Tag: ಸೈನಾ ನೆಹ್ವಾಲ್

  • ದೂರವಾದಾಗಲೇ ಬೆಲೆ ತಿಳಿಯೋದು – ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ

    ದೂರವಾದಾಗಲೇ ಬೆಲೆ ತಿಳಿಯೋದು – ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ

    ಮುಂಬೈ: ಇತ್ತೀಚೆಗಷ್ಟೇ ಪರಸ್ಪರ ಬೇರ್ಪಡುವ ನಿರ್ಧಾರ ಪ್ರಕಟಿಸಿದ್ದ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ (Saina Nehwal) ಮತ್ತು ಪರುಪಳ್ಳಿ ಕಶ್ಯಪ್ (Parupalli Kashyap) ದಂಪತಿ ಈಗ ಬೇರ್ಪಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತೇವೆಂದು ಘೋಷಿಸಿದ್ದಾರೆ.

     

    View this post on Instagram

     

    A post shared by SAINA NEHWAL (@nehwalsaina)

    ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇಬ್ಬರೂ ಮತ್ತೆ ಒಂದಾಗುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ. ಇಬ್ಬರ ಫೋಟೋ ಹೊತೆಗೆ ʻಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆʼ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಈ ಸುದ್ದಿ ತಿಳಿದು ಅವರ ಅಭಿಮಾನಿಗಳು ಹರ್ಷದಿಂದಲೇ ಶುಭಹಾರೈಸಿದ್ದಾರೆ. ಇದನ್ನೂ ಓದಿ: IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

    35 ವರ್ಷ ವಯಸ್ಸಿನ ಸೈನಾ ನೆಹ್ವಾಲ್ ‌ಅವರು, 2018ರಲ್ಲಿ ಬ್ಯಾಡ್ಮಿಂಟನ್‌ (Badminton) ಆಟಗಾರನಾಗಿದ್ದ ಕಶ್ಯಪ್ ಅವರನ್ನ ವಿವಾಹವಾಗಿದ್ದರು. ಕಳೆದ ಜುಲೈ 14ರಂದು ಈ ಜೋಡಿ 7 ವರ್ಷಗಳ ದಾಂಪತ್ಯ ಮತ್ತು 14 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿತ್ತು. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಆದರೀಗ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಟೀಕೆಯಿಂದ ಖಿನ್ನತೆಗೆ ಜಾರಿದ್ದೆ, ಆತ್ಮಹತ್ಯೆಗೆ ಯೋಚಿಸಿದ್ದೆ – ಮೌನ ಮುರಿದ ಚಹಲ್‌

    ಸೈನಾ ನೆಹ್ವಾಲ್ ಒಲಿಂಪಿಕ್ಸ್‌ ಕಂಚಿನ ಪದಕ ಮತ್ತು ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರೆ ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಗೆಳೆಯರಾಗಿದ್ದ ಇವರು 2018 ರಲ್ಲಿ ಮದುವೆಯಾಗಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದರೆ ಸೈನಾ ನೆಹ್ವಾಲ್‌ ಇನ್ನೂ ನಿವೃತ್ತಿ ಹೇಳಿಲ್ಲ. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಮೈದಾನದಲ್ಲಿ ಕಶ್ಯಪ್ ಅವರು ಮಾರ್ಗದರ್ಶನ ನೀಡಿದ್ದರು. ಇದನ್ನೂ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!

  • ಡಿವೋರ್ಸ್‌ ಘೋಷಿಸಿದ ಸೈನಾ ನೆಹ್ವಾಲ್‌-ಪರುಪಳ್ಳಿ ಕಶ್ಯಪ್ ದಂಪತಿ

    ಡಿವೋರ್ಸ್‌ ಘೋಷಿಸಿದ ಸೈನಾ ನೆಹ್ವಾಲ್‌-ಪರುಪಳ್ಳಿ ಕಶ್ಯಪ್ ದಂಪತಿ

    ನವದೆಹಲಿ: ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ (Saina Nehwal) ಮತ್ತು ಮತ್ತು ಪರುಪಳ್ಳಿ ಕಶ್ಯಪ್ (Parupalli Kashyap) ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    35 ವರ್ಷ ವಯಸ್ಸಿನ ಸೈನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2018ರಲ್ಲಿ ಬ್ಯಾಡ್ಮಿಂಟನ್‌ (Badminton) ಆಟಗಾರನಾಗಿದ್ದ ಕಶ್ಯಪ್ ಅವರನ್ನು ಸೈನಾ ವಿವಾಹವಾಗಿದ್ದರು.

    ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನೆಹ್ವಾಲ್, ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಆಲೋಚನೆಯ ನಂತರ ನಾವಿಬ್ಬರು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ

    ನೆನಪುಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಸೈನಾ ಹೇಳಿಕೊಂಡಿದ್ದಾರೆ.

    ಸೈನಾ ಅವರು ಬಹಿರಂಗವಾಗಿಯೇ ಈ ನಿರ್ಧಾರ ತಿಳಿಸಿದರೆ ಕಶ್ಯಪ್‌ ಅವರು ಇಲ್ಲಿಯವರೆಗೆ ಯಾವುದೇ ಹೇಳಿಕೆ, ಪೋಸ್ಟ್‌ ಹಾಕಿಕೊಂಡಿಲ್ಲ. ಇದನ್ನೂ ಓದಿ: ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    ನೆಹ್ವಾಲ್ ಒಲಿಂಪಿಕ್ಸ್‌ ಕಂಚಿನ ಪದಕ ಮತ್ತು ವಿಶ್ವದ ನಂ. 1 ಶ್ರೇಯಾಂಕ ಪಡೆದಿದ್ದರೆ ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಗೆಳೆಯರಾಗಿದ್ದ ಇವರು 2018 ರಲ್ಲಿ ಮದುವೆಯಾಗಿದ್ದರು. ಕ್ರೀಡೆಯಿಂದ ನಿವೃತ್ತರಾದ ನಂತರ ಕಶ್ಯಪ್ ಈಗ ತರಬೇತಿ ನೀಡುತ್ತಿದ್ದರೆ ಸೈನಾ ನೆಹ್ವಾಲ್‌ ಇನ್ನೂ ನಿವೃತ್ತಿ ಹೇಳಿಲ್ಲ.

    2019 ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್ ಪಿವಿ ಸಿಂಧು ಅವರನ್ನು ಸೋಲಿಸಿದಾಗ ಮೈದಾನದಲ್ಲಿ ಕಶ್ಯಪ್ ಅವರು ಮಾರ್ಗದರ್ಶನ ನೀಡಿದ್ದರು.

  • ನಾರಿಶಕ್ತಿ ಅಪಮಾನಗೊಳಿಸುವ ʻಸ್ತ್ರೀ ದ್ವೇಷಿʼಗಳಿರುವುದು ಬೇಸರ – ಶಾಮನೂರು ಶಿವಶಂಕರಪ್ಪ ವಿರುದ್ಧ ಸೈನಾ ನೆಹ್ವಾಲ್‌ ಕಿಡಿ

    ನಾರಿಶಕ್ತಿ ಅಪಮಾನಗೊಳಿಸುವ ʻಸ್ತ್ರೀ ದ್ವೇಷಿʼಗಳಿರುವುದು ಬೇಸರ – ಶಾಮನೂರು ಶಿವಶಂಕರಪ್ಪ ವಿರುದ್ಧ ಸೈನಾ ನೆಹ್ವಾಲ್‌ ಕಿಡಿ

    ನವದೆಹಲಿ: `ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ’ ಎಂದು ಸಂಸದ ಸಿದ್ದೇಶ್ವರ್‌ ಪತ್ನಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಹೇಳಿಕೆಗೆ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ (Saina Nehwal) ಕಿಡಿ ಕಾರಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಶಾಮನೂರು ಅವರನ್ನ ʻಸ್ತ್ರೀ ದ್ವೇಷಿʼ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸೈನಾ ನೆಹ್ವಾಲ್‌ ಹೇಳಿದ್ದೇನು?
    ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಬೇಕು ಅಂತಾ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಬಯಸಿದ್ದಾರೆ. ಆದ್ರೆ ಪ್ರತಿ ಮಹಿಳೆಯೂ ಹೋರಾಡುತ್ತಾಳೆ ಅನ್ನೋ ತತ್ವದಲ್ಲಿ ನಂಬಿಕೆಯಿಟ್ಟುರುವ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ (Gayatri Siddheshwara) ಅವರು ಕಣದಲ್ಲಿದ್ದಾರೆ. ಇದನ್ನೂ ಓದಿ: `ಕೈ’ಗೆ ಶಾಕ್‌ ಮೇಲೆ ಶಾಕ್‌; 1,800 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ಬೆನ್ನಲ್ಲೇ ಐಟಿಯಿಂದ ಮತ್ತೆರಡು ನೋಟಿಸ್!

    ನಾನು ಮೈದಾನದಲ್ಲಿ ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ನಾನು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು? ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದನ್ನು ಸಾಧಿಸಬೇಕು ಎಂದು ಕನಸು ಕಾಣುತ್ತಿರುವಾಗ ಹಾಗೆ ಏಕೆ ಹೇಳಬೇಕು? ಒಂದೆಡೆ ನಾವು ನಾರಿ ಶಕ್ತಿ ಕೋ ವಂದನ್ (ನಾರಿ ಶಕ್ತಿಗೆ ವಂದನೆ) ಮಾಡುತ್ತಿದ್ದೇವೆ. ನಮ್ಮ ಪ್ರಧಾನಿ ಮೋದಿಯವರ (PM Modi) ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಇನ್ನೊಂದೆಡೆ, ನಾರಿ ಶಕ್ತಿಯನ್ನು ಅಪಮಾನಗೊಳಿಸುವ ಮತ್ತು ಸ್ತ್ರೀ ದ್ವೇಷದ ಜನ ಇರುವುದು ನಿಜಕ್ಕೂ ಅಸಮಾಧಾನ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ – ‘ಕೈ’ ನಾಯಕನ ಸೊಸೆ ಬಿಜೆಪಿ ಸೇರ್ಪಡೆ

    ಶಾಮನೂರು ಹೇಳಿದ್ದೇನು?
    ದಾವಣಗೆರೆ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್‌ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿ, ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ ಎಂದು ಸಂಸದ ಸಿದ್ದೇಶ್ವರ್‌ ಪತ್ನಿ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ನಾಲಿಗೆ ಹರಿಬಿಟ್ಟಿದ್ದರು. ಇದೇ ವೇಳೆ ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಸದ್ಯ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

  • ಸೈನಾ ನೆಹ್ವಾಲ್ ಟ್ವೀಟ್‍ಗೆ ಅವಹೇಳನಕಾರಿ ಕಾಮೆಂಟ್ – ಸಿದ್ದಾರ್ಥ್ ವಿರುದ್ಧ FIR ದಾಖಲು

    ಸೈನಾ ನೆಹ್ವಾಲ್ ಟ್ವೀಟ್‍ಗೆ ಅವಹೇಳನಕಾರಿ ಕಾಮೆಂಟ್ – ಸಿದ್ದಾರ್ಥ್ ವಿರುದ್ಧ FIR ದಾಖಲು

    ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಟ್ವೀಟ್‍ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಕಾಲಿವುಡ್ ನಟ ಸಿದ್ಧಾರ್ಥ್ ವಿರುದ್ಧ ಹೈದರಾಬಾದ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಬಿಜೆಪಿ ನಾಯಕರಾದ ನೀಲಂ ಭಾರ್ಗವ ರಾಮ್ ಮತ್ತು ಪ್ರೇರಣಾ ಟಿ ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ನಟ ಸಿದ್ಧಾರ್ಥ್ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಜನವರಿ 5ರಂದು ಪಂಜಾಬ್‍ನ ಫಿರೋಜ್‍ಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಂಟಾದ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಸಿದ್ದಾರ್ಥ್ ಅವರು ಅವಹೇಳಕಾರಿ ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಸೈನಾ ನೆಹ್ವಾಲ್ ಟ್ವೀಟ್‍ಗೆ ಸಿದ್ದಾರ್ಥ್ ಅವಹೇಳನಕಾರಿ ಕಾಮೆಂಟ್ – ನೆಟ್ಟಿಗರು ಗರಂ

    ಈ ಹಿನ್ನೆಲೆ ಸಿದ್ಧಾರ್ಥ್ ಅವರು, ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅಂದು ನಿಮ್ಮ ಟ್ವೀಟ್ ಅನ್ನು ನಾನು ಓದಿದಾಗ ನನಗೆ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ. ಅದಕ್ಕೆ ಆ ರೀತಿ ಪ್ರತಿಕ್ರಿಯೆ ನೀಡಿದೆ.

    ಯಾವುದೇ ದುರುದ್ದೇಶದಿಂದ ನಾನು ಆ ರೀತಿ ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಾನು ಸ್ತ್ರೀವಾದಿ ಮಿತ್ರ. ನನ್ನ ಟ್ವೀಟ್‍ನಲ್ಲಿ ಯಾವುದೇ ಲಿಂಗವನ್ನು ಸೂಚಿಸಿಲ್ಲ. ನಿಮ್ಮ ಮೇಲೆ ಯಾವುದೇ ದುರುದ್ದೇಶದಿಂದ ಆ ಪದಗಳನ್ನು ಬಳಸಲಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಈ ಪತ್ರವನ್ನು ನೀವು ಸಮ್ಮತಿಸುತ್ತೀರಾ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಬರೆದು ಕ್ಷಮೆಯನ್ನು ಕೇಳಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

  • ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ನವದೆಹಲಿ: ತಮಿಳು ನಟ ಸಿದ್ದಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿನ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದರು. ಈ ಹೇಳಿಕೆಯ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈಗ ತನ್ನ ವರ್ತನೆಗೆ ನೆಹ್ವಾಲ್ ಅವರಿಗೆ ಪತ್ರ ಬರೆದು ಸೋಶಿಯಲ್ ಮೀಡಿಯಾದಲ್ಲೇ ಕ್ಷಮೆಯಾಚಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅಂದು ನಿಮ್ಮ ಟ್ವೀಟ್ ಅನ್ನು ನಾನು ಓದಿದಾಗ ನನಗೆ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ. ಅದಕ್ಕೆ ಆ ರೀತಿ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

    ಯಾವುದೇ ದುರುದ್ದೇಶದಿಂದ ನಾನು ಆ ರೀತಿ ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಾನು ಸ್ತ್ರೀವಾದಿ ಮಿತ್ರ. ನನ್ನ ಟ್ವೀಟ್‍ನಲ್ಲಿ ಯಾವುದೇ ಲಿಂಗವನ್ನು ಸೂಚಿಸಿಲ್ಲ. ನಿಮ್ಮ ಮೇಲೆ ಯಾವುದೇ ದುರುದ್ದೇಶದಿಂದ ಆ ಪದಗಳನ್ನು ಬಳಸಲಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಈ ಪತ್ರವನ್ನು ನೀವು ಸಮ್ಮತಿಸುತ್ತೀರಾ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಬರೆದು ಕ್ಷಮೆಯನ್ನು ಕೇಳಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ಸೈನಾ ನೆಹ್ವಾಲ್ ಅವರ ಈ ಟ್ವೀಟ್ ಗೆ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ರೆಹಾನ್ನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ:  ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

    ಪುರುಷನ ಮಮಾರ್ಂಗವನ್ನು ಗ್ರಾಮ್ಯವಾಗಿ ‘ಕಾಕ್’ ಎಂದು ಕರೆಯಲಾಗುತ್ತದೆ. ಈ ಟ್ವೀಟ್ ಮೂಲಕ ಸಿದ್ದಾರ್ಥ್ ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ  ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಗರಂ ಸಿದ್ದಾರ್ಥ್ ಖಾತೆಯನ್ನೇ ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ಗೆ ಪತ್ರ ಬರೆದಿದೆ.

  • ಸೈನಾ ನೆಹ್ವಾಲ್ ಟ್ವೀಟ್‍ಗೆ ಸಿದ್ದಾರ್ಥ್ ಅವಹೇಳನಕಾರಿ ಕಾಮೆಂಟ್ – ನೆಟ್ಟಿಗರು ಗರಂ

    ಸೈನಾ ನೆಹ್ವಾಲ್ ಟ್ವೀಟ್‍ಗೆ ಸಿದ್ದಾರ್ಥ್ ಅವಹೇಳನಕಾರಿ ಕಾಮೆಂಟ್ – ನೆಟ್ಟಿಗರು ಗರಂ

    ನವದೆಹಲಿ: ತಮಿಳು ನಟ ಸಿದ್ದಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿನ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ

    ಸೈನಾ ನೆಹ್ವಾಲ್ ಅವರ ಈ ಟ್ವೀಟ್‍ಗೆ ಕಾಲಿವುಡ್ ನಟ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ರೆಹಾನ್ನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್’ ಎಂದು ಕರೆಯಲಾಗುತ್ತದೆ. ಈ ಟ್ವೀಟ್ ಮೂಲಕ ಸಿದ್ದಾರ್ಥ್ ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ: ಭಾವನಾ ಮೆನನ್

    ಸಿದ್ದಾರ್ಥ್ ಅವರ ಈ ಟ್ವೀಟ್‍ಗೆ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು, ಈ ಟ್ವೀಟ್ ಅರ್ಥಪೂರ್ಣವಾದ್ದಲ್ಲ ಮತ್ತು ಇದು ಯಾರಿಗೂ ಬಳಸಲು ಯೋಗ್ಯವಲ್ಲದ ಭಾಷೆ. ಯಾವುದೇ ಭಿನ್ನಾಭಿಪ್ರಾಯ ಇರಲಿ, ಮಾತನಾಡುವಾಗ ಸಭ್ಯತೆ ಇರಬೇಕು. ಸೈನಾ ನೆಹ್ವಾಲ್ ನಮ್ಮ ದೇಶದ ಕ್ರೀಡಾ ಹೆಮ್ಮೆ, ಅವರಿಗೆ ರಾಜಕೀಯ ಮಾಡುವ ಹಕ್ಕಿದೆ. ರಾಷ್ಟ್ರದ ಉಳಿದವರ ಅಭಿಪ್ರಾಯ. ನೀವು ಅವರ ಹೇಳಿಕೆಯನ್ನು ಒಪ್ಪದಿದ್ದಲ್ಲಿ ಚರ್ಚೆ ಮಾಡಿ, ಆದರೆ ಅವರ ಆಲೋಚನೆ ಮತ್ತು ಚಿಂತನೆಗಳನ್ನು ಕೀಳಾಗಿ ಕಾಣುವುದಲ್ಲ. ಅವಹೇಳನಕಾರಿ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

    ರಾಷ್ಟ್ರೀಯ ಮಹಿಳಾ ಆಯೋಗ ಗರಂ ಆಗಿದ್ದು ಸಿದ್ದಾರ್ಥ್ ಖಾತೆಯನ್ನೇ ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ಗೆ ಪತ್ರ ಬರೆದಿದೆ.

  • ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಕೊರೊನಾ ಪಾಸಿಟಿವ್

    ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಕೊರೊನಾ ಪಾಸಿಟಿವ್

    ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ತೆರಳಿದ್ದ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಸುಮಾರು ಹತ್ತು ತಿಂಗಳ ಬಳಿಕ ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಗಾಗಿ ಥಾಯ್ಲೆಂಡ್‍ಗೆ ತೆರಳಿದ್ದರು. ಈ ಸಂದರ್ಭ ಪಂದ್ಯದ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಸೈನಾ ನೆಹ್ವಾಲ್ ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಎರಡನೇ ಪರೀಕ್ಷೆ ವೇಳೆ ನೆಗೆಟಿವ್ ವರದಿಯಾಗಿದೆ. ಇನ್ನೂ ಮೂರನೇ ಪರೀಕ್ಷೆ ಇಂದು ನಡೆಯಲಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಮೊದಲ ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ 10 ದಿನಗಳ ಐಸೊಲೇಷನ್‍ಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಹಾಗಾಗಿ ಮುಂದಿನ ಪಂದ್ಯಾಟ ಆಡಬೇಕಿದ್ದ ನೆಹ್ವಾಲ್ ಪರವಾಗಿ ಅವರ ಗಂಡ, ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಪಂದ್ಯಾಟಕ್ಕೆ ವಾಕ್‍ಒವರ್ ಘೋಷಿಸಿದ್ದಾರೆ. ಸೈನಾಗೆ ಕೊರೊನಾ ಪಾಸಿಟಿವ್ ಆಗುತ್ತಿದ್ದಂತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಅವರಿಗೆ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

  • ನರೇಂದ್ರ ಸರ್ ನನಗೆ ಪ್ರೇರಣೆ – ಬಿಜೆಪಿಗೆ ಸೈನಾ ನೆಹ್ವಾಲ್ ಸೇರ್ಪಡೆ

    ನರೇಂದ್ರ ಸರ್ ನನಗೆ ಪ್ರೇರಣೆ – ಬಿಜೆಪಿಗೆ ಸೈನಾ ನೆಹ್ವಾಲ್ ಸೇರ್ಪಡೆ

    ನವದೆಹಲಿ: ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೈನಾ ನೆಹ್ವಾಲ್ ಅವರಿಗೆ ಬಿಜೆಪಿಗೆ ಶಾಲನ್ನು ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ 29 ವರ್ಷದ ಸೈನಾ, ನಾನು ನರೇಂದ್ರ ಮೋದಿ ಅವರಿಂದ ಪ್ರೇರಣೆಗೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.

    ನಾನು ದೇಶಕ್ಕಾಗಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದೇನೆ. ನಾನು ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದು, ಕಠಿಣ ಪರಿಶ್ರಮ ಪಡುವ ವ್ಯಕ್ತಿಗಳನ್ನು ನಾನು ಇಷ್ಟ ಪಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಕಠಿಣ ಪರಿಶ್ರಮ ಪಡುವ ವ್ಯಕ್ತಿ. ಹೀಗಾಗಿ ಇವರ ಜೊತೆ ಸೇರಿಕೊಂಡು ದೇಶಕ್ಕಾಗಿ ಕೆಲಸ ಮಾಡಬೇಕೆಂಬ ಆಸೆಯಿದೆ ಎಂದು ಹೇಳಿದರು.

    ಹರ್ಯಾಣ ಮೂಲದ ಸೈನಾ ನೆಹ್ವಾಲ್ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುವ ಸಾಧ್ಯತೆಯಿದೆ. ದೆಹಲಿ ಚುನಾವಣೆ ಫೆ.8 ರಂದು ನಡೆಯಲಿದೆ.

    ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಸೈನಾ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2016 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು.

    ಒಟ್ಟು 24 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಸೈನಾ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು.

  • ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಇಂಡೋನೇಷಿಯಾ ಮಾಸ್ಟರ್ಸ್: ಸೈನಾ ನೆಹ್ವಾಲ್ ಮುಡಿಗೇರಿದ ಕಿರೀಟ

    ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಮಾಸ್ಟರ್ಸ್ ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಕ್ಯಾರೊಲಿನಾ ಮರಿನ್ ವಿರುದ್ಧ ಸೈನಾ ಸೆಣಸಿದ್ರು. ಆದರೆ ಮರಿನ್ ಗಾಯಗೊಂಡು ಮೈದಾನದಿಂದ ಹೊರ ನಡೆದ ಪರಿಣಾಮ ಸೈನಾ ಜಯ ಪಡೆದರು.

    ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ ಮರಿನ್ 10-4 ರಿಂದ ಮುನ್ನಡೆ ಪಡೆದಿದ್ರು, ಈ ವೇಳೆ ರಿಟರ್ನ್ ಮಾಡುವ ವೇಳೆ ಮೊಣಕಾಲಿಗೆ ಗಾಯವಾಗಿದೆ. ಗಾಯಗೊಂಡಿದ್ದರಿಂದ ಕಣ್ಣೀರಿಡುತ್ತಾಲೇ ಮೈದಾನದಿಂದ ಮರಿನ್ ಹೊರ ನಡೆದರು. ಇದರೊಂದೊಗೆ ಸೈನಾರನ್ನು ಜಯಶಾಲಿ ಎಂದು ಘೋಷಿಸಲಾಯಿತು.

    ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಹಿ ಬಿಂಗ್ ಜಿಯಾವೊರನ್ನು ಮಣಿಸುವ ಮೂಲಕ ಸೈನಾ ಫೈನಲ್ ಪ್ರವೇಶ ಮಾಡಿದ್ದರು. ಉಳಿದಂತೆ ಮರಿನ್ ಚೀನಾದ ಚೆನ್ ಯುಫೆಇ ಅವರಿಗೆ ಸೋಲುಣಿಸಿ ಫೈನಲಿಗೆ ಆಗಮಿಸಿದ್ದರು.

    ಸದ್ಯ ವರ್ಷದ ಆರಂಭದಲ್ಲೇ ಇಂಡೋನೇಷಿಯಾ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಸೈನಾ ಶುಭಾರಂಭ ಮಾಡಿದ್ದಾರೆ. 28 ವರ್ಷದ ಸೈನಾ ನೆಹ್ವಾಲ್ 2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಸೈನಾ, ಕಶ್ಯಪ್ ರಾಯಲ್ ರಿಸೆಪ್ಷನ್ – ದಕ್ಷಿಣ ಭಾರತದ ನಟರು ಭಾಗಿ

    ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಮುಂಬೈನಲ್ಲಿ ಶುಕ್ರವಾರ ನೆರವೇರಿದೆ. ಮುಂಬೈನಲ್ಲಿ ಸಿಂಪಲ್ ಆಗಿ ಮದ್ವೆಯಾದ ಸೈನಾ ಹೈದರಾಬಾದ್‍ನಲ್ಲಿ ರಾಯಲ್ ರಿಸೆಪ್ಷನ್ ಮಾಡಿಕೊಂಡಿದ್ದು ದಕ್ಷಿಣದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಭಾನುವಾರ ಹೈದರಾಬಾದ್‍ನ ಪಂಚತಾರಾ ಹೊಟೇಲ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಆರತಕ್ಷತೆಯಲ್ಲಿ ತೆಲುಗು ನಟ ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಭಾಗಿಯಾಗಿ ನವದಂಪತಿಗೆ ಶುಭಾಶಯ ಕೋರಿದ್ದಾರೆ.

    ಸೈನಾ ಹಾಗೂ ಕಶ್ಯಪ್ ತಮ್ಮ ಆರತಕ್ಷತೆ ವೇಳೆ ಸಬ್ಯಾಸಾಚಿ ಅವರು ವಿನ್ಯಾಸ ಮಾಡಿದ್ದ ಉಡುಪನ್ನು ಧರಿಸಿದ್ದರು. ಸೈನಾ ನೀಲಿ ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ಬ್ಲೂ ಕಲರ್ ಡೈಮಂಡ್ ನೆಕ್ಲೇಸ್ ಧರಿಸಿದ್ದರೆ ಅವರ ಪತಿ ಕಶ್ಯಪ್ ಕೂಡ ಆರತಕ್ಷತೆಯಲ್ಲಿ ಬ್ಲೂ ಶೇರ್ವಾನಿ ತೊಟ್ಟು ಅದಕ್ಕೆ ಮುತ್ತಿನ ಹಾರ ಹಾಕಿದ್ದರು.

    ಆರತಕ್ಷತೆಯಲ್ಲಿ ಸೈನಾ ಹಾಗೂ ಕಶ್ಯಪ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಾಗಾರ್ಜುನ್ ಹಾಗೂ ರಕುಲ್ ಪ್ರೀತ್ ಹೊರತಾಗಿ ಸೈನಾ ಹಾಗೂ ಕಶ್ಯಪ್ ಅವರ ಸಂಬಂಧಿಕರು ಹಾಗೂ ಕುಟುಂಬಸ್ಥರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.

    ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ 10 ವರ್ಷಗಳಿಂದ ರಿಲೇಶನ್‍ಶಿಪ್‍ನಲ್ಲಿದ್ದರು. ಸೈನಾ ಅವರು ತಮ್ಮ ಟ್ವಿಟ್ಟರಿನಲ್ಲಿ ಮದುವೆಯ ಫೋಟೋ ಹಂಚಿಕೊಂಡು `ನನ್ನ ಜೀವನದ ಅತ್ಯುತ್ತಮ ಮ್ಯಾಚ್’ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

    ಈ ಹಿಂದೆ ಸೈನಾ, ಕಶ್ಯಪ್ ಮದುವೆ ಹೈದರಾಬಾದ್‍ನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸೈನಾ, ಕಶ್ಯಪ್ ಕೈಹಿಡಿದಿದ್ದು, ಸಮಾರಂಭದಲ್ಲಿ ಆಪ್ತ ವಲಯದ ಸ್ನೇಹಿತರು ಸೇರಿದಂತೆ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv