Tag: ಸೇನಾ ಶಿಬಿರ

  • ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ

    ಶ್ರೀನಗರ: ಸೇನಾ ಶಿಬಿರದ (Army Picket) ಮೇಲೆ ಉಗ್ರರು (Terrorist) ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಯೋಧ (Soldier) ತೀವ್ರ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ (Jammu Kashmir) ನಡೆದಿದೆ.

    ರಜೌರಿಯ (Rajouri) ಹಳ್ಳಿಯಲ್ಲಿ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ್ದಾರೆ. ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಕೂಡ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದಾರೆ. ಸದ್ಯ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

    ಘಟನೆಯ ಬಳಿಕ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಬೈಡೆನ್‌ ಹೊರಕ್ಕೆ – ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಮಣೆ

  • ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

    ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

    ಶ್ರೀನಗರ: ಮತ್ತೊಮ್ಮೆ ಡ್ರೋನ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಬಾರಿ ಉಗ್ರರು ಸೇನಾ ಶಿಬಿರವನ್ನ ಗುರಿಯಾಗಿಸಿಕೊಂಡಿದ್ದರು. ಜಮ್ಮು ಏರ್ ಫೋರ್ಸ್ ಸ್ಟೇಶನ್ ಮೇಲಿನ ಡ್ರೋನ್ ದಾಳಿ ಬಳಿಕ ಇಂದು ಮಿಲಿಟರಿ ಸ್ಟೇಶನ್ ಗುರಿ ಮಾಡಿಕೊಂಡಿದ್ದರು.

    ಬೆಳಗಿನ ಜಾವ ಮೂರು ಗಂಟೆಗೆ ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿದ್ದ ಸೇನೆ, 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ಬಳಿಕ ಡ್ರೋನ್ ಮಾಯವಾಗಿದ್ದು, ಸದ್ಯ ಸೇನೆ ಸರ್ಚ್ ಅಪರೇಷನ್ ನಡೆಸುತ್ತಿದೆ. ಗುಂಡಿನ ದಾಳಿಯಲ್ಲಿ ಡ್ರೋನ್ ನ್ನು ಹೊಡೆದುರಳಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಅಧಿಕೃತವಾಗಿ ತಿಳಿದುಬಂದಿಲ್ಲ.

    ಏರ್ ಬೇಸ್ ಮೇಲೆ ಎರಡು ಬಾರಿ ದಾಳಿ:
    ಜಮ್ಮುವಿನ ಏರ್ ಫೋರ್ಸ್ ಬಳಿ ಭಾನುವಾರ ರಾತ್ರಿ ಎರಡು ಬಾರಿ ದಾಳಿ ನಡೆದಿದೆ. ರಾತ್ರಿ 1.37 ಮತ್ತು ಎರಡನೇಯದ್ದು ಐದು ನಿಮಿಷಗಳ ನಂತರ ಸರಿಯಾಗಿ 1.42 ಗಂಟೆಗೆ ದಾಳಿಯಾಗಿದೆ. ಎರಡೂ ದಾಳಿಯ ಇಂಟೆನ್ಸಿಟಿ ಕಡಿಮೆಯಾಗಿದ್ದರಿಂದ ಸ್ಫೋಟದ ತೀವ್ರತೆ ಕ್ಷೀಣವಾಗಿತ್ತು. ಹಾಗಾಗಿ ಮೇಲ್ಛಾವಣಿಗೆ ಹಾನಿಯಾಗಿತ್ತು.

    ಎರಡನೇ ದಾಳಿ ಬಯಲು ಪ್ರದೇಶದಲ್ಲಿ ನಡೆದಿತ್ತು. ಇಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಉಗ್ರರು ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್‍ಐಎ ತಂಡ ತಲುಪಿದ್ದು, ತನಿಖೆ ನಡೆಸುತ್ತಿದೆ.

    ಡ್ರೋನ್ ದಾಳಿಯಲ್ಲಿ ರಿಸ್ಕ್ ಕಡಿಮೆ:
    ಡ್ರೋನ್ ಮುಖಾಂತರ ನಡೆಸುವ ದಾಳಿಯನ್ನ ಕಡಿಮೆ ಹಣದಲ್ಲಿ ನಡೆಸಬಹುದಾಗಿದೆ. ಡ್ರೋನ್ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸೋದರಿಂದ ರಾಡಾರ್ ಸಂಪರ್ಕದಿಂದಲೂ ಅದು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಮುಂದೆ ಉಗ್ರ ಸಂಘಟನೆಗಳ ಇದೇ ಮಾದರಿಯ ದಾಳಿ ನಡೆಸಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸದ್ಯ ಭಾರತೀಯ ಸೇನೆ ತಮ್ಮ ಸ್ಥಳಗಳಲ್ಲಿ ಡ್ರೋನ್ ಅಟ್ಯಾಕ್ ತಪ್ಪಿಸಲು ಅಡ್ವಾನ್ಸಡ್ ಟೆಕ್ನಾಲಜಿ ಬಳಕೆ ಮುಂದಗಾಬೇಕಿದೆ. ಇದನ್ನೂ ಓದಿ: SPO ಮನೆಗೆ ನುಗ್ಗಿ ಉಗ್ರರ ಗುಂಡಿನ ದಾಳಿ – ಅಧಿಕಾರಿ, ಪತ್ನಿ, ಮಗಳು ಸಾವು

    ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸ್ಪೆಷಲ್ ಪೊಲೀಸ್ ಆಫಿಸರ್ (ಎಸ್‍ಪಿಓ) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎಸ್‍ಪಿಓ ಫಯಾಜ್ ಅಹಮದ್ (41) ಮತ್ತು ಅವರ ಪತ್ನಿ ರಾಜಾ ಬೇಗಂ, ಮಗಳು ರಫಿಯಾ (23) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

    ಮಂಗಳವಾರ ಶ್ರೀನಗರದಲ್ಲಿ ಸಿಐಡಿ ಇನ್‍ಸ್ಪೆಕ್ಟರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನೌಗಾಮ್ ಇಲಾಖೆಯಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬರ್ಬರ್ ಶಾ ಇಲಾಖೆಯ ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‍ಪಿಎಫ್) ಜಾಯಿಂಟ್ ಪಾರ್ಟಿ ಮೇಲೆ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು.

  • ಉಗ್ರರ ಗುಂಡೇಟಿನಿಂದ ಗಾಯಗೊಂಡ ನಂತರ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಯೋಧನ ಪತ್ನಿ

    ಉಗ್ರರ ಗುಂಡೇಟಿನಿಂದ ಗಾಯಗೊಂಡ ನಂತರ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಯೋಧನ ಪತ್ನಿ

    ಶ್ರೀನಗರ: ಜಮ್ಮು ಕಾಶ್ಮೀರದ ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

    ಶನಿವಾರದಂದು ನಾಲ್ವರು ಜೈಷ್ ಎ ಮಹಮ್ಮದ್ ಸಂಘಟನೆಯ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಕೂಡಲೇ ಅಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರ ಮಾಡಲಾಗಿತ್ತು. ಆದರೂ 11 ಜನ ಗಾಯಗೊಂಡಿದ್ದರು. ಇವರಲ್ಲಿ ಗರ್ಭಿಣಿಯಾಗಿದ್ದ 24 ವರ್ಷದ ಶಹ್‍ಝಾದಾ ಖಾನ್ ಎಂಬವರಿಗೂ ಗುಂಡೇಟು ಬಿದ್ದಿತ್ತು. ಆದ್ರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಲ್ಲಿನ ಸತ್ವಾರಿ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗು 2.5 ಕೆಜಿ ತೂಕವಿದೆ. ಶಹ್‍ಝಾದಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಸೇನಾಧಿಕಾರಿಯೊಬ್ಬರ ಮಗಳು ಹಾಗೂ ತಲೆಗೆ ಗುಂಡೇಟು ಬಿದ್ದು ಗಾಯಗೊಂಡ 14 ವರ್ಷದ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಉಗ್ರರ ದಾಳಿಯಿಂದಾಗಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಹಾಗೂ ಒಬ್ಬ ನಾಗರೀಕ ಕೂಡ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರಲ್ಲೊಬ್ಬರಾದ ಸುಬೇದಾರ್ ಮದನ್ ಲಾಲ್ ಚೌಧರ್ ಬರಿಗೈಯಲ್ಲೇ ಯೋಧರನ್ನ ಎದುರಿಸಿದ್ರು. ತುಂಬಾ ಸನಿಹದಿಂದ ಅವರ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆದು ಮೃತಪಟ್ಟರು.

    ಗರ್ಭಿಣಿ ಶಹ್‍ಝಾದಾ ಖಾನ್ ಅವರನ್ನ ಹೆಲಿಕಾಪ್ಟರ್ ಮೂಲಕ ಕ್ಯಾಂಪ್‍ನಿಂದ ಏರ್‍ಲಿಫ್ಟ್ ಮಾಡಿ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿನ ವೈದ್ಯರು ರಾತ್ರಿಯಿಡೀ ಕಾರ್ಯ ನಿರ್ವಹಿಸಿ ತಾಯಿ-ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಪತಿ ನಾಜಿರ್ ಅಹ್ಮದ್ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಭಾನುವಾರದಂದು ಭದ್ರತಾ ಪಡೆ ನಾಲ್ವರು ಉಗ್ರರನ್ನು ಸದೆಬಡಿದಿದ್ದಾರೆ. ಎಲ್ಲಾ ಉಗ್ರರು ಎಕೆ-56 ಆಯುಧಗಳನ್ನ ಹೊಂದಿದ್ದು, ಅವನ್ನು ದಾಳಿಗಾಗಿ ಬಳಸಿದ್ದರು ಎಂದು ವರದಿಯಾಗಿದೆ.

  • ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಯೋಧ, ಮಗಳಿಗೆ ಗಾಯ

    ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಯೋಧ, ಮಗಳಿಗೆ ಗಾಯ

    ಶ್ರೀನಗರ: ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಸುಂಜ್ವಾನ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ಇಂದು ದಾಳಿ ನಡೆಸಿದ್ದು, ಓರ್ವ ಯೋಧ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ.

    ಜಮ್ಮು ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಶಿಬಿರವಿದ್ದು, ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದಾರೆ. ಶಸ್ತ್ರಾಸ್ತ್ರಧಾರಿ ಉಗ್ರರು ಸೇನಾ ಪ್ರದೇಶದ ಒಳನುಗ್ಗಲು ಗುಂಡಿನ ದಾಳಿ ನಡೆಸಿದ್ದು, ಗ್ರೆನೇಡ್‍ಗಳನ್ನ ಎಸೆದಿದ್ದಾರೆ. ಉಗ್ರರ ಗುಂಡಿನ ದಾಳಿಯಿಂದ ಯೋಧ ಹಾಗೂ ಅವರ ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಗುಂಡಿನ ದಾಳಿ ನಿಂತಿದ್ದು, ಸೇನೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದ 500 ಮೀಟರ್ ಒಳಗಿರುವ ಶಾಲೆಗಳನ್ನ ತೆರೆಯದಂತೆ ಜಿಲ್ಲಾಡಳಿತ ಸೂಚಿಸಿದೆ.

    ಇಂದು ಬೆಳಗ್ಗೆ 4.55ರ ಸುಮಾರಿಗೆ ಅನುಮಾನಾಸ್ಪದ ಓಡಾಟ ಕಂಡುಬಂತು. ಸೆಂಟ್ರಿ ಬಂಕರ್ ಫೈರ್ ಮಾಡಿದಾಗ ಅವರು ಪ್ರತಿದಾಳಿ ನಡೆಸಿದ್ರು. ಕಟ್ಟಡದೊಳಗೆ ಉಗ್ರರು ಅಡಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಜಮ್ಮು ಐಜಿಪಿ ಎಸ್‍ಡಿ ಸಿಂಗ್ ಜಮ್ವಾಲ್ ಹೇಳಿದ್ದಾರೆ. ಉಗ್ರರು ಜೈಷ್- ಎ- ಮಹಮ್ಮದ್ ಉಗ್ರ ಸಂಘಟನೆಯವರು ಎಂದು ಹೇಳಲಾಗಿದೆ. ಸದ್ಯ ಈ ಪ್ರದೇಶವನ್ನ ಪೊಲೀಸರು ಸುತ್ತುವರಿದಿದ್ದು, ಭದ್ರತಾ ಪಡೆ ಉಗ್ರರನ್ನ ಪತ್ತೆ ಮಾಡಲು ಡ್ರೋನ್ ಮತ್ತು ಹೆಲಿಕಾಪ್ಟರ್‍ಗಳನ್ನ ಬಳಸಿದೆ.

    2006ರಲ್ಲಿ ಕೂಡ ಇದೇ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ 12 ಯೋಧರು ಹುತಾತ್ಮರಾಗಿ, 7 ಯೋಧರು ಗಾಯಗೊಂಡಿದ್ದರು. ಆತ್ಮಾಹುತಿ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.