Tag: ಸೂಪರ್ ತುರ್ತುಪರಿಸ್ಥಿತಿ

  • ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ – ಮಮತಾ ಬ್ಯಾನರ್ಜಿ

    ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ – ಮಮತಾ ಬ್ಯಾನರ್ಜಿ

    ಕೊಲ್ಕತ್ತಾ: ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದ್ದು, ಸಂವಿಧಾನ ಕೊಡಮಾಡಿದ ಹಕ್ಕು ಹಾಗೂ ಸ್ವಾತಂತ್ರ್ಯ ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.

    ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಶುಭಕೋರಿ ಟ್ವೀಟ್ ಮಾಡಿರುವ ಅವರು, ನಮ್ಮ ದೇಶ ಸ್ಥಾಪಿಸಿರುವ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ. ಸೂಪರ್ ತುರ್ತುಪರಿಸ್ಥಿತಿಯ ಈ ಯುಗದಲ್ಲಿ ನಾವು ಹೋರಾಟ ನಡೆಸಬೇಕಿದೆ. ಈ ಮೂಲಕ ನಮ್ಮ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸಬೇಕಿದೆ ಎಂದು ಕರೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿರುವ ಅವರು, ಭಿನ್ನಾಭಿಪ್ರಾಯಗಳಿಂದ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ‘ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು’ ಎಂದು ಹೇಳಿದ್ದರು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯರು ಭಾರೀ ವಾಗ್ದಾಳಿ ನಡೆಸಿದ್ದರು.

    ಮಮತಾ ಬ್ಯಾನರ್ಜಿ ಅವರು ಹೊಸ ಸಂಚಾರಿ ನಿಯಮ ಸೇರಿದಂತೆ ಕೇಂದ್ರ ಅನೇಕ ಯೋಜನೆಗಳನ್ನು ವಿರೋಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ನಿಯಮಗಳು ಜಾರಿಗೆ ಬರುವುದಿಲ್ಲ ಎಂದು ಎಚ್ಚರಿಸಿದ್ದರು. ಅಲ್ಲದೆ, ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್‍ನ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಮೋದಿ ಆಗಮಿಸಿದಾಗಲೂ ಸಹ ಮಮತಾ ಬ್ಯಾನರ್ಜಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ಚಂದ್ರಯಾನ-2ನ ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ಇಸ್ರೋ ಕೇಂದ್ರ ಕಚೇರಿಗೆ ತೆರಳಿದ್ದಾರೆ. ಚಂದ್ರಯಾನ-2 ಇದೇ ಮೊದಲೇ, ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ನಾವು ಇಂತಹ ಪ್ರಯತ್ನ ಮಾಡಿರಲಿಲ್ಲವೇ, ಇವರೇ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.