Tag: ಸುವೇಂದು ಅಧಿಕಾರಿ

  • ಮರಳಿ ಟಿಎಂಸಿ ಗೂಡು ಸೇರಿದ ಮುಕುಲ್ ರಾಯ್

    ಮರಳಿ ಟಿಎಂಸಿ ಗೂಡು ಸೇರಿದ ಮುಕುಲ್ ರಾಯ್

    ಕೋಲ್ಕತ್ತಾ: ಮುಕುಲ್ ರಾಯ್ ಮತ್ತು ಪುತ್ರ ಸುಭ್ರಾಂಶು ರಾಯ್ ಮತ್ತೆ ಟಿಎಂಸಿಗೆ ಮರಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಈಗ ಮಮತಾ ಬಣವನ್ನು ಸೇರಿದ್ದಾರೆ.

    ಸಿಎಂ ಮಮತಾ ಸಮ್ಮುಖದಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಮುಕುಲ್ ರಾಯ್, ಮತ್ತೆ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡಲು ಸಂತಸವಾಗುತ್ತದೆ. ಬಿಜೆಪಿಯಲ್ಲಿರಲು ನನಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಮುಕುಲ್ ರಾಯ್ ಮತ್ತೆ ಮರಳಿ ಮನೆಗೆ ಬಂದಿದ್ದಾರೆ. ಮತ್ತಷ್ಟು ಜನರ ಪಕ್ಷಕ್ಕೆ ಬರಲಿದ್ದಾರೆ. ಒಲ್ಡ್ ಇಸ್ ಆಲ್ವೇಸ್ ಗೋಲ್ಡ್ ಎಂದು ತಿಳಿಸಿದರು. ಇದನ್ನೂ ಓದಿ: ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮಮತಾ ಬ್ಯಾನರ್ಜಿ ಫೋಟೋ – ಕೆಂಡಾಮಂಡಲವಾದ ಬಿಜೆಪಿ

    ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮುಕುಲ್ ರಾಯ್ 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    ಬಿಜೆಪಿಯ ಪ್ರಮುಖ ಸಭೆಗೆ ಮುಕುಲ್ ರಾಯ್ ಗೈರಾದ ಬೆನ್ನಲ್ಲೇ ಅವರು ಮತ್ತೆ ಟಿಎಂಸಿ ಸೇರಲಿದ್ದಾರೆ ಎನ್ನುವುದು ಖಚಿತವಾಗಿತ್ತು. ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಕುಲ್ ರಾಯ್ ಅವರ ಪತ್ನಿಯನ್ನು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

    2017ರಲ್ಲಿ ಟಿಎಂಸಿ ತೊರೆದಿದ್ದ ಮುಕುಲ್ ರಾಯ್ ಅವರನ್ನು 2020ರ ಸೆಪ್ಟೆಂಬರ್ 26 ರಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು. ಸದ್ಯ ಇವರು ಪಶ್ಚಿಮ ಬಂಗಾಳದ ಕೃಷ್ಣ ನಗರದ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ.

    ಪಶ್ಚಿಮ ಬಂಗಾಲ ಬಿಜೆಪಿಯಲ್ಲಿ ಸುವೇಂದು ಅಧಿಕಾರಿ, ಮಕುಲ್ ರಾಯ್ ಬಣ ಇತ್ತು. ಬಿಜೆಪಿ ಹೈಕಮಾಂಡ್ ನಾಯಕರು ಸುವೇಂದು ಅಧಿಕಾರಿಗೆ ಹೆಚ್ಚಿನ ಪ್ರಶಾಸ್ತ್ಯ ನೀಡಿದ್ದು ಮುಕುಲ್ ರಾಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಎರಡನೇ ಅತಿ ಹೆಚ್ಚು ಸ್ಥಾನ ಸಿಕ್ಕಿದ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿಯನ್ನು ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿ ವಿರೋಧ ಪಕ್ಷದ ಸ್ಥಾನವನ್ನು ಬಿಜೆಪಿ ನೀಡಿತ್ತು.

  • ಸುವೇಂದು ಅಧಿಕಾರಿ, ಸಹೋದರರ ವಿರುದ್ಧ ಎಫ್‍ಐಆರ್

    ಸುವೇಂದು ಅಧಿಕಾರಿ, ಸಹೋದರರ ವಿರುದ್ಧ ಎಫ್‍ಐಆರ್

    ಕೋಲ್ಕತ್ತಾ: ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗಾಗಿ ಪುರಸಭೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರರ ಸೌಮೇಂದು ಅಧಿಕಾರಿ ವಿರುದ್ಧ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನಾದೀಪ್ ಮನ್ನಾ ಅವರ ದೂರಿನಂತೆ, ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ವಿತರಿಸಲೆಂದು ಪಶ್ಚಿಮಬಂಗಾಳದ ಕಾಂತಿ ಪುರಸಭೆ ಕಚೇರಿಯಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಪರಿಹಾರ ಸಾಮಾಗ್ರಿಗಗಳನ್ನು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದ ಬೆನ್ನಲ್ಲೇ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    2021 ಮೇ 29ರಂದು ಮಧ್ಯಾಹ್ನ 12.30ಕ್ಕೆ ಸುವೇಂದು ಅಧಿಕಾರಿ ಹಾಗೂ ಸೌಮೇಂದು ಅಧಿಕಾರಿ ಅವರ ಸೂಚನೆಯಂತೆ ಪುರಸಭೆ ಕಚೇರಿ ಗೋಡೌನ್ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಟ್ರಕ್ ಮೂಲಕ ಕದ್ದೊಯ್ಯಲಾಗಿದೆ. ಈ ಕೃತ್ಯಕ್ಕೆ ಬಿಜೆಪಿ ನಾಯಕರು ಕೇಂದ್ರದ ಸಶಸ್ತ್ರ ಪಡೆಯ ನೆರವನ್ನು ಬಳಕೆ ಮಾಡಿದ್ದಾರೆ ಎಂದು ರತ್ನಾದೀಪ್ ಮನ್ನಾ ಆರೋಪ ಮಾಡಿದ್ದಾರೆ.

    ಇತ್ತ ಬಿಜೆಪಿಯ ಕೆಲ ನಾಯಕರು ಕೂಡ ಪರಿಹಾರ ಸಾಮಗ್ರಿಗಳನ್ನು ದುರುಪಯೋಗ ಮಾಡಿದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಸುವೇಂದು ಅಧಿಕಾರಿ ಆಪ್ತ ರಾಖೇಲ್ ಬೆರಾ ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಎರಡು ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆಂದು ದೂರು ಕೇಳಿ ಬಂದ ಹಿನ್ನೆಲೆ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಕಳ್ಳತನದ ಆರೋಪದಲ್ಲಿ ಸುವೇಂದು ಅಧಿಕಾರಿ ವಿರುದ್ಧವು ಎಫ್‍ಐಆರ್ ದಾಖಲಾಗಿದೆ.

  • ರಾಜ್ಯ ಗೆದ್ದರೂ ಕ್ಷೇತ್ರ ಗೆಲ್ಲದ ಮಮತಾ ಬ್ಯಾನರ್ಜಿ- 3ನೇ ಬಾರಿಗೆ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

    ರಾಜ್ಯ ಗೆದ್ದರೂ ಕ್ಷೇತ್ರ ಗೆಲ್ಲದ ಮಮತಾ ಬ್ಯಾನರ್ಜಿ- 3ನೇ ಬಾರಿಗೆ ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರ

    – ನಂದಿಗ್ರಾಮದಲ್ಲಿ ಶಿಷ್ಯ ಸುವೇಂದು ಎದುರು ಸೋಲು
    – ಆಪರೇಷನ್ ಕಮಲಕ್ಕೊಳಗಾದ ಬಹುತೇಕರಿಗೆ ಸೋಲು

    ಕೋಲ್ಕತ್ತಾ: ಬಂಗಾಳ ಪಡೆದುಕೊಳ್ಳಲು ಮೋದಿ-ಅಮಿತ್ ಶಾ ಮಾಡಿದ ಸರ್ವ ಪ್ರಯತ್ನ, ಬಂಗಾಳ ಉಳಿಸಿಕೊಳ್ಳಲು ದೀದಿ ಮಮತಾ ನಡೆಸಿದ ಏಕಾಂಗಿ ಹೋರಾಟ, ವ್ಹೀಲ್‍ಚೇರ್ ಪ್ರಚಾರದ ಕಾರಣದಿಂದ ತೀವ್ರ ಕುತೂಹಲ ಕೆರಳಿಸಿದ್ದ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಲೆಕ್ಕಾಚಾರಗಳನ್ನು ಸುಳ್ಳು ಮಾಡಿದ ಟಿಎಂಸಿ ಪ್ರಚಂಡ ಗೆಲುವು ಸಾಧಿಸಿದೆ. ಈ ಮೂಲಕ ದೀದಿ ಸತತ ಮೂರನೇ ಬಾರಿಗೆ ಗದ್ದುಗೆ ಏರೋದು ಖಚಿತವಾಗಿದೆ.

    ಸತತ ಮೂರನೇ ಬಾರಿಗೆ ಸಿಎಂ ಆಗುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮಮತಾ ಬ್ಯಾನರ್ಜಿ ಪಾತ್ರರಾಗುತ್ತಿದ್ದಾರೆ. ಅಧಿಕಾರ ಪಡೆದೇ ತೀರಬೇಕೆಂದು ಚುನಾವಣಾ ಕದನದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ರಣಭೀಕರವಾಗಿ ಹೋರಾಡಿದ್ದರ ಹೊರತಾಗಿಯೂ ಬಿಜೆಪಿ ಶತಕದಂಚು ತಲುಪಲು ಏದುಸಿರು ಬಿಟ್ಟಿದೆ. ಆದರೆ ನಂದಿಗ್ರಾಮದಲ್ಲಿ ನಡೆದ ತೀವ್ರ ಹಣಾಹಣಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆದ್ದು ಸೋತಿದ್ದಾರೆ.

    ಮೊದಲ ಆರು ಸುತ್ತುಗಳವರೆಗೂ ಮಮತಾ ತೀವ್ರ ಹಿನ್ನೆಡೆ ಕಂಡಿದ್ದನ್ನು ನೋಡಿ, ಸುವೆಂದು ಗೆದ್ದೇ ಬಿಡ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದ್ರೆ ಫಿನಿಕ್ಸ್ ಮಾದರಿಯಲ್ಲಿ ಮುನ್ನಡೆಗೆ ಬಂದರು. ನಂತರ ಒಮ್ಮೆ ಸುವೆಂದು ಮುನ್ನಡೆಗೆ ಬಂದರೆ ಮರುಕ್ಷಣವೇ ಮಮತಾ ಲೀಡ್‍ಗೆ ತೆಗೆದುಕೊಳ್ಳುತ್ತಿದ್ದರು. ಕೊನೆವರೆಗೂ ವಿಜಯಮಾಲೆ ತೂಗೂಯ್ಯಾಲೆಯಲ್ಲೇ ಇತ್ತು. ಅಷ್ಟರ ಮಟ್ಟಿಗೆ ಸುವೆಂದು ಅಧಿಕಾರಿ ಬಿಗ್ ಫೈಟ್ ನೀಡಿದರು.

    ಕೊನೆಗೆ ಚುನಾವಣಾಧಿಕಾರಿಗಳು ಮಮತಾ 1,200 ಮತಗಳಿಂದ ಗೆದ್ದರು ಎಂದು ಘೋಷಿಸಿದರು. ಆದ್ರೆ ಇದಾದ ಸ್ವಲ್ಪ ಹೊತ್ತಿಗೆ ಸುವೆಂದು 1,622 ಮತಗಳಿಂದ ಗೆದ್ರು ಎಂದು ಘೋಷಿಸಲಾಯ್ತು. ಸದ್ಯ ನಂದಿಗ್ರಾಮ ಫಲಿತಾಂಶದ ಬಗ್ಗೆ ಗೊಂದಲ ಏರ್ಪಟ್ಟಿದೆ. ಮತ್ತೆ ಮರು ಎಣಿಕೆ ನಡೆಯುತ್ತಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮಮತಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಬಹುತೇಕ (140) ನಾಯಕರು ಸೋಲನ್ನಪ್ಪಿದ್ದಾರೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮಮತಾಗೆ ಅಭಿನಂದನೆ ಹೇಳಿದ್ದಾರೆ.

    ಯಾರಿಗೆ ಎಷ್ಟು ಕ್ಷೇತ್ರ:
    * ಟಿಎಂಸಿ- 215 (48.01%) (211 ಕಳೆದ ಬಾರಿಯ ಸ್ಥಾನ)
    * ಬಿಜೆಪಿ- 75 (37.08%) (03 ಕಳೆದ ಬಾರಿಯ ಸ್ಥಾನ)
    * ಎಡರಂಗ+ಕಾಂಗ್ರೆಸ್- 01 (6.53%) (70 ಕಳೆದ ಬಾರಿಯ ಸ್ಥಾನ)
    * ಇತರೆ- 01 (8.38%) (10 ಕಳೆದ ಬಾರಿಯ ಸ್ಥಾನ)

    ಟಿಎಂಸಿ ಗೆಲುವಿಗೆ ಕಾರಣ: ಮಮತಾ ಬ್ಯಾನರ್ಜಿ ನಾಯಕತ್ವ, ವ್ಯಕ್ತಿತ್ವ ಹೆಚ್ಚು ಪರಿಣಾಮಕಾರಿಯಾಗಿತ್ತು. ಟಿಎಂಸಿ ಪಾಲಿಗೆ ದೀದಿ ಒನ್ ಮ್ಯಾನ್ ಆರ್ಮಿ ಎಂಬಂತೆ ಇಡೀ ಚುನಾವಣೆಯಲ್ಲಿ ಬಿಂಬಿತರಾದರು. ಚುನಾವಣೆ ಪ್ರಚಾರದುದ್ದಕ್ಕೂ ಬಂಗಾಳದ ಮಗಳು, ಬಂಗಾಳದ ಆಸ್ಮಿತೆಯ ತಂತ್ರಗಳನ್ನು ಪ್ರಯೋಗಿಸಿದರು. ಚುನಾವಣೆ ವೇಳೆ ಆದ ಕಾಲಿನ ನೋವಿನ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಟಿಎಂಸಿ ತಳಮಟ್ಟದಿಂದಲೂ ಪ್ರಬಲವಾಗಿದೆ.

    ಬಿಜೆಪಿ ಸೋಲಿಗೆ ಕಾರಣ: ಹೊರಗಿನವರು ಎಂಬ ಆರೋಪಗಳ ಜೊತೆ ವಲಸಿಗರಿಗೆ ಬಿಜೆಪಿ ಹೆಚ್ಚು ಆದ್ಯತೆ ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಕಮಲವೇ ಬಿಜೆಪಿಗೆ ಮುಳವಾಗಿದೆ. ಮೂಲ ಬಿಜೆಪಿ ನಾಯಕರು, ಕಾರ್ಯಕರ್ತರ ನಿರ್ಲಕ್ಷ್ಯವೂ ಸೋಲಿಗೆ ಕಾರಣ ಎನ್ನಲಾಗ್ತಿದೆ. ಗೆಲ್ಲುವ ಮೊದಲೇ ಸುವೆಂದು ಮತ್ತು ದಿಲೀಪ್ ಘೋಷ್ ನಡುವೆ ಸಿಎಂ ಗಾದಿಗಾಗಿ ಮುಸುಕಿನ ಗುದ್ದಾಟ ನಡೆದಿತ್ತು.

  • ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ 1,622 ಮತಗಳ ಅಂತರದಿಂದ ಗೆದ್ದಿದ್ದಾರೆ.

    ಟಿಎಂಸಿಯಿಂದ ಹೊರ ಬಂದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಭಾರೀ ಸ್ಪರ್ಧೆ ನಡೆದಿತ್ತು. ಮತಿ ಎಣಿಕೆಯ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು.

    ಸುವೇಂದು ಅಧಿಕಾರಿಯನ್ನು ನಾನು ನಂದಿಗ್ರಾಮದಿಂದ ಸೋಲಿಸುತ್ತೇನೆ ಎಂದು ಮಮತಾ ಪ್ರತಿಜ್ಞೆ ಮಾಡಿದ್ದರು.

    ಸದ್ಯದ ಟ್ರೆಂಡ್ ಪ್ರಕಾರ 213 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 78 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

  • ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಚುನಾವಣೆ ಆರಂಭ

    ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಚುನಾವಣೆ ಆರಂಭ

    ಕೋಲ್ಕತ್ತಾ/ ಗುವಾಹಟಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆಗಳಿಗೆ ಎರಡನೇ ಹಂತದ ಚುನಾವಣೆ ಆರಂಭಗೊಂಡಿದೆ. ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

    ಪಶ್ಚಿಮ ಬಂಗಾಳದಲ್ಲಿ ಒಟ್ಟು 30 ಕ್ಷೇತ್ರಗಳಿಗೆ ಚುನಾವಣೆ ನಡೆಯತ್ತಿದ್ದು, 191 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೇಶವ್ಯಾಪಿ ಗಮನ ಸೆಳೆದಿರುವ ನಂದಿ ಗ್ರಾಮದಲ್ಲಿ ಇಂದು ಚುನಾವಣೆ ನಡೆಯುತ್ತಿದೆ.

    ಮಮತಾ ಬ್ಯಾನರ್ಜಿ ಹಾಗೂ ಒಂದುಕಾಲದಲ್ಲಿ ಅವರ ಆತ್ಮೀಯರೆನಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು ಭಾರೀ ಫೈಟ್ ಮೂಡಿಸಿದ ಕ್ಷೇತ್ರ ಎನಿಸಿಕೊಂಡಿದೆ. ಹೀಗಾಗಿ ಈ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನೂ ಸೂಕ್ಷ್ಮ ಮತಗಟ್ಟೆಗಳೆಂದು ಚುನಾವಣಾ ಆಯೋಗ ಘೋಷಿಸಿದೆ. ಕೇಂದ್ರೀಯ ಪಡೆಗಳ 651 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಟಿಎಂಸಿ ಹಾಗೂ ಬಿಜೆಪಿ ಎಲ್ಲಾ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಸಿಪಿಎಂ 15 ಹಾಗೂ ಅದರ ಮಿತ್ರಪಕ್ಷಗಳು 15 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

    ಅಸ್ಸಾಂನ 39 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ 26 ಮಹಿಳೆಯರೂ ಸೇರಿದಂತೆ ಒಟ್ಟು 345 ಮಂದಿ ಕಣದಲ್ಲಿದ್ದಾರೆ. ಬಿಜೆಪಿ 34 ಕ್ಷೇತ್ರ, ಅದರ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್ ಹಾಗೂ ಯುಪಿಪಿಎಲ್ ಕ್ರಮವಾಗಿ ಆರು ಹಾಗೂ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

    ಅಸ್ಸಾಂ ಕರಿಮ್‍ಗಂಜ್ ಉತ್ತರ, ಕರಿಮ್‍ಗಂಜ್ ದಕ್ಷಿಣ, ಲಖಿಪುರ್, ಸಿಲ್ಚಾರ್, ಬಾದರ್‍ಪುರ, ಜಾಗಿರೋಡ್, ಲಹರಿಘಾಟ್, ನಲ್ಬಾರಿ, ಕಮಲ್‍ಪುರ, ಮತ್ತು ನೌಗಾಂಗ್ 39 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕೇಂದ್ರ ಸಶಸ್ತ್ರ ಪಡೆಗಳ 310 ಕಂಪನಿಗಳು ಭದ್ರತೆಗೆಂದು ನಿಯೋಜಿಸಲಾಗಿದೆ.

  • ನನ್ನ ಗೆಲುವಿಗೆ ಸಹಾಯ ಮಾಡಿ- ನಂದಿಗ್ರಾಮದ ಬಿಜೆಪಿ ನಾಯಕನಿಗೆ ಮಮತಾ ಬ್ಯಾನರ್ಜಿ ಮನವಿ

    ನನ್ನ ಗೆಲುವಿಗೆ ಸಹಾಯ ಮಾಡಿ- ನಂದಿಗ್ರಾಮದ ಬಿಜೆಪಿ ನಾಯಕನಿಗೆ ಮಮತಾ ಬ್ಯಾನರ್ಜಿ ಮನವಿ

    – ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದ್ದು, ಇದೇ ವೇಳೆ ಬಿಜೆಪಿ ನಾಯಕ ಪ್ರಳಯ್ ಪಾಲ್ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯವರ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಗೆಲುವು ಸಾಧಿಸಲು ಸಹಾಯ ಮಾಡುವಂತೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕನ ಬಳಿ ಮನವಿ ಮಾಡಿದ್ದಾರೆ. ಈ ಕುರಿತು ಸ್ವತಃ ಪ್ರಳಯ್ ಪಾಲ್ ಹೇಳಿಕೆಯನ್ನೂ ನೀಡಿದ್ದಾರೆ.

    ಬಿಜೆಪಿ ವೀಡಿಯೋ ಬಿಡುಗಡೆ ಮಾಡಿದ್ದು, ನಂದಿಗ್ರಾಮದಲ್ಲಿ ತಮ್ಮ ಹಾಗೂ ಟಿಎಂಸಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿ ಮನವಿ ಮಾಡಿದರು ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕ ಪಾಲ್ ಅವರಿಗೆ ಕರೆ ಮಾಡಿ ಮಾತನಾಡಿದ ಫೋನ್ ಸಂಭಾಷಣೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ನನಗಾಗಿ ಕೆಲಸ ಮಾಡಿ, ಟಿಎಂಸಿಗೆ ಮರಳಿ ಬನ್ನಿ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಆದರೆ ನಾನು ಬಹಳ ಹಿಂದೆಯೇ ಸುವೇಂದು ಅಧಿಕಾರಿ ಹಾಗೂ ಅಧಿಕಾರಿ ಕುಟುಂಬದೊಂದಿಗೆ ನಂಟು ಹೊಂದಿದ್ದೇನೆ. ಅಲ್ಲದೆ ಈಗ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ.

    ಎಡಪಂಥೀಯ ಸಿಪಿಐ(ಎಂ) ಪಕ್ಷದ ಆಡಳಿತವಿದ್ದಾಗ ನಂದಿಗ್ರಾಮದ ಜನರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಈ ವೇಳೆ ಅಧಿಕಾರಿ ಕುಟುಂಬ ನಮ್ಮ ಪರವಾಗಿ ನಿಂತಿತು. ಹೀಗಾಗಿ ನಾನು ಅವರ ವಿರುದ್ಧ ಎಂದೂ ಹೋಗುವುದಿಲ್ಲ. ಆ ಧೈರ್ಯ ಸಹ ನನಗಿಲ್ಲ ಎಂದು ಪಾಲ್ ಅವರು ಆಡಿಯೋದಲ್ಲಿ ಹೇಳಿದ್ದಾರೆ.

    ನಂದಿಗ್ರಾಮದ ಸ್ಥಳೀಯರಿಗೆ ಟಿಎಂಸಿ ಎಂದಿಗೂ ಹಕ್ಕು ನೀಡಿಲ್ಲ. ಹೀಗಾಗಿ ಬಿಜೆಪಿ ಜೊತೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದೇನೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

    ಈ ಸಂಭಾಷಣೆಯ ಆಡಿಯೋ ಕ್ಲಿಪ್‍ನ್ನು ಬಿಜೆಪಿ ಮುಖಂಡ ಅಮಿತ್ ಮಾಳ್ವಿಯಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಳಯ್ ಪಾಲ್ ಅವರಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವೇಳೆ ಟಿಎಂಸಿಯಲ್ಲಿ ಅವಮಾನಕ್ಕೊಳಗಾಗಿದ್ದೇನೆಂದು, ಈ ಕುಟುಂಬವನ್ನು ಬಿಡಲು ಆಗುವುದಿಲ್ಲ. ಅಲ್ಲದೆ ಬಿಜೆಪಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಟ್ವೀಟ್‍ನಲ್ಲಿ ಅಮಿತ್ ಮಾಳ್ವಿಯಾ ಬರೆದಿದ್ದಾರೆ.

    ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪ್ರತಿಷ್ಠಿತ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಬಿಜೆಪಿಯಿಂದ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ. ಇವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ.

  • ಒಂದು ಕಾಲದ ಅತ್ಯಾಪ್ತನನ್ನ ದೀದಿ ವಿರುದ್ಧ ಕಣಕ್ಕಿಳಿಸಿದ ಬಿಜೆಪಿ

    ಒಂದು ಕಾಲದ ಅತ್ಯಾಪ್ತನನ್ನ ದೀದಿ ವಿರುದ್ಧ ಕಣಕ್ಕಿಳಿಸಿದ ಬಿಜೆಪಿ

    – ಬಿಜೆಪಿಯ 57 ಅಭ್ಯರ್ಥಿಗಳ ಹೆಸರು ಪ್ರಕಟ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ನಂದಿಗ್ರಾಮದಿಂದ ಒಂದು ಕಾಲದ ಟಿಎಂಸಿ ಪ್ರಮುಖ ನಾಯಕ, ದೀದಿಯ ಅತ್ಯಾಪ್ತ ಸುವೇಂದು ಅಧಿಕಾರಿಯನ್ನ ಬಿಜೆಪಿ ಕಣಕ್ಕಿಳಿಸಿದೆ.

    ಟಿಎಂಸಿ ತೊರೆದು ಬಿಜೆಪಿ ಸೇರಿದಾಗಿನಿಂದಲೂ ಸುವೇಂದು ಅಧಿಕಾರಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಈ ಬಾರಿ ಕ್ಷೇತ್ರ ಬದಲಿಸಿ ನಂದಿಗ್ರಾಮ ಆಯ್ಕೆ ಮಾಡಿಕೊಳ್ಳುವ ಮೂಲಕ ಸುವೇಂದು ಅಧಿಕಾರಿಗೆ ಮಮತಾ ಬ್ಯಾನರ್ಜಿ ಸವಾಲ್ ಎಸೆದಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದು ಸಂಜೆ ದೆಹಲಿಯಲ್ಲಿ 57 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದರು. ಮಾಜಿ ಕ್ರಿಕೆಟಿಗ ಅಶೋಕ್ ಡಿಂಡಾಗೂ ಬಿಜೆಪಿ ಟಿಕೆಟ್ ನೀಡಿದೆ.

    ಶುಕ್ರವಾರ ಮಮತಾ ಬ್ಯಾನರ್ಜಿ ಒಂದೇ ಪಟ್ಟಿಯಲ್ಲಿಯೇ 291 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ 20 ಬದಲಾಗಿ 120 ಸಮಾವೇಶ ನಡೆಸಿದ್ರೂ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 291 ಅಭ್ಯರ್ಥಿಗಳ ಹೆಸರು ಘೋಷಿಸಿದ ದೀದಿ – ಟಿಕೆಟ್ ಹಂಚಿಕೆ ಲೆಕ್ಕಾಚಾರ ಹೀಗಿದೆ

    ಇತ್ತ ಪಕ್ಷಾಂತರ ಪರ್ವ ಮುಂದುವರಿದಿದ್ದು, ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಮಲ ಹಿಡಿದ ಬಳಿಕ ಪ್ರತಿಕ್ರಿಯಿಸಿರುವ ದಿನೇಶ್ ತ್ರಿವೇದಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಆ್ಯಕ್ಟಿವ್ ಆಗಿರುತ್ತೇನೆ. ಬಂಗಾಳ ಟಿಎಂಸಿಯನ್ನು ತಿರಸ್ಕರಿಸಿದೆ. ಜನತೆ ಪ್ರಗತಿ ಬಯಸಿದ್ದಾರೆ, ಭ್ರಷ್ಟಾಚಾರ ಅಥವಾ ಹಿಂಸಾಚಾರವನ್ನಲ್ಲ. ನಿಜವಾದ ಬದಲಾವಣೆಗೆ ಜನತೆ ಸಿದ್ಧರಾಗಿದ್ದಾರೆ. ರಾಜಕೀಯ ಆಟವಲ್ಲ, ಅದೊಂದು ಗಂಭೀರ ವಿಚಾರ. ಸಿಎಂ ಮಮತಾ ಬ್ಯಾನರ್ಜಿ ಆಟವಾಡುವ ಭರದಲ್ಲಿ ತಮ್ಮ ಆದರ್ಶಗಳನ್ನು ಮರೆತಿದ್ದಾರೆ ಎಂದು ಅವರ ಹೆಸರನ್ನು ಹೇಳದೆ ತ್ರಿವೇದಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ:  ಪ್ರಧಾನಿಗಳು 20 ಅಲ್ಲ 120 ರ‍್ಯಾಲಿ ನಡೆಸಲಿ, ಗೆಲ್ಲೋದು ನಾವೇ: ದೀದಿ ಸವಾಲ್

    ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ:  ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