Tag: ಸುಳ್ವಾಡಿ ದುರಂತ

  • ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

    ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

    ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ಎರಡನೇ ಆರೋಪಿ ಅಂಬಿಕಾ ಜಾಮೀನು ಅರ್ಜಿ ಸಲ್ಲಿಸಿದ್ದಾಳೆ.

    ಈ ಹಿಂದೆ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಜಾಮೀನು ಸಿಕ್ಕಿರಲಿಲ್ಲ. ಈಗ ಕೇಸಿನ ಎರಡನೇ ಆರೋಪಿ ಅಂಬಿಕಾ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿನ್ನೆ ಜಾಮೀನಿಗೆ ಅರ್ಜಿ ಸಲ್ಲಿಸಿ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾಳೆ. ಇದನ್ನೂ ಓದಿ: ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

    ಸರ್ಕಾರದ ಪರ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಅ.29ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ. 2018 ರ ಡಿ.14 ರಂದು ನಡೆದಿದ್ದ ಈ ದುರಂತದಲ್ಲಿ 17 ಮಂದಿ ಮೃತಪಟ್ಟು, ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ವಿಷ ಪ್ರಸಾದ ಸೇವಿಸಿದ ಕೆಲವರು ಈಗಲೂ ಅದರ ಅಡ್ಡ ಪರಿಣಾಮದಿಂದ ನರಳುತ್ತಿರುವುದು ಈ ಕೃತ್ಯದ ಭೀಕರತೆಗೆ ಸಾಕ್ಷಿಯಾಗಿತ್ತು.

  • 22 ತಿಂಗಳು ಬಳಿಕ ಭಕ್ತರಿಗೆ ಸುಳ್ವಾಡಿ ಮಾರಮ್ಮನ ದರ್ಶನ

    22 ತಿಂಗಳು ಬಳಿಕ ಭಕ್ತರಿಗೆ ಸುಳ್ವಾಡಿ ಮಾರಮ್ಮನ ದರ್ಶನ

    – ಮೂರು ದಿನ ಹೋಮ, ಹವನ, ಪೂಜೆ

    ಚಾಮರಾಜನಗರ: ವಿಷ ಪ್ರಸಾದ ದುರಂತದಿಂದ ಕಳೆದ 22 ತಿಂಗಳಿಂದ ಬಾಗಿಲು ಮುಚ್ಚಿದ್ದ ಸುಳ್ವಾಡಿ ಕಿಚ್‍ಗುತ್ ಮಾರಮ್ಮನ ದೇವಾಲಯ ಇಂದಿನಿಂದ ಆರಂಭವಾಗಿದೆ. ಅ.21, 22, 23 ರಂದು ಮೂರು ದಿನಗಳ ಕಾಲ ವಿವಿಧ ಪೂಜೆ, ಹೋಮ, ಹವನ ನಡೆಯಲಿದೆ. ಅ.24 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲೂ ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಪೂಜಾ ಕೈಂಕರ್ಯ ನೆರವೇರಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರೋ ಕಿಚ್‍ಗುತ್ ಮಾರಮ್ಮನ ದೇವಾಲಯ ವಿಷ ಪ್ರಸಾದ ದುರಂತದ ನಂತರ ಬಾಗಿಲು ಮುಚ್ಚಿ ಎರಡು ವರ್ಷ ಕಳೆದಿದೆ. ಮಾರಮ್ಮನ ಭಕ್ತರು ಕೂಡ ಯಾವಾಗ ಸುಳ್ವಾಡಿ ಮಾರಮ್ಮನ ದರ್ಶನವಾಗುತ್ತೆ ಅಂತಾ ಕಾದು ಕುಳಿತಿದ್ದರು. ಸರ್ಕಾರ ದೇವಾಲಯ ತೆರೆಯಲು ನಿರ್ಧರಿಸಿದ ನಂತರ ಪೂಜೆ, ಹೋಮ ನಡೆಯುತ್ತಿದೆ.

    ಡಿ.14, 2018 ರಂದು ನಡೆದ ವಿಷ ಪ್ರಸಾದ ದುರಂತದಲ್ಲಿ 17 ಜನ ಸಾವನ್ನಪ್ಪಿದ್ದು, 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದರು. ವಿಷವುಂಡವರ ಬದುಕು ಇಂದಿಗೂ ಕೂಡ ಸಂಕಷ್ಟದಲ್ಲಿರೋದು ವಿಪರ್ಯಾಸ. ವಿಷ ಹಾಕಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಇಂದಿಗೂ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇದೀಗ ಆಗಮಿಕ ಪಂಡಿತರು ಪ್ರೊ.ಮಲ್ಲಣ್ಣ ನೇತೃತ್ವದಲ್ಲಿ ಪೂಜಾ,ಕೈಂಕರ್ಯಗಳು ಇಂದು ಸಂಜೆಯಿಂದಲೇ ಆರಂಭವಾಗಿದೆ.

    ಮೂರು ದಿನದ ಪೂಜಾ ಕೈಂಕರ್ಯದ ವಿವರ: ಇಂದು ದೇವಾಲಯದಲ್ಲಿ ಮೊದಲಿಗೆ ಯೋಗಶಾಲಾ ಪ್ರವೇಶ, ಪುಣ್ಯಾಹ, ಪ್ರವೇಶ ಬಲಿ ಪೂಜೆ ನಡೆಯಲಿದೆ. ಅ.22 ರಂದು ಪಂಚಗವ್ಯಸಾಧನ ಪೂಜೆ, ಪ್ರೋಕ್ಷಣೆ, ದಶದಿಕ್ಪಾಲಕರ ಪೂಜೆ, ನಂದಿ, ಭೈರವೇಶ್ವರ ಗಣಪತಿ ಕಳಸ ಹೋಮ, ಪಾರಯಣ, ಗಣ ಹೋಮ, ರಕ್ಷಾ ಬಂಧನ, ಜಲಾಧಿವಸ ಪೂಜೆ ನಡೆಯಲಿದೆ.

    ಅ.23 ರಂದು ಪುಣ್ಯಾಹ, ವೇದ, ಪಾರಾಯಣ, ಕಳಸ ದುರ್ಗಾ ಕಳಸೆ ಪೂಜೆ ಹಾಗೂ ಸೂಕ್ತ ಪಾರಾಯಣ ಪೂಜೆ ನಡೆಯಲಿದೆ. ಅ.24 ರಂದು ಬೆಳಗ್ಗೆ 11.20 ರಿಂದ 12.15ರ ಶುಭ ಅಭಿಜಿನ್ ಮುಹೂರ್ತದಲ್ಲಿ ಭಕ್ತರಿಗೆ ಮಾರಮ್ಮನ ದರ್ಶನವಾಗುವ ಕುರಿತು ಆಗಮಿಕ ಪಂಡಿತ ಪ್ರೊ.ಮಲ್ಲಣ್ಣ ಮಾಹಿತಿ ನೀಡಿದ್ದಾರೆ. ದೇವಾಲಯದ ಸುತ್ತಲೂ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪೊಲೀಸ್ ಭದ್ರತೆಯ ನಡುವೆ ಪೂಜೆಗಳನ್ನು ಆರಂಭಿಸಲಾಗಿದೆ. ಅಲ್ಲದೇ ಮಾರಮ್ಮನಿಗೆ ನೆರೆಯ ತಮಿಳುನಾಡು ರಾಜ್ಯದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

    ಚಾಮರಾಜನಗರ: ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಅಮಾಯಕ ಭಕ್ತರ ಸಾವಿಗೆ ಕಾರಣನಾಗಿರುವ ಇಮ್ಮಡಿ ಮಹದೇವಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

    ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸುಪ್ರಿಂ ಕೋರ್ಟಿಗೆ ಇಮ್ಮಡಿ ಮಹದೇವಸ್ವಾಮಿ ದುವಾ ಅಸೋಸಿಯೆಟ್ ಮೂಲಕ ನವೆಂಬರ್ 5ರಂದು ಅರ್ಜಿ ಸಲ್ಲಿಸಲಾಗಿತ್ತು. ನವೆಂಬರ್ 21 ರಂದು ಅರ್ಜಿ ಸ್ವೀಕರಿಸಿದ್ದ ನ್ಯಾಯಾಧೀಶರಾದ ಅಜಯ್ ರಸ್ಟೋಗಿ, ಎನ್ ವಿ. ರಮಣ ಮತ್ತು ವಿ.ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಸುದೀರ್ಘ ವಿಚಾರಣೆ ನಡೆಸಿ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

    ಡಿಸೆಂಬರ್ 14, 2018ರಂದು ಕಿಚ್‍ಗುತ್ ಮಾರಮ್ಮ ದೇಗುಲಕ್ಕೆ ಗೋಪುರ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಭಕ್ತರಿಗೆ ನೀಡಿದ ಪ್ರಸಾದಕ್ಕೆ ವಿಷ ಸೇರಿಸಲಾಗಿತ್ತು. ವಿಷ ಮಿಶ್ರಿತ ಆಹಾರ ಸೇವಿಸಿದ್ದ ಭಕ್ತರಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದನು.

    ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಇನ್ನಿಲ್ಲದ ಹರಸಾಹಸ ಮಾಡಿದ್ದನು. ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಪರ ವಕಾಲತ್ತು ವಹಿಸಲು ಸ್ಥಳೀಯವಾಗಿ ಯಾವುದೇ ವಕೀಲರು ಮುಂದೆ ಬಾರದ ಕಾರಣ, ಜಾಮೀನು ಅರ್ಜಿ ವಜಾಗೊಂಡು ರಾಜ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಇಮ್ಮಡಿ ಮಹದೇವಸ್ವಾಮಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಮೂಲಕ ಹೊರ ಬಂದಲ್ಲಿ ಪ್ರಕರಣದ ಸಾಕ್ಷಿಗಳನ್ನ ನಾಶ ಪಡಿಸುವ ಸಂಭವವಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು.

  • ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಚಾಮರಾಜನಗರ: ಸುಳ್ವಾಡಿ ವಿಷ ದುರಂತದ ಪ್ರಕರಣದ ಹಿನ್ನೆಲೆಯಲ್ಲಿ ದೇವರ ದರ್ಶನ ಸಿಗದೇ ಭಕ್ತರು ದೇವಸ್ಥಾನದ ಆವರಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಕಳೆದ 20 ದಿನಗಳಿಂದ ಮಾರಮ್ಮ ದೇವಸ್ಥಾನ ಬಂದ್ ಆಗಿದ್ದು, ಯಾವುದೇ ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ನೀಡುತ್ತಿಲ್ಲ. ಇಷ್ಟು ದಿನ ಸಾವಿರಾರು ಭಕ್ತರು ನಿನ್ನ ಅಂಗಳದಲ್ಲಿ ತುಂಬಿ ತುಳುಕುತ್ತಿದ್ದರು. ನಿನ್ನ ಪ್ರಸಾದಕ್ಕೆ ವಿಷ ಹಾಕಿ ನಿನಗೆ ಕೆಟ್ಟ ಹೆಸರು ತಂದರಲ್ಲವ್ವಾ ತಾಯಿ. ವಿಷ ಹಾಕುವಾಗಲೇ ಆ ವಿಷ ನುಂಗಿ ಅವರಿಗೆ ಕಚ್ಚಬಾರದಿತ್ತಾ ತಾಯಿ ಎಂದು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತೆ ಕಣ್ಣೀರಿಡುತ್ತಿದ್ದಾರೆ.

    ಇತ್ತ ಸುಳ್ವಾಡಿಗೆ ಮುಜರಾಯಿ ಸಚಿವ ಪರಮೇಶ್ವರ್ ನಾಯಕ್ ಭೇಟಿ ನೀಡಿ, ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಶೀಘ್ರದಲ್ಲೇ ತೀರ್ಮಾನ ಮಾಡಲಗುವುದು. ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ದೇವಸ್ಥಾನದ ಟ್ರಸ್ಟಿಗಳು ಪತ್ರ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಸಹಮತವೂ ಇದೆ. ಇದೆಲ್ಲವನ್ನು ಕ್ರೋಢೀಕರಿಸಿ ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಕೈಗೊಳ್ಳತ್ತದೆ. ರಾಜ್ಯದ ಇತರ ದೇವಸ್ಥಾನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    -ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಸಂಬಂಧವಿಲ್ಲ-ಹಿರಿಯ ಶ್ರೀಗಳು

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವ ಸ್ವಾಮೀಜಿ ನೋಡಿಕೊಳ್ಳುತ್ತಿದ್ದ ಆಸ್ತಿ ಇದೀಗ ಏನ್ ಆಗುತ್ತೆ ಅನ್ನೋದು ಭಕ್ತರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಮಠದ ಹಿರಿಯ ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ.

    ಸುಳ್ವಾಡಿ ವಿಷ ದುರಂತ ನಡೆದು ಇವತ್ತಿಗೆ 12ನೇ ದಿನ. ವಿಷ ಪ್ರಸಾದ ತಿಂದು ಇದುವರೆಗೂ ಬರೋಬ್ಬರಿ 17 ಜನರು ಸಾವ್ನಪ್ಪಿದ್ದಾರೆ. ಅಸ್ವಸ್ಥರಾದವ್ರು ದಿನ ಬಿಟ್ಟು ದಿನ ಒಬ್ಬೊಬ್ಬರು ಸಾವನ್ನಪ್ಪುತ್ತಿದ್ದಾರೆ. ವಿಷವಿಕ್ಕಿದ ನಾಲ್ವರು ಪೊಲೀಸ್ ಅತಿಥಿಯಾಗಿದ್ದಾರೆ. ಇದರ ನಡುವೆ ಮಲೆಮಹದೇಶ್ವರ ಬೆಟ್ಟದಲ್ಲಿರುವ ಪ್ರತಿಷ್ಠಿತ ಸಾಲೂರು ಮಠದಲ್ಲೀಗ ನೀರವ ಮೌನ ಆವರಿಸಿದೆ.

    ಸಾಲೂರು ಮಠದ ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮ, ವಸತಿ ನಿಲಯಗಳು, ಅನಾಥಾಶ್ರಮ, ತೋಟ ಸೇರಿದಂತೆ ಇನ್ನಿತರ ಆಸ್ತಿಗಳು ಮಠದ ಹೆಸರಿನಲ್ಲಿ ಇವೆ. ಈ ಆಸ್ತಿಯನ್ನು, ಸಾಲೂರು ಮಠದ ಬಹುತೇಕ ವ್ಯವಹಾರವನ್ನು ಇಮ್ಮಡಿ ಮಹದೇವ ಸ್ವಾಮೀಜಿ ಇಷ್ಟು ದಿನ ನೋಡಿಕೊಳ್ತಿದ್ರು. ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಇಮ್ಮಡಿ ಮಹದೇವಸ್ವಾಮೀಜಿ ನಂತರ ಇದನ್ನ ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ.

    ಇನ್ನೊಂದೆಡೆ ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ. ಇಮ್ಮಡಿ ಮಹದೇವ ಸ್ವಾಮೀಜಿ ಅಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿ ಈ ಕೃತ್ಯ ಎಸಗಿ ಜೈಲಿಗೆ ಹೋಗಿದ್ದಾರೆ. ಇಷ್ಟು ದಿನ ಮಠದ ವ್ಯವಹಾರವನ್ನು ಅವರು ನೋಡಿಕೊಳ್ಳುತ್ತಿದ್ದರು. ಇದೀಗ ಈ ಬಗ್ಗೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುವುದು. ಮಾದಪ್ಪನೇ ಇಮ್ಮಡಿ ಮಹದೇವ ಸ್ವಾಮೀಜಿಗೆ ದಾರಿ ತೋರಿಸಿದ್ದಾನೆ ಎಂದು ಹಿರಿಯ ಶ್ರೀಗಳು ಹೇಳಿದ್ದಾರೆ.

    ಒಟ್ಟಾರೆ ತನ್ನ ಸ್ವಾರ್ಥಕ್ಕೆ ನರರೂಪದ ರಾಕ್ಷಸನಾಗಿದ್ದ ಸ್ವಾಮೀಜಿಯಿಂದಾಗಿ ಇಡೀ ಮಠಕ್ಕೆ ಕಳಂಕ ಬಂದಿದ್ದು, ಮಠದ ಆಸ್ತಿ ವಿಚಾರದಲ್ಲೂ ಕೂಡ ಭಕ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಆದ್ರೆ ಹಿರಿಯ ಸ್ವಾಮೀಜಿ ಮಠದ ಆಡಳಿತವನ್ನು ತಾವೇ ಸಮರ್ಥವಾಗಿ ನಡೆಸುತ್ತೇನೆ ಎಂದಿರೊದು ಭಕ್ತರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರು ಹೊತ್ತಿದ್ದ ಹರಕೆಯನ್ನು ಇಂದು ತೀರಿಸಿದ್ದಾರೆ.

    ಕನಕಪುರದ ನಾಗೇಶ ಹರಕೆ ಹೊತ್ತಿದ್ದ ಭಕ್ತ. ಇವರು ವಿಷ ಹಾಕಿದ ಪಾಪಿಗಳು ಸಿಗಲೆಂದು ಹರಕೆ ಹೊತ್ತಿದ್ದರು. ವಿಷ ಹಾಕಿದ ಪಾಪಿಗಳು 150 ಗಂಟೆಯೊಳಗೆ ಸಿಕ್ಕರೆ 51 ಕಾಯಿ ಒಡೆಯುತ್ತೇನೆಂದು ದೇವರ ಮುಂದೆ ಪ್ರಾರ್ಥನೆ ಮಾಡಿದ್ದರು.

    ವಿಷ ಹಾಕಿದ ಪಾಪಿಗಳು ಬಂಧನವಾದ ಬೆನ್ನಲ್ಲೇ ಇದೀಗ ನಾಗೇಶ್, ಸುಳ್ವಾಡಿ ಮಾರಮ್ಮ ದೇವಸ್ಥಾನದ ಮುಂದೆ ಕಾಯಿ ಒಡೆದು ತಾವು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ. ಇದೇ ವೇಳೆ ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಸಲ್ಲಿಸಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಈ ದೇವಸ್ಥಾನಕ್ಕೆ ನಾವು ಕಳೆದ 15 ವರ್ಷಗಳಿಂದ ಬರುತ್ತಿದ್ದೇವೆ. 2008-09ರಿಂದ ದೇವಸ್ಥಾನಕ್ಕೆ ಜಾಸ್ತಿ ಬರುತ್ತಿದ್ದೇನೆ. ಈ ದೇವಸ್ಥಾನಕ್ಕೆ ಬಂದ ಬಳಿಕ ನನಗೆ ತುಂಬಾನೇ ಅನುಕೂಲವಾಗಿದೆ. ಕನಕಪುರ-ಬೆಂಗಳೂರು ಮಧ್ಯೆ ಬಿಡದಿ ತಟ್ಟೆ ಇಡ್ಲಿ ಅಂತ ನಮ್ಮದು ಹೋಟೆಲ್ ಇದೆ. ಅಂದು ಅದ್ಯಾರೋ 5 ಮಂದಿ ಸಮುಂಗಲೆಯರು ಮಹದೇಶ್ವರ ಬೆಟ್ಟಕ್ಕೆ ಹೋಗಿ 8 ಗಂಟೆ ಸುಮಾರಿಗೆ ನಮ್ಮ ಹೊಟೇಲ್ ಗೆ ಬಂದಿದ್ದರು. ಆವಾಗ ನನಗೆ ಮದುವೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಕಿಚ್ ಗುತ್ ಮಾರಮ್ಮನ ದೇವಸ್ಥಾನಕ್ಕೆ ಹೋಗು, ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಹೀಗಾಗಿ ಇಲ್ಲಿಗೆ ಬರಲು ಆರಂಭಿಸಿದೆ. ಹಾಗೆಯೇ ಮನೆ ಕಟ್ಟಿಸಿದೆ, ಹೋಟೆಲ್ ಮಾಡಿದೆ. ರೇಷ್ಮೆನೂ ಬೆಳೆಯುತ್ತಿದ್ದೇನೆ. ಇವುಗಳ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದೇನೆ ಅಂದ್ರು.

    ಪ್ರಸಾದಕ್ಕೆ ವಿಷ ಹಾಕಿದ ವಿಚಾರ ನನಗೆ ತುಂಬಾನೇ ಬೇಸರ ತಂದಿದೆ. ಹೋದ ವಾರ ನಾವು ಬರಬೇಕಿತ್ತು. ಆದ್ರೆ ಬಂದಿರಲಿಲ್ಲ. ಒಂದು ವೇಳೆ ಬರುತ್ತಿದ್ದರೆ ನಾವೂ ಇರುತ್ತಿರಲಿಲ್ಲ. ಹೀಗಾಗಿ ಹೋದ ವಾರವೇ ನಾನು ಹರಕೆ ಕಟ್ಟಿಕೊಂಡೆ. 150 ಗಂಟೆಯಲ್ಲಿ ವಿಷ ಹಾಕಿದೋರು ಸಿಕ್ಕಿಬಿಟ್ರೆ ನಾನು 51 ಕಾಯಿ ಒಡೆಯುತ್ತೀನಿ ಎಂದು ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಂದು 51 ಕಾಯಿ ಒಡೆದಿದ್ದೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv