Tag: ಸುಸ್ಥಿರ ಅಭಿವೃದ್ಧಿ

  • ನೀತಿ ಆಯೋಗದ ಎಸ್‍ಜಿಡಿ ಸೂಚ್ಯಂಕದಲ್ಲಿ ಸುಧಾರಿಸಿದ ಕರ್ನಾಟಕದ ಸ್ಥಾನ

    ನೀತಿ ಆಯೋಗದ ಎಸ್‍ಜಿಡಿ ಸೂಚ್ಯಂಕದಲ್ಲಿ ಸುಧಾರಿಸಿದ ಕರ್ನಾಟಕದ ಸ್ಥಾನ

    ಬೆಂಗಳೂರು: ವಿಶ್ವ ಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು- 2030 ರ ಸಾಧನೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ನೀತಿ ಆಯೋಗದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

    ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯದ ಅಂಕ ಹಾಗೂ ಸ್ಥಾನದಲ್ಲಿ ಗಣನೀಯ ಸುಧಾರಣೆ ಆಗಿರುವ ಬಗ್ಗೆ ನೀತಿ ಆಯೋಗದ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಆದ್ಯತೆ ನೀಡಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

    ಗರ್ಭಿಣಿಯರು ಹಾಗೂ ಮಕ್ಕಳ ಅಪೌಷ್ಟಿಕತೆ, ಲಿಂಗ ಸಮಾನತೆ, ವಸತಿ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ಇನ್ನಷ್ಟು ಗಮನ ಹರಿಸುವಂತೆ ನೀತಿ ಆಯೋಗವು ಸಲಹೆ ನೀಡಿದೆ. ಈಗಾಗಲೇ ಆಯವ್ಯಯದಲ್ಲಿ ರಾಜ್ಯದ ಎಲ್ಲ ಯೋಜನೆಗಳು ಎಸ್‍ಡಿಜಿ ಗುರಿ ಸಾಧನೆಯನ್ನು ಕೇಂದ್ರೀಕರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆಯೇ ಸರ್ಕಾರ ಕಾರ್ಯನಿರ್ವಹಿಸಲಿದೆ. ಸುಸ್ಥಿರ ಅಭಿವೃದ್ಧಿ 2030 ಗುರಿಗಳನ್ನು ಸಾಧಿಸುವತ್ತ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.

    ಎಸ್.ಜಿ.ಡಿ ಇಂಡಿಯಾ 2020- 21 ವರದಿಯ ಪ್ರಕಾರ 73 ಸೂಚ್ಯಂಕ ಪಡೆದಿರುವ ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 16 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಕರ್ನಾಟಕ ರಾಜ್ಯ 7ನೇ ಗುರಿ ಸಾಧಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಳಿದ ಒಂಭತ್ತು ಗುರಿಗಳ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬಾಕಿ 5 ಗುರಿಗಳ ಸಾಧನೆಯಲ್ಲಿ ಸಹ ಉತ್ತಮ ಸಾಧನೆ ತೋರುತ್ತಿದೆ.

    ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಗರಾಭಿವೃದ್ಧಿ (ಪೌರಾಡಳಿತ), ಇ-ಆಡಳಿತ, ವಸತಿ ಇಲಾಖೆ(ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ), ವಿತ್ತೀಯ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಗಳು ಹೊಸ ಕ್ರಮವನ್ನು ಜಾರಿಗೆ ತರುತ್ತಿವೆ. ಇದು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸುಧಾರಿಸಲಿದೆ ಅಲ್ಲದೆ ನಾಗರಿಕರಿಗೆ ಉತ್ತಮ ಹಾಗೂ ಸುಸ್ಥಿರ ಭವಿಷ್ಯವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

  • ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಇಂದು, ನಾಳೆ ನೀತಿ ಆಯೋಗದ ಸಮಾಲೋಚಕರ ಸಭೆ – ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಬಗ್ಗೆ ಚರ್ಚೆ

    ಬೆಂಗಳೂರು: ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಕುರಿತು ಚರ್ಚಿಸಲು ರಾಜ್ಯಕ್ಕೆ ಆಗಮಿಸಿರುವ ನೀತಿ ಆಯೋಗದ ಸಮಾಲೋಚಕರಾದ ಸನ್ಯುಕ್ತಾ ಸಮದ್ದಾರ್ ಅವರನ್ನು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು.

    ಇಂದು ಮತ್ತು ನಾಳೆ ವಿಕಾಸಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದು ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆವಹಿಲಿದ್ದಾರೆ.

    ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿಯನ್ನು ಇನ್ನಷ್ಟು ಸುಧಾರಿಸಲು ಹಾಗೂ ಇತರ ರಾಜ್ಯಗಳಲ್ಲಿ ಆಗುತ್ತಿರುವ ಉತ್ತಮ ಯೋಜನೆಗಳ/ಸಾಧನೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲದೇ ವಿಶೇಷವಾಗಿ ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆಗಾಗಿ ಬಹು ಆಯಾಮದ ಬಡತನ ಸೂಚ್ಯಾಂಕಗಳ ಬಗ್ಗೆ ಎಲ್ಲಾ ರಾಜ್ಯಗಳೊಂದಿಗೆ ನೀತಿ ಆಯೋಗದ ಮೂಲಕ ಕೆಲವು ಕಾರ್ಯತಂತ್ರಗಳನ್ನು ಹಂಚಿಕೊಳ್ಳಲಾಗುವುದು.

    ಇಂದಿನ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಹಾಗೂ ಶಾಲಿನಿ ರಜನೀಶ್ ಅವರು ಸೇರಿದಂತೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಮಿಷನ್ 2030 ಯೋಜನೆ

    ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಮಿಷನ್ 2030 ಯೋಜನೆ

    ಬೆಂಗಳೂರು: ಶೈಕ್ಷಣಿಕ ಕ್ಷೇತ್ರ ಮತ್ತು ಮಗುವಿನ ಅಭಿವೃದ್ಧಿ ಜೊತೆಗೆ ಸಮಾಜದ ಸಮಾನತೆಗೆ ಶಿಕ್ಷಣ ಇಲಾಖೆ “ಸುಸ್ಥಿರ ಅಭಿವೃದ್ದಿ ಮಿಷನ್ 2030” ನೂತನ ಕಾರ್ಯಕ್ರಮ ಅಳವಡಿಸಿಕೊಂಡಿದೆ. ರಾಜ್ಯದ ಪ್ರತಿ ಶಾಲೆಯಲ್ಲಿ ಮಗುವಿನ ಸುಸ್ಥಿರ ಅಭಿವೃದ್ಧಿ, ಮಗುವಿನ ವಿಕಸನವನ್ನ ಶಾಲೆ ಮಟ್ಟದಲ್ಲಿ ರೂಪಿಸುವುದು ಈ ಮಿಷನ್ ನ ಪ್ರಮುಖ್ಯ ಧ್ಯೆಯವಾಗಿದೆ.

    ವಿಶ್ವಸಂಸ್ಥೆಯು ಮಂಡಿಸಿರೋ ಈ ಸುಸ್ಥಿರ ಅಭಿವೃದ್ಧಿಗೆ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ಒಪ್ಪಿಕೊಂಡಿವೆ. ಇದನ್ನ ಅಳವಡಿಸಿಕೊಳ್ಳುವ ಕೆಲಸ ಮಾಡ್ತಿದೆ. ಭಾರತ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವೂ ಈ ಸುಸ್ಥಿರ ಅಭಿವೃದ್ಧಿಯನ್ನ 2030ರ ವೇಳೆಗೆ ಸಾಕಾರ ಮಾಡಲು ಮಿಷನ್ 2030 ಯೋಜನೆ ಆರಂಭಿಸಿದೆ.

    ಸುಸ್ಥಿರ ಅಭಿವೃದ್ಧಿ ಎಂದರೇನು?
    ಸ್ವಾಭಾವಿಕವಾಗಿ ಸಿಗುವ ಮತ್ತು ಮಾನವ ನಿರ್ಮಿತ ಸಂಪನ್ಮೂಲಗಳನ್ನ ನಮಗೆ ಬೇಕಾದಷ್ಟು ಬಳಸಿಕೊಂಡು, ಬೇರೆ ಅವರಿಗೂ ಇದನ್ನು ಹಂಚೋದು ಇದರ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆ ಸುಸ್ಥಿರ ಅಭಿವೃದ್ಧಿ ಎಂದರೆ ಬೆಳೆಸು, ಬಳಸು, ಉಳಿಸು ಅನ್ನೋದಾಗಿದೆ.

    ರಾಜ್ಯ ಸರ್ಕಾರ ಸುಸ್ಥಿರ ಅಭಿವೃದ್ಧಿಯನ್ನ ಶಾಲೆಗಳಲ್ಲಿ ಅಳವಡಿಸಲು ಮುಂದಾಗಿದೆ. ಶಾಲೆಗಳಲ್ಲಿ ಇದನ್ನ ಮಕ್ಕಳಿಗೆ ಅರ್ಥೈಸುವ ಮೂಲಕ ಮಗು ವಿಕಸನಕ್ಕೆ ಅನುಕೂಲ ಮಾಡಿಕೊಡೋದು ಇದರ ಉದ್ದೇಶ ಆಗಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ 17 ಗುರಿಗಳನ್ನು ಹಾಕಿಕೊಳ್ಳಲಾಗಿದೆ. ಬಡತನದಿಂದ ಮುಕ್ತ, ಹಸಿವು ಮುಕ್ತ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗಸಮಾನತೆ, ಸ್ಚಚ್ಚ ನೀರು ನೈರ್ಮಲ್ಯ ಹೀಗೆ 17 ಅಂಶಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ಅಗತ್ಯತೆಗಳನ್ನು ಪರಿಚಯಿಸಿ ಮುಂದೆ ಸಮ ಸಮಾಜದ ನಿರ್ಮಾಣವೇ ಇದರ ಗುರಿಯಾಗಿದೆ.