು ರಾಷ್ಟ್ರಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ. ಕಳೆದ ವರ್ಷ ನಡೆದ ಶೃಂಗದಲ್ಲಿ ಬಾಂಗ್ಲಾದೇಶ ಭಾರತವನ್ನು ವೀಕ್ಷಕರನ್ನಾಗಿ ಮಾಡಬೇಕು ಎನ್ನುವ ಪ್ರಸ್ತಾಪವನ್ನು ಇಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ಪಾಕಿಸ್ತಾನ ವಿರೋಧಿಸಿತ್ತು.

    ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಬಾಂಗ್ಲಾದೇಶ ಅಲ್ಲದೇ ಒಐಸಿಯ ಹಲವು ಮುಸ್ಲಿಂ ರಾಷ್ಟ್ರಗಳ ಜೊತೆಗಿನ ಭಾರತದ ಸಂಬಂಧ ವೃದ್ಧಿಸಿದೆ. ಯುಎಇ, ಸೌದಿ ಆರೇಬಿಯಾ ಜೊತೆಗಿನ ವ್ಯಾಪಾರ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ. ಗ್ಯಾಸ್ ನಲ್ಲಿ ಶ್ರೀಮಂತವಾಗಿರುವ ಕತಾರ್ ಜೊತೆಗಿನ ವ್ಯವಹಾರ ವೃದ್ಧಿಸಿದೆ. ವಿಶ್ವಸಂಸ್ಥೆಯ ಭದ್ರತಾ  ಸಮಿತಿಯಲ್ಲಿ ಸಿಆರ್ ಪಿಎಫ್ ಯೋಧರ ಹತ್ಯೆಯನ್ನು ಖಂಡಿಸಿ ಪಾಕ್ ವಿರುದ್ಧ ನಿರ್ಣಯ ಕೈಗೊಳ್ಳುವಲ್ಲಿ ಕುವೈತ್ ಬಹಳ ಮುಖ್ಯ ಪಾತ್ರವಹಿಸಿತ್ತು. ತೈಲ ರಾಷ್ಟ್ರ ಇರಾನ್ ವ್ಯವಹಾರದಲ್ಲಿ ಪಾಲುದಾರನಾಗಿದೆ. ಹೀಗಾಗಿ ಹಲವು ಮುಸ್ಲಿಂ ರಾಷ್ಟ್ರಗಳು ಭಾರತವನ್ನು ಆಹ್ವಾನಿಸಬೇಕೆಂಬ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಒಐಸಿ ಮೊದಲ ಬಾರಿಗೆ ಭಾರತಕ್ಕೆ ಆಹ್ವಾನ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    – ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ
    – ಪುಲ್ವಾಮಾ ದಾಳಿ ಬಗ್ಗೆ ಮಾತಿಲ್ಲ

    ನವದೆಹಲಿ: ಉಗ್ರವಾದದ ವಿರುದ್ಧದ ಭಾರತದ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಸೌದಿ ಅರೇಬಿಯಾ ತಿಳಿಸಿದೆ.

    ಪ್ರಧಾನಿ ಮೋದಿ ಮತ್ತು ಸೌದಿ ಯುವರಾಜ ಮೊಹ್ಮದ್ ಬಿನ್ ಸುಲ್ತಾನ್ ಮಾತುಕತೆಯ ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೌದಿ ಯುವರಾಜ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ನೆರೆ ದೇಶಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲೇ ಭಾರತದ ಜೊತೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದಾಗಿ ಘೋಷಣೆ ಮಾಡಿದರು. ಆದರೆ ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿ ಕುರಿತಂತೆ ಮಾತನ್ನು ಆಡಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಮಾತನಾಡುವ ವೇಳೆ ಉಗ್ರರ ದಮನಕ್ಕೆ ಪಾಕ್ ಸಾಕಷ್ಟು ಕ್ರಮ ಕೈಗೊಂಡಿದೆ ಎಂದಿದ್ದರು.

    ಇತ್ತ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಸೌದಿ ಭಾರತದಲ್ಲಿ 100 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಪ್ರಮುಖವಾಗಿ ಇಂಧನ, ಸಂಸ್ಕರಣೆ ಮತ್ತು ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡಲಿದೆ. ಅಲ್ಲದೇ ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ವೇಳೆ 2014 ರಿಂದ ಮೋದಿ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರಿಸಲು ಕೈಗೊಂಡ ಕ್ರಮಗಳ ಬ್ಗಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದ ಸೌದಿ ಯುವರಾಜರನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಾಗತಿಸಿದ್ದರು. ಮೋದಿ ಅವರ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದೆ. ಅಲ್ಲದೇ ಸೌದಿ ಯುವರಾಜ ಪಾಕ್‍ನಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ಬದಲಿಸುವಂತೆ ಮಾಡಲಿ ಎಂದು ಸವಾಲು ಎಸೆದಿದೆ. ಪಾಕಿಸ್ತಾನಕ್ಕೆ ನೂರಾರು ಕೋಟಿ ನೆರವು ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿಯವರು ಈ ರೀತಿ ಮಾಡಿದ್ದು ಸರೀನಾ? ಇದು ಹುತಾತ್ಮ ಯೋಧರು ಮತ್ತು ಕೋಟಿ ಕೋಟಿ ಭಾರತೀಯರ ಭಾವನೆಗಳಿಗೆ ಪ್ರಧಾನಿ ಮೋದಿ ಮಾಡುತ್ತಿರುವ ಅವಮಾನ ಎಂದು ಟೀಕಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv