Tag: ಸೈಬರ್ ಠಾಣೆ

  • ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

    ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ರಮ್ಯಾ – ದರ್ಶನ್ ಅಭಿಮಾನಿಗಳ ವಿರುದ್ಧ FIR

    – ದರ್ಶನ್ ವಿರುದ್ಧವೂ ರಮ್ಯಾ ಕಿಡಿ
    -48 ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜ್

    ಟಿ ರಮ್ಯಾ (Ramya) ಮತ್ತು ದರ್ಶನ್ ಫ್ಯಾನ್ಸ್ (Darshan Fans) ನಡುವಿನ ಕಿತ್ತಾಟ ಇದೀಗ ಪೊಲೀಸ್ ಕಮಿಷನರ್ ಕಚೇರಿ ತಲುಪಿದೆ. ಬರೋಬ್ಬರಿ 48 ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವುದಾಗಿ ರಮ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಅಶ್ಲೀಲ ಮೆಸೇಜ್ ಕಳುಹಿಸಿದವರಿಗೆ ಶಿಕ್ಷೆ ಆಗಲಿದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಜೊತೆಗೆ ನಟ ದರ್ಶನ್ (Darshan) ಮೇಲೆಯೂ ಕಿಡಿಕಾರಿರುವ ರಮ್ಯಾ, ಚಿತ್ರೋದ್ಯಮದಲ್ಲಿ ತಮಗೆ ಯಾರ ಬೆಂಬಲ ಸಿಗದಿದ್ದರೂ ಒಂಟಿ ಹೋರಾಟ ಇದ್ದೇ ಇರುತ್ತದೆ ಅನ್ನುವ ಮಾತುಗಳನ್ನೂ ಆಡಿದ್ದಾರೆ.

    ನಟ ದರ್ಶನ್‌ಗೆ ಸಿಕ್ಕಿರೋ ಜಾಮೀನು ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯರಿಗೆ ನ್ಯಾಯ ಸಿಗುತ್ತೆ ಅಂತ ನಂಬಿದ್ದು ನಿಜವಾಗಿದೆ ಅಂತ ಅವರು ಬರೆದುಕೊಂಡಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅಂತಾನೂ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಆ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು ರಮ್ಯಾ.

    ಬರೋಬ್ಬರಿ 48 ಅಕೌಂಟ್‌ನಿಂದ ಬಂದಿದ್ದ ಅಶ್ಲೀಲ ಮೆಸೇಜ್ ಕುರಿತಂತೆ ಮತ್ತೆ ಕಿಡಿಕಾರಿದ್ದರು ರಮ್ಯಾ. ಇವರಿಗೆ ಕಾನೂನು ಮೂಲಕವೇ ಪಾಠ ಮಾಡಬೇಕು ಅಂತ ನಿರ್ಧಾರಕ್ಕೂ ಬಂದ್ರು. ಹಾಗಾಗಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ರಮ್ಯಾ, ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ಅವರಿಗೆ ಶಿಕ್ಷೆ ಆಗುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೋಗಬೇಕು ಅನ್ನೋ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

    ರಮ್ಯಾ ದೂರಿನಲ್ಲಿದೆ?
    ದರ್ಶನ್ ವಿರುದ್ಧದ ಕೊಲೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಕೋರ್ಟ್ ಕಲಾಪಗಳನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಜಿ ಸಂಸದೆಯಾಗಿ ವಿವಿಧ ಸುದ್ದಿ ವರದಿಯನ್ನು ಹಂಚಿಕೊಂಡಿದ್ದೆ. ಸುಪ್ರೀಂಕೋರ್ಟ್ ಕಾರ್ಯಕಲಾಪದ ವರದಿಯನ್ನ ಹಂಚಿಕೊಂಡಿದ್ದೆ. ಆ ಕಾರಣಕ್ಕಾಗಿ ವಿವಿಧ ಖಾತೆಗಳಿಂದ ಅಸಹ್ಯಕರ ಸಂದೇಶ, ಭಯಾನಕವಾಗಿ ಅವಹೇಳನಕಾರಿ ಸಂದೇಶಗಳನ್ನ ಕಳುಹಿಸಿದ್ದರು. ನನಗೆ ಕಳುಹಿಸಲಾದ ಸಂದೇಶಗಳು ಸ್ತ್ರೀದ್ವೇಷದಿಂದ ಕೂಡಿದ್ದವು. ಅವುಗಳನ್ನ ದೂರಿನಲ್ಲಿ ಉಲ್ಲೇಖಿಸಲು ಸಹ ಸಾಧ್ಯವಾಗ್ತಿಲ್ಲ. ದೂರಿನೊಂದಿಗೆ ಸಂದೇಶಗಳ ಲಿಂಕ್‌ಗಳನ್ನ ಲಗತ್ತಿಸುತ್ತಿದ್ದೇನೆ. ದರ್ಶನ್ ಅಭಿಮಾನಿಗಳ ಪೋಸ್ಟ್ ಅತಿರೇಖವಾಗಿದೆ. ಅವರು ಬಳಸಿರುವ ಭಾಷೆ ಅಶ್ಲೀಲ ಮತ್ತು ಕೊಳಕು, ನನ್ನ ಜೀವಕ್ಕೆ ನೇರ ಬೆದರಿಕೆಯೊಡ್ಡಿವೆ. ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣಕ್ರಮಕೈಗೊಳ್ಳಬೇಕು ಎಂದು ನಾಲ್ಕು ಪುಟಗಳ ದೂರಿನಲ್ಲಿ ನಟಿ ರಮ್ಯಾ ಉಲ್ಲೇಖ ಮಾಡಿದ್ದಾರೆ.

    ಇನ್ನು, ರೇಣುಕಾಸ್ವಾಮಿ ಕೊಲೆ ಆದಾಗಲೇ ದರ್ಶನ್ ತಮ್ಮ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ್ದರೆ, ತಮಗೆ ಇಂದು ಅಶ್ಲೀಲ ಮೆಸೇಜ್ ಬರುತ್ತಿರಲಿಲ್ಲ ಅಂತ ದರ್ಶನ್ ವಿರುದ್ಧವೂ ಕಿಡಿಕಾರಿದ್ದಾರೆ. ಇಷ್ಟು ಕೆಟ್ಟದಾಗಿ ಕಾಮೆಂಟ್ಸ್ ಮಾಡುವ ಫ್ಯಾನ್ಸ್ಗೆ ಬುದ್ಧಿ ಹೇಳುವ ಕೆಲಸ ಮಾಡುವುದು ಅವರ ಜವಾಬ್ದಾರಿಯೂ ಹೌದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ದುರುಳರು ಕಳುಹಿಸಿದ್ದ ಅಶ್ಲೀಲ ಮೆಸೇಜ್ ಕುರಿತಂತೆ ರಮ್ಯಾ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿದ್ದಂತೆ ನಟಿ ರಕ್ಷಿತಾ ಪ್ರೇಮ್ ಕೂಡ ಸಭ್ಯತೆಯ ಪಾಠ ಮಾಡಿದ್ದರು. ಜೊತೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮದೇ ಆದ ರೀತಿಯಲ್ಲಿ ಪೋಸ್ಟ್ ಮಾಡಿದ್ದರು. `ಮೂರ್ಖರನ್ನು ಅವರ ಮಾತಿನಿಂದಲೇ ಗುರುತಿಸಬಹುದು. ಮೌನವು ಬುದ್ಧಿವಂತನ ಲಕ್ಷಣ ಅಂತ ಅರ್ಥ ಬರುವಂಥ ಸಾಲುಗಳ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದು ರಮ್ಯಾಗೆ ಕೊಟ್ಟಿರೋ ಟಾಂಗ್ ಅಂತಾನೇ ಚರ್ಚೆ ಶುರುವಾಗಿತ್ತು. ರಕ್ಷಿತಾ ಮತ್ತು ವಿಜಯಲಕ್ಷ್ಮಿ ತಮ್ಮ ಬೆಂಬಲಕ್ಕೆ ಇದ್ದಾರೆ ಅಂತ ಭಾವಿಸ್ತೇನೆ. ಅವರು ನನಗೆ ಟಾಂಗ್ ಕೊಟ್ಟು ಪೋಸ್ಟ್ ಮಾಡಿಲ್ಲ ಅಂದಿದ್ದಾರೆ ನಟಿ ರಮ್ಯಾ.

    ಅಶ್ಲೀಲ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ನಟ ದರ್ಶನ್ ಫ್ಯಾನ್ಸ್ ವಿರುದ್ಧ ಸೆಂಟ್ರಲ್ ಸೈಬರ್ ಕ್ರೈಂನಲ್ಲಿ ಎಫ್‌ಐಆರ್ ದಾಖಲಾಗಿದೆ. ಎ1 ಪ್ರಮೋದ್ ಗೌಡ ಸೇರಿ 43 ಅಕೌಂಟ್‌ಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 75 – ಲೈಂಗಿಕ ದೌರ್ಜನ್ಯ, ಸೆಕ್ಷನ್ 79 – ಮಹಿಳೆಗೆ ಅಪಮಾನ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಇನ್ನೂ, ಸಿಸಿಬಿ ಜಂಟಿ ಕಮೀಷನರ್ ಅಜಯ್ ಹಿಲೋರಿ, ಡಿಸಿಪಿ ಖಾಸೀಂ ಅವರು, ಸೈಬರ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.

    ಈವರೆಗೂ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಅಶ್ಲೀಲ ಮೆಸೇಜ್ ವಾರ್, ಇದೀಗ ಕಾನೂನು ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ಸ್ವತಃ ರಮ್ಯಾ ಅವರೇ ದೂರು ನೀಡಿದ್ದಾರೆ. ಮತ್ತೊಂದು ಕಡೆ ರಾಜ್ಯ ಮಹಿಳಾ ಆಯೋಗ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.

  • ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

    ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

    ಹುಬ್ಬಳ್ಳಿ: ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಧಾರವಾಡದ ರಾಮನಗರ ನಿವಾಸಿ ರಾಜಶೇಖರ್ ನವಲೂರ ಅವರಿಗೆ ಲಂಡನ್‍ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ, ಅವರಿಂದ 4.49 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.

    ರಾಜಶೇಖರ್ ಅವರ ತಾಯಿಯ ಸಾಮಾಜಿಕ ಜಾಲತಾಣ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್‍ನಿಂದ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದಾನೆ. ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರ ಶುಲ್ಕ ಕಟ್ಟ ಬೇಕು ಎಂದು ನಂಬಿಸಿದ್ದಾನೆ. ಈ ಹಿನ್ನೆಲೆ ಅವರಿಗೆ ರಾಜಶೇಖರ್ ಹಂತಹಂತವಾಗಿ ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ಹಣ ಸಂಪೂರ್ಣವಾಗಿ ಕಟ್ಟಿದ ನಂತರ ಆರೋಪಿ ರಾಜಶೇಖರ್ ಕರೆಗೆ ಸರಿಯಾಗಿ ಪ್ರತಿಕ್ರಿಯೆ ನೀಡಾದೇ ಇದ್ದಾಗ ಅವರಿಗೆ ಮೋಸ ಹೋಗಿರುವುದು ತಿಳಿದಿದೆ. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

    ಈ ಸಂಬಂಧ ರಾಜಶೇಖರ್ ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

    ಇನ್ನೊಂದು ವಂಚನೆ?: ಇತ್ತೀಚೆಗೆ ಸೋಶಿಯಲ್ ಮೀಡಿಯಾ ವೇದಿಕೆಗಳು ಜನರಿಗೆ ಉಪಯೋಗವಾಗುತ್ತಿದ್ದು, ಜೊತೆಗೆ ಕೆಲವರು ಅದನ್ನು ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಒಎಲ್‌ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ಕೂಟಿ ಖರೀದಿಸಲು ಗದಗ ರಸ್ತೆ, ಶಾಲಿನಿ ಪಾರ್ಕ್ ನಿವಾಸಿ ಕೃಷ್ಣಮಂಜರಿ ಕಲಾಲ ಅವರು ಮುಂದಾಗಿದ್ದಾರೆ. ಈ ಹಿನ್ನೆಲೆ ಸ್ಕೂಟಿ ಮಾರಾಟಕ್ಕಿಟ್ಟವರಿಗೆ ಆನ್‍ಲೈನ್‍ನಲ್ಲಿ 21 ಸಾವಿರ ರೂ. ಕಳಿಸಿದ್ದಾರೆ. ನಂತರ ಸ್ಕೂಟಿ ಖರೀದಿಸಲೆಂದು ಅಲ್ಲಿರುವ ನಂಬರ್‍ಗೆ ಸಂಪರ್ಕಿಸಿದ್ದು, ಅವರು ವಂಚಿಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಹೊಸ 30 ಕೋರ್ಸ್ ಆರಂಭ

    ಸ್ಕೂಟಿ ಮಾರಾಟ ಮಾಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಕೃಷ್ಣಮಂಜರಿ ಕಲಾಲ ಅವರು ಹುಬ್ಬಳ್ಳಿಯ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.