Tag: ಸೈಬರ್ ವಾರ್

  • ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

    ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

    ಇದು ಮಾಹಿತಿಯ ಯುಗ ಎಲ್ಲ ಕಡೆಗಳಿಂದ ಎಲ್ಲ ಸಮಯದಲ್ಲೂ ಮಾಹಿತಿಯ ಮಹಾಪೂರವೇ (Information Wealth) ನಮ್ಮತ್ತ ಹರಿದು ಬರುತ್ತಿರುತ್ತದೆ. ಮೊಬೈಲ್‌ನಲ್ಲಿ ಅರೆಕ್ಷಣ ಇಂಟರ್ನೆಟ್‌ ಆನ್‌ ಇದ್ದರೆ ಸಾಕು ಫೇಸ್‌ಬುಕ್‌ ಗೋಡೆ ಮೇಲೆ ನಿಮಿಷಕ್ಕೆ ಸಾವಿರಾರು ಹೊಸ ಪೋಸ್ಟುಗಳು, ಲಕ್ಷಗಟ್ಟಲೇ ಟ್ವೀಟುಗಳು, ವಾಟ್ಸಪ್‌ (Whats up) ಸಂದೇಶಗಳು, ಇನ್‌ಸ್ಟಾಗ್ರಾಮ್‌ ಚಿತ್ರಗಳು, ಯೂಟ್ಯೂಬ್‌ ವೀಡಿಯೋಗಳೆಲ್ಲ ಟಿಂಗ್‌ ಎನ್ನುವ ಶಬ್ಧದೊಂದಿಗೆ ಬಂದು ಬೀಳುತ್ತದೆ.

    ನಮಗೆ ಬರುವ ಮಾಹಿತಿಗಳೆಲ್ಲವೂ ಒಳ್ಳೆಯದೇ ಆಗಿದ್ದರೆ ಸಿನಿಮಾ ಹ್ಯಾಪಿ ಎಂಡಿಂಗ್‌ನಂತೆ ಒಳ್ಳೆಯದ್ದೇ ಆಯ್ತಲ್ಲ ಅಂದುಬಿಡಬಹುದು. ಆದ್ರೆ ವಾಟ್ಸಪ್‌ನಲ್ಲಿ ಅದೆಷ್ಟೊ ಸುಳ್ಳುಗಳು ನಮಗೆ ಕಾಣಸಿಗುತ್ತವೆ. ಕಂಪ್ಯೂಟರ್‌ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ಭಯೋತ್ಪಾದನೆ ಬಗ್ಗೆ ಬೆಚ್ಚಿಬೀಳಿಸುವ ಸಂಗತಿ, ಉಚಿತ ಆಫರ್‌ಗಳ ಆಮಿಷ ಇನ್ನೂ ಏನೇನೋ.. ಜಾಲ ಲೋಕದಲ್ಲಿ ಬರುವ ಮಾಹಿತಿಗಳೆಲ್ಲ ಪಟ್ಟಂತ ಹಂಚಿಬಿಡುವ ಹವ್ಯಾಸ ನಮ್ಮದಾಗಿದೆ. ಆದ್ರೆ ಈಗ ಮನುಷ್ಯ ಮಾಡುವ ಕೆಲಸಗಳೆಲ್ಲವನ್ನು ಎಐ ಎಂಬ ಯಂತ್ರವೊಂದು ಮಾಡುವ ಕಾಲವೂ ಬಂದುಬಿಟ್ಟಿದೆ. ನೂರು ಮನುಷ್ಯರು ಒಂದು ಗಂಟೆ ಮಾಡುವ ಕೆಲಸವನ್ನು ಕೃತಕ ಬುದ್ಧಿಮತ್ತೆ (Artificial Intelligence) ಯಂತ್ರ ಥಟ್ಟಂತ ಮಾಡಿಬಿಡುತ್ತದೆ ಎಂದು ತಂತ್ರಜ್ಞರು ಹೇಳುತ್ತಾರೆ. ಈಗಾಗಲೇ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದರ ಬಳಕೆ ಚಾಲ್ತಿಗೆ ಬಂದುಬಿಟ್ಟಿದೆ. ಆದ್ರೆ ಮಿತಿ ಮೀರಿದ ಎಐ ಬಳಕೆಯು ಮುಂದೆ ವಿಶ್ವಕ್ಕೆ ಅಪಾಯ ತಂದೊಡ್ಡಬಹುದೇ ಎನ್ನುವ ಆಂತಕ ಈಗ ತಂತ್ರಜ್ಞರಲ್ಲೇ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವೂ ಇದೆ.

    ಹೌದು. ಚೀನಾ ಮತ್ತು ರಷ್ಯಾದ ಹ್ಯಾಕರ್‌ಗಳು (Russian Hackers) ಅಮೇರಿಕದ ಎಐ ಗಳನ್ನು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದು, ಈ ಮೂಲಕ ದೇಶದ ರಹಸ್ಯಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಹಾಗಾಗಿ ತನ್ನ ದೇಶದ ರಸಹ್ಯಗಳನ್ನು ಕಾಪಾಡಿಕೊಳ್ಳಲು ಮುಂದಾಗಿರುವ ಅಮೆರಿಕ ರಷ್ಯಾ ಮತ್ತು ಚೀನಾ ದೇಶಗಳಂತಹ ಪ್ರಬಲ ಹ್ಯಾಕರ್‌ಗಳಿಂದ ಉಂಟಾಗುವ ಸೈಬರ್‌ ದಾಳಿಗಳಿಂದ ಎಐಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ನಡುವೆ ಸುಧಾರಿತ ಎಐ ಅಧ್ಯಯನ ಮಾಡಲು ಹೊರಟ ತಂತ್ರಜ್ಞರಿಗೆ ಕಳವಳಗಳು ವ್ಯಕ್ತವಾಗಿದೆ. ಏಕೆಂದರೆ AI ಅಧಿಕ ಪ್ರಮಾಣದ ಮಾಹಿತಿಗಳನ್ನು ಕಡಿಮೆ ಸಮಯದಲ್ಲಿ ತಿರುವು ಹಾಕಿ ಅಗತ್ಯವಿರುವಷ್ಟು ಮಾತ್ರ ನಮ್ಮ ಮುಂದಿಡುತ್ತದೆ. ಜೊತೆಗೆ ಅಗತ್ಯಕ್ಕಿಂತಲೂ ಹೆಚ್ಚಿನ ವಸ್ತುವಿಷಯಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಈ ಎಐ ಬಳಕೆ ಮಿತಿ ಮೀರಿದರೆ, ಅದು ಹ್ಯಾಕರ್‌ಗಳ ಕೈಗೆ ಸಿಕ್ಕರೆ ಏನೆಲ್ಲಾ ಅಪಾಯ ಸಂಭವಿಸಬಹುದು ಎಂಬುದನ್ನ ಅವಲೋಕಿಸಿದ್ದಾರೆ. ಅವುಗಳನ್ನು ನೋಡೋಣ…

    ಬಯೋ ವಾರ್‌:
    ಸುಧಾರಿತ ಎಐ ತಂತ್ರಜ್ಞಾನ ದುರುಪಯೋಗದ ಅಪಾಯಕಾರಿ ಅಂಶವೆಂದರೆ ಜೈವಿಕ ಶಸ್ತ್ರಾಸ್ತ್ರಗಳ ರಚನೆ ಮತ್ತೊಂದು ಅರ್ಥದಲ್ಲಿ ಇದನ್ನು ಬಯೋ ವಾರ್‌ ಎಂತಲೂ ಕರೆಯಬಹುದು. ಸುಧಾರಿತ ತಂತ್ರಜ್ಞಾನ (Advanced AI) ಬಳಕೆಯೂ ಇದಕ್ಕೆ ಕಾರಣವಾಗುತ್ತಿದೆ. ತಂತ್ರಜ್ಞರು ಹೇಳುವಂತೆ ಸುಧಾರಿತ ಕೃತಕ ಬುದ್ಧಿಮತ್ತೆ ಸಾಮರ್ಥ್ಯವು ತಪ್ಪು ಕೈಗೆ ಸಿಕ್ಕರೆ ಅದು ವಿಶ್ವದ ವಿನಾಶಕ್ಕೆ ಕಾರಣವಾಗಬಹುದು ಎಂದು ಅಮೇರಿಕ ಗುಪ್ತಚರ ಇಲಾಖೆ ಎಚ್ಚರಿಸಿದೆ. ಸುಧಾರಿತ ಎಐ ಗಳಿಂದ ಸಂಶೋಧಕರು ಗ್ರೈಫೋನ್ ಸೈಂಟಿಫಿಕ್ ಮತ್ತು ರಾಂಡ್ ಕಾರ್ಪೊರೇಷನ್ ದೊಡ್ಡ ಭಾಷಾ ಮಾದರಿ (LLM) ಆಧಾರಿತ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪಠ್ಯ ವಿಷಯವನ್ನು ಅಳವಡಿಸಿರಬಹುದು. ಆದ್ರೆ ಭಯೋತ್ಪಾದಕರು ಇದನ್ನು ಸುಲಭವಾಗಿ ಹ್ಯಾಕ್‌ ಮಾಡುವ ಮೂಲಕ ಬಯೋ ವೆಪನ್‌ಗಳ ತಯಾರಿಕೆಗೆ ಬಳಸಿಕೊಳ್ಳಬಹುದು, ಹಾಗಾಗಿ ಸುಧಾರಿತ ಎಐಗಳು ಹ್ಯಾಕಿಂಗ್‌ಗೆ ಒಳಪಡದಂತೆ ನೋಡಿಕೊಳ್ಳುವುದು ಅಷ್ಟೇ ಸೂಕ್ತ ಎಂಬುದು ತಜ್ಞರ ಸಲಹೆ.

    ಸೈಬರ್ ವಾರ್‌
    ಮತ್ತೊಂದು ಅಪಾಯಕಾರಿ ಅಂಶವೆಂದರೆ ಸೈಬರ್‌ ವಾರ್‌ (Cyber War). ಹಿಂದೆ ಈ ಜಗತ್ತು ವೆಪನ್‌ ವಾರ್‌, ಬಯೋವಾರ್‌ಗಳನ್ನ ಕಂಡಿದೆ. ಅದ್ರೆ ಇದು ಸೈಬರ್‌ ವಾರ್‌ ಸವಾಲುಗಳನ್ನು ಎದುರಿಸಬೇಕಿದೆ. ಏಕೆಂದರೆ ಮಿತಿಮೀರಿದ ಎಐ ಬಳಕೆಗಳು ವಿಶ್ವದ ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಎಐ ಮಾದರಿಗಳು ವೈದ್ಯಲೋಕಕ್ಕೆ ಪೂರಕ ಮಾಹಿತಿಗಳನ್ನು ಒದಗಿಸುವುರಿಂದ ಕಿಡಿಗೇಡಿಗಳು ವೈರಸ್‌ಗಳನ್ನು ಸೃಷ್ಟಿಸಬಹುದು. ದೊಡ್ಡಮಟ್ಟದ ಸೈಬರ್‌ ದಾಳಿಗಳನ್ನು ನಡೆಸಬಲ್ಲ ಸಾಧನಗಳನ್ನು ಸೃಷ್ಟಿಸುವ ಸಾಧ್ಯತೆಗಳು ಇವೆ. ಈ ಮೂಲಕ ಮತ್ತೊಂದು ದೇಶದ ರಹಸ್ಯವನ್ನು ಭೇದಿಸಿ ವಿಶ್ವದ ವಿನಾಶವೂ ಸಂಭವಿಸಬಹುದು. ಆದ್ದರಿಂದ ಎಐ ಬಳಕೆಯೊಂದಿಗೆ ಸುರಕ್ಷತಾ ಕ್ರಮಗಳನ್ನು ಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

    ಡೀಪ್‌ ಫೇಕ್‌:
    ಸುಧಾರಿತ ಎಐ ತಂತ್ರಜ್ಞಾನದ ಮತ್ತೊಂದು ಅಪಾಯಕಾರಿ ಸಂಗತಿಯೆಂದರೆ ಡೀಪ್‌ ಫೇಕ್‌ಗಳನ್ನು (Deepfakes) ಸೃಷ್ಟಿಸಿ ವದಂತಿಗಳನ್ನು ಹಬ್ಬಿಸುವುದು. ಇತ್ತೀಚೆಗೆ ಭಾರತದಲ್ಲೂ ಇದು ಹೆಚ್ಚಾಗಿದೆ. ಈ ಡೀಪ್‌ ಫೇಕ್‌ನೊಂದಿಗೆ ಮತ್ತೊಬ್ಬರನ್ನ ಅಪರಾಧ ಕೃತ್ಯಗಳಿಗೆ ಸಿಲುಕಿಸುವ ತಂತ್ರವನ್ನು ಸೈಬರ್‌ ದಾಳಿಕೋರರು ಮಾಡುತ್ತಾರೆ.

    ಏನಿದು ಡೀಪ್‌ಫೇಕ್‌ ತಂತ್ರಜ್ಞಾನ?
    ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖದ ಚಹರೆಯನ್ನು ಜೋಡಿಸಿ ಎಡಿಟಿಂಗ್‌ ಮಾಡುತ್ತಿದ್ದ ಫೋಟೋ, ವೀಡಿಯೋಗಳು ಸಾಮಾನ್ಯವಾಗಿದ್ದವು. ಇವು ಎಡಿಟಿಂಗ್‌ ಆಗಿರುವ ಫೋಟೋ/ವೀಡಿಯೋ ಎಂಬುದು ನೋಡಿದಾಕ್ಷಣ ತಿಳಿಯುತ್ತಿತ್ತು. ಇಲ್ಲವೇ ಸ್ವಲ್ಪವಾದರೂ ಅನುಮಾನ ಮೂಡುತ್ತದೆ. ಆದರೆ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಆ ಯಾವುದೇ ಅನುಮಾನ ಬರುವುದಿಲ್ಲ. ಆ ರೀತಿ ಫೋಟೋ/ವೀಡಿಯೋ ಎಡಿಟ್‌ ಮಾಡಲಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮುಖಕ್ಕೆ ಕೊಂಚವೂ ವ್ಯತ್ಯಾಸ ಇಲ್ಲದಂತೆ ವೀಡಿಯೋಗಳನ್ನ ಸೃಷ್ಟಿಸಲಾಗುತ್ತದೆ. ವೀಡಿಯೋ ನೋಡಿದರೆ ‘ಇದು ಬೇರೆ ಯಾರೂ ಅಲ್ಲ.. ಅವರೇ’ ಎನ್ನುವಷ್ಟು ನಿಖರತೆಯಿಂದ ಕೂಡಿರುತ್ತದೆ. ಈ ಮೂಲಕ ಸುಲಭವಾಗಿ ವದಂತಿಗಳನ್ನು ಹಬ್ಬಿಸಬಲಾಗುತ್ತದೆ.

    ಎಐ (ಕೃತಕ ಬುದ್ದಿಮತ್ತೆ) ಮಷಿನ್‌ ಲರ್ನಿಂಗ್‌ ಸಹಾಯದಿಂದ ಮಾರ್ಫಿಂಗ್‌ ವೀಡಿಯೋ, ಫೋಟೋ ಸೃಷ್ಟಿಸುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯಂತೆಯೇ ಸೇಮ್‌ ಟು ಸೇಮ್‌ ಡೂಪ್‌ ಸೃಷ್ಟಿಸಬಹುದು. ವೀಡಿಯೋ/ಫೋಟೋ ನೋಡಿದಾಗ ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ತಿಳಿಯುವುದೇ ಇಲ್ಲ. ಈ ತಂತ್ರಜ್ಞಾನ ಬಳಸಿ ಯಾರನ್ನು ಬೇಕಾದರೂ ಸ್ಕ್ರೀನ್‌ ಮೇಲೆ ತೋರಿಸಬಹುದು. ಹಿಂದಿ, ಇಂಗ್ಲಿಷ್‌ ಅಷ್ಟೇ ಬರುವ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದಂತೆಯೂ, ಹಾಡಿದಂತೆಯೂ ತೋರಿಸಬಹುದು. ಕೆಲವೊಮ್ಮೆ ಈ ತಂತ್ರಜ್ಞಾನ ಲಾಭದಾಯಕ ಎನಿಸುತ್ತದೆ. ಆದರೆ ಅಷ್ಟೇ ದುರ್ಬಳಕೆ ಕೂಡ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ರಶ್ಮಿಕಾ ಮಂದಣ್ಣ ಪ್ರಕರಣ, ಪ್ರಧಾನಿ ಮೋದಿ ಅವರ ಭಾಷಣ, ಮಾತ್ರವಲ್ಲದೇ ಬಾಲಿವುಡ್‌ ನಟ ನಟಿಯರನ್ನೂ ಡೀಪ್‌ ಫೇಕ್‌ಗೆ ಒಳಪಡಿಸಿರುವುದು.

    ಡೀಪ್‌ಫೇಕ್‌ ಅಪರಾಧಕ್ಕೆ ಶಿಕ್ಷೆ ಏನು?

    ಡೀಪ್‌ಫೇಕ್ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಈ ಅಪರಾಧದ ವಿರುದ್ಧ ಇತರ ಹಲವಾರು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬಹುದು.

    * ಐಟಿ ಕಾಯಿದೆ: ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್‌ 66ರ ಪ್ರಕಾರ, ಐಡೆಂಟಿಫಿಕೇಷನ್‌ ಥೆಫ್ಟ್‌ (ಗುರುತು ಕಳವು) ಮಾಡಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದಕ್ಕೆ 3 ವರ್ಷ ಜೈಲು ಶಿಕ್ಷೆ. ಜೊತೆಗೆ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

    * ಐಟಿ ಕಾಯ್ದೆ ಸೆಕ್ಷನ್‌ 66ಇ ಪ್ರಕಾರ, ಖಾಸಗಿ ಹಕ್ಕು ಉಲ್ಲಂಘನೆಗಾಗಿ 3 ವರ್ಷ ಜೈಲು ಮತ್ತು 2 ಲಕ್ಷದ ವರೆಗೆ ದಂಡ ವಿಧಿಸಲಾಗುವುದು.

    * ಹಕ್ಕುಸ್ವಾಮ್ಯ ಕಾಯ್ದೆ, 1957: ಕಾಯ್ದೆಯ ಸೆಕ್ಷನ್ 51 ವಿಶೇಷ ಹಕ್ಕನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ಬಳಸಿದಾಗ ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ.

    * ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 153ಎ (ಧರ್ಮ, ಜಾತಿ ಮತ್ತಿತರ ಹೆಸರಿನಲ್ಲಿ ನಿಂದನೆ) ಮತ್ತು 295ಎ (ಉದ್ದೇಶಪೂರ್ವಕವಾಗಿ ಅಪಮಾನಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು.

    * ಕಾಪಿ ರೈಟ್‌ ಕಾಯ್ದೆ 1957ರ ಸೆಕ್ಷನ್‌ 16ರ ಪ್ರಕಾರ ವೀಡಿಯೋ ದುರ್ಬಳಕೆ ಮಾಡಿಕೊಂಡರೆ 3 ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಬಹುದು.

  • ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ವಾಷಿಂಗ್ಟನ್: ರಷ್ಯಾ ಉಕ್ರೇನ್ ವಿರುದ್ಧ ನಿನ್ನೆಯಿಂದ ದಾಳಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾ ಸರ್ಕಾರದ ವಿರುದ್ಧ ವಿಶ್ವದಾದ್ಯಂತ ಟೆಕ್ಕಿಗಳು `ಸೈಬರ್ ವಾರ್’ ಘೋಷಣೆ ಮಾಡಿದ್ದಾರೆ.

    ಅನಾನಿಮಸ್ ಹ್ಯಾಕಿಂಗ್ ಗ್ರೂಪ್, ರಷ್ಯಾ ಸರ್ಕಾರದ ವಿರುದ್ಧ ಸೈಬರ್ ವಾರ್ ಮಾಡುವುದಾಗಿ ನಿನ್ನೆ ರಾತ್ರಿ ಘೋಷಿಸಿದೆ. ಬ್ರಿಟನ್‍ನಲ್ಲಿ ಪ್ರಸಾರವಾಗುವ ಕ್ರೆಮ್ಲಿನ್ ಬೆಂಬಲಿತ ಟಿವಿ ಚಾನೆಲ್ RT ವೆವ್‍ ಸೆಟ್ ಅನ್ನು ಹ್ಯಾಕ್ ಮಾಡಿದೆ. ಸಂಬಂಧಪಟ್ಟವರು ವೆವ್‍ ಸೆಟ್ ಪ್ರವೇಶಿಸಲು ಪ್ರಯತ್ನಿಸಿದಾಗ, ಇನ್‍ಆಕ್ಷೆಸಬಲ್ ಆಗಿದೆ. ಅಲ್ಲದೇ ವೆವ್‍ ಸೆಟ್ ಎರರ್ ಎಂದು ತೋರಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Hacking Collective Anonymous Declares 'Cyber War' Against Vladimir Putin's Government

    ಪುಟಿನ್ ಸರ್ಕಾರದ ವಿರುದ್ಧ ‘ಅನಾನಿಮಸ್’ ಸೈಬರ್ ವಾರ್ ಘೋಷಣೆ ಮಾಡಿದ್ದು, ರಷ್ಯಾದ ಪ್ರಚಾರ ಕೇಂದ್ರ RT ನ್ಯೂಸ್ ವೆವ್‍ ಸೆಟ್ ತೆಗೆದುಕೊಳ್ಳಲಾಗಿದೆ ಎಂದು ಬರೆದು ಟ್ವೀಟ್ ಮಾಡಲಾಗಿದೆ. ‘ಅನಾನಿಮಸ್’ ಈ ಹಿಂದೆ ಕು ಕ್ಲುಕ್ಸ್ ಕ್ಲಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿಗಳ ಗುಂಪಿಗೆ ಸೇರಿದವರನ್ನು ಗುರಿಯಾಗಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು, ಥ್ಯಾಂಕ್ಸ್ `ಅನಾನಿಮಸ್’, ಅವರ ಹಣಕಾಸು ಬರಿದಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅದ್ಭುತ, ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಥ್ಯಾಂಕ್ಸ್, ಲವ್ ಯೂ, ಇದು ನಿಜವಾಗಿಯೂ ಖುಷಿಯಾದ ವಿಷಯ ಎಂದು ಹೇಳಿದ್ದಾರೆ.

    ಪ್ರಸ್ತುತ ಈ ಹ್ಯಾಕರ್ಸ್ ‘ಅನಾನಿಮಸ್’ ಎಂದು ಹೆಸರಿಟ್ಟುಕೊಂಡಿದ್ದಾರೆ. ಅವರನ್ನು ಗೈ ಫಾಕ್ಸ್ ಮುಖವಾಡಗಳಿಂದ ಗುರುತಿಸಲಾಗುತ್ತದೆ. ಕಳೆದ ವರ್ಷ ಜುಲೈನಲ್ಲಿ, ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರಿಗೂ ಹ್ಯಾಕರ್‍ಗಳು ಎಚ್ಚರಿಕೆ ನೀಡಿದ್ದರು. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಿದ್ದೇವೆ ಎಂಬ ಮಸ್ಕ್ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಅನಾನಿಮಸ್ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಸೈಬರ್ ಯುದ್ಧ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ರಷ್ಯಾವನ್ನು ವ್ಯವಸ್ಥಿತ ಹ್ಯಾಕಿಂಗ್ ಪ್ರಯತ್ನಗಳಿಗೆ ಒಳಪಡಿಸುವ ನಿರೀಕ್ಷೆಯನ್ನು ಹುಟ್ಟುಹಾಕಲಾಗಿದೆ.

  • ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಜೋರಾಗಿದೆ. ನಾವು ಸೈಬರ್ ವಾರ್ ಆರಂಭಿಸುತ್ತೇವೆ ಎಂದು ಟ್ರಂಪ್ ಘೋಷಿಸಿಕೊಂಡ ಬೆನ್ನಲ್ಲೇ ಈ ಹಿಂದಿನ ನಿಮ್ಮ ಎಡವಟ್ಟನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಇರಾನ್ ತಿರುಗೇಟು ನೀಡಿದೆ.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ವ್ಯಕ್ತಿ ಅಥವಾ ಅಮೆರಿಕದ ಯಾವುದೇ ಆಸ್ತಿಯನ್ನು ಹಾನಿ ಮಾಡಿದರೆ ಇರಾನ್ ದುಬಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ನಾವು ದಾಳಿ ಮಾಡಲು 52 ವೆಬ್‍ಸೈಟ್ ಗಳನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದರು.

    ಈ ಬೆದರಿಕೆಗೆ ಜಗ್ಗದ ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಸಂಖ್ಯೆ 52ನ್ನು ಉಲ್ಲೇಖಿಸುವ ವ್ಯಕ್ತಿಗಳು ಸಂಖ್ಯೆ 290ನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇರಾನ್ ರಾಷ್ಟ್ರಕ್ಕೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಕದಿರಿ ಎಂದು ಬರೆದು #IR655 ಬಳಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಸಂಖ್ಯೆ 290?
    ಇರಾನ್ ಮತ್ತು ಅಮೆರಿಕ ಮಧ್ಯೆ ಗುದ್ದಾಟ ನಡೆಯುತ್ತಿರುವಾಗಲೇ 1988ರ ಜುಲೈ 3 ರಂದು ಟೆಹರಾನ್ ನಿಂದ ದುಬೈಗೆ ಇರಾನ್ ಏರ್ ಫೈಟ್ 655 ಪ್ರಯಾಣಿಸುತಿತ್ತು. ಈ ವಿಮಾನವನ್ನು ಅಮೆರಿಕ ತನ್ನ ಕ್ಷಿಪಣಿಯನ್ನು ಬಳಸಿ ನೆಲಕ್ಕೆ ಉರುಳಿಸಿತ್ತು. 66 ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 290 ಮಂದಿ ಮೃತಪಟ್ಟಿದ್ದರು. ಎಂದಿನ ಮಾರ್ಗದಲ್ಲಿ ವಿಮಾನ ಸಂಚರಿಸುತ್ತಿದ್ದರೂ ಈ ಪ್ರಯಾಣಿಕ ವಿಮಾನದ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ನಂತರ ತನಿಖೆಯ ವೇಳೆ ಅಮೆರಿಕ ಈ ವಿಮಾನ ಬಾಂಬರ್ ವಿಮಾನ ಎಂದು ತಪ್ಪಾಗಿ ಅರ್ಥೈಸಿಕೊಂಡು ದಾಳಿ ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು.

    ಇರಾನ್ ಈ ವಿಚಾರವನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಅಮೆರಿಕ ಈ ಘಟನೆಯ ಬಗ್ಗೆ ಯಾವುದೇ ಕ್ಷಮೆ ಕೇಳಲಿಲ್ಲ. ಆದರೆ ಅಧ್ಯಕ್ಷ ರೊನಾಲ್ಡ್ ರೇಗನ್ ವಿಷಾದ ವ್ಯಕ್ತಪಡಿಸಿದ್ದರು. ನಂತರ ಅಮೆರಿಕ 61.8 ದಶಲಕ್ಷ ಡಾಲರ್ ಹಣವನ್ನು ಪಾವತಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 213,103.45 ಡಾಲರ್ ನೀಡುತ್ತೇನೆ ಎಂದು ಹೇಳಿತ್ತು. ಈ ವಿಚಾರವನ್ನು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಪ್ರಸ್ತಾಪಿಸಿ ವ್ಯಂಗ್ಯವಾಗಿ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದಾರೆ.

    ಸುಲೇಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಟೆಹರಾನ್ ಪ್ರತಿಜ್ಞೆ ಮಾಡಿದ್ದು ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗಿನ ತನ್ನ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿದೆ.

    ಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, `ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ 575 ಕೋಟಿ ಬಹುಮಾನ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಈ ಕುರಿತು ಪ್ರಸಾರ ಮಾಡಿದೆ.