Tag: ಸೂಪರ್ ಸ್ಟಾರ್ ರಜನಿಕಾಂತ್

  • ಲೋಕಸಭಾ ಚುನಾವಣೆ ಕಣಕ್ಕೆ ಇಳಿಯಲ್ಲ: ರಜನಿಕಾಂತ್

    ಲೋಕಸಭಾ ಚುನಾವಣೆ ಕಣಕ್ಕೆ ಇಳಿಯಲ್ಲ: ರಜನಿಕಾಂತ್

    – ಯಾವುದೇ ಪಕ್ಷಕ್ಕೂ ನನ್ನ ಬೆಂಬಲವಿಲ್ಲ

    ನವದೆಹಲಿ: ನಾನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹು ಭಾಷಾ ಸಿನಿಮಾ ನಟ, ರಾಜಕಾರಣಿ ರಜನಿಕಾಂತ್ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ನಾನು ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ. ಯಾವುದೇ ಪಕ್ಷವು ನನ್ನ ಭಾವಚಿತ್ರ, ನಮ್ಮ ಪಕ್ಷದ ಬ್ಯಾನರ್, ಬಾವುಟ, ಚಿಹ್ನೆಯನ್ನು ಪ್ರಚಾರಕ್ಕಾಗಿ ಬಳಸುವಂತಿಲ್ಲ ಎಂದು ರಜಿನಿಕಾಂತ್ ಹೇಳಿದ್ದಾರೆ.

    ನನ್ನ ಪಕ್ಷವು ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಹೀಗಾಗಿ ರಜನಿ ಮಕ್ಕಳ್ ಮಂದ್ರಂ ಪಕ್ಷದ ಹಾಗೂ ರಜಿನಿ ಫ್ಯಾನ್ ಕ್ಲಬ್ ಹೆಸರಿನಲ್ಲಿ ಚಿಹ್ನೆ, ಬಾವುಟ ಹಿಡಿದು ಯಾವುದೇ ಪಕ್ಷದ ಪರ ಪ್ರಚಾರ ಮಾಡುವಂತಿಲ್ಲ ಎಂದು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.

    ಕೇಂದ್ರದ ಮಟ್ಟದಲ್ಲಿ ತಮಿಳುನಾಡಿನ ನೀರಿನ ಸಮಸ್ಯೆಯನ್ನು ಬಗೆರಿಸುವಂತಹ ಪಕ್ಷ ಯಾವುದೆಂದು ಯೋಚಿಸಿ ಮತ ಹಾಕಿ ಎಂದು ಮತದಾರರಿಗೆ ರಜನಿಕಾಂತ್ ಕೇಳಿಕೊಂಡಿದ್ದಾರೆ.

    ರಜನಿಕಾಂತ್ ಅವರು 2017 ಡಿಸೆಂಬರ್ 31 ರಂದು ರಾಜಕೀಯ ಪ್ರವೇಶ ಮಾಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳ ಬಳಗವನ್ನು ಒಂದುಗೂಡಿಸಿ ರಜಿನಿ ಮಕ್ಕಳ್ ಮಂದ್ರಂ ಪಕ್ಷವನ್ನು ಕಟ್ಟಿದರು. ರಜನಿಕಾಂತ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ರಜನಿಕಾಂತ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ನನ್ನ ರಾಜಕೀಯ ಪ್ರವೇಶ ಆಧ್ಯಾತ್ಮಿಕತೆ, ಪ್ರಾಮಾಣಿಕತೆ ಹಾಗೂ ಸತ್ಯತೆಯಿಂದ ಕೂಡಿರುತ್ತದೆ ಎಂದು ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಈ ಹಿಂದೆ ತಿಳಿಸಿದ್ದರು.

    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿ.ಜಯಲಲಿತಾ ಬಳಿಕ ಸ್ಟಾರ್ ನಟರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಸಿನಿಮಾ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಯಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿವೆ ಎನ್ನುವ ಸುಳಿವನ್ನು ರಜನಿಕಾಂತ್ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv