Tag: ಸುವರ್ಣಾವತಿ ಜಲಾಶಯ

  • ಹಿಂಗಾರು ಮಳೆ ಆರ್ಭಟ; ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿ

    ಹಿಂಗಾರು ಮಳೆ ಆರ್ಭಟ; ಸುವರ್ಣಾವತಿ ಜಲಾಶಯ ಬಹುತೇಕ ಭರ್ತಿ

    – ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ
    – ನದಿಪಾತ್ರದ ಜನರಿಗೆ ಎಚ್ಚರಿಕೆ ಕೊಟ್ಟ ಅಧಿಕಾರಿಗಳು

    ಚಾಮರಾಜನಗರ: ಹಿಂಗಾರು ಮಳೆಯ ಆರ್ಭಟಕ್ಕೆ ಸುವರ್ಣಾವತಿ ಜಲಾಶಯ (Suvarnavathy Dam) ಬಹುತೇಕ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಕಳೆದ ವರ್ಷ ಅಷ್ಟೇ ಅಲ್ಲ, ಈ ಬಾರಿಯ ಮುಂಗಾರಿನಲ್ಲೂ ಜಲಾಶಯ ತುಂಬದೇ ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ ಜಿಲ್ಲೆಯ ಗಡಿಭಾಗ ದಿಂಬಂ ಘಾಟ್‌ನಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾದ ಕಾರಣ ಸಾಕಷ್ಟು ನೀರು ಹರಿದುಬರುತ್ತಿದ್ದು ಸುವರ್ಣಾವತಿ ಜಲಾಶಯ ಬಹುತೇಕ ತುಂಬಿದೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ

    55 ಅಡಿ ಸಾಮರ್ಥ್ಯದ ಜಲಾಶಯ ಸದ್ಯ 53.5 ಅಡಿ ಭರ್ತಿಯಾಗಿದೆ. ಒಳಹರಿವು 250 ಕ್ಯೂಸೆಕ್ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿಗೆ 150 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ಒಳ ಹಾಗೂ ಹೊರಹರಿವು ಹೆಚ್ಚಳ ಸಾಧ್ಯತೆ ಇರುವುದರಿಂದ ನದಿಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಕಾವೇರಿ ನೀರಾವರಿ ನಿಗಮ ಸೂಚಿಸಿದೆ.

    ಸದ್ಯ ನದಿಯಿಂದ ಕರಿನಂಜನಪುರದ ದೊಡ್ಡಕೆರೆ, ಚಿಕ್ಕಕೆರೆ, ಸಿಂಡಗೆರೆ, ಬಂಡೀಗೆರೆ ನಲ್ಲೂರು, ನಾಗವಳ್ಳಿ ಸೇರಿದಂತೆ ಹತ್ತಾರು ಕೆರೆ ಕಟ್ಟೆಗಳಿಗೆ ನೀರು ಹರಿಯುತ್ತಿದ್ದು, ಈ ಕೆರೆಕಟ್ಟೆಗಳು ತುಂಬ ತೊಡಗಿವೆ. ಇದರಿಂದ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ ಹಲವೆಡೆ ಅಂತರ್ಜಲ ವೃದ್ಧಿಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್

    ಸುವರ್ಣಾವತಿ ಜಲಾಶಯ 7000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಹಿಂಗಾರು ಬೆಳೆ ಬೆಳೆಯಲು ಜಲಾಶಯದಿಂದ ಚಾನೆಲ್‌ಗಳಿಗೆ ನೀರು ಬಿಡುಗಡೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

  • 11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ

    11 ವರ್ಷದ ಬಳಿಕ ಮೈದುಂಬಿದ ಸುವರ್ಣಾವತಿ ಜಲಾಶಯ- ನದಿ ಪಾತ್ರದ ಜನರಿಗೆ ಎಚ್ಚರಿಕೆ

    ಚಾಮರಾಜನಗರ: ಜಿಲ್ಲೆಯ ಅವಳಿ ಜಲಾಶಯಗಳೆಂದೇ ಹೆಸರಾಗಿರುವ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾನುವಾರ 2 ಕ್ರಸ್ಟ್ ಗೇಟ್‍ಗಳ ಮೂಲಕ ಸುವರ್ಣಾವತಿ ಜಲಾಶಯದಿಂದ 900 ಕ್ಯೂಸೆಕ್‍ಗೂ ಅಧಿಕ ನೀರನ್ನು ಹೊರಬಿಡಲಾಗುತ್ತಿದೆ.

    ತಮಿಳುನಾಡಿನ ದಿಂಬಂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜಿಲ್ಲೆಯ ಸುವರ್ಣಾವತಿ ಜಲಾಶಯ ಉಕ್ಕಿ ಹರಿಯುತ್ತಿದ್ದು, 2 ಕ್ರಸ್ಟ್ ಗೇಟ್‍ಗಳ ಮೂಲಕ 900 ಕ್ಯೂಸೆಕ್‍ಗೂ ಅಧಿಕ ನೀರನ್ನು ಹೊರ ಬಿಡಲಾಗುತ್ತಿದೆ. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?

    ಸುವರ್ಣಾವತಿ ಜಲಾಶಯದಲ್ಲಿ 11 ವರ್ಷದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿದೆ. 2010ರಲ್ಲಿ ಒಳಹರಿವು ಹೆಚ್ಚಾಗಿ ನೀರನ್ನು ಹರಿಬಿಟ್ಟಿದ್ದು ಹೊರತುಪಡಿಸಿದರೆ, ಬಳಿಕ ತಕ್ಕಮಟ್ಟಿಗಷ್ಟೇ ಅವಳಿ ಜಲಾಶಯಗಳು ತುಂಬುತ್ತಿದ್ದವು. ಆದರೆ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ

    ಸುವರ್ಣಾವತಿ ಜಲಾಶಯವು ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 900 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಅಚ್ಚುಕಟ್ಟು ಪ್ರದೇಶ ಹಾಗೂ ನದಿ ಪಾತ್ರದ ಜನರು, ರೈತರು ಮುನ್ನೆಚ್ಚರಿಕೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ಬಗ್ಗೆ ನಿಗಾ ವಹಿಸಬೇಕೆಂದು ಕಬಿನಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮನವಿ ಮಾಡಿದ್ದಾರೆ.

  • ಹೆಸರಿಗೆ ತಕ್ಕಂತೆ ಶ್ವೇತ ವರ್ಣವನ್ನೇ ಹೊದ್ದಿರುವ ಶ್ವೇತಾದ್ರಿ ಬೆಟ್ಟ

    ಹೆಸರಿಗೆ ತಕ್ಕಂತೆ ಶ್ವೇತ ವರ್ಣವನ್ನೇ ಹೊದ್ದಿರುವ ಶ್ವೇತಾದ್ರಿ ಬೆಟ್ಟ

    ಚಾಮರಾಜನಗರ: ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಬೆಸೆಯುವ ಸೇತುವೆ ಎಂದೇ ಕರೆಸಿಕೊಳ್ಳುವ ಹಾಗೂ ಬಿಳಿ ಬಣ್ಣವನ್ನು ಹೊದ್ದುಕೊಂಡಿರುವ ಸ್ವಚ್ಛಂದ ಶ್ವೇತ ವರ್ಣದ ಬೆಟ್ಟದ ಹೆಸರೇ ಶ್ವೇತಾದ್ರಿ.

    ಇಂತಹದೊಂದು ಅಪರೂಪವಾದ ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರುವುದು ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನಲ್ಲಿ. ಹಸಿರು ಸೀರೆಯುಟ್ಟ ನಾರಿಯಂತೆ ಕಾಣುವ ಆ ಹಚ್ಚಹಸಿರಾದ ಬೆಟ್ಟ ನೋಡಲು ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ನುಸುಳುವ ಗಾಳಿಗೆ ಮೈ ಒಡ್ಡಿದರೆ ಆಹಾ ಸ್ವರ್ಗದ ಸುಖ. ತೇಲುವ ಮೋಡಗಳ ಮಧ್ಯೆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಆಹ್ಲಾದಕರ.

    ಪ್ರಕೃತಿ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಈ ಶ್ವೇತಾದ್ರಿ ಬೆಟ್ಟವನ್ನು ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೆಂದೂ ಕರೆಯುತ್ತಾರೆ. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಪಕ್ಕದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಈ ಬೆಟ್ಟ ಕಂಡು ಬರುತ್ತದೆ. ತಮಿಳುನಾಡಿನ ದಿಂಬ್ಬಂ, ಜೋಡಿಗೆರೆ, ಕಾಡಿಗೆರೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಪ್ರಕೃತಿ ಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ.

    ಮೈದುಂಬಿ ಕೊಂಡಿರುವ ಸುವರ್ಣಾವತಿಗೆ ಮುತ್ತಿಕ್ಕುವಂತೆ ಕಾಣುವ ಮೋಡಗಳು ನೋಡುಗರನ್ನ ಮುದಗೊಳಿಸುತ್ತಿದೆ. ವರ್ಷದ ಬಹುತೇಕ ದಿನಗಳು ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಹಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರಿಲ್ಲ. ವೀಕೆಂಡ್ ಬಂದರಂತೂ ನೂರಾರು ಜನ ಈ ರಮಣೀಯತೆಯನ್ನು ಕಣ್ತುಂಬಿ ಕೊಳ್ಳಲು ಆಗಮಿಸುತ್ತಾರೆ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬಿಳಿಗಿರಿ ರಂಗನ ಬೆಟ್ಟವನ್ನು ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ.

    ಒಂದೆಡೆ ಪ್ರಕೃತಿಯ ಮಡಿಲಿನಲ್ಲಿ ಮಲಗಿದ್ದೇವೆ ಎಂಬಂತೆ ಬಾಸವಾದರೆ ಮತ್ತೊಂದೆಡೆ ತುಂಬಿರುವ ಸುವರ್ಣಾವತಿ ಜಲಾಶಯ ಮುದ ನೀಡುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುವರ್ಣಾವತಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನೀಲಿ ನಕ್ಷೆ ತಯಾರಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ. ಚಾಮರಾಜನಗರದಿಂದ 20 ಕಿ.ಮೀ. ದೂರದಲ್ಲಿರುವ ಸುವರ್ಣಾವತಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಕರ್ಯವಿದ್ದರೂ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡ ಬಹುದು ಎಂಬುದು ಸ್ಥಳೀಯ ಆಗ್ರಹವಾಗಿದೆ.