Tag: ಸೇತುವೆ ಕುಸಿತ

  • ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ

    ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಮತ್ತು ತಂತಿಪಾಲ ನಡುವೆ ರಸ್ತೆಯ ಪಕ್ಕದಲ್ಲಿ ಭಾರೀ ಭೂಕುಸಿತವಾಗಿದೆ. ಇದರಿಂದಾಗಿ ಮುಕ್ಕೋಡ್ಲು ಮತ್ತು ತಂತಿಪಾಲ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಕೂಡಲೇ ಜೆಸಿಬಿ ಯಂತ್ರ ತರಿಸಿ ಕುಸಿದಿದ್ದ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತೆರವುಗೊಳಿಸಿಸಿದ್ದಾರೆ.

    ಕಾರು, ಜೀಪ್ ಸೇರಿದಂತೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಹಟ್ಟಿಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಮುಕ್ಕೋಡ್ಲು ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ವಿಷಯ ತಿಳಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ಅಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

    ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವಂತೆ ಅಪ್ಪಚ್ಚು ರಂಜನ್ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

    ಬೈಕ್ ಓಡಿಸ್ತಿದ್ದಾಗ್ಲೇ 40 ಅಡಿ ಕುಸಿದ ಸೇತುವೆ

    ಚಿಕ್ಕಮಗಳೂರು: ಬೈಕಿನಲ್ಲಿ ಸಂಚರಿಸುವಾಗಲೇ ಸೇತುವೆ ಕುಸಿದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ನಡೆದಿದೆ.

    ಮಲೆನಾಡು, ಕಾಫಿನಾಡಿನಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಜನ ಹೈರಾಣಾಗಿದ್ದಾರೆ. ಈ ನಡುವೆ ಭಾನುವಾರ ಸುರಿದ ಮಳೆ ಚಿಕ್ಕಮಗಳೂರಿನ ಮಾಲಿಂಗನಾಡು ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದೆ. ಮಾಲಿಂಗನಾಡು ಗ್ರಾಮದ ಹಿರೇಬೈಲು-ಕೂವೆ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಮಳೆಗೆ ಕುಸಿದು ಬಿದ್ದಿದೆ. ಬೈಕ್ ಸಂಚರಿಸುವಾಗಲೇ ಏಕಾಏಕಿ ಸೇತುವೆ ಕುಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಮೊದಲು ಆತನನ್ನು ಸ್ಥಳೀಯರು ಮೂಡಿಗೆರೆ ಆಸ್ಪತ್ರೆಗೆ ಸೇರಿಸಿದ್ದರು, ಆದರೆ ಸವಾರನ ಸ್ಥಿತಿ ಗಂಭೀರವಿದ್ದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ:ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಸುಮಾರು 40-50 ಅಡಿ ಆಳಕ್ಕೆ ಸೇತುವೆ ಕುಸಿದಿದ್ದು, ಅದರ ನಡುವೆಯೇ ಬೈಕ್ ಸಿಕ್ಕಿಬಿದ್ದಿದೆ. ಅಲ್ಲದೆ ಸೇತುವೆ ಕುಸಿತದಿಂದ ಹಿರೇಬೈಲು-ಕೂವೆ ಸಂಪರ್ಕ ಕಡಿತಗೊಂಡಿದ್ದು, ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೇರೆ ಪರ್ಯಾಯ ಮಾರ್ಗಗಳು ಇಲ್ಲ. ಆದ್ದರಿಂದ ಇಲ್ಲಿನ ಜನರು ಪರದಾಡುತ್ತಿದ್ದಾರೆ.

  • ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಗಾಂಧಿನಗರ: ಭಾನುವಾರ ಗುಜರಾತಿನ ಜುನಾಗಢದ ಮಲಂಕಾ ಗ್ರಾಮದಲ್ಲಿ ಭಾರೀ ಮಳೆಗೆ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ವಾಹನಗಳು ಕುಸಿದ ಸೇತುವೆ ಮಧ್ಯೆ ಸಿಲುಕಿದ್ದು, ಅದರಲ್ಲಿದ್ದ ಪ್ರಾಯಾಣಿಕರು ಗಾಯಗೊಂಡಿದ್ದರು. ಈ ಮಧ್ಯೆ ಸೇತುವೆಯ ಕುಸಿದ ಭಾಗದಿಂದ ವಾಹನಗಳನ್ನು ಜನರು ಹೊರತಗೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಸೇತುವೆ ಮಧ್ಯ ಭಾಗ ಕುಸಿದು ಬಿದ್ದ ತಕ್ಷಣ ಅದರ ಮೇಲೆ ಸಂಚರಿಸುತ್ತಿದ್ದ ವಾಹನಗಳು ಸೇತುವೆ ಮಧ್ಯೆ ಸಿಲುಕಿಕೊಂಡಿದೆ. ಮಳೆಗೆ ಸೇತುವೆ ಬಿರುಕು ಬಿಟ್ಟುಕೊಂಡಿತ್ತು. ಆದರೆ ಯಾರು ಕೂಡ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಭಾನುವಾರ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ಅದು ಕುಸಿದು ಬಿದ್ದಿದೆ. ಈ ಘಟನೆ ನಡೆಯುತ್ತಿದ್ದಂತೆ ಸೇತುವೆ ಆಸು-ಪಾಸಿನಲ್ಲಿದ್ದ ಇತರೆ ವಾಹನ ಸವಾರರು ಹಾಗೂ ಸ್ಥಳೀಯರು ಸೇತುವೆ ಮಧ್ಯೆ ಸಿಲುಕಿದ್ದ ಜನರ ರಕ್ಷಣೆ ಮಾಡಿದರು.

    ಜೊತೆಗೆ ಸೇತುವೆ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳನ್ನು ಹಗ್ಗ ಕಟ್ಟಿ ಎಳೆದು ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸದ್ಯ ಗಾಯಗೊಂಡವರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸೇತುವೆ ಕುಸಿದ ಹಿನ್ನೆಲೆ ಜುನಾಗಢ ಹಾಗೂ ಮಂಡ್ರಾ ಪ್ರದೇಶದ ಸಂಚಾರ ಸ್ಥಗಿತಗೊಂಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತ, ಮಳೆಗೆ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು. ಹಾಗೆಯೇ ಹಲವು ಕಾರುಗಳು ಸೇತುವೆ ಮಧ್ಯೆ ಸಿಲುಕಿಕೊಂಡಿತ್ತು, ಸುಮಾರು 4 ಕಾರು ನದಿಗೆ ಬಿದ್ದಿದೆ ಎಂದು ತಿಳಿಸಿದರು.

    ಸೇತುವೆ ಸುತ್ತಮುತ್ತಲ ಪ್ರದೇಶದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ನಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಜೋರಾದ ಶಬ್ದ ಬಂತು. ಆಗ ನಾವು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ, ಸೇತುವೆ ಕುಸಿದು ಬಿದ್ದಿತ್ತು. ಕೆಲವು ಕಾರುಗಳು ಅದರಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ನಾವೆಲ್ಲಾ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳಲ್ಲಿ ಇದ್ದ ಜನರನ್ನು ರಕ್ಷಣೆ ಮಾಡಿದೆವು. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟೆವು ಎಂದು ಹೇಳಿದರು.

  • ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಮಂಡ್ಯ: ಸತತವಾಗಿ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಪಡಿತರ ಅಕ್ಕಿ ಮತ್ತು ಬೇಳೆ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೆಆರ್ ಪೇಟೆ ಸೊಸೈಟಿಯಿಂದ ನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಾರಿಯಲ್ಲಿ ಪಡಿತರ ಅಕ್ಕಿ ಮತ್ತು ಬೇಳೆಯನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ನಾಯಕನಹಳ್ಳಿ ಕೆರೆಗೆ ಅಡ್ಡಲಾಗಿ ವಾಹನ ಸಂಚರಿಸಲು ಕಟ್ಟಲಾಗಿದ್ದ ಸೇತುವೆ ಮೇಲೆ ಬಂದಿದೆ. ಆದರೆ ಸತತ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ತಕ್ಷಣ ಕುಸಿದಿದೆ. ಪರಿಣಾಮ ಪಡಿತರರಿಗಾಗಿ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿದೆ.

    ಲಾರಿ ನೀರಿನಲ್ಲಿ ಬಿದ್ದುದ್ದರಿಂದ ಸುಮಾರು 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ನೀರಿಗೆ ಧುಮುಕಿ ಆಹಾರ ವಸ್ತುಗಳನ್ನು ಮೇಲೆತ್ತಲು ಲಾರಿಯವರಿಗೆ ಸಹಾಯ ಮಾಡಿದ್ದಾರೆ. ಈ ಸೇತುವೆ ಸುಮಾರು 22 ವರ್ಷ ಹಳೆಯದಾಗಿದ್ದು, ಮಳೆಯಿಂದ ನನೆದು ಸೇತುವೆ ಕುಸಿದಿದೆ. ಇದರಿಂದಾಗಿ ಸಂತೆಬಾಚಹಳ್ಳಿ ಮತ್ತು ನಾಯಕನಹಳ್ಳಿ ಮಾರ್ಗ ಸಂಪೂರ್ಣ ಕಡಿತವಾಗಿದೆ.

    ಇನ್ನೂ ಲಾರಿ ನೀರಿಗೆ ಬಿದ್ದಿದ್ದು, ಸದ್ಯಕ್ಕೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ತಕ್ಷಣ ಕ್ರೇನ್ ತರಿಸಿ ಮೇಲೆತ್ತದಿದ್ದರೆ, ಮತ್ತಷ್ಟು ಅಪಾಯವಾಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.

  • ನೀರಿಗೆ ಹಾರಿದ ವ್ಯಕ್ತಿಯನ್ನು ನೋಡಲು ಜನ ಸೇರಿದ್ದ ವೇಳೆ ಸೇತುವೆ ಕುಸಿತ: ಇಬ್ಬರ ದುರ್ಮರಣ

    ನೀರಿಗೆ ಹಾರಿದ ವ್ಯಕ್ತಿಯನ್ನು ನೋಡಲು ಜನ ಸೇರಿದ್ದ ವೇಳೆ ಸೇತುವೆ ಕುಸಿತ: ಇಬ್ಬರ ದುರ್ಮರಣ

    ಪಣಜಿ: ದಕ್ಷಿಣ ಗೋವಾದ ಸಾನ್ವೋರ್‍ಡೆಮ್ ಹಾಗೂ ಕೊರ್ಕೊರೆಮ್ ಗ್ರಾಮದ ಮಧ್ಯೆ ನಿರ್ಮಿಸಲಾದ ಪೋರ್ಚುಗೀಸ್ ಕಾಲದ ಕಬ್ಬಿಣದ ಸೇತುವೆ ಕುಸಿದು ಮಹಾ ದುರಂತವೊಂದು ಗುರುವಾರ ಸಂಭವಿಸಿದೆ.

    ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೋಡಲು ಜನ ಸೇರಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ 50 ಮಂದಿ ನದಿಪಾಲಾದವರ 20 ಮಂದಿ ಈಜಿ ದಡ ಸೇರಿದ್ದರೆ, 14 ಮಂದಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    15ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮರೋಪಾದಿಯಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ನಡೆಯಿತು. ಎರಡು ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಇದೀಗ ಹೆಚ್ಚಿನ ಕಾರ್ಯಾಚರಣೆಗಾಗಿ ಭಾರತೀಯ ನೌಕಾದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಕಾರ್ಯಚರಣೆಯನ್ನು ಪರಿಶೀಲಿಸುತ್ತಿದ್ದಾರೆ.

    ಸೇತುವೆ ಕುಸಿತಕ್ಕೂ ಮುನ್ನ ಅದೇ ಸೇತುವೆಯಿಂದ ವ್ಯಕ್ತಿಯೋರ್ವ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ನೀರಿಗೆ ಬಿದ್ದ ಆ ವ್ಯಕ್ತಿಯನ್ನು ನೋಡಲು ಸುಮಾರು 50 ಜನ ಸೇತುವೆ ಒಂದು ತುದಿಗೆ ಬಂದು ನಿಂತಿದ್ದಾರೆ. ಮೊದಲೇ ಶಿಥಿಲಗೊಂಡಿದ್ದ ಸೇತುವೆ ಅಷ್ಟು ಜನರ ಭಾರ ತಾಳಲಾರದೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.