Tag: ಸೂಪರ್ ಓವರ್

  • ಕೊನೆಯಲ್ಲಿ ಶಮಿ ಬೌಲಿಂಗ್, ರೋಹಿತ್ ಸಿಕ್ಸರ್ ಮ್ಯಾಜಿಕ್ – ಸೂಪರ್ ಓವರ್‌ನಲ್ಲಿ ಭಾರತಕ್ಕೆ ಜಯ

    ಕೊನೆಯಲ್ಲಿ ಶಮಿ ಬೌಲಿಂಗ್, ರೋಹಿತ್ ಸಿಕ್ಸರ್ ಮ್ಯಾಜಿಕ್ – ಸೂಪರ್ ಓವರ್‌ನಲ್ಲಿ ಭಾರತಕ್ಕೆ ಜಯ

    – ನ್ಯೂಜಿಲೆಂಡಿನಲ್ಲಿ ಸರಣಿ ಗೆದ್ದು  ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ
    – ಸೂಪರ್ ಓವರಿನಲ್ಲಿ ಮತ್ತೆ ಕೀವಿಸ್‍ಗೆ ಸೋಲು

    ಹ್ಯಾಮಿಲ್ಟನ್: ಸೂಪರ್ ಓವರಿನ ಕೊನೆಯ ಎರಡು ಎಸೆತದಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತ ಮೂರನೇ ಟಿ20 ಪಂದ್ಯದೊಂದಿಗೆ ಸರಣಿ ಗೆದ್ದು ನ್ಯೂಜಿಲೆಂಡಿನಲ್ಲಿ ಇತಿಹಾಸ ನಿರ್ಮಿಸಿದೆ.

    ಗೆಲ್ಲಲು 180 ರನ್ ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 179 ರನ್ ಗಳಿಸಿದ ಪರಿಣಾಮ ಪಂದ್ಯ ಟೈ ಆಯ್ತು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯ್ತು. ಇದನ್ನೂ ಓದಿ: 5 ಎಸೆತಗಳಲ್ಲಿ 26 ರನ್ ಚಚ್ಚಿದ ರೋ’ಹಿಟ್’

    ಬುಮ್ರಾ ಎಸೆದ ಸೂಪರ್ ಓವರಿನಲ್ಲಿ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ 17 ರನ್ ಹೊಡೆದರು. ಈ ಓವರಿನಲ್ಲಿ ಬುಮ್ರಾ ಅನುಕ್ರಮವಾಗಿ 1,1,6,4,1,4 ರನ್ ಬಿಟ್ಟುಕೊಟ್ಟರು. ಇದನ್ನೂ ಓದಿ: ಸೂಪರ್‌ಮ್ಯಾನ್‌ನಂತೆ ಬದಲಾದ ಹಿಟ್‍ಮ್ಯಾನ್- ರೋಹಿತ್ ಬ್ರಿಲಿಯಂಟ್ ಕ್ಯಾಚ್‍ಗೆ ಅಭಿಮಾನಿಗಳು ಫಿದಾ

    ಭಾರತದ ಪರ ಸೂಪರ್ ಓವರ್ ಆಡಲು ರೋಹಿತ್ ಶರ್ಮಾ ಮತ್ತು ರಾಹುಲ್ ಕ್ರೀಸ್‍ಗೆ ಆಗಮಿಸಿದರು.  ಟಿಮ್ ಸೌಥಿ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿದ್ದ ವೇಳೆ ರೋಹಿತ್ ಶರ್ಮಾ ರನ್ ಔಟ್ ಆಗುವ ಸಾಧ್ಯತೆಯಿತ್ತು. ಕೀಪರ್ ಕೈ ಸೇರಿ ಬಾಲ್ ಕೆಳಗಡೆ ಬಿದ್ದ ಪರಿಣಾಮ ರೋಹಿತ್ ಶರ್ಮಾ ಪಾರಾದರು. ಎರಡನೇ ಎಸೆತದಲ್ಲಿ ಒಂದು ರನ್ ಬಂದರೆ ಮೂರನೇ ಎಸೆತವನ್ನು ರಾಹುಲ್ ಬೌಂಡರಿಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ 11 ರನ್ ಬೇಕಿದ್ದಾಗ ನಾಲ್ಕನೇಯ ಎಸೆತದಲ್ಲಿ ರಾಹುಲ್ 1 ರನ್ ಓಡಿದರು. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿತ್ತು. ಸಿಕ್ಸ್ ಹೊಡೆಯುವ ಅನಿವಾರ್ಯತೆ ಇದ್ದಾಗ ರೋಹಿತ್ ಶರ್ಮಾ 5ನೇ ಎಸೆತವನ್ನು ಬೌಂಡರಿ ಲೈನ್ ಆಚೆಗೆ ಬಾಲ್ ತಳ್ಳುವ ಮೂಲಕ ಪಂದ್ಯವನ್ನು ಜೀವಂತವಾಗಿಟ್ಟರು. ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಪಂದ್ಯ ಏನಾಗುತ್ತದೋ ಏನೋ ಎನ್ನುವ ಆತಂಕದಲ್ಲಿದ್ದಾಗ ರೋಹಿತ್ ಶರ್ಮಾ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಸ್ಮರಣೀಯ ಜಯವನ್ನು ತಂದುಕೊಟ್ಟರು. 65 ರನ್ ಜೊತೆಗೆ 15 ರನ್ ಹೊಡೆದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ಫಿಟ್ನೆಸ್ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಪ್ರೇರಣೆಯಾದ ಕ್ಯಾಪ್ಟನ್ ಕೊಹ್ಲಿ

    ಟೀಂ ಇಂಡಿಯಾ ನೀಡಿದ್ದ 180 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಭಾರತದ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಗಪ್ಟಿಲ್ ವಿಕೆಟ್ ಕಿತ್ತರು. ಈ ಮೂಲಕ ಮೊದಲ ವಿಕೆಟ್‍ಗೆ 47 ರನ್‍ಗಳ ಜೊತೆಯಾಟ ಕಟ್ಟಿದ್ದ ಗಪ್ಟಿಲ್ ಹಾಗೂ ಮನ್ರೊ ಜೋಡಿಯನ್ನು ಶಾರ್ದೂಲ್ ಮುರಿದರು. ಈ ಬೆನ್ನಲ್ಲೇ 14 ರನ್ ಗಳಿಸಿದ್ದ ಮನ್ರೋ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಬಳಿಕ ಮೈದಾಕ್ಕಿಳಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಗೆಲುವಿನ ದಡದತ್ತ ತಂದರು. ಆದರೆ ಮಿಚೆಲ್ ಸ್ಯಾಂಟ್ನರ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 5 ರನ್‍ಗೆ ವಿಕೆಟ್ ಒಪ್ಪಿಸಿದರು. ಕೇನ್ ವಿಲಿಯಮ್ಸನ್ ಮಾತ್ರ ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆ ಸುರಿಸಿದರು. ವಿಲಿಯಮ್ಸನ್ 95 ರನ್(48 ಎಸೆತ, 8 ಬೌಂಡರಿ, 6 ಸಿಕ್ಸರ್) ಹೊಡೆದು ಕೊನೆಯ ಓವರಿನಲ್ಲಿ ಔಟಾಗಿದ್ದು ನ್ಯೂಜಿಲೆಂಡ್ ಸೋಲಿಗೆ ಕಾರಣವಾಯ್ತು.

    ಶಮಿ ಶೈನ್:
    ಜಸ್‍ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ರಾಸ್ ಟೇಲರ್ ಹಾಗೂ ವಿಲಿಯಮ್ಸನ್ ಜೋಡಿ 11 ರನ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರ ತಂದರು. 6 ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ರಾಸ್ ಟೇಲರ್ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬಳಿಕ ಒಂಟಿ ರನ್ ಗಳಿಸಿದರು. ಆದರೆ 3ನೇ ಎಸೆತದಲ್ಲಿ ಮೊಹಮ್ಮದ್ ಶಮಿ ಕೇನ್ ವಿಲಿಯಮ್ಸನ್ ವಿಕೆಟ್ ಕಿತ್ತಿದ್ದು ಪಂದ್ಯಕ್ಕೆ ಭರ್ಜರಿ ಟ್ವಿಸ್ಟ್ ನೀಡಿತು. 4ನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಐದನೇ ಎಸೆತದಲ್ಲಿ ಸೀಫರ್ಟ್ ಓಡಿದ ಪರಿಣಾಮ ರೋಸ್ ಟೇಲರ್ ಕ್ರೀಸಿಗೆ ಬಂದರು. ಬೈ ಮೂಲಕ ಒಂದು ರನ್ ಬಂದ ಕಾರಣ ನ್ಯೂಜಿಲೆಂಡ್ ಗೆಲ್ಲಲು ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಆದರೆ ಶಮಿ ಎಸೆದ ಬಾಲ್ ಟೇಲರ್ ಬ್ಯಾಟ್ ವಂಚಿಸಿ ನೇರವಾಗಿ ವಿಕೆಟಿಗೆ ಬಡಿದ ಪರಿಣಾಮ ಪಂದ್ಯ ಸೂಪರ್ ಓವರ್ ಕಡೆ ತಿರುಗಿತು.

    ಧೋನಿಯ ದಾಖಲೆ ಮುರಿದ ಕೊಹ್ಲಿ:
    ಪಂದ್ಯದಲ್ಲಿ 25 ರನ್ ಗಳಿಸಿದ ನಂತರ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇದ್ದ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಕೊಹ್ಲಿ ಮುರಿದರು. ಧೋನಿ 72 ಪಂದ್ಯಗಳಲ್ಲಿ 37.06 ಸರಾಸರಿಯಲ್ಲಿ 1,112 ರನ್ ಗಳಿಸಿದ್ದಾರೆ. ಕೊಹ್ಲಿ 36ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಅವರು 18 ಪಂದ್ಯಗಳಲ್ಲಿ 38.35 ಸರಾಸರಿಯಲ್ಲಿ 652 ರನ್ ಗಳಿಸಿದ್ದಾರೆ.

    ರೋಹಿತ್ ಶರ್ಮಾ 40 ಎಸೆತಗಳಲ್ಲಿ 65 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಬೆನೆಟ್ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದರು. ರೋಹಿತ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಅವರ ವೃತ್ತಿಜೀವನದ 20ನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್ ನಲ್ಲಿ ರೋಹಿತ್ ಓಪನರ್ ಆಗಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 10,000 ರನ್‍ಗಳನ್ನು ಪೂರ್ಣಗೊಳಿಸಿದರು.

    ಮೂರನೇ ಬಾರಿಗೆ 23 ಎಸೆತಗಳಲ್ಲಿ ಅರ್ಧಶತಕ:
    ರೋಹಿತ್ ಶರ್ಮಾ 23 ಎಸೆತಗಳಲ್ಲಿ ಮೂರು ಬಾರಿ ಅರ್ಧಶತಕ ಬಾರಿಸಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲಾಡರ್ಹಿಲ್ ಮೈದಾನದಲಿ ನಡೆದ ಪಂದ್ಯದಲ್ಲಿ ರೋಹಿತ್ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 23 ಎಸೆತದಲ್ಲಿ ಫಿಫ್ಟಿ ದಾಖಲಿಸಿದ್ದರು. 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

  • ವಿಶ್ವಕಪ್ ಫೈನಲ್ ಬಳಿಕ ಕಿವೀಸ್, ಇಂಗ್ಲೆಂಡ್ ನಡ್ವೆ ಮತ್ತೊಂದು ಸೂಪರ್ ಓವರ್

    ವಿಶ್ವಕಪ್ ಫೈನಲ್ ಬಳಿಕ ಕಿವೀಸ್, ಇಂಗ್ಲೆಂಡ್ ನಡ್ವೆ ಮತ್ತೊಂದು ಸೂಪರ್ ಓವರ್

    ಆಕ್ಲೆಂಡ್: 2019 ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ ಗೆ ದಾರಿ ಮಾಡಿಕೊಟ್ಟಿತ್ತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆದ ಪರಿಣಾಮ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ತಂಡ ಕಪ್ ಗೆದ್ದಿತ್ತು. ವಿಶ್ವಕಪ್ ಬಳಿಕ ಮತ್ತೊಮ್ಮೆ ಎದುರಾದ ಎರಡು ತಂಡಗಳು ಮತ್ತೊಂದು ಸೂಪರ್ ಓವರ್ ಹೋರಾಟಕ್ಕೆ ಸಾಕ್ಷಿಯಾಗಿದೆ.

    ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ 5 ಪಂದ್ಯಗಳ ಟಿ20 ಸರಣಿ ಇಂದು ಅಂತ್ಯವಾಗಿದೆ. ಸರಣಿಯಲ್ಲಿ ಮೊದಲ 4 ಪಂದ್ಯಗಳಲ್ಲಿ ಇತ್ತಂಡಗಳು ತಲಾ 2 ಗೆಲುವು ಪಡೆದು ಸಮಬಲ ಸಾಧಿಸಿದ್ದವು. ಪರಿಣಾಮ ಭಾನುವಾರ ನಡೆದ ಪಂದ್ಯ ಸರಣಿಯ ಫೈನಲ್ ಆಗಿ ಮಾರ್ಪಾಟ್ಟಿತ್ತು.

    ಪಂದ್ಯದ ಆರಂಭಕ್ಕೂ ಮೊದಲೇ ಮಳೆ ಅಡ್ಡಿ ಪಡಿಸಿದ ಪರಿಣಾಮ 11 ಓವರ್ ಗಳಿಗೆ ಪಂದ್ಯ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ತಂಡ 11 ಓವರ್ ಗಳಲ್ಲಿ 5 ವಿಕೆಟ್ ಕಳೆದು 146 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್‍ಗಳ ಸಮಬಲದ ಹೋರಾಟದ ಪರಿಣಾಮ ಪಂದ್ಯ ಟೈ ಆಯ್ತು. ಗೆಲುವಿಗಾಗಿ ಅಂತಿಮ ಓವರಿನಲ್ಲಿ ಇಂಗ್ಲೆಂಡ್‍ಗೆ 16 ರನ್ ಅಗತ್ಯವಿತ್ತು. ಅಂತಿಮ ಓವರ್ ಬೌಲ್ ಮಾಡಿದ ನೀಶಾಮ್, ಟಾಮ್ ಕರ್ರನ್ ವಿಕೆಟ್ ಪಡೆದರು. ಆದರೆ ಅಂತಿಮ 3 ಎಸೆತಗಳಲ್ಲಿ 12 ರನ್ ಗಳಿಸಿದ ಜೋರ್ಡನ್ ಪಂದ್ಯ ಟೈ ಆಗಲು ಕಾರಣರಾದರು.

    ಫಲಿತಾಂಶಕ್ಕಾಗಿ ನಡೆದ ಸೂಪರ್ ಓವರ್ ಆಟದಲ್ಲಿ ಇಂಗ್ಲೆಂಡ್ 17 ರನ್ ಗಳಿಸಿದರೆ, ಕಿವೀಸ್ 8 ರನ್ ಗಳಿಸಿ ಸೋಲುಂಡಿತು. ಪಂದ್ಯದ 7 ರನ್ ಗೆಲುವು ಪಡೆದ ಇಂಗ್ಲೆಂಡ್ ತಂಡ 3-2ರ ಅಂತರದಲ್ಲಿ ಟಿ20 ಸರಣಿಯನ್ನು ಗೆದ್ದು ಸಂಭ್ರಮಿಸಿತು.

  • ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿಯ ಸೂಪರ್ ಓವರ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕಿವೀಸ್ ಪರ ಪ್ರಮುಖ ಪಾತ್ರವಹಿಸಿದ ಆಲ್‍ರೌಂಡರ್ ಜಿಮ್ಮಿ ನೀಶಮ್ ಬಾಲ್ಯದ ಕೋಚ್ ಸೂಪರ್ ಓವರ್ ವೇಳೆಯೇ ಸಾವನ್ನಪ್ಪಿದ್ದರು. ಈ ಕುರಿತು ಅವರ ಪುತ್ರಿ ಮಾಹಿತಿ ನೀಡಿದ್ದಾರೆ.

    ಆಕ್ಲೆಂಡ್ ಗ್ರಾಮರ್ ಸ್ಕೂಲ್ ಮಾಜಿ ಶಿಕ್ಷಕರಾಗಿರುವ ಕೋಚ್ ಡೇವಿಡ್ ಜೇಮ್ಸ್ ಸಾವನ್ನಪ್ಪಿದ್ದು, ಮ್ಯಾಚ್ ಫಲಿತಾಂಶವನ್ನು ವೀಕ್ಷಿಸುತ್ತಿದ್ದ ಅವರು ನೀಶಮ್ ಬ್ಯಾಟಿಂಗ್‍ಗೆ ವೇಳೆ ಹೆಚ್ಚು ಉತ್ಸಾಹದಲ್ಲಿದ್ದರು. ಸೂಪರ್ ಓವರಿನ 2ನೇ ಎಸೆತದಲ್ಲಿ ನೀಶಮ್ ಸಿಕ್ಸರ್ ಸಿಡಿಸಿದ್ದರು. ಈ ಸಂದರ್ಭದಲ್ಲೇ ಜೇಮ್ಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೂಪರ್ ಓವರ್ ಆಡುತ್ತಿದ್ದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ ಮಾಹಿತಿ ನಮಗೆ ಲಭಿಸಿತ್ತು. ನಮ್ಮ ತಂದೆ ಹಾಸ್ಯ ಪ್ರಿಯರಾಗಿದ್ದು, ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಎಲ್ಲರೊಂದಿಗೂ ಪ್ರೀತಿಯಿಂದ ಬೇರೆಯುತ್ತಿದ್ದ ಅವರನ್ನು ಕಾಳೆದುಕೊಂಡಿದ್ದೇವೆ ಎಂದು ಕೋಚ್ ಪುತ್ರಿ ಲಿಯೋನಿ ಹೇಳಿದ್ದಾರೆ.

    ತಮ್ಮ ಬಾಲ್ಯದ ಕೋಚ್ ಮೃತಪಟ್ಟ ಕುರಿತು ನೀಶಮ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಡೇವಿಡ್ ಜೇಮ್ಸ್.. ನನ್ನ ಸ್ಕೂಲ್ ಟೀಚರ್, ಕೋಚ್, ಸ್ನೇಹಿತರು. ಕ್ರಿಕೆಟ್ ಎಂದರೆ ಅವರಿಗೆ ಇಷ್ಟ. ಅವರಿಂದ ಕೋಚಿಂಗ್ ಪಡೆದಿದ್ದು ನನ್ನ ಅದೃಷ್ಟವಾಗಿದ್ದು, ನಮ್ಮದೇ ರೀತಿಯಲ್ಲಿ ಬೆಳೆಯಲು ಅವಕಾಶ ನೀಡಿದ ಅವರಿಗೆ ಧನ್ಯವಾದ ಎಂದು ಸಂತಾಪ ಸೂಚಿಸಿದ್ದಾರೆ. ಆಕ್ಲೆಂಡ್ ಗ್ರಾಮರ್ ಸ್ಕೂಲಿನಲ್ಲಿ 25 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು ಹಲವು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಹಾಗೂ ಹಾಕಿ ಕೋಚಿಂಗ್ ನೀಡಿದ್ದರು. ನೀಶಮ್, ಫಾರ್ಗೂಸನ್ ಸೇರಿದಂತೆ ನ್ಯೂಜಿಲೆಂಡ್ ಪರ ಹಲವರು ಇವರ ಗರಡಿಯಲ್ಲೇ ಬೆಳೆದಿದ್ದಾರೆ.

  • ಸೂಪರ್ ಓವರ್ ಟೈ – ಐಸಿಸಿಗೆ ಸಲಹೆ ಕೊಟ್ಟ ಸಚಿನ್

    ಸೂಪರ್ ಓವರ್ ಟೈ – ಐಸಿಸಿಗೆ ಸಲಹೆ ಕೊಟ್ಟ ಸಚಿನ್

    ಮುಂಬೈ: ಬೌಂಡರಿ ಆಧಾರದಲ್ಲಿ ವಿಶ್ವಕಪ್ ಚಾಂಪಿಯನ್ ಆಯ್ಕೆ ನಿರ್ಧಾರಕ್ಕೆ ಹಲವು ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಐಸಿಸಿಗೆ ಸಲಹೆ ನೀಡಿದ್ದಾರೆ.

    ಒಂದು ವೇಳೆ ಸೂಪರ್ ಓವರ್ ಟೈ ಆದರೆ ಮತ್ತೊಂದು ಸೂಪರ್ ಓವರ್ ಆಡಿಸಬೇಕು. ಬೌಂಡರಿ ಆಧಾರದಲ್ಲಿ ಒಂದು ತಂಡ ಜಯಗಳಿಸಿದೆ ಎಂದು ಹೇಳುವುದು ನ್ಯಾಯಸಮ್ಮತವಲ್ಲ. ವಿಶ್ವಕಪ್ ಒಂದೇ ಅಲ್ಲ ಎಲ್ಲ ಪಂದ್ಯಗಳು ಮುಖ್ಯವೇ. ಫುಟ್ ಬಾಲಿನಲ್ಲಿ ಹೇಗೆ ಹೆಚ್ಚುವರಿ ಸಮಯವನ್ನು ನಿಡಲಾಗುತ್ತೋ ಅದೇ ರೀತಿ ನೀಡಬೇಕು ಎಂದು ಸಚಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಸಚಿನ್ ಅಲ್ಲದೇ ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಸಹ ಈ ನಿಯಮ ಬದಲಾಗಬೇಕು ಎಂದು ಹೇಳಿದ್ದಾರೆ.

    ಸೂಪರ್ ಓವರಿನ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಹೊಡೆಯಿತು. ನ್ಯೂಜಿಲೆಂಡ್ ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಎರಡು ರನ್ ಕದಿಯಲು ಮುಂದಾಗಿದ್ದ ಗುಪ್ಟಿಲ್ ರನ್ ಔಟ್ ಆದರು. ಟ್ರೆಂಟ್ ಬೌಲ್ಟ್ ಎಸೆದ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಬಟ್ಲರ್ ಒಂದೊಂದು ಬೌಂಡರಿ ಹೊಡೆದಿದ್ದರು. ಜೋಫ್ರಾ ಅರ್ಚರ್ ಎಸೆದ ಓವರ್ ನಲ್ಲಿ ನಿಶಮ್ ಒಂದು ಸಿಕ್ಸರ್ ಹೊಡೆದರೆ ಯಾವುದೇ ಬೌಂಡರಿ ಬಂದಿರಲಿಲ್ಲ. ಎರಡು ತಂಡಗಳ ರನ್ ಸಮವಾಗಿದ್ದರೂ ಒಟ್ಟು 24 ಬೌಂಡರಿ ಸಿಡಿದ ಪರಿಣಾಮ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು. ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು.

    ಫೈನಲ್ ಪಂದ್ಯದಲ್ಲಿ ಓವರ್ ಥ್ರೋಗೆ ಅಂಪೈರ್ ಗಳು 6 ರನ್ ನೀಡಿದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಚಾರದ ಬಗ್ಗೆ ಎಚ್ಚೆತ್ತುಕೊಂಡ ಐಸಿಸಿ ಅಂಪೈರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಈ ಪ್ರಕರಣದಿಂದ ಜಾರಿಕೊಂಡಿದೆ.

    ಓವರ್ ಥ್ರೋ ಕುರಿತು ಫಾಕ್ಸ್ ನ್ಯೂಸ್‍ಗೆ ಐಸಿಸಿಯ ವಕ್ತಾರರು ಪ್ರತಿಕ್ರಿಯಿಸಿ, ಮೈದಾನದಲ್ಲಿರುವ ಅಂಪೈರ್ ಗಳು ಐಸಿಸಿಯ ನಿಯಮಗಳ ಪುಸ್ತಕವನ್ನು ಆಧಾರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅಂಪೈರ್‍ ಗಳು ತೆಗೆದುಕೊಳ್ಳುವ ಈ ತೀರ್ಮಾನಗಳ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

    ಅಂಪೈರ್ ನಿರ್ಣಯದ ಬಗ್ಗೆ ಸೋಮವಾರವೇ ಪ್ರತಿಕ್ರಿಯೆ ನೀಡಿದ್ದ ಆಸ್ಟ್ರೇಲಿಯಾದ ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ಅವರು, ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‍ ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದರು.

    ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಗೊಂಡ ಬಳಿಕ ಅಂಪೈರ್ ಓವರ್ ಥ್ರೋಗೆ 6 ರನ್ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಫಾಕ್ಸ್ ಸ್ಪೋರ್ಟ್ಸ್ ಗೆ ಪ್ರತಿಕ್ರಿಯೆ ನೀಡಿದ ಟಫೆಲ್, ಇದರಲ್ಲಿ ತಪ್ಪು ಸ್ಪಷ್ಟವಾಗಿದೆ. 6 ರನ್ ನೀಡುವಂತಿಲ್ಲ. 5 ರನ್ ಮಾತ್ರ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.