Tag: ಸೈಮನ್ ಕ್ಯಾಟಿಚ್

  • ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್

    ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.

    ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ ಮರಳುವ ಕುರಿತು ಖಚಿತತೆ ಇಲ್ಲ. ಈ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಬಿಸಿಸಿಐ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಟೂರ್ನಿ ಆಯೋಜಿಸಲು ಬೇರೆ ಬೇರೆ ಮಾರ್ಗಗಳತ್ತ ಚಿಂತನೆ ನಡೆಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸುವ ಚಿಂತನೆಯಲ್ಲಿದೆ ಎನ್ನಲಾಗಿದೆ.

    ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್, ಟೂರ್ನಿ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದರೆ ಅದು ಆರ್ ಸಿಬಿಗೆ ನೆರವಾಗಲಿದೆ. ಒಂದೊಮ್ಮೆ ಐಪಿಎಲ್ ವಿದೇಶಿ ನೆಲದಲ್ಲಿ ನಡೆದರೆ ತಂಡಕ್ಕೆ ತುಂಬಾ ಸಂತೋಷವಾಗುತ್ತದೆ. ಆರ್‌ಸಿಬಿ ಮಾತ್ರವಲ್ಲದೇ ಇದು ಹಲವು ತಂಡಗಳಿಗೆ ಸಹಕಾರಿ ಆಗಲಿದೆ. ಏಕೆಂದರೆ ನಮ್ಮ ತಂಡದಲ್ಲಿ ಎರಡು ದೇಶದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ತಮ್ಮ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಹೆಚ್ಚಿಸುತ್ತದೆ ಎಂದಿದ್ದಾರೆ. ಅಲ್ಲದೇ 2020ರ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ತಂಡದಲ್ಲಿ ಎಬಿ ಡಿಲಿಯರ್ಸ್ (ದಕ್ಷಿಣ ಆಫ್ರಿಕಾ), ಅರೋನ್ ಫಿಂಚ್ (ಆಸ್ಟ್ರೇಲಿಯಾ), ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ)ದ ವಿದೇಶಿ ಆಟಗಾರರು ಇದ್ದಾರೆ. ಈಗಾಗಲೇ 2020ರ ಐಪಿಎಲ್ ಟೂರ್ನಿ ಆಯೋಜಿಸಲು ತಾವು ಸಿದ್ಧರಾಗಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‍ ಟೂರ್ನಿ ಐಪಿಎಲ್ ಆಯೋಜಿಸುವ ಅವಕಾಶವನ್ನು ಯಾವುದೇ ದೇಶ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಕೂಡ ಈ ರೇಸ್‍ನಲ್ಲಿದೆ ಎನ್ನಲಾಗಿದೆ. 2009ರಲ್ಲಿ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೇ 2014ರ ಟೂರ್ನಿಯ ಕೆಲ ಪಂದ್ಯಗಳು ಯುಎಇನಲ್ಲಿ ನಡೆಸಲಾಗಿತ್ತು.

  • ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಪ್ ಗೆಲ್ಲುವುದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತಂದಿದೆ.

    ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್, ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

    ಆರ್‌ಸಿಬಿ ಫ್ರಾಂಚೈಸಿ ನೂತನ ಮುಖ್ಯ ಕೋಚ್ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದಾರೆ. ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್‍ರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಸದ್ಯ ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಸೈಮನ್ ಕ್ಯಾಟಿಚ್ ಅವರು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ಆಗಿದ್ದರು. ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

    ಆಶಿಶ್ ನೆಹ್ರಾ ಹಾಗೂ ಕರ್ಸ್ಟನ್ ಅವರು 2011ರ ವಿಶ್ವಕಪ್ ವಿಜೇತ ಭಾರತೀಯ ತಂಡದೊಂದಿಗೆ ಗುರುತಿಸಿಕೊಂಡಿದ್ದರು. ಆಗ ನೆಹ್ರಾ ತಂಡದಲ್ಲಿ ಬೌಲರ್ ಮತ್ತು ಕರ್ಸ್ಟನ್ ಭಾರತದ ತಂಡದ ಮುಖ್ಯ ಕೋಚ್ ಆಗಿದ್ದರು. ಹೀಗಾಗಿ ಈ ಜೋಡಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಐಪಿಎಲ್ 12 ಆವೃತ್ತಿಗಳಲ್ಲಿ ಯಾವುದರಲ್ಲಿಯೂ ಆರ್‌ಸಿಬಿ ಗೆಲುವು ಸಾಧಿಸಿಲ್ಲ. ಹೀಗಾಗಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ ತರಲಾಗಿದೆ ಎಂದು ವರದಿಯಾಗಿದೆ.

    2018ರಲ್ಲಿ ನ್ಯೂಜಿಲೆಂಡ್‍ನ ಡೇನಿಯಲ್ ವೆಟೋರಿ ಬದಲಿಗೆ ಗ್ಯಾರಿ ಕರ್ಸ್ಟನ್ ಅವರಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಅವರ ತರಬೇತಿ ಅಡಿ ತಂಡದ ಸಾಧನೆ ನಿರಾಶಾದಾಯಕವಾಗಿತ್ತು. 2016ರಲ್ಲಿ ಫೈನಲ್‍ಗೆ ತಲುಪಿತ್ತು. ಆ ಬಳಿಕ ನಡೆದ 2018ರ ಹಾಗೂ 2019ರ ಆವೃತ್ತಿಯಲ್ಲಿ ಕ್ರಮವಾಗಿ ಆರು, ಎಂಟನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರಿಗೆ ಇದುವರೆಗೂ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಕ್ಯಾಟಿಚ್ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಹೆಸ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತರಬೇತುದಾರರಾಗಿದ್ದರು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಸಿಬಿ ತಂಡದ ಅಧ್ಯಕ್ಷ ಸಂಜೀವ್ ಚುರಿವಾಲಾ, ಬೆಂಗಳೂರು ತಂಡವು ವಿಶ್ವಾಸಾರ್ಹ, ಗೌರವಾನ್ವಿತ ಮತ್ತು ಅತ್ಯುತ್ತಮ ಟಿ-20 ಫ್ರ್ಯಾಂಚೈಸ್ ಆಗಿದೆ. ಹೆಸ್ಸನ್ ಮತ್ತು ಕ್ಯಾಟಿಚ್ ಇಬ್ಬರೂ ನಮ್ಮನ್ನು ವಿಜೇತ ತಂಡವನ್ನಾಗಿ ಮಾಡಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಕ್ಯಾಟಿಚ್ ಅವರ ಅನುಭವ ಮತ್ತು ಬಲವಾದ ತಂಡಗಳನ್ನು ನಿರ್ಮಿಸಿದ ಹೆಸ್ಸನ್ ಅವರ ಅನುಭವವು ನಮ್ಮನ್ನು ಗೆಲ್ಲುವ ತಂಡವನ್ನಾಗಿ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಗೆಲ್ಲದ ತಂಡಗಳು:
    ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‍ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

    2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ (2008)ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ.