Tag: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

  • 15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    15 ವರ್ಷದಿಂದ ನಡೆಯುತ್ತಿದೆ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ- ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು

    – 124 ಕೋಟಿ ಖರ್ಚಾಗಿದ್ರೂ ಉದ್ಘಾಟನೆ ಭಾಗ್ಯ ಇಲ್ಲ

    ಬಳ್ಳಾರಿ: ಸಾಮಾನ್ಯವಾಗಿ ಒಂದು ದೊಡ್ಡ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಮುಗಿಯಬೇಕು ಎಂದರೆ 3 ಅಥವಾ 4 ವರ್ಷ ಆಗಬಹುದು. ಆದರೆ ಬಳ್ಳಾರಿಯಲ್ಲಿ (Ballari) ನಿರ್ಮಾಣವಾಗ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ 15 ವರ್ಷದಿಂದಲೂ ಕಾಮಗಾರಿ ನಡೆಯುತ್ತಲೇ ಇದೆ.

    ಏಮ್ಸ್ ಆಸ್ಪತ್ರೆ (AIIMS) ಮಾದರಿಯಲ್ಲಿ ನಿರ್ಮಾಣ ಮಾಡಬೇಕು ಎಂದು 2010 ರಲ್ಲಿ ಅಸ್ಪತ್ರೆ ಕಾಮಗಾರಿ ಶುರು ಮಾಡಲಾಗಿತ್ತು. ಆಗ ಸರ್ಕಾರ 100 ಕೋಟಿ ರೂ. ಅನುದಾನ ಕೊಟ್ಟಿತ್ತು. ಬಳಿಕ ಮತ್ತೆ 24 ಕೋಟಿ ರೂ. ಸೇರಿ ಒಟ್ಟು 124 ಕೋಟಿ ರೂ. ಅನುದಾನ ಬಳಕೆಯಾಗಿದೆ. ಸಮರ್ಪಕವಾಗಿ ಕಾಲ ಕಾಲಕ್ಕೆ ಅನುದಾನ ಬಾರದ ಕಾರಣ ಕಾಮಗಾರಿ ವಿಳಂಬವಾಗಿದೆ. ಇದನ್ನೂ ಓದಿ: DCC Bank Election| ಲಿಂಗಾಯತ ನಾಯಕರ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಚೆಕ್‌ಮೇಟ್!

    ಈಗ ಇನ್ನೂ 20 ಕೋಟಿ ರೂ. ಅನುದಾನ ಬೇಕು. ಆದರೆ ಸರ್ಕಾರ ಅನುದಾನ ಕೊಡುತ್ತಿಲ್ಲ. ಗಣಿ ನಾಡಲ್ಲಿ ವಿಮ್ಸ್ ಹಾಗೂ ಜಿಲ್ಲಾಸ್ಪತ್ರೆ ಎರಡೂ ಇವೆ. ಹೆಚ್ಚಿನ ಜನ ಈ ಆಸ್ಪತ್ರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಮಪರ್ಕವಾಗಿ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಇದನ್ನೂ ಓದಿ: ನಕಲಿ ಬಿಲ್ ಪಾವತಿಗಾಗಿ ಹಿರಿಯ ಅಧಿಕಾರಿಗಳ ಕಿರುಕುಳ ಮಹಿಳಾ ಎಂಜಿನಿಯರ್ ಸೂಸೈಡ್

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ನಾವೆಲ್ಲ ಒಳ್ಳೆಯ ಚಿಕಿತ್ಸೆ ಪಡೆಯಬಹುದು ಎಂದುಕೊಂಡವರು ಕಾದು ಕಾದು ಸುಸ್ತಾಗಿದ್ದಾರೆ. ಸರ್ಕಾರಗಳು ಬದಲಾದರೂ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ಕಾಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

  • ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಕೊಡುಗೆ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಘೋಷಣೆ

    ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಕೊಡುಗೆ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಘೋಷಣೆ

    ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್‍ನಲ್ಲಿ (State Budget) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

    ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ 15,151 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಈ ವೇಳೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಕಾರವಾರದಲ್ಲಿ (Karwar) ಪ್ರಗತಿಯಲ್ಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ನಿರ್ಮಾಣವನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.

    ಜಿಲ್ಲೆಯ ಜನರು ಸೂಕ್ತ ಆಸ್ಪತ್ರೆಯಿಲ್ಲದೇ ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ರೋಗಿಗಳಿಗೆ ತೊಂದರೆಯಾದಾಗಲೆಲ್ಲ ದೂರದ ಮಣಿಪಾಲ, ಗೋವಾ, ಮಂಗಳೂರು ಮತ್ತಿತರ ಕಡೆ ಹೋಗಬೇಕು. ಇದರಿಂದ ತುಂಬಾ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಆಸ್ಪತ್ರೆಗಾಗಿ ಹತ್ತಾರು ಹೋರಾಟಗಳು ನಡೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದನ್ನೂ ಓದಿ: ರಾಜ್ಯ ಬಜೆಟ್: ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ

    ಈ ಹಿಂದೆ ಹೊನ್ನಾವರದ ರೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಭೀಕರ ಅಪಘಾತಕ್ಕೊಳಗಾಗಿತ್ತು. ಈ ಘಟನೆ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಜೋರಾಗಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ರೀತಿಯಲ್ಲಿ ಅಭಿಯಾನ ನಡೆಸಲಾಗಿತ್ತು. ಕೊನೆಗೂ ಉತ್ತರ ಕನ್ನಡ ಜಿಲ್ಲೆಯ ಜನರ ಒತ್ತಡಕ್ಕೆ ಮಣಿದ ಸರ್ಕಾರ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಉತ್ತರ ಕನ್ನಡ ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ಕೂಡ ನಡೆಸಿದ್ದರು. ಇದನ್ನೂ ಓದಿ: ಎಣ್ಣೆ ಬೇಗ ಕೊಡದಿದ್ದಕ್ಕೆ ಬಾರ್ ಹುಡುಗನ ಮೇಲೆ ಹಲ್ಲೆ- 23 ದಿನಗಳ ಬಳಿಕ ಸಾವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉತ್ತರಕನ್ನಡ ಜನರ ದಶಕಗಳ ಬೇಡಿಕೆಗೆ ಕೊನೆಗೂ ಅಸ್ತು- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಒಪ್ಪಿಗೆ

    ಉತ್ತರಕನ್ನಡ ಜನರ ದಶಕಗಳ ಬೇಡಿಕೆಗೆ ಕೊನೆಗೂ ಅಸ್ತು- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಒಪ್ಪಿಗೆ

    ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Dr. K Sudhakar) ಹೇಳಿದರು.

    ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ ಸಿಹಿ ಸುದ್ದಿ ನೀಡಿದರು. ಈ ಮೂಲಕ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿದೆ.

    ಉತ್ತರ ಕನ್ನಡ (Uttar Kannada) ಜಿಲ್ಲೆಗೆ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಲ್ಲಿ ನಿರ್ಮಿಸಬೇಕು, ಹೇಗೆ ನಿರ್ಮಾಣ ಮಾಡಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಈ ಪ್ರಸ್ತಾವ ಆರ್ಥಿಕ ಇಲಾಖೆಯವರೆಗೆ ಹೋಗಿದೆ. ಇನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾವ ಇರಿಸಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರ ಪ್ರತಿಭಟನೆ ಹಿಂದೆ PFI ಪಿತೂರಿ: ಸಾಲಿಸಿಟರ್ ಜನರಲ್ ಮೆಹ್ತಾ ವಾದ

    ಕುಮಟಾ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಮಧ್ಯಭಾಗದಲ್ಲಿದ್ದು, ಅಲ್ಲಿಯೇ ಆಸ್ಪತ್ರೆ ನಿರ್ಮಿಸುವ ಬಗ್ಗೆಯೂ ಚರ್ಚೆಯಾಗಿದೆ. ಶಿರಸಿ (Sirsi) ಯಲ್ಲಿ ಈಗಾಗಲೇ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾರವಾರ(Karwar) ದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದ್ದು, ಮುಂದಿನ ವರ್ಷಕ್ಕೆ ಆ ಕಾಮಗಾರಿಯೂ ಮುಗಿಯಲಿದೆ. ಅಲ್ಲಿ ಈ ವರ್ಷವೇ 150 ವಿದ್ಯಾರ್ಥಿಗಳಿಗೆ ಬೋಧಿಸಲು ಎನ್‍ಎಂಸಿಯಿಂದ ಪರವಾನಗಿ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡುವುದು, ಆರೋಗ್ಯ ಸೇವೆ ಮೇಲ್ದರ್ಜೆಗೇರಿಸುವುದು, ಸಿಬ್ಬಂದಿ ಕೊರತೆ ನೀಗಿಸುವುದು, ಉಪಕರಣಗಳ ಪೂರೈಕೆ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.

    ಅಧಿವೇಶನ ಮುಗಿದ ಬಳಿಕ ಸಚಿವ ಡಾ.ಕೆ.ಸುಧಾಕರ್ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಸಚಿವ ಶಿವರಾಮ್ ಹೆಬ್ಬಾರ್, ಶಾಸಕರು ಸಭೆಯಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

    ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯದ ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂತಹ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್

    ಕೋವಿಡ್ ವೇಳೆ ಎಲ್ಲಾ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟೆಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    KUMARASWAMY

    ರಾಜ್ಯದಲ್ಲಿ ಇನ್ನೆಷ್ಟು ಅಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ಸರ್ಕಾರ ಕಣ್ತೆರೆಯಲೇಬೇಕು. ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರ್ಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    – ಸಿದ್ದು ಬಜೆಟ್‍ಗೆ ಮನ್ನಣೆ ನೀಡದ ರಾಜ್ಯ ಸರ್ಕಾರ

    ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    2015ರ ರಾಜ್ಯ ಬಜೆಟ್ ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿದರು. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾದ ಬಳಿಕ ಈ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2018ರ ಬಜೆಟ್ ನಲ್ಲಿ ಮತ್ತೆ ಸಿದ್ದರಾಮಯ್ಯ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಿದ್ದರು.

    2018ರ ಅಕ್ಟೋಬರ್ ನಲ್ಲಿ ಕಾಮಗಾರಿಗೆ ಬಿಮ್ಸ್ ಅಧಿಕಾರಿಗಳು ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಈ ಕಾಮಗಾರಿಗೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಯಬೇಕು. ಆದರೆ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಉದ್ದೇಶದಿಂದ ಈ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

    ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾದರೆ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಿಲ್ಲ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹದಗೆಟ್ಟು ಹೋಗಿದ್ದು, ಈ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಕೊಡಗಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಯುವಕರಿಂದ ಬೈಕ್ ರ‍್ಯಾಲಿ

    ಕೊಡಗಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಯುವಕರಿಂದ ಬೈಕ್ ರ‍್ಯಾಲಿ

    ಮಡಿಕೇರಿ: ಪ್ರವಾಸಿ ತಾಣವಾಗಿರುವ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸ್ಯಾಂಡಲ್ ವುಡ್ ನಟ- ನಟಿಯರಿಂದ ಹಿಡಿದು ಎಲ್ಲರೂ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಿದ್ದರು. ಈ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಮೂಲದ ಯುವಕರ ತಂಡವೊಂದು ಬೈಕ್ ರ‍್ಯಾಲಿ ಮಾಡುವ ಮೂಲಕ ಜಿಲ್ಲೆಗೆ ಆಗಮಿಸಿ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆ ಬೇಕು ಎನ್ನುವ ಅಭಿಯಾನಕ್ಕೆ ಕೈ ಜೋಡಿಸಿದೆ.

    ಹೌದು. ಕೊಡವ ರೈಡರ್ಸ್ ಕ್ಲಬ್ ಯುವಕರು ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಿಂದ ಮಡಿಕೇರಿಯವರೆಗೆ ಬೈಕ್ ರ‍್ಯಾಲಿ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 70 ಕ್ಕೂ ಹೆಚ್ಚಿನ ಯುವಕರ ತಂಡ ಬೆಂಗಳೂರಿನಿಂದ ಮೈಸೂರು ಗೋಣಿಕೊಪ್ಪ, ವಿರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: #weneedemergencyhospitalinkodagu – ಕೊಡಗಿನಲ್ಲಿ ಆಸ್ಪತ್ರೆಗಾಗಿ ಅಭಿಯಾನ

    ಮಂಜಿನ ನಗರಿ ಮಡಿಕೇರಿಗೆ ಸಾವಿರಾರು ಪ್ರವಾಸಿಗರು ಬಂದು ಅಪಘಾತ ಸಂಭವಿಸಿದಾಗ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಅರಂಭವಾದ ಹಿನ್ನೆಲೆಯಲ್ಲಿ ನಮ್ಮ ತಂಡ ಬೈಕ್ ರೈಡ್ ಮಾಡುವ ಮೂಲಕ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ಬೈಕ್ ರೈಡರ್ ಸುಬ್ಬಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಆಸ್ಪತ್ರೆ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ

    ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಇದೆಯಾದರೂ ಅದು ಹೆಸರಿಗೆ ಮಾತ್ರ ಎಂಬಂತಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ ಖುದ್ದು ಇಲ್ಲಿನ ವೈದ್ಯರೇ ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ರೋಗಿಗಳನ್ನು ಕರೆದೊಯ್ಯುವಂತೆ ಸೂಚನೆ ನೀಡುತ್ತಾರೆ. ಇದರಿಂದ ರೋಗಿಗಳು ಮಾರ್ಗ ಮಧ್ಯೆಯೇ ಪ್ರಾಣ ಕಳೆದುಕೊಳ್ಳುತ್ತಿದ್ದು, ಕುಟುಂಬ ವರ್ಗ ಚಿಂತೆಗೀಡಾಗುತ್ತಿದೆ. ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ. ಲಕ್ಷಾಂತರ ಪ್ರವಾಸಿಗರು ಬರುತ್ತಿದ್ದಾರೆ. ಕಾರ್ಮಿಕರು ವನ್ಯಜೀವಿಗಳ ದಾಳಿಗೆ ಅಥವಾ ಇನ್ಯಾವುದೇ ಅನಾಹುತಗಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಗೆ ತಲುಪಿದರೆ ಅಗತ್ಯ ಚಿಕಿತ್ಸೆ ಜಿಲ್ಲೆಯಲ್ಲಿ ಲಭ್ಯವಿಲ್ಲ. ಅಪಘಾತದಲ್ಲಿ ಜನ ಚಿಂತಾಜನಕ ಸ್ಥಿತಿಯಲ್ಲಿ ನರಳಿದರೆ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬದುಕಿಸುವ ಸೌಲಭ್ಯಗಳಿಲ್ಲ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಕಂಡಾಕ್ಷಣ ಅಸಹಾಯಕತೆ ವ್ಯಕ್ತಪಡಿಸುವ ಜಿಲ್ಲೆಯ ವೈದ್ಯಕೀಯ ವರ್ಗ ಹೊರ ಜಿಲ್ಲೆಯ ಕಡೆ ಬೆರಳು ಮಾಡುತ್ತದೆ. ಈ ರೀತಿ ಹೊರ ತೆರಳಿದ ಬಹುತೇಕ ರೋಗಿಗಳು, ಗಾಯಾಳುಗಳು ಮರಳಿದ್ದು ವಿರಳ. ದಾರಿ ಮಧ್ಯದಲ್ಲಿ ಮರಣವನ್ನು ಅಪ್ಪಿದ್ದೇ ಹೆಚ್ಚು ಎಂದು ಕ್ಲಬ್‍ನ ಸದಸ್ಯರು ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

    ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೆಂಗಳೂರಿನಲ್ಲಿ ನೆಲೆಸಿರುವ ಯುವಕರ ತಂಡದಿಂದ ಹಿಡಿದು ಸ್ಯಾಂಡಲ್‍ವುಡ್‍ನ ವರೆಗೂ ಪಸರಿಸಿದೆ.