Tag: ಸುವರ್ಣಭೂಮಿ ವಿಮಾನ ನಿಲ್ದಾಣ

  • ಕುಡಿದು ರನ್‍ವೇನಲ್ಲಿ ಕಾರು ಓಡಿಸಿದ ಭೂಪ- ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ

    ಕುಡಿದು ರನ್‍ವೇನಲ್ಲಿ ಕಾರು ಓಡಿಸಿದ ಭೂಪ- ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ

    ಬ್ಯಾಂಕಾಕ್: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ವಿಮಾನ ಲ್ಯಾಂಡ್ ಆದ ತಕ್ಷಣ ರನ್‍ವೇನಲ್ಲೇ ಕಾರ್ ಓಡಿಸಿರೋ ಘಟನೆ ಬ್ಯಾಂಕಾಕ್‍ನಲ್ಲಿ ನಡೆದಿದೆ. ಕಾರು ಕಂಡ ತಕ್ಷಣ ಭದ್ರತಾ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭದ್ರತಾ ಸಿಬ್ಬಂದಿ ವೈಫಲ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

    ಬ್ಯಾಂಕಾಕ್‍ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಾರಿನ ಚಾಲಕ ಮದ್ಯಪಾನ ಮಾಡಿದ ಪರಿಣಾಮವಾಗಿ ತಪ್ಪು ತಿರುವು ಪಡೆದು ರನ್‍ವೇಯಲ್ಲಿ ಚಲಿಸಿದ್ದಾನೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

    ಈ ಘಟನೆಯ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಅವರು ಹೇಳುವ ಪ್ರಕಾರ, ಕಾರು ರಸ್ತೆ ಬಿಟ್ಟು ಯಾವ ರೀತಿ ರನ್‍ವೇಗೆ ಬಂದಿದೆ ಎಂದು ತಿಳಿದಿಲ್ಲ. ಆದರೆ ಈ ವಿಮಾನ ನಿಲ್ದಾಣ ಪ್ರತಿಷ್ಠಿತ ಕಂಪನಿಗೆ ಸೇರಿರುವುದಾಗಿದ್ದು ಅಲ್ಲಿನ ಭದ್ರತಾ ಸಿಬ್ಬಂದಿಯ ಲೋಪದೋಷ ಎದ್ದುಕಾಣುತ್ತಿದೆ. ಇದು ತುಂಬಾ ಭಯಾನಕವಾದ ದೃಶ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಕಾರು ಚಾಲಕನಿಗೆ ಮದ್ಯದ ಅಮಲು ಜಾಸ್ತಿಯಾಗಿದ್ದ ಕಾರಣ ತಿಳಿಯದೆ ರನ್‍ವೇಗೆ ಕಾರು ಬಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ನಡೆದ ಕೂಡಲೇ ಕಾರಿನ ಚಾಲಕನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಆತ ಮದ್ಯಪಾನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಪ್ರತಿಪತ್ ಮಸಕುಲ್ ಎಂದು ಗುರುತಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸ್ಕ್ವಾಡ್ರನ್ ನಾಯಕ ಸುತಿರಾವತ್ ಸುವನ್ವತ್ ಹೇಳಿದ್ದಾರೆ.

    ಕಾರು ಚಾಲಕ ತಾನು ಕುಡಿದಿರುವುದಾಗಿ ಒಪ್ಪಿಕೊಂಡಿದ್ದು, ಇದರ ಜೊತೆಗೆ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಮಾದಕ ದ್ರವ್ಯ ಸೇವಿಸಿ ಕಾರು ಚಾಲಾಯಿಸಿದ ಕಾರಣ ಪ್ರಕರಣ ದಾಖಲಾಗಿದೆ.