Tag: ಸೆಮಿಫೈನಲ್

  • ಗೌತಮ್‍ಗೆ 7 ವಿಕೆಟ್ – ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ

    ಗೌತಮ್‍ಗೆ 7 ವಿಕೆಟ್ – ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ

    ಜಮ್ಮು: ಗೌತಮ್ ಅವರ ಮಾರಕ ದಾಳಿಯಿಂದ ರಣಜಿ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ 167 ರನ್ ಗಳ ಭರ್ಜರಿ ಜಯದೊಂದಿಗೆ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ 330 ರನ್ ಗಳ ಕಠಿಣ ಗುರಿಯನ್ನು ಪಡೆದ ಜಮ್ಮು ಕಾಶ್ಮೀರ 62.4 ಓವರ್ ಗಳಲ್ಲಿ 192 ರನ್ ಗಳಿಗೆ ಆಲೌಟ್ ಆಯ್ತು. ಈ ಮೂಲಕ ಸತತ ಮೂರನೇ ಬಾರಿ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.

    ಭಾನುವಾರ 4 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿದ್ದ ಕರ್ನಾಟಕ ಇಂದು 106.5 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ನಿನ್ನೆ 75 ರನ್ ಗಳಿಸಿದ್ದ ಸಿದ್ಧಾರ್ಥ್ 98 ರನ್(177 ಎಸೆತ, 10 ಬೌಂಡರಿ, 2 ಸಿಕ್ಸರ್), ಶರತ್ 34 ರನ್(134 ಎಸೆತ) ಅಭಿಮನ್ಯು ಮಿಥುನ್ 10 ರನ್ ಗಳಿಸಿ ಔಟಾದರು.

    ಆರಂಭದಿಂದಲೇ ವಿಕೆಟ್ ಕೀಳುತ್ತಾ ಸಾಗಿದ ಗೌತಮ್ ಅಂತಿಮವಾಗಿ 54 ರನ್ ನೀಡಿ 7 ವಿಕೆಟ್ ಪಡೆದು ಜಮ್ಮು ಕಾಶ್ಮೀರದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿದರು. ಕಳೆದ ವರ್ಷ ಸೌರಷ್ಟ್ರ, 2018 ರಲ್ಲಿ ಕರ್ನಾಟಕ ವಿದರ್ಭ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮಣಿದಿತ್ತು. ಈ ವರ್ಷ ಉತ್ತಮ ತಂಡ ಹೊಂದಿರುವ ಕಾರಣ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.

    ಬೆಂಗಾಳ ಮತ್ತು ಒಡಿಶಾ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಬೆಂಗಾಳ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಕರ್ನಾಟಕವನ್ನು ಎದರಿಸಲಿದೆ. ಕೋಲ್ಕತ್ತಾದಲ್ಲಿ ಈ ಪಂದ್ಯ ನಡೆಯಲಿದೆ.

    ಗುಜರಾತ್ ಮತ್ತು ಸೌರಷ್ಟ್ರ ನಡುವೆ ಮತ್ತೊಂದು ಸೆಮಫೈನಲ್ ಪಂದ್ಯ ನಡೆಯಲಿದೆ. ಫೆ.29 ರಿಂದ ಮಾರ್ಚ್ 4 ರವರೆಗೆ ಈ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.

    ಸಂಕ್ಷಿಪ್ತ ಸ್ಕೋರ್

    ಕರ್ನಾಟಕ – 206 ಮತ್ತು 316
    ಜಮ್ಮು ಕಾಶ್ಮೀರ – 192 ಮತ್ತು 163

  • ಬದ್ಧ ವೈರಿಗಳ ಬಗ್ಗುಬಡಿದು ಇತಿಹಾಸ ಸೃಷ್ಟಿಸಲು ಬ್ಲೂ ಬಾಯ್ಸ್ ರೆಡಿ

    ಬದ್ಧ ವೈರಿಗಳ ಬಗ್ಗುಬಡಿದು ಇತಿಹಾಸ ಸೃಷ್ಟಿಸಲು ಬ್ಲೂ ಬಾಯ್ಸ್ ರೆಡಿ

    ಕೇಪ್ ಟೌನ್: ಹರಿಣಗಳ ನಾಡು ಇಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಂಡರ್-19 ವಿಶ್ವಕಪ್ ಸೆಮಿಫೈನಲ್ ತಲುಪಿರುವ ಭಾರತ-ಪಾಕಿಸ್ತಾನ ಸೆನ್ವೆಸ್‍ಪಾರ್ಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆಯಬೇಕಾದರೆ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು ಭಾರೀ ಕುತೂಹಲ ಗರಿಗೆದರಿದೆ.

    ಲೀಗ್ ಪಂದ್ಯದಲ್ಲಿ ಸೋಲನ್ನೇ ಕಾಣದ ಭಾರತದ ಯುವಪಡೆ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಿ ಸಾಗಿಬಂದಿದೆ. ನಾಯಕ ಪ್ರಿಯಾಂ ಗಾರ್ಗ್ ಸಾರಥ್ಯದಲ್ಲಿ ಟೀಂ ಇಂಡಿಯಾ ಹುಡುಗರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಮಿಂಚುವ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಪಾಕ್ ತಂಡವೂ ಸಹ ಕಳಪೆ ಮಾಡುವಂತಿಲ್ಲ. ನಾಜೀರ್ ನಾಯಕತ್ವದಲ್ಲಿ ಪಾಕ್ ಪಡೆ ಉತ್ತಮ ಪ್ರದರ್ಶನ ತೋರಿದ್ದು, ಇಂದು ಬಿಗ್ ಫೈಟ್ ಮ್ಯಾಚ್‍ನ್ನೇ ನಿರೀಕ್ಷಿಸಬಹುದಾಗಿದೆ.

