Tag: ಸುಲ್ವಾಡಿ ದುರಂತ

  • ಜಡ್ಜ್ ಮುಂದೆ ಸುಳ್ವಾಡಿ ವಿಷ ದುರಂತದ ಆರೋಪಿಗಳು ಹಾಜರು – ಕೋರ್ಟ್ ವಿಚಾರಣೆಯಲ್ಲಿ ಏನಾಯ್ತು?

    ಜಡ್ಜ್ ಮುಂದೆ ಸುಳ್ವಾಡಿ ವಿಷ ದುರಂತದ ಆರೋಪಿಗಳು ಹಾಜರು – ಕೋರ್ಟ್ ವಿಚಾರಣೆಯಲ್ಲಿ ಏನಾಯ್ತು?

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ದುರಂತದಲ್ಲಿ ಬಂಧನವಾಗಿರುವ ನಾಲ್ವರು ಆರೋಪಿಗಳನ್ನು ಇಂದು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.

    ಜಿಲ್ಲೆಯ ಕೊಳ್ಳೇಗಾಲದ ತಾಲೂಕು ನ್ಯಾಯಾಲಯಕ್ಕೆ ಇಂದು ಬಂಧಿತ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮಾದೇಶ್ ಹಾಗೂ ದೊಡ್ಡಯ್ಯ ಹಾಜರಾಗಿದ್ದಾರೆ. ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣ ಅವರು ನಿಮ್ಮ ಪರ ವಾದ ಮಾಡಲು ಯಾರಾದರು ವಕೀಲರಿದ್ದಾರಾ ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಯಾರು ಇಲ್ಲ ಎಂದು ಉತ್ತರಿಸಿದ್ದಾನೆ.

    ಆರೋಪಿಗಳ ಮಾತು ಕೇಳಿದ ನ್ಯಾಯಾಧೀಶರು ಜನವರಿ 16ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿ ಮತ್ತೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತರುವಂತೆ ಹೇಳಿದರು. ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಮರಳಿ ಮೈಸೂರಿನ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು.

    ಇಷ್ಟು ದಿನ ಖಾವಿ ತೊಟ್ಟಿದ್ದ ಇಮ್ಮಡಿ ಮಹದೇವಸ್ವಾಮೀಜಿ ಇಂದು ಬಿಳಿ ವಸ್ತ್ರದಲ್ಲಿ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದ. ಖಾವಿ ಬಟ್ಟೆಗೆ ತನ್ನದೇ ಆದ ಗೌರವವಿರುವ ಕಾರಣ ಪೊಲೀಸರೇ ಆತನ ಖಾವಿ ಬಟ್ಟೆಯನ್ನು ಕಳಚಿ ಬಿಳಿ ಬಣ್ಣದ ಶರ್ಟ್ ಹಾಗೂ ಪಂಚೆಯನ್ನು ನೀಡಿ ಕರೆತಂದಿದ್ದಾರೆ ಎನ್ನಲಾಗಿದೆ.

    ಮಾಧ್ಯಮ ಕ್ಯಾಮೆರಾಗಳಿಗೆ ಮುಖ ತೋರಿಸದ ಇಮ್ಮಡಿ ಮಹದೇವಸ್ವಾಮೀಜಿ ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡೇ ತೆರಳಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv