Tag: ಸೂಪರ್ ಸಿಎಂ

  • ಸಿದ್ದರಾಮಯ್ಯಗೆ ತಲೆ ಸರಿಯಿಲ್ಲ, ಡಿಕೆಶಿಗೆ ಸಾಮಾನ್ಯ ಜ್ಞಾನ ಇಲ್ಲ: ಈಶ್ವರಪ್ಪ

    ಸಿದ್ದರಾಮಯ್ಯಗೆ ತಲೆ ಸರಿಯಿಲ್ಲ, ಡಿಕೆಶಿಗೆ ಸಾಮಾನ್ಯ ಜ್ಞಾನ ಇಲ್ಲ: ಈಶ್ವರಪ್ಪ

    ಯಾದಗಿರಿ: ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಯತೀಂದ್ರ ಸೂಪರ್ ಸಿಎಂ ಆಗಿದ್ದರು. ಆ ಲೆಕ್ಕದಲ್ಲಿ ಸಿದ್ದರಾಮಯ್ಯ ಈಗ ರಾಜ್ಯದಲ್ಲಿ ಇಬ್ಬರು ಸಿಎಂ ಇಬ್ಬರು ಇದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಯತೀಂದ್ರ ಎಂದು ಹೇಳುವ ಬದಲು ವಿಜಯೇಂದ್ರ ಎಂದಿದ್ದಾರೆ ಎಂದು ಸಚಿವ ಈಶ್ವರಪ್ಪ ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

    ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಈಶ್ವರಪ್ಪ, ಇನ್ನೂ ಮುಂದೆ ಜೀವನ ಪರ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿ ಆಗಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಅವರ ಕನಸು ಮುಗಿದಿದೆ. ಹೀಗಾಗಿ ಅವರ ಮಗನ ಬಗ್ಗೆ ಸಿದ್ದು ಕನಸು ಕಾಣುವುದನ್ನು ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಗ್ರಾ.ಪಂ ಚುನಾವಣಾ ವಿಚಾರವಾಗಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹೇಳಿಕೆ ನೀಡದ ಬಗ್ಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ ಎಂದು ನಾನು ನೇರವಾಗಿ ಹೇಳುವುದಿಲ್ಲ. ಮುಖ್ಯಮಂತ್ರಿಯಾದವರಿಗೆ ಜ್ಞಾನ ಬೇಡವಾ. ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತೀರಾ? ಹೇಗೆ ಗೆಲ್ಲತ್ತೀರಾ ನಿಮಗೆ ಟಿಕೆಟ್ ಇಲ್ಲ. ತಳ ಮಟ್ಟದಿಂದ ಪಕ್ಷ ಗಟ್ಟಿ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ ಎಂದರು.

    ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಡಿಕೆಶಿ ಆರೋಪ ವಿಚಾರ ಮಾತನಾಡಿದ ಅವರು, ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡುತ್ತಿರುವುದಕ್ಕೆ ತುಂಬಾ ನೋವಿದೆ. ದೇಶದಲ್ಲಿ ಕೊರೊನಾ ಇರುವ ವಿಚಾರ ಡಿಕೆಶಿಗೆ ಗೊತ್ತಿಲ್ವಾ. ಡಿಕೆಶಿ ಎನಾದರೂ ಮಾಡಿ ಕೊರೊನಾವನ್ನು ನಮ್ಮ ದೇಶದಿಂದ ಓಡಿಸಿಬಿಡಲಿ. ನಾನೇ 50 ಲಕ್ಷ ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತೇನೆ. ಮೈ ಮೇಲೆ ಜ್ಞಾನ ಇಲ್ಲದೆ ಪ್ರತಿ ವಿಚಾರವನ್ನು ರಾಜಕೀಯಕ್ಕೆ ತರುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ಬರೋಬ್ಬರಿ ಒಂದೇ ದಿನ 800 ಅಧಿಕಾರಿಗಳಿಗೆ ಬಡ್ತಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದರೆ, ಇತ್ತ ಮೈತ್ರಿಯ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಸಚಿವ ಹೆಚ್.ಡಿ.ರೇವಣ್ಣರ ಇಲಾಖೆಯಲ್ಲಿ ಒಂದೇ ದಿನದಲ್ಲಿ 800 ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್ ಗಳನ್ನು ವರ್ಗಾವಣೆಯ ಆದೇಶಕ್ಕೆ ರೇವಣ್ಣ ಸಹಿ ಹಾಕಿದ್ದಾರೆ.

    ಸೋಮವಾರ ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ, ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದಾರೆ. ಮೈತ್ರಿ ಉಳಿಸಿಕೊಳ್ಳಲು ಎರಡೂ ಪಕ್ಷದ ಮುಖಂಡರು ಓಡಾಡುತ್ತಿದ್ದರೆ, ರೇವಣ್ಣ ಅವರು ಮಾತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.

    ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
    ಎಇ ಹುದ್ದೆಯಿಂದ ಎಇಇ ಹುದ್ದೆ-100
    ಜೆಇ ಹುದ್ದೆಯಿಂದ ಎಇಇ(2)-200
    ಎಇಇ ಹುದ್ದೆಯಿಂದ ಇಇ – 400
    ಇಇ ಹುದ್ದೆಯಿಂದ ಎಸ್‍ಇ-126

  • ಗೃಹ ಕಚೇರಿ ಕೃಷ್ಣದಲ್ಲೂ ಸೂಪರ್ ಸಿಎಂ ರೇವಣ್ಣದ್ದೇ ಹವಾ!

    ಗೃಹ ಕಚೇರಿ ಕೃಷ್ಣದಲ್ಲೂ ಸೂಪರ್ ಸಿಎಂ ರೇವಣ್ಣದ್ದೇ ಹವಾ!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಸಿಗುವ ಎಲ್ಲಾ ಸೌಲಭ್ಯ ನನಗೂ ಸಿಗಬೇಕು ಎನ್ನುವ ರೀತಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ನಡೆದುಕೊಳ್ಳುತ್ತಿದ್ದಾರೆ.

    ಹೌದು, ಸಭೆಗಳಲ್ಲಿ ಸಿಎಂ ಕುಮಾರಸ್ವಾಮಿಗಿಂತಲೂ ಹೆಚ್ಚಾಗಿ ರೇವಣ್ಣ ಅವರೇ ಮಾತನಾಡುತ್ತಾರೆ ಎನ್ನುವುದು ಹಳೇಯ ಸುದ್ದಿ. ಈಗ ಸಿಎಂ ಗೃಹ ಕಚೇರಿ ಕೃಷ್ಣದಲ್ಲೂ ರೇವಣ್ಣ ಅವರು ದರ್ಬಾರ್ ಮಾಡುತ್ತಿದ್ದಾರೆ ಎನ್ನುವುದು ಹೊಸ ಸುದ್ದಿ.

    ಸಿಎಂ ಕಾರ್ ನಿಲ್ಲಿಸುವ ಜಾಗದಲ್ಲೇ ರೇವಣ್ಣ ಅವರ ಕಾರಿಗೂ ಜಾಗ ಬೇಕು. ಸಿಎಂ ಕಾರು ಪಕ್ಕದಲ್ಲೇ ರೇವಣ್ಣ ಅವರ ಕಾರು ನಿಂತುಕೊಳ್ಳಬೇಕು. ಹೀಗೆ ತಮ್ಮ ಕಾರನ್ನು ಮನಬಂದಂತೆ ನಿಲ್ಲಿಸಿದಕ್ಕೆ ಬೇರೆ ಸಚಿವರ ಕಾರುಗಳಿಗೆ ಜಾಗ ಇಲ್ಲದಂತಾಗಿದೆ.

    ಸೂಪರ್ ಸಿಎಂ ರೇವಣ್ಣ ಪವರ್ ಹೇಗಿದೆ ಅಂದ್ರೆ ಕೃಷ್ಣದಲ್ಲಿ ಸಿಎಂ ಕಾರ್ ನಿಲ್ಲಿಸುವ ಜಾಗದಲ್ಲೇ ರೇವಣ್ಣ ಕಾರ್ ಪಾರ್ಕಿಂಗ್ ಮಾಡಿದ್ದಾರೆ. ಯಾವಾಗ ಕಚೇರಿಗೆ ಬಂದರೂ ರೇವಣ್ಣ ಕಾರನ್ನು ಯಾರು ತಡೆಯುವಂತಿಲ್ಲ. ಬೇಕಾದ ಹಾಗೇ ಬರುತ್ತಾರೆ, ಬೇಕಾದ ಹಾಗೇ ರೇವಣ್ಣ ಸಾಹೇಬ್ರು ಹೋಗ್ತಾರೆ. ನಾವು ಯಾರಿಗೆ ಹೇಳೋದು ಅಂತ ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರೇವಣ್ಣ ಶಾಕ್- ರಾತ್ರೋರಾತ್ರಿ 700 ಅಧಿಕಾರಿಗಳ ವರ್ಗ!

    ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರೇವಣ್ಣ ಶಾಕ್- ರಾತ್ರೋರಾತ್ರಿ 700 ಅಧಿಕಾರಿಗಳ ವರ್ಗ!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಎಚ್.ಡಿ.ರೇವಣ್ಣ ಶಾಕ್ ನೀಡಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಡೆಗೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಲೋಕೋಪಯೋಗಿ ಅಧಿಕಾರಿಗಳು, ನೌಕರರಿಗೆ ರೇವಣ್ಣ ಶಾಕ್ ನೀಡಿದ್ದು, ಮಧ್ಯರಾತ್ರಿ 700 ಅಧಿಕಾರಿಗಳು, ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ.

    ಎಂಜಿನಿಯರ್ ಅಧಿಕಾರಿಗಳಿಂದ ಹಿಡಿದು ಪ್ರಥಮ ದರ್ಜೆ ಸಹಾಯಕರವರೆಗಿನ ನೌಕರರನ್ನು ವರ್ಗ ಮಾಡಲಾಗಿದೆ. ನೌಕರರನ್ನು ವರ್ಗಾವಣೆಗೊಳಿಸಿ ಶನಿವಾರ ಮಧ್ಯರಾತ್ರಿ ಆದೇಶ ಹೊರಡಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದ್ದು, ಇದೀಗ ಸಚಿವರ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

    ರೇವಣ್ಣ ತಾವು ಸಚಿವರಾದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ 270 ಕ್ಕೂ ಹೆಚ್ಚು ವರ್ಗಾವಣೆಯನ್ನು ಇತ್ತೀಚೆಗೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಒಂದರಲ್ಲೇ ವರ್ಗಾವಣೆ ಸಂಬಂಧ ಸುಮಾರು 500ಕ್ಕೂ ಹೆಚ್ಚು ಶಿಫಾರಸ್ಸು ಪತ್ರಗಳು ಬಂದಿದ್ದವು. ಅದರಲ್ಲಿ ಬಿಜೆಪಿ ಶಾಸಕರ ಶಿಫಾರಸ್ಸು ಎಷ್ಟು? ಜೆಡಿಎಸ್ ಶಾಸಕರ ಶಿಫಾರಸ್ಸು ಎಷ್ಟು? ಮತ್ತು ಕಾಂಗ್ರೆಸ್ ಶಾಸಕರ ಶಿಫಾರಸ್ಸು ಎಷ್ಟು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ರೇವಣ್ಣ ಮುಂದಾಗಿದ್ದರು.

    ಸೂಪರ್ ಸಿಎಂ ಅವರ ವಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸೂಪರ್ ಸಿಎಂ ವರ್ಗಾವಣೆ ದಂಧೆ ಎಂದು ಆರೋಪ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ರೇವಣ್ಣ, ಒಂದು ವೇಳೆ ಮುಂದೆ ರಾಜಕೀಯ ಪ್ರೇರಿತ ಆರೋಪ ಮಾಡಿದರೆ ದಾಖಲೆ ಬಿಡುಗಡೆಗೆ ಮಾಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ವರ್ಗಾವಣೆ ದಂಧೆ ಅಂತ ಆರೋಪಿಸಿದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೀನಿ. ಬಿಎಸ್‍ವೈ, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿಗಳ ಶಿಫಾರಸ್ಸು ಪತ್ರವು ಅದರಲ್ಲಿದೆ. ಶಿಫಾರಸ್ಸು ಮಾಡುತ್ತಾರೆ, ಟ್ರಾನ್ಸ್ ಫರ್ ಮಾಡಿಸುತ್ತಾರೆ. ಆರೋಪ ಮಾತ್ರ ನನ್ನ ಮೇಲೆ ಮಾಡುತ್ತಾರೆ. ಅವರಿಗೆ ದಾಖಲೆ ಕೊಡುತ್ತೀನಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ರೇವಣ್ಣ ತಿರುಗೇಟು ನೀಡಿದ್ದರು.

    ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಧಿಕಾರ ಚಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ವರ್ಗಾವಣೆ ದಂಧೆಯನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಶಿಪ್ ಎತ್ತಂಗಡಿಗೆ ಉತ್ತರ ಕರ್ನಾಟಕದಲ್ಲಿ ಭಾರೀ ವಿರೋಧ- ಸೂಪರ್ ಸಿಎಂ ವಿರುದ್ಧ ಖಂಡನೆ

    ಕೆಶಿಪ್ ಎತ್ತಂಗಡಿಗೆ ಉತ್ತರ ಕರ್ನಾಟಕದಲ್ಲಿ ಭಾರೀ ವಿರೋಧ- ಸೂಪರ್ ಸಿಎಂ ವಿರುದ್ಧ ಖಂಡನೆ

    ಬೆಳಗಾವಿ: ಜಿಲ್ಲೆಯಿಂದ ಕೆಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ,ರಾಜ್ಯ ಹೆದ್ದಾರಿ ಯೋಜನೆಯನ್ನ ಬೆಳಗಾವಿಯಂದ ಸ್ಥಳಾಂತರ ಮಾಡಿರುವುದಕ್ಕೆ ಸೂಪರ್ ಸಿಎಂ ರೇವಣ್ಣ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದವರೆಗೂ 107 ಕಿ.ಮೀ ಅಂತರದ ರಸ್ತೆಯನ್ನ ವಿಶ್ವಬ್ಯಾಂಕ್ ಸಹಯೋಗದಲ್ಲಿ 317 ಕೋಟಿ ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಧೀನದ ಕೆಶಿಪ್ ವತಿಯಿಂದ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗಿತ್ತು. 2014 ಡಿಸೆಂಬರ್ ನಲ್ಲಿ ಆರಂಭವಾದ ಕಾಮಗಾರಿ 2016 ಡಿಸೆಂಬರ್ ನಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ತಡೆಗೋಡೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಸಾಕಷ್ಟು ಪ್ರಮಾಣದ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಕಾಮಗಾರಿಗಳು ಇನ್ನೂ ನಡೆಯುತ್ತಿದ್ದರೂ ಕೆಶಿಪ್ ಕಚೇರಿಯನ್ನ ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಳಗಾವಿಯಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್)ಯ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಜುಲೈ 27, 2018ರಂದು ಆದೇಶ ಹೊರಡಿಸಿತ್ತು. ಬೆಳಗಾವಿ ನಗರದಲ್ಲಿರುವ ಕೆಶಿಪ್ ವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಹಾಗೂ ಉಪ ವಿಭಾಗೀಯ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿತ್ತು. ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯನ್ನು ಹೊಳೆನರಸೀಪುರಕ್ಕೆ ಶಿಫ್ಟ್ ಮಾಡಲು ಹಾಗೂ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗ ಕಚೇರಿಯನ್ನು ಬೇಲೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಅಲ್ಲದೆ ಶಿವಮೊಗ್ಗ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿಯನ್ನು ಅರಸೀಕೆರೆಗೆ ಶಿಫ್ಟ್ ಮಾಡಲು ಸೂಚಿಸಲಾಗಿತ್ತು.

    ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಹುದ್ದೆಗಳ ಸಮೇತವಾಗಿ ಈ ಎಲ್ಲಾ ಕಚೇರಿಗಳ ಸ್ಥಳಾಂತರಕ್ಕೆ ಆದೇಶ ಹೊರ ಬಿದ್ದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

    ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

    ಬೆಂಗಳೂರು: ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣನವರು ಒಂದೇ ದಿನ ರಾತ್ರಿ ಬರೋಬ್ಬರಿ 206 ಎಂಜಿನಿಯರ್ ಗಳನ್ನು ಎತ್ತಂಗಡಿ ಮಾಡಿ ಮತ್ತೊಮ್ಮೆ ತಮ್ಮ ಸಾರ್ವಭೌಮ ಮೆರೆದಿದ್ದಾರೆ.

    ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಖ್ಯಾತಿ ಹೊಂದಿರುವ ಎಚ್.ಡಿ ರೇವಣ್ಣನವರು, ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಮಾಡಿದ್ದೇ ರೂಲ್ಸ್, ಹೇಳಿದ್ದೆ ಫೈನಲ್ ಆಗಿದೆ. ಅಧಿಕಾರ ಪಡೆದ ಎರಡೇ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‍ಗಳು ಎತ್ತಂಗಡಿಯಾಗಿದ್ದು. ಇದೀಗ ಮತ್ತೆ ರಾತ್ರೋ ರಾತ್ರಿ ಎಂಜಿನಿಯರ್ ಗಳ ಎತ್ತಂಗಡಿ ಮಾಡಿದ್ದಾರೆ.

    ರೇವಣ್ಣನವರು ಕಳೆದ ಬುಧವಾರ ಇಲಾಖೆಯಲ್ಲಿ ಬಿಗ್ ಆಪರೇಷನ್ ಮಾಡಿದ್ದು, ಒಂದೇ ದಿನ ರಾತ್ರೋ ರಾತ್ರಿ ಬರೋಬ್ಬರಿ 206 ಎಂಜಿನಿಯರುಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅವರ ಆಪ್ತ ಎಂಜಿನಿಯರ್ ಗಳು ಆಯಾ ಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಭಾಗ್ಯ ಹೊಂದಿ ನಿಯೋಜನೆಗೊಂಡಿದ್ದಾರೆ ಎಂದು ತಿಳಿಬಂದಿದೆ.

    ಲೋಕೋಪಯೋಗಿ ಇಲಾಖೆ ಸೇರಿದಂತೆ ಒಳನಾಡು ಬಂದರು ಸಾರಿಗೆ ಇಲಾಖೆಯಿಂದ ಆದೇಶ ರವಾನೆಯಾಗಿದ್ದು, ಈ ಹಿನ್ನೆಲೆಯಲ್ಲಿ 206 ಎಂಜಿನಿಯರ್ ಗಳನ್ನು ಏಕ ಕಾಲಕ್ಕೆ ವರ್ಗಾವಣೆ ಮಾಡಿದೆ. ವಿವಿಧ ಇಲಾಖೆಗಳಿಗೆ ನೇಮಕವಾಗಿದ್ದ ಎಂಜಿನಿಯರ್ ಗಳು, ಪ್ರಸ್ತುತ ಇಲಾಖೆಯಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆಗೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮುಗಿದ್ರೂ 115ಕ್ಕೂ ಹೆಚ್ಚು ಎಂಜಿನಿಯರ್ ಗಳು ಬೆಂಗ್ಳೂರಲ್ಲೆ ಠಿಕಾಣಿ!

    ಮಾಧ್ಯಮಗಳಿಗೆ ವರ್ಗಾವಣೆ ವಿಷಯ ಗೊತ್ತಾಗದಂತೆ ರೇವಣ್ಣ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಮಾಧ್ಯಮಗಳಿಂದ ಮಾಹಿತಿ ಮುಚ್ಚಿಟ್ಟಿದೆ. ಅಲ್ಲದೇ ಇನ್ನುಮುಂದೆ ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡೋ ಹಾಗಿಲ್ಲ. ಮಾಹಿತಿ ಕೊಟ್ಟರೆ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲಿಖಿತ ಆದೇಶ ಹೊರಡಿಸಿ ಸೂಪರ್ ಸಿಎಂ ಎಚ್ಚರಿಸಿರುವುದಾಗಿ ತಿಳಿದುಬಂದಿದೆ.