Tag: ಸೌದಿ ಅರೆಬಿಯಾ

  • ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಲಂಡನ್‌/ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ತೈಲ ಉತ್ಪಾದನೆ ಮಾಡುವ ಒಪೆಕ್‌(OPEC) ದೇಶಗಳು ಕಚ್ಚಾ ತೈಲ (Crude Oil) ಉತ್ಪಾದನೆಯನ್ನು ಕಡಿಮೆ ಮಾಡುವ ಶಾಕಿಂಗ್‌ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ ಭಾರೀ ಏರಿಕೆಯಾಗಿದೆ.

    ಸೋಮವಾರ ಒಂದು ಬ್ಯಾರೆಲ್‌ ಕಚ್ಚಾ ಬ್ರೆಂಟ್‌ ಕಚ್ಚಾ ತೈಲ ದರ ಶೇ.5 ರಷ್ಟು ಏರಿಕೆಯಾಗಿದ್ದು ಈಗ 84 ಡಾಲರ್‌ಗೆ (ಅಂದಾಜು 6,900 ರೂ.) ಏರಿಕೆಯಾಗಿದೆ. 2023ರ ಕೊನೆಗೆ ಇದು 90-95 ಡಾಲರ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಭಾನುವಾರ ಒಪೆಕ್‌ ದೇಶಗಳು 1.16 ದಶಲಕ್ಷ ಬ್ಯಾರೆಲ್‌ ಪರ್‌ ಡೇ(bpd) ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವು ಶಾಕಿಂಗ್‌ ನಿರ್ಧಾರವನ್ನು ಪ್ರಕಟಿಸಿದ್ದವು.

    ಕೋವಿಡ್‌ ಆರಂಭದಲ್ಲಿ ಭಾರೀ ಇಳಿಕೆ ಕಂಡಿದ್ದ ಕಚ್ಚಾ ತೈಲದ ಬೆಲೆಗಳು ರಷ್ಯಾ-ಉಕ್ರೇನ್‌ (Russia-Ukraine) ಯುದ್ಧ ಆರಂಭದಲ್ಲಿ ಸಮಯದಲ್ಲಿ  ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಏರಿಕೆಯಾಗಿತ್ತು. ನಂತರ ಸ್ವಲ್ಪ ಇಳಿಕೆಯಾಗಿತ್ತು. ಕಳೆದ ತಿಂಗಳು ಪ್ರತಿ ಬ್ಯಾರೆಲ್‌ ಕಚ್ಚಾ ತೈದ ದರ 70 ಡಾಲರ್‌ಗೆ ಇಳಿಕೆಯಾದ ಬೆನ್ನಲ್ಲೇ ಮಾರುಕಟ್ಟೆಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.  ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದಲ್ಲಿ ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ

    ಕಡಿತ ಯಾವಾಗದಿಂದ?
    ಮೇ ತಿಂಗಳಿನಿಂದ ಆರಂಭವಾಗಿ ಈ ವರ್ಷದ ಕೊನೆಯವರೆಗೂ ಕಡಿತ ಮುಂದುವರಿಯಲಿದೆ. ಸೌದಿ ಅರೇಬಿಯಾ 5 ಲಕ್ಷ ಬಿಪಿಡಿ, ಇರಾಕ್‌ 2 ಲಕ್ಷ ಬಿಪಿಡಿ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡಲಿದೆ. ರಷ್ಯಾ ಈಗಾಗಲೇ 5 ಲಕ್ಷ ಬಿಪಿಡಿ ತೈಲ ಉತ್ಪಾದನೆ ಕಡಿತ ಮಾಡುವುದಾಗಿ ತಿಳಿಸಿದೆ.

    ಭಾರತದ ಮೇಲೆ ಪರಿಣಾಮ ಏನು?
    ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಹಣದುಬ್ಬರವನ್ನು (Inflation) ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಭಾರತದ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಇತ್ಯಾದಿಗಳ ಬೆಲೆಯನ್ನು ಏರಿಕೆ ಮಾಡದ ಪರಿಣಾಮ ತೈಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿದೆ. ದರವನ್ನು ಪರಿಷ್ಕರಣೆ ಮಾಡದೇ ಇದ್ದರೆ ಕಂಪನಿಗಳ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ತೈಲ ದರ ಏರಿಕೆ ಮಾಡಿದರೆ ಇತ್ತ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ.  ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

  • ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಮುಂಬೈ: ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಸಂಬಂಧ ಸೌದಿ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ  ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಇದನ್ನೂ ಓದಿ: ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

    ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮಥ್ರ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

    ತೈಲ, ಟೆಲಿಕಾಂ, ರಿಟೇಲ್ ಈ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವ ದೇಶದ ಏಕೈಕ ಕಂಪನಿ ರಿಲಯನ್ಸ್ ಎಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ತಿಳಿಸಿದರು.