Tag: ಸೂರತ್

  • ಫ್ಲಾಪ್ ಆಯ್ತು ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ

    ಫ್ಲಾಪ್ ಆಯ್ತು ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ

    – ಸ್ಪರ್ಧೆ ಅಖಾಡಕ್ಕಿಳಿದ್ದಿದ್ದು ಕೇವಲ ಮೂರೇ ಮಂದಿ

    ಗಾಂಧಿನಗರ: ಗುಜರಾತ್‍ನ ಸೂರತ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ ಫ್ಲಾಪ್ ಶೋ ಆಗಿದೆ. ಈ ಸ್ಪರ್ಧೆಯಲ್ಲಿ ಕೇವಲ ಮೂರೇ ಮಂದಿ ಸ್ಪರ್ಧಿಸಿದ್ದು ಆಯೋಜಕರಿಗೆ ನಿರಾಸೆ ಉಂಟುಮಾಡಿದೆ.

    ಈ ಹೂಸು ಬಿಡುವ ಸ್ಪರ್ಧೆಯ ಬಗ್ಗೆ ಘೋಷಿಸಿದ ದಿನದಿಂದಲೂ ಇದಕ್ಕೆ ಸಿಕ್ಕಪಟ್ಟೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಬರೋಬ್ಬರಿ 60 ಮಂದಿ ಈ ಸ್ಫರ್ಧೆಗೆ ತಲಾ 100 ರೂ. ಹಣವನ್ನು ಪಾವತಿಸಿ ಖಚಿತ ಪಡಿಸಿದ್ದರು. ಈ ಮಧ್ಯೆ ಇದೆಂತಾ ಸ್ಪರ್ಧೆ ನಾನ್‍ಸೆನ್ಸ್ ಎಂದ ಮಂದಿಯೂ ಇದ್ದರು. ಹೀಗಿದ್ದರೂ ಈ ವಾಟ್ ಡಿ ಫಾರ್ಟ್ ಸ್ಫರ್ಧೆ ಎಲ್ಲೆಡೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಈ ಸ್ಫರ್ಧೆ ಗೆಲ್ಲುವ ಭೂಪ ಯಾರಪ್ಪ ಎಂದು ಜನರು ಕಾದು ಕುಳಿತಿದ್ದರು.

    ಆದರೆ ಸ್ಪರ್ಧೆ ದಿನ ಮಾತ್ರ ಕೇವಲ ಮೂರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ನೊಂದಣಿಯಾದ ಸ್ಪರ್ಧಿಗಳನ್ನು ನಂಬಿ ಈ ಸ್ಪರ್ಧೆ ಯಶಸ್ವಿಯಾಗುತ್ತೆ ಅಂದುಕೊಂಡಿದ್ದ ಆಯೋಜಕರಿಗೆ ಬೇಸರವಾಗಿದೆ.

    ವೇಸುವಿನ ಲೇ ತೆರೆನ್ಜಾ ಬಾಟಿಕ್ ಹಾಲ್‍ನಲ್ಲಿ ಈ ಸ್ಫರ್ಧೆ ಆಯೋಜಿಸಲಾಗಿತ್ತು. ನೊಂದಣಿಯಾದ ಸ್ಪರ್ಧಿಗಳ ಆಧಾರದ ಮೇಲೆ ಆಯೋಜಕರಾದ ಗಾಯಕ ಯತೀನ್ ಸಂಗೋಯ್ ಮತ್ತು ಅವರ ಸ್ನೇಹಿತ ಮೌಲ್ ಸಾಂಘ್ವೀ ಇದಕ್ಕೆ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೂಸು ಬಿಡುವ ಸ್ಪರ್ಧೆ ‘ವಾಟ್ ದಿ ಫಾರ್ಟ್’ ಸ್ಪರ್ಧೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಕಂಡು ಆಯೋಜಕರು ಖುಷಿಪಟ್ಟಿದ್ದರು. ಆದರೆ ಸ್ಪರ್ಧೆಯ ದಿನ ನಿರಾಶೆಯಾಗಿದೆ.

    ಆರ್ ಜೆ ದೇವಂಗ್ ರಾವಲ್, ಮಿಸಸ್ ಇಂಡಿಯಾ 2018ರ ಫೈನಲಿಸ್ಟ್ ಕವಿತಾ ಶರ್ಮಾ ಹಾಗೂ ಡಾ. ಪ್ರಣವ್ ಪಚ್ಚಿಗರ್ ಅವರು ಈ ಸ್ಫರ್ಧೆಗೆ ಜಡ್ಜ್‌ಗಳಾಗಿದ್ದರು. ಉದ್ಯಮಿ ಸುಶೀಲ್ ಜೈನ್, ಪಟನ್ ಅಲ್ಲಿ ಶಾಲೆ ನಡೆಸುವ ಅಲ್ಕೇಶ್ ಪಾಂಡ್ಯಾ ಮತ್ತುವಿಷ್ಣು ಹೇದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಮೂವರು ಕೂಡ ಹೂಸು ಬಿಡುವಲ್ಲಿ ವಿಫಲವಾದ ಕಾರಣಕ್ಕೆ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ.

    ಈ ಬಗ್ಗೆ ಆಯೋಜಕ ಸಂಗೋಯ್ ಅವರು ಮಾತನಾಡಿ, ಈ ಬಾರಿ ಸ್ಪರ್ಧೆ ಫ್ಲಾಪ್ ಆಗಿರಬಹುದು ಆದರೆ ನಾವು ನಮ್ಮ ಪ್ರಯತ್ನ ಬಿಡಲ್ಲ. ಮತ್ತೆ ಈ ಸ್ಪರ್ಧೆಯಲ್ಲಿ ನಡೆಸುತ್ತೇವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ‘ಹೂಸು ಬಿಡುವ ಸ್ಪರ್ಧೆ’

    ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ‘ಹೂಸು ಬಿಡುವ ಸ್ಪರ್ಧೆ’

    ಗಾಂಧಿನಗರ: ದೇಶದಲ್ಲಿ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಗುಜರಾತಿನ ಸೂರತ್‍ನಲ್ಲಿ ಆಯೋಜಿಸಲಾಗಿದೆ. ಕೇಳಿದರೆ ತಮಾಷೆ ಅನಿಸಿದರು ಈ ಅಪರೂಪದ ಸ್ಪರ್ಧೆಯನ್ನು ವಿಜೇತರಿಗೆ ವಿಶೇಷ ಟ್ರೋಫಿ ಕೂಡ ಸಿಗಲಿದೆ.

    ಈ ಬಗ್ಗೆ ಕೇಳಿದ ತಕ್ಷಣ ಇದೆಂಥ ಸ್ಪರ್ಧೆನಪ್ಪಾ? ಇಂತಹ ಸ್ಪರ್ಧೆ ನಡೆಸುವ ಐಡಿಯಾ ಯಾರಿಗೆ ಬರುತ್ತೋ ಎಂದು ತಮಾಷೆ ಮಾಡಿಕೊಂಡು ನಗಬಹುದು. ಹಾಗೆಯೇ ಛೀ ಇನ್ನೂ ಯಾವ್ಯಾವ ಸ್ಪರ್ಧೆ ಮಾಡುತ್ತಾರೋ ಎಂದು ಅಚ್ಚರಿ ಕೂಡ ಆಗುತ್ತೆ. ಹಿಂದೆಂದೂ ಮಾಡಿರದ ಹೂಸು ಬಿಡುವ ವಿಚಿತ್ರ ಸ್ಪರ್ಧೆಯನ್ನು ಆಯೋಜಿಸಿರುವುದು ಎಲ್ಲಡೆ ಭಾರೀ ಚರ್ಚೆ ಆಗುತ್ತಿದೆ.

    ಹೌದು. ನಿಜಕ್ಕೂ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ದೊಡ್ಡದಾಗಿ, ಸುದೀರ್ಘವಾಗಿ ಭಾರೀ ಸದ್ದು ಮಾಡುತ್ತ ಹೂಸು ಬಿಡುವವರಿಗೆ ಇಲ್ಲಿ ಗೆಲ್ಲುವ ಅವಕಾಶವಿದೆ. ಹೂಸು ಬಿಡುವವರಿಗಾಗಿಯೇ `ವಾಟ್ ದಿ ಫಾರ್ಟ್’ ಸ್ಪರ್ಧೆಯನ್ನು ಸೂರತ್‍ನಲ್ಲಿ ನಡೆಯಲಿದೆ. ಸೆ.22ರ ಭಾನುವಾರದಂದು ಈ ವಿಚಿತ್ರ ಸ್ಪರ್ಧೆ ನಡೆಯಲಿದ್ದು, ಸೂರತ್ ನಿವಾಸಿ ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಇದನ್ನೂ ಓದಿ:ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಈ ರೀತಿಯೂ ಒಂದು ಸ್ಪರ್ಧೆ ಮಾಡುವ ವಿಚಾರ ನಿಮ್ಮ ತಲೆಗೆ ಹೇಗೆ ಹೊಳಿಯಿತು ಎಂದು ಕೇಳಿದರೆ ಸಿಂಗೋಯಿ ವಿಚಿತ್ರ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನಿಮಾ ನೋಡುತ್ತಾ ಕುಳಿತಿದ್ದೆ. ಆಗ ನಾನು ಒಂದು ದೊಡ್ಡ ಹೂಸು ಬಿಟ್ಟಿದ್ದಕ್ಕೆ ಎಲ್ಲರೂ ನಕ್ಕು, ತಮಾಷೆ ಮಾಡಿದರು. ಆಗಲೇ ಈ ಸ್ಪರ್ಧೆ ಮಾಡುವ ಐಡಿಯಾ ಹೊಳೆದಿದ್ದು. ಹೀಗೊಂದು ಸ್ಪರ್ಧೆ ಮಾಡಿದರೆ ಹೇಗೆ? ನಾನು ಅದರಲ್ಲಿ ಗೆಲ್ಲಬಹುದಲ್ಲವೇ? ಎಂದು ಅನಿಸಿತು. ಅಲ್ಲದೆ ಭಾರತದಲ್ಲಿ ಹಿಂದೆದೂ ಇಂಥದ್ದೊಂದು ಸ್ಪರ್ಧೆ ಮಾಡಿಲ್ಲ, ಅದಕ್ಕೆ ನಾವು ಮಾಡೋಣ ಎಂದು ಆಯೋಜನೆ ಮಾಡಿದೆ ಎಂದರು.

    ಈ ಸ್ಪರ್ಧೆ ಮೂರು ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. ಸುದೀರ್ಘವಾಗಿ, ದೊಡ್ಡದಾಗಿ, ಸಂಗೀತಮಯ ಹೀಗೆ ಮೂರು ರೀತಿ ಇರುತ್ತದೆ. ಇದರಲ್ಲಿ ಗೆದ್ದ ಮೂವರನ್ನು ವಿಜೇತರು ಎಂದು ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೂ 60 ಸೆಕೆಂಡ್ ಸಮಯ ನೀಡಲಾಗುತ್ತೆ. ಈ ಸಮಯದಲ್ಲಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು. ಇಲ್ಲಿ ಸ್ಪರ್ಧಿಗಳು ಹೂಸು ಬಿಡಲು ಸ್ವಾತಂತ್ರರು ಎಂದಿದ್ದಾರೆ.

    ಒಂದು 30 ವರ್ಷದ ಹಿಂದೆಲ್ಲಾ ಜನರು ಆರಾಮಾಗಿ, ಯಾವುದೇ ಹಿಂಜರಿಕೆ ಇಲ್ಲದೆ ಹೂಸು ಬಿಡುತ್ತಿದ್ದರು. ಆದರೆ ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ಜನರು ಹೂಸು ಬಿಡಲು ಅಂಜುತ್ತಿದ್ದಾರೆ. ಹೂಸು ಬಿಟ್ಟವರನ್ನು ಜನರು ಅಪಹಾಸ್ಯ ಮಾಡಿ ರೇಗಿಸುತ್ತಾರೆ. ಆದ್ದರಿಂದ ಜನರು ಆರಾಮಾಗಿ ನಿಶ್ಚಿಂತೆಯಿಂದ ಹೂಸು ಬಿಡುವುದಕ್ಕಾಗಿ ಈ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸ್ಪರ್ಧೆಗೆ ಸ್ಟ್ಯಾಂಡ್ ಅಪ್ ಹಾಸ್ಯಗಾರ ದೇವಾಂಗ್ ರಾವಲ್, ಸ್ಥಳೀಯ ವೈದ್ಯರು ತೀರ್ಪುಗಾರರಾಗಿ ಬರಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುತ್ತದೆ. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರೆ. ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು 100 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ.

    ಈ ಹೂಸು ಬಿಡುವ ಸ್ಪರ್ಧೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ. ಒಂದೆಡೆ ಜನರ ಸಮಸ್ಯೆ, ವೀಕ್‍ನೆಸನ್ನೇ ಅವರ ಶಕ್ತಿ ಮಾಡಲು ಹೊರಟಿರುವ ಸ್ಪರ್ಧೆ ನಿಜಕ್ಕೂ ಒಳ್ಳೆಯ ಪ್ರಯತ್ನ ಎಂದು ಕೆಲವರು ಹೇಳಿದರೆ, ಇನ್ನೊಂದೆಡೆ ಹೂಸು ಬಿಡುವ ಸ್ಪರ್ಧೆ ನಡೆಯುತ್ತಿದೆ. ಏರ್ ಫ್ರೆಶ್ನರ್ಸ್ ಮತ್ತು ಮಾಸ್ಕ್ ಮಾರುವವರು ಇದಕ್ಕೆ ಪ್ರಯೋಜಕರಾಗುತ್ತಾರೆ ಎಂದು ಸಿಕ್ಕಾಪಟ್ಟೆ ಲೇವಡಿ ಮಾಡಿದ್ದಾರೆ.

  • ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    ಗ್ರಾಮಸ್ಥರ ಹೃದಯ ಗೆದ್ದ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ

    -ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ಗಿಫ್ಟ್ ನೀಡ್ತಿದ್ದ ಉದ್ಯಮಿ

    ಸೂರತ್: ತನ್ನ ಉದ್ಯೋಗಿಗಳಿಗೆ ಕಾರ್, ಫ್ಲ್ಯಾಟ್ ನೀಡುವ ಮೂಲಕ ಹೆಸರುವಾಸಿಯಾಗಿರುವ ವಜ್ರದ ವ್ಯಾಪಾರಿ ಸಾವಜಿ ಡೊಲಕಿಯಾ ತಮ್ಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಾವಿರಾರು ಕೋಟಿ ಗಳಿಸಿದ್ದರೂ ತಮ್ಮ ಸ್ವಂತ ಊರನ್ನು ಮರೆಯದ ಉದ್ಯಮಿ ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಮ್ರೇಲಿ ಜಿಲ್ಲೆಯ ಧೂದಲ್ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದು, ಕೆರೆ ನಿರ್ಮಾಣಗಳ ಕಾರ್ಯ ನಡೆದಿದೆ.

    ತಾಯಿಯ ಪ್ರೇರಣೆ: ಮಹಿಳೆಯರಿಗೆ ವಜ್ರ, ವಜ್ರಾಭರಣಗಳು ಅಂದ್ರೆ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಡೊಲಕಿಯಾ ಅವರ ತಾಯಿ ಎಂದೂ ವಜ್ರಗಳನ್ನು ಇಷ್ಟಪಟ್ಟಿಲ್ಲ. ತನ್ನೂರಿನ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬ ಆಸೆಯನ್ನು ಹೊಂದಿದ್ದರು. ತಾಯಿಯ ಆಸೆಯನ್ನು ಪೂರ್ಣಗೊಳಿಸಲು ಡೊಲಕಿಯಾ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಬಾಲ್ಯದಿಂದ ತಾಯಿ ಮೋಡಗಳಲ್ಲಿ ಮಳೆ ಸುರಿಸುವಂತೆ ಪ್ರಾರ್ಥಿಸುತ್ತಿರೋದನ್ನು ಡೊಲಕಿಯಾ ನೋಡಿದ್ದರು.

    ಆರು ಸಾವಿರ ಕೋಟಿಯ ಮಾಲೀಕರಾಗಿರುವ ಡೊಲಕಿಯಾ ಅವರು ಬರಗಾಲ ಹಿನ್ನೆಲೆಯಲ್ಲಿ ಗ್ರಾಮ ತೊರೆದು ಸೂರತ್ ಸೇರಿಕೊಂಡಿದ್ದರು. ಅಂದಿನಿಂದ ಸತತ ಪರಿಶ್ರಮದಿಂದ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ.

    ತಾಯಿಯ ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಿದ್ದರಿಂದ ಗ್ರಾಮಕ್ಕೆ ಹಿಂದಿರುಗಿದ್ದೇನೆ. 15 ವರ್ಷದ ಹಿಂದೆ ಗುಜರಾತಿನ ಜಲ ಸಮಸ್ಯೆ ನಿವಾರಣೆಗಾಗಿ ಟ್ರಸ್ಟ್ ಒಂದಕ್ಕೆ 33 ಲಕ್ಷ ರೂ. ದೇಣಿಗೆ ನೀಡಿದ್ದೆ. ಈ ರೀತಿ ದೇಣಿಗೆ ನೀಡುವದರಿಂದ ನೀರಿನ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂಬುವುದು ನನಗೆ ಮನವರಿಕೆ ಆಯ್ತು. ಬರಗಾಲ ಪೀಡಿತ ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮತ್ತು ಪುನಶ್ಚೇತನಕ್ಕೆ ಮುಂದಾದೆ. ಆರಂಭದಲ್ಲಿ ನನ್ನೂರಿನ ಗ್ರಾಮಕ್ಕೆ 5 ಕೋಟಿ ರೂ. ವೆಚ್ಚದಲ್ಲಿ 5 ಕೆರಗಳ ನಿರ್ಮಾಣ ಮಾಡಲಾಯ್ತು. ಕೆರೆಗಳ ನಿರ್ಮಾಣದಿಂದ ಗ್ರಾಮದ ಬಹುತೇಕ ಸಮಸ್ಯೆಗಳು ದೂರು ಆಯ್ತು. ಆರಂಭದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ, ಇದೀಗ ನಮ್ಮ ಕೆಲಸದ ಪ್ರತಿಫಲ ನಮ್ಮ ಮುಂದಿದೆ ಎಂದು ಸಾವಜಿ ಡೊಲಕಿಯಾ ಸಂತೋಷ ವ್ಯಕ್ತಪಡಿಸುತ್ತಾರೆ.

    ಸಾವಜಿ ಡೊಲಕಿಯಾ ಫೌಂಡೇಶನ್ ಅಡಿಯಲ್ಲಿ ಇನ್ನುಳಿದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದಾರೆ. ಫೌಂಡೇಶನ್ ವತಿಯಿಂದ ಆಯ್ದ ಗ್ರಾಮಗಳಿಗೆ ತಲಾ 25 ಲಕ್ಷ ರೂ. ನೀಡಲಾಗಿದೆ. ಗ್ರಾಮಸ್ಥರು ಸಹ ಸ್ವಇಚ್ಛೆಯಿಂದ ಕೆಲಸದಲ್ಲಿ ಭಾಗಿಯಾಗುತ್ತಿರೋದು ಖುಷಿ ತಂದಿದೆ. 45 ಕೆರೆಗಳ ನಿರ್ಮಾಣದಲ್ಲಿ 2,500ಕ್ಕೂ ಹೆಚ್ಚು ಜನರು ನಮ್ಮ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಡೊಲಕಿಯಾ ಹೇಳುತ್ತಾರೆ.

    ತಮ್ಮ ಗ್ರಾಮದಲ್ಲಿ ಸೇರಿದಂತೆ ಒಟ್ಟು 45 ಕೆರೆಗಳ ನಿರ್ಮಾಣ ಕಾರ್ಯವನ್ನು ಡೊಲಕಿಯಾ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ 70 ಕೆರೆಗಳ ನಿರ್ಮಾಣದ ಗುರಿಯನ್ನು ಡೊಲಕಿಯಾ ಹೊಂದಿದ್ದಾರೆ.

    ಹರಿಕೃಷ್ಣ ಎಕ್ಸ್ ಪೋರ್ಟ್  ಕಂಪನಿಯ ಮಾಲೀಕರಾಗಿರುವ ಸಾವಜಿ ಡೊಲಕಿಯಾ 2018ರ ದೀಪಾವಳಿ ಸಂದರ್ಭದಲ್ಲಿ ಬೋನಸ್ ರೂಪದಲ್ಲಿ ತಮ್ಮ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡಿದ್ದರು. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿತ್ತು.

    600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಬೋನಸ್ ರೂಪದಲ್ಲಿ ಲಭ್ಯವಾಗಿತ್ತು. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿತ್ತು. 2018ರ ವೇಳೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. 2011ರಿಂದಲೂ ಡೊಲಕಿಯಾವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಬೋನಸ್ ನೀಡಲು ಪ್ರಾರಂಭಿಸಿದ್ದಾರೆ. 2015ರಲ್ಲಿ ಹಬ್ಬದ ಪ್ರಯುಕ್ತ 491 ಕಾರ್ ಮತ್ತು 200 ಫ್ಲ್ಯಾಟ್‍ಗಳನ್ನು ಗಿಫ್ಟ್ ನೀಡಿದ್ದರು. 2014ರಲ್ಲಿ ಕಂಪನಿಯ ನೌಕರರಿಗೆ 50 ಕೋಟಿ ರೂ. ಹಂಚಿದ್ದರು.

  • ಜೈನ ಸನ್ಯಾಸಿನಿಯಾದ 12ರ ಬಾಲಕಿ

    ಜೈನ ಸನ್ಯಾಸಿನಿಯಾದ 12ರ ಬಾಲಕಿ

    -ಮಗಳ ನಿರ್ಧಾರಕ್ಕೆ ಹೆತ್ತವರ ಸಮ್ಮತಿ

    ಸೂರತ್: 12ರ ಬಾಲಕಿಯೊಬ್ಬಳು ಜೈನ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಲು ಮುಂದಾಗಿದ್ದಾಳೆ. ಮಗಳ ಈ ನಿರ್ಧಾರಕ್ಕೆ ತಂದೆ-ತಾಯಿ ಕೂಡ ಬೆಂಬಲ ನೀಡಿರುವುದು ಸದ್ಯ ಎಲ್ಲರ ಗಮನ ಸೆಳೆದಿದೆ.

    ಸೂರತ್‍ನ 12 ವರ್ಷದ ಖುಷಿ ಶಾ ಜೈನ ಸನ್ಯಾಸಿನಿ ಆಗಲು ನಿರ್ಧರಿಸಿದ್ದಾಳೆ. ಖುಷಿ ಕುಟುಂಬದಲ್ಲಿ ಜೈನ ಸನ್ಯಾಸತ್ವ ಸ್ವೀಕರಿಸುತ್ತಿರುವುದು ಇವರೇ ಮೊದಲೇನಲ್ಲ. ಹೀಗಾಗಿ ಈ ಬಗ್ಗೆ ಬಾಲಕಿ ಮಾತನಾಡಿ, ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬದ ನಾಲ್ವರು ಸನ್ಯಾಸತ್ವದ ಹಾದಿ ಹಿಡಿದಿದ್ದರು. ಸಿಮಂದರ್ ಸ್ವಾಮೀಜಿ ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದರು. ನಾನು 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುತ್ತೇನೆ ಎಂದು ಹೇಳಿದಳು.

    ಸರ್ಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ ವಿನಿತ್ ಶಾ ಹಾಗೂ ತಾಯಿ ಮಗಳ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಗಳು ತನ್ನ ಆಂತರ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಸನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ತಂದೆ-ತಾಯಿ ಶುಭ ಹಾರೈಸಿದರು.

    ಕಳೆದ ವರ್ಷ ನವೆಂಬರ್‍ನಲ್ಲಿ ಆಕೆ 6ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಶಾಲೆ ಬಿಟ್ಟಿದ್ದಾಳೆ. 6ನೇ ತರಗತಿ ಪರೀಕ್ಷೆಯಲ್ಲಿ 97 ಅಂಕ ಪಡೆದಿದ್ದಳು. ಈಗಾಗಲೇ ಆಕೆ ಬರಿಗಾಲಲ್ಲಿ ಸಾವಿರಾರು ಕಿ.ಮೀ ಪ್ರವಾಸ ಮಾಡಿದ್ದಾಳೆ. ದೀಕ್ಷೆಯ ನಂತರ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡಲಿದ್ದಾಳೆ ಎಂದು ತಂದೆ ತಿಳಿಸಿದರು.

    ತಾಯಿ ಮಾತನಾಡಿ, ನಮ್ಮ ಮಗಳು ಡಾಕ್ಟರ್ ಆಗಬೇಕು ಎಂದು ನಾನು ಬಯಸಿದ್ದೆ. ಆದರೆ, ಅವಳ ನಿರ್ಧಾರಕ್ಕೆ ನಾವು ಆಕೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಸಮ್ಮತಿಸಿದ್ದೇವೆ. ಆಕೆಯ ಆಸೆಯನ್ನು ಪೂರೈಸುವುದು ನಮ್ಮ ಕರ್ತವ್ಯ. ಆಕೆಯ ನಿರ್ಧಾರದಿಂದ ನಮಗೆ ಹೆಮ್ಮೆ ಇದೆ ಎಂದು ಮಗಳ ನಡೆಗೆ ಬೆಂಬಲಿಸಿದರು.

    ಜೈನ ಸನ್ಯಾಸತ್ವ ದೀಕ್ಷೆ ಸ್ವೀಕರಿಸುವುದು ಸಾಮಾನ್ಯವಲ್ಲ. ಅದು ಬರೀ ಪ್ರಕ್ರಿಯೆ ಮಾತ್ರವಲ್ಲ, ಕಠಿಣ ವ್ರತಗಳನ್ನು ನಿರ್ವಹಿಸಬೇಕಿರುತ್ತದೆ. ದೀಕ್ಷೆ ನೀಡುವ ಸಮಯದಲ್ಲಿ ದೇಹದ ಮೇಲಿನ ವ್ಯಾಮೋಹ ಕಳೆದುಕೊಳ್ಳಲು ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಹೊಸ ಸನ್ಯಾಸಿಗಳು ಮಹಾವ್ರತ ಹೆಸರಿನ ಐದು ಪ್ರತಿಜ್ಞೆಗಳನ್ನು ಪಾಲಿಸಬೇಕಾಗಿರುತ್ತದೆ. ಇದರಲ್ಲಿ ಪ್ರತಿದಿನ ಕ್ರಿಯಾದಿಗಳು ಒಳಗೊಂಡಿರುತ್ತವೆ. ಹಾಗೆಯೇ ಎಂಟು ಸಿದ್ಧಾಂತಗಳನ್ನು (ಪ್ರವಚನ ಮಾತ್ರಕ್) ಅಭ್ಯಾಸ ಮಾಡಬೇಕು. ಜೊತೆಗೆ ಆರು ಕಡ್ಡಾಯ ಕ್ರಿಯೆಗಳನ್ನು (ಅವಸ್ಯಾಕ್) ಪಾಲಿಸಲೇಬೇಕು. ಈ ಎಲ್ಲಾ ಕಠಿಣ ವ್ರತ, ಸಿದ್ಧಾಂತ ಹಾಗೂ ಕ್ರಿಯೆಗಳನ್ನು ಪಾಲಿಸಿ ಜೈನ ಸನ್ಯಾಸಿನಿಯಾಗಲು ಖುಷಿ ಮುಂದಾಗಿದ್ದಾಳೆ.

  • ಹೊತ್ತಿ ಉರಿದ ಕಟ್ಟಡ, ಬದುಕುಳಿಯಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು – 16 ಸಾವು

    ಹೊತ್ತಿ ಉರಿದ ಕಟ್ಟಡ, ಬದುಕುಳಿಯಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು – 16 ಸಾವು

    ಗಾಂಧಿನಗರ: ಗುಜರಾತ್‍ನ ಸೂರತ್ ನಗರದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 16 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

    ಕಟ್ಟಡದ ಮೂರನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇದ್ದು, ಶಾರ್ಟ್ ಸರ್ಕೀಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿ ಭಾರೀ ಅನಾಹುತ ಸೃಷ್ಟಿಸಿದೆ. ಕೋಚಿಂಗ್ ಸೆಂಟರ್ ನಲ್ಲಿದ್ದ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ಮಹಡಿಯ ಕಿಟಕಿಗಳಿಂದ ಹಾರಿದ್ದಾರೆ. ಇದರಿಂದಾಗಿ ಕೆಲ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರೆ, ಕೆಲವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    https://twitter.com/Guru8089/status/1131909320596250626

    ಮೃತ ವಿದ್ಯಾರ್ಥಿಗಳು 14ರಿಂದ 17 ವರ್ಷದವರಾಗಿದ್ದು, ಮೃತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ 50 ಜನ ವಿದ್ಯಾರ್ಥಿಗಳಿದ್ದರು. ಅವರಲ್ಲಿ 20 ಜನರನ್ನು ರಕ್ಷಿಸಲಾಗಿದೆ. ಆದರೆ ಬೆಂಕಿ ಹೆಚ್ಚುತ್ತಿದ್ದಂತೆ ವಿದ್ಯಾರ್ಥಿಗಳು ಕಟ್ಟಡದಿಂದ ಧುಮುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ 25 ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸಿವೆ. ಕಟ್ಟಡದಲ್ಲಿ 8 ಜನರ ಮೃತ ದೇಹಗಳು ಪತ್ತೆಯಾಗಿವೆ ಎಂದು ಸೂರತ್ ಮೇಯರ್ ಹೇಳಿದ್ದಾರೆ.

