Tag: ಸೊಸೈಟಿ

  • ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರಣದ ರೇಷನ್

    ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರಣದ ರೇಷನ್

    ಮಂಡ್ಯ: ಬಡವರ ಹಸಿವು ನೀಗಿಸಲು ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತಿದೆ. ಸಾಮಾನ್ಯವಾಗಿ ಸೊಸೈಟಿಗಳು ಕಳಪೆ ಹಾಗೂ ಹುಳು ಬಂದ ಅಕ್ಕಿ ನೀಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಪ್ಲಾಸ್ಟಿಕ್ ಮತ್ತು ರಬ್ಬರ್ ಉಚಿತ ಅಕ್ಕಿ ಜೊತೆ ಮಿಶ್ರಣವಾಗಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

    ಮಂಡ್ಯದ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಬಹುತೇಕ ಜನ ಕೂಲಿಕಾರ್ಮಿಕರು ಇದ್ದಾರೆ. ಒಂದೊತ್ತಿನ ಊಟಕ್ಕೆ ಸರ್ಕಾರ ನೀಡುವ ಉಚಿತ ಪಡಿತರವನ್ನೇ ನಂಬಿಕೊಂಡಿದ್ದಾರೆ. ಆದರೆ ಅವರ ಜೀವಕ್ಕೆ ಆಪತ್ತು ಎದುರು ಮಾಡಿದೆ. ಚಿಕ್ಕರಸಿನಕೆರೆ ಸೊಸೈಟಿಯಿಂದ ತಂದ ಪಡಿತರ ಅಕ್ಕಿಯಲ್ಲಿ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿದ್ದು, ಅಕ್ಕಿ ಬೇಯಿಸಿದಾಗ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದುಬಂದಿದೆ.

    ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಚಿಕ್ಕರಸಿನಕೆರೆ ಸೊಸೈಟಿಯಿಂದ ರೇಷನ್ ತಂದಿದ್ದರು. ಮನೆಗೆ ಬಂದು ಚೀಲ ಬಿಚ್ಚಿ ನೋಡಿದಾಗ ಅಕ್ಕಿಯ ಜೊತೆ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿರೋದು ಕಂಡು ಬಂದಿದೆ. ಇದನ್ನು ಬೇಯಿಸಿದಾಗ ಜನರಿಗೆ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದಿದೆ.

    ಈ ಹಳದಿ ಕಾಳುಗಳನ್ನು ನೀರಿನಲ್ಲಿ ನೆನೆಸಿದರೆ ಕೆಲವೇ ನಿಮಿಷದಲ್ಲಿ ಬಣ್ಣ ಬಿಟ್ಟುಕೊಳ್ಳುತ್ತಿದೆ. ಈ ಅಕ್ಕಿಯಲ್ಲಿ ಅನ್ನ ಮಾಡಿಕೊಂಡು ತಿಂದರೆ ಆರೋಗ್ಯ ಏನಾಗಬೇಕು? ಪ್ರಾಣಕ್ಕೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಗ್ರಾಮದ ಮಹಿಳೆ ಸುನಿತಾ ಪ್ರಶ್ನಿಸಿದ್ದಾರೆ.

    ಬಡವರು ಹಸಿವಿನಿಂದ ಬಳಲಬಾರದು. ಹೊಟ್ಟೆ ತುಂಬಾ ಊಟ ಮಾಡಬೇಕು ಎಂಬ ಕಾರಣದಿಂದ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಅಕ್ಕಿಯಲ್ಲಿ ವಿಷವಾಗಿ ಬದಲಾಗುವ ಪ್ಲಾಸ್ಟಿಕ್ ಹಾಗೂ ರಬ್ಬರ್ ಅಂಶಗಳು ಸೇರಿರುವುದು ಜನರನ್ನು ಆತಂಕಕ್ಕೆ ದೂಡಿದೆ.

  • ಕ್ಯೂನಲ್ಲಿ ಬ್ಯಾಗಿಟ್ಟು ಮರದಡಿ ಮಾತುಕತೆಗೆ  ಕುಳಿತ ಜನರು

    ಕ್ಯೂನಲ್ಲಿ ಬ್ಯಾಗಿಟ್ಟು ಮರದಡಿ ಮಾತುಕತೆಗೆ ಕುಳಿತ ಜನರು

    – ಇದೇನಾ ಸಾಮಾಜಿಕ ಅಂತರ?

    ಚಿಕ್ಕಮಗಳೂರು: ಸರ್ಕಾರ ಉಚಿತವಾಗಿ ನೀಡುತ್ತಿರುವ ಪಡಿತರಕ್ಕಾಗಿ ಬಂದ ಜನ ತಾವು ತಂದ ಬ್ಯಾಗ್ ಗಳನ್ನು ಸಾಲಾಗಿ ಜೋಡಿಸಿಟ್ಟು ಮರದ ಅಡಿ ಸಾಮಾಜಿಕ ಅಂತರವನ್ನ ಗಾಳಿಗೆ ತೂರಿ ಮಾತುಕತೆಯಲ್ಲಿ ತೊಡಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದ ಸೊಸೈಟಿ ಮುಂಭಾಗ ನಡೆದಿದೆ.

    ಕಳೆದೊಂದು ತಿಂಗಳಿಂದ ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ಕಂಗಾಲಾಗಿದೆ. ಜನರ ಆರೋಗ್ಯದ ದೃಷ್ಠಿಯಿಂದ 21 ದಿನಗಳ ಕಾಲ ದೇಶವನ್ನು ಲಾಕ್‍ಡೌನ್ ಮಾಡಿದ್ದ ಪ್ರಧಾನಿ ಮೋದಿ ಇಂದು ಮತ್ತೆ ಮೇ 3ರವರೆಗೆ ಇಡೀ ದೇಶ ಲಾಕ್ ಡೌನ್‍ನಲ್ಲಿರುವಂತೆ ಆದೇಶಿಸಿದ್ದಾರೆ. ಜೊತೆಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡು, ತುರ್ತು ಸಂದರ್ಭ ಮಾಸ್ಕ್ ಹಾಕಿಕೊಂಡು ಹೊರಬರುವಂತೆ ಮನವಿ ಮಾಡಿದ್ದಾರೆ. ಅಷ್ಟೆ ಅಲ್ಲದೇ ಬಡವರು, ರೈತರಿಗೆ ಮಾತ್ರ ಕೆಲ ವಿನಾಯಿತಿ ಎಂದು ಘೋಷಿಸಿದ್ದಾರೆ.

    ಆದರೆ ಗ್ರಾಮೀಣ ಭಾಗದ ಜನ ಮಾತ್ರ ಸರ್ಕಾರದ ಆದೇಶ, ಪ್ರಧಾನಿಯ ಮನವಿ ಮತ್ತು ಕೊರೊನಾ ಭಯ ಯಾವುದೂ ಇಲ್ಲದಂತೆ ಎಂದಿನಂತೆ ಇದ್ದಾರೆ. ಇಂದು ಸೊಸೈಟಿ ಮುಂಭಾಗದ ದೃಶ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಅಂತರದ ಅರಿವೇ ಇಲ್ಲದೆ, ಪಡಿತರಕ್ಕಾಗಿ ತಾವು ತಂದ ಬ್ಯಾಗ್‍ಗಳನ್ನ ಸರದಿ ಸಾಲಲ್ಲಿ ಜೋಡಿಸಿಟ್ಟು ಗಂಡಸರೆಲ್ಲಾ ಒಂದೆಡೆ ಸೇರಿದರೆ ಹೆಂಗಸರೆಲ್ಲಾ ಮತ್ತೊಂದೆಡೆ ಕೂತು ತಮ್ಮ ಸರದಿ ಬರುವವರೆಗೆ ಮಾತುಕತೆಯಲ್ಲಿ ತೊಡಗಿದ್ದರು.

  • ಸೊಸೈಟಿ ಚುನಾವಣೆಯಲ್ಲಿ ಅನರ್ಹಗೊಳಿಸಿದ್ದನ್ನು ಖಂಡಿಸಿ ರೈತರ ಪ್ರತಿಭಟನೆ

    ಸೊಸೈಟಿ ಚುನಾವಣೆಯಲ್ಲಿ ಅನರ್ಹಗೊಳಿಸಿದ್ದನ್ನು ಖಂಡಿಸಿ ರೈತರ ಪ್ರತಿಭಟನೆ

    ಕೊಪ್ಪಳ: ರೈತರಿಗೆ ಆರ್ಥಿಕ ಸಹಕಾರಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶೇರುದಾರರ ಪೈಕಿ ಶೇ.90ರಷ್ಟು ಸದಸ್ಯರನ್ನ ಅನರ್ಹಗೊಳಿಸಿ, ಅರ್ಹತೆ ಪಟ್ಟಿ ಸಿದ್ದಪಡಿಸಿ ಚುನಾವಣೆ ನಡೆಸಲು ಸಂಘ ಮುಂದಾಗಿದೆ. ಈ ಹಿನ್ನೆಲೆ ಇಡೀ ಗ್ರಾಮಸ್ಥರು ಸಹಕಾರಿ ಸಂಘದ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.

    ಗುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಸಂಘದಲ್ಲಿ ಗುಂಡೂರು, ಗುಂಡೂರು ಕ್ಯಾಂಪ್, ಕಾಮಗುಂಡಮ್ಮ ಕ್ಯಾಂಪ್, ತಿಮ್ಮರೇಶ ಕ್ಯಾಂಪ್ ಹಾಗೂ ಲಕ್ಷ್ಮೀ ಕ್ಯಾಂಪ್‍ನ ಸುಮಾರು 1,289 ರೈತ ಸದಸ್ಯರು ಶೇರು ಹೊಂದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಶೇ 10ರಷ್ಟು ಜನರಿಗೆ ಮಾತ್ರ ಅರ್ಹರು ಎನ್ನುವ ಪಟ್ಟಿಯನ್ನು ಸಂಘ ಬಹಿರಂಗ ಪಡಿಸಿದೆ. ಈ ಹಿನ್ನೆಲೆ ಕ್ಯಾಂಪ್ ಮತ್ತು ಗ್ರಾಮಗಳ ಎಲ್ಲಾ ರೈತ ಶೇರುದಾರರು ಹೋರಾಟ ನಡೆಸಿ, ಸಂಘದಲ್ಲಿ ರಾಜಕೀಯ ನುಸುಳಿ, ಕುತಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.

    ಸೊಸೈಟಿಯ ಚುನಾವಣೆ ಪ್ರಾರಂಭವಾಗುತ್ತದೆ ಎನ್ನುವ ಮುನ್ಸೂಚನೆ ಅರಿತಿದ್ದ ಗ್ರಾಮಸ್ಥರಿಗೆ ಅಸಲಿ ವಿಷಯ ತಿಳಿದಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ನಿಗದಿತ ವೇಳೆ ಪ್ರಾರಂಭವಾಗುತ್ತಿದ್ದಂತೆ ಅರ್ಹತೆ, ಅರ್ನಹತೆ ಬಗ್ಗೆ ಸಂಘದ ನೋಟಿಸ್ ಬೋರ್ಡಿನಲ್ಲಿ ಬಹಿರಂಗಗೊಂಡಿದ್ದರಿಂದ ಸೊಸೈಟಿ ಮುಂದೆ ನೂರಾರು ರೈತರು ಜಮಾಗೊಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನದ ಹಕ್ಕು ಕಳೆದುಕೊಂಡ ನೂರಾರು ರೈತರು ರಸ್ತೆ ಮಧ್ಯದಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ರೈತರಿಗೆ ಸಹಾಯ, ಸಹಕಾರಕ್ಕೆ ಅನುಕೂಲವಾಗಬೇಕಾಗಿದ್ದ ಸೊಸೈಟಿಯಲ್ಲಿ ರಾಜಕೀಯ ನುಸುಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಇಡೀ ಚುನಾವಣೆ ಪ್ರಕ್ರಿಯೆ ಬಹಿಷ್ಕರಿಸಲು ತೀರ್ಮಾನಿಸಿದರು. ಜೊತೆಗೆ ಸೊಸೈಟಿ ಕೇವಲ ವ್ಯವಸ್ಥಿತ ಗುಂಪಿನ ಕಪಿಮುಷ್ಠಿಯೊಳಗೆ ಸೇರುವ ಹುನ್ನಾರವಿದು ಎಂದು ಆತಂಕ ವ್ಯಕ್ತಪಡಿಸಿದರು. ಚುನಾವಣೆ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು, ಸೊಸೈಟಿಯವರ ಕುತಂತ್ರದಿಂದ ಸಿದ್ಧಪಡಿಸಿದ ಅವೈಜ್ಞಾನಿಕ ಪ್ರಕಟಣೆಯನ್ನು ಸಂಪೂರ್ಣ ರದ್ದುಗೊಳಿಸಿ ಹೊಸ ಪಟ್ಟಿ ತಯಾರು ಮಾಡಿ. ಎಲ್ಲ ರೈತರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಅವಕಾಶ ಕೊಡಿ ಎಂದು ಒತ್ತಾಯಿಸಿ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

    ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೂ ಮುನ್ನ ಸಾಲಗಾರರು ಮತ್ತು ಸಾಲಗಾರರಲ್ಲದವರ ಪಟ್ಟಿ ಮಾಡಲಾಗಿದೆ. ಒಟ್ಟು 1,289 ಶೇರುದಾರ ಮತದಾರರು ಇದ್ದಾರೆ. ಅದರಲ್ಲಿ 864 ಜನ ಸಾಲಗಾರರಲ್ಲದ ಕ್ಷೇತ್ರದ ಮತದಾರರು. 485 ಜನರು ಸಾಲಗಾರರ ಕ್ಷೇತ್ರದ ಮತದಾರರು. ಒಟ್ಟು 1,289 ಮತದಾರರು ಈ ಸೊಸೈಟಿಯ ವ್ಯವಹಾರಕ್ಕೆ ಒಳಪಟ್ಟವರಾಗಿದ್ದಾರೆ. ಆದರೆ ಸೊಸೈಟಿ ಆಡಳಿತ ಮಂಡಳಿ ಕೇವಲ 111 ಜನರನ್ನು ಮಾತ್ರ ಚುನಾವಣೆಗೆ ಅರ್ಹರು ಎಂದು ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ ಸಾಲಗಾರರ ಕ್ಷೇತ್ರದ 85 ಮತದಾರರು ಮತ್ತು ಸಾಲಗಾರರಲ್ಲದ 26 ಮಂದಿಯನ್ನು ಸೇರಿಸಿ ಒಟ್ಟು 111 ಜನರನ್ನು ಮಾತ್ರ ಚುನಾವಣೆ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಸಹಕಾರಿ ಕಾಯ್ದೆ ಅಡಿಯಲ್ಲಿ ಅರ್ಹರನ್ನಾಗಿ ಮಾಡಿದ್ದಾರೆ. ಈ ಗೊಂದಲದ ಹಿನ್ನೆಲೆ ಚುನಾವಣೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

    ಇದರಿಂದಾಗ 1,178 ರೈತರು ಎಲ್ಲಾ ಅರ್ಹತೆ ಹಕ್ಕು ಕಳೆದುಕೊಂಡಿದ್ದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಸೈಟಿಯ ಈ ನಡೆಯನ್ನು ಖಂಡಿಸಿ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕರಿಸಲು ಸಿದ್ಧರಾಗಿದ್ದಾರೆ. ಸೊಸೈಟಿಯ ಆಡಳಿತ ಮಂಡಳಿ ತಮಗೆ ಬೇಕಾದವರಿಗೆ ಮಾತ್ರ ಅರ್ಹತೆ ನೀಡಿ ಸರ್ಕಾರದ ನೀತಿ ನಿಯಮಾವಳಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಐದು ವರ್ಷದಲ್ಲಿ ನಮಗೆ ಸಾಮಾನ್ಯ ಸಭೆ ಕುರಿತಾಗಿ ಒಂದು ದಿನವೂ ಸರಿಯಾದ ಮಾಹಿತಿ ನೀಡದೆ ನಮ್ಮನ್ನು ದಾರಿ ತಪ್ಪಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.