    ಉಭಯ ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ. ಯಾವ ತಂಡ ಗೆಲವು ಸಾಧಿಸುತ್ತೋ, ಆ ತಂಡ ಫೈನಲ್‍ಗೆ ಲಗ್ಗೆ ಇಡಲಿದೆ. ಹಾಗಾಗಿ ಇಂದಿನ ಪಂದ್ಯ ಎಲ್ಲರ ಗಮನ ಸೆಳೆದಿದೆ.

    ಅಂಡರ್-19 ವಿಶ್ವಕಪ್‍ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಈವರೆಗೆ 9 ಬಾರಿ ಎದುರಾಗಿವೆ. ಇದರಲ್ಲಿ ಪಾಕ್ ತಂಡದ್ದೇ ಮೇಲುಗೈ. ಪಾಕಿಸ್ತಾನ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತದ 4 ಪಂದ್ಯಗಳಲ್ಲಿ ಜಯಿಸಿದೆ. ಆದರೆ 2012ರಿಂದ ಈವರೆಗೆ ಪಾಕ್ ವಿರುದ್ಧ ಭಾರತ ಸೋಲುಂಡಿಲ್ಲ. 2012, 2014, 2018 ರ ವಿಶ್ವಕಪ್‍ನಲ್ಲಿ ಭಾರತ ಜಯಭೇರಿ ಬಾರಿಸಿದೆ.

    ಮುಖಾಮುಖಿ ಮಾಹಿತಿ:
    ಅಂಡರ್ 19 ವಿಶ್ವಕಪ್ 1988 – ಪಾಕಿಸ್ತಾನಕ್ಕೆ 68 ರನ್‍ಗಳ ಜಯ
    ಅಂಡರ್ 19 ವಿಶ್ವಕಪ್ 1998 – ಭಾರತಕ್ಕೆ 5 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2002 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಜಯ
    ಅಂಡರ್ 19 ವಿಶ್ವಕಪ್ 2004 – ಪಾಕಿಸ್ತಾನಕ್ಕೆ 5 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2006 – ಪಾಕಿಸ್ತಾನಕ್ಕೆ 38 ರನ್‍ಗಳ ಜಯ
    ಅಂಡರ್ 19 ವಿಶ್ವಕಪ್ 2010 – ಪಾಕಿಸ್ತಾನಕ್ಕೆ 2 ವಿಕೆಟ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2012 – ಭಾರತಕ್ಕೆ 1 ವಿಕೆಟ್ ಜಯ
    ಅಂಡರ್ 19 ವಿಶ್ವಕಪ್ 2014 – ಭಾರತಕ್ಕೆ 40 ರನ್‍ಗಳ ಗೆಲುವು
    ಅಂಡರ್ 19 ವಿಶ್ವಕಪ್ 2018 – ಭಾರತಕ್ಕೆ 203 ರನ್‍ಗಳ ಜಯ

  • ಸಿಕ್ಸರ್‌ಗಳ ಸುರಿಮಳೆ, ಕರ್ನಾಟಕ ಫೈನಲಿಗೆ – ಒಂದೇ ಓವರಿನಲ್ಲಿ 5 ವಿಕೆಟ್ ಕಿತ್ತು ಅಭಿಮನ್ಯು ದಾಖಲೆ

    ಸಿಕ್ಸರ್‌ಗಳ ಸುರಿಮಳೆ, ಕರ್ನಾಟಕ ಫೈನಲಿಗೆ – ಒಂದೇ ಓವರಿನಲ್ಲಿ 5 ವಿಕೆಟ್ ಕಿತ್ತು ಅಭಿಮನ್ಯು ದಾಖಲೆ

    ಸೂರತ್‍: ಸಯ್ಯದ್ ಮುಷ್ತಾಕ್ ಅಲಿ ಟಿ 20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಯಾಣ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿ  ಕರ್ನಾಟಕ ಫೈನಲ್ ಪ್ರವೇಶಿಸಿದೆ.

    ಇಂದು ಸೂರತ್‍ನ ಲಾಲ್ಬಾಯ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದರೆ ಕರ್ನಾಟಕ 15 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ಜಯಗಳಿಸಿದೆ. ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆದು ಮಿಂಚಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ, ಹರ್ಯಾಣ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನ ನೀಡಿತು. ಹರ್ಯಾಣ ಆರಂಭಿಕ ಚೈತನ್ಯ ಬಿಷ್ಣೋಯಿ 55 ರನ್(35 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕ ಮತ್ತು ಹಿಮಾಂಶು ರಾಣ 61 ರನ್ (34 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನಿಂದ ಎಂಟು ವಿಕೆಟ್ ಕಳೆದುಕೊಂಡು 194 ರನ್‍ಗಳ ಬೃಹತ್ ಮೊತ್ತ ಸೇರಿಸಿತು.

    ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕಾರದ ಕೆ.ಎಲ್ ರಾಹುಲ್ ಮತ್ತು ದೇವದುತ್ ಪಡಿಕ್ಕಲ್ ಇಬ್ಬರು ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆಡಿಪಾಯ ಹಾಕಿಕೊಟ್ಟರು. ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಆಟ ಪ್ರದರ್ಶಿಸಿದ ಪಡಿಕ್ಕಲ್ ಕೇವಲ 42 ಎಸೆತಗಳಲ್ಲಿ ಭರ್ಜರಿ 11 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 87 ರನ್ ಹೊಡೆದರೆ, ಇವರಿಗೆ ಉತ್ತಮ ಸಾಥ್ ಕೊಟ್ಟ ಕೆ.ಎಲ್ ರಾಹುಲ್ 31 ಎಸೆತಗಳಲ್ಲಿ 4 ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್ ನೊಂದಿಗೆ 66 ರನ್ ಸಿಡಿಸಿ ಕರ್ನಾಟಕವನ್ನು ಗೆಲುವಿನ ಸಮೀಪ ತಂದರು.

    9.3 ಓವರ್ ಗಳಲ್ಲಿ ಮೊದಲ ವಿಕೆಟಿಗೆ 125 ರನ್ ಜೊತೆಯಾಟವಾಡಿ ರಾಹುಲ್ ಔಟ್ ಆದರು. ಮಯಾಂಕ್ ಅಗರವಾಲ್ ಔಟಾಗದೇ 30 ರನ್(14 ಎಸೆತ, 3 ಸಿಕ್ಸರ್) ನಾಯಕ ಮನಿಷ್ ಪಾಂಡೆ ಔಟಾಗದೇ 3 ರನ್ ಹೊಡೆದು ಜಯವನ್ನು ತಂದಿಟ್ಟರು. ಈ ಪಂದ್ಯದಲ್ಲಿ ಹರ್ಯಾಣ ಪರ 4 ಸಿಕ್ಸ್ ದಾಖಲಾದರೆ ಕರ್ನಾಟಕದ ಪರ 13 ಸಿಕ್ಸ್ ದಾಖಲಾಗಿದೆ.

    ಅಭಿಮನ್ಯು ದಾಖಲೆ:
    ಅಭಿಮನ್ಯು ಮಿಥುನ್ ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಭಾರತದ ಪರ ದಾಖಲೆ ಬರೆದಿದ್ದಾರೆ. ಈ ದಾಖಲೆ ಅಭಿಮನ್ಯು ಎಸೆದ 4ನೇ ಓವರಿನಲ್ಲಿ ಬಂದಿದ್ದು ವಿಶೇಷ. 3 ಓವರ್ ಗಳಲ್ಲಿ ಒಂದೇ ವಿಕೆಟ್ ಪಡೆಯದ ಅಭಿಮನ್ಯು ಕೊನೆಯ ಓವರಿನ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಒಂದು ವೈಡ್ ಒಂದು ರನ್ ಬಿಟ್ಟುಕೊಟ್ಟು ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಅಂತಿಮವಾಗಿ 4 ಓವರ್ ಗಳಲ್ಲಿ 39 ರನ್ ನೀಡಿದ್ದಾರೆ. ಈ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ಒಂದೇ ಓವರಿನಲ್ಲಿ 5 ವಿಕೆಟ್ ಪಡೆದಿದ್ದರು. ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆ ನಿರ್ಮಿಸಿದ್ದರು.

  • ವಿಶ್ವಕಪ್ ಸೋಲಿನ ಬಗ್ಗೆ ಕೊಹ್ಲಿ ಮನದಾಳದ ಮಾತು

    ವಿಶ್ವಕಪ್ ಸೋಲಿನ ಬಗ್ಗೆ ಕೊಹ್ಲಿ ಮನದಾಳದ ಮಾತು

    ನವದೆಹಲಿ: ಈ ಬಾರಿ ವಿಶ್ವಕಪ್ ಕ್ರಿಕೆಟ್‍ನ ಸೆಮಿಫೈನಲ್ ಹಂತದಲ್ಲಿ ಟೀಂ ಇಂಡಿಯಾ ಎಡವಿತ್ತು. ಭಾರತಕ್ಕೆ ಹಿಂದಿರುಗಿರುವ ಟೀಂ ಇಂಡಿಯಾ ಆಟಗಾರರು ಸೇರಿದಂತೆ ತಂಡದ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಗ್ಗೆ ಮಾತನಾಡಿರಲಿಲ್ಲ. ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.

    ವಿಶ್ವಕಪ್ ಪಂದ್ಯದಿಂದ ಹೊರಗೆ ಬಂದಾಗ ಜನರು ಅಷ್ಟು ಬೇಗ ನಮ್ಮನ್ನು ಸ್ವೀಕಾರ ಮಾಡಲ್ಲ. ನಾವು ಮಲಗಿ ಎದ್ದ ಮೇಲೆಯೂ ಕೆಲವೊಮ್ಮೆ ಸೋಲಿನ ಬಗ್ಗೆ ಚಿಂತಿಸುತ್ತೇವೆ. ನಾವು ಹೆಚ್ಚು ತಪ್ಪು ಮಾಡಿಲ್ಲವಾದ್ರೂ ವಿಶ್ವಕಪ್ ಪಂದ್ಯದಿಂದ ಹೊರ ಬರಬೇಕಾಯಿತು ಎಂದು ವಿರಾಟ್ ಕೊಹ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ರೆ, ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿರುತ್ತಾರೆ. ಕೆಲವೊಮ್ಮೆ ನೀವೇ ಚೆನ್ನಾಗಿ ಆಡುತ್ತಿಲ್ಲ ಎಂಬ ವಿಷಯ ಅರಿವಾದಾಗ ಎಲ್ಲರಿಗೂ ನಿರ್ದೇಶನ ನೀಡುವುದು ಕಷ್ಟವಾಗುತ್ತದೆ. ಈ ಬಾರಿ ನಾವು ಹೆಚ್ಚು ತಪ್ಪುಗಳನ್ನು ಮಾಡದಿದ್ದರೂ, ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹೊರ ಬರಬೇಕಾಯಿತು ಎಂದರು.

    ಒಂದು ವೇಳೆ ನೀವು ತಪ್ಪು ಮಾಡುತ್ತಿದ್ದರೆ, ಅದರ ಹೊಣೆಯನ್ನು ನಾನು ತೆಗೆದುಕೊಳ್ಳಲು ಸಿದ್ಧನಿರುತ್ತೇನೆ. ಆದರೆ ಗೆಲುವು ಕಂಡಾಗ ಅದರ ಯಶಸ್ಸು ಕೀರ್ತಿಯನ್ನು ನಾನೊಬ್ಬನೇ ಪಡೆಯುವುದು ಅಷ್ಟು ಸುಲಭವಲ್ಲ. 2019ರ ವಿಶ್ವಕಪ್ ನಲ್ಲಿ ಲೀಗ್ ಹಂತದಿಂದಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಸೆಮಿಫೈನಲಿನಲ್ಲಿ ಕೆಲ ತಪ್ಪುಗಳಿಂದ ವಿಶ್ವಕಪ್ ಗೆ ಮುತ್ತಿಕ್ಕುವ ಅವಕಾಶದಿಂದ ವಂಚಿತರಾದೆವು ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ದೊಡ್ಡವನಾಗುವರೆಗೂ ಹಲವು ತಪ್ಪುಗಳು ನನ್ನಿಂದ ಆಗಿವೆ. ಕೆಲವು ಸಂದರ್ಭಗಳಲ್ಲಿ ವಿಚಲಿತನಾಗಿ ನನ್ನ ಸ್ಥಿಮಿತವನ್ನ ಕಳೆದುಕೊಳ್ಳುತ್ತೇನೆ. ಹಾಗಾಗಿ ಮೊದಲು ನನ್ನನ್ನು ನಾನು ತಯಾರು ಮಾಡಿಕೊಂಡೆ. ಪತ್ನಿ ಮತ್ತು ಕುಟುಂಬ ಪಾಲನೆ-ಪೋಷಣೆಯೇ ನನ್ನ ಜೀವನದ ಮೊದಲ ಅದ್ಯತೆ. ಕುಟುಂಬವೇ ನಮ್ಮ ಜೀವನದ ಕೊನೆಯವರೆಗೂ ಬರುತ್ತೆ. ಉಳಿದಂತೆ ಎಲ್ಲವೂ ಒಂದು ದಿನ ಕೊನೆಗೊಳ್ಳುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.

  • ಧೋನಿಯನ್ನ 7ನೇ ಕ್ರಮಾಂಕದಲ್ಲಿ ಕಳಿಸಿದ ಕಾರಣ ಬಿಚ್ಚಿಟ್ಟ ರವಿ ಶಾಸ್ತ್ರಿ

    ಧೋನಿಯನ್ನ 7ನೇ ಕ್ರಮಾಂಕದಲ್ಲಿ ಕಳಿಸಿದ ಕಾರಣ ಬಿಚ್ಚಿಟ್ಟ ರವಿ ಶಾಸ್ತ್ರಿ

    ನವದೆಹಲಿ: ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್, ಬ್ಯಾಟ್ಸ್ ಮ್ಯಾನ್ ಎಂಎಸ್ ಧೋನಿ ಅವರು ಬ್ಯಾಟ್ ಮಾಡಿದ ಕ್ರಮಾಂಕ ಈಗ ಚರ್ಚೆಗೆ ಕಾರಣವಾಗಿದೆ.

    ಹೌದು. ಭಾರತ ತಂಡದ ಅನುಭವಿ ಅಟಗಾರ ಸೆಮಿಫೈನಲ್‍ನಂತಹ ಮಹತ್ವದ ಪಂದ್ಯದಲ್ಲಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳಿಸಿದ್ದೇಕೆ. ನ್ಯೂಜಿಲೆಂಡ್ ನೀಡಿದ ಸಾಧಾರಣ 240 ರನ್ ಬೆನ್ನಟ್ಟುವ ಪಂದ್ಯದಲ್ಲಿ ಧೋನಿ ಅವರ ಮುನ್ನಾ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯರನ್ನು ಮೊದಲು ಕಳಿಸಿದ್ದು ಏಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದವು.

    ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ವಿಶ್ವಕಪ್‍ನಲ್ಲಿ ಆರಂಭಿಕ ವೈಫಲ್ಯ ಕಂಡು ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡಕ್ಕೆ ಕೊನೆಯ ಓವರ್‍ ಗಳಲ್ಲಿ ಧೋನಿ ಅವರ ಅನುಭವದ ಅವಶ್ಯಕತೆ ಇತ್ತು. ಅದ್ದರಿಂದ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಸ್ತ್ರಿ, ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವುದು ತಂಡದ ನಿರ್ಧಾರವಾಗಿತ್ತು. ಈ ನಿರ್ಧಾರದ ಹಿಂದೆ ಎಲ್ಲರೂ ಇದ್ದಾರೆ ಮತ್ತು ಇದು ತುಂಬಾ ಸರಳವಾದ ನಿರ್ಧಾರ. ಏಕೆಂದರೆ ಧೋನಿ ಅವರು ಬೇಗನೆ ಬ್ಯಾಟಿಂಗ್ ಮಾಡಲು ಬಂದು ಆಗಿನ ಪರಿಸ್ಥಿತಿಯಲ್ಲಿ ಬೇಗನೇ ಔಟ್ ಆಗಿದ್ದರೆ ಭಾರತ ತಂಡ ಆ ಮೊತ್ತವನ್ನು ಚೇಸ್ ಮಾಡುವುದು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

    ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿ ಅವರ ಅನುಭವ ತಂಡಕ್ಕೆ ಬೇಕಿತ್ತು. ಅವರು ಭಾರತ ತಂಡ ಕಂಡ ಶ್ರೇಷ್ಠ ಫಿನಿಶರ್, ಅವರನ್ನು ನಾವು ಕೊನೆಯ ಹಂತದಲ್ಲಿ ಬಳಸಿದ್ದರಲ್ಲಿ ಅಪರಾಧ ಏನಿದೆ? ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಲು ಇಡೀ ತಂಡವೇ ಸ್ಪಷ್ಟವಾಗಿತ್ತು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

    7ನೇ ಕ್ರಮಾಂಕದಲ್ಲಿ ಆಡಿದರು ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ಎಂ. ಎಸ್ ಧೋನಿ ಅವರು ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

    ಶತಕದ ಜೊತೆಯಾಟವಾಡಿದ ಈ ಜೋಡಿ 122 ಎಸೆತಗಳಲ್ಲಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ಅಡುತ್ತಿದ್ದ ಧೋನಿ 48ನೇ ಓವರ್ ನ 3 ನೇ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ಹೊಡೆದ ಥ್ರೋಗೆ ರನೌಟ್ ಆದರು.

  • ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು – ರೋಹಿತ್ ಶರ್ಮಾ

    ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು – ರೋಹಿತ್ ಶರ್ಮಾ

    ಬೆಂಗಳೂರು: ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು ಎಂದು ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

    ಬುಧವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತಿದೆ. ಈ ಮೂಲಕ ವಿಶ್ವಕಪ್ ಗೆಲ್ಲುವ ಅಸೆ ಮೂಡಿಸಿದ್ದ ಭಾರತ ಪ್ರಮುಖ ಹಂತದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಟೂರ್ನಿಯಿಂದ ಹೊರಬಿತ್ತು.

    ವಿಶ್ವಕಪ್‍ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ರೋಹಿತ್ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 1 ರನ್ ಹೊಡೆದು ಔಟ್ ಆಗಿದ್ದರು. ಈಗ ಈ ಪಂದ್ಯದ ಸೋತಿದ್ದಕ್ಕ ಬೇಸರದಿಂದ ಟ್ವೀಟ್ ಮಾಡಿರುವ ಅವರು “ಬುಧವಾರ 30 ನಿಮಿಷದ ಕಳಪೆ ಆಟದಿಂದ, ಮುಖ್ಯ ಪಂದ್ಯದಲ್ಲಿ ಒಂದು ಟೀಂ ಆಗಿ ಆಟವಾಡುವಲ್ಲಿ ವಿಫಲವಾದೆವು. ಈ ಕಳಪೆ ಆಟದಿಂದ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆವು. ನನ್ನ ಹೃದಯ ತುಂಬ ಭಾರ ಎನ್ನಿಸುತ್ತಿದೆ. ನನಗೆ ಗೊತ್ತು ನಿಮಗೂ ಹಾಗೇ ಆಗಿದೆ. ಹೊರ ದೇಶದಲ್ಲೂ ನಿಮ್ಮ ಬೆಂಬಲ ಅದ್ಭುತವಾಗಿತ್ತು. ನಾವು ಆಡಿದ ಪಂದ್ಯದ ಎಲ್ಲಾ ಮೈದಾನಗಳನ್ನು ನೀಲಿಮಯ ಮಾಡಿದಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ಭಾರತ ಸೆಮಿಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದಾಗ ಸಂತಸದಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದ್ದ ರೋಹಿತ್ ಭಾರತ ಸೋತ ಕ್ಷಣ ಡ್ರೆಸ್ಸಿಂಗ್ ರೂಮ್‍ನಲ್ಲಿ ಬೇಸರದಿಂದ ನಿಂತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://twitter.com/ImRitika45/status/1149372868137930752

    ಟೂರ್ನಿ ಎಲ್ಲಾ ಪಂದ್ಯಗಳಲ್ಲೂ ಉತ್ತಮವಾಗಿ ಆಡಿದ್ದ ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ನ್ಯೂಜಿಲೆಂಡ್ ವೇಗಿ ಲ್ಯಾಥಮ್ ಹೆನ್ರಿ ಅವರ ಮೊದಲ ಓವರಿನ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ ಟಾಮ್ ಲಾಥಮ್ ಅವರಿಗೆ ಕ್ಯಾಚ್ ನೀಡಿ ಔಟ್ ಆದರು.

    ವಿಶ್ವಕಪ್‍ನಲ್ಲಿ ಒಟ್ಟು 9 ಪಂದ್ಯಗಳಲ್ಲಿ 648 ರನ್ ಗಳಿಸಿರುವ ರೋಹಿತ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. 647ರನ್ ಗಳಿಸಿರುವ ಆಸ್ಟ್ರೇಲಿಯಾ ಅರಂಭಿಕ ಆಟಗಾರ ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವಕಪ್‍ನ ಒಂದೇ ಆವೃತ್ತಿಯಲ್ಲಿ 5 ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

    ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿರುವ ಭಾರತದ ಮಾಜಿ ನಾಯಕ ಸಚಿನ್ ಅವರು, ವಿಶ್ವಕಪ್‍ನ್ನು ಭಾರತ ಅಂತ್ಯಗೊಳಿಸಿದ ಹಾದಿ ರೋಹಿತ್ ಶರ್ಮಾಗೆ ಅತ್ಯಂತ ನೋವು ಆಗಿರುತ್ತದೆ. ತುಂಬ ನಿರಾಶೆಯಾಗಿರುವ ರೋಹಿತ್ ಇದರಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

  • ರಕ್ತ ಸುರಿಯುತ್ತಿದ್ದರೂ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದ ಆಸೀಸ್ ಆಟಗಾರ

    ರಕ್ತ ಸುರಿಯುತ್ತಿದ್ದರೂ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನಗೆದ್ದ ಆಸೀಸ್ ಆಟಗಾರ

    ಲಂಡನ್: ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರೇ ಆರ್ಚರ್ ಬೌಲಿಂಗ್ ನಲ್ಲಿ ಗಾಯಗೊಂಡರು. ಈ ಸಂದರ್ಭದಲ್ಲಿ ಅವರ ಗಲ್ಲದಿಂದ ರಕ್ತ ಸುರಿಯುತ್ತಿದ್ದರೂ ಪೆವಿಲಿಯನ್‍ಗೆ ತೆರಳದೆ ಬ್ಯಾಟಿಂಗ್ ನಡೆಸಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.

    ಪಂದ್ಯದ 8ನೇ ಓವರಿನ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಆರ್ಚರ್ ಅವರ ಬೌನ್ಸರ್ ನೇರ ಅಲೆಕ್ಸ್ ರ್ ಮುಖಕ್ಕೆ ಬಡಿದ ಪರಿಣಾಮ ಅವರ ಹೆಲ್ಮೆಟ್ ಕೂಡ ಕಳಚಿ ಬಂದಿತ್ತು. ತಕ್ಷಣ ಕ್ಯಾರಿ ತಮ್ಮ ಹೆಲ್ಮೆಟನ್ನು ಹಿಡಿದರು. ಈ ಸಂದರ್ಭದಲ್ಲಿ ಕ್ಯಾರಿ ಅವರ ಗಲ್ಲದಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಆಟಗಾರರಲ್ಲಿ ಆತಂಕ ಮನೆ ಮಾಡಿತ್ತು.

    https://twitter.com/LucyBluck_/status/1149261581039165440

    ಗಾಯಗೊಂಡಿದ್ದರೂ ಮೈದಾನದಿಂದ ಹೊರ ತೆರಳದ ಕ್ಯಾರಿ ಬ್ಯಾಟಿಂಗ್ ಮುಂದುವರಿಸಿದರು. ಪಂದ್ಯದಲ್ಲಿ 70 ಎಸೆತ ಎದುರಿಸಿದ ಕ್ಯಾರಿ 4 ಬೌಂಡರಿ ನೆರವಿನಿಂದ 46 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ 10 ಓವರ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಗಳಿಸಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಅಲೆಕ್ಸ್ ಕ್ಯಾರಿರ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಅವರ ಹೋರಾಟದ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವಕಪ್ ನಂತಹ ಟೂರ್ನಿಯಲ್ಲಿ ತಂಡದ ಪರ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡೇ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ನಡೆಸಿದ್ದರು. ಉಳಿದಂತೆ ಪಂದ್ಯದಲ್ಲಿ ಗೆಲುವು ಪಡೆದ ತಂಡ ಜುಲೈ 14 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

  • ಧೋನಿ ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಹೊಂದಬೇಡಿ – ಲತಾ ಮಂಗೇಶ್ಕರ್

    ಧೋನಿ ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಹೊಂದಬೇಡಿ – ಲತಾ ಮಂಗೇಶ್ಕರ್

    ಮುಂಬೈ: ಸೆಮಿಫೈನಲ್‍ನಲ್ಲಿ ಸೋತು ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಈ ಸಮಯದಲ್ಲೇ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಮಾತುಗಳು ಕೇಳಿ ಬರುತ್ತಿವೆ. ಈ ಸಮಯದಲ್ಲಿ ಬಾಲಿವುಡ್‍ನ ಕೋಗಿಲೆ ಎಂದೇ ಕರೆಸಿಕೊಳ್ಳುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧೋನಿ ಮುಂದೆ ದೇಶದ ಪರ ಅಡಬೇಕು ಎಂದು ಹೇಳಿದ್ದಾರೆ.

    ಮಳೆಯಿಂದ ಮುಂದೂಡಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಬುಧವಾರ ನಡೆದಿದ್ದು, ಈ ಪಂದ್ಯದಲ್ಲಿ ಭಾರತ 18 ರನ್ ಅಂತರದಿಂದ ಸೋತಿದೆ. ಆದರೆ ಪಂದ್ಯವನ್ನು ಅಂತಿಮ ಘಟ್ಟಕ್ಕೆ ತಂದ ಧೋನಿ ಭಾರತವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಅದ್ದರಿಂದ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಬೇಕು ಎಂಬ ಮಾತುಗಳು ಕೇಳಿ ಬರುತ್ತೀವೆ.

    ಈ ವಿಚಾರದಲ್ಲಿ ಧೋನಿಗೆ ಬೆಂಬಲ ನೀಡಿರುವ ಲತಾ ಮಂಗೇಶ್ಕರ್ ಅವರು, “ನಮಸ್ಕಾರ ಎಂ.ಎಸ್ ಧೋನಿ ಜಿ ನೀವು ನಿವೃತ್ತಿ ಹೊಂದಲು ಬಯಸುತ್ತೀರಿ ಎಂದು ನಾನು ಕೇಳಿದ್ದೇನೆ. ದಯವಿಟ್ಟು ಆ ರೀತಿ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನೀವು ನಿವೃತ್ತಿಯ ಬಗ್ಗೆ ಯೋಚಿಸಬಾರದು ಎಂಬುದು ನನ್ನ ವೈಯಕ್ತಿಕ ಮನವಿ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಬುಧವಾರ ನಡೆದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಅವರ ನಿವೃತ್ತಿಯ ಬಗ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕೇಳಿದಾಗ, ಇಲ್ಲ ಧೋನಿ ನಿವೃತ್ತಿಯ ಬಗ್ಗೆ ನಮ್ಮ ಬಳಿ ಏನೂ ಹೇಳಿಲ್ಲ ಎಂದು ಹೇಳಿದ್ದರು. 2019ರ ವಿಶ್ವಕಪ್ ನಂತರ ಧೋನಿ ನಿವೃತ್ತಿ ಹೊಂದುತ್ತಾರೆ ಎಂಬ ಗಾಳಿಮಾತಿದೆ. ಆದರೆ ಧೋನಿ ಈ ವಿಚಾರದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

    ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ಎಂ. ಎಸ್ ಧೋನಿ ಅವರು ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

    ಶತಕದ ಜೊತೆಯಾಟವಾಡಿದ ಈ ಜೋಡಿ 122 ಎಸೆತಗಳಲ್ಲಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ಅಡುತ್ತಿದ್ದ ಧೋನಿ 48ನೇ ಓವರ್‍ನ 3 ನೇ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ಅವರು ಹೊಡೆದ ಥ್ರೋಗೆ ರನೌಟ್ ಆದರು.

  • ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ – ರವೀಂದ್ರ ಜಡೇಜಾ

    ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ – ರವೀಂದ್ರ ಜಡೇಜಾ

    ಲಂಡನ್: ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ಸೋತ ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಸೆಮಿಫೈನಲ್‍ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಮಾಡಿದ ಆಲ್‍ರೌಂಡರ್ ರವೀಂದ್ರ ಜಡೇಜಾ ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

    ಮಂಗಳವಾರ ಮಳೆ ಬಂದ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಬುಧವಾರ ನಡೆದ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತು ವಿಶ್ವಕಪ್‍ನಿಂದ ಹೊರ ಬಿತ್ತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಈ ಪಂದ್ಯದ ಕುರಿತು ಟ್ವೀಟ್ ಮಾಡಿದ್ದು, ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ ಎಂದಿದ್ದಾರೆ.

    ಭಾವನತ್ಮಾಕವಾಗಿ ಟ್ವೀಟ್ ಮಾಡಿರುವ ಜಡೇಜಾ, “ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ. ಅದನ್ನು ನಾನು ಎಂದಿಗೂ ಬಿಡುವುದಿಲ್ಲ. ನನ್ನ ಪ್ರೀತಿಯ ಮೂಲವಾದ ನನ್ನ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನನಗೆ ಸದಾ ಸ್ಫೂರ್ತಿದಾಯಕವಾಗಿರಿ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು. ಜಡೇಜಾ 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿತ್ತು.

    5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದಾಗ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿತ್ತು. 122 ಎಸೆತಗಳಲ್ಲಿ ಈ ಜೋಡಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು.

    ರವೀಂದ್ರ ಜಡೇಜಾ ಅವರ ಈ ಪ್ರದರ್ಶನಕ್ಕೆ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಿಟಲ್ ಮಾಸ್ಟರ್ ಸಚಿನ್ ಅವರು ಜಡೇಜಾ ಅವರ ವಿಶೇಷ ಆಟವನ್ನು ಶ್ಲಾಘಿಸಿದ್ದಾರೆ. ಈ ಉತ್ತಮ ಜೊತೆಯಾಟದ ಹಿಂದೆ ಧೋನಿ ಅವರ ಮಾರ್ಗದರ್ಶನವಿದೆ ಎಂದು ಹೇಳಿದ್ದಾರೆ.

  • ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಹೊರಕ್ಕೆ

    ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಹೊರಕ್ಕೆ

    ಲಂಡನ್: ಬುಧವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಕೆಲ ಪ್ರೇಕ್ಷಕರನ್ನು ಮ್ಯಾಂಚೆಸ್ಟರ್ ಪೊಲೀಸರು ಮೈದಾನದಿಂದ ಹೊರ ಹಾಕಿದ್ದಾರೆ.

    ಹೊರಹಾಕಲಾದ ಎಲ್ಲ ಪ್ರೇಕ್ಷಕರು ಯುವಕರಗಿದ್ದು, ಸಿಖ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇವರು ತಮ್ಮ ಟೀ ಶರ್ಟ್ ಮೇಲೆ ಸಿಖ್‍ರಿಗೆ ಪ್ರತ್ಯೇಕ ರಾಜ್ಯಬೇಕು ಎಂಬ ಸಂದೇಶವಿರುವ ಬಟ್ಟೆ ಹಾಕಿದ್ದರು. ಕ್ರೀಡಾಂಗಣದಲ್ಲಿ ಈ ರೀತಿಯ ಸಂದೇಶವಿರುವ ಬಟ್ಟೆ ಧರಿಸಲು ಅನುಮತಿ ಇಲ್ಲದ ಕಾರಣ ಅವರನ್ನು ಹೊರಹಾಕಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಯೊಬ್ಬರು “4 ಜನ ಸಿಖ್ ಧರ್ಮದ ಯುವಕರು ರಾಜಕೀಯ ಸಂದೇಶವಿರುವ ಟೀ ಶರ್ಟ್‍ಗಳನ್ನು ಧರಿಸಿ ಮೈದಾನಕ್ಕೆ ಬಂದಿದ್ದರು. ಇದಕ್ಕೆ ಅನುಮತಿ ಇಲ್ಲದ ಕಾರಣ ಮೈದಾನದ ಸಿಬ್ಬಂದಿ ಅವರನ್ನು ಕರೆದುಕೊಂದು ಬಂದು ನಮಗೆ ಒಪ್ಪಿಸಿದ್ದಾರೆ” ಎಂದು ಹೇಳಿದ್ದಾರೆ.

    ಈ ರೀತಿಯ ಘಟನೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆಯೂ ನಡೆದಿದ್ದು “ಜಸ್ಟಿಸ್ ಫಾರ್ ಬಲೂಚಿಸ್ತಾನ” ಎನ್ನುವ ಬ್ಯಾನರ್ ಹೊತ್ತುಕೊಂಡು ವಿಮಾನವೊಂದು ಹಾರಿತ್ತು. ಇದಾದ ಬೆನ್ನಲ್ಲೇ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಆ ವಿಮಾನವು ಪಾಕಿಸ್ತಾನದ ಮೂಲದವರೇ ಹೆಚ್ಚಿರುವ ಬ್ರಾಡ್‍ಫೋರ್ಡ್ ಏರ್ಪೋರ್ಟ್‍ನಿಂದ ಹಾರಿತ್ತು ಎಂದು ಸ್ಥಳೀಯ ತನಿಖಾ ತಂಡ ನಡೆಸಿದ ತನಿಖೆಯಿಂದ ತಿಳಿದು ಬಂದಿತ್ತು.

    ಈ ಘಟನೆ ನಡೆದು 10 ದಿನಗಳ ಬಳಿಕ ಆದರೆ ಶ್ರೀಲಂಕಾ ಮತ್ತು ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಮೈದಾನದ ಮೇಲೆ ಹಾರಾಡಿದ ವಿಮಾನದ ಬ್ಯಾನರ್ ಗಮನ ಸೆಳೆದಿತ್ತು. ಜಸ್ಟೀಸ್ ಫಾರ್ ಕಾಶ್ಮೀರ್ ಎಂದು ಅದರಲ್ಲಿ ಬರೆಯಲಾಗಿತ್ತು. ಅದಾದ ಅರ್ಧ ಗಂಟೆ ನಂತರ ಹಾರಿದ ಇನ್ನೊಂದು ಅದೇ ರೀತಿಯ ವಿಮಾನದಲ್ಲಿ ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎಂಬ ಬ್ಯಾನರ್ ಹೊತ್ತುಕೊಂಡು ಹಾರಿ ಹೋಗಿತ್ತು.

    ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಐಸಿಸಿಗೆ ಪತ್ರ ಬರೆದು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಭದ್ರತೆಯನ್ನು ನೀಡಿ, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ತಿಳಿಸಿತ್ತು. ಅಲ್ಲದೆ ಈ ವಿಚಾರದ ಬಗ್ಗೆ ಸರಿಯಾಗಿ ತನಿಖೆಯನ್ನು ಮಾಡಬೇಕು. ಈ ರೀತಿಯ ಘಟನೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಸೆಮಿಫೈನಲ್‍ನಲ್ಲಿ ಮತ್ತೆ ಈ ರೀತಿಯ ಪ್ರಸಂಗಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಐಸಿಸಿಗೆ ತಿಳಿಸಿತ್ತು. ಬಿಸಿಸಿಐ ಖಾರವಾದ ಪತ್ರ ಬರೆದ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ವೋಲ್ಡ್ ಟ್ರಾಫರ್ಡ್ ವಾಯುಸೀಮೆಯನ್ನು ಬಂದ್ ಮಾಡಲಾಗಿತ್ತು.