Tag: ಸೋಮಶೇಖರ್ ರೆಡ್ಡಿ

  • ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಬೆಳಗಾವಿ: ನಿರ್ದಿಷ್ಟ ಪಕ್ಷ ಹಾಗೂ ಸಮುದಾಯವನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನಬಂದಂತೆ ಮಾತನಾಡಿದ್ದಾರೆ. ಇತ್ತೀಚಿಗೆ ಸಿಎಎ ಬೆಂಬಲಿಸಿ ನಡೆಸಿದ ಜಾಗೃತಿ ಸಭೆಯಲ್ಲಿ ನಿರ್ದಿಷ್ಟ ಸಮುದಾಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ದೇಶ ಒಂದೇ ಜಾತಿ, ಭಾಷೆಗೆ ಸಿಮಿತವಾಗಿಲ್ಲ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಹೇಳಿರುವುದು ಸರಿಯಲ್ಲ. ಇದು ಸಮಾಜದ ಶಾಂತಿ ಹಾಳು ಮಾಡುವಂತೆ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಖತಿಬ್, ರಸುಲ್ ಮುಲ್ಲಾ, ಎಂ.ಎಂ.ಅತ್ತಾರ, ಎಂ.ಬಿ.ಜಮಾದಾರ, ಪರಶುರಾಮ ವಗ್ಗಣ್ಣನವರ, ಗಜಾನನ ಧರನಾಯಕ ಹಾಗೂ ಇತರರು ಇದ್ದರು.

  • ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ಪ್ರಚೋದನಾಕಾರಿ ಹೇಳಿಕೆ ತಪ್ಪು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೋಮಶೇಖರ್ ಮಾತನಾಡಿರೋದು ಸರಿಯಲ್ಲ. ಆ ರೀತಿ ಪ್ರಚೋದನಾತ್ಮಕವಾಗಿ ಸೋಮಶೇಖರ್ ಮಾತನಾಡಬಾರದಿತ್ತು. ನಾವೆಲ್ಲರೂ ಸಹೋದರರಾಗಿದ್ದು, ನಮಗೆ ಯಾರ ಮೇಲೂ ವೈರತ್ವ ಇಲ್ಲ. ವಸುದೈವ ಕುಟುಂಬ ಅನ್ನೊ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಈ ಬಗ್ಗೆ ಸೋಮಶೇಖರ್ ಜೊತೆ ಮಾತನಾಡುತ್ತೇನೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

    ಸೋಮಶೇಖರ್ ನೀಡಿದ ಹೇಳಿಕೆಯಿಂದಾಗಿ ಈಗಾಗಲೇ ಬಳ್ಳಾರಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅಲ್ಲದೇ ನಿನ್ನೆ ಕಾಂಗ್ರೆಸ್ ನಿಯೋಗ ಐಜಿಪಿಯವರನ್ನ ಭೇಟಿಯಾಗಿ ಸೋಮಶೇಖರ್ ವಿರುದ್ಧ ದೂರು ನೀಡಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮಶೇಖರ್ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.

  • ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ರಾಯಚೂರು: ಸಿಎಎ ಬೆಂಬಲಿಸಿ ಬಳ್ಳಾರಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಳ್ಳಾರಿನಗರ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ಪ್ರಚೋದನಾತ್ಮಕ ಹೇಳಿಕೆಯನ್ನ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ ಮಾಡಲಾಯಿತು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರಾಯಚೂರು ನಾಗರೀಕ ಸಮಿತಿ ಕಾರ್ಯಕರ್ತರು ಕೂಡಲೇ ಸೋಮಶೇಖರ್ ರೆಡ್ಡಿಯನ್ನ ಬಂಧಿಸುವಂತೆ ಆಗ್ರಹಿಸಿದರು. ದೇಶದ್ರೋಹದ ಹೇಳಿಕೆ ನೀಡಿರುವ ಶಾಸಕರನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಅಂತ ಒತ್ತಾಯಿಸಿದರು. ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕೃತಿ ದಹನಕ್ಕೆ ಅವಕಾಶ ನೀಡದ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆಸಿದ್ರು. ಬಳಿಕ ಮನುಸ್ಮೃತಿಯನ್ನ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.

  • ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಕುರಿತು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಯಚೂರಿನಲ್ಲಿ ದೂರು ನೀಡಲಾಗಿದೆ.

    ಸಂವಿಧಾನಿಕ ಹಕ್ಕು ನಾಗರೀಕ ಸಮಿತಿಯ ಮಾನಸಯ್ಯ ಎಂಬವರು ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಎಎ ವಿರೋಧಿ ಹೋರಾಟಗಾರರು ಸೋಮಶೇಖರ್ ರೆಡ್ಡಿ ಹೇಳಿಕೆ ಖಂಡಿಸಿ ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ. ಸಿಎಎ ಪರ ಮೆರವಣಿಗೆಯಲ್ಲಿ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡು ಸಿಎಎ ವಿರೋಧಿಸುವವರ ವಿರುದ್ದ ಕಿಡಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ದೂರಿನಲ್ಲೇನಿದೆ?
    ನೀವು ಇರೋದು 17%. ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನು ಉಳಿಸಲ್ಲ. ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ. ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಕರಾ ಮಾಡಿದರೆ ನಿಮ್ಮ ದೇಶಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ತರಹ ಆಗಿ ಮಚ್ಚು ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ. ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತದೆ ಎಂದು ಅಲ್ಲಿ ಸೇರಿದ್ದ ಸಾವಿರಾರು ಜನರನ್ನು ಭಾಷಣದ ಮೂಲಕ ಪ್ರಚೋದಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಹರಡುವ ಸಂಘಟಿತ ಸಶಸ್ತ್ರ ದಾಳಿಗೆ ಸೋಮಶೇಕರರೆಡ್ಡಿ ಕರೆ ನೀಡಿದ್ದಾರೆ. ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಅಂತ ದೂರಿನಲ್ಲಿ ಮನವಿ ಮಾಡಲಾಗಿದೆ.

    ರಾಯಚೂರಿನ ಸದರಬಜಾರ್ ಠಾಣೆ ಪೊಲೀಸರು ದೂರನ್ನ ಸ್ವೀಕರಿಸಿದ್ದು, ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ.

  • ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತೆ: ಸೋಮಶೇಖರ್ ರೆಡ್ಡಿ

    ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತೆ: ಸೋಮಶೇಖರ್ ರೆಡ್ಡಿ

    -ಜನಾರ್ದನ ರೆಡ್ಡಿ ಇದ್ದಿದ್ರೆ ಶ್ರೀರಾಮುಲುಗೆ ಬಲ ಬರ್ತಿತ್ತು
    -ಈಗಲೂ ನಾವೇ ಸ್ಟ್ರಾಂಗ್
    -ವಿಭಜನೆ ಬೇಡ, ಬಳ್ಳಾರಿ ಅಖಂಡವಾಗಿರಲಿ

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಸಕ್ರಿಯ ರಾಜಕಾರಣದಲ್ಲಿದಿದ್ರೆ ಸಚಿವ ಶ್ರೀರಾಮುಲುಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ಇನ್ನೂ ಬೇಗ ಶ್ರೀರಾಮುಲು ಡಿಸಿಎಂ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಇಂದು ಜನಾರ್ದನ ರೆಡ್ಡಿ ನಮ್ಮ ಜೊತೆಯಲ್ಲಿದಿದ್ದರೆ ನಮಗೆ ಯಾವ ಹಿನ್ನಡೆ ಆಗುತ್ತಿರಲಿಲ್ಲ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿ ಉನ್ನತ ಮಟ್ಟದಲ್ಲಿ ಶ್ರೀರಾಮುಲು ಬೆಳೆದಿದ್ದಾರೆ. ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತಿರುತ್ತದೆ. ಕೆಳಗೆ ಇದ್ದೋರು ಮೇಲೆ ಬರಬೇಕು. 2008ರಲ್ಲಿ ಪ್ರಬಲರಾಗಿದ್ವಿ, ಈಗಲೂ ನಾವು ಸ್ಟ್ರಾಂಗ್ ಇದ್ದೇವೆ. ನಮ್ಮನ್ನು ಭಗವಂತ ವೀಕ್ ಮಾಡಬೇಕೇ ಹೊರತು ಬೇರೆಯವರಲ್ಲ ಎಂದಿದ್ದಾರೆ.

    ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡುವ ಕುರಿತು ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ. ಶ್ರೀರಾಮುಲು ಡಿಸಿಎಂ ಆಗುವ ವಿಶ್ವಾಸ ನಮಗೆ ಇದೆ. ಇದೇ ವೇಳೆಯಲ್ಲಿ ಬಳ್ಳಾರಿ ಜಿಲ್ಲಾ ವಿಭಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಇಲ್ಲ. ಸಿಎಂ ಯಡಿಯೂರಪ್ಪ ಅವರು ಚುನಾವಣೆ ನಂತರ ಜಿಲ್ಲೆ ವಿಭಜನೆ ಬಗ್ಗೆ ಮಾತನಾಡೋಣ ಅಂದಿದ್ದಾರೆ. ಜಿಲ್ಲೆ ಅಖಂಡವಾಗಿರೋದು ನನ್ನ ನಿಲುವು ಎಂದು ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಜಿಲ್ಲೆಯನ್ನು ಒಡೆಯೋದು ಬೇಡ ಎಂದು ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇವೆ. ಶಾಸಕರಾದ ಕರುಣಾಕರ್ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಜಿಲ್ಲೆ ಅಖಂಡವಾಗಿರಲಿ ಎಂದಿದ್ದೇವೆ. ಜೊತೆಗೆ ಸಿಎಂ ಕರೆದಿದ್ದ ಅಂದಿನ ಸಭೆಗೆ ಬಂದವರಲ್ಲಿ ಶೇ.9ಂ ಜನ ಜಿಲ್ಲೆ ವಿಭಜನೆ ಬೇಡ ಎಂದಿದ್ದಾರೆ. ಆದ್ರೆ ಆನಂದ್ ಸಿಂಗ್ ಮತ್ತು ಇನ್ನೊಬ್ಬ ಎಂಎಲ್ ಸಿ ಇಬ್ಬರೇ, ಬೇಕು ಅಂದಿದ್ದಾರೆ ಎಂದು ತಿಳಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ಶಾಸಕರಿಂದ ಅಧಿಕಾರಿಗಳಿಗೆ ಕ್ಲಾಸ್

    ಬೆಳ್ಳಂಬೆಳಗ್ಗೆ ಶಾಸಕರಿಂದ ಅಧಿಕಾರಿಗಳಿಗೆ ಕ್ಲಾಸ್

    ಬಳ್ಳಾರಿ: ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬಳ್ಳಾರಿಯ ಗಣೇಶ್ ಕಾಲೋನಿಯಲ್ಲಿ ಒಳಚರಂಡಿ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರಬಂದಿದ್ದರು. ಹೀಗಾಗಿ ಸೋಮಶೇಖರ್ ಅವರು ಮಹಾನಗರ ಪಾಲಿಕೆ ಆಯುಕ್ತೆ ತುಷಾರಾಮಣಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜನರ ಸಮಸ್ಯೆ ಪರಿಹಾರ ಮಾಡದೇ ಇರುವ ಹಿನ್ನೆಲೆಯಲ್ಲಿ ಸೋಮಶೇಖರ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಜಲಾವೃತ ಆದ ಮನೆಯ ಕಟ್ಟೆಯ ಮೇಲೆ ಕುಳಿತು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

    ನಗರದಲ್ಲಿ ಪದೇ ಪದೇ ಯುಜಿಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುತ್ತಿದೆ. ಸೋಮಶೇಖರ್ ಕ್ಲಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಹನಗಳನ್ನು ತರಿಸಿ ಕ್ಲೀನ್ ಮಾಡಲು ಮುಂದಾಗಿದ್ದಾರೆ.

  • ”ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೇ ನಮಗೆ ಸಿಕ್ಕಷ್ಟೆ ಖುಷಿ”

    ”ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೇ ನಮಗೆ ಸಿಕ್ಕಷ್ಟೆ ಖುಷಿ”

    ಬಳ್ಳಾರಿ: ಕರುಣಾಕರ ರೆಡ್ಡಿ ಮತ್ತು ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಸೇರಿದಂತೆ ನಾವೆಲ್ಲಾ ಒಂದಾಗಿ ಒಗಟ್ಟಿನಿಂದ ಇದ್ದೇವೆ. ನಮಗೆ ಸಚಿವ ಸ್ಥಾನದ ಆಸೆಯಿಲ್ಲ, ಕೊಟ್ಟರೆ ಕೆಲಸ ಮಾಡುತ್ತೇವೆ. ಇಲ್ಲವಾದರೆ ಶ್ರೀರಾಮುಲುಗೆ ಸಚಿವ ಸ್ಥಾನ ಕೊಟ್ಟರೂ ನಮಗೆ ಸಿಕ್ಕಷ್ಟೆ ಖುಷಿ ಪಡುತ್ತೇವೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

    ಕೆಲ ದಿನಗಳ ಹಿಂದೆ ನೆರೆ ಪೀಡಿತ ಪ್ರದೇಶಗಳಿಗೆ ಶ್ರೀರಾಮುಲು, ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಜಂಟಿಯಾಗಿ ಭೇಟಿ ನೀಡಿದ್ದರು. ಇದು ಮತ್ತೆ ರೆಡ್ಡಿ ಸಹೋದರರು ಒಂದಾಗಿದ್ದಾರೆ ಎನ್ನುವ ಸಂದೇಶ ಸಾರಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಸೋಮಶೇಖರ ರೆಡ್ಡಿ, ಯಾವತ್ತು ನಾವು ಜಗಳವೇ ಆಡಿಲ್ಲ, ಹೀಗಾಗಿ ನಾವು ಮತ್ತೆ ಒಂದಾಗಿದ್ದೇವೆ ಎಂದು ಹೇಳೋದಲ್ಲ. ನಾವೆಲ್ಲಾ ಎಂದಿಗೂ ಒಂದೇ ಎಂದರು. ಇದನ್ನೂ ಓದಿ:ಶ್ರೀರಾಮುಲು ಟೀಮ್‍ಗೆ ಸಚಿವ ಸ್ಥಾನ ನೀಡ್ಬೇಡಿ – ಸಿಎಂಗೆ ಟಪಾಲ್ ಗಣೇಶ್ ಮನವಿ

    ಸಚಿವ ಸಂಪುಟ ವಿಸ್ತರಣೆ ಕುರಿದಂತೆ ಮಾತನಾಡಿದ ಅವರು, ಭಗವಂತನ ಮೇಲೆ ನಂಬಿಕೆ ಇದೆ, ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಕೊಟ್ಟರೂ ತುಂಬಾ ಖುಷಿ ಎಂದು ಹೇಳಿದರು. ಬಳಿಕ ಬಿಎಸ್‍ಆರ್ ಪಕ್ಷ ಸ್ಥಾಪನೆ ಮಾಡಿದಾಗ ಕರುಣಾಕರ ರೆಡ್ಡಿ ನಮ್ಮೊಂದಿಗೆ ಬರಲಿಲ್ಲ. ಅದೊಂದು ವಿಚಾರ ಬಿಟ್ಟರೇ ನಾವು ಯಾವತ್ತೂ ಜಗಳವಾಡಿಲ್ಲ ಎಂದು ಸ್ಪಷ್ಟಪಡಿಸಿದರು.

  • 16,356 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ ರೆಡ್ಡಿ ಆಪ್ತ

    16,356 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ ರೆಡ್ಡಿ ಆಪ್ತ

    ಬಳ್ಳಾರಿ: ನಗರದ ಶಾಸಕ ಸೋಮಶೇಖರ್ ರೆಡ್ಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 16,356 ಮತಗಳಿಂದ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಆಪ್ತ ದೇವರಿಗೆ 16,356 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.

    ಇಂದು ಸೋಮಶೇಖರ್ ರೆಡ್ಡಿ ಅವರ 54ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಇಂದು ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಅವರು ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರೆಡ್ಡಿ ಆಪ್ತ ಪಾಲಣ್ಣ 16,356 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಕೆ ಮಾಡಿದ್ದಾರೆ.

    ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸೋಮಶೇಖರ್ ರೆಡ್ಡಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬಹುದು. ಮಧ್ಯಂತರ ಚುನಾವಣೆ ಬಂದರೆ ಬಿಜೆಪಿಗೆ ಬಹುಮತ ಬರಲಿದೆ. 26 ಲೋಕಸಭಾ ಕ್ಷೇತ್ರಗಳ, 175 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಬಂದಿದೆ. ಹೀಗಾಗಿ ಈಗಿರುವ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬಹುದು ಎಂದು ಹೇಳಿದ್ದಾರೆ.

    ಈ ಸರ್ಕಾರ ಇದೇಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಜೊತೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಸೋಮಶೇಖರ್ ರೆಡ್ಡಿ ಕಿಡಿಕಾರಿದರು.

    ನಾಳೆಯಿಂದ(ಶನಿವಾರ) ಶಾಸಕ ಸೋಮಶೇಖರ್ ರೆಡ್ಡಿ ಉಪವಾಸ ಸತ್ಯಾಗ್ರಹ ಆರಂಭ ಮಾಡಲಿದ್ದಾರೆ. ಮಳೆ ಬಂದು ತುಂಗಭದ್ರಾ ಡ್ಯಾಂ ತುಂಬುವವರೆಗೂ ಉಪವಾಸ ವ್ರತ ಆಚರಣೆ ಮಾಡಲಿದ್ದಾರೆ. ನಾಳೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಉಪವಾಸ ಆರಂಭಿಸಲಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಹಂಪಿ ಉತ್ಸವಕ್ಕೆ ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ- ಸೋಮಶೇಖರ್ ರೆಡ್ಡಿ

    ಬಳ್ಳಾರಿ: ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವೂ ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಂಪಿ ಉತ್ಸವ ನಡೆಸಲು ಮುಂದಾಗಬೇಕು. ಹಂಪಿ ಉತ್ಸವ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಎಲ್ಲ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ. ಹಂಪಿ ಒಂದು ಐತಿಹಾಸಿಕ ತಾಣ. ಹಂಪಿ ಉತ್ಸವ ನಮ್ಮ ನಾಡಿನ ಹೆಮ್ಮೆಯ ಪರಂಪರೆಯಾಗಿದೆ. ಹಂಪಿ ಉತ್ಸವಕ್ಕೆ ಒಂದು ಇತಿಹಾಸವಿದೆ ಅದನ್ನು ಎಲ್ಲರು ಗೌರವಿಸಬೇಕು ಎಂದು ಹೇಳಿದರು.

    ನಾಡಿನಲ್ಲಿ ಹಂಪಿ ಉತ್ಸವ ಪಾರಂಪರಿಕವಾಗಿ ನಡೆದು ಬಂದಿದೆ. ಈಗಿನ ಮೈತ್ರಿ ಸರ್ಕಾರ ನಾಡಿನ ಪರಂಪರೆ, ಸಂಪ್ರದಾಯಗಳನ್ನು ಹಾಳು ಮಾಡಬಾರದು. ರಾಜ್ಯದಲ್ಲಿ ಬರಗಾಲವಿದೆ ಎಂದು ಮೈತ್ರಿ ಸರ್ಕಾರ ಹಂಪಿ ಉತ್ಸವವನ್ನು ಮುಂದೂಡಲು ನಿರ್ಧರಿಸಿರುವುದು ನನ್ನ ಪ್ರಕಾರ ತಪ್ಪು. ಉತ್ಸವ ನಡೆಸಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ ಭಿಕ್ಷೆ ಬೇಡಿಯಾದ್ರೂ ಹಣ ಹೊಂದಿಸಿಕೊಡುತ್ತೇವೆ. ಬೀದಿ ಬೀದಿಗೆ ನಾವೇ ಹೋಗಿ ಹಂಪಿ ಉತ್ಸವ ಮಾಡೋಕೆ ಸರ್ಕಾರದ ಹತ್ತಿರ ಹಣವಿಲ್ಲ ಎಂದು ಹೇಳಿ ಭಿಕ್ಷೆ ಕೇಳ್ತೀವಿ ಎಂದು ಸರ್ಕಾರ ವಿರುದ್ಧ ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದರು.

    ಹೇಗಾದರು ಸರಿ ಸರ್ಕಾರ ಹಂಪಿ ಉತ್ಸವನ್ನು ಎಂದಿನಂತೆ ವಿಜೃಂಭಣೆಯಿಂದ ಈ ವರ್ಷವು ಮಾಡಲೇಬೇಕು. ದೇಶ – ವಿದೇಶಗಳಿಂದ ಹಂಪಿ ಉತ್ಸವ ನೋಡಲು ಪ್ರವಾಸಿಗರು ಉತ್ಸಾಹದಿಂದ ಬರುತ್ತಾರೆ. ಅವರಿಗೆ ನಿರಾಸೆ ಮಾಡಬೇಡಿ, ಹಂಪಿ ಉತ್ಸವವನ್ನು ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಲಿ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರು

    ಗಾಲಿ ಜನಾರ್ದನ ರೆಡ್ಡಿ ಸಿಸಿಬಿ ಮುಂದೆ ಹಾಜರು

    ಬೆಂಗಳೂರು: ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರ ಮುಂದೆ ಇಂದು ಹಾಜರಾಗಿದ್ದಾರೆ. ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುವ ವೇಳೆ ಶಾಸಕ ಸೋಮಶೇಖರ್ ರೆಡ್ಡಿ, ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿಯೇ ಇದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಸಿಸಿಬಿ ಕಚೇರಿಗೆ ಆಗಮಿಸಿದರು.

    ಜನಾರ್ದನ ರೆಡ್ಡಿ ಕಳೆದ ನಾಲ್ಕು ದಿನಗಳಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇದ್ದಾರೆಂದು ಸಿಸಿಬಿ ಅಧಿಕಾರಿಗಳು ತಂಡದ ಸಮೇತ ಪರಿಶೀಲನೆ ನಡೆಸಿದ್ದರು. ಆದ್ರೆ ಸಿಸಿಬಿ ಅಧಿಕಾರಿಗಳು ಬಂಧನದ ಮಾಹಿತಿ ಹೊರ ಹಾಕಿದ ನಂತರ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ಎಂದು ಅಚ್ಚರಿಯ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ವಿಚಾರಣೆಗೆ ಗೈರಾಗಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳಿವೆ. ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದರಿಂದ ಸೋಮವಾರ ಜಾಮೀನು ಸಿಗೋದು ಕಷ್ಟ ಎಂಬುದನ್ನು ವಕೀಲರು ಜನಾರ್ದನ ರೆಡ್ಡಿ ಅವರಿಗೆ ಮನವರಿಕೆ ಮಾಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅಪರಾಧ ಕೇಂದ್ರ ವಿಭಾಗ ಕಚೇರಿಗೆ ಆಗಮಿಸಿ ಅಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews