Tag: ಸೌಂದರ್ಯವರ್ಧಕ

  • ತುಟಿಯ ಚರ್ಮ ಒಣಗುತ್ತಿದೆಯೇ? ಇಲ್ಲಿದೆ ಪರಿಹಾರ

    ತುಟಿಯ ಚರ್ಮ ಒಣಗುತ್ತಿದೆಯೇ? ಇಲ್ಲಿದೆ ಪರಿಹಾರ

    ಚೆಂದದ ತುಟಿ ಆಕರ್ಷಣೆಯ ಕೇಂದ್ರ ಬಿಂದು. ಬಿರುಕಿಲ್ಲದ ಸುಂದರವಾದ ಹೊಳೆಯುವ ಮೃದುವಾದ ತುಟಿ ಬೇಕು ಎನ್ನುವುದು ಮಹಿಳೆಯರ ಆಸೆ. ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ.

    ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.

    ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್‍ಸ್ಕ್ರೀನ್ ಬಳಕೆಯನ್ನು ಮಾಡುತ್ತಾರೆ. ಆದರೂ ತುಟಿಯ ಚರ್ಮ ಒಣಗುತ್ತದೆ.

    ಒಣಗಿದ ತುಟಿಗೆ ಕಾರಣಗಳೇನು?
    * ನೀರಿನ ಕೊರತೆ : ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ ಒಡೆಯುತ್ತದೆ. ರಕ್ತದ ಕೊರತೆ ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ತುಟಿ ಒಣಗುವುದರಿಂದ ಆರೋಗ್ಯದಲ್ಲಿನ ಏರುಪೇರುಗಳು ಕಾಣಿಸಿಕೊಳ್ಳುತ್ತದೆ. ನೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ತುಟಿ ಒಣಗುವುದರಿಂದ ಗುರುತಿಸಬಹುದಾಗಿದೆ. ಆದಷ್ಟು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

    * ಅತಿಯಾದ ಧೂಮಪಾನ: ತುಟಿಗಳು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಗಾಢವಾದ ಬಣ್ಣಕ್ಕೆ ತಿರುಗಬಹುದು. ಧೂಮಪಾನ, ಯಕೃತ್ತಿನಂತಹ ಸಮಸ್ಯೆ ಉಂಟಾದರೆ ತುಟಿಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ. ಇದ್ದಕ್ಕಿದ್ದಂತೆ ತುಟಿಯ ಬಣ್ಣ ಗಾಢ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

    * ಸೌಂದರ್ಯ ವರ್ಧಕಗಳ ಬಳಕೆ: ತುಟಿಗೆ ಲೇಪಿಸುವ ಬಣ್ಣ, ಲಿಪ್ ಬಾಮ್, ಔಷಧಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೂ ಉಂಟಾಗಬಹುದು. ಇಂತಹ ಅಲರ್ಜಿ ಮಾರಣಾಂತಿಕ ಕಾಯಿಲೆಯೂ ಆಗುವ ಸಾಧ್ಯತೆಗಳಿರುತ್ತವೆ. ಟೂತ್ ಪೇಸ್ಟ್ ಅಲರ್ಜಿಯಿಂದಲೂ ಸಹ ತುಟಿಯಲ್ಲಿ ಅಲರ್ಜಿ ಉಂಟಾಗಬಹುದು. ಆದ್ದರಿಂದ ಬಹುಬೇಗ ವೈದ್ಯರ ಸಲಹೆ ಪಡೆದ ನಿಮ್ಮ ಚರ್ಮಕ್ಕೆ ಅನುಗುಣವಾದ ಕ್ರೀಮ್ ಬಳಸುವುದು ಉತ್ತಮ.

    * ಕಬ್ಬಿಣಾಂಶದ ಕೊರತೆ: ತುಟಿಯ ಸಂದುಗಳಲ್ಲಿ ಸೀಳುವಿಕೆ ಮುಖ್ಯ ಕಾರಣ ಕಬ್ಬಿಣಾಂಶದ ಕೊರತೆ. ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶದ ಕೊರತೆ ಹೆಚ್ಚಾದಾಗ ಇಂತಹ ಸಮಸ್ಯೆಗಳು ಉಂಟಾಗುತ್ತದೆ.

    ತುಟಿಯ ಆರೈಕೆ ಹೀಗಿರಲಿ:
    * ಬೆಳಗ್ಗೆ ಹಲ್ಲು ಉಜ್ಜಿದ ಬಳಿಕ ತುಟಿಗಳನ್ನು ಬ್ರಶ್ ನಿಂದ ಮೃದುವಾಗಿ ಉಜ್ಜಬೇಕು.
    * ವಾರಕ್ಕೊಮ್ಮೆ ತುಟಿಗೆ ನೈಸರ್ಗಿಕವಾಗಿ ತಯಾರಿಸಿದ ಸ್ಕ್ರಬ್ ಲೇಪಿಸಿಕೊಳ್ಳಬೇಕು.
    * ತುಟಿಗೆ ನಿಮ್ಮ ಆರೋಗ್ಯಕ್ಕೆ ಅನುಗುಣವಾದ ಲಿಪ್ ಬಾಮ್ ಬಳಸಿ. (ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ)
    * ವಿಟಮಿನ್ ಎ ಹೇರಳವಾಗಿರುವ ಕ್ಯಾರೆಟ್, ಟೊಮೆಟೋ, ಹಸಿತರಕಾರಿ ಆಹಾರ ಮತ್ತು ಪ್ರತಿನಿತ್ಯ ದೇಹಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇವಿಸಬೇಕು.

    * ಜೇನುತುಪ್ಪ, ಹಾಲಿನಕೆನೆಗಳಂತಹ ನೈಸರ್ಗಿಕ ಉತ್ಪನ್ನಗಳನ್ನು ತುಟಿಗೆ ಹಚ್ಚಬಹುದು. ಅಲೋವೆರಾ ಜೆಲ್ ತುಟಿಗೆ ಹಚ್ಚವುದರಿಂದ ಒಣಗಿ ಬಿರುಕು ಬಿಟ್ಟ ತುಟಿಗಳು ಮೃದುವಾಗುತ್ತದೆ. ಸವತೆಕಾಯಿ ಪೇಸ್ಟ್‍ಮಾಡಿ ತುಟಿಗೆ ಹಚ್ಚುವುದರಿಂದ ಕಪ್ಪಾದ ತುಟಿಯ ಬಣ್ಣ ಬದಲಾಗುತ್ತದೆ. ಕಡಿಮೆ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ತುಟಿಗೆ ಬಳಸಬೇಡಿ.

    * ಮಲಗುವ ಮುನ್ನ ತುಟಿಗೆ ರೋಸ್ ವಾಟರ್ ಹಚ್ಚಬೇಕು.

  • ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಸೌಂದರ್ಯಕ್ಕಾಗಿ ಮಾತ್ರವಲ್ಲ ಆರೋಗ್ಯವರ್ಧನೆಗಾಗಿ ಅರಿಶಿನ ಉಪಯುಕ್ತ

    ಇಂದಿನ ಫ್ಯಾಷನ್ ಯುಗದಲ್ಲಿ ಮಹಿಳೆಯರು ಹೆಚ್ಚಾಗಿ ಸೌಂದರ್ಯದ ಕಾಳಜಿಗಾಗಿ ತಲೆಕೆಡಿಸಿಕೊಳ್ಳುತ್ತಾರೆ. ಇಂದು ತರಾವರಿ ಸೌಂದರ್ಯ ವರ್ಧಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಅವುಗಳು ನೈಸರ್ಗಿಕ ಸೌಂದರ್ಯವರ್ಧಕದ ರಾಣಿಯೆಂದೇ ಕರೆಯುವ ‘ಅರಿಶಿನ’ದ ಜೊತೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಚಲನಚಿತ್ರ ನಟಿಯರೂ ಸೇರಿದಂತೆ ಫ್ಯಾಷನ್ ಪ್ರಿಯ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಮತ್ತು ದೈಹಿಕ ಅರೋಗ್ಯವನ್ನು ಹೆಚ್ಚಿಸಿಕೊಳ್ಳಲು ಅರಿಶಿನ ಉತ್ಪನ್ನವನ್ನು ಬಳಕೆ ಮಾಡುತ್ತಾರೆ.

    ಅರಿಶಿನ ಕೇವಲ ತ್ವಚೆಯನ್ನು ಪೋಷಿಸುವುದಲ್ಲದೇ ಕಣ್ಣುಗಳ ಆರೋಗ್ಯದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನಲ್ಲಿ ಧೂಳು ಸೇರಿಕೊಂಡು ಕಣ್ಣು ಉರಿ ಮತ್ತು ಕಣ್ಣು ಕೆಂಪಗಾಗಿದ್ದರೆ, ಒಂದು ಲೋಟ ನೀರಿಗೆ ಚಿಟಿಕೆ ಅರಿಶಿನ ಬೆರೆಸಿ 10 ನಿಮಿಷ ಪಕ್ಕಕ್ಕಿಡಿ. ಅರಿಶಿನ ಲೋಟದ ತಳಭಾಗದಲ್ಲಿ ಉಳಿದುಕೊಂಡು ನೀರು ತಿಳಿಯಾಗುತ್ತದೆ. ಈ ತಿಳಿನೀರನ್ನು ಕಣ್ಣಿಗೆ 2 ಹನಿ ಹಾಕುವುದರಿಂದ ಅಥವಾ ಈ ನೀರಿನಿಂದ ಕಣ್ಣುಗಳನ್ನೂ ತೊಳೆದುಕೊಳ್ಳುವುದರಿಂದ ಕಣ್ಣು ಉರಿ ಮತ್ತು ಕೆಂಪಗಾಗುವುದು ಕಡಿಮೆಯಾಗುತ್ತದೆ.

    ಅರಿಶಿನದಲ್ಲಿರುವ ಆರೋಗ್ಯವರ್ಧಕ ಅಂಶಗಳೇನು?
    1. ಅರಿಶಿನವು ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿರೋಧಕ ಲಕ್ಷಣವನ್ನು ಹೊಂದಿದೆ.
    2. ಅರಿಶಿನವು ಆಂಟಿಸೆಪ್ಟಿಕ್ ಆಗಿರುವುದರಿಂದ ಗಾಯಗಳನ್ನು ಅತೀ ಬೇಗ ವಾಸಿಮಾಡುತ್ತದೆ.
    3. ಅರಶಿನ ಎಲ್ಲಾ ಕಾಲದಲ್ಲಿಯೂ ಎಲ್ಲಾ ತರಹದ ಚರ್ಮಕ್ಕೂ ಹೊಂದಿಕೆಯಾಗಿ ತ್ವಚೆಯನ್ನು ರಕ್ಷಿಸುವ ಅಂಶವನ್ನು ಹೊಂದಿದೆ.
    4. ಮುಖದಲ್ಲಿನ ಮೊಡವೆ ಮತ್ತು ಇತರೆ ಚರ್ಮ ಸಮಸ್ಯೆಗಳಿಗೂ ರಾಮಬಾಣ.


    5. ಮಹಿಳೆಯರಿಗೆ ಫೇಸ್‍ಪ್ಯಾಕ್ ಮತ್ತು ಬಾಡಿ ಸ್ಕ್ರಬರ್ ಗಳಲ್ಲಿ ಮುಖ್ಯ ಪದಾರ್ಥವಾಗಿದೆ.
    6. ಅರಿಶಿನದೊಂದಿಗೆ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಗುಳ್ಳೆ ನಿವಾರಣೆಯಾಗಿ ಮುಖಕ್ಕೆ ಹೊಳಪು ತಂದುಕೊಂಡುತ್ತದೆ.
    7. ಹಾಲಿನೊಂದಿಗೆ ಅರಿಶಿನ ಪುಡಿ ಬೆರೆಸಿ ಕುಡಿಯುವುದರಿಂದ ಕೆಮ್ಮು, ಕಫ ನಿವಾರಣೆಯಾಗುತ್ತದೆ.
    8. ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್ ಸೊಂಕು ನಿವಾರಣೆಯಾಗುತ್ತದೆ.
    9. ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
    10. ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.
    11. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಅರಿಶಿನ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಿಬ್ಬೊಟ್ಟೆ ನೋವನ್ನು ಶಮನಗೊಳಿಸುತ್ತದೆ.

    ಹೀಗೆ ಹಲವಾರು ವೈದ್ಯಕೀಯ ಗುಣಗಳನ್ನು ಒಳಗೊಂಡಿರುವ ಅರಿಶಿನ ದಿನನಿತ್ಯ ಬಳಕೆಯ ಪ್ರಮುಖ ಪದಾರ್ಥ. ದೇವರ ಪೂಜೆಯಿಂದ ಹಿಡಿದು ಶುಭ ಕಾರ್ಯಗಳು, ಅಡುಗೆ ಮತ್ತು ಸೌಂದರ್ಯದವರೆಗೂ ಅರಿಶಿನ ಬಳಕೆ ಮಾಡದೇ ಇರುವವರೂ ಯಾರು ಇಲ್ಲ. ಬಹಳ ಹಿಂದಿನ ಕಾಲದಿಂದಲೂ ಅರಿಶಿನಕ್ಕೆ ಪ್ರಾಮುಖ್ಯತೆ ಹೆಚ್ಚಿದ್ದು, ‘ಆರೋಗ್ಯಕ್ಕೆ ಅರಿಶಿನ ಮದ್ದು’ ಎಂಬ ಶಿಫಾರಸ್ಸುಗಳು ಇಂದಿನ ಕಾಲದವರೆಗೂ ಉಪಯೋಗದಲ್ಲಿದೆ. ಎಲ್ಲಾದರೂ ಬಿದ್ದು ಗಾಯ ಮಾಡಿಕೊಂಡು ಬಂದ ಮಗುವಿಗೆ ಅಮ್ಮ ಮೊದಲು ಅರಿಶಿನ ಹಚ್ಚು ಎನ್ನುತ್ತಾಳೆ. ಅಂತಹ ಪುಟ್ಟ ಗಾಯಗಳಿಂದ ದೊಡ್ಡ ಕ್ಯಾನ್ಸರ್ ಕಾಯಿಲೆಗಳನ್ನು ನಿವಾರಿಸುವಲ್ಲಿ ಅರಿಶಿನ ಪರಿಣಾಮಕಾರಿ ಮದ್ದು. ದಿನನಿತ್ಯದ ಆಹಾರದಲ್ಲಿಯೂ ಅರಿಶಿನ ಬಳಸುತ್ತಾ ಬಂದರೆ ನಮ್ಮ ಜ್ಞಾಪಕ ಶಕ್ತಿಕೂಡ ಹೆಚ್ಚಾಗುತ್ತದೆ.

    ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವ ಮೂಲಕ, ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ಹೃದಯದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.