Tag: ಸೆಣಬು ಚೀಲ

  • ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಚೆನ್ನೈ: ಗಿನ್ನಿಸ್ ದಾಖಲೆ ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 9 ಜನ ಅಂಧರು ಕೇವಲ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲ’ವನ್ನು ಹೊಲಿಯುವ ಮೂಲಕ ಗಮನ ಸೆಳೆದಿದ್ದಾರೆ.

    ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ 9 ಅಂಧ ವಿದ್ಯಾರ್ಥಿಗಳು ಶುಕ್ರವಾರ ಈ ಚೀಲವನ್ನು ಹೊಲಿದಿದ್ದು, ಇವರಿಗೆ ತೃತೀಯಲಿಂಗಿಗಳ ಸಮುದಾಯದ ಸದಸ್ಯರು ಹಾಗೂ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಸಹಾಯ ಮಾಡಿದ್ದಾರೆ.

    ಈ ಕಾರ್ಯವನ್ನು ಸಂಘಟಿಸಿದ ಯುವ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಈ ಕುರಿತು ಮಾಹಿತಿ ನೀಡಿ, ಯುವ ಪ್ರತಿಷ್ಠಾನದ 9 ಜನ ಅಂಧರು ಹ್ಯಾಂಡಲ್ ಇಲ್ಲದೆ, ಕೇವಲ ಕೈಗಳಿಂದ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲವನ್ನು’ ಹೊಲಿಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಗೂ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಸೆಣಬಿನ ಚೀಲವನ್ನು ಹೊಲಿಯಲಾಗಿದೆ ಎಂದು ತಿಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ ಭಾಷಣದ ಅಂಶವನ್ನು ಶಶಿಕಲಾ ಉಲ್ಲೇಖಿಸಿದ್ದಾರೆ. ಅಲ್ಲದೆ, ನಾವು ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭಿಸಬೇಕಿದೆ. ಹೀಗಾಗಿ ಸೆಣಬಿನ ಚೀಲವನ್ನು ಈ ಅಂಧರು ಹೊಲಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಕಲಚೇತನರೂ ಸಹ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ವಿಶ್ವಾಸ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸಹ ಈ ಪ್ರಯತ್ನದ ಉದ್ದೇಶವಾಗಿದೆ ಎಂದರು.