Tag: ಸುಹಾನ ಸೈಯದ್

  • ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್

    ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್

    ರಿಗಮಪ ರಿಯಾಲಿಟಿ ಶೋ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಕನ್ನಡದ ಖ್ಯಾತ ಗಾಯಕಿ ಸುಹಾನಾ ಸಯ್ಯದ್ (Suhaana Syed) ಇದೀಗ ಪ್ರೀತಿಸುತ್ತಿರುವ ಹುಡುಗನ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

    ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿದ್ದಕ್ಕೆ ವಿವಾದಕ್ಕೀಡಾಗಿದ್ದ ಗಾಯಕಿ. ಶಿವಮೊಗ್ಗದ ಸಾಗರದ ಚೆಲುವೆ, ಸಿನಿಮಾಗಳಲ್ಲೂ ಹಿನ್ನೆಲೆ ಗಾಯಕನ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ನಿರ್ಭೀತಿಯಿಂದ ತಾವು ಪ್ರೀತಿಸುತ್ತಿರುವ ಹುಡುಗನನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಿತಿನ್ ಶಿವಾಂಶ್ ಜೊತೆ ಪ್ರೀತಿಯ ಗುಟ್ಟನ್ನ ರಟ್ಟು ಮಾಡಿರುವ ಸುಹಾನಾ ಸಯ್ಯದ್, ತಾವು ಈ ಪ್ರೀತಿಯಲ್ಲಿ ಎದುರಿಸಿದ ಸವಾಲಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Suhaana Syed (@suhaana_syed)

    ರಂಗಭೂಮಿ ಕಲಾವಿದ ಆಗಿರುವ ನಿತಿನ್ ಶಿವಾಂಶ್ ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ಶಾಲಾ ದಿನಗಳಲ್ಲೇ ನಿತಿನ್ ಶಿವಾಂಶ್ ಪರಿಚಯ ಇರೋದಾಗಿ ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಪ್ರೀತಿಯಾಗಿ ಚಿಗುರಿದೆ. ಇದೀಗ ಪ್ರೇಮಿಗಳು ಸಮಾಜದ ಮುಂದೆ ಬಲವಾಗಿ ಎದ್ದು ನಿಂತು ತಮ್ಮ ಪ್ರೀತಿಯ ವಿಚಾರ ಘೋಷಿಸಿದ್ದಾರೆ. ಪ್ರೀತಿಯ ಗುಟ್ಟನ್ನ ನಿಮ್ಮ ಮುಂದೆ ತೆರೆದಿಡುತ್ತೇವೆ ಎಂದು ಘೋಷಿಸಿದ ಸುಹಾನಾ ಸಯ್ಯದ್ ಜೋಡಿ ಫೋಟೋ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಗೆ ಗಾಯಕಿ ಸುಹಾನಾ ಸಯ್ಯದ್ ಪ್ರತಿಕ್ರಿಯೆ
    ಪ್ರಶ್ನೆ: ಯಾವಾಗ ಮದುವೆ?
    ಉತ್ತರ: ಮದುವೆ ದಿನಾಂಕ ಫಿಕ್ಸ್ ಆಗಿಲ್ಲ, ತಿಳಿಸುತ್ತೇವೆ.

    ಪ್ರಶ್ನೆ: ಸಮುದಾಯದ ವಿರೋಧ ಬಂದಿಲ್ಲವೇ?
    ಉತ್ತರ: ಈಗಾಗಲೇ ಸಾಕಷ್ಟು ಸವಾಲನ್ನು ಎದುರಿಸಿದ್ದೇನೆ. ವಿರೋಧ ನನಗೆ ಹೊಸದಲ್ಲ. ನಾನು ಹಿಂದೆಯೇ ಹೇಳಿದಂತೆ ನನಗೆ ಎರಡೂ ಧರ್ಮದಲ್ಲಿ ನಂಬಿಕೆ ಇದೆ. ಎರಡೂ ಧರ್ಮವನ್ನು ಪೂಜಿಸುತ್ತೇನೆ.

    ಪ್ರಶ್ನೆ: ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆ ನೀಡಿತೇ?
    ಉತ್ತರ: ಅವರ ಕುಟುಂಬದಲ್ಲಿ ಒಪ್ಪಿದ್ದರು. ನಮ್ಮ ಕುಟುಂಬದಲ್ಲಿ ಒಪ್ಪಿಸುವುದು ಸ್ವಲ್ಪ ಕಷ್ಟವಾದರೂ ಕೊನೆಗೆ ಒಪ್ಪಿದ್ದಾರೆ. ವಿರೋಧಗಳು ಸಾಮಾನ್ಯ ಅಲ್ವ. ನಾನು ಇಷ್ಟಪಟ್ಟ ಹುಡುಗನ ಜೊತೆ ಜೀವನದಲ್ಲಿ ಸಂತೋಷವಾಗಿರುತ್ತೇನೆ ಎಂದು ತಿಳಿಸಿದಾಗ ಮನೆಯವರು ಒಪ್ಪಿಕೊಂಡರು.

    ಪ್ರಶ್ನೆ: ಭಜನೆ ಹಾಡಿದ್ದಕ್ಕೆ ವಿರೋಧ ಬಂದಿತ್ತು. ಅಂತರಧರ್ಮ ವಿವಾಹ ಎಂದಾಗ ನಿಮ್ಮ ಧರ್ಮ ವಿರೋಧ ಮಾಡಲ್ವ?
    ಉತ್ತರ: ನನ್ನ ಬದುಕಿನ ವಿಷಯ ಬಂದಾಗ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸ್ವತಂತ್ರಳು ಅಲ್ವ. ನಿಜವಾಗಿ ಹೇಳಬೇಕೆಂದರೆ ಇದುವರೆಗೂ ವಿರೋಧ ಬಂದಿಲ್ಲ.

  • ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಎಷ್ಟೋ ಸ್ಪರ್ಧಿಗಳು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈಗ ಸುಹಾನ ಸೈಯದ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚಲು ತಯಾರಿದ್ದಾರೆ.

    ಸುಹಾನ ಸೈಯದ್ ಗೆ ‘ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

    ಸ್ಟೇಟ್‍ಮೆಂಟ್ 8\11 ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಪ್ಪಿ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಈ ಹಾಡು ಒಂದು ಪ್ರಮುಖ ಅಂಶವಾಗಿದ್ದು, ಕಾರ್ಯಕ್ರಮದಲ್ಲಿ ಸುಹಾನ ಅವರ ಹಾಡು ಇಷ್ಟಪಟ್ಟು ಚಿತ್ರತಂಡ ಅವರಿಗೆ ಹಾಡಲು ಅವಕಾಶ ನೀಡಿದ್ದಾರೆ.

    ಈ ಹಿಂದೆ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದ ಮೆಹಬೂಬ್ ಸಾಬ್, ಸಂಚಿತ್ ಹೆಗ್ಡೆ, ಅಂಕಿತಾ ಕುಂಡು ಹೀಗೆ ಹಲವಾರು ಸ್ಪರ್ಧಿಗಳು ದೊಡ್ಡ ದೊಡ್ಡ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಈಗ ಸುಹಾನ ಸೈಯದ್ ಕೂಡ ಇವರ ಗುಂಪಿಗೆ ಸೇರಿಕೊಂಡಿದ್ದಾರೆ.

  • ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್

    ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್

    ಮಂಡ್ಯ; ಸುಹಾನ ಅಂದ್ರೆ ನಮ್ಮ ಹೆಮ್ಮೆ. ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ. ಸುಹಾನ ಅವರು ಜೀವನದಲ್ಲಿ ಚೆನ್ನಾಗಿ ಇರುತ್ತಾರೆ. ಸಂಗೀತ ಕಾರ್ಯಕ್ರಮದಲ್ಲಿ ಅವರು ಮುಂದುವರೆಯುತ್ತಾರೆ ಸುದೀಪ್ ಹೇಳಿದ್ದಾರೆ.

    ಹೆಬ್ಬುಲಿ ಚಿತ್ರದ ಯಶಸ್ಸನ್ನ ಆಚರಿಸಲು ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಸುದೀಪ್ ಆಗಮಿಸಿದ್ದರು. ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆ ಇದೆ. ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ತಿಳಿಸಿದರು.

    ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡಬ್ಬಿಂಗ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ನಮಗೆ ತಂದೆ-ತಾಯಿ ಅಂದ್ರೆ ತುಂಬಾ ಪ್ರೀತಿ. ಪ್ರಪಂಚದ ಯಾವುದೇ ಭಾಗದಲ್ಲಿ ಇದ್ರು ಅವರಿಗೆ ಕರೆ ಮಾಡಿ ಮಾತನಾಡುತ್ತೇವೆ. ದಿಢೀರ್ ಅಂತಾ ಹೋರಾಟ ಹಮ್ಮಿಕೊಂಡಿದ್ರಿಂದ ಭಾಗಿಯಾಗಲು ಆಗಲಿಲ್ಲ. ಆದರೆ ನಾವು ಚಿತ್ರರಂಗ ಬಿಟ್ಟುಕೊಡ್ತೀವಾ? ನಾವು ಎಲ್ಲೆ ಇದ್ರು ಹೋರಾಟ ಮಾಡ್ತಿವಿ ಎಂದು ಹೇಳಿದರು.

    ಇನ್ನು ದರ್ಶನ್ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ ಸುದೀಪ್ ಕೈ ಮುಗಿದು ಮುಂದೆ ಸಾಗಿದರು. ತಮ್ಮ ನೆಚ್ಚಿನ ನಾಯಕ ನಟ ಸುದೀಪ್ ಅವರನ್ನು ನೋಡಲು ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.

     

  • ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

    ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದ್ದಕ್ಕೆ ನಾವು ಸಂತೋಷಪಡಬೇಕು: ಭಗವಾನ್

    ಬೆಂಗಳೂರು: ಇಷ್ಟವಿದ್ದವರು ಸುಹಾನಾ ಹಾಡು ಕೇಳಿ ಸಂತೋಷ ಪಡಲಿ. ಇಲ್ಲವೆಂದಲ್ಲಿ ಅದನ್ನು ವಿರೋಧಿಸದೆ ಮೌನವಾಗಿರುವುದು ಒಳ್ಳೆಯದು ಅಂತಾ ಹಿರಿಯ ಸಾಹಿತಿ ಕೆ ಎಸ್ ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಆ ಹೆಣ್ಣು ಮಗಳು ಹಿಂದೂ ದೇವರ ನಾಮವನ್ನು ಪ್ರಸ್ತುತ ಪಡಿಸಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತಿರುವ ಟೀಕೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕಾಗಿದೆ. ಯಾರು ಯಾವುದೇ ದೇವರ ಬಗ್ಗೆ ಬೇಕಾದ್ರು ಮಾತನಾಡಲಿ. ಅದು ಅವರಲ್ಲಿರೋ ನಂಬಿಕೆ ಮತ್ತು ಪ್ರೀತಿ ಅನುಗುಣವಾಗಿರುತ್ತದೆ. ಹೀಗಾಗಿ ಹೆಣ್ಣು ಮಗಳು ಹಾಡಿರೋ ಹಾಡನ್ನು ಇಷ್ಟವಿದ್ದವರು ಕೇಳಿ ಸಂತೋಷ ಪಡಲಿ. ಇಲ್ಲವೆಂದವರು ವಿರೋಧಿಸದೇ ಇರುವುದು ಒಳಿತು. ನಮಗೆ ಪ್ರಜಾಪ್ರಭುತ್ವ ಹಕ್ಕಿದೆ ಅಂತಾ ಎಲ್ಲವನ್ನೂ ವಿರೋಧಿಸುವುದು ಸರಿಯಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ.

    ಈ ವಿರೋಧಗಳು ಯಾವುದೇ ಒಂದು ಜನಾಂಗದ ಮಧ್ಯೆ ಬರಲು ಅವಕಾಶ ಮಾಡಿಕೊಡದೆ ಸಾಮರಸ್ಯಕ್ಕೆ ಅನುಕೂಲ ಮಾಡಿದರೆ ಒಳ್ಳೆಯದು. ಆ ಹೆಣ್ಣು ಮಗಳು ಹಿಂದೂ ಹಾಡನ್ನು ಹಾಡಿದರೆ ಅದಕ್ಕೆ ನಾವು ಸಂತೋಷಪಡಬೇಕು. ನಾವು ಬೇಕಾದಷ್ಟು ಉರ್ದು ಹಾಡುಗಳನ್ನು ರೇಡಿಯೋದಲ್ಲಿ, ಟಿವಿಗಳಲ್ಲಿ ಕೇಳ್ತೀವಿ. ಮಾತ್ರವಲ್ಲದೇ ಬೇರೆ ಬೇರೆ ಕಡೆ ಕಾರ್ಯಕ್ರಮಗಳಲ್ಲಿ ಹಾಕೋ ಉರ್ದು ಪದ್ಯಗಳನ್ನು ಕೂಡ ನಾವು ಕೇಳ್ತೇವೆ. ಹಾಗಾಂತ ಅವುಗಳನ್ನ ನಾವು ವಿರೋಧಿಸಲು ಹೋಗಲ್ಲ. ಹೀಗಾಗಿ ಇದು ವಿರೋಧಕ್ಕಾಗಿಯೇ ವಿರೋಧ ಹೊರತು ತಿಳುವಳಿಕೆಗಾಗಿ ವಿರೋಧವಲ್ಲ ಅಂತಾ ಹೇಳಿದ್ರು.

    ಫೇಸ್ಬುಕ್ ಪೇಜಿನಲ್ಲಿ ಧಮ್ಕಿ ಹಾಕಿರೋ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಧಮ್ಕಿ ಹಾಕೋದು, ತಪ್ಪು ತಿಳುವಳಿಕೆ ಇಲ್ಲದೇ ಮಾಡೋ ಕೆಲಸ. ಹೇಳಿ ಸುಮ್ಮನಾಗೋದೆ ಒಳ್ಳೆಯದು ಇಲ್ಲವೆಂದಲ್ಲಿ ಪ್ರತಿಭಟನೆಯ ಅವಶ್ಯಕತೆ ಬಂದ್ರೆ ಮಾಡ್ತೇವೆ. ಎಲ್ಲದಕ್ಕೂ ಪ್ರತಿಭಟನೆ ಮಾಡಿದ್ರೆ ಅದಕ್ಕೆ ಬೆಲೆ ಇಲ್ಲ. ಸಮಾಜದ ಸಾಮರಸ್ಯವನ್ನು ಕೆದಕುವಂತಹ ಸಂದರ್ಭಗಳು ಬಂದ್ರೆ ಪ್ರತಿಭಟನೆ ಮಾಡ್ತೇವೆ ಅಂತಾ ತಿಳಿಸಿದ್ರು.

    ಈ ವಿಚಾರವಾಗಿ ಸ್ನೇಹಿತರಾದ ಸಂಸದ ಪ್ರತಾಪ್ ಸಿಂಹ ಅವರು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಅವರಿಗೆ ಧನ್ಯವಾದಗಳು ಅಂತಾ ನಗುತ್ತಲೇ ಹೇಳಿದ್ರು.

    ಸರಿಗಮಪ ರಿಯಾಲಿಟಿ ಶೋನ ಆಡಿಶನ್ನಲ್ಲಿ ಶಿವಮೊಗ್ಗದ ಸಾಗರ ಮೂಲದ ಯುವತಿ ಸುಹಾನಾ ಸೈಯದ್ ಅವರು `ಶ್ರೀಕಾರನೇ’ ಅನ್ನೋ ಹಿಂದೂ ಹಾಡಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಮಂಗಳೂರು ಮುಸ್ಲಿಂ ಅನ್ನೋ ಫೇಸ್ಭುಕ್ ಪೇಜಿನಲ್ಲಿ ಯುವತಿಗೆ ಬೆದರಿಕೆಯೂ ಹಾಕಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು, ಮೋದಿ ಸರ್ಕಾರದ ಸಹಿಷ್ಣುತೆಯ ಬಗ್ಗೆ ಮಾತನಾಡೋ ಲದ್ದಿಜೀವಿ ಮಂದಿ ಎಲ್ಲಿದ್ದಾರೆ ಅಂತಾ ಪ್ರಶ್ನಿಸಿದ್ದರು.

    ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

    ಇದನ್ನೂ ಓದಿ:  ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ

  • ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

    ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸರಿಗಮಪದಲ್ಲಿ ಹಾಡಿದ ಮುಸ್ಲಿಂ ಯುವತಿ ಸುಹಾನ ಸೈಯದ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

    ಝೀ ಕನ್ನಡ ವಾಹಿನಿಯಲ್ಲಿ ಸುಹಾನ ಸೈಯದ್ ಹಾಡಿರೋದನ್ನ ನೋಡಿದ್ದೇನೆ. ಶ್ರೀಕಾರನೇ ಅನ್ನೋ ಹಾಡು ಭಕ್ತಿಯಿಂದ ಹಾಡುವಾಗ ಎಂಥವರ ಮನಸ್ಸನ್ನು ಥಟ್ಟತ್ತೆ. ಆ ರೀತಿಯಲ್ಲಿ ಆಕೆ ಬಹಳ ಅದ್ಭುತವಾಗಿ ಹಾಡಿದ್ದಾಳೆ. ಹಾಗೆಯೇ ಆಕೆಯ ಹಾಡಿನಿಂದ ಜಡ್ಜಸ್ ಕೂಡ ಭಾವುಕರಾಗಿದ್ದರು. ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದರು. ಇದನ್ನ ನಾನು ಕೂಡ ನನ್ನ ಫೇಸ್ಬುಕ್ ವಾಲ್‍ನಲ್ಲಿ ಶೇರ್ ಮಾಡಿದ್ದೆ ಅಂತಾ ಸಂಸದ ಪ್ರತಾಪ್ ಸಿಂಹ ಹೇಳಿದ್ರು.

    ವಿಚಾರವ್ಯಾದಿಗಳು ಎಲ್ಲಿದ್ದಾರೆ?: ಆಕೆ ಶಾಸ್ತ್ರಬದ್ಧವಾಗಿ ಹಾಡಿದ್ದನ್ನು ನೋಡಿ ಇಡೀ ಕರ್ನಾಟಕವೇ ಆಕೆಯನ್ನು ಕೊಂಡಾಡಿದೆ. ಮಾತ್ರವಲ್ಲದೇ ಎಲ್ಲರ ವಾಟ್ಸಾಪ್, ಫೆಸ್ಬುಕ್‍ನಲ್ಲಿ ಆಕೆಯ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಆದ್ರೆ ಅಚ್ಚರಿಯ ವಿಷಯ ಅಂದ್ರೆ ಅನ್ಯಧರ್ಮದ ಒಂದು ದೇವರನ್ನು ಸ್ತುತಿಸುವಂತಹ ಗೀತೆಯನ್ನು ಹಾಡಿದ್ರೆನೇ ಸಹಿಸಿಕೊಳ್ಳದ ಇಂತಹ ವ್ಯಕ್ತಿಗಳಿಂದ ನಾವು ಸಹಿಷ್ಣುತೆ, ಸಹಬಾಳ್ವೆಯನ್ನು ನಿರೀಕ್ಷಿಸಲು ಸಾಧ್ಯವಿದೆಯೇ? ಅದೆಲ್ಲಕ್ಕಿಂತ ಮಿಗಿಲಾಗಿ ಮಾತೆತ್ತಿದ್ರೆ ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ. ಹಿಂದೂಗಳಿಗೇ ಪಾಠ ಹೇಳಿಕೊಡಲು ಬರ್ತಾರೆ. ಇಂತಹವರನ್ನು ನಾವು ವಿಚಾರವ್ಯಾದಿಗಳು, ಲದ್ದಿಜೀವಿಗಳು ಅಂತಾ ಕರೆತೀವಿ. ಈ ವಿಚಾರವ್ಯಾದಿಗಳು, ಲದ್ದಿಜೀವಿಗಳು ಇಂದು ಮೌನಕ್ಕೆ ಶರಣಾಗುವ ಮೂಲಕ ಲದ್ದಜೀವಿಗಳು ಅನ್ನೋದನ್ನ ಪ್ರೂವ್ ಮಾಡಿದ್ದಾರೆ ಅಂತಾ ಕಿಡಿಕಾರಿದ್ರು.

    ಇಂತಹವರಿಂದ ಸಹಿಷ್ಣುತೆಯ ಪಾಠ ಬೇಕೆ?: ನಿನ್ನೆ ರಾಷ್ಟ್ರೀಯ ಚಾನೆಲ್‍ಗಳಲ್ಲೂ ಕೂಡ ಆಕೆಯ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ ವರದಿಯಾಗಿತ್ತು. ಟ್ವಿಟ್ಟರ್‍ನಲ್ಲಿರೋ ಕೆಲವು ಸೆಲೆಬ್ರಿಟಿಗಳು ಕೂಡ ಇದನ್ನ ಖಂಡಿಸಿದ್ರು. ಆದ್ರೆ ನಮ್ಮಲ್ಲಿ ಮಾತೆತ್ತಿದ್ರೆ ಆಗಾಗ ಬಾಯಿ ಬಿಡೋ ಭಗವಾನ್, ಜಿ.ಕೆ ಗೋವಿಂದ ರಾವ್, ಗಿರೀಶ್ ಕಾರ್ನಾಡ್ ಇನ್ನು ಕೆಲವರೆಲ್ಲಾ ನಮ್ಮ ಕರ್ನಾಟಕದ ಒಬ್ಬ ಹೆಣ್ಣು ಮಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಮಾತ್ರವಲ್ಲದೇ ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಅಪಾಯ ಎದುರಾಗುತ್ತಿರೋ ಈ ಹೊತ್ತಿನಲ್ಲಿ ಮೌನವಹಿಸಿರೋದನ್ನು ನೋಡಿದ್ರೆ ಇವರನ್ನು ವಿಚಾರವ್ಯಾದಿಗಳು ಅಂದ್ರೆ ತಪ್ಪಾಗಲಾರದು. ಸಹಿಷ್ಣುತೆಯ ಪಾಠ, ಪ್ರಜಾ ತಾಂತ್ರಿಕತೆ, ಸರ್ವಧರ್ಮ ಸಹಿಷ್ಣುತೆ, ಎಲ್ಲರೂ ಕೂಡಿ ಬಾಳಬೇಕು ಅನ್ನೋ ಇವರ ಪಾಠಗಳು ಇವಾಗ ಮರೆತು ಹೋಗಿದೆಯೇ ಅಂತಾ ಸಿಂಹ ಪ್ರಶ್ನಿಸಿದ್ರು.

    ಅಲ್ಲಲ್ಲಿ ತಲೆಎತ್ತಿದ ಗೋಸುಂಬೆಗಳು: ಸಂಗೀತ ಕ್ಷೇತ್ರದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನೆಲ್ಲಾ ಧರ್ಮ ನೋಡದೇ ಮನಸ್ಸಿನೊಳಗಿಟ್ಟು ಆರಾಧಿಸಿದ್ದೇವೆ. ಆದ್ರೆ ಇತ್ತೀಚೆಗೆ ಕೆಲವು ಗೋಸುಂಬೆಗಳು ಅಲ್ಲಲ್ಲಿ ತಲೆಎತ್ತಿವೆ. ಅವರೆಲ್ಲಾ ಒಂದು ಕಾಲದಲ್ಲಿ ಎಲ್ಲಾ ಧರ್ಮಗಳನ್ನು ಒಂದು ಮಾಡುವಂತವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಂದು ಎಲ್ಲರಿಗೂ ಬೆದರಿಕೆ ಹಾಕಿ, ತಮ್ಮ ನೀಚ ಮನಸ್ಥಿತಿಯನ್ನ ತೋರಿಸುತ್ತಿದ್ದಾರೆ. ಹೀಗಾಗಿ ಇಂದು ನಾಗರೀಕ ಸಮಾಜ ಎದ್ದುನಿಂತು ಅವರನ್ನು ಮಟ್ಟ ಹಾಕಬೇಕು. ಇಂತಹವರ ವಿರುದ್ಧ ಸರ್ಕಾರ ಕೂಡ ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ ಮಾಡಿದ್ರು.

    ಮಹಿಳಾದಿನಾಚರಣೆಯ ಶುಭಾಶಯ: ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸುಖ, ಸಂತೋಷದಲ್ಲಿ ಹೆಣ್ಣು ಬಹಳ ಮುಖ್ಯ ಪಾತ್ರ ವಹಿಸುತ್ತಾಳೆ. ಹಾಗೆಯೇ ಹೆಣ್ಣು ಇಲ್ಲದೇ ಈ ಜಗತ್ತನ್ನು ಕಲ್ಪಸಿಕೊಳ್ಳಲು ಸಾಧ್ಯವಿಲ್ಲ. ಇಂದು ವಿಶ್ವಾದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದ ಅವರು ಎಲ್ಲಾ ಮಹಿಳೆಯರಿಗೂ ಈ ದಿನದ ಶುಭಾಶಯ ಕೋರಿದ್ರು.

    ಇತ್ತೀಚೆಗೆ ಸರಿಗಮಪ ರಿಯಾಲಿಟಿ ಶೋದ ಆಡಿಶನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಾಗರ ಮೂಲದ ಮುಸ್ಲಿಂ ಯುವತಿ ಸುಹಾನ್ ಸೈಯದ್ ಶ್ರೀಕಾರನೇ ಅನ್ನೋ ದೇವರ ನಾಮವನ್ನು ಮೆಗಾ ಆಡಿಷನ್‍ನಲ್ಲಿ ಹಾಡಿದ್ದರು. ಮಾತ್ರವಲ್ಲದೇ ನನ್ನ ನೋಡಿಯಾದ್ರು ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಅಂತಾ ಹೇಳಿದ್ರು. ಇದೀಗ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹೊಗಳಿಕೆ ಮತ್ತು ಟೀಕೆಗಳು ವ್ಯಕ್ತವಾಗುತ್ತಿದೆ.