Tag: ಸೌಂದರ್ಯ ಜಯಮಾಲಾ

  • ಟೈಗರ್‌ ವಿನೋದ್‌ ಪ್ರಭಾಕರ್‌, ಸೌಂದರ್ಯ ಜಯಮಾಲಾ ಭೇಟಿ; ಬಾಲ್ಯದ ದಿನಗಳಿಗೆ ಜಾರಿದ ಅಣ್ಣ-ತಂಗಿ

    ಟೈಗರ್‌ ವಿನೋದ್‌ ಪ್ರಭಾಕರ್‌, ಸೌಂದರ್ಯ ಜಯಮಾಲಾ ಭೇಟಿ; ಬಾಲ್ಯದ ದಿನಗಳಿಗೆ ಜಾರಿದ ಅಣ್ಣ-ತಂಗಿ

    ಚಿತ್ರರಂಗದ ಖ್ಯಾತ ನಟ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ (Vinod Prabhakar) ಅವರು ಸಹೋದರಿ ಸೌಂದರ್ಯ ಜಯಮಾಲಾ (Soundarya Jayamala) ಅವರನ್ನ ಭೇಟಿಯಾಗಿದ್ದಾರೆ. ಟೈಗರ್ ಪ್ರಭಾಕರ್ ಅವರ 2ನೇ ಪತ್ನಿ ಜಯಮಾಲಾ ಮಗಳು ಸೌಂದರ್ಯ ಅವರನ್ನ ಭೇಟಿಯಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

    ಟೈಗರ್ ಪ್ರಭಾಕರ್(Tiger Prabhakar) ಅವರ ಮೊದಲ ಪತ್ನಿಯ ಮಗ ವಿನೋದ್ ಪ್ರಭಾಕರ್ ಆಗಿದ್ದರೆ, ಎರಡನೇ ಪತ್ನಿ ಮಗಳು ಸೌಂದರ್ಯಾ ಜಯಮಾಲಾ ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರಿಗೂ ಪರಸ್ಪರರ ಮೇಲೆ ಅಸಮಾಧಾನ, ಹಗೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮರಿ ಟೈಗರ್ ವಿನೋದ್ ಪ್ರಭಾಕರ್- ಸೌಂದರ್ಯ ಜಯಮಾಲಾ ಇಬ್ಬರು ಚಿತ್ರರಂಗದ ತಾರೆಯರು. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ಣ-ತಂಗಿ. ಆದರೆ ಇಲ್ಲಿವರೆಯೂ ವಿನೋದ್ ಆಗಲಿ, ಸೌಂದರ್ಯ ಆಗಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಒಬ್ಬರನ್ನೊಬ್ಬರ ಭೇಟಿಯಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ ಅಂತೇನಲ್ಲ. ಒಟ್ಟಿಗೆ ಆಡುತ್ತಾ ಬೆಳೆದ ಇವರಿಬ್ಬರು ಬದಲಾದ ಸನ್ನಿವೇಶದಲ್ಲಿ ದೂರ ಉಳಿದಿದ್ದೂ ಬಿಟ್ರೆ, ಅವರ ನಡುವೆ ಗಾಂಧಿನಗರ ಮಾತಾಡಿಕೊಳ್ಳುವ ರೀತಿ ಸಂಬಂಧವೇನು ಅಳಸಿಲ್ಲ. ವಿನೋದ್- ಸೌಂದರ್ಯ ಇಂದಿಗೂ ಎಂದೆಂದಿಗೂ ಅಣ್ಣ ತಂಗಿಯೇ. ಆದ್ರೆ ಅವರಿಬ್ಬರನ್ನು ಅವರ ಅಕ್ಕಪಕ್ಕದವರು ಭೇಟಿ ಮಾಡಲಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ. ಆದ್ರೆ ಸಮಯ-ಸಂದರ್ಭ ಇದೆಲ್ಲಾ ಸಂಬಂಧಗಳನ್ನು ಮತ್ತೆ ಬೆಸೆಯುವಂತೆ ಮಾಡಿದೆ. ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್‌ ಮಾಡಿದ ಕಾಜೋಲ್‌ಗೆ ನೆಟ್ಟಿಗರಿಂದ ತರಾಟೆ

    ಮೊನ್ನೆ ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಆರತಕ್ಷತೆಯಲ್ಲಿ ವಿನೋದ್ ಪ್ರಭಾಕರ್, ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದಾರೆ. ಬಹಳ ವರ್ಷದ ಬಳಿಕ ತಂಗಿ ನೋಡಿದ ಖುಷಿ ವಿನೋದ್ ಅವರದ್ದು, ಅಣ್ಣನನ್ನೂ ನೋಡಿದ ಖುಷಿ ಸೌಂದರ್ಯಗೆ, ಭೇಟಿ ಕ್ಷಣದಲ್ಲಿ ಅಣ್ಣ ತಂಗಿ ಮತ್ತೆ ಬಾಲ್ಯದ ದಿನಗಳಿಗೆ ಜಾರಿದ್ದಾರೆ. ಬಾಲ್ಯದ ಆಟ-ತುಂಟಾಟ ನೆನಪಿಸಿಕೊಂಡು ಒಂದಷ್ಟು ಸಮಯ ಚರ್ಚೆ ನಡೆಸಿದ್ದಾರೆ. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಲ್ಲಿಯೂ ಸೌಂದರ್ಯ ಖುಷಿ ಖುಷಿಯಿಂದ ಕಾಲ ಕಳೆದು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯವಿದೆ. ಅದು ಬಿಟ್ರೆ ಅವ್ರು ದೂರವಾಗಿದ್ದರೆ, ಅವರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತುಗಳು ಸತ್ಯಕ್ಕೆ ದೂರವಾದುದ್ದು.

  • ವಿದೇಶಗಳಿಗಿಂತ ನಮ್ಮೂರೇ ಸಾಕು: ಸೌಂದರ್ಯ ಜಯಮಾಲಾ

    ವಿದೇಶಗಳಿಗಿಂತ ನಮ್ಮೂರೇ ಸಾಕು: ಸೌಂದರ್ಯ ಜಯಮಾಲಾ

    ಬೆಂಗಳೂರು: ವಿದೇಶಕ್ಕೆ ಹೋಗಿ ಬಂದವರೆಂದರೆ ಪ್ರತಿಷ್ಟೆಯ ಪ್ರಶ್ನೆಯಾಗಿತ್ತು. ಆದರೆ ಇದೀಗ ವಿದೇಶಕ್ಕೆ ಹೋಗಿ ಬಂದವರೆಂದರೆ ದೂರ ಉಳಿಯುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಕೊರೊನಾ ಮಾಯೆ. ವಿದೇಶದಲ್ಲಿ ಸಿಲುಕಿದವರ ಸ್ಥಿತಿ ಹೇಗಿತ್ತು, ಯಾವ ರೀತಿಯ ತೊಂದರೆ ಅನುಭವಿಸಿದರು ಎಂದು ಅವರ ಬಾಯಿಂದಾನೇ ಕೇಳಿದರೆ ಗೊತ್ತಾಗುತ್ತದೆ. ವಿದೇಶದಲ್ಲಿ ಪಟ್ಟ ಕಷ್ಟ, ಪಡಿಪಾಟಲು ಹೇಳತೀರದು. ಆ ಸಂದರ್ಭವನ್ನು ಇದೀಗ ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಅವರು ವಿವರಿಸಿದ್ದಾರೆ.

    ಕೊರೊನಾ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ನೂರಾರು ಜನ ಭಾರತೀಯರು ವಿವಿಧ ದೇಶಗಳಲ್ಲಿ ಸಿಲುಕಿದ್ದಾರೆ. ಇವರನ್ನು ತವರಿಗೆ ಕರೆತರಲು ಸರ್ಕಾರ ಸಹ ಸಾಹಸಪಡುತ್ತಿದ್ದು, ಒಂದೇ ಭಾರತ್ ಮಿಷನ್ ಮೂಲಕ ಏರ್‍ಲಿಫ್ಟ್ ಮಾಡಲಾಗುತ್ತಿದೆ. ಆದರೂ ವಿದೇಶಗಳಲ್ಲಿ ಸಿಲುಕಿದವರ ಸ್ಥಿತಿ ಹೇಳತೀರದಾಗಿದೆ. ಇಂಗ್ಲೆಂಡ್‍ನಲ್ಲಿ ಸಿಲುಕಿದ್ದ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಕಳೆದೆರಡು ತಿಂಗಳು ಅನುಭವಿಸಿದ ಯಾತನೆ ನೆನಸಿಕೊಂಡರೆ ಮತ್ತೆ ಯಾವತ್ತೂ ಬೇರೆ ದೇಶಕ್ಕೆ ಹೋಗಬಾರದು. ವಿದೇಶಗಳಿಗಿಂತ ನಮ್ಮೂರೇ ಸಾಕು ಎಂದೆನಿಸಿದೆ ಎಂದು ಸೌಂದರ್ಯ ಜಯಮಾಲಾ ನಿಟ್ಟುಸಿರು ಬಿಟ್ಟಿದ್ದಾರೆ.

    ಇಂಗ್ಲೆಂಡ್‍ನ ವೇಲ್ಸ್ ನ ‘ಸ್ವಾನ್‍ಸೀ ವಿವಿ’ ಯಲ್ಲಿ ಅಂತಿಮ ವರ್ಷದ ಬಿಎಸ್‍ಸಿ(ಬಾಟನಿ) ಆನರ್ಸ್ ವ್ಯಾಸಂಗ ಮಾಡುತ್ತಿದ್ದೆ. ಫ್ರೆಂಡ್ ಜೊತೆ ಅಲ್ಲಿಯೇ ಅಪಾರ್ಟ್‍ಮೆಂಟ್‍ವೊಂದರಲ್ಲಿ ಬಾಡಿಗೆಗೆ ನೆಲೆಸಿದ್ದೆವು.

    ನಿರಾಶ್ರಿತಳಾಗಿ ಉಳಿದುಕೊಂಡಿದ್ದೆ

    ಇತ್ತೀಚೆಗೆ ಕೊರೊನಾದಿಂದಾಗಿ ಇಂಗ್ಲೆಂಡ್‍ನಲ್ಲಿ ಏಕಾಏಕಿ ಲಾಕ್‍ಡೌನ್ ಹೇರಲಾಗಿತ್ತು. ಇದರಿಂದಾಗಿ ಎರಡು ತಿಂಗಳುಗಳ ಕಾಲ ಎಲ್ಲೂ ಹೊರಹೋಗದಂತೆ ಬಂಧಿಯಾದ್ದೆವು, ತುಂಬಾ ಭಯವಾಗಿತ್ತು. ಅಲ್ಲದೆ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆ, ವಿದೇಶಿ ವಿದ್ಯಾರ್ಥಿಗಳು ಹೊರ ಹೋಗದಂತೆ ನಿರ್ಬಂಧ ಹೇರಲಾಯಿತು. ಇದರ ಬೆನ್ನಲ್ಲೇ ನಮ್ಮ ವಿವಿಯ ಇಬ್ಬರು ಪ್ರೊಫೆಸರ್‍ಗಳು ಹಾಗೂ ಒಬ್ಬ ವಿದ್ಯಾರ್ಥಿ ಕೂಡ ಮೃತಪಟ್ಟರು. ಇನ್ನೂ ಭಯದ ವಾತಾವರಣ ನಿರ್ಮಾಣವಾಯಿತು. ಅಲ್ಲದೆ ಇಡೀ ವಿವಿಯನ್ನು ಸೀಲ್‍ಡೌನ್ ಮಾಡಲಾಯಿತು. ಹೀಗಾಗಿ ಮಾರ್ಚ್ 22ರಂದು ದುಬೈ ಮೂಲಕ ಬೆಂಗಳೂರಿಗೆ ಬರುವ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ಅಲ್ಲಿಯೂ ಪ್ರಯಾಣ ನಿರ್ಬಂಧಿಸಲಾಯಿತು. ಇದರಿಂದ ಮತ್ತೆ ಲಂಡನ್‍ಗೆ ಬರಬೇಕಾದ ಪರಿಸ್ಥಿತಿ ಎದುರಾಯಿತು. ಭಾರತಕ್ಕೆ ಹಿಂದಿರುಗುವ ಹಿನ್ನೆಲೆ ಬಾಡಿಗೆ ಮನೆ ಸಹ ಖಾಲಿ ಮಾಡಿದ್ದೆವು. ಹೀಗಾಗಿ ಲಂಡನ್ ವಿಮಾನ ನಿಲ್ದಾಣದಲ್ಲೇ ನಿರಾಶ್ರಿತಳಾಗಿ ಉಳಿಯುವಂತಾಯಿತು ಎಂದು ವಿದೇಶದಲ್ಲಿ ಪಟ್ಟ ಕಷ್ಟವನ್ನು ನೆನಪು ಮಾಡಿಕೊಂಡಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಹೆಚ್ಚು ದಿನ ಇರಲು ಸಾಧ್ಯವಾಗದ ಕಾರಣ, ಕುವೈತ್‍ನ ಸ್ನೇಹಿತೆಯ ಸಹಾಯದಿಂದ ಮತ್ತೆ ಬಾಡಿಗೆ ಮನೆ ಮಾಲೀಕರಿಗೆ ವಿಷಯ ಮುಟ್ಟಿಸಿದೆ. ನಂತರ ಮನೆಗೆ ತೆರಳಿದೆ. ಆದರೆ ಅದಾಗಲೇ ವಿದ್ಯುತ್, ನೀರು, ಇಂಟರ್‍ನೆಟ್, ಫೋನ್ ಸೇರಿದಂತೆ ಎಲ್ಲ ರೀತಿಯ ಸಂಪರ್ಕ ಕಡಿತಗೊಳಿಸಲಾಗಿತ್ತು. ಇರುವುದರಲ್ಲೇ ನೆಮ್ಮದಿ ಕಂಡುಕೊಂಡ ನನಗೆ, ಸ್ನೇಹಿತೆ ಸಹಾಯ ಮಾಡಿದಳು. ಹೀಗೆ ಭಯದಲ್ಲೇ ದಿನದೂಡುತ್ತಿರುವಾಗ ಕೇಂದ್ರ ಸರ್ಕಾರದಿಂದ ಏರ್‍ಲಿಫ್ಟ್ ಸುದ್ದಿ ಬಂತು. ಈ ಹಿಂದೆ ಕೂಡ ಇದೇ ರೀತಿಯ ಸುದ್ದಿಗಳು ಹರಿದಾಡಿದ್ದರಿಂದ ನಾನು ಮತ್ತೆ ಸುಳ್ಳು ಸುದ್ದಿ ಎಂದುಕೊಂಡಿದ್ದೆ. ಆದರೆ ಏರ್ ಇಂಡಿಯಾ ವಿಮಾನ ಸಂಸ್ಥೆಯಿಂದ ಕರೆ ಬಂದಾಗ ಹೋದ ಜೀವ ಬಂದಂತಾಯಿತು. ಅಲ್ಲದೆ ಲಂಡನ್‍ನಿಂದ ಬೆಂಗಳೂರಿಗೆ ಹೊರಟ ಮೊದಲ ವಿಮಾನದಲ್ಲೇ ನನಗೆ ಟಿಕೆಟ್ ಸಹ ಲಭಿಸಿತ್ತು. ಹೀಗಾಗಿ ಖುಷಿ ಇಮ್ಮಡಿಯಾಯಿತು. ನಂತರ ವಿಮಾನ ಏರಿ ಹೇಗೋ ಬೆಂಗಳೂರಿಗೆ ಬಂದಿಳಿದೆ. ಸದ್ಯ ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ಹೇಳಿದ್ದಾರೆ.