Tag: ಸೋಮೇಶ್ವರ

  • ಕನ್ನಡದ ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ

    ಕನ್ನಡದ ಖ್ಯಾತ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ನಿಧನ

    ಮಂಗಳೂರು: ಕನ್ನಡದ ಖ್ಯಾತ ಸಾಹಿತಿ ಹಾಗೂ ಹಿರಿಯ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರ (Amrutha Someshwara) ಅವರು ತಮ್ಮ 89ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

    ಕನ್ನಡ, ತುಳು, ಮಲೆಯಾಳಂ ಮೂರು ಭಾಷೆಗಳಲ್ಲಿ ದೊಡ್ಡ ವಿದ್ವಾಂಸರಾಗಿದ್ದ ಅವರು ಮಹತ್ವದ ಕಥೆಗಾರರಾಗಿದ್ದರು. ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದರು. ಯಕ್ಷಗಾನಕ್ಕಂತೂ ಅವರ ಕೊಡುಗೆ ಅಪಾರ. ಧರ್ಮಸ್ಥಳ ಮೇಳಕ್ಕೆ ಅವರು ಪ್ರತಿ ವರ್ಷ ಹೊಸ ಪ್ರಸಂಗಗಳನ್ನು ಬರೆದು ಕೊಡುತ್ತಿದ್ದರು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿಗೆ ರೌಡಿಶೀಟರ್‌ನಿಂದ ಮುಕ್ತಿ ಕೊಟ್ಟಿದ್ದು ನಮ್ಮ ಸರ್ಕಾರ: ದಿನೇಶ್ ಗುಂಡೂರಾವ್

    ಇವರಿಗೆ ಮಂಗಳೂರು (Mangaluru) ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವಶ್ರೀ ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2016ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ – ಹೆಚ್‌.ಆರ್‌.ರಂಗನಾಥ್‌ಗೆ ಆಹ್ವಾನ

    ಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಅವರನ್ನು ಅಗಲಿದ್ದಾರೆ. ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ – ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ಆರೋಪ

  • ಸೋಮೇಶ್ವರದಲ್ಲಿ ರಕ್ಕಸ ಅಲೆಗಳ ಭೀತಿ – ಉಡುಪಿ, ಕಾರವಾರ, ಕೊಡಗಿನಲ್ಲಿ ಭಾರೀ ಮಳೆ

    ಸೋಮೇಶ್ವರದಲ್ಲಿ ರಕ್ಕಸ ಅಲೆಗಳ ಭೀತಿ – ಉಡುಪಿ, ಕಾರವಾರ, ಕೊಡಗಿನಲ್ಲಿ ಭಾರೀ ಮಳೆ

    ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮುಂಗಾರು ಮಳೆ ಮತ್ತೊಂದು ಕಡೆ ವಾಯು ಚಂಡಮಾರುತದ ಎಫೆಕ್ಟ್ ಜೋರಾಗಿದೆ. 3 ದಿನಗಳಿಂದ  ದಕ್ಷಿಣ ಕನ್ನಡದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಉಳ್ಳಾಲದ ಸೋಮೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತದಿಂದ ರೆಸಾರ್ಟ್‍ನ ಶೌಚಾಲಯ ಕಟ್ಟಡ ಸಮುದ್ರ ಪಾಲಾಗಿದೆ.

    ಮಂಗಳೂರಿನ ಉಳ್ಳಾಲದಲ್ಲಿನ ಸಮ್ಮರ್ ಸ್ಯಾಂಡ್ ರೆಸಾರ್ಟಿನ ಶೌಚಾಲಯ ಕಟ್ಟಡ ನೋಡ ನೋಡುತ್ತಿದ್ದಂತೆ ನೆಲಸಮವಾಗಿದೆ. ಕಡಲ ತೀರದ ನಿವಾಸಿಗಳು ಜೀವಭಯದಿಂದ ದಿನ ಕಳೆಯುತ್ತಿದ್ದಾರೆ.

    ಉಡುಪಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮಳೆ ಆಗಿದೆ. ಬೈಂದೂರು, ಕುಂದಾಪುರದಲ್ಲಿ ಗಾಳಿ ಸಹಿತ ರಾತ್ರಿ ಸುರಿದ ಮಳೆ ತಂಪೆರೆದಿದೆ. ಹವಾಮಾನ ಇಲಾಖೆ ಜೂನ್ 15ರವರೆಗೆ ಕರಾವಳಿಯಲ್ಲಿ ಸಾಧಾರಣ ಮಳೆ, ಜೂನ್ 20ರ ನಂತರ ಅಬ್ಬರದ ಮುಂಗಾರು ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದಿದೆ. ಭಾರೀ ಮಳೆಯ ನಡುವೆಯೂ ರಾತ್ರಿ ಉಡುಪಿ ಕೃಷ್ಣನ ಉತ್ಸವ ನಡೆದಿದೆ.

    ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುರಿದ ಭಾರೀ ಮಳೆಗೆ ಶೇಜಾವಾಡದ ಗುಡ್ಡದ ಬಳಿ ಇರುವ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದಾಗಿ ಕಾರವಾರದ ಅರ್ಧ ಭಾಗ ವಿದ್ಯುತ್ ವ್ಯತ್ಯಯವಾಗಿದೆ. ನಿನ್ನೆಯಿಂದ ಕಂಬಗಳ ರಿಪೇರಿ ಕೆಲಸ ಸಾಗಿದ್ದರೂ ಪೂರ್ಣವಾಗಿಲ್ಲ. ಹಾಗಾಗಿ, 2 ದಿನದಿಂದ ಜನ ಕತ್ತಲಲ್ಲಿ ಇರುವಂತಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಕಾರ್ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿಯುತ್ತಿದೆ.

    ಒಮ್ಮೆ ಜೋರು ಗಾಳಿ, ಮತ್ತೊಮ್ಮೆ ಭಾರೀ ಮಳೆಗೆ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಮಳೆಗಾಳಿಯಿಂದ ಕಂಗಾಲಾಗಿದ್ದಾರೆ. ಮರ, ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳು  ನೆಲಕಚ್ಚಿವೆ.

    ಕೊಡಗು: ಮಳೆ ಎಂದರೆ ಬೆಚ್ಚಿಬೀಳುವಂತಹ ಪರಿಸ್ಥಿತಿ ಇರುವ ಕೊಡಗಿನಲ್ಲೂ ವರುಣಾ ಅಬ್ಬರಿಸಿದ್ದಾನೆ. ಬೆಳಗ್ಗೆಯಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮಧ್ಯಾಹ್ನದ ವೇಳೆ ಶುರುವಾಗಿ ಕೆಲಗಂಟೆಗಳ ಕಾಲ ಸುರಿಯಿತು. ಇದರಿಂದಾಗಿ ವಾಹನ ಸಂಚಾರದಲ್ಲಿ ಕೆಲ ಕಾಲ ಅಸ್ತವ್ಯಸ್ತ ಉಂಟಾಯಿತು. ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ಅಡ್ಡಿಯಾಯ್ತು.

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂದಿನ 2ರಿಂದ 3 ದಿನ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ನಗರದ ಕೆಲವು ಕಡೆ ಈಗಾಗಲೇ ಸಾಧಾರಣ ಮಳೆ ಆಗುತ್ತಿದ್ದು, ಗಾಳಿ ಜೊತೆ ವರುಣನ ಸಿಂಚನ ಮಾಡುತ್ತಿದ್ದಾನೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು ರಾತ್ರಿ ವೇಳೆಗೆ ಮಳೆಯಾಗುವ ಸಂಭವ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

  • `ಓಖಿ’ಗೆ ಮಂಗಳೂರಲ್ಲಿ ಕಡಲು ಪ್ರಕ್ಷುಬ್ಧ – ಮಂಗಳೂರಿಂದ ಹೊರಟಿದ್ದ 8 ಮಂದಿ ಸೇಫ್

    `ಓಖಿ’ಗೆ ಮಂಗಳೂರಲ್ಲಿ ಕಡಲು ಪ್ರಕ್ಷುಬ್ಧ – ಮಂಗಳೂರಿಂದ ಹೊರಟಿದ್ದ 8 ಮಂದಿ ಸೇಫ್

    -ಸುಖ್ ಪಾಲ್ ಪೊಳಲಿ
    ಮಂಗಳೂರು: ತಮಿಳುನಾಡು ಮತ್ತು ಕೇರಳದಲ್ಲಿ ಅಬ್ಬರಿಸಿದ ಓಖಿ ಚಂಡಮಾರುತ ರಾಜ್ಯದ ಕರಾವಳಿಗೂ ಅಪ್ಪಳಿಸಿದೆ. ಮಂಗಳೂರಿನ ಸಮುದ್ರದಲ್ಲಿ ರಕ್ಕಸ ಅಲೆಗಳು ಏಳುತ್ತಿದ್ದು ಶನಿವಾರ ರಾತ್ರಿಯಿಂದ ಉಗ್ರ ಸ್ವರೂಪ ಪಡೆದಿದೆ. ಕಡಲ ತೀರದ 15 ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಇಡೀ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಸಮುದ್ರದಿಂದ ರಸ್ತೆಗೆ ಬಂತು ನೀರು: ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದ್ದು, ತೀರ ಪ್ರದೇಶಕ್ಕೆ ರಕ್ಕಸ ಅಲೆಗಳು ಅಪ್ಪಳಿಸತೊಡಗಿವೆ.

    ಶನಿವಾರ ಬೆಳಗ್ಗೆ ಕರಾವಳಿ ಭಾಗದಲ್ಲಿ ಮೋಡದ ವಾತಾವರಣ ಇದ್ದರೂ, ಹನಿ ಮಳೆಯೂ ಬಿದ್ದಿರಲಿಲ್ಲ. ಹೀಗಿದ್ದರೂ ಬಿರುಗಾಳಿ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮುನ್ಸೂಚನೆ ನೀಡಿದ್ದರಿಂದ ಮೀನುಗಾರರು ಸೇರಿದಂತೆ ಬೀಚ್ ಪ್ರದೇಶದಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಮಂಗಳೂರಿನ ಉಳ್ಳಾಲ ಭಾಗದಲ್ಲಿ 25ಕ್ಕೂ ಹೆಚ್ಚು ನಾಡದೋಣಿಗಳನ್ನು ತೀರಕ್ಕೆಳೆದು ಕಟ್ಟಿದ್ದಲ್ಲದೆ, ಮೀನುಗಾರರು ಕಡಲಿನ ವೈಪರೀತ್ಯ ಕಂಡು ದಿಗಿಲುಗೊಂಡಿದ್ದರು. ಸಂಜೆಯಾಗುತ್ತಲೇ ಕಡಲಿನಲ್ಲಿ ರಕ್ಕಸ ಅಲೆಗಳು ಏಳಲಾರಂಭಿಸಿದ್ದು ಕಡಲ ತೀರದ ಜನರು ಆತಂಕಗೊಂಡಿದ್ದಾರೆ. ಸೋಮೇಶ್ವರದ ಪರಿಬೈಲ್, ಬಟ್ಟಪ್ಪಾಡಿಯಲ್ಲಿ ಸಮುದ್ರದ ನೀರು ರಸ್ತೆಗೆ ಬಂದಿದೆ. ಉಳ್ಳಾಲ, ಸೋಮೇಶ್ವರ, ಮುಕ್ಕ, ಪಣಂಬೂರು ಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ರಭಸ ತೀವ್ರ ವಾಗಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಕಡಲ ತೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಡಿಸೆಂಬರ್ 6ರ ತನಕ ಲಕ್ಷ ದ್ವೀಪಕ್ಕೆ ಎಲ್ಲಾ ವೆಸಲ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಮಂಗಳೂರಿಂದ ಹೊರಟವ್ರು ಬದುಕಿ ಬಂದ್ರು: ಲಕ್ಷದ್ವೀಪದ ಬಳಿ ನಾಪತ್ತೆಯಾಗಿದ್ದ ಮಂಗಳೂರಿನ ಬೋಟ್ ನಲ್ಲಿದ್ದ 8 ಸಿಬ್ಬಂದಿಯನ್ನು ಕೊನೆಗೂ ನೌಕಾಪಡೆ ರಕ್ಷಣೆ ಮಾಡಿದೆ. ಮಂಗಳೂರಿನ ಹಳೆಬಂದರಿನಿಂದ ನವೆಂಬರ್ 28ರಂದು ಸರಕು ತುಂಬಿಕೊಂಡು ಹೊರಟಿದ್ದ ಜೇವರ್ಗಿ 258 ಹೆಸರಿನ ಬೋಟ್ ನಿನ್ನೆ ರಾತ್ರಿ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿತ್ತು. ಕರಾವಳಿ ತಟ ರಕ್ಷಣಾ ಪಡೆ ಮತ್ತು ನೌಕಾಪಡೆ ಕಾರ್ಯಾಚರಣೆ ಯತ್ನ ನಡೆಸಿತ್ತಾದರೂ ಬಿರುಗಾಳಿಯಿಂದಾಗಿ ಬೋಟ್ ಸಮುದ್ರದಲ್ಲಿ ಕಾಣೆಯಾಗಿತ್ತು. ಶನಿವಾರ ಸಂಜೆ ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯ ನಡೆಸಿದ ನೌಕಾಪಡೆ ಬೋಟಿನಲ್ಲಿದ್ದ 8 ಮಂದಿ ತಮಿಳ್ನಾಡು ಮೂಲದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.

    ಕೇರಳ, ತಮಿಳುನಾಡಿನಲ್ಲಿ ಭೀತಿ ಮೂಡಿಸಿದ್ದ ಓಖಿ ಚಂಡಮಾರುತ ಕರಾವಳಿಯಲ್ಲೂ ಪ್ರತಾಪ ತೋರಿಸಿದೆ. ಚಂಡ ಮಾರುತದ ಪ್ರಭಾವ ಮುಂದಿನ ಮೂರು ದಿನಗಳ ಕಾಲ ಇರುವ ಸಾಧ್ಯತೆಗಳಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

    https://www.youtube.com/watch?v=IskPbU9PesM

    https://www.youtube.com/watch?v=XHBE1SXcP-A

    https://www.youtube.com/watch?v=ampmtdoQElk