    ಈ ಘಟನೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂ.ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸೇರಿದಂತೆ ಅನೇಕರು ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

    ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

    ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ಯಾಂಟ್ ಧರಿಸಿ ಬಂದ ನಿರೂಪಕಿ ಮೇಲೆ ಬಿಜೆಪಿ ನಾಯಕಿ ಗರಂ!

    ಪ್ಯಾಂಟ್ ಧರಿಸಿ ಬಂದ ನಿರೂಪಕಿ ಮೇಲೆ ಬಿಜೆಪಿ ನಾಯಕಿ ಗರಂ!

    ಗಾಂಧಿನಗರ: ಇತ್ತೀಚೆಗೆ ಬಿಜೆಪಿ ಪಕ್ಷ ಸೇರಿರುವ ನಟಿ ಮೌಸಾಮಿ ಚಟರ್ಜಿ ಕಾರ್ಯಕ್ರಮವೊಂದರಲ್ಲಿ ಪ್ಯಾಂಟ್ ಧರಿಸಿದ್ದ ನಿರೂಪಕಿಯ ಮೇಲೆ ಗರಂ ಆಗಿದ್ದಾರೆ.

    ಸೋಮವಾರ ಗುಜರಾತಿನ ಸೂರತ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮೌಸಾಮಿ ಚಟರ್ಜಿ ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭಿಸಿದ ನಿರೂಪಕಿ ವೇದಿಕೆಯ ಮೇಲೆ ಆಸೀನರಾಗಿರುವ ಎಲ್ಲ ಗಣ್ಯರನ್ನು ಪರಿಚಯಿಸಿ ಸ್ವಾಗತಿಸುತ್ತಿದ್ದರು. ಈ ಸಂದರ್ಭದಲ್ಲಿ ನಟಿ ಹಾಗೂ ಬಿಜೆಪಿ ನಾಯಕಿಯಾಗಿರುವ ಮೌಸಮಿ ಅವರನ್ನು ಪರಿಚಯಿಸಿದರು. ಜನರನ್ನು ಉದ್ದೇಶಿಸಿ ಮಾತನಾಡುವಾಗ ಮೌಸಮಿ, ಪ್ಯಾಂಟ್ ಧರಿಸಿದ್ದ ನಿರೂಪಕಿಗೆ ಬಹಿರಂಗವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ರೀತಿಯ ಕಾರ್ಯಕ್ರಮಕ್ಕೆ ಪ್ಯಾಂಟ್ ಧರಿಸಿಕೊಂಡು ಬರಬಾರದು. ಪ್ಯಾಂಟ್ ಬದಲು ಸೀರೆ, ಕುರ್ತಾ, ಪೈಜಾಮ ಮತ್ತು ಚೂಡಿದಾರ್ ಧರಿಸಿಕೊಂಡು ಬರಬೇಕು. ಇದು ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿರೂಪಕಿ ಏನನ್ನು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದರು. ನಾನು ಒಬ್ಬ ಭಾರತೀಯ ಮಹಿಳೆಯಾಗಿದ್ದು, ಇಂದಿನ ಯುವಜನತೆಗೆ ಯಾವ ರೀತಿಯ ಉಡುಗೆಯನ್ನು ಧರಿಸಬೇಕು ಹೇಳುವ ಹಕ್ಕು ನನಗಿದೆ. ನಿರೂಪಕಿಗೆ ತಾಯಿಯ ಸ್ಥಾನದಲ್ಲಿ ನಿಂತು ಉಡುಗೆ-ತೊಡುಗೆಯ ಬಗ್ಗೆ ಸಲಹೆ ನೀಡಿದ್ದೇನೆ. ನನ್ನ ಹೇಳಿಕೆಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂಬುದನ್ನು ಚಟರ್ಜಿ ಸ್ಪಷ್ಟಪಡಿಸಿದ್ದಾರೆ.

    ಮೌಸಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕ ಉಮೇಶ್ ಮೆಹ್ತಾ, ನನಗೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಸೂರತ್ ಬಿಜೆಪಿ ಮುಖ್ಯಸ್ಥ ನಿತಿನ್ ಭಾಯಿವಾಲಾ, ಅಧ್ಯಕ್ಷ ಪಿ.ವಿ.ಎಸ್ ಮತ್ತು ಇತರೆ ಪಕ್ಷದ ಮುಖಂಡರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದ ನಿರೂಪಣೆಗಾಗಿ ಪರಿಚಯದ ಯುವತಿಯನ್ನು ಕರೆಸಲಾಗಿತ್ತು. ನಿರೂಪಣೆಗಾಗಿ ಯುವತಿಗೆ ಸಂಭಾವನೆಯನ್ನು ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

    ಜನವರಿ 2ರಂದು ಮೌಸಮಿ ಚಟರ್ಜಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು. ಸೂರತ್ ನಗರದ ಬಿಜೆಪಿ ಮುಖಂಡರಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮೌಸಮಿ ಚಟರ್ಜಿ ಹಾಜರಾಗಿದ್ದರು. ಈ ಹಿಂದೆ ಮೌಸಮಿ ಚಟರ್ಜಿ ಕಾಂಗ್ರೆಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ಭಾವಚಿತ್ರದ ಚಿನ್ನದ ರಾಖಿಗೆ ಭಾರೀ ಬೇಡಿಕೆ

    ಪ್ರಧಾನಿ ಮೋದಿ ಭಾವಚಿತ್ರದ ಚಿನ್ನದ ರಾಖಿಗೆ ಭಾರೀ ಬೇಡಿಕೆ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗುಜರಾತ್ ಸಿಎಂ ವಿಜಯ್ ರೂಪಾನಿ ಭಾವಚಿತ್ರವಿರುವ ಚಿನ್ನದ ರಾಖಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಈಗಾಗಲೇ ಸಿದ್ಧವರುವ 50 ರಾಖಿಗಳಲ್ಲಿ 47 ಮಾರಾಟವಾಗಿದೆ.

    ಗುಜರಾತ್‍ನ ಸೂರತ್‍ನ ಆಭರಣದ ಅಂಗಡಿಯೊಂದು 22 ಕ್ಯಾರೆಟ್ ಶುದ್ಧ ಚಿನ್ನದಲ್ಲಿ ರಾಖಿಗಳನ್ನು ಸಿದ್ಧಪಡಿಸಿದ್ದು, ಒಂದು ರಾಖಿಗೆ 50 ಸಾವಿರ ದಿಂದ 70 ಸಾವಿರ ರೂ. ನಿಗದಿ ಮಾಡಿದೆ. ಈ ರಾಖಿಯನ್ನು ಸಹೋದರಿನಿಗೆ ಕಟ್ಟಿ ಪ್ರಧಾನಿ ನರೇಂದ್ರ ಮೋದಿ ಹಾಗೆ ನೀವು ಎತ್ತರಕ್ಕೆ ಬೆಳೆ ಶುಭಕೋರುತ್ತೇನೆ ಎಂದು ರಾಖಿ ಖರೀದಿಸಿದ ಶ್ರದ್ಧಾ ಎಂಬ ಯುವತಿಯೊಬ್ಬರು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಹಾಗೂ ವಿಜಯ್ ರೂಪಾನಿ ದೇಶದ ಅಭಿವೃದ್ಧಿಗಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಂದ ವಿಶ್ವದಾದ್ಯಂತ ಲಕ್ಷಾಂತರ ಜನ ಸ್ಫೂರ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಅವರ ಭಾವಚಿತ್ರವಿರುವ ರಾಖಿಯನ್ನು ಸಿದ್ಧ ಪಡಿಸಿದ್ದೇವೆ ಎಂದು ಆಭರಣದ ಅಂಗಡಿಯ ಮಾಲೀಕರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರೇ ಗಮನಿಸಿ, ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗು ಬಲಿ!

    ಪೋಷಕರೇ ಗಮನಿಸಿ, ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗು ಬಲಿ!

    ಗಾಂಧಿನಗರ: ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗುವೊಂದು ಕೆರೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದೆ.

    ಶುಕ್ರವಾರ ಅಲ್ತಾನ್ ಗಾರ್ಡನ್ ನಲ್ಲಿ ತಮ್ಮ ಹೆಣ್ಣು ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.

    ನಡೆದದ್ದು ಏನು?
    ಆಗಸ್ಟ್ 3 ರಂದು ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸೂರತ್ ಸಮೀಪದ ಅಲ್ತಾನ್ ನ್ಯಾಷನಲ್ ಪಾರ್ಕ್ ಗೆ ಹೋಗಿದ್ದರು. ಮಕ್ಕಳನ್ನು ಪಾರ್ಕ್ ನಲ್ಲಿ ಆಟವಾಡಲು ಬಿಟ್ಟು, ದಂಪತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. 3 ವರ್ಷದ ಹೆಣ್ಣು ಮಗುವೊಂದು ಆಟವಾಡುತ್ತ ಅಲ್ಲಿದ್ದ ಕೆರೆಗೆ ಜಾರಿ ಬಿದ್ದಿತ್ತು. ಆದರೆ ಪೋಷಕರು ತಮ್ಮ ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

    ಶನಿವಾರ ತನಿಖೆ ಕೈಗೊಂಡ ಪೊಲೀಸರಿಗೆ ಪಾರ್ಕ್ ನ ಕೆರೆಯ ದಂಡೆಯಲ್ಲಿ ಮಗುವಿನ ಶೂ ಪತ್ತೆಯಾಗಿತ್ತು. ಮಗು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಿ, ಪತ್ತೆಗಾಗಿ ಕಾರ್ಯಾಚರಣೆ ಪ್ರಾರಂಭಸಿದ್ದರು. ಸ್ವಲ್ಪ ಸಮಯದ ನಂತರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ನಾವು ಮಕ್ಕಳನ್ನು ಉದ್ಯಾನದಲ್ಲಿ ಬಿಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿದ್ದೇವು. ಈ ವೇಳೆ ಮಗು ಕೆರೆಗೆ ಬಂದಿರುವ ವಿಚಾರ ಗೊತ್ತಾಗಿಲ್ಲ ಎಂದು ಪೋಷಕರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖತೋಧಾರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣದ ದಾಖಲಿಸಿದ್ದಾರೆ.

  • ಲಾಂಗ್ ಹಿಡಿದು ಎಲ್ಲರನ್ನು ಹೆದರಿಸಿದ್ದ ಲೇಡಿ ಡಾನ್ ಅರೆಸ್ಟ್!

    ಲಾಂಗ್ ಹಿಡಿದು ಎಲ್ಲರನ್ನು ಹೆದರಿಸಿದ್ದ ಲೇಡಿ ಡಾನ್ ಅರೆಸ್ಟ್!

    ಸೂರತ್: ಯುವತಿಯೊಬ್ಬಳು ರಸ್ತೆಬದಿಯಲ್ಲಿದ್ದ ಅಂಗಡಿ ಮಾಲೀಕನಿಗೆ ಬೆದರಿಸಿ ಆತನ ಹಣವನ್ನು ದೋಚಿ ಗೂಂಡಾಗಿರಿ ಮಾಡಿದ ಘಟನೆ ಗುಜರಾತ್‍ನ ಸೂರತ್‍ನಲ್ಲಿ ನಡೆದಿದೆ.

    ಅಸ್ಮಿತಾ ಅಲಿಯಾಸ್ ಬೂರಿ ಗೋಹಿಲಾ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಗೂಂಡಾಗಿರಿ ಮಾಡಿದ ಯುವತಿ. ಅಸ್ಮಿತಾ ಹಾಗೂ ಆಕೆಯ ಸ್ನೇಹಿತರು ಗೂಂಡಾಗಿರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಪೊಲೀಸರು ಆಸ್ಮಿತಾ ಹಾಗೂ ಆಕೆಯ ಸ್ನೇಹಿತರನ್ನು ಬಂಧಿಸಿದ್ದಾರೆ.

    ಮೇ 21, 2018ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಸೂರತ್‍ನ ರಸ್ತೆಯಲ್ಲಿ ಅಸ್ಮಿತಾ ಅಂಗಡಿ ಮಾಲೀಕನ ಹತ್ತಿರ ತನ್ನ ಗೂಂಡಾಗಿರಿ ತೋರಿದ್ದಾಳೆ. ಅಸ್ಮಿತಾ ಬೆಳಗ್ಗೆ 6 ಗಂಟೆಗೆ ಲಾಂಗ್ ಬೀಸುತ್ತಾ ಪಾನ್ ಅಂಗಡಿ ಹತ್ತಿರ ಬಂದಿದ್ದಾಳೆ. ಅಂಗಡಿ ಮಾಲೀಕ ಏನೂ ನಡೆಯುತ್ತಿದೆ ಎಂದು ತಿಳಿಯುವುದರ ಮೊದಲೇ ಅಸ್ಮಿತಾ ಆತನಿಗೆ ಅವಾಜ್ ಹಾಕಿ ಅಂಗಡಿಯಲ್ಲಿದ್ದ ಹಣವನ್ನು ದೋಚಿದ್ದಾಳೆ.

    ಅಸ್ಮಿತಾ ಅಂಗಡಿ ಹತ್ತಿರ ಬರುತ್ತಿದ್ದಂತೆ ಅಂಗಡಿ ಹತ್ತಿರ ಬೈಕಿನಲ್ಲಿ ಕುಳಿತಿದ್ದ ಇಬ್ಬರು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಮಾಲೀಕನು ಕೂಡ ತನ್ನ ಅಂಗಡಿಯನ್ನು ಮುಚ್ಚಿ ಅಲ್ಲಿಂದ ಹೊರಟು ಹೋಗಿದ್ದಾನೆ. ಮಾಲೀಕನನ್ನು ಬೆದರಿಸಿದ ನಂತರ ಅಸ್ಮಿತಾ ಹಾಗೂ ಆಕೆಯ ಸ್ನೇಹಿತರು ದಾರಿಯಲ್ಲಿ ಹೋಗುತ್ತಿದ್ದ ಜನರ ಹತ್ತಿರ ಹಣವನ್ನು ವಸೂಲಿ ಮಾಡುತ್ತಿದ್ದಳು ಎಂದು ವರದಿಯಾಗಿದೆ.

    ಅಸ್ಮಿತಾಳನ್ನು ಹೆದರಿಕೊಂಡು ಅಂಗಡಿ ಮಾಲೀಕ ಆಕೆಯ ವಿರುದ್ಧ ದೂರು ದಾಖಲಿಸಲು ಮುಂದಾಗಲಿಲ್ಲ. ಆದರೆ 3 ದಿನಗಳ ನಂತರ ಸಿಸಿಟಿವಿಯಲ್ಲಿ ಸೆರೆಯಾದ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿತ್ತು. ಆಗ ಪೊಲೀಸರು ಆ ಅಂಗಡಿ ಮಾಲೀಕನನ್ನು ಹುಡುಕಿ ಆಕೆಯ ವಿರುದ್ಧ ಕಳ್ಳತನ, ಬೆದರಿಕೆ ಹಾಗೂ ಹೊಡೆದಾಟದ ಕೇಸನ್ನು ದಾಖಲಿಸಿಕೊಂಡರು.

    ಈ ಹಿಂದೆ ಮಾರ್ಚ್ ತಿಂಗಳಲ್ಲಿ ಅಸ್ಮಿತಾಳ ಗೂಂಡಾಗಿರಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಅಸ್ಮಿತಾ ತನ್ನ ಸ್ನೇಹಿತರ ಜೊತೆಗೆ ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಎಲ್ಲರನ್ನೂ ಹೆದರಿಸುತ್ತಿದ್ದಳು. ಈಗ ಮತ್ತೆ 2 ತಿಂಗಳ ನಂತರ ಅಸ್ಮಿತಾಳ ಮತ್ತೊಂದು ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ.

    ಅಸ್ಮಿತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಈ ಹಿಂದೆ ಕೂಡ ಆಕೆಯ ಮೇಲೆ ಸಾಕಷ್ಟು ಕೇಸ್ ದಾಖಲಾಗಿದೆ. ಅಸ್ಮಿತಾಳನ್ನು ನೋಡಲು ಆಕೆಯ ಕುಟುಂಬದವರು ಇದುವರೆಗೂ ಬಂದಿಲ್ಲ. ಆದರೆ ಆಕೆಗೆ ಧೂಮಪಾನ ಅಥವಾ ಮದ್ಯಪಾನ ಮಾಡುವ ಅಭ್ಯಾಸವಿಲ್ಲ. ಆದರೆ ಗೂಂಡಾ ರೌಡಿಗಳ ಜೊತೆ ತಿರುಗಾಡುವುದು ಅಸ್ಮಿತಾಳ ಅಭ್ಯಾಸ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.