Tag: ಸೂಜಿ

  • 3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

    3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

    – ತಾಯಿ ಕೆಲಸಕ್ಕಿದ್ದ ಮಾಲೀಕನಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

    ನವದೆಹಲಿ: ಕಠಿಣವಾದ ಹಾಗೂ ಸವಾಲಿನ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಮೂರು ವರ್ಷದ ಪುಟ್ಟ ಕಂದಮ್ಮನ ದೇಹದಲ್ಲಿದ್ದ 7 ಸೂಜಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವಿನ ತಾಯಿ ಕೆಲಸಕ್ಕಿದ್ದ ಮನೆಯ ಮಾಲೀಕ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ.

    ವರದಿಯ ಪ್ರಕಾರ ಪುರುಲಿಯಾ ಮೂಲದ ಬಾಲಕಿಯ ತಾಯಿ ಮಗುವನ್ನ ಬಂಕುರಾ ಸಮ್ಮಿಲಾನಿ ಮೆಡಿಕಲ್ ಕಾಲೇಜಿಗೆ ಕರೆತಂದಿದ್ದರು. ಆದ್ರೆ ಮಗುವಿನ ದೇಹದ ಮೇಲೆ ಗಾಯಗಳಿದ್ದರಿಂದ ಎಸ್‍ಎಸ್‍ಕೆಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಶನಿವಾರದಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.

    ಮಂಗಳವಾರದಂದು ವೈದ್ಯರು ಸುಮಾರು 2 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 4 ಇಂಚು ಉದ್ದದ 7 ಸೂಜಿಗಳನ್ನ ಹೊರತೆಗೆದಿದ್ದಾರೆ. ಶಿಶುವೈದ್ಯ, ಶಸ್ತ್ರಚಿಕಿತ್ಸಕ, ಸ್ತ್ರೀರೋಗ ತಜ್ಞರು, ಮೂಳೆ ಹಾಗು ಅರವಳಿಕೆ ತಜ್ಞರ ತಂಡ ಸೇರಿ ಮಗುವಿನ ಸಶ್ತ್ರಚಿಕಿತ್ಸೆ ನಡೆಸಿದ್ರು. ಬಾಲಕಿಯ ಲಿವರ್‍ನಲ್ಲಿ 3 ಸೂಜಿಗಳಿದ್ದವು ಅವುಗಳನ್ನ ಹೊರತೆಗೆಯುವುದು ಕಠಿಣವಾಗಿತ್ತು ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೊಬ್ಬರು ಹೇಳಿದ್ದಾರೆ. ಮಗುವಿನ ಗುಂಪ್ತಾಂಗದಲ್ಲೂ ಸೂಜಿ ಇತ್ತು ಎಂದು ವರದಿಯಾಗಿದೆ.

    ಮಗುವಿನ ತಾಯಿ 62 ವರ್ಷದ ಸನಾತನ್ ಎಂಬವನ ಮನೆಯಲ್ಲಿ ಮನೆಕೆಲಸಕ್ಕಿದ್ದರು. 15-20 ದಿನಗಳ ಹಿಂದೆ ಮಗುವಿನ ದೇಹಕ್ಕೆ ಸೂಜಿ ಚುಚ್ಚಲಾಗಿದ್ದು, ಇದ್ರಂದ ಮಗು ಅಸ್ವಸ್ಥಗೊಂಡಿತ್ತು. ಮಾತ್ರವಲ್ಲದೇ ಆಕೆ ಊಟ ಮಾಡುವುದನ್ನ ಬಿಟ್ಟಿದ್ದಳು. ಮಗುವಿನ ಈ ಸ್ಥಿತಿಯನ್ನು ನೋಡಿ ನೆರೆಹೊರೆಯವರು ಮಾಲೀಕ ಸನಾತನ್ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

    ಲೈಂಗಿಕ ದೌರ್ಜನ್ಯದಿಂದಾಗಿ ಮಗು ಆಘಾತಗೊಂಡಿದ್ದರಿಂದ ಆಕೆ ಸಹಜ ಸ್ಥಿತಿ ಬರುವವರೆಗೆ ಕಾದು ಶಸ್ತ್ರಚಿಕಿತ್ಸೆಯನ್ನು ತಡವಾಗಿ ಮಾಡಬೇಕಾಯಿತು ಎಂದು ವೈದ್ಯರ ತಂಡ ಹೇಳಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಮಗುವಿನ ಆರೋಗ್ಯ ಸುಧಾರಿಸಿದೆ. ಆದ್ರೆ ಚಿಕಿತ್ಸೆ ಮುಂದುವರೆದಿದೆ ಅಂತ ಆಸ್ಪತ್ರೆ ನಿರ್ದೇಶಕ ಅಜಯ್ ರಾಯ್ ತಿಳಿಸಿದ್ದಾರೆ. ಮಗುವನ್ನ 48 ಗಂಟೆಗಳ ಕಾಲ ಶಿಶು ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ.

    ಸನಾತನ್ ಮಗುವಿಗೆ ಕಳೆದ 1 ವರ್ಷದಿಂದ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸನಾತನ್ ವಿರುದ್ಧ ಪುರುಲಿಯಾದ ಮಕ್ಕಳ ಸಹಾಯವಾಣಿಯವರು ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಸನಾತನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

  • ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಜೈಪುರ: ಈ ವ್ಯಕ್ತಿಯನ್ನು ನೋಡಿ ವ್ಯದ್ಯರೇ ಶಾಕ್ ಆಗಿದ್ದಾರೆ. ಈದುವರೆಗೂ ಇಂಥ ವ್ಯಕ್ತಿಯನ್ನು ಯಾರೂ ನೋಡಿಯೇ ಇಲ್ಲ. ಇಂತಹದೊಂದು ಅಚ್ಚರಿಪಡುವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಹೌದು, ಕೋಟಾದಲ್ಲಿ 56 ವರ್ಷದ ಬದ್ರಿಲಾಲ್ ಎಂಬವರ ದೇಹದಲ್ಲಿ ಬರೋಬ್ಬರಿ 150 ಗುಂಡು ಸೂಜಿಗಳು ಸಿಕ್ಕಿವೆ. ಆದರೆ ಈ ಸೂಜಿಗಳು ನನ್ನ ದೇಹದೊಳಗೆ ಹೇಗೆ ಹೋಗಿದೆ ಅನ್ನುವುದೆ ಗೊತ್ತಿಲ್ಲ ಅಂತ ಬದ್ರಿಲಾಲ್ ಹೇಳಿದ್ದಾರೆ.

    ದೇಹದ ಕೆಲವು ಕಡೆ ಅಂದರೆ ಗಂಟಲು, ಪಾದ, ಕುತ್ತಿಗೆ ಹೀಗೆ ಹಲವಾರು ಭಾಗಗಳಿಗೆ ಸೂಜಿ ಸಿಕ್ಕಿಕೊಂಡಿರುವುದು ಕಂಡು ಬಂದಿದೆ. ದೇಹದಲ್ಲಿ ಸಿಕ್ಕಿಕೊಂಡಿರುವ ಎಲ್ಲ ಸೂಜಿಗಳಲ್ಲಿ ಒಂದು ಮಾತ್ರ ತುಕ್ಕು ಹಿಡಿದಿದೆ. ಈ ಸೂಜಿಗಳು 6 ತಿಂಗಳ ಹಿಂದೆಯೇ ದೇಹಕ್ಕೆ ಹೋಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದೂವರೆಗೂ ಆಸ್ಪತ್ರೆಗಳಿಗೆ ಬದ್ರಿಲಾಲ್ ಅವರು ಆರು ಬಾರಿ ಹೋಗಿ ಬಂದಿದ್ದಾರೆ. ಆದರೆ ಇಷ್ಟೆಲ್ಲಾ ಸೂಜಿಗಳು ದೇಹದಲ್ಲಿದ್ದರೂ ಇವರು ಬದುಕಿದ್ದೆ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಈಗ 91 ಸೂಜಿಗಳನ್ನು ಹೊರ ತಗೆಯಲಾಗಿದೆ. ದೇಹದ ಸೂಕ್ಷ್ಮವಾದ ಜಾಗಗಳಲ್ಲಿ ಸೂಜಿಗಳು ಚುಚ್ಚಿಕೊಂಡಿದ್ದರಿಂದ ಹೊರ ತಗೆಯಲು ವೈದ್ಯರು ಹರ ಸಾಹಸಪಡುತ್ತಿದ್ದಾರೆ.

  • 5.2 ಸೆ.ಮಿ ಉದ್ದದ ಪಿನ್ ನುಂಗಿದ್ದ 28 ವರ್ಷದ ಮಹಿಳೆ- ವೈದ್ಯರಿಂದ ರಕ್ಷಣೆ!

    5.2 ಸೆ.ಮಿ ಉದ್ದದ ಪಿನ್ ನುಂಗಿದ್ದ 28 ವರ್ಷದ ಮಹಿಳೆ- ವೈದ್ಯರಿಂದ ರಕ್ಷಣೆ!

    ಮುಂಬೈ: 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ 5.2 ಸೆಂಟಿಮೀಟರ್ ಉದ್ದದ ಪಿನ್ ನುಂಗಿದ್ದು, ಇದೀಗ ವೈದ್ಯರು ಅದನ್ನು ಹೊರತೆಗೆಯುವ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.

    ದುಪಟ್ಟ(ವೇಲ್) ಕಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಿನ್ ಅಥವಾ ಗುಂಡು ಸೂಜಿಯನ್ನು ಮಹಿಳೆ ಬಾಯಿಯಲ್ಲಿ ಇಟ್ಟುಕೊಂಡಿದ್ದರು. ಇದು ಬಾಯೊಳಗೆ ಹೋಗಿ ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿದೆ.

    ಪಿನ್ ನುಂಗಿದ ತಕ್ಷಣ ಆಕೆಗೆ ಯಾವುದೇ ನೋವಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದ್ರೆ 6 ಗಂಟೆಯ ಬಳಿಕ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯಲಾಗಿದೆ.

    ವೈದ್ಯರಾದ ಡಾ. ಚೋಕ್ಸಿ ಮಹಿಳೆ ನುಂಗಿದ್ದ ಪಿನ್ ಹೊರತೆಗೆಯಲು ಅಪ್ಪರ್ ಗ್ಯಾಸ್ಟ್ರೋ ಇಂಟಸ್ಟೈನಲ್ ಎಂಡೋಸ್ಕೋಪಿ(ಮೇಲಿನ ಜೀಣಾಂಗವ್ಯೂಹದ ಎಂಡೋಸ್ಕೋಪಿ) ಮಾಡಿದ್ದರು. ಒಂದು ವೇಳೆ ಪಿನ್ ನೈಸರ್ಗಿಕವಾಗಿ ಹೊರಬರಲಿ ಎಂದು ಕಾದಿದ್ದರೆ ಕರುಳಿನಲ್ಲಿ ರಂಧ್ರ ಉಂಟಾಗಿ ತೊಂದರೆಯಾಗುವ ಸಂಭವವಿತ್ತು.

    ಎಂಡೋಸ್ಕೋಪಿ ಮಾಡಿದಾಗ ಮಹಿಳೆ ನುಂಗಿದ್ದ ಪಿನ್ ಮತ್ತಷ್ಟು ಆಳಕ್ಕೆ ಹೋಗಿರುವುದು ತಿಳಿಯಿತು. ಹೀಗಾಗಿ ಸಿಂಗಲ್ ಬಲೂನ್ ಎಂಟೆರೋಸ್ಕೋಪ್ ಎಂಬ ಆಧುನಿಕ ಹಾಗೂ ವಿಶೇಷ ಸಾಧನದ ಮೂಲಕ ವೈದ್ಯರು ಪಿನ್ ಹೊರತೆಗೆದಿದ್ದಾರೆ.

    ಇದೀಗ ಮಹಿಳೆ ಆರೋಗ್ಯವಾಗಿದ್ದು, ಆಹಾರ ಸೇವಿಸುತ್ತಿದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ.