ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆರಿಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ರನ್ನು ಖರೀದಿಸಲು ಅವರ ಬಳಿ ಹಣದ ಕೊರತೆ ಎದುರಾಗಿದ್ದ ಸಂಗತಿಯನ್ನು ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಪಂಜಾಬ್ ತಂಡ ಕ್ರಿಸ್ ಗೇಲ್ ರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದ ಸಂಗತಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂಜಾಬ್ ತಂಡ ಗೇಲ್ ರನ್ನು ಖರೀದಿಸುವ ಮುನ್ನ ಅವರನ್ನು ಎರಡು ಬಾರಿ ಯಾವ ತಂಡವೂ ಖರೀದಿಸಲಿಲ್ಲ. ಮೂರನೇ ಬಾರಿ ಅವರ ಹೆಸರನ್ನು ಕರೆದ ವೇಳೆ ನಾವು ಖರೀದಿಸಿದ್ದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನವೇ ಬೇರೆ ಯಾವುದೇ ತಂಡ ಅವರನ್ನು ಖರೀದಿಸಿದ್ದರೆ ನಮ್ಮ ತಂಡ ಸೇರುವ ಅವಕಾಶ ಕೈ ತಪ್ಪುತ್ತಿತ್ತು. ಗೇಲ್ ರ ಮೂಲ ಬೆಲೆಗೆ ಅವರನ್ನು ಖರೀದಿಸಿದ ವೇಳೆ ನಮ್ಮ ಬಳಿ ಕೇವಲ 2.1 ಕೋಟಿ ರೂ ಮಾತ್ರ ಉಳಿದಿತ್ತು ಎಂಬ ಸತ್ಯವನ್ನು ತಿಳಿಸಿದ್ದಾರೆ. ಅಂದ ಹಾಗೇ ಪಂಜಾಬ್ ತಂಡ ಈ ಬಾರಿ ನಿಗದಿಪಡಿಸಿದ್ದ ಒಟ್ಟು ಮೊತ್ತ 67.5 ಕೋಟಿ ರೂ. ಪೈಕಿ ಕೇವಲ 10 ಲಕ್ಷವನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ.
ಪಂಜಾಬ್ ತಂಡ ತಮ್ಮನ್ನು ಆಯ್ಕೆ ಮಾಡಿರುವುದು ಸರಿ ಎಂದು ತೋರಿಸಿಕೊಟ್ಟಿರುವ ಗೇಲ್ ಈ ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಹಾಗೂ ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸಲು ಹಿಂದೇಟು ಹಾಕಿದ್ದ ಫ್ರಾಂಚೈಸಿಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಪಂಜಾಬ್ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದ್ದ ಸೆಹ್ವಾಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ತಂಡದ ಮೊತ್ತೊಬ್ಬ ಆಟಗಾರ ಯುವರಾಜ್ ಸಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ವಾಡಿಯಾ, ಇದೂವರೆಗಿನ ಪಂದ್ಯಗಳಲ್ಲಿ ಯುವಿ ಉತ್ತಮ ಪ್ರದರ್ಶನ ನೀಡದೆ ಇದ್ದರೂ, ಮುಂದಿನ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸವಿದೆ ಎಂದು ತಿಳಿಸಿದರು. ಅಲ್ಲದೇ ತಂಡಕ್ಕೆ ಭಾರತೀಯ ಆಟಗಾರ ನಾಯಕರಾಗುವ ಇಚ್ಛೆ ಇತ್ತು, ಅಶ್ವಿನ್ ಮೂಲಕ ಇದು ಸಾಧ್ಯವಾಗಿದೆ ಎಂದರು.
ಕೋಲ್ಕತ್ತಾ: ಮಾಜಿ ಕೋಚ್ ಗ್ರೇಗ್ ಚಾಪೆಲ್ ಅವರ ಸಂಚಿನ ವಿಚಾರವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ತಿಳಿಸಿದ ಮೊದಲ ವ್ಯಕ್ತಿ ನಾನು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2005ರ ಜಿಂಬಾಬ್ವೆ ಪ್ರವಾಸದಲ್ಲಿ ಪಂದ್ಯದ ವೇಳೆ ಹೊಟ್ಟೆನೋವು ಬಂದಿತ್ತು. ಹೀಗಾಗಿ 5 ಓವರ್ ಕಾಲ ನನಗೆ ಬ್ರೇಕ್ ಬೇಕು ಎಂದು ಅಂಪೈರ್ ಗೆ ತಿಳಿಸಿದ್ದೆ. ಬ್ರೇಕ್ ಪಡೆದು ಪೆವಿಲಿಯನ್ ಗೆ ತೆರಳಿದ್ದಾಗ ನನ್ನ ಮುಂದೆ ಚಾಪೆಲ್ ಕುಳಿತ್ತಿದ್ದರು. ಈ ವೇಳೆ ಚಾಪೆಲ್ ಅನುಮಾನಾಸ್ಪದವಾಗಿ ಏನೋ ಬರೆದು ಬಿಸಿಸಿಐಗೆ ಮೇಲ್ ಮಾಡಿದ್ದನ್ನು ಗಮನಿಸಿದೆ. ಕೂಡಲೇ ಈ ವಿಚಾರವನ್ನು ನಾನು ಗಂಗೂಲಿಗೆ ತಿಳಿಸಿದೆ. ಮಹತ್ವದ ವಿಚಾರದ ಬಗ್ಗೆ ಚಾಪೆಲ್ ಮೇಲ್ ಮಾಡಿದ್ದಾರೆ ಎಂದು ಗಂಗೂಲಿ ಅವರಲ್ಲಿ ಹೇಳಿದ್ದೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಗಂಗೂಲಿ ಮತ್ತು ಮಾಜಿ ಕೋಚ್ ಜಾನ್ ರೈಟ್ ನನ್ನನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಸಿದ್ದನ್ನು ಹೇಳಿಕೊಂಡ ಸೆಹ್ವಾಗ್, ನನ್ನ ಯಾಕೆ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಳುಹಿಸುತ್ತಿದ್ದೀರಿ ಎಂದು ಗಂಗೂಲಿ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ನಿನ್ನಲ್ಲಿ ಸಾಮರ್ಥ್ಯವಿದೆ ಎಂದು ಉತ್ತರಿಸಿದರು. ಈ ಉತ್ತರ ಬಂದ ಕೂಡಲೇ ನಾನು, 1998ರಿಂದ ನೀವು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಿದ್ದೀರಿ. ನಾನು ಮಧ್ಯಮ ಕ್ರಮಾಂಕದಲ್ಲಿ ಬರುತ್ತೇನೆ. ಯಾಕೆ ನೀವು ಸಚಿನ್ ಜೊತೆಗೆ ಇಳಿಯಬಾರದು ಎಂದು ಮರು ಪ್ರಶ್ನೆ ಹಾಕಿದೆ.
ಈ ಪ್ರಶ್ನೆಗೆ ಜಾಸ್ತಿ ನನ್ನಲ್ಲಿ ಪ್ರಶ್ನೆ ಕೇಳಬೇಡ. ಆರಂಭಿಕ ಆಟಗಾರನಾಗಿ ಇಳಿಯುವುದಿದ್ದರೆ ಇಳಿ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಬೆಂಚ್ ಮೇಲೆ ಕುಳಿತಿಕೋ ಎಂದು ಖಡಕ್ ಆಗಿ ಗಂಗೂಲಿ ಹೇಳಿದರು. ಇದಕ್ಕೆ ನಾನು ಅವರಲ್ಲಿ, ಒಂದು ವೇಳೆ ಮೊದಲ ಆಟಗಾರನಾಗಿ ಇಳಿದು ವೈಫಲ್ಯಗೊಂಡರೆ ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಬೇಕು ಎಂದು ಕೇಳಿಕೊಂಡಿದ್ದೆ. ನನ್ನ ಭರವಸೆಯನ್ನು ದಾದಾ ಒಪ್ಪಿಕೊಂಡರು. ನಂತರ ನಾನು ಕೋಚ್ ಜಾನ್ ರೈಟ್ ಬಳಿ ತೆರಳಿ ಗಂಗೂಲಿ ಅವರ ಆಸೆಯನ್ನು ನಾನು ಈಡೇರಿಸುತ್ತೇನೆ ಎಂದು ತಿಳಿಸಿದೆ ಎಂಬುದಾಗಿ ಸೆಹ್ವಾಗ್ ವಿವರಿಸಿದರು.
ಇಂಗ್ಲೆಂಡ್ ವಿರುದ್ಧ ನಾನು ಮೊದಲ ಪಂದ್ಯವನ್ನು ಆಡಿದ್ದು 84 ರನ್ ಗಳಿಸಿ ಔಟಾಗಿದ್ದೆ. ಇದಾದ ನಂತರ ಸಚಿನ್, ಗಂಗೂಲಿ, ದ್ರಾವಿಡ್ ನನ್ನನ್ನು `ಸ್ಟುಪಿಡ್’ ಎಂದು ಕರೆದರು. ಯಾಕೆ ಈ ರೀತಿ ಕರೆದಿದ್ದು ಎಂದು ಕೇಳಿದ್ದಕ್ಕೆ ಅವರು, ಲಾರ್ಡ್ಸ್ ಮೈದಾನದಲ್ಲಿ ಯಾರೂ ಮೊದಲ ಪಂದ್ಯದಲ್ಲಿ ಶತಕ ಹೊಡೆದಿರಲಿಲ್ಲ. ಆ ಸುವರ್ಣ ಅವಕಾಶವನ್ನು ನೀನು ಕಳೆದುಕೊಂಡಿದ್ದಿ ಎಂದು ತಿಳಿಸಿದರು. ಅದಕ್ಕೆ ನಾನು, ಕನಿಷ್ಟ ಪಕ್ಷ 84 ರನ್ ಹೊಡೆದಿದ್ದಕ್ಕೆ ನನಗೆ ಸಂಪೂರ್ಣ ತೃಪ್ತಿ ಸಿಕ್ಕಿದೆ ಎಂದು ಅಂದು ನಾನು ಹೇಳಿದ್ದೆ ಎಂದು ತಿಳಿಸಿದರು.
2005 ರಿಂದ 2007ರವರೆಗೆ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದರು. ಜಿಂಬಾಬ್ವೆ ಪ್ರವಾಸದಲ್ಲೇ ಸೌರವ್ ಗಂಗೂಲಿ ಅವರನ್ನು ತಂಡದಿಂದ ಚಾಪೆಲ್ ಹೊರಹಾಕಿದ್ದರು. ಇವರ ಅವಧಿಯಲ್ಲಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ವಿಚಾರದಿಂದಲೇ ಹೆಚ್ಚು ಸುದ್ದಿಯಾಗುತಿತ್ತು. ಗಂಗೂಲಿ, ಸೆಹ್ವಾಗ್ ಅಲ್ಲದೇ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹಲವು ವೇದಿಕೆಗಳಲ್ಲಿ ಚಾಪೆಲ್ ಅವರ ವಿರುದ್ಧ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.
ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.
ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.
Gayle now has 279 sixes in IPL, which is 100 more than the next best, Rohit Sharma (179).
Most sixes in IPL: 279* Gayle 179 Rohit 174 Raina 167 ABD 166 Kohli#KXIPvSRH
ಮೊಹಾಲಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರ ಅಭಿಮಾನಿಗಳ ಬಳಗ ಕಡಿಮೆಯಾಗಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.
ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, 93 ವರ್ಷದ ಅಭಿಮಾನಿಯನ್ನು ಭೇಟಿ ಮಾಡಿರುವ ಕುರಿತು ಬರೆದುಕೊಂಡಿದ್ದಾರೆ.
Felt extremely touched on meeting Om Prakash ji, who is 93 years old and came from Patiala to meet me in Chandigarh and expressed his love for me. Dada ko Pranam. pic.twitter.com/8AHHqNl753
ಮೂಲತಃ ಚಂಡೀಗಢದ ಪಟಿಯಾಲ ನಿವಾಸಿಯಾದ ಓಂ ಪ್ರಕಾಶ್ ಅವರು ಸೆಹ್ವಾಗ್ ಅವರ ಅಭಿಮಾನಿಯಾಗಿದ್ದು, ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಕುರಿತು ಮಾಹಿತಿ ಪಡೆದ ಸೆಹ್ವಾಗ್ ಕೂಡಲೇ ಅವರ ಬಳಿ ತೆರಳಿ ಮಾತನಾಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಓಂ ಪ್ರಕಾಶ್ ಅವರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವನ್ನು ನೀಡಿದೆ. ನನ್ನನ್ನು ಭೇಟಿ ಮಾಡಲು ಬಂದ ಓಂ ಪ್ರಕಾಶ್ ದಾದಾ ಅವರಿಗೆ ಅವರ ಪ್ರೀತಿಗೆ ನನ್ನ ನಮಸ್ಕಾರ ಎಂದು ಹೇಳಿದ್ದಾರೆ.
ಸೆಹ್ವಾಗ್ ಅವರ ಈ ಸರಳತೆಯನ್ನು ತಿಳಿಸುವ ಮತ್ತಷ್ಟು ಫೋಟೋಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೆಹ್ವಾಗ್ ಅವರು ಓಂ ಪ್ರಕಾಶ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿರುವ ಫೋಟೋವನ್ನು ಪ್ರಕಟಿಸಿದೆ. ಈ ಫೋಟೋರನ್ನು ಕಂಡ ಅಭಿಮಾನಿಗಳು ಸೆಹ್ವಾಗ್ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.
Once viru fans will always viru fans till end of life😍😍
We all love Viru. My father who is no more and was on dialysis & in a lot of pain would get all alive and happy seeing Viru bat. Viru you will always remain my sunshine man.
ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಕಳ್ಳತನ ಆರೋಪದಲ್ಲಿ ಸಾರ್ವಜನಿಕರಿಂದ ಹೊಡೆತ ತಿಂದು ಮೃತಪಟ್ಟ ಕೇರಳ ಆದಿವಾಸಿ ಮಧು ಕುಟುಂಬಕ್ಕೆ ಸೆಹ್ವಾಗ್ ಆರ್ಥಿಕ ಸಹಾಯ ನೀಡಿದ್ದಾರೆ.
ಸೆಹ್ವಾಗ್ ಫೌಂಡೇಶನ್ ಮೂಲಕ ಈಗಾಗಲೇ ಸಾಕಷ್ಟು ಸಹಾಯ ಕಾರ್ಯಗಳನ್ನು ಮಾಡುತ್ತಿರುವ ಸೆಹ್ವಾಗ್ ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದ್ಯ ಸೆಹ್ವಾಗ್, ಮಧು ಅವರ ತಾಯಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಏಪ್ರಿಲ್ 11 ರಂದು ಕೇರಳದ ಅಟ್ಟಾಪಾಡಿಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದ ವೇಳೆ ಮೃತ ಮಧು ಅವರ ತಾಯಿಗೆ ಸೆಹ್ವಾಗ್ ಫೌಂಡೇಶನ್ ನಿಂದ 1.50 ಲ್ಷ ರೂ. ಚೆಕ್ ವಿತರಣೆಯಾಗಲಿದೆ ಎಂದು ವರದಿಯಾಗಿದೆ.
ಸೆಹ್ವಾಗ್ ಚೆಕ್ ನೊಂದಿಗೆ ಮೃತ ಕುಟುಂಬದವರಿಗೆ ಸಂತಾಪ ಪತ್ರವನ್ನು ಬರೆದು ಧೈರ್ಯ ತುಂಬಿದ್ದಾರೆ. ಸದ್ಯ ಸೆಹ್ವಾಗ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತಪಡಿವಾಗುತ್ತಿದೆ.
ಏನಿದು ಘಟನೆ: ಕೇರಳದ ಅಟ್ಟಪ್ಪಾಡಿಯಲ್ಲಿ ಹಸಿವಿನಿಂದ ಮಧು ಎಂಬ ಆದಿವಾಸಿ ಯುವಕ ಸ್ಥಳೀಯ ಅಂಗಡಿಯಿಂದ ಆಹಾರ ಕಳ್ಳತನ ಮಾಡಿದ್ದ. ಈ ವೇಳೆ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಆತನನ್ನು ಸ್ಥಳೀಯರು ಕಟ್ಟಿ ಹಾಕಿ ಥಳಿಸಿ ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗವ ವೇಳೆ ಆತ ಮೃತಪಟ್ಟಿದ್ದ.ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ನವದೆಹಲಿ: ಮುಂಬರುವ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆರ್.ಅಶ್ವಿನ್ ರನ್ನು ಆಯ್ಕೆ ಮಾಡಲಾಗಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಮಾಡುವ ಮೂಲಕ ಸೋಮವಾರ ಅಶ್ವಿನ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದನ್ನು ಪಂಜಾಬ್ ತಂಡದ ಸಲಹೆಗಾರ ಸೆಹ್ವಾಗ್ ತಿಳಿಸಿದ್ದರು. ಆದರೆ ಯುವರಾಜ್ ಸಿಂಗ್ ರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕಿತ್ತು ಎಂದು ಅಭಿಮಾನಿಗಳು ಭಾರೀ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳ ಪ್ರತಿಕ್ರಿಯೆಗಳಿಗೆ ಸೆಹ್ವಾಗ್ ಉತ್ತರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸೆಹ್ವಾಗ್ ತಂಡದ ಕ್ಯಾಪ್ಟನ್ ರೇಸ್ ನಲ್ಲಿ ಯುವರಾಜ್ ಸಿಂಗ್ ಇದ್ದರು. ಆದರೆ ಮ್ಯಾನೇಜ್ ಮೆಂಟ್ ಅಶ್ವಿನ್ ರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿದೆ ಎಂದರು.
ನಾನು ಸಹ ತಂಡಕ್ಕೆ ಬೌಲರ್ ಒಬ್ಬ ನಾಯಕರಾಗಿ ಆಯ್ಕೆ ಮಾಡುವ ಕುರಿತು ಚಿಂತನೆ ನಡೆಸಿದ್ದೆ. ಏಕೆಂದರೆ ಒಬ್ಬ ಬೌಲರ್ ತಂಡದ ನಾಯಕ ಆದರೆ ಪಂದ್ಯದ ಕುರಿತು ಬೇಗ ಅರಿತುಕೊಳ್ಳುತ್ತಾರೆ. ನಾನು ವಾಸಿಂ ಅಕ್ರಮ್, ಕಪಿಲ್ ದೇವ್ ಅವರ ಅಭಿಮಾನಿ ಇಬ್ಬರು ಬೌಲರ್ ಗಳು ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಅಶ್ವಿನ್ ಸಹ ಉತ್ತಮವಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ಭರವಸೆ ಇದೆ ಎಂದರು.
ತಂಡದ ನಾಯಕರಾಗಿ ಆಯ್ಕೆ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅಶ್ವಿನ್, ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಲು ಹೆಚ್ಚು ಉತ್ಸುಕನಾಗಿದ್ದೇನೆ. ತಂಡದ ಆಯ್ಕೆ ಸಮಿತಿ ಇಂತಹ ಅವಕಾಶ ನೀಡುತ್ತದೆ ಎಂದುಕೊಂಡಿರಲಿಲ್ಲ. ಮೊದಲ ಬಾರಿಗೆ ನಾಯಕನಾಗುವ ಅವಕಾಶ ಲಭಿಸಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹರಜು ಪ್ರಕ್ರಿಯೆಯಲ್ಲಿ ಆರ್. ಅಶ್ವಿನ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 7.6 ಕೋಟಿ ನೀಡಿ ಖರೀದಿಸಿತ್ತು.
ನವದೆಹಲಿ: ಟ್ಟಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುವ ವೀರೇಂದ್ರ ಸೆಹ್ವಾಗ್ ಕೇರಳದ ವ್ಯಕ್ತಿಯನ್ನು ಕಟ್ಟಿ ಹಾಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಈಗ ಕ್ಷಮೆ ಕೇಳಿದ್ದಾರೆ.
ಫೆ.24 ರ ಮಧ್ಯಾಹ್ನ 1.18ಕ್ಕೆ ಸೆಹ್ವಾಗ್, ಬುಡಕಟ್ಟು ಜನಾಂಗದ ಮಧು 1 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಿದ್ದಕ್ಕೆ ಉಬೈದ್, ಹುಸೈನ್, ಅಬ್ದುಲ್ ಕರೀಂ ಥಳಿಸಿ ಹತ್ಯೆ ಮಾಡಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿ ನಡೆದಿದ್ದು ಇದೊಂದು ತಲೆ ತಗ್ಗಿಸುವ ಪ್ರಕರಣ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಬಳಿಕ ಸೆಹ್ವಾಗ್ ಈ ಮೂವರ ಹೆಸರನ್ನು ಬರೆದು ಆರೋಪಿಗಳನ್ನು ಧರ್ಮದ ಆಧಾರದಲ್ಲಿ ಈ ಪ್ರಕರಣದಲ್ಲಿ ನೋಡಿದ್ದು ತಪ್ಪು ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಬರತೊಡಗಿತು. ಈ ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗುತ್ತಲೇ ಕೇರಳ ಪೊಲೀಸರು ಕೃತ್ಯಕ್ಕೆ ಸಾಥ್ ನೀಡಿದ್ದ ಆರೋಪದ ಅಡಿಯಲ್ಲಿ 16 ಮಂದಿಯನ್ನು ಬಂಧಿಸಿದ್ದರು.
ಫೆ.24 ರಾತ್ರಿ 9 ಗಂಟೆಯ ವೇಳೆಗೆ ಸೆಹ್ವಾಗ್ ಟ್ವೀಟ್ ಮಾಡಿ, ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರನ್ನು ಬರೆಯುವಾಗ ಒಂದು ಹೆಸರನ್ನು ಬಿಟ್ಟಿದ್ದೇನೆ. ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇವೆ. ಆ ಟ್ವೀಟ್ ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಕಿಲ್ಲರ್ ಗಳು ಧರ್ಮದ ಆಧಾರದಲ್ಲಿ ಬೇರೆ ಬೇರೆಯಾಗಿದ್ದರೂ ಹಿಂಸಾತ್ಮಕ ಮನಸ್ಥಿತಿಯಲ್ಲಿ ಒಂದಾಗಿದ್ದಾರೆ ಎಂದು ಬರೆದು ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ: ಕೇರಳ ಶಾಕಿಂಗ್ – ಸಾಯೋವರೆಗೂ ಕಳ್ಳನಿಗೆ ಥಳಿಸಿ ಸೆಲ್ಫಿ ಕ್ಲಿಕ್ಕಿಸಿದ ಸಾರ್ವಜನಿಕರು!
ನವದೆಹಲಿ: ಸೌರವ್ ಗಂಗೂಲಿ ತ್ಯಾಗಮಾಡಿ ಅವಕಾಶ ನೀಡದೇ ಇದ್ದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಆಟಗಾರನಾಗಿ ಹೊರ ಹೊಮ್ಮುತ್ತಿರಲಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಶನಿವಾರ ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಮಾತನಾಡಿದ ಸೆಹ್ವಾಗ್, 2004ರಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದ ವೇಳೆ ಧೋನಿ ಟೀಂ ಇಂಡಿಯಾಕ್ಕೆ ಸೇರಿದ್ದರು. ಒಂದೇ ವರ್ಷದಲ್ಲಿ ಧೋನಿ ಪಾಕಿಸ್ತಾನದ ವಿರುದ್ಧ 148 ಮತ್ತು ಶ್ರೀಲಂಕಾ ವಿರುದ್ಧ 183 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಅಂದು 3ನೇ ಕ್ರಮಾಂಕವನ್ನು ಸೌರವ್ ತ್ಯಾಗ ಮಾಡಿ ಅವಕಾಶ ನೀಡಿದ ಕಾರಣ ಧೋನಿ ಇಂದು ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದರು.
ದಾದಾ ಯಾವಾಗಲೂ ಹೊಸತನ್ನ ಬಯಸುವ ನಾಯಕರಾಗಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ನಾನಾ ಬದಲಾವಣೆ ಮಾಡಿ ತಂಡದ ಗೆಲುವಿಗೆ ಶ್ರಮಿಸುತ್ತಿದ್ದರು. ನಾನು ಆರಂಭಿಕನಾಗಿ ಕ್ರೀಸ್‍ಗೆ ಇಳಿದರೆ ನಾಯಕರಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದರು. ಒಂದು ವೇಳೆ ಸ್ಕೋರ್ ಕಡಿಮೆ ಇದ್ದಾಗ ಪಿಂಚ್ ಹಿಟ್ಟರ್ ಇರ್ಫಾನ್ ಪಠಾಣ್ ಅಥವಾ ಧೋನಿಯನ್ನು ಕಣಕ್ಕಿಳಿಸಿ ಸ್ಕೋರ್ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದರು ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಭಾರತದ ಕೆಲವು ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಅಂತಹ ಶ್ರೇಷ್ಠ ನಾಯಕ ನನಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ನೀಡುತ್ತಿದ್ದರು. ಅಲ್ಲದೇ ಮೂರು ನಾಲ್ಕು ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕಿದ್ದ ಸೌರವ್ ತ್ಯಾಗ ಮಾಡಿ ಧೋನಿಗೆ ಅವಕಾಶ ನೀಡಿದ್ದರು. ಯಾವಾಗಲೂ ಹೊಸಬರ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹ ನೀಡುತ್ತಿದ್ದ ಸೌರವ್, ಧೋನಿಗೂ ಸಹ ಉತ್ತಮ ಅವಕಾಶ ನೀಡಿದ್ದರು ಎಂದು ತಿಳಿಸಿದರು.
ದಾದಾ ನಂತರ ರಾಹುಲ್ ದ್ರಾವಿಡ್ ಸಮಯದಲ್ಲೂ ಕೂಡ ಧೋನಿ ಬೆಸ್ಟ್ ಫಿನಿಷರ್ ಆಗಿ ಹೊರಹೊಮ್ಮಿದರು. ಅಲ್ಲದೇ ಯುವರಾಜ್ ಮತ್ತು ಧೋನಿ ಜೊತೆಯಾಟವು ಒಂದು ಉತ್ತಮವಾಗಿತ್ತು ಎಂದು ಸೆಹ್ವಾಗ್ ಸ್ಮರಿಸಿದರು.
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ ನಡೆಯುತ್ತಿರುವ ಇಂದೋರ್ ಕ್ರೀಡಾಂಗಣದಲ್ಲಿ ಭಾನುವಾರ ರನ್ ಮಳೆ ಹರಿದರೂ ಅಚ್ಚರಿ ಪಡಬೇಕಿಲ್ಲ. ಕಾರಣ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದ ಇತಿಹಾಸ ರನ್ ಮಳೆಯ ಕಥೆಯನ್ನೇ ಹೇಳುತ್ತದೆ.
ಈ ಮೈದಾನದಲ್ಲಿ ಇದುವರೆಗೆ ಒಟ್ಟು 4 ಪಂದ್ಯಗಳು ನಡೆದಿದ್ದು ಪ್ರತಿ ಇನ್ನಿಂಗ್ಸ್ ನಲ್ಲೂ ಸರಾಸರಿ 282 ರನ್ ಹರಿದಿದೆ.
2011ರ ಡಿಸೆಂಬರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 418 ರನ್ ಗಳಿಸಿತ್ತು. ಇದೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 208 ಎಸೆತಗಳಲ್ಲಿ 219 ರನ್ ಗಳಿಸಿ ದ್ವಿಶತಕ ಗಳಿಸಿದ್ದರು.
ಇಂದೋರ್ ನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಪಿಚ್ ಇನ್ನೂ ತೇವವಾಗಿದೆ. ಇದರಿಂದ ಬಾಲ್ ಗೆ ಹೆಚ್ಚು ಬೌನ್ಸ್ ಸಿಗಲ್ಲ. ಪಂದ್ಯದ ವೇಳೆಯಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.
ಈಗಾಗಲೇ 2 ಪಂದ್ಯವನ್ನು ಗೆದ್ದಿರೋ ಟೀಂ ಇಂಡಿಯಾ ಭಾನುವಾರದ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಇದಕ್ಕೆ ಆಸೀಸ್ ತಂಡ ಬ್ರೇಕ್ ಹಾಕುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಬೆಂಗಳೂರು: 13 ವರ್ಷಗಳ ಹಿಂದೆ ಈ ಅವಧಿಯಲ್ಲಿ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ಯಾರು ನಿರ್ಮಿಸದ ಹೊಸ ದಾಖಲೆಯನ್ನು ಸೆಹ್ವಾಗ್ ಬರೆದಿದ್ದರು. ಮೊದಲ ಬಾರಿಗೆ ಕ್ರಿಕೆಟ್‍ನಲ್ಲಿ ಬದ್ಧ ವೈರಿ ಎಂದೇ ಪರಿಗಣಿಸಲಾಗಿರುವ ಪಾಕ್ ವಿರುದ್ಧ ತ್ರಿಶತಕ ಸಿಡಿಸಿ ಮುಲ್ತಾನಿನ ಸುಲ್ತಾನ ಎಂಬ ಗೌರವಕ್ಕೆ ವೀರೂ ಪಾತ್ರರಾಗಿದ್ದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪಾಕಿನ ಬೌಲರ್‍ಗಳನ್ನು ಬೆವರಿಳಿಸಿಬಿಟ್ಟಿದ್ದರು ಸೆಹ್ವಾಗ್. 531 ನಿಮಿಷಗಳ ಕಾಲ ಕ್ರಿಸ್‍ನಲ್ಲಿ ಸೆಹ್ವಾಗ್ ಎದುರಿಸಿದ್ದು 375 ಎಸೆತ. ಬಾರಿಸಿದ್ದು 39 ಬೌಂಡರಿ, 6 ಸಿಕ್ಸರ್, ಒಟ್ಟು ಹೊಡೆದದ್ದು 309 ರನ್.
ಟಾಸ್ ಗೆದ್ದ ದ್ರಾವಿಡ್ ಬ್ಯಾಟಿಂಗ್ ಆರಿಸಿಕೊಂಡರು. ಬ್ಯಾಟಿಂಗ್ ಆರಂಭಿಸಿದ ಸೆಹ್ವಾಗ್ ಆರಂಭದಲ್ಲಿ ನಿಧನವಾಗಿ ಆಡಲು ಆರಂಭಿಸಿ ನಂತರ ಎಂದಿನ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟ್‍ಗೆ ಅಕಾಶ್ ಚೋಪ್ರಾ ಜೊತೆಗೂಡಿ 39.4 ಓವರ್‍ಗಳಲ್ಲಿ 160 ರನ್ ಬಂತು.
Also 9 years ago on this day, got out for 319 against SA, having reached 300 previous day.March mein target poora karne ki alag hi feel hai. pic.twitter.com/buoabIH9ep
ನಂತರ ಬಂದ ದ್ರಾವಿಡ್ 6ರನ್ ಗಳಿಸಿ ಬೇಗನೇ ಔಟಾದರೂ ಸಚಿನ್ ಬಂದ ಮೇಲೆ ಇಬ್ಬರ ಜುಗಲ್‍ಬಂದಿ ಜೋರಾಯಿತು. ಪಾಕ್ ಬೌಲರ್‍ಗಳ ಮೇಲೆ ಬೌಂಡರಿಗಳ ಮಳೆಯನ್ನೇ ಸುರಿಸಿದ ಸೆಹ್ವಾಗ್ 107 ಎಸೆತಗಳಲ್ಲಿ ಶತಕ ಸಿಡಿಸಿ, 222 ಎಸೆತಗಳಲ್ಲಿ 200 ರನ್ ಹೊಡೆದರು. ಸೆಹ್ವಾಗ್, ಸಚಿನ್ ಭರ್ಜರಿ ಆಟದಿಂದಾಗಿ ಮೊದಲ ದಿನದ ಅಂತ್ಯಕ್ಕೆ ಭಾರತದ ಸ್ಕೋರ್ 90 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್. ಸೆಹ್ವಾಗ್ 228 ರನ್ ಗಳಿಸಿದ್ದರೆ, ಸಚಿನ್ 60 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು.
ದ್ವಿಶತಕ ಸಿಡಿಸಿದ ಸೆಹ್ವಾಗ್ ತ್ರಿಶತಕ ಸಿಡಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಯಾಕೆಂದರೆ ಸೆಹ್ವಾಗ್ ಶತಕದ ಬಳಿಕ ಏಕದಿನ ಪಂದ್ಯದಂತೆ ಬ್ಯಾಟ್ ಬೀಸುತ್ತಿದ್ದರು. ಹೀಗಾಗಿ ತ್ರಿಶತಕ ಸಿಡಿಸುವುದು ಕಷ್ಟ ಎನ್ನುವ ಭಾವನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಸೆಹ್ವಾಗ್ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮಾರ್ಚ್ 29 ರಂದು ಸ್ಪಿನ್ನರ್ ಮುಷ್ತಾಕ್ ಎಸೆದ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಮೊದಲ ತ್ರಿಶತಕ ಸಿಡಿಸಿದರು. ಈ ಮೂಲಕ ಭಾರತದ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಗೆ ಪಾತ್ರರಾದರು.
ಅಂತಿಮವಾಗಿ 309 ರನ್‍ಗಳಿಸಿದ್ದಾಗ ಸಮಿ ಎಸೆತದಲ್ಲಿ ತೌಫಿಕ್ ಉಮರ್‍ಗೆ ಕ್ಯಾಚ್ ನೀಡಿ ಸೆಹ್ವಾಗ್ ಔಟಾದರು. 375 ಎಸೆತಗಳನ್ನು ಎದುರಿಸಿದ ಈ ಅಮೋಘ ಇನ್ನಿಂಗ್ಸ್ ನಲ್ಲಿ 39 ಬೌಂಡರಿ, 6 ಸಿಕ್ಸರ್ ಗಳು ಸಿಡಿಯಲ್ಪಟ್ಟಿತ್ತು. ಮೂರನೇ ವಿಕೆಟ್‍ಗೆ ಸೆಹ್ವಾಗ್ ಮತ್ತು ಸಚಿನ್ 83.5 ಓವರ್‍ಗಳಲ್ಲಿ 336 ರನ್‍ಗಳ ಜೊತೆಯಾಟವನ್ನು ಆಡುವ ಮೂಲಕ ಭಾರತದ ಇನ್ನಿಂಗ್ಸ್ 500 ರನ್‍ಗಳ ಗಡಿಯನ್ನು ದಾಟಿಸಿದ್ದರು.
ಈ ಟೆಸ್ಟ್‍ನಲ್ಲಿ ಸಚಿನ್ ಔಟಾಗದೇ 194 ರನ್, ಯುವರಾಜ್ 59 ರನ್ ಹೊಡೆದರು. ಅಂತಿಮವಾಗಿ ಭಾರತ 161.5 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 675 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಒಟ್ಟು 675 ರನ್‍ಗಳಲ್ಲಿ ಸೆಹ್ವಾಗ್ 509 ರನ್‍ಗಳವರೆಗೂ ಕ್ರೀಸ್‍ನಲ್ಲಿದ್ದು ವಿಶೇಷ.
ನಂತರ ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್‍ಗಳಿಗೆ ಆಲೌಟ್ ಆಗಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ 206 ರನ್‍ಗಳಿಗೆ ಆಲೌಟ್ ಆಯ್ತು. ಪರಿಣಾಮ ಭಾರತ ಒಂದು ಇನ್ನಿಂಗ್ಸ್ ಮತ್ತು 52 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
5 ವರ್ಷಗಳ ಬಳಿಕ ಸರಣಿ: 1999ರ ಕಾರ್ಗಿಲ್ ಯುದ್ಧದ ಬಳಿಕ ಭಾರತ ಮತ್ತು ಪಾಕ್ ನಡುವೆ ಯಾವುದೇ ಸರಣಿ ನಡೆಯಲಿಲ್ಲ. ಆದರೆ 2004ರಲ್ಲಿ ಎರಡೂ ಕಡೆ ಮಾತುಕತೆಗಳು ಫಲಪ್ರದವಾಗಿ 5 ವರ್ಷಗಳ ಬಳಿಕ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಸರಣಿ ಆಡಲು ಬಂದಿಳಿತ್ತು. ಮೂರು ಟೆಸ್ಟ್ ಸರಣಿಯನ್ನು ಭಾರತ 2-1 ಅಂತರಗಳಿಂದ ಗೆದ್ದುಕೊಂಡಿತ್ತು.
ಸೆಹ್ವಾಗ್ ಇನ್ನಿಂಗ್ಸ್ ಹೀಗಿತ್ತು:
50 ರನ್ – 60 ಎಸೆತ, 9 ಬೌಂಡರಿ, 1 ಸಿಕ್ಸರ್
100 ರನ್ – 107 ಎಸೆತ, 14 ಬೌಂಡರಿ, 4 ಸಿಕ್ಸರ್
150 ರನ್ – 150 ಎಸೆತ, 20 ಬೌಂಡರಿ, 5 ಸಿಕ್ಸರ್
200 ರನ್ – 222 ಎಸೆತ, 26 ಬೌಂಡರಿ, 5 ಸಿಕ್ಸರ್
250 ರನ್ – 299 ಎಸೆತ, 32 ಬೌಂಡರಿ, 5 ಸಿಕ್ಸರ್
300 ರನ್ – 364 ಎಸೆತ, 38 ಬೌಂಡರಿ, 6 ಸಿಕ್ಸರ್
309 ರನ್ – 375 ಎಸೆತ, 39 ಬೌಂಡರಿ, 6 ಸಿಕ್ಸರ್
On this Day In 2004 ,ended up doing Registry of this place in my name. Thank you for your loving reminders,an innings I will always cherish. pic.twitter.com/kTsSlAG97s