Tag: ಸೇವಾ ದಳದ ರಾಷ್ಟ್ರೀಯ ಸಮಾವೇಶ

  • ದ್ವೇಷವನ್ನು ಮರೆಯಲು ಮೋದಿಯನ್ನ ಅಪ್ಪಿಕೊಂಡೆ: ರಾಹುಲ್ ಗಾಂಧಿ

    ದ್ವೇಷವನ್ನು ಮರೆಯಲು ಮೋದಿಯನ್ನ ಅಪ್ಪಿಕೊಂಡೆ: ರಾಹುಲ್ ಗಾಂಧಿ

    ಜೈಪುರ: ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ದ್ವೇಷವನ್ನು ಮರೆಯಲು ಸಂಸತ್ತಿನಲ್ಲಿ ನಾನು ಅವರನ್ನು ಅಪ್ಪಿಕೊಂಡಿದ್ದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಕಾಂಗ್ರೆಸ್ ಸೇವಾ ದಳದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಹಾಗೂ ನನ್ನ ಕುಟುಂಬದವನ್ನು ಬಹಳಷ್ಟು ಬಾರಿ ನಿಂದಿಸಿದ್ದಾರೆ. ಆದರೂ ನಾನು ಮೋದಿಯವರನ್ನು ಸಂಸತ್ತಿನಲ್ಲಿ ಅಪ್ಪಿಕೊಂಡಿದ್ದೇನೆ. ಬಿಜೆಪಿಯ ದ್ವೇಷವನ್ನು ದ್ವೇಷದಿಂದಲೇ ಎದುರಿಸಲು ಆಗುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆ ದ್ವೇಷವನ್ನು ತೆಗೆದು ಹಾಕಲೆಂದೇ ನಾನು ಪ್ರಧಾನಿಯನ್ನು ಅಪ್ಪಿಕೊಂಡದ್ದು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

    ಲೋಕಸಭೆಯಲ್ಲಿ ರಾಹುಲ್ ಗಾಂಧಿ ತಮಗೆ ನೀಡಿದ ಅಪ್ಪುಗೆ ಹಾಗೂ ಕಣ್ಣು ಹೊಡೆದ ಪರಿಯನ್ನು ಮೋದಿ ಅವರು 2019ರ ಲೋಕಸಭೆಯ ಅಧಿವೇಶನದ ಕೊನೆಯ ದಿನ ಪ್ರಸ್ತಾಪಿಸಿ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದರು.

    ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಅಂದರೆ 2014ರ ಮೊದಲು ಭಾರತವು ನಿದ್ರಿಸುತ್ತಿದ್ದ ರಾಷ್ಟ್ರವಾಗಿತ್ತು ಎಂದು ಪ್ರಧಾನಿ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಮೋದಿ ಅವರು ಈ ಹೇಳಿಕೆ ನೀಡುವ ಮೂಲಕ ಇಡೀ ದೇಶದ ಜನರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಪಂಡಿತ್ ಜವಹರಲಾಲ್ ನೆಹರು, ಡಾ.ಅಂಬೇಡ್ಕರ್, ನಮ್ಮ ರೈತರು, ಸಣ್ಣ ಉದ್ಯಮಿಗಳು ಅವರಿಗಿಂತ ಮೊದಲು ಏನನ್ನೂ ಮಾಡಿಲ್ಲ ಎನ್ನುವ ಅರ್ಥ ಕಲ್ಪಿಸಿಕೊಡುತ್ತದೆ. ಈ ರೀತಿ ಹೇಳಿಕೆ ನೀಡಿ ಅವರು ಕಾಂಗ್ರೆಸ್ಸಿಗೆ ಅವಮಾನ ಮಾಡಿಲ್ಲ. ಬದಲಾಗಿ ಇಡೀ ದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದರು.

    ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಛತ್ತೀಸ್‍ಗಢದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಹಾಗೂ ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ರೈತರ ಸಾಲ ಮನ್ನಾ ಮಾಡಿದ್ದರೆ, ಮೋದಿ ಅವರು ಅನಿಲ್ ಅಂಬಾನಿ, ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಮುಂತಾದ ಉದ್ಯಮಿಗಳ 3,50,000 ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

    ಬಿಜೆಪಿ ಹಾಗೂ ಆರ್‍ಎಸ್‍ಎಸ್ ಅವರು ದೇಶದ ಶ್ರೀಮಂತ ಸ್ನೇಹಿತರನ್ನ ಉಳಿಸಲು ನೋಡುತ್ತಿದ್ದಾರೆ. ಆದರೆ ನಾವು ದೇಶದ ಜನಸಾಮಾನ್ಯರ ಪರವಾಗಿ ಕೆಲಸ ಮಾಡಲು ಇಚ್ಛಿಸುತ್ತೇವೆ. ಸೇವಾ ದಳ ಕಾಂಗ್ರೆಸ್ ಪಕ್ಷದ ಬೆನ್ನೆಲಬು. ಇದನ್ನು ಇನ್ನಷ್ಟು ಗಟ್ಟಿ ಮಾಡಬೇಕು. ಆಗ ಪಕ್ಷಕ್ಕೆ ಮತ್ತಷ್ಟು ಶಕ್ತಿ ದೊರೆತಂತಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv