Tag: ಸುವರ್ಣಸೌಧ

  • ಬೇಲಿ ಹಾರಿಯಾದರೂ ಸುವರ್ಣಸೌಧ ಮುತ್ತಿಗೆ – ಸರ್ಕಾರಕ್ಕೆ ಕೋಡಿಹಳ್ಳಿ ಗಡುವು

    ಬೇಲಿ ಹಾರಿಯಾದರೂ ಸುವರ್ಣಸೌಧ ಮುತ್ತಿಗೆ – ಸರ್ಕಾರಕ್ಕೆ ಕೋಡಿಹಳ್ಳಿ ಗಡುವು

    ಬೆಳಗಾವಿ: ಕೇಂದ್ರದಂತೆ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವ ಬಗ್ಗೆ ಇಂದು ಮಧ್ಯಾಹ್ನ 2.30ರೊಳಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಬೇಲಿ ಹಾರಿಯಾದರೂ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಳಗಾವಿಯ ಸುವರ್ಣಸೌಧ ಎದುರಿರುವ ಕೊಂಡಸಕೊಪ್ಪದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ನಾವು ಬೆಳಗ್ಗೆ 11 ಘಂಟೆಯಿಂದ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ಕೂಡಲೇ ಸ್ಥಳಕ್ಕೆ ಬಂದು ನಮ್ಮ ಜೊತೆಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ

    ಹರಿಕಥೆ ಕೇಳೋಕೆ ಬಂದಿಲ್ಲ: ಸರ್ಕಾರದ ಪ್ರತಿನಿಧಿಗಳು ಇಲ್ಲಿಗೆ ಬರದಿದ್ದರೆ ನಾವು ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಮ್ಮನ್ನು ಯಾರು ತಡೆಯುತ್ತಾರೆ ನೋಡುತ್ತೇವೆ. ಪೊಲೀಸರ ಕಣ್ಣು ತಪ್ಪಿಸಿ ಸುವರ್ಣ ಸೌಧಕ್ಕೆ ಹೋಗಲೇಬೇಕು. ನಾವು ಇಲ್ಲಿ ಹರಿಕಥೆ ಕೇಳಲು ಬಂದಿಲ್ಲ, ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

     

    ತೀವ್ರಗೊಂಡ ರೈತರ ಹೋರಾಟ: ವಿನೂತನವಾಗಿ ಪ್ರತಿಭಟನೆ ಮಾಡಿ ಅನ್ನದಾತರು ಸರ್ಕಾರದ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಡೊಳ್ಳು ಬಾರಿಸಿ, ರೈತಗೀತೆಗಳನ್ನ ಹಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ.

  • ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ

    ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ

    ಬೆಳಗಾವಿ: ಕೇಂದ್ರದಂತೆ ರಾಜ್ಯ ಸರ್ಕಾರವೂ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸುವರ್ಣಸೌಧ ಮುತ್ತಿಗೆಗೆ ಯತ್ನಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನಾ ಅಧ್ಯಕ್ಷ ಕೂಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಜಮಾವನೆಗೊಂಡಿದ್ದ ರೈತರು ಸುವರ್ಣಸೌಧದವರೆಗೆ ಪಾದಯಾತ್ರೆಗೆ ನಿರ್ಧರಿಸಿದ್ದರು. ಪಾದಯಾತ್ರೆಗೂ ಮುನ್ನ ಹಿರೇಬಾಗೇವಾಡಿಯ ಬಸವೇಶ್ವರ ಪುತ್ಥಳಿಗೆ ಕೋಡಿಹಳ್ಳಿ ಚಂದ್ರಶೇಖರ ಮಾಲಾರ್ಪಣೆಗೆ ಮುಂದಾದರು. ಆಗ ರೈತರನ್ನು ವಶಕ್ಕೆ ಪಡೆದ ಪೊಲೀಸರು ಒತ್ತಾಯಪೂರ್ವಕವಾಗಿ ಬಸ್ಸಿನಲ್ಲಿ ಹತ್ತಿಸಿದರು. ಬಳಿಕ ಸುವರ್ಣಸೌಧ ಎದುರಿನ ಕೊಂಡುಸಕೊಪ್ಪ ಪ್ರತಿಭಟನಾ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದವೂ ನಡೆಯಿತು. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

    ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ:
    ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿದರು. ರೈತರ ವಿರೋಧಿ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ರೈತ ಹೋರಾಟಗಾರ್ತಿ ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು. ಕೊಂಡುಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ. ಹೋರಾಟದ ರೂಪರೇಷೆಗಳ ಬಗ್ಗೆ ರೈತರು ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತವರು ಜಿಲ್ಲೆಯ ಅಧಿವೇಶನಕ್ಕೂ ಬರಲಿಲ್ಲ ರಮೇಶ್ ಜಾರಕಿಹೊಳಿ!

  • ನಾಳೆ ಸುವರ್ಣಸೌಧ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್

    ನಾಳೆ ಸುವರ್ಣಸೌಧ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್

    ಬೆಳಗಾವಿ: ನಾಳೆ ನಡೆಯುವ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಸುವರ್ಣ ಸೌಧ ಮುತ್ತಿಗೆ ಹಾಕಲಾಗುತ್ತದೆ. ಕೃಷಿ ಕಾಯ್ದೆ ವಾಪಸ್ ಪಡೆಯುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ಸುಮ್ಮನೆ ಕೈ ಕಟ್ಟಿ ಕುಳಿತು ಕೊಳ್ಳುವ ಮಾತೇ ಇಲ್ಲ. ಅರೆಸ್ಟ್ ಮಾಡಿದರೂ ಹೆದರಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತ ವಿರೋಧಿ ಕೃಷಿ ಕಾಯ್ದೆ ಕೇಂದ್ರ ಸರ್ಕಾರವೇ ಹಿಂಪಡೆದಿದೆ. ರಾಜ್ಯ ಸರ್ಕಾರವೂ ಕೂಡಾ ವಾಪಸ್ ಪಡೆಯಬೇಕು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಕೃಷಿ ಕಾಯ್ದೆಯನ್ನ ಜಾರಿಗೊಳಿಸಿದ್ದಾರೆ. ಭಾರತ ಸರ್ಕಾರ ರೈತರ ಒಂದು ವರ್ಷ ಹೋರಾಟ ನೋಡಿ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ರಾಜ್ಯ ಸರ್ಕಾರವೂ ಕೂಡ ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯುತ್ತಾರೆ ಅಂತಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಈ ಅಧಿವೇಶನದಲ್ಲಿ ಈ ವಿಷಯ ಮಂಡನೆ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೇವೆ. ಆದರೆ ಸರ್ಕಾರದ ನಡುವಳಿಕೆ ಬದಲಾಗಿ ಕಾಣುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಕೇಂದ್ರ ಸರ್ಕಾರ ವಾಪಸ್ ಪಡೆದರೆ ರಾಜ್ಯ ಸರ್ಕಾರ ವಾಪಸ್ ಪಡೆಬೇಕು ಅಂತ ಕಾನೂನು ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಚಿವ ಮಾಧುಸ್ವಾಮಿ ರೈತರಿಗೆ ಕಾನೂನು ಪಾಠ ಹೇಳುತ್ತಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯದೇ ಇದ್ದರೆ, ಬಿಜೆಪಿ ಕಾರ್ಯಕ್ರಮ ಎಲ್ಲಿ ಇರುತ್ತದೆ ಅಲ್ಲಲ್ಲಿ ಕಪ್ಪು ಬಾವುಟ ಹಿಡಿದು ರೈತರು ಪ್ರತಿಭಟನೆ ಮಾಡುತ್ತೇವೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ದಿಲ್ಲಿ ಮಾದರಿಯ ರೈತ ಹೋರಾಟ ಮಾಡುತ್ತೇವೆ. ಮಹಾಪಂಚಾಯತ ಸಭಾ ಕಾರ್ಯಕ್ರಮ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇದರ ಪರಿಣಾಮ ಎದುರಿಸಲು ತಯಾರಾಗಬೇಕು. ಎಂದು ಈ ಮುಲಕ ಸಂದೇಶ ನೀಡುತ್ತೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

  • ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ವಿಶೇಷ ಅಭಿಯಾನ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲೂ ಗೀತಾ ಗಾಯನ ನಡೆಯಿತು.

    ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೇ ಶುರುವಾಗಿದೆ. ಅದಕ್ಕೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಅಭಿಯಾನ ನಿಮಿತ್ತ ವಿಶ್ವದ್ಯಾಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ ನಡೆಸಲಾಯಿತು. ಇದನ್ನೂ ಓದಿ: ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ಬೆಳಗಾವಿಯ ಸುವರ್ಣಸೌಧದ ಮುಂಭಾಗದ ಆರಂಭದಲ್ಲಿ ಕನ್ನಡ ಗೀತ ಗಾಯನಕ್ಕೆ ಸಂಸದೆ ಮಂಗಲ ಅಂಗಡಿ, ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ, ಜಿ.ಪಂ.ಸಿಇಓ ದರ್ಶನ್ ಸೇರಿದಂತೆ ಹಲವು ಅಧಿಕಾರಿಗಳು ಹಳದಿ-ಕೆಂಪು ಬಣ್ಣದ ಬಲೂನ್‍ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.

    ಇದೇ ವೇಳೆ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಅಲ್ಲಿ ನೆರೆದಿದ್ದವರು ಸಂಕಲ್ಪ ಮಾಡಿದರು. ಇದನ್ನೂ ಓದಿ:  ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ

  • ಚಳಿಗಾಲದ ಅಧಿವೇಶನಕ್ಕಾಗಿ ಭೂರಿ ಭೋಜನ ವ್ಯವಸ್ಥೆ!

    ಚಳಿಗಾಲದ ಅಧಿವೇಶನಕ್ಕಾಗಿ ಭೂರಿ ಭೋಜನ ವ್ಯವಸ್ಥೆ!

    ಬೆಳಗಾವಿ: ಚಳಿಗಾಲದ ಅಧಿವೇಶನ ಸುವರ್ಣ ಸೌಧದಲ್ಲಿ ಆರಂಭವಾಗಿದ್ದು, ಇತ್ತ ಸದನದಲ್ಲಿ ಭಾಗವಹಿಸುವ ಶಾಸಕರು ಹಾಗೂ ಸಚಿವರಿಗಾಗಿ ಸುವರ್ಣಸೌಧದಲ್ಲಿ ಮೃಷ್ಟಾನ ಭೋಜನ ತಯಾರಾಗಿದೆ.

    ಸದನ ವಿಶೇಷವಾಗಿ ಎರಡು ಬಗೆಯ ಪಲ್ಯ, ಕ್ಯಾಪ್ಸಿಕಂ ಮಸಾಲಾ, ಗ್ರೀನ್ ಬಟಾಣಾ ಮಸಾಲಾ, ಹೆಸರು ಬೇಳೆ ಪಾಯಸ ಸಿದ್ಧವಾಗಿದೆ. ಇದರೊಂದಿಗೆ ಸಾಂಬಾರ್, ಎರಡು ಬಗೆಯ ಅನ್ನ, ಮಸಾಲಾ ರೈಸ್ ಮತ್ತು ವೈಟ್ ರೈಸ್. ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಪುಡಿ, ಉಪ್ಪಿನ ಕಾಯಿ, ಹಪ್ಪಳವನ್ನ ಸಿದ್ಧಪಡಿಸಲಾಗುತ್ತಿದೆ.

    ಅಧಿವೇಶನದಲ್ಲಿ 50 ಮಂದಿ ಅಡುಗೆಭಟ್ಟರು ಭೋಜನ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಮುಖವಾಗಿ ಈ ಬಾರಿ ಅಧಿವೇಶನದ ಭೋಜನ ಪಟ್ಟಿಯಲ್ಲಿ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಶೈಲಿಯ ಭೋಜನ ತಯಾರಿ ನಡೆದಿದೆ.

    ಕಳೆದ ಬಾರಿಯ ಅಧಿವೇಶನದಲ್ಲಿ ಆಹಾರದಲ್ಲಿ ವ್ಯತ್ಯಯವಾಗಿ ಶಾಸಕರಿಗೆ ತೊಂದರೆಯಾಗಿತ್ತು. ಇದರ ಪರಿಣಾಮವಾಗಿ ಈ ಬಾರಿ ಅಧಿವೇಶನಕ್ಕೂ ಮುನ್ನವೇ ಊಟದ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು ಹಾಗೂ ಬೆಂಬಲಿಗರು ಸರ್ಕಾರಿ ಹಣದಲ್ಲಿ ದುಂದು ವೆಚ್ಚ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಎಲ್ಲ ಶಾಸಕ, ಸಚಿವರಿಗೆ ಈ ಬಾರಿ ಬೆಳಗಾವಿಯಲ್ಲಿಯೇ ವಸತಿ ವ್ಯವಸ್ಥೆ ಮಾಡಲಾಗಿದ್ದು, ಅಧಿವೇಶನಕ್ಕಾಗಿ ಭಾವಹಿಸುವ ಶಾಸಕರು ಉಳಿದುಕೊಳ್ಳುವ ಹೋಟೆಲ್ ಗಳ ಹೆಚ್ಚುವರಿ ಊಟೋಪಹಾರದ ಮೊತ್ತವನ್ನು ಅವರೇ ಭರಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಧಿವೇಶನದ ಆರಂಭದಂದೇ ಸುವರ್ಣಸೌಧದ ಮುಂಭಾಗದಲ್ಲಿ ಹೆಬ್ಬಾವು ಪ್ರತ್ಯಕ್ಷ

    ಅಧಿವೇಶನದ ಆರಂಭದಂದೇ ಸುವರ್ಣಸೌಧದ ಮುಂಭಾಗದಲ್ಲಿ ಹೆಬ್ಬಾವು ಪ್ರತ್ಯಕ್ಷ

    ಬೆಳಗಾವಿ: ಸುವರ್ಣಸೌಧದ ಮುಖ್ಯದ್ವಾರದ ಹೊರ ಪೊಲೀಸ್ ಠಾಣೆ ಬಳಿ ಇಂದು ಹೆಬ್ಬಾವು ಪ್ರತ್ಯಕ್ಷವಾಗಿ ಪೊಲೀಸರನ್ನು ಗಾಬರಿಗೊಳಿಸಿದೆ.

    ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿದ್ದ ಚರಂಡಿಯ ಒಳಗೆ ಹೆಬ್ಬಾವು ಪತ್ತೆಯಾಗಿದೆ. ಸುಮಾರು ನಾಲ್ಕೂವರೆ ಅಡಿ ಉದ್ದವಿರುವ ಹೆಬ್ಬಾವನ್ನು ಕಂಡು ಜನರು ಭಯಬಿದ್ದಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿರುವ ಕಾರಣಕ್ಕೆ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ.

    ಸ್ಥಳಕ್ಕೆ ಹಾವು ಹಿಡಿಯಲು ಉರಗ ತಜ್ಞರು ಆಗಮಿಸಿದ್ದು, ಹೆಬ್ಬಾವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾವನ್ನು ನೋಡಲು ಮುಗಿಬಿದ್ದು ಬರುತ್ತಿದ್ದಾರೆ. ಇದರಿಂದ ಹೆಬ್ಬಾವನ್ನು ಹಿಡಿಯಲು ಕಷ್ಟವಾಗಬಹುದು ಎಂದು ಪೊಲೀಸರು ತುಸು ದೂರದಲ್ಲಿ ನಿಂತು ವೀಕ್ಷಿಸುವಂತೆ ಜನರನ್ನು ತಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    -ಪ್ರತಿಪಕ್ಷದ ಅಸ್ತ್ರವಾಗಲಿದೆ ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ
    -ಶಾಸಕರಿಗೆ ಮಧ್ಯಾಹ್ನದ ಊಟ, ವಸತಿ ವ್ಯವಸ್ಥೆ ಅಷ್ಟೇ

    ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು, ಅನೇಕ ವಿಷಯಗಳ ಚರ್ಚೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

    ರೈತರ ನೂರೆಂಟು ಸಮಸ್ಯೆಗಳ ನಡುವೆ ಅಧಿವೇಶನ ನಡೆಸುತ್ತಿದ್ದು, ಮೈತ್ರಿ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಅಧಿವೇಶನವು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗೆ ವೇದಿಕೆಯಾಗಲಿದೆ. ರೈತರು ಮತ್ತು ಕಬ್ಬು ಬೆಳೆಗಾರರ ಸಮಸ್ಯೆ, ಸಾಲಮನ್ನಾ ವಿಳಂಬ, ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷ ಬಿಜೆಪಿವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಅಸ್ತ್ರಗಳಿಗೆ ತಕ್ಕ ಪ್ರತಿ ಅಸ್ತ್ರ ಹೂಡಲು ಸರ್ಕಾರವೂ ಸಜ್ಜುಗೊಂಡಿದೆ.

    ಸುವರ್ಣಸೌಧದ ಎದುರು ರೈತರು, ಕಬ್ಬು ಬೆಳೆಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಮಠಾಧೀಶರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರೂ ಈ ಪ್ರತಿಭಟನೆ ಬೆಂಬಲಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರಿಗೆ ಸರ್ಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಮೈತ್ರಿ ಸರ್ಕಾರವು ಮೊದಲ ದಿನವೇ ಭಾರೀ ಪ್ರತಿಭಟನೆಯ ಶಾಕ್ ಎದುರಿಸಬೇಕಾಗುತ್ತದೆ.

    ಅಧಿವೇಶನ ನಿರ್ವಹಣೆಗೆ ಸೂಕ್ತ ಭದ್ರತೆ ಒದಗಿಸಿದ್ದು, 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಎದುರಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಸುವರ್ಣಸೌಧದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ.

    ವಿಶೇಷಾಧಿಕಾರಿ ನೇಮಕ:
    ಅಧಿವೇಶನ ಪಾರದರ್ಶಕವಾಗಿರಲು ಹಾಗೂ ಸರ್ಕಾರದ ಹಣ ದುರುಪಯೋಗವಾಗದಿರಲು ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಲಾಪ ಹೊರಗಿನ ನಿರ್ವಹಣಾ ಸಮಿತಿಗಳು ಪ್ರತಿಯೊಂದು ಖರ್ಚಿಗೂ ಉಜ್ವಲ್ ಕುಮಾರ್ ಘೋಷ್ ಅವರ ಮೂಲಕವೇ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ದುಂದು ವೆಚ್ಚಕ್ಕೆ ಕತ್ತರಿ:
    ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಆಶಯದಂತೆ ಈ ಬಾರಿ ಅಧಿವೇಶನದಲ್ಲಿ ಅನಗತ್ಯ ವೆಚ್ಚ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ವೆಚ್ಚದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಅಧಿವೇಶನದಲ್ಲಿ ಶಾಸಕರ ಊಟದ ಮೆನು ಬದಲಾಯಿಸಲಾಗಿದೆ. ಹಿಂದಿನ ಅಧಿವೇಶನಗಳಂತೆ ಇಲ್ಲಿಯ ಊಟದಿಂದ ಆರೋಗ್ಯದಲ್ಲಿ ಏರುಪೇರು ಆಗದಿರಲು ಆಯಾ ಭಾಗದ ಊಟದ ವ್ಯವಸ್ಥೆ ಮಾಡಲಾಗಿದೆ.

    ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ಸರ್ಕಾರ ಈ ಬಾರಿ ಕೇವಲ ಮಧ್ಯಾಹ್ನದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬೆಳಗಿನ ತಿಂಡಿ ಮತ್ತು ರಾತ್ರಿ ಊಟವನ್ನು ಶಾಸಕರು ತಮಗೆ ಸಿಗುವ ಭತ್ಯೆಯಲ್ಲಿಯೇ ಸೇವಿಸಬೇಕು. ತಮ್ಮ ಪಿಎ, ಗನ್ ಮ್ಯಾನ್ ಗಳು, ಡ್ರೈವರ್ ಗಳ ಊಟಕ್ಕೂ ಶಾಸಕರೇ ಭರಿಸಬೇಕು. ಅಷ್ಟೇ ಅಲ್ಲದೆ ಶಾಸಕರಿಗೆ ಮಾತ್ರ ರೂಂ ವ್ಯವಸ್ಥೆ ಮಾಡಲಾಗಿದೆ.

    ಸಚಿವಾಲಯ ಶಿಫ್ಟ್:
    ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ಪರಿಷತ್‍ನ ಎರಡೂ ಸಚಿವಾಲಯ ಸುವರ್ಣಸೌಧಕ್ಕೆ ಶಿಫ್ಟ್ ಆಗಿವೆ. ಸುಮಾರು 300 ಸಿಬ್ಬಂದಿ ಶನಿವಾರದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಕೆಲಸ ಆರಂಭಿಸಿದ್ದಾರೆ. ಅಧಿವೇಶನದಲ್ಲಿ ಸುಮಾರು ಐದು ಸಾವಿರ ಅಧಿಕಾರಿ ವರ್ಗ, ಶಾಸಕರು ಹಾಗೂ ಪತ್ರಕರ್ತರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ನಿಯೋಜಿತರಾಗುವ ಕನಿಷ್ಠ ಪೊಲೀಸ್ ಸಿಬ್ಬಂದಿಗೂ ಈ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಡೀ ಅಧಿವೇಶನದ ವೆಚ್ಚವನ್ನು 17.57 ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ – ಸ್ವಾಮೀಜಿಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭ

    ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ – ಸ್ವಾಮೀಜಿಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭ

    ಬೆಳಗಾವಿ: ಚಳಿಗಾಲದ ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ ತಟ್ಟಲಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಶುರುವಾಗಿದೆ.

    ನಗರದ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಹತ್ತು ದಿನಗಳ ಒಳಗೆ 10 ಇಲಾಖೆ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಎಳಲಿದೆ. ಉತ್ತರ ಕರ್ನಾಟಕದ ಯಾವ ಶಾಸಕರು ಅಧಿವೇಶನಕ್ಕೆ ಗೈರಾಗಬಾರದು. ಪಕ್ಷಭೇದ ಮರೆತು ಎಲ್ಲರೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಧ್ವನಿಯಾಗಬೇಕು ಎಂದು ಹೇಳಿದರು.

    ಇದೇ ವೇಳೆ ಉತ್ತರ ಕರ್ನಾಟಕ ಹೋರಾಟ ಅಭಿವೃದ್ಧಿ ಪರ ಧ್ವನಿ ಎತ್ತುವಂತೆ ಎಲ್ಲ ಶಾಸಕರಿಗೂ ಪತ್ರ ಬರೆಯುವುದರಾಗಿ ಹೇಳಿದರು. ಅಲ್ಲದೇ ಹತ್ತು ದಿನಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟಕ್ಕೆ ಸಿದ್ಧವಾಗುತ್ತೇವೆ. ಒಂದೊಮ್ಮೆ ಸರ್ಕಾರ ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಹೋರಾಟಗಾರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿತ್ತೇವೆ. ಅಲ್ಲದೇ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಮಾಡಲು ಎಲ್ಲಾ ಸ್ವಾಮೀಜಿಗಳ ಬೆಂಬಲವಿದ್ದು, ಪ್ರತ್ಯೇಕ ರಾಜ್ಯ ಹೋರಾಟ ತೀವ್ರಗೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಆಗುತ್ತದೆ ಎಚ್ಚರಿಕೆ ನೀಡಿದರು.

    ಹೋರಾಟಗಾರರ ನಿರ್ಣಯಗಳು:
    1. ಬೆಳಗಾವಿ 2ನೇ ರಾಜಧಾನಿಯಾಗಿ ಘೋಷಣೆ, ಕನ್ನಡ ಸೌಧಕ್ಕೆ ಕಚೇರಿಗಳ ಸ್ಥಳಾಂತರ.
    2. 10 ದಿನ ಬದಲಿಗೆ 21 ದಿನ ಅಧಿವೇಶನ ನಡೆಯಬೇಕು.
    3. ಬೇಡಿಕೆಗಳ ಕುರಿತು ಸ್ವಾಮೀಜಿಗಳು, ಹೋರಾಟಗಾರರ ಜೊತೆ ಸಿಎಂ ಸಭೆ ಮಾಡಬೇಕು.
    4. ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ಅಧಿವೇಶನದಲ್ಲಿ ಅಭಿವೃದ್ಧಿ ಕುರಿತು ಹೋರಾಟ ಮಾಡಬೇಕು.
    5. ಸರ್ಕಾರ ಬೇಡಿಕೆಗಳನ್ನ ಈಡೇರಿಸದಿದ್ದರೆ ಜನರ ಬಳಿ ಹೋಗಿ ಜನಾಗ್ರಹ ಸಂಗ್ರಹಣೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನಗೂ ಮಂತ್ರಿಯಾಗುವ ಆಸೆ ಇತ್ತು, ಆದ್ರೆ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ: ಬಸವರಾಜ ಹೊರಟ್ಟಿ

    ನನಗೂ ಮಂತ್ರಿಯಾಗುವ ಆಸೆ ಇತ್ತು, ಆದ್ರೆ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ: ಬಸವರಾಜ ಹೊರಟ್ಟಿ

    ಗದಗ: ಸಮ್ಮಿಶ್ರ ಸರ್ಕಾರದ ಹೊಂದಾಣಿಕೆಯಲ್ಲಿ ಸಿಎಂ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಂದಾಣಿಕೆ ವೇಳೆ ತೊಂದರೆ ಸಹಜ. ಆದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟ ವಿಚಾರವಾಗಿ ಗದಗ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನಗೂ ಕೂಡ ಮಂತ್ರಿಯಾಗುವ ಆಸೆ ಇತ್ತು. ಆದರೆ ಎಲ್ಲರಿಗೂ ಅವಕಾಶ ನೀಡುವ ದೃಷ್ಠಿಯಿಂದ ಹಿರಿಯರಾದ ನಮ್ಮಂಥವರ ತ್ಯಾಗದ ಅವಶ್ಯಕತೆ ಇದೆ. ಪಕ್ಷದ ಹಿತದೃಷ್ಠಿಯಿಂದ ಅಲ್ಲದಿದ್ದರು ರಾಜ್ಯದ ಹಿತಕ್ಕಾಗಿ ಸಭಾಪತಿಯಾಗಿದ್ದೇನೆ. ಸಭಾಪತಿಯಾಗಲು ನನಗೂ ಮನಸ್ಸಿರಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾನು ಸಭಾಪತಿಯಾದೆ. ನಾನೂ ಶಿಕ್ಷಣ ಮಂತ್ರಿಯಾಗಬೇಕೆಂದು ಇಷ್ಟ ಪಟ್ಟಿದ್ದೆ. ಆದರೆ ಸಭಾಪತಿಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನನ್ನ ಕಾರ್ಯ ನಿರ್ವಹಿಸುತ್ತೆನೆ ಎಂದು ಹೇಳಿದರು.

    ಇದೇ ವೇಳೆ ಮಹದಾಯಿ ಅಥವಾ ಉತ್ತರ ಕರ್ನಾಟಕ ನಿರ್ಲಕ್ಷ್ಯದ ಕುರಿತು ಮಾತನಾಡಿ, ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಸಚಿವರೊಂದಿಗೆ ಸಭೆ ಕರೆದು ಚರ್ಚಿಸಿದ್ದೇನೆ. ಆದಷ್ಟು ಬೇಗ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು. ಅಲ್ಲದೇ ಬೆಳಗಾವಿ ಸುವರ್ಣಸೌಧ ಸದ್ಬಳಕೆಗೆ ಸಿಎಂ ಹಾಗೂ ಸಚಿವರ ಸಭೆ ಕರೆದು ಚರ್ಚಿಸುತ್ತೇನೆ. ವರ್ಷಕ್ಕೆ 60 ದಿನಗಳಾದರು ಸುವರ್ಣಸೌಧದಲ್ಲಿ ಸಭೆ ನಡೆಯುವಂತೆ ಕ್ರಮ ಜರುಗಿಸಲಾಗುವುದು ಎಂದರು.