Tag: ಸೆಮಿಫೈನಲ್ ಧೋನಿ

  • ಸೌದಿಯಿಂದ ಪೆಟ್ರೋಲ್, ಚೀನಾದಿಂದ ಹಣ, ಸೆಮಿಫೈನಲ್ ಟಿಕೆಟ್ ಭಾರತದಿಂದ ಬೇಕೇ – ವಾಕರ್‌ಗೆ ನೆಟ್ಟಿಗರಿಂದ ತರಾಟೆ

    ಸೌದಿಯಿಂದ ಪೆಟ್ರೋಲ್, ಚೀನಾದಿಂದ ಹಣ, ಸೆಮಿಫೈನಲ್ ಟಿಕೆಟ್ ಭಾರತದಿಂದ ಬೇಕೇ – ವಾಕರ್‌ಗೆ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ಪಾಕಿಸ್ತಾನವನ್ನು ಟೂರ್ನಿಯಿಂದ ಹೊರ ಕಳುಹಿಸಲು ಭಾರತ ಉದ್ದೇಶಪೂರ್ವಕವಾಗಿಯೇ ಇಂಗ್ಲೆಂಡ್ ವಿರುದ್ಧ ಸೋತಿದೆ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಪಾಕಿನ ಮಾಜಿ ನಾಯಕ ವಾಕರ್ ಯೂನಿಸ್ ಭಾರತದ ವಿರುದ್ಧ ಕಿಡಿಕಾರಿದ್ದಾರೆ.

    ನೀವು ಯಾರೆಂದು ಅಲ್ಲ, ಜೀವನದಲ್ಲಿ ಏನು ಮಾಡುತ್ತೀರಿ ಎನ್ನುವುದರ ಮೇಲೆ ನೀವು ಯಾರು ಎನ್ನುವುದು ಗೊತ್ತಾಗುತ್ತದೆ. ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುತ್ತದೋ ಇಲ್ಲವೋ ಎನ್ನುವುದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಆದರೆ ಕೆಲ ಚಾಂಪಿಯನ್‍ಗಳ ಕ್ರೀಡಾ ಸ್ಫೂರ್ತಿ ಪರೀಕ್ಷಿಸಲಾಯಿತು ಮತ್ತು ಅದರಲ್ಲಿ ಅವರು ಫೇಲ್ ಆಗಿದ್ದಾರೆ ಎಂದು ವಾಕರ್ ಯೂನಿಸ್ ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ಅನ್ನು ಪಾಕಿಸ್ತಾನದ ಅಭಿಮಾನಿಗಳು ಲೈಕ್ ಮಾಡಿದ್ದರೆ ಭಾರತದ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ನಿಮ್ಮ ರೀತಿಯ ಬಡವರು ಪ್ರಪಂಚದಲ್ಲಿ ಬೇರೆ ಎಲ್ಲೂ ಸಿಗಲ್ಲ. ಸೌದಿಯಿಂದ ನಿಮಗೆ ಪೆಟ್ರೋಲ್ ಬೇಕು. ಅಮೆರಿಕ ಮತ್ತು ಚೀನಾದಿಂದ ಹಣ ಬೇಕು. ವಿಶ್ವಕಪ್ ಸೆಮಿಫೈನಲ್ ಟಿಕೆಟ್ ಪಡೆಯಲು ಭಾರತ ಬೇಕು. ಈ ರೀತಿ ಮಾಡಿ ಏನು ಸಾಧನೆ ಮಾಡುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಕೆಟ್ಟದ್ದಾಗಿ ಆರಂಭ ಮಾಡಿ ಈಗ ಭಾರತದ ಆಟವನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಒಬ್ಬರು ಪ್ರಶ್ನೆ ಮಾಡಿದರೆ ಇನ್ನೊಬ್ಬರು ಧೋನಿ ಗ್ಲೌಸ್ ನಲ್ಲಿ ಬಲಿದಾನ ಬ್ಯಾಡ್ಜ್ ಹಾಕಲು ನೀವು ವಿರೋಧ ಮಾಡಿದ್ದೀರಿ. ಈಗ ಧೋನಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿ ನಿಮ್ಮನ್ನು ಬಲಿ ಕೊಟ್ಟಿದ್ದಾರೆ ಎಂದು ವಂಗ್ಯವಾಡಿದ್ದಾರೆ.

    ನೀವು ಭಿಕ್ಷೆ ಬೇಡುವುದರಲ್ಲಿ ಸಮರ್ಥರು. ಭಿಕ್ಷೆ ಬೇಡುವುದು ಹೇಗೆ ಎಂದು ತಿಳಿಯಲು ಯಾಕೆ ಒಂದು ವಿಶ್ವವಿದ್ಯಾಲಯ ಆರಂಭಿಸಬಾರದು ಎಂದು ಪ್ರಶ್ನಿಸಿ ಕಾಲೆಳೆದಿದ್ದಾರೆ. ಧೋನಿ ಅತ್ಯುತ್ತಮ ಫಿನಿಶರ್. ಪಾಕ್ ತಂಡದ ವಿಶ್ವಕಪ್ ಕನಸನ್ನು ಫಿನಿಶ್ ಮಾಡಿದ್ದಾರೆ ಎಂದು ಮತ್ತೊಬ್ಬ ಭಾರತೀಯ ಅಭಿಮಾನಿ ಬರೆದುಕೊಂಡಿದ್ದಾರೆ.

    ಭಾನುವಾರ ಇಂಗ್ಲೆಂಡ್‍ನ ಬರ್ಮಿಗ್ಹ್ಯಾಮ್‍ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್‍ಗಳ ಗೆಲುವು ಸಾಧಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಭಾರತ ಕೊನೆಯ 5 ಓವರ್ ಗಳಲ್ಲಿ ಮಂದಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಧೋನಿ ಹಾಗೂ ಕೇದಾರ್ ಜಾಧವ್ ವಿರುದ್ಧ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಇಂಗ್ಲೆಂಡ್ ನೀಡಿದ 338 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಭಾರತಕ್ಕೆ ಕೊನೆಯ 30 ಎಸೆತಗಳಲ್ಲಿ ಗೆಲ್ಲಲು 71 ರನ್‍ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಮತ್ತು ಜಾಧವ್ ಅವರು ಓವರ್ ಒಂದಕ್ಕೆ 14 ರನ್‍ಗಳ ಅವಶ್ಯಕತೆ ಇದ್ದರೂ ನಿಧಾನವಾಗಿ ಬ್ಯಾಟ್ ಬೀಸಿದ ಈ ಜೋಡಿ ಕೊನೆಯ 30 ಎಸೆತಗಳಲ್ಲಿ ಕೇವಲ 40 ರನ್ ಮಾತ್ರ ಪೇರಿಸಿತ್ತು.

    ಈ ಜೋಡಿ ಕೊನೆಯ ಐದು ಓವರ್ ಗಳಲ್ಲಿ 3 ಬೌಂಡರಿ ಮತ್ತು ಕೇವಲ ಒಂದು ಸಿಕ್ಸರ್ ಸಿಡಿಸಿ 41 ರನ್‍ಗಳನ್ನು ಮಾತ್ರ ಪೇರಿಸಿತ್ತು. ಇದರಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ (4, ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಕೇದಾರ್ ಜಾಧವ್ ಅವರು 13 ಎಸೆತದಲ್ಲಿ ಒಂದು ಬೌಂಡರಿಯೊಂದಿಗೆ ಕೇವಲ 12 ರನ್ ಹೊಡೆದಿದ್ದರು. 50ನೇ ಓವರಿನ ಮೊದಲ ಎಸೆತದಲ್ಲಿ ಧೋನಿ ಒಂದು ಸಿಕ್ಸರ್ ಸಿಡಿಸಿದ್ದರು. ಇದು ಭಾರತದ ಪರ ದಾಖಲಾದ ಮೊದಲ ಸಿಕ್ಸ್ ಆಗಿತ್ತು. ಅದೇ ಓವರಿನ 4 ಎಸೆತದಲ್ಲಿ ಜಾಧವ್ ಒಂದು ಬೌಂಡರಿ ಸಿಡಿಸಿದ್ದರು.