Tag: ಸೆಕ್ಸ್ ವರ್ಕರ್

  • ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ಸೆಕ್ಸ್ ವರ್ಕರ್ ಮೇಲೆ ಲವ್, ವೇಶ್ಯಾಗೃಹದಿಂದ ಆಕೆಯನ್ನ ರಕ್ಷಿಸಿದ ಪ್ರೇಮಿ- ಮುಂದೆ ಮದುವೆ

    ನವದೆಹಲಿ: ವ್ಯಕ್ತಿಯೊಬ್ಬರು ತಾನು ಪ್ರೀತಿಸಿದ ಯುವತಿಯನ್ನ ವೇಶ್ಯಾಗೃಹದಿಂದ ಪಾರು ಮಾಡಿ ಈಗ ಮದುವೆಗೆ ಅಣಿಯಾಗುತ್ತಿರೋ ಅಪರೂಪದ ಲವ್ ಸ್ಟೋರಿ ಇದು.

    ಗುರುವಾರದಂದು ದೆಹಲಿ ಮಹಿಳಾ ಆಯೋಗ 27 ವರ್ಷ ವಯಸ್ಸಿನ ನೇಪಾಳ ಮೂಲದ ಯುವತಿಯನ್ನ ಇಲ್ಲಿನ ಜಿಬಿ ರೋಡ್‍ನ ವೇಶ್ಯಾಗೃಹದಿಂದ ರಕ್ಷಿಸಿದೆ. ಯುವತಿ ಸದರ್ ಬಜಾರ್‍ನ ತನ್ನ ಪ್ರೇಮಿಯನ್ನ ಮದುವೆಯಾಗಲಿದ್ದಾರೆ.

    ಎರಡು ವರ್ಷಗಳ ಹಿಂದೆ ಶುಭಿ ಮತ್ತು ಸಾಗರ್‍ಗೆ (ಹೆಸರು ಬದಲಾಯಿಸಲಾಗಿದೆ) ದೆಹಲಿಯ ಸ್ಥಳೀಯ ಮಾರುಕಟ್ಟೆಯೊಂದರಲ್ಲಿ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಒಬ್ಬರನ್ನೊಬ್ಬರು ಇಷ್ಟಪಡೋಕೆ ಶುರು ಮಾಡಿದ್ರು. ನಂತರ ಸಾಗರ್ ಶುಭಿಯನ್ನು ಭೇಟಿಯಾಗಲು ಗ್ರಾಹಕನಂತೆ ವೇಶ್ಯಾಗೃಹಕ್ಕೆ ಆಗಾಗ ಹೋಗ್ತಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮವಾಗಿ ಮದುವೆಯಾಗಿ ಹೊಸ ಜೀವನ ಶುರು ಮಾಡಬೇಕು ಅಂತ ನಿರ್ಧರಿಸಿದ್ರು.

    ಶುಭಿ ವೇಶ್ಯಾಗೃಹದಲ್ಲಿದ್ದ ಇತರೆ ಕೆಲವು ಮಹಿಳೆಯರೊಂದಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿಂದ ಹೇಗಾದ್ರೂ ಮಾಡಿ ಪರಾರಿಯಾಗಬೇಕು ಎಂದು ಸಾಕಷ್ಟು ಬಾರಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಂತರ ಸಾಗರ್ ಮಹಿಳಾ ಆಯೋಗದ ಸಹಾಯವಾಣಿಗೆ ಕರೆ ಮಾಡಿ ತನ್ನ ಕಥೆಯನ್ನ ಹೇಳಿಕೊಂಡ್ರು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಆಯೋಗ, ಪೊಲೀಸರ ಜೊತೆಗೂಡಿ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾರೆ.

    ಮದುವೆಗೆ ಸಿದ್ಧತೆ: ಸಾಗರ್ ಈಗಾಗಲೇ ಮನೆಯವರನ್ನ ಒಪ್ಪಿಸಿದ್ದು, ತಾನು ಪ್ರೀತಿಸಿದ ಶುಭಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶುಭಿ ಹೊಸ ಜೀವನ ಪ್ರಾರಂಭಿಸಬೇಕೆಂದಿದ್ದು, ಆಕೆಯ ಹಿಂದಿನ ಜೀವನದಿಂದಾಗ ಯಾರೂ ಆಕೆಗೆ ತೊಂದರೆ ಕೊಡದಂತೆ, ಆಕೆಯ ಮರ್ಯಾದೆಗೆ ಹಾನಿ ಮಾಡದಂತೆ ಸ್ಥಳೀಯ ಪೊಲೀಸರು ರಕ್ಷಣೆ ನೀಡಲಿದ್ದಾರೆ ಎಂದು ಮಹಿಳಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ನಮಗೆ ವ್ಯಕ್ತಿಯೊಬ್ಬರಿಂದ ಕರೆ ಬಂತು. ಜಿಬಿ ರೋಡ್‍ನಲ್ಲಿನ ಯುವತಿಯೊಬ್ಬರನ್ನ ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ರು. ಇಲ್ಲಿನ ವೇಶ್ಯಾಗೃಹದಲ್ಲಿ ಯುವತಿ ಇದ್ದು, ಈ ವೃತ್ತಿಯನ್ನ ತ್ಯಜಿಸಿ ತನ್ನೊಂದಿಗೆ ಬರಬೇಕೆಂದಿದ್ದಾರೆ ಎಂದು ಹೇಳಿದ್ರು ಅಂತ ಮಹಿಳಾ ಆಯೋಗದ ಹಿರಿಯ ಅಧಿಕರಿಯೊಬ್ಬರು ಹೇಳಿದ್ದಾರೆ.

    2015ರಲ್ಲಿ ನೇಪಾಳದಲ್ಲಿ ಭೂಕಂಪವಾದಾಗ ಈ ಯುವತಿ ಭಾರತಕ್ಕೆ ಬಂದ್ರು. ಆಕೆ ತೀರಾ ಬಡ ಕುಟುಂಬದವರಾಗಿದ್ದು, ಎಲ್ಲವನ್ನೂ ಕಳೆದುಕೊಂಡಿದ್ರು. ತಿನ್ನಲು ಅನ್ನವಿಲ್ಲದೆ, ಜೀವನಾಧಾರವಿಲ್ಲದೆ ದೆಹಲಿಗೆ ಬಂದಿದ್ರು. ನಂತರ ಆಕೆಯನ್ನು ಯಾರೋ ಜಿಬಿ ರೋಡ್‍ನ ವೇಶ್ಯಾಗೃಹಕ್ಕೆ ಮಾರಿದ್ರು ಎಂದು ಅಧಿಕಾರಿ ಹೇಳಿದ್ದಾರೆ.

    ಜಿಬಿ ರೋಡ್: (ಗಾಸ್ರ್ಟಿನ್ ಬ್ಯಾಸ್ಟಿಯನ್ ರೋಡ್) ರಾಷ್ಟ್ರರಾಜಧಾನಿಯ ದೊಡ್ಡ ರೆಡ್ ಲೈಟ್ ಏರಿಯಾ. ಇಲ್ಲಿ ಸುಮಾರು 93 ವೇಶ್ಯಾಗೃಹಗಳಿದ್ದು, 3500 ಸೆಕ್ಸ್ ವರ್ಕರ್ಸ್ ಇದ್ದಾರೆ. ಸೆಕ್ಸ್ ವರ್ಕರ್ ಗಳ ಸುಮಾರು 8 ಸಾವಿರ ಮಕ್ಕಳು ಇಲ್ಲಿ ವಾಸವಿದ್ದು, ಎನ್‍ಜಿಓಗಳು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಮಡುತ್ತಿವೆ. ಸಿಕ್ಕಿಂ, ನೇಪಾಳ, ಒಡಿಶಾ, ಅಸ್ಸಾಂ, ಜರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಹುಡುಗಿಯರೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಾರೆ. ಹುಡುಗಿಯರು ಸಂಕಷ್ಟದಲ್ಲಿದ್ರೆ ಅದನ್ನೇ ಬಂಡವಾಳ ಮಾಡಿಕೊಂಡು ಜಿಬಿ ರೋಡ್‍ನಂತಹ ನರಕಕ್ಕೆ ತಳ್ತಾರೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಜಿಬಿ ರೋಡ್ ಬೇಗನೆ ಬಂದ್ ಮಾಡಬೇಕು ಎಂದು ಮಹಿಳಾ ಆಯೋಗದ ಅಧಿಕಾರಿ ಸ್ವಾತಿ ಮಲಿವಾಲ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

  • ತನ್ನ ದೇಶಕ್ಕೆ ಹಿಂದಿರುಗಲು 10,000 ರೂ. ಹಳೇನೋಟುಗಳನ್ನ ಬದಲಿಸಿಕೊಡಲು ಮೋದಿಗೆ ಟ್ವೀಟ್ ಮಾಡಿದ ಸೆಕ್ಸ್ ವರ್ಕರ್

    ತನ್ನ ದೇಶಕ್ಕೆ ಹಿಂದಿರುಗಲು 10,000 ರೂ. ಹಳೇನೋಟುಗಳನ್ನ ಬದಲಿಸಿಕೊಡಲು ಮೋದಿಗೆ ಟ್ವೀಟ್ ಮಾಡಿದ ಸೆಕ್ಸ್ ವರ್ಕರ್

    ಮುಂಬೈ: ದುಷ್ಟನೊಬ್ಬನ ವಂಚನೆಗೊಳಗಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ಬಾಂಗ್ಲಾದೇಶ ಮೂಲದ ಮಹಿಳೆಯೊಬ್ಬರು ತನ್ನ ದೇಶಕ್ಕೆ ಹಿಂದಿರುಗಲು ತಾನು ಕೂಡಿಟ್ಟ 10 ಸಾವಿರ ರೂ. ಹಳೇ ನೋಟುಗಳನ್ನ ಬದಲಿಸಿಕೊಡುವಂತೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ.

    2015ರ ಡಿಸೆಂಬರ್‍ನಲ್ಲಿ ಪುಣೆಯ ಬುಧವಾರಪೇಟೆಯ ವೇಶ್ಯಾಗೃಹವೊಂದರಿಂದ ರಕ್ಷಿಸಲಾದ ಈ ಮಹಿಳೆ ಈಗ ಬಾಂಗ್ಲಾದೇಶಕ್ಕೆ ಹಿಂದಿರುಗಲು ಬಯಸಿದ್ದಾರೆ. ಬಾಂಗ್ಲಾದೇಶ ಕೂಡ ಆಕೆಯನ್ನ ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಒಪ್ಪಿಗೆ ನೀಡಿದ್ದು, ಇದೀಗ ತನ್ನ ಬಳಿಯಿರುವ 10 ಸಾವಿರ ರೂ. ಹಳೇ ನೋಟ್‍ಗಳನ್ನ ಬದಲಾಯಿಸಿಕೊಡುವಂತೆ ಕೋರಿ ಈ ಮಹಿಳೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತನ್ನ ಕೈಯ್ಯಾರೆ ಪತ್ರ ಬರೆದು ಟ್ವೀಟ್ ಮಾಡಿದ್ದಾರೆ. ಗ್ರಾಹಕರು ತನಗೆ ಹಳೇನೋಟ್‍ಗಳಲ್ಲಿ ನೀಡಿದ ಟಿಪ್ಸ್ ಒಟ್ಟುಗೂಡಿಸಿ 10 ಸಾವಿರ ರೂ. ಕೂಡಿಟ್ಟಿದ್ದು, ನೋಟ್‍ಬ್ಯಾನ್ ಆದ ಸಂದರ್ಭದಲ್ಲಿ ಈ ಹಣ ವೇಶ್ಯಾಗೃಹದ ಮಾಲಿಕರ ವಶದಲ್ಲಿತ್ತು ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಭಾರತಕ್ಕೆ ಬಂದಿದ್ದು ಹೇಗೆ?: ಭಾರತಕ್ಕೆ ಬರುವ ಮುಂಚೆ ಮೂರು ವರ್ಷಗಳ ತನ್ನ ವೈವಾಹಿಕ ಜೀವನ ಚೆನ್ನಾಗಿರಲಿಲ್ಲ. ಪತಿಗೆ ವಿಚ್ಛೇದನ ನೀಡಿದ ಬಳಿಕ ಬಾಂಗ್ಲಾದೇಶದ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ 9 ಸಾವಿರ ರೂ. ಸಂಬಳದ ಕೆಲಸಕ್ಕೆ ಸೇರಿ ಪೋಷಕರನ್ನ ನೋಡಿಕೊಳ್ತಿದ್ದೆ. ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬ ಭಾರತದಲ್ಲಿ ತನಗಿರುವ ಸಂಪರ್ಕಗಳ ಬಗ್ಗೆ ತಿಳಿಸಿ 15 ಸಾವಿರ ರೂ.ಗಳಷ್ಟು ಹಣ ಸಂಪಾದಿಸಬಹುದು ಎಂದು ಹೇಳಿದ. ನನ್ನ ಹಣಕಾಸಿನ ಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ ನಾನು ಅದಕ್ಕೆ ಒಪ್ಪಿಕೊಂಡೆ. ಅವನು ನನ್ನನ್ನು ಮಹಾರಾಷ್ಟ್ರದ ವಶಿಗೆ ಕರೆತಂದ. ಆಗ ನನಗೆ ಆಘಾತವೇ ಕಾದಿತ್ತು. ನೇಪಾಳಿ ಮಹಿಳೆಯೊಬ್ಬರಿಗೆ ನನ್ನನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ ಎಂದು ಮಹಿಳೆ ಹೇಳಿದ್ದಾರೆ.

    ಬಳಿಕ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮತ್ತೊಬ್ಬ ಮಹಿಳೆಯ ವಶಕ್ಕೊಪ್ಪಿಸಿದ್ರು. ಆಕೆ ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದಳು. ನಂತರ ನನ್ನನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸುವುದಾಗಿ ಹೇಳಿ ಪುಣೆಗೆ ಕರೆತಂದ್ರು ಎಂದು ಮಹಿಳೆ ಹೇಳಿದ್ದಾರೆ.

    ಒಂದೂವರೆ ವರ್ಷಗಳ ಈ ಕಿರುಕುಳದ ಬಳಿಕ 2015ರ ಡಿಸೆಂಬರ್‍ನಲ್ಲಿ ರಕ್ಷಣಾ ಸಂಸ್ಥೆಯೊಂದರ ಸಹಾಯದಿಂದ ಮಹಿಳೆಯನ್ನ ರಕ್ಷಣೆ ಮಾಡಲಾಗಿತ್ತು. ಆದ್ರೆ ಆಕೆಗೆ ಸೇರಿದ ಹಣ ಹಾಗೂ ಇನ್ನಿತರ ವಸ್ತುಗಳು ವೇಶ್ಯಾಗೃಹದಲ್ಲಿ ಉಳಿದುಕೊಂಡಿದ್ದವು ಎಂದು ವರದಿಯಾಗಿದೆ.