Tag: ಸುಳ್ಳು ಕೇಸ್

  • ಸುಳ್ಳು ರೇಪ್ ಕೇಸ್ ವಿರುದ್ಧ 10 ವರ್ಷ ಹೋರಾಡಿ 15 ಲಕ್ಷ ಪರಿಹಾರ ಗೆದ್ದ ಯುವಕ

    ಸುಳ್ಳು ರೇಪ್ ಕೇಸ್ ವಿರುದ್ಧ 10 ವರ್ಷ ಹೋರಾಡಿ 15 ಲಕ್ಷ ಪರಿಹಾರ ಗೆದ್ದ ಯುವಕ

    – ಮಗುವಿನ ಡಿಎನ್‍ಎಯಿಂದ ಬಯಲಾಯ್ತು ಯುವತಿಯ ಕಳ್ಳಾಟ
    – ಡ್ರೈವಿಂಗ್ ಲೈಸನ್ಸ್ ಸಿಗದೇ ಪರದಾಡಿದ್ದ ನಿರಪರಾಧಿ

    ಚೆನ್ನೈ: 10 ವರ್ಷಗಳ ಕಾಲ ಸುಳ್ಳು ರೇಪ್ ಪ್ರಕರಣದ ವಿರುದ್ಧ ಹೋರಾಡಿದ ಯುವಕನಿಗೆ ಯುವತಿಯು 15 ಲಕ್ಷ ಪರಿಹಾರ ನೀಡುವಂತೆ ಚೆನ್ನೈ ಕೋರ್ಟ್ ಆದೇಶ ನೀಡಿದೆ.

    ಆಸ್ತಿ ವಿವಾದ ಮತ್ತು ಕುಟುಂಬ ವೈಷಮ್ಯದ ಹಿನ್ನೆಲೆಯಿಂದ ಯುವತಿ ಮತ್ತು ಆಕೆಯ ಕುಟುಂಬದವರು ಸೇರಿಕೊಂಡು ಎಂಜಿನಿಯರಿಂಗ್ ಓದುತ್ತಿದ್ದ ಸಂತೋಷ್ ಮೇಲೆ ಸುಳ್ಳು ರೇಪ್ ಕೇಸ್ ಹಾಕಿದ್ದರು. ಈ ಕೇಸಿನಲ್ಲಿ ಸಂತೋಷ್ ನಿರಪರಾಧಿ ಎಂದು 2016ರಲ್ಲಿ ತೀರ್ಪು ಬಂದಿತ್ತು. ನಂತರ ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದು, ಕೋರ್ಟ್ ಆತನಿಗೆ 15 ಲಕ್ಷ ಪರಿಹಾರ ಕೊಡಿಸಿದೆ.

    ಏನಿದು ಪ್ರಕರಣ?
    ಸಂತೋಷ್ ಮತ್ತು ಆ ಯುವತಿ ಒಂದೇ ಸಮುದಾಯರಾಗಿದ್ದು, ಅವರಿಬ್ಬರಿಗೂ ಮದುವೆ ಮಾಡಲು ಎಂದು ಎರಡು ಕುಟುಂಬಗಳು ಮಾತನಾಡಿಕೊಂಡಿದ್ದವು. ಎರಡು ಕುಟುಂಬ ಮನೆ ಅಕ್ಕಪಕ್ಕ ಇದ್ದು, ಆಸ್ತಿ ವಿಚಾರಕ್ಕೆ ಎರಡು ಕುಟುಂಬಗಳು ಗಲಾಟೆ ಮಾಡಿಕೊಂಡಿದ್ದವು. ಗಲಾಟೆ ಜಾಸ್ತಿಯಾದ ಕಾರಣ ಸಂತೋಷ್ ಕುಟುಂಬ ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿತ್ತು.

    ಈ ವೇಳೆ ಸಂತೋಷ್ ಎಂಜಿನಿಯರಿಂಗ್ ಓದುತ್ತಿದ್ದರು. ಒಂದು ದಿನ ಸಂತೋಷ್ ಮನೆಗೆ ಬಂದ ಯುವತಿಯ ತಾಯಿ, ನಿಮ್ಮ ಮಗ ನನ್ನ ಮಗಳನ್ನು ಗರ್ಭಿಣಿ ಮಾಡಿದ್ದಾನೆ. ತಕ್ಷಣ ಮದುವೆ ಮಾಡಿಕೊಡಿ ಎಂದು ಜಗಳವಾಡಿದ್ದರು. ಆಗ ಸಂತೋಷ್ ನಾನು ಆ ರೀತಿ ಮಾಡಿಲ್ಲ ಎಂದು ಯುವತಿ ಮನೆಯವರ ಆರೋಪವನ್ನು ತಳ್ಳಿ ಹಾಕಿದ್ದರು. ನಂತರ ಯುವತಿ ಮತ್ತು ಅವರ ಮನೆಯವರು ಸಂತೋಷ್ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು.

    ಈ ಪ್ರಕರಣದಲ್ಲಿ ಸಂತೋಷ್ 95 ದಿನ ನ್ಯಾಯಾಂಗ ಬಂಧನದಲ್ಲಿ ಇದ್ದು, 2010 ಫೆಬ್ರವರಿ 12ರಂದು ಜಾಮೀನು ಪಡೆದು ಹೊರಬಂದಿದ್ದರು. ಈ ವೇಳೆ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಆ ನಂತರ ಮಗುವಿನ ಡಿಎನ್‍ಎ ಪರೀಕ್ಷೆ ಮಾಡಿದಾಗ ಸಂತೋಷ್ ಮಗುವಿನ ತಂದೆಯಲ್ಲ ಎಂಬುದು ಸಾಬೀತಾಗಿತ್ತು. ಈ ಕೇಸ್ ಮತ್ತೆ ವಿಚಾರಣೆಗೆ ಬಂದಿತು. ಆಗ ಮತ್ತೆ ನ್ಯಾಯಾಲಯ ಡಿಎನ್‍ಎ ಟೆಸ್ಟ್ ಮಾಡಿಸುವಂತೆ ಆದೇಶ ಮಾಡಿತ್ತು. ಆಗ 2016 ಫೆಬ್ರವರಿ 10ರಂದು ಸಂತೋಷ್ ನಿರಪರಾಧಿ ಎಂದು ಚೆನ್ನೈ ಮಹಿಳಾ ಕೋರ್ಟ್ ತೀರ್ಪು ನೀಡಿತ್ತು.

    ಪ್ರಕರಣದ ಬಗ್ಗೆ ಮಾತನಾಡಿರುವ ಸಂತೋಷ್, ಆರು ವರ್ಷ ಈ ಪ್ರಕರಣಕ್ಕಾಗಿ ಎರಡು ಲಕ್ಷ ಖರ್ಚು ಮಾಡಿದ್ದೇನೆ. ನನ್ನ ಎಂಜಿನಿಯರಿಂಗ್ ಓದನ್ನು ಅರ್ಧಕ್ಕೆ ಬಿಟ್ಟಿದ್ದೇನೆ. ಈ ಸುಳ್ಳು ಪ್ರಕರಣದಿಂದ ನನಗೆ ಡ್ರೈವಿಂಗ್ ಲೈಸಸ್ಸ್ ಕೂಡ ದೊರಕಿಲ್ಲ. ಎಲ್ಲೂ ಕೆಲಸ ಸಿಗದೇ ಒಂದು ಆಫೀಸಿನಲ್ಲಿ ಪಿಎಯಾಗಿ ಕೆಲಸ ಮಾಡಿದ್ದೇನೆ. ಈ ಕಾರಣದಿಂದ ನಾನು ಯುವತಿ, ಆಕೆಯ ಮನೆಯವರು ಮತ್ತು ತನಿಖೆ ಮಾಡಿದ ಪೊಲೀಸ್ ಅಧಿಕಾರಿ ಮೇಲೆ 30 ಲಕ್ಷ ಮಾನನಷ್ಟ ಮೊಕದ್ದಮೆ ಹೂಡಿದ್ದೆ ಎಂದು ತಿಳಿಸಿದ್ದಾರೆ.

  • ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಕೊಪ್ಪಳ: ಮಾಮೂಲಿ ಕೊಡಲು ನಿರಾಕರಿಸಿದ ವ್ಯಕ್ತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಮಾಧ್ಯಮಗಳಿಗೆ ಅಥವಾ ಅಧಿಕಾರಿಗಳಿಗೆ ದೂರು ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಪಿಎಸ್‍ಯ ಒಬ್ಬರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜಿಲ್ಲೆಯ ಕಾರಟಗಿ ಪಿಎಸ್‍ಐ ವಿಜಯಕೃಷ್ಣ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದ ಗ್ರಾಮದ ಭಾಷಾಸಾಬ್ ಅವರಿಗೆ ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಭಾಷಾಸಾಬ್ ‘ನನ್ನ ಜೀವಕ್ಕೆ ಏನಾದರು ಆದರೆ ಅದಕ್ಕೆ ವಿಜಯಕೃಷ್ಣ ಕಾರಣ’ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಮರಳು ಸಾಗಾಟ ವಿಚಾರದಲ್ಲಿ ಭಾಷಾಸಾಬ್ ಹಾಗೂ ಕಾರಟಗಿ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ತಮ್ಮ ಠಾಣಾ ವ್ಯಾಪ್ತಿ ಮೀರಿ ಪೊಲೀಸರು ಭಾಷಾಸಾಬ್ ಟ್ರ್ಯಾಕ್ಟರ್ ಸೀಜ್ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ರಿವೇಂಜ್ ತಗೆದುಕೊಂಡ ಪೊಲೀಸರು ಭಾಷಾಸಾಬ್ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ವಿಷಯ ಮಾಧ್ಯಮದವರಿಗೆ ತಿಳಿಸಿದರೆ ರಿವಾಲ್ವರ್ ಇಟ್ಟು ಶೂಟ್ ಮಾಡುತ್ತೇನೆ ಎಂದು ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಜೀವಭಯದಲ್ಲಿರುವ ಭಾಷಾಸಾಬ್ ವಿಜಯಕೃಷ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ.

    ಈ ಘಟನೆಗೆ ಪ್ರಮುಖ ಕಾರಣ ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದಾರೆ.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡುತಿದ್ದು, ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದಾರೆ. ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್‍ಗೆ ಧಮ್ಕಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

  • ಪೊಲೀಸರು ಸುಳ್ಳು ಕೇಸ್ ಹಾಕಿದ್ದಕ್ಕೆ 118 ಕಾರ್ ಕದ್ದ ಖತರ್ನಾಕ್ ಕಳ್ಳ

    ಪೊಲೀಸರು ಸುಳ್ಳು ಕೇಸ್ ಹಾಕಿದ್ದಕ್ಕೆ 118 ಕಾರ್ ಕದ್ದ ಖತರ್ನಾಕ್ ಕಳ್ಳ

    ಬೆಂಗಳೂರು: ಸುಳ್ಳು ಕೇಸ್ ಹಾಕಿದ್ದ ಪೊಲೀಸರು ಮೇಲಿನ ಸೇಡಿಗೆ 118 ಕಾರ್ ಕದ್ದಿದ್ದ ಅಂತರಾಜ್ಯ ಕಳ್ಳನನ್ನು ಹುಳಿಮಾವು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತನನ್ನು ಪರಮೇಶ್ವರ್ ಆರಮುಗಂ ಎಂದು ಗುರುತಿಸಲಾಗಿದ್ದು, ಈತನ ಜೊತೆ ಕಳ್ಳತನಕ್ಕೆ ಸಹಾಯ ಮಾಡಿದ್ದ ಸದ್ದಾಂಹುಸೇನ್ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಖದೀಮರು ಯುನಿವರ್ಸಲ್ ರಿಮೋಟ್ ಬಳಸಿ ದುಬಾರಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು. ಈಗ 1.70 ಕೋಟಿ ಮೌಲ್ಯದ 10ಕ್ಕೂ ಹೆಚ್ಚು ಐಶಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಮೂರು ವರ್ಷದ ಹಿಂದೆ ಆರೋಪಿ ಪರಮೇಶ್ವರ್ ನನ್ನು ಪಿಟಿ ಕೇಸ್ ಮೇಲೆ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಆದರೆ ನಂತರ ಇವನ ಮೇಲೆ ಸ್ಕಾರ್ಪಿಯೊ ಕಾರು ಕದ್ದಿದ್ದಾನೆ ಎಂದು ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು. ಈ ವಿಚಾರಕ್ಕೆ ಜೈಲಿಗೆ ಹೋಗಿದ್ದ ಪರಮೇಶ್ವರ್ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ ಪೊಲೀಸರ ಮೇಲೆ ಸೇಡು ಇಟ್ಟುಕೊಂಡಿದ್ದನು. ಜೈಲಿನಿಂದ ಹೊರ ಬಂದ ಪರಮೇಶ್ವರ್ ಸುಳ್ಳು ಕೇಸ್ ಹಾಕಿದ್ದಕ್ಕೆ ಮೂರೇ ತಿಂಗಳಲ್ಲಿ 25 ಸ್ಕಾರ್ಪಿಯೊ ಕಾರುಗಳನ್ನು ಕದ್ದು, ಪೊಲೀಸರಿಗೆ ಕರೆ ಮಾಡಿ 25 ಕಾರು ಕದ್ದಿದ್ದೇನೆ ತಾಕತ್ತು ಇದ್ದರೆ ಬಂಧಿಸಿ ಎಂದು ಚಾಲೆಂಜ್ ಹಾಕಿದ್ದ.

    ಚೆನ್ನೈ ಪೊಲೀಸರಿಂದ ತಲೆಮರೆಸಿಕೊಂಡು ಕರ್ನಾಟಕ್ಕೆ ಬಂದಿದ್ದ ಆರೋಪಿ ಪರಮೇಶ್ವರ್ ಇಲ್ಲಿಯೂ ತನ್ನ ಕೈಚಳಕ ತೋರಿದ್ದು, ಮೈಕೋಲೇಔಟ್, ವೈಯ್ಯಾಲಿ ಕಾವಲ್, ಮಡಿವಾಳ ಮತ್ತು ಹುಳಿಮಾವು ಸೇರಿದಂತೆ ಹಲವು ಪೊಲೀಸ್ ಠಾಣಾ ಪೊಲೀಸರು ಈತನನ್ನು ಹುಡುಕುತ್ತಿದ್ದರು. ಇದರ ಜೊತೆಗೆ ಇತ್ತೀಚಿಗಷ್ಟೇ ಮಡಿವಾಳ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳ ಪಿಜಿಯ ಬಾತ್ ರೂಂಗೆ ಸಿಸಿ ಕ್ಯಾಮೆರಾ ಇಡಲು ಹೋಗಿದ್ದ ಪರಮೇಶ್ವರ್ ಅನ್ನು ಮಡಿವಾಳ ಪೊಲೀಸರು ಬಂಧಿಸಿದ್ದರು.

    ಸುಮಾರು 17 ಪ್ರಕರಣದಲ್ಲಿ ಬೇಕಿದ್ದ ಪರಮೇಶ್ವರ್ ಬೈಕ್ ಕದ್ದು ಹುಳಿಮಾವು ಪೊಲೀಸರು ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ನಂತರ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರಿಗೆ ಪರಮೇಶ್ವರ್ ತಾನು 118 ಕಾರು ಕದ್ದಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಈತನ ಪತ್ನಿ ಹೈಕೋರ್ಟ್ ವಕೀಲರಾಗಿದ್ದು, ಮಗ ಹಾಕಿ ಸ್ಟೇಟ್ ಲೇವೆಲ್ ಪ್ಲೇಯರ್ ಆಗಿದ್ದಾನೆ.

  • ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಬೆಂಗಳೂರು: ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದಕ್ಕೆ ಪಬ್ಲಿಕ್ ಟಿವಿಯ ಬಳ್ಳಾರಿ ವರದಿಗಾರ ವೀರೇಶ್ ದಾನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿ, ಬಲವಂತವಾಗಿ ವಿಚಾರಣೆ ನಡೆಸಲಾಗಿದೆ.

    ಹೌದು. ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದ್ದೇ ತಪ್ಪಾ? ಪರೀಕ್ಷಾ ಹಾಲ್ ಟಿಕೆಟ್‍ನಲ್ಲಿನ ಲೋಪದೋಷ ಪ್ರಶ್ನಿಸಿದ್ದೇ ತಪ್ಪಾ ಎಂಬ ಪ್ರಶ್ನೆ ಸದ್ಯ ಹುಟ್ಟುಕೊಂಡಿದೆ. ಯಾಕೆಂದರೆ ವಿವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಪ್ರಸಾರ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಅಲ್ಲದೆ ರಾತ್ರೋರಾತ್ರಿ ವರದಿಗಾರನ ಮನೆಗೆ ಬಂದು ಪೊಲೀಸರು ದರ್ಪ ಮೆರೆದಿದ್ದಾರೆ. ಹಾಗೆಯೇ ಬಲವಂತವಾಗಿ ವಿಚಾರಣೆ ಕೂಡ ನಡೆಸಿದ್ದಾರೆ.

    ಏನಿದು ಪ್ರಕರಣ?
    ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ನಡೆದಿತ್ತು. ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳ ಫೋಟೋ ಇರುವ ಜಾಗದಲ್ಲಿ ಖಾಲಿ ಜಾಗವನ್ನು ಬಿಡಲಾಗಿತ್ತು. ಸರ್ಕಾರಿ ಹುದ್ದೆಗೆ ನಡೆಯುವ ಪರೀಕ್ಷೆಗಳ ಹಾಲ್ ಟಿಕೆಟ್ ಗಳು ಫೋಟೋದೊಂದಿಗೆ ಮುದ್ರಣವಾಗುತ್ತದೆ. ಆದರೆ ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳೇ ಫೋಟೋ ಅಂಟಿಸಬೇಕಿತ್ತು. ಈ ರೀತಿಯ ಪರೀಕ್ಷೆಯಲ್ಲಿ ಅಭ್ಯರ್ಥಿ ಯಾರೋ ಪರೀಕ್ಷೆ ಬರೆಯುವವರು ಯಾರೋ ಆಗುವ ಸಾಧ್ಯತೆ ಇರುತ್ತದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕಾರಿಗೆ ಸಹ ಖಚಿತವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೆ ಈಗ ವರದಿ ಮಾಡಿ ಪ್ರಶ್ನಿಸಿದ್ದನ್ನೇ ಮುಂದಿಟ್ಟುಕೊಂಡು ಪಬ್ಲಿಕ್ ಟಿವಿ ವರದಿಗಾರನ ವಿರುದ್ಧವೇ ಕೇಸ್ ದಾಖಲಾಗಿದೆ.

    ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾರ ಫೋಟೋಗಳಿರುವುದು ಕಂಡುಬಂದಿದೆ. ಇವರ ಫೋಟೋ ಇದ್ದು ಇವರೇ ಪರೀಕ್ಷೆ ಬರೆದರ ಅನ್ನೋ ಅನುಮಾನ ಮೂಡುತ್ತಿದೆ ಎಂದು ಹೋರಾಟಗಾರ ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದರು.

    ವಿವಿ ನೇಮಕಾತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ನೇಮಕಾತಿ ಮಾಡಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಪರೀಕ್ಷಾರ್ಥಿಗಳ ಹಾಲ್ ಟಿಕೆಟ್‍ನಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಫೋಟೋ ಪ್ರತ್ಯಕ್ಷವಾದ್ರೂ ವಿವಿ ಆಡಳಿತ ಮಂಡಳಿ ತನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ವರದಿ ಮಾಡಲಾಗಿತ್ತು